ಆತನಿಗೋ ಪುರಸೊತ್ತಿಲ್ಲದ ದಣಿವು..

ನೆಲಮಣ್ಣಿನ ಸ್ವಯಂ ಸ್ವಯಂವರ

ನಾಗರೇಖಾ ಗಾಂವಕರ

ಅದೇ ಆ ಕೆಂಪುಮಣ್ಣಿನ ಗದ್ದೆಯ
ತುಂಬಾ ಪ್ರತಿಸಲದಂತೆ ಈ
ಸಲವೂ ಹೊಸ ಬೀಜಗಳದ್ದೇ ಬಿತ್ತು.
ಮೋಹನ ರಾಗಮಾಲಿಕೆಗಳ ಜೊತೆ
ತರವೇಹಾರಿ ತಳಿಬೀಜಗಳ ಊರಿಹೋಗುವ
ಆತನಿಗೋ ಪುರಸೊತ್ತಿಲ್ಲದ ದಣಿವು.

ಸೀಮೆಗೆ ತಕ್ಕಂತಿರುವ ಮಣ್ಣಿನ ಹದಕ್ಕೆ
ಬೀಜ ಹಾಕುವುದೇನು ಸಾಮಾನ್ಯವೇ?
ಆ ಮಣ್ಣಿನ ಹದ ಈ ನೆಲಕ್ಕಿಲ್ಲ.
ಈ ನೆಲದ ಗುಣ ಆ ಮಣ್ಣಿಗೆಲ್ಲಿ?
ನೆÉಲಮಣ್ಣಿನ ಕಾವು ಆತನಿಗೆ ಮಾತ್ರ ಗೊತ್ತು.
ರಾಗ ಹೊರಡಿಸುವ, ಕೆರಳಿಸುವ
ಕೈಬೆರಳಿನಾಟವ ಹೂಡುವ ಆತನಿಗೋ
ಗದ್ದೆ ಗದ್ದೆಗಳ ಮೇಲೆಲ್ಲಾ ಮೋಹ.

ಲಾಗಾಯ್ತಿನಿಂದ ಸೀಮೆಗೊಪ್ಪುವ
ಬೀಜಗಳ ಹೊತ್ತು ಹೆತ್ತು ಭಾರವಾದ ಗದ್ದೆಗಳಿಗೆ
ಈಗೀಗ ಉರಿ ನವೆಯ ಜಡ್ಡು.
ಹಾಗಾಗೇ ಬೀಜಕ್ಕೆ ತಕ್ಕ ಪೈರು ಕೊಡುವ ಕೆಲಸ
ನೆನಗುದಿಗೆ ಬಿದ್ದಿದೆ.

ಮದುಮಗಳ ಹುಸಿ ಮೌನದಂತೆ
ತಣ್ಣಗೆ ಕುಳಿತು ಕಾಯುತ್ತಲೇ ಇವೆ
ಹೊಲಗದ್ದೆ ಬಯಲ ಮಹಲು.
ಮುಗಿಲು ಮುರಿದು ಬೀಳುವ
ಹೊತ್ತಿಗಾಗೇ ಹೊಂಚಿ ಕೂತಿದೆ.

ಕೇಳದ ಗಾನವನ್ನು ಎದೆಯಾಳದಿಂದಲೇ
ಮೀಟಿ ತೆಗೆಯುವ ಹುಕಿ ಹತ್ತಿಸಿಕೊಂಡ
ಗದ್ದೆಗಳ ಆಲಾಪ ಬಾನಾಡಿಗಳಿಗಷ್ಟೇ ಶ್ರವಣಸಾಧ್ಯ.
ಗದ್ದೆಗಳೀಗ ಬಿತ್ತಿದ ಬೀಜಗಳ
ಫಸಲಿಗೆ ಪೈಪೋಟಿಗಿಳಿಯುತ್ತಿಲ್ಲ.
ಬೀಜದವನ ದಾರಿ ಕಾಯುತ್ತಲೂ ಇಲ್ಲ.
ಬೀಜಗಳನ್ನೆ ನಿರಾಕರಿಸುತ್ತಿವೆ.
ನೆಲಮಣ್ಣು ಮಣ್ಣನೆಲ
ಸ್ವಯಂ ಸ್ವಯಂವರದ ಸುಖ ಕಾಣುತ್ತಿವೆ.

ಅವಳೋ ಅವಳೆದೆಯ ಮೋಹನ ರಾಗಕ್ಕೆ
ಕಿವಿಯಾಗಿದ್ದಾಳೆ.

ಬಯಲಗಾಳಿಯ ಗುಂಗು 

ನನ್ನ ಪ್ರೇಮದ ಕಡ ಎಷ್ಟು ದಿನ
ಇಟ್ಟುಕೊಳ್ಳುವಿ ನೀ
ಬಿದಿರಕೋಲಿನ ಸಖನೇ
ನಾಳೆಗಾದರೂ ತೀರಿಸಿಬಿಡು
ಹನಿಮುತ್ತಿದ ಕೆಂದಾವರೆಗಳು
ನನ್ನ ತುಟಿಯಲ್ಲರಳಲಿ.

ಜಾರುತ್ತಿರುವ ಸೆರಗು ಸದ್ದಾಗದಂತೆ
ನನ್ನಾತ್ಮವನ್ನೆ ಕಬಳಿಸುತ್ತಿದೆ.
ಯಮುನೆ ತೀರದ ಕುಳಿರ್ಗಾಳಿ
ತಣ್ಣಗಿನ ಒಳಕೋಲಾಹಲಕ್ಕೆ ಜೊತೆಯಾಗಿದೆ
ಮನನೆಲದ ಬೇರುಗಳೇ ಉರುಳಾಗಿ
ರಕ್ತದ ಹಾಸು ಗೋರಿಯ ಗುಲಾಬಿ
ನಾ ಹೆಜ್ಜೆ ಇಟ್ಟಲ್ಲೆಲ್ಲಾ ಪವಡಿಸಿವೆ.

ಪ್ರೇಮದಂಟಿನ ಉಂಡೆಯೊಳಗೆ
ಕ್ಷಣಕ್ಷಣಕ್ಕೂ ಕರಗಿಸಿಬಿಡುವ
ಸಕ್ಕರೆಯ ಸವಿಯಂತವನೇ
ನೀ ಕಂಡ ಲಾಗಾಯ್ತಿನಿಂದ
ನನ್ನ ಕಣ್ಣುಗಳು ನಿದ್ರಿಸುವದನ್ನೆ ಮರೆತಿವೆ.

ಈ ಲೋಕದೊಳಗಿನ ಎಲ್ಲ ಸದ್ದುಗಳನ್ನು
ಸೆಣಬಿನ ಚೀಲದಲ್ಲಿಟ್ಟು ಬಾಯಿಕಟ್ಟಿ,
ನಿನ್ನುಸಿರಿನ ಜೊತೆ
ಗದ್ದೆಬದಿಯಲ್ಲೊಂದು ಕಳೆ ಗಿಡವಾಗಿ
ಗಡದ್ದಾಗಿ ಉಸಿರಾಡಬೇಕೆನಿಸುತ್ತಿದೆ.

ಕಾಲದ ಗಡಿಯಾರಕ್ಕೆ
ಕತ್ತಿಗಳೇ ಮುಳ್ಳುಗಳಾಗಿ
ಕೆದಕಿ ಕತ್ತರಿಸಿ ಹಾಕುವ ಮುನ್ನ
ಒಮ್ಮೆ ಬಂದುಬಿಡು.
ಬೆಚ್ಚಗಿನ ಬಯಲ ಗಾಳಿಗೆ ಬೀಸಿಬೀಸಿ
ನಾಲ್ಕು ಹೆಜ್ಜೆ ಹಾಕಿಬಿಡುವೆ.

‍ಲೇಖಕರು avadhi

November 1, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: