ಆಗಾಗ ದಾರಿ ತಪ್ಪಿಸಿಕೊಳ್ಳುವುದು ಒಳ್ಳೆಯದೆ..

ದಾಸ್ತಾನು ಮಳಿಗೆಯಲ್ಲಿ ದಾಸ್ತಾನುಗಳಾದವರ ಕಥೆ ‘Warehoused’

Ware house ಎಂದರೆ ವಸ್ತುಗಳನ್ನು ದಾಸ್ತಾನು ಮಾಡುವ ಸ್ಥಳ.

ತಯಾರಾದ ಮೇಲೆ ಮತ್ತು ಉಪಯೋಗಕ್ಕೆ ಮೊದಲು ವಸ್ತುಗಳನ್ನು ಇಡುವ ಸ್ಥಳ. ಹಾಗೆ ಉಪಯೋಗವಾದ ಮೇಲೆ ಆ ಉತ್ಪನ್ನಗಳ ಸಾರ್ಥಕತೆ. ಆದರೆ ವಸ್ತುಗಳ ಬದಲು ಬದುಕುಗಳನ್ನೇ ಅಲ್ಲಿಟ್ಟರೆ?

Ware house ಹಾಗೆ ದಾಸ್ತಾನು ಮಳಿಗೆಗಳಲ್ಲಿ ದಾಸ್ತಾನಾದ ಬದುಕುಗಳ ಕಥೆ. ವ್ಯವಸ್ಥೆಯ ಒಂದು ಸುಳ್ಳನ್ನು ಪೋಷಿಸಲು ಹೇಗೆ ಒಂದು ಇಡೀ ಬದುಕು ದಾಸ್ತಾನಿನಲ್ಲಿ ಕಳೆಯುತ್ತದೆ ಎನ್ನುವುದನ್ನು ಇಲ್ಲಿ ನಿರ್ದೇಶಕ Jack Zagha ಚಿತ್ರವಾಗಿಸಿದ್ದಾರೆ.

ಇಡೀ ಚಿತ್ರದಲ್ಲಿ ಇರುವ ಪಾತ್ರಗಳು ಎರಡೇ ಎರಡು, ಲಿನೋ ಮತ್ತು ನಿನ್. ಕಥೆ ನಡೆಯುವುದು ಒಂದು ದಾಸ್ತಾನು ಮಳಿಗೆಯಲ್ಲಿ. ಲಿನೋ ಇನ್ನೇನು ನಿವೃತ್ತನಾಗಲಿರುವ ದಾಸ್ತಾನು ಮಳಿಗೆಯ ಮೇಲ್ವಿಚಾರಕ, ನಿನ್ ಲಿನೋ ನಂತರ ಆ ಸ್ಥಾನವನ್ನು ತುಂಬಲಿರುವವ. ಕೆಲಸ ಕಲಿಯಲು ನಿನ್ ಗಿರುವುದು ಕೇವಲ ಐದು ದಿನಗಳ ಕಾಲಾವಕಾಶ.

ಇದು ಸೋಮವಾರದಿಂದ ಶುಕ್ರವಾರದವರೆಗೂ ನಡೆಯುವ ಐದು ದಿನಗಳ ಕಥೆ. ಲಿನೋಗೆ ಇವನು ತನ್ನ ಕೆಲಸ ಕಸಿದುಕೊಂಡವ ಎನ್ನುವ ಸಿಟ್ಟು. ಅವನ ಯೌವನ ಇವನಲ್ಲಿ ಒಂದು ಅಕಾರಣವಾದ ಅಸಹನೆಯನ್ನು ಹುಟ್ಟುಹಾಕಿದೆ. ನಿಯಮಗಳನ್ನು ಮೈಮೇಲಿನ ಚರ್ಮವಾಗಿಸಿಕೊಂಡ ಲಿನೋ, ಮೊದಲ ದಿನ ನಿನ್ ಬಂದ ಕೂಡಲೇ ಅವನಿಗೆ ಕೆಲಸದ ನಿಯಮಗಳನ್ನು ಹೇಳಿಕೊಡುತ್ತಾನೆ. ಬಂದ ಕೂಡಲೇ ಕಲಸದ ಯೂನಿಫಾರ್ಮ್ ಹಾಕಿಕೊಳ್ಳಬೇಕು, ಬಂದ ಸಮಯವನ್ನು ನೋಂದಾಯಿಸಲು ಪಂಚ್ ಮೆಷೀನಿನಲ್ಲಿ ತನ್ನ ಹೆಸರಿನ ಕಾರ್ಡ್ ಪಂಚ್ ಮಾಡಬೇಕು.

ನಿನ್ ನ ತಲೆಯಲ್ಲಿ ನೂರಾರು ಪ್ರಶ್ನೆಗಳು. ಗೋದಾಮು ಯಾಕೆ ಖಾಲಿ ಇದೆ? ಇಲ್ಲಿಗೆ ವಸ್ತುಗಳು ಯಾವಾಗ ಬರುತ್ತವೆ? ಎಷ್ಟು ದಿನಗಳ ಅಂತರದಲ್ಲಿ ಬರುತ್ತವೆ? ಹೀಗೆ ಅವನಲ್ಲಿ ಮುಗಿಯದ ಪ್ರಶ್ನೆಗಳು. ಆದರೆ ಲಿನೋ ಅದಕ್ಕೆಲ್ಲಾ ಹಾರಿಕೆಯ ಉತ್ತರ ಕೊಡುತ್ತಾನೆ. ಆದರೆ ಒಳಗೊಳಗೇ ಅವನಿಗೆ ತನ್ನ ಕೆಲಸ ಅತ್ಯಂತ ಜವಾಬ್ದಾರಿಯದ್ದು ಎಂದು ತೋರಿಸಿಕೊಳ್ಳುವ ಹಂಬಲ. ಅದರಲ್ಲೇ ಆತನ ವೃತ್ತಿ ಬದುಕಿನ ಸಾರ್ಥಕತೆ ಇರುವುದು. ಅಲ್ಲಿ ಆತ ತನ್ನ ಜೀವನದ 39 ವರ್ಷಗಳನ್ನು ಕಳೆದಿದ್ದಾನೆ. ಅದರಲ್ಲಿ 11 ವರ್ಷಗಳಷ್ಟು ವ್ಯವಸ್ಥಾಪಕನ ಸಹಾಯಕನಾಗಿ ಕಳೆದಿದ್ದಾನೆ.

ಯಾವುದೇ ಹೊಸ ಹೆಜ್ಜೆ ಇಡಲು ಲಿನೋ ತಯಾರಿಲ್ಲ. ಅಲ್ಲಿನ ಪಂಚಿಂಗ್ ಮೆಶೀನ್ ಸಮಯ ಸರಿಯಾಗಿ ತೋರಿಸುತ್ತಿಲ್ಲ, ಏಳು ನಿಮಿಷಗಳಷ್ಟು ಮುಂದಿದೆ, ಆದರೆ ಅದನ್ನು ರಿಪೇರಿ ಮಾಡಿಸಲು ಹೇಳುವ ಬದಲು, ಆತ ಏಳು ನಿಮಿಷಗಳಷ್ಟು ಮೊದಲೇ ಬಂದು ಪಂಚ್ ಮಾಡುತ್ತಿರುತ್ತಾನೆ. ಕೆಲಸ ಪ್ರಾರಂಭಿಸುವ ಮೊದಲು ಅನುಸರಿಸಬೇಕಾದ ನಿಯಮಗಳ ಬಗ್ಗೆ ಇಷ್ಟು ಹೇಳಿದವನು ‘Let’s get to business’ ಎಂದು ಗಂಭೀರವಾಗಿ ಹೇಳುತ್ತಾನೆ.

ಕೆಲಸ ಶುರು ಎಂದು ನೋಡುವಷ್ಟರಲ್ಲಿ ಹೋಗಿ ತನ್ನ ಖುರ್ಚಿಯಲ್ಲಿ ಕೂರುತ್ತಾನೆ. ಅದೇ ಅವರ ಕೆಲಸ! ಆ ಗೋದಾಮಿನಲ್ಲಿ ಇರುವುದು ಅದೊಂದು ಖುರ್ಚಿ, ಅದರ ಎದುರಿಗೆ ಒಂದು ಮೇಜು ಮತ್ತು ಪಂಚಿಂಗ್ ಮಿಷೀನು. ಅಲ್ಲಿದ್ದದ್ದು ಒಂದೇ ಖುರ್ಚಿ ಆದ್ದರಿಂದ ಸಹಾಯಕನಾಗಿದ್ದ ಅಷ್ಟೂ ವರ್ಷಗಳನ್ನೂ ಆತ ನಿಂತೇ ಕಳೆದಿದ್ದಾನೆ! ನಿನ್ ಗೆ ಸಹಾಯಕನಾಗಿ ಕಳೆಯಬೇಕಾದ ಅವಧಿ ಕೇವಲ ಐದು ದಿನಗಳು ಎನ್ನುವ ಬಗ್ಗೆ ಸಹ ಅವನಿಗೆ ಅಸಹನೆ ಇದೆ.

ಸಮಯ ಕಳೆಯಲು ಲಿನೋ ಬಳಿ ಒಂದು ಕೆಲಸ ಇದೆ. ಅವನ ಜೇಬಿನಲ್ಲಿಟ್ಟು ಕೊಂಡ ಬೋಲ್ಟ್ ತೆಗೆದು, ಅದರ ನಟ್ ಅನ್ನು ಬಿಚ್ಚುವುದು ಮತ್ತು ಹಾಕುವುದು. ಕ್ಯಾಮೆರಾ ಸೂರಿನ ಕಡೆ ತಿರುಗುತ್ತದೆ, ಅಲ್ಲೊಂದು ಜೇಡರ ಬಲೆ, ಅದರೊಳಗೆ ಸಿಲುಕಿದ ಒಂದು ಕೀಟ…ಅದಕ್ಕೆ ಬಿಡುಗಡೆ ಇಲ್ಲ. ನಿನ್ ನಿಂತಿದ್ದಾನೆ, ಕಾಲ ಚಲಿಸುತ್ತಿದೆ. ಕ್ಯಾಮೆರಾ ಆತನ ಹಿಂದೆಯಿಂದ ಚಲಿಸಲು ಶುರುವಾಗಿ ಆತನನ್ನು ಬಳಸಿ, ಮುಂದೆ ಸಾಗಿ, ಗೋದಾಮಿನ ಉದ್ದಕ್ಕೂ ಚಲಿಸುತ್ತದೆ, ಥೇಟ್ ಗಡಿಯಾರದ ಮುಳ್ಳಿನಂತೆ. ಛಾಯಾಗ್ರಹಣ ಅಷ್ಟೇ ಅಲ್ಲ, ಹಿನ್ನಲೆಯ ಶಬ್ಧಗಳನ್ನೂ ಸಹ ಇಲ್ಲಿ ಪಾತ್ರಗಳಂತೆ ಬಳಸಲಾಗಿದೆ. ಗೋದಾಮಿನಲ್ಲಿ ಕಾಲ ಎಷ್ಟು ನಿಧಾನಕ್ಕೆ ಚಲಿಸುತ್ತದೆ ಎಂದು ತೋರಿಸಲು ಎಷ್ಟೋ ನಿಮಿಷಗಳಿಗೊಮ್ಮೆ ನಿಮಿಷದ ಮುಳ್ಳು ’ಟಕ್’ ಎಂದು ಸದ್ದು ಮಾಡಿ ಮುಂದೆ ಹೆಜ್ಜೆ ಇಡುತ್ತದೆ.

 

ಮೊದಲ ದಿನದಲ್ಲಿ ಈ ಇಬ್ಬರ ನಡುವೆ ಯಾವುದೇ ಸಹಜ ಸಂವಹನ ಸಾಧ್ಯವಾಗುವುದಿಲ್ಲ. ಇಷ್ಟು ದಿನ ತನ್ನದೊಬ್ಬನದೇ ಆಗಿದ್ದ ಜಗತ್ತಿನಲ್ಲಿ ಇನ್ನೊಬ್ಬ ಬಂದಿರುವುದು ಲಿನೋಗೆ ಕಷ್ಟ. ನಿನ್ ಗೆ ಲಿನೋನ ಕಟ್ಟುಪಾಡನ್ನು ಸಹಿಸುವುದು ಅಸಹನೀಯ. ಇವರಿಬ್ಬರ ನಡುವಿನ ಸಂಬಂಧ ಬೆಳೆಯುವುದು, ಬದಲಾಗುವುದು ಚಿತ್ರದ ಬೆಳವಣಿಗೆ.

ಮರುದಿನ ಮಂಗಳವಾರ. ಕೆಲಸಕ್ಕೆ ಬರುವ ನಿನ್ ಜೊತೆಗೊಂದು ವಸ್ತು ತಂದಿದ್ದಾನೆ. ಲಿನೋ ನೋಡುತ್ತಲೇ ಇರುತ್ತಾನೆ. ಕವರ್ ತೆಗೆದರೆ ಒಳಗೊಂದು ಖುರ್ಚಿ. ಲಿನೋ ಅವಾಕ್ಕಾಗುತ್ತಾನೆ. ಹನ್ನೊಂದು ವರ್ಷಗಳನ್ನು ತಾನು ನಿಂತೇ ಕಳೆದಿದ್ದಾನೆ. ಈ ಹುಡುಗ ಎರಡನೆಯ ದಿನಕ್ಕೇ ಒಂದು ಕುರ್ಚಿ ಹಿಡಿದುಕೊಂಡು ಬಂದು ಆ ಕಷ್ಟವನ್ನು ಅತ್ಯಂತ ಸಲೀಸಾಗಿ ನಿವಾರಿಸಿಕೊಂಡಿದ್ದಾನೆ. ತನ್ನ ಹನ್ನೊಂದು ವರ್ಷಗಳ ನಿಷ್ಕಾರಣ ಕಷ್ಟ ಅವನ ಕಣ್ಣ ಮುಂದೆ. ಅಂದು ಯೂನಿಫಾರ್ಮ್ ಹಾಕಿಕೊಳ್ಳುವ ಮೊದಲೇ ನಿನ್ ಕಾರ್ಡ್ ಪಂಚ್ ಮಾಡಿದ ಎನ್ನುವ ಕಾರಣಕ್ಕೇ ಆತನನ್ನು ಲಿನೋ ಹಂಗಿಸುತ್ತಾನೆ. ಅಷ್ಟರಲ್ಲಿ ಮೂಲೆಯಲ್ಲೊಂದು ಇರುವೆ ಗೂಡು ಕಾಣಿಸುತ್ತದೆ. ಕಳೆದ 39 ವರ್ಷಗಳಿಂದ ಇರುವೆಗಳು ತಮ್ಮ ಪಥವನ್ನು ಬದಲಿಸಿಲ್ಲ ಎಂದು ಹೆಮ್ಮೆಯಿಂದ ಹೇಳುವ ಲಿನೋ ತನ್ನನ್ನು ಅವುಗಳಲ್ಲಿ ಕಂಡುಕೊಳ್ಳುತ್ತಾನೆ.

ಆ ದಿನವೂ ಕಳೆಯುತ್ತದೆ.

ಮರುದಿನ ಬುಧವಾರ. ಅಂದು ಲಿನೋ ತನ್ನ ಬಾಸ್ ಅನ್ನು ಮೊದಲಬಾರಿಗೆ ಭೇಟಿಯಾಗಲಿದ್ದಾನೆ. ಆತನ ಮಟ್ಟಿಗೆ ಅದು ಜೀವನದ ಅತಿದೊಡ್ಡ ದಿನ. ಆದರೆ ಅಂದು ಒಂದು ಪೊರಪಾಟಾಗಿ ಹೋಗಿದೆ! ನಿನ್ ತನ್ನ ಕಾರ್ಡ್ ಅನ್ನು ಪಂಚ್ ಮಾಡುವ ಬದಲು ಲಿನೋ ಕಾರ್ಡ್ ಪಂಚ್ ಮಾಡಿಬಿಟ್ಟಿದ್ದಾನೆ. ಲಿನೋ ತಳಮಳ ಹೇಳತೀರದು.

ಹೇಗೋ ಬಾಸ್ ನನ್ನು ಭೇಟಿ ಮಾಡಲು ಹೋಗುತ್ತಾನೆ. ಮೊದಲ ಬಾರಿ ಆ ಗೋದಾಮಿನಲ್ಲಿ ನಿನ್ ಒಬ್ಬನೇ ಇದ್ದಾನೆ. ಆತ ಅಲ್ಲಿದ್ದ ದಸ್ತಾವೇಜುಗಳನ್ನು ತೆಗೆದು ನೋಡುತ್ತಾನೆ. ಅಲ್ಲಿ ಒಂದೂ ಬರಹ ಇಲ್ಲ, ಅಂದರೆ ಅಲ್ಲಿಗೆ ಇದುವರೆವಿಗೂ ಯಾವುದೇ ಉತ್ಪನ್ನ ಬಂದಿಲ್ಲ, ಅಲ್ಲಿಂದ ಯಾವುದೇ ಉತ್ಪನ್ನ ಹೊರಗೆ ಹೋಗಿಲ್ಲ. ಸತ್ಯ ಗೊತ್ತಾದ ಮೇಲೆ ಆತನಿಗೆ ಲಿನೋ ಮೇಲೆ ಮರುಕ ಬರುತ್ತದೆ. ಜೊತೆಗೆ ಒಂದು ಕಿಡಿಗೇಡಿತನ ಸಹ. ಅದೇ ಕಿಡಿಗೇಡಿತನದಲ್ಲಿ ಕಂಪನಿಯ ಮುಖ್ಯಸ್ಥನಿಗೆ ಫೋನ್ ಮಾಡಿ ತಾನು ಲಿನೋನನ್ನು ನೋಡುತ್ತಿರುವ ಮನಶ್ಯಾಸ್ತ್ರಜ್ಞ ಎಂದು ಹೇಳಿ ಅಲ್ಲೊಂದು ಕೀಟಲೆ ಮಾಡುತ್ತಾನೆ.

ಮರುದಿನ ಗುರುವಾರ. ಲಿನೋ ಏನೋ ಗಲಿಬಿಲಿಯಲ್ಲಿದ್ದಾನೆ. ಯಾಕೆ ಏನು ಎಂದು ನಿನ್ ವಿಚಾರಿಸಿದಾಗ ಬಾಸ್ ನಡುವಳಿಕೆಯ ಬಗ್ಗೆ ಹೇಳುತ್ತಾನೆ. ಅದೇ ಮನೋಭಾವದಲ್ಲಿರುವಾಗ ಅವನಿಗೆ ಇನ್ನೊಂದು ದೃಶ್ಯ ಕಾಣಿಸುತ್ತದೆ. ಮೊದಲ ಬಾರಿಗೆ ಇರುವೆಗಳು ಪಥ ಬದಲಿಸಿರುತ್ತವೆ. ಇದು ಅವನನ್ನು ಇನ್ನೂ ಗೊಂದಲಕ್ಕೀಡು ಮಾಡುತ್ತದೆ. ಹೀಗಿರುವಾಗ ಇದ್ದಕ್ಕಿದ್ದಂತೆ ಫೋನ್ ರಿಂಗ್ ಆಗುತ್ತದೆ. ಫೋನ್ ನಲ್ಲಿ ನಿನ್ ತಂದೆ! ಲಿನೋಗೆ ಅಚ್ಚರಿ, ಆಘಾತ. ಏಕೆಂದರೆ ತಂದೆ ಬಿಟ್ಟು ಹೋಗಿದ್ದಾನೆ ಎಂದು ನಿನ್ ಹೇಳಿರುತ್ತಾನೆ.

ಇವರಿಬ್ಬರ ನಡುವಿನ ತಿಕ್ಕಾಟ ಇಲ್ಲಿ ಸ್ಪೋಟವಾಗುತ್ತದೆ. ’ನೀನು ಸುಳ್ಳ’ ಎಂದು ಲಿನೋ ನಿಂದಿಸುತ್ತಾನೆ. ನಿನ್ ತಿರುಗಿ ಬೀಳುತ್ತಾನೆ. ’ಸುಳ್ಳೆಂದರೆ ಬೇರೆಯವರಿಗೆ ಹೇಳುವುದಷ್ಟೇ ಅಲ್ಲ, ನಮಗೆ ನಾವು ಹೇಳಿಕೊಳ್ಳುವ ಸುಳ್ಳು ಇನ್ನೂ ಕೆಟ್ಟದು’ ಎಂದು ಕನ್ನಡಿಯನ್ನು ಲಿನೋ ಮುಖಕ್ಕೆ ಹಿಡಿಯುತ್ತಾನೆ. ಆ ಮಳಿಗೆಯಲ್ಲಿ ಎಂದೂ ಯಾವ ವಸ್ತುವೂ ದಾಸ್ತಾನಾಗಿಲ್ಲ ಮತ್ತು ಅದೊಂದು ಖಾಲಿ ಖಾಲಿ ಪಾಳುಬಿದ್ದ ಮಳಿಗೆ ಎಂದು ಹೇಳುತ್ತಲೇ ಲಿನೋನ ಇಷ್ಟು ವರ್ಷಗಳ ಕೆಲಸದ ನಿರರ್ಥಕತೆಯನ್ನು ಮುಖಕ್ಕೆ ರಾಚುತ್ತಾನೆ. ಲಿನೋ ತತ್ತರಿಸುತ್ತಾನೆ.

ಇದು ಮೇಲ್ಪದರದ ಪರಿಸ್ಥಿತಿ. ಆದರೆ ಇಬ್ಬರ ಮನಸ್ಸಿನೊಳಗೂ ಇನ್ನೊಂದೇ ಯುದ್ಧ ನಡೆಯುತ್ತಿದೆ. ಲಿನೋ ಗೆ ತಾನು ನಿನ್ ಇರುವ ಹಾಗಿಲ್ಲವಲ್ಲ ಎನ್ನುವ ಹಳಹಳಿ, ಅವನ ಹಾಗಿರುವ ಆಸೆ, ಆದರೆ ನಿನ್ ಗೆ ತಾನೆಲ್ಲಿ ಲಿನೋ ಹಾಗೆ ಆಗಿಬಿಡುವೆನೋ ಎನ್ನುವ ಹೆದರಿಕೆ.

ಇವರಿಗೆ ಗೊತ್ತಿಲ್ಲದ ಇನ್ನೊಂದು ಲೆಕ್ಕಾಚಾರ ಅಲ್ಲಿದೆ. ಮೆಕ್ಸಿಕೋದಲ್ಲಿ ಸಾಮಾನ್ಯ ಬಾವುಟದ ಕಂಬಗಳು ಮತ್ತು ಹಡಗಿನ ಬಾವುಟದ ಕಂಬಗಳನ್ನು ತಯಾರಿಸುವ ಇಬ್ಬರು ಉತ್ಪಾದಕರಿದ್ದಾರೆ. ಇವರ ಕಂಪನಿ ಸಾಮಾನ್ಯ ಬಾವುಟದ ಕಂಬಗಳನ್ನು ತಯಾರಿಸುವುದರಲ್ಲಿ ಎರಡನೆಯ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ಕಂಪನಿ ಎರಡು ಉತ್ಪನ್ನಗಳನ್ನೂ ತಯಾರಿಸುತ್ತಿದೆ.

ಯಾವುದೋ ಕಾರಣದಿಂದ, ಪ್ರತಿಸ್ಪರ್ಧಿಯ ಎದುರಲ್ಲಿ ತಾವೂ ಮಾರುಕಟ್ಟೆಯಲ್ಲಿದ್ದೇವೆ ಎಂದು ತೋರಿಸಿಕೊಳ್ಳಲು ಅಥವಾ ಕಪ್ಪು ಹಣವನ್ನು ಬಿಳಿಯಾಗಿಸಲು ಈ ಕಂಪನಿ ಹಡಗಿನ ಬಾವುಟದ ಕಂಬಗಳನ್ನು ತಯಾರಿಸುತ್ತಿದ್ದೆವೆ ಎಂದು ಸುಳ್ಳು ಹೇಳುತ್ತಿದೆ ಮತ್ತು ಆ ಸುಳ್ಳನ್ನು ಪೋಷಿಸಲು ಒಂದು ಗೋದಾಮನ್ನು ಇಟ್ಟುಕೊಂಡಿದೆ. ಆ ಸುಳ್ಳಿಗೆ ಒಬ್ಬ ಕಾವಲುಗಾರನನ್ನು ಸಂಬಳ ಕೊಟ್ಟು ಇಟ್ಟುಕೊಂಡಿದೆ.

ಸರಿಯಾದ ಸಮಯ ತೋರಿಸದ ಪಂಚಿಂಗ್ ಮೆಷೀನ್ ದುರಸ್ತಿ ಮಾಡಿಸುವ ಬದಲು ಅದಕ್ಕೆ ತನ್ನ ಬದುಕನ್ನು ಹೊಂದಿಸಿಕೊಂಡವ ಲಿನೋ. ಆದರೆ ನಿನ್ ಹಾಗಲ್ಲ, ಕಂಪನಿಯ ಸುಳ್ಳಿನ ಪೊರೆಯನ್ನು ಇವನು ಹರಿಯುತ್ತಾನೆ, ಅವರ ಸುಳ್ಳನ್ನು ಬಳಸಿಕೊಂಡು ಗೋದಾಮಿಗೆ ಒಂದು ಬಾವುಟದ ಕಂಬ ತರಿಸುತ್ತಾನೆ. ಅಲ್ಲಿರುವ ಇಬ್ಬರೂ ಸೋತವರೇ, ನಿನ್ ನ ಈ ಕೆಲಸ ಅವರಿಬ್ಬರನ್ನೂ ಹತ್ತಿರವಾಗಿಸುತ್ತದೆ.

ಶುಕ್ರವಾರ :
ಅಂದು ಲಿನೋ ಕೆಲಸದ ಕಡೆಯ ದಿನ. ವೇರ್ ಹೌಸ್ ಗೆ ಬಂದ ಲಿನೋಗೆ ಅಚ್ಚರಿ ಕಾದಿದೆ. ಮೊಟ್ಟಮೊದಲ ಬಾರಿಗೆ ಅಲ್ಲಿ ಒಂದು ಅಲ್ಯೂಮಿನಿಯಂ ಪೋಲ್ ಬಂದಿದೆ. ಮುಂದೆ ಬಂದ ಲಿನೋ ಮೆಲ್ಲನೆ ಆ ಪೋಲ್ ಅನ್ನು ನೇವರಿಸುತ್ತಾನೆ. ಅದರ ಮೇಲೊಂದು ಇರುವೆ ಹೋಗುತ್ತಿರುತ್ತದೆ. ಅದನ್ನು ಕೈಬೆರಳ ಮೇಲೆ ಹತ್ತಿಸಿಕೊಳ್ಳುವ ಲಿನೋ ಮೆಲುದನಿಯಲ್ಲಿ ಇರುವೆಯೊಡನೆ ಮಾತನಾಡುತ್ತಾನೆ. ’ಕೊಲಂಬಸ್ ದಾರಿ ತಪ್ಪಿಸಿಕೊಂಡಿದ್ದರಿಂದ ಅವನಿಗೆ ಹೊಸ ಹಾದಿ ಸಿಕ್ಕಿತು, ಆಗಾಗ ದಾರಿ ತಪ್ಪಿಸಿಕೊಳ್ಳುವುದು ಒಳ್ಳೆಯದೆ’ ಎಂದು ಅರ್ಧ ಇರುವೆಗೂ ಅರ್ಧ ತನಗೂ ಹೇಳಿಕೊಳ್ಳುತ್ತಾನೆ. ಪಥ ಬದಲಿಸದೇ ನಡೆಯುವುದೇ ಹಿರಿಮೆ ಅಂದುಕೊಂಡಿದ್ದ ಲಿನೋ ಈ ಮಾತು ಹೇಳುತ್ತಿದ್ದಾನೆ. ಐದು ದಿನಗಳಲ್ಲಿ ಅವನು ಕ್ರಮಿಸಿರುವ ಪಯಣ ಇದು.

ಲಿನೋನ ಸುಳ್ಳನ್ನು ಕಾಪಾಡಲು ನಿನ್ ಉಪಾಯ ಮಾಡಿ ಹಡಗಿನ ಬಾವುಟಕ್ಕೆ ಬಳಸುವ ಆ ಅಲ್ಯುಮಿನಿಯಂ ಪೋಲ್ ಅನ್ನು ತರಿಸಿರುತ್ತಾನೆ. ಇಷ್ಟು ಜಾಣನಿರುವ ನೀನು ಏನೂ ಕೆಲಸ ಇಲ್ಲದ ಈ ಗೋದಾಮಿನಲ್ಲಿ ಹೇಗೆ ದಿನ ಕಳೆಯುವೆ ಎಂದು ಲಿನೋ ಅತ್ಯಂತ ಕಳಕಳಿಯಲ್ಲಿ ಪ್ರಶ್ನಿಸುತ್ತಾನೆ. ವಾಸ್ತವವನ್ನು ಒಪ್ಪಿಕೊಳ್ಳುವುದು ಈಗ ನಿನ್ ನ ಸರದಿ. ತನ್ನ ಬಡತನ, ಸಾಮಾಜಿಕ ಹಿನ್ನಲೆಯನ್ನು ಒಪ್ಪಿಕೊಳ್ಳುತ್ತಲೇ ಏನೇ ಆದರೂ ಇದು ಸಂಬಳ ಕೊಡುವ ಕೆಲಸ, ಇದನ್ನು ನಿರಾಕರಿಸುವ ಸ್ಥಿತಿಯಲ್ಲಿ ತಾನಿಲ್ಲ ಎಂದು ಹೇಳುತ್ತಾನೆ. ನಿನ್ ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡಿದ್ದರೂ ತಾನು ಅದನ್ನು ಮೀರಿ ಹೋಗಲಾರೆ ಎನ್ನುವ ವಾಸ್ತವ ಅವನಿಗೆ ಗೊತ್ತಿದೆ. ವ್ಯವಸ್ಥೆಯ ಕಕ್ಷೆಯೊಳಗಿದ್ದೇ ಅದನ್ನು ಮಣಿಸುವ ಪ್ರಯತ್ನ ಆತನದು.

ಇಲ್ಲಿ ಲಿನೋ ಮತ್ತು ನಿನ್ ಇಬ್ಬರೂ ಸಹ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯ ಬಲಿಪಶುಗಳೇ. ಇಬ್ಬರನ್ನೂ ವ್ಯವಸ್ಥೆ ಕೇವಲ ಗೋದಾಮಿನಲ್ಲಿಡುವ ವಸ್ತುಗಳನ್ನಾಗಿಯೇ ನೋಡಿದೆ. ಅದರ ವ್ಯಂಗ್ಯ ನೋಡಿದ ಮೇಲೆ ನಿನ್ ತನ್ನ ಬಾಸ್ ಅನ್ನು ಮುಠ್ಠಾಳನನ್ನಾಗಿಸುವ ರೀತಿಗೆ ನಗು ಬರುತ್ತದೆ. ಚಿತ್ರದಲ್ಲಿ ಕಟು ವಾಸ್ತವದ ಜೊತೆಜೊತೆಯಲ್ಲಿ ಸಾಂದರ್ಭಿಕ ಹಾಸ್ಯ ಸಹ ಇದೆ. ಚಿತ್ರಕ್ಕೆ ಬೇಕಾಗುವ ರಿಲೀಫ್ ಅನ್ನು ಇದು ಕೊಡುತ್ತದೆ. ಮಿಕ್ಕಂತೆ ಚಿತ್ರದಲ್ಲಿ ನಾಯಕಿ ಇಲ್ಲ, ಭಾವಪೂರಿತ ಸನ್ನಿವೇಶಗಳಿಲ್ಲ. ಆದರೆ ಚಿತ್ರ ನಿಸ್ಸಾರವಾಗದಂತೆ ನೋಡಿಕೊಳ್ಳಲು ನಿರ್ದೇಶಕ ಇರುವೆ ಗೂಡು ತರುತ್ತಾನೆ, ಮಳೆ ತರುತ್ತಾನೆ.
ಕಥೆಯನ್ನು ’ಹೇಳಬಹುದು’, ಆದರೆ ಚಿತ್ರವನ್ನು ’ತೋರಿಸಬೇಕು’. ಎಲ್ಲೂ ಯಾವುದನ್ನೂ ’ಹೇಳದೆ’, ’ತೋರಿಸಿ’ರುವುದು ಇಲ್ಲಿನ ವಿಶೇಷ.

ನಿನ್ ಕೆಲಸ ಮಾಡುವ ಗೋದಾಮು ಊರ ಹೊರಗೆ ಎಲ್ಲೋ ದೂರದಲ್ಲಿರುತ್ತದೆ. ಅದನ್ನು ಎಲ್ಲೂ ಹೇಳದೆ, ನಿನ್ ಹತ್ತುವಾಗ ಜನರಿಂದ ತುಂಬಿ ತುಳುಕುವ ಮೆಟ್ರೋ ಟ್ರೇನು ಇವನು ಇಳಿಯುವ ಜಾಗಕ್ಕೆ ಬರುವಷ್ಟರಲ್ಲಿ ಬಹುಮಟ್ಟಿಗೆ ಖಾಲಿ ಆಗಿರುವುದನ್ನು ತೋರಿಸುತ್ತಾರೆ. ಆತ ಬರುವ ದಾರಿಯಲ್ಲಿನ ಒಬ್ಬ ಮನೆಯಿಲ್ಲದ ಮನುಷ್ಯ ಆಗಿನ ಮೆಕ್ಸಿಕನ್ ಸಾಮಾಜಿಕ ಪರಿಸ್ಥಿತಿಯನ್ನು ಕಟ್ಟಿಕೊಡುತ್ತಾನೆ.

ಈ ಚಿತ್ರದಲ್ಲಿ ಕಥೆಯನ್ನು ಕಟ್ಟಲು ಪರಸ್ಪರ ವಿರುದ್ಧವಾದ ಅಂಶಗಳನ್ನು ಬಳಸುತ್ತಾರೆ. ಅನೇಕ ಪ್ರತಿಮೆಗಳು ಇಲ್ಲಿ ಹಾಗೆ juxtapose ಆಗಿವೆ. ಇಲ್ಲಿ ಸದ್ದುಗದ್ದಲದ, ಅವಸರ ಓಟದ ಜಗತ್ತಿನಿಂದ ಬರುವ ನಿನ್ ಇದ್ದಾನೆ ಮತ್ತು ಏನೆಂದರೆ ಏನೂ ಘಟಿಸದ, ಕಾಲ ಕಾಲ್ಮುರಿದು ಕೂತ ಜಗತ್ತಿನ ಲಿನೋ ಇದ್ದಾನೆ. ನಿನ್ ಯೌವನ, ಬಂಡಾಯ, ಚಾಕಚಕ್ಯತೆ, ವೇಗ, ನಿರಾಳದ ಸಂಕೇತವಾಗಿದ್ದರೆ, ಲಿನೋ ಬಂಧನ, ಕಟ್ಟುಪಾಡು, ಮತ್ತು ಜಡ್ಡುಗಟ್ಟಿದ ಕಾಲಘಟ್ಟದ ಸಂಕೇತ. ಲಿನೋಗಿರುವ ಸಂಧಿವಾತ ಸಹ ಅವನ ಮನೋಭಾವದ ಸಂಕೇತ.

José Carlos Ruiz, Jack Zagha.

ಚಟುವಟಿಕೆಯೇ ಇಲ್ಲದ ವೇರ್ ಹೌಸಿನಲ್ಲಿ ಚಟುವಟಿಕೆಯ ಆಗರವಾದ ಇರುವೆ ಗೂಡು ಇದೆ. ನಿನ್ ಜಗತ್ತಿನ ಮೆಟ್ರೋ ನಿಲ್ದಾಣ ಸಹ ಥೇಟ್ ಈ ಇರುವೆಗೂಡಿನಂತೆ ಕಾಣುವಂತೆ ಕ್ಯಾಮೆರಾ ಕಟ್ಟಿಕೊಡುತ್ತದೆ. ಅಲ್ಲೂ ಸಹ ವರ್ಷಗಳಿಂದ ’ಪಥ ಬದಲಿಸದೆ’ ಅಲ್ಲಲ್ಲೇ ಸುತ್ತಾಡುವವರ ಸಾಲು ಇದೆ. ಹೀಗೆ ಪರಸ್ಪರ ವಿರುದ್ಧ, ಸಮಾನ ಗುಣವಿಶೇಷಗಳ ಮೂಲಕವೇ ಚಿತ್ರ ಸಾಗುತ್ತದೆ. ಆದರೆ ಎಲ್ಲೂ ಇವು ತುರುಕಿದಂತೆ ಕಾಣದೆ, ಅತ್ಯಂತ ಸಹಜವಾಗಿ ಚಿತ್ರದೊಳಗೆ ಹೆಣೆಯಲ್ಪಟ್ಟಿರುವುದು ಚಿತ್ರದ ವಿಶೇಷ.

ಚಿತ್ರವನ್ನು ’ಸರಳ’ವಾಗಿಸುವ ಕ್ರಿಯೆಯೇ ಅತ್ಯಂತ ’ಸಂಕೀರ್ಣ’ವಾದದ್ದು. ಹೀಗೆ ಚಿತ್ರದುದ್ದಕ್ಕೂ ನಿರ್ದೇಶಕ ಕ್ಯಾಮೆರಾ, ಹಿನ್ನಲೆ ಸಂಗೀತ ಎಲ್ಲದರ ಮೂಲಕ ಕಥೆ ಬೆಳೆಯುತ್ತಾ ಹೋಗುತ್ತದೆ. ನಿನ್ ಆಗಿ Hoze Meléndez ಮತ್ತು ಲಿನೋ ಆಗಿ José Carlos Ruiz ಅತ್ಯಂತ ಸಹಜವಾಗಿ ಅಭಿನಯಿಸಿದ್ದಾರೆ. ಅದರಲ್ಲೂ ಲಿನೋ ತನ್ನ ಬಾಡಿ ಲಾಂಗ್ವೇಜ್ ಮೂಲಕವೇ ಹೇಳಬೇಕಾದ್ದನ್ನು ಹೇಳಿಬಿಡುತ್ತಾರೆ.

’ Waiting for Godot ’ ರೀತಿ ಬಾರದ ಟ್ರಕ್ ಗಾಗಿ ಕೂತಲ್ಲೇ ಕೂತ ಇಬ್ಬರೂ ತಮ್ಮ ವೈಯಕ್ತಿಕ ಬದುಕಿನಲ್ಲಿ ಪರಸ್ಪರರಿಗೆ ಹತ್ತಿರವಾಗುವ ಈ ಕಥೆ ನಮ್ಮಲ್ಲಿ ವಿಷಾದ, ಹಾಸ್ಯ ಎಲ್ಲವನ್ನೂ ತುಂಬುತ್ತಾ ಹೋಗುತ್ತದೆ.

‍ಲೇಖಕರು admin

May 9, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

10 ಪ್ರತಿಕ್ರಿಯೆಗಳು

  1. ಭಾರತಿ ಬಿ ವಿ

    ಚಿತ್ರ ನೋಡಿ ನಾವು ಮೂಕರಾಗಿದ್ದು ನೆನಪಾಯಿತು
    ನಿನ್ನ ಬರಹದ ಮೂಲಕ ಮತ್ತೊಮ್ಮೆ ನೋಡಿದೆ, ಮತ್ತೂ ಕೆಲವೊಂದು‌ ಸೂಕ್ಷ್ಮಗಳೊಡನೆ!

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      Thanks 🙂 ಹೇಗೆ ಬೆರಗಾಗಿದ್ದೆವಲ್ಲಾ ಇಷ್ಟರಲ್ಲೇ ಸಿನಿಮಾನ ಇಷ್ಟು ಚೆನ್ನಾಗಿ ಕಟ್ಟಿಕೊಡಬಹುದಾ ಅಂತ?

      ಪ್ರತಿಕ್ರಿಯೆ
  2. Anonymous

    ಪ್ರಿಯ ಸಂಧ್ಯಾ: ನಿಮ್ಮ ವಿಶ್ಲೇಷಣೆ ತುಂಬಾ ಅರ್ಥಪೂರ್ಣವಾಗಿದೆ; ಚಿತ್ರ-ವಿಶ್ಲೇಷಣೆಗೆ ಮಾದರಿಯಾಗಿದೆ. ಧನ್ಯವಾದಗಳು. ಸಿ. ಎನ್. ರಾಮಚಂದ್ರನ್

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      ಸರ್ ನಮಸ್ತೆ. ಬರಹವನ್ನು ಓದಿದ್ದೀರಿ ಎನ್ನುವುದೇ ನನಗೆ ಖುಷಿಯ ಸಂಗತಿ. ನಿಮ್ಮ ಪ್ರೀತಿಯ ಮಾತುಗಳಿಗೆ ಶರಣು ಸರ್.

      ಪ್ರತಿಕ್ರಿಯೆ
  3. Girijashastry

    ಚಿತ್ರ ನೋಡಲೇಬೇಕು ಎಂಬ ಕುತೂಹಲವನ್ನು ಹುಟ್ಟಿಸುತ್ತದೆ.

    ಪ್ರತಿಕ್ರಿಯೆ
  4. Sarala

    cinema nodida haage mattu nodabeku hege anta anistu sandhya. sikkare khandita nodtini.

    ಪ್ರತಿಕ್ರಿಯೆ
  5. Bhavya

    ಕಳೆದ 39 ವರ್ಷಗಳಿಂದ ಇರುವೆಗಳು ತಮ್ಮ ಪಥವನ್ನು ಬದಲಿಸಿಲ್ಲ ಎಂದು ಹೆಮ್ಮೆಯಿಂದ ಹೇಳುವ ಲಿನೋ ತನ್ನನ್ನು ಅವುಗಳಲ್ಲಿ ಕಂಡುಕೊಳ್ಳುತ್ತಾನೆ.

    ಚಟುವಟಿಕೆಯೇ ಇಲ್ಲದ ವೇರ್ ಹೌಸಿನಲ್ಲಿ ಚಟುವಟಿಕೆಯ ಆಗರವಾದ ಇರುವೆ ಗೂಡು ಇದೆ. ನಿನ್ ಜಗತ್ತಿನ ಮೆಟ್ರೋ ನಿಲ್ದಾಣ ಸಹ ಥೇಟ್ ಈ ಇರುವೆಗೂಡಿನಂತೆ ಕಾಣುವಂತೆ ಕ್ಯಾಮೆರಾ ಕಟ್ಟಿಕೊಡುತ್ತದೆ. ಅಲ್ಲೂ ಸಹ ವರ್ಷಗಳಿಂದ ’ಪಥ ಬದಲಿಸದೆ’ ಅಲ್ಲಲ್ಲೇ ಸುತ್ತಾಡುವವರ ಸಾಲು ಇದೆ.

    Odhtaidhre….
    Idhnella hege present maadidhare, nodbeku annuva kutuhala huttuthe..

    As usual.. one more beautiful series Sandhyakka 🙂

    ಪ್ರತಿಕ್ರಿಯೆ
    • ಸಂಧ್ಯಾರಾಣಿ

      Thanks Bhavya. ಇಬ್ಬರನ್ನೇ ಇಟ್ಟುಕೊಂಡು, ಒಂದು ವೇರ್ ಹೌಸ್ ನಲ್ಲಿ, ಯಾವುದೇ ಭಾವೋದ್ರೇಕದ ಸನ್ನಿವೇಶಗಳಿಲ್ಲದೆ ಚಿತ್ರವನ್ನು ಅಷ್ಟು ಚೆನ್ನಾಗಿ ಕಟ್ಟಿಕೊಟ್ಟಿದ್ದು ನನಗೊಂದು ಬೆರಗು…

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: