ಆಕೆ ಇಲ್ಲ..

ಬರಹದಿಂದಲೇ ಬಳಿ ಬಂದು ಬರೆಯಲು ಕಲಿಸಿದ ಗೆಳತಿ

ಬಾರದ ಊರಿಗೆ ಹೋದಳು…

ಮಂಜುಳಾ ಸುಬ್ರಹ್ಮಣ್ಯ

ಸುಮಾರು ಹದಿನೈದು ವರ್ಷಗಳ ಹಿಂದಿನ ಕಥೆ. ನಾನು “ಯಶೋಧರೆ” ಅನ್ನುವ ರಂಗಭಾಷ್ಯ ನೃತ್ಯರೂಪಕವನ್ನು ಮಾಡಿದ್ದೆ. ಅದು ಬುದ್ಧನ ಮಡದಿ ಯಶೋಧರೆಯ ಜೀವನವನ್ನು ಆಧರಿಸಿದ್ದೇ ಆದರೂ ಶತಶತಮಾನಗಳಿಂದ ನಲುಗಿಹೋಗುತ್ತಿರುವ ಹೆಣ್ಮಕ್ಕಳ ಆರ್ತನಾದವೂ ಆಗಿತ್ತು.

ಅದನ್ನು ಪ್ರದರ್ಶಿಸಿದ ಮಾರನೇ ದಿನ ನನಗೊಂದು‌ ಫೋನ್ ಕಾಲ್‌. ನಾನು ಸೀತಾಲಕ್ಷ್ಮಿ ಕರ್ಕಿಕೋಡಿ, ನಿಮ್ಮ ರೂಪಕ ನೋಡಿದೆ, ಇಷ್ಟ ಆಗಿರೋದಿಕ್ಕೆ ಅದರ ಕುರಿತು ಬರೆಯಬೇಕೆಂದಿರುವೆ. ನಿಮ್ಮ ಜೊತೆ ಮಾತನಾಡಲೇಬೇಕು ಅಂತ ಮನಸ್ಸಾಗಿ ನಿಮ್ಮ ನಂಬರ್ ಕಲೆ ಹಾಕಿ ಮಾತನಾಡುತ್ತಿರುವೆ…

ಹೀಗೆ ಶುರುವಾದ ಗೆಳತಿ ಸೀತಾ ಮಾತು ಇದೀಗ ಮೌನವಾಗಿದೆ. ಆನಂತರ ನಾವು ಮುಖತಃ ಭೇಟಿ ಆಗಿದ್ದು ಎರಡು ವರುಷಗಳ ಬಳಿಕವೇ. ಆದರೆ ನಮ್ಮ ಮಾತು ಕಲೆ ಸಂಸ್ಕೃತಿ, ನಾಟಕ, ನೃತ್ಯ ಹೀಗೆ ಮೊದಲ ಫೋನ್ ಕಾಲ್ ಬಳಿಕ ನಿರಂತರವಾಗಿತ್ತು. ಸದಾ ಕಲೆ, ಸಾಹಿತ್ಯದ ಕುರಿತು ತುಡಿಯುವ ಆಕೆಯೊಂದಿಗಿನ ಮಾತು ನನ್ನನ್ನು ಚಟುವಟಿಕೆಯಿಂದಿರುವಂತೆ ಮಾಡುತ್ತಿತ್ತು ಅಂದರೆ ಖಂಡಿತ ಅದು ಅತಿಶಯೋಕ್ತಿಯಲ್ಲ.

ಧ್ವನಿಗೆ ಅಕ್ಷರವಾಗುತ್ತಿದ್ದಳು…

ಯಶೋಧರೆಯಿಂದ ಪ್ರಾರಂಭವಾದ ನನ್ನ ಸ್ತ್ರೀಪರ ಕಾಳಜಿಯ ನೃತ್ಯ, ರಂಗ ಪ್ರಯೋಗಗಳು ನಿರಂತರವಾಗಿ ಅದೇ ಹಾದಿಯಲ್ಲಿ ಸಾಗುವುದಕ್ಕೇ ಸದಾ ನನ್ನ ಜೊತೆಗಿದ್ದ ಗೆಳತಿ ಸೀತಾಳ ಪ್ರೋತ್ಸಾಹ ವೂ ಕಾರಣ. ಹೊಸ ಯೋಚನೆಗಳು ಬಂದಾಗ ಮೊದಲ ಮಾತಿನ ಚರ್ಚೆ ಆಕೆಯ ಜೊತೆಗೆ. ಆತ್ಮೀಯ ಗೆಳತಿಯಾದರೂ ಸುಮ್ಮನೆ ಮುಖಸ್ತುತಿ ಮಾಡದೆ ನೇರವಾಗಿ ವಿಮರ್ಶಿಸುವ, ಟೀಕಿಸುವ ಆಕೆಯ ಸಹೃದಯತೆ ನನಗಿಷ್ಟ.

ಧೈರ್ಯ ತುಂಬಿದಾಕೆ ಇಂದು ನೆನಪು ಮಾತ್ರ….

ನನ್ನ ದುರಿತಕಾಲದಲ್ಲಿ ಸದಾ ನನಗೆ ಧೈರ್ಯ ತುಂಬಿ ಧೃತಿಗೆಡದಂತೆ ನೋಡಿಕೊಂಡ ಗಟ್ಟಿಗಿತ್ತಿ ಆಕೆ. ಕಷ್ಟ, ಸುಖ, ನೋವು, ನಲಿವು ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಲು ಕಲಿಸಿದ ದಿಟ್ಟೆ. ಯಾರೇ ಹೆಣ್ಣೊಬ್ಬಳು ಸಾಧಕಿಯಾಗಿ ಗುರುತಿಸಿಕೊಂಡಾಗ ಆಕೆಯ ಬಗ್ಗೆ ತಿಳಿಯುವ ಆತುರ, ತಾನೇ ಸಾಧನೆ ಮಾಡಿದೆ ಎನ್ನುವಷ್ಟು ಸಂಭ್ರಮ. ಇವನ್ನೆಲ್ಲಾ ಇನ್ನೆಲ್ಲಿ ಹುಡುಕಲಿ….?

ನಾನಿಂದು ಏನಾದರೂ ಒಂದೆರಡು ಸಾಲು ಬರೆಯಲು ಪ್ರಯತ್ನಿಸುತ್ತಿರುವೆ ಎಂದರೆ ಅದರ ಹಿಂದಿನ ಶಕ್ತಿ ಇಬ್ಬರು ಲಕ್ಷ್ಮಿಯರು ಎಂಬುವುದನ್ನು ನಾನು ನೆನಪಿಸಿಕೊಳ್ಳಲೇ ಬೇಕು. ( ಸೀತಾಲಕ್ಷ್ಮಿ, ರಾಜಲಕ್ಷ್ಮಿ)
ಸೀತಾಲಕ್ಷ್ಮಿ ಯಂತೂ “ಇಲ್ಲ ಮೇಡಂ ಬರೆಯೋದು ಕಷ್ಟ ನನಗೆ.. ಸಾಧ್ಯವೇ ಆಗ್ಲಿಕ್ಕಿಲ್ಲ” ಅಂದಾಗೆಲ್ಲಾ.. “ಇಲ್ಲ ಮಂಜುಳಾ ನೀವು ಮಾತಾಡಿದ್ದನ್ನೇ ಅಕ್ಷರಕ್ಕಿಳಿಸಿ, ಸರಿ ಆಗದೆ ಇದ್ರೆ ಆಮೇಲೆ ನೋಡೋಣ. ಒಂದೇ ಸಲಕ್ಕೆ ಎಲ್ಲಾ ‌ಸರಿ ಆಗ್ಬೇಕಾಗಿಲ್ಲ” ಅಂತ ಪ್ರತಿ ಬಾರಿ ಹುರಿದಂಬಿಸಿ ನನ್ನನ್ನೂ ಬರವಣಿಗೆಗೆ ಹಚ್ಚಿದ ‌ ಸ್ಪೂರ್ತಿಯ ಸೆಲೆ ಆಕೆ.

ಬರವಣಿಗೆಯ ಬಗ್ಗೆಯೇ ಕನಸು ಕಾಣುತ್ತಿದ್ದ ಸೀತಾ ಜನರ ಒಳ್ಳೆಯತನವನ್ನು ಗೌರವಿಸ್ತಾ, ನೀಚತನವನ್ನು ನೇರವಾಗಿಯೇ ಪ್ರತಿಭಟಿಸ್ತಿದ್ದ ಸ್ವಾಭಿಮಾನಿ. ಪ್ರತೀ ಬಾರಿಯೂ ತಾನು ನೊಂದಾಗ, ಶೋಷಣೆಗೊಳಗಾದಾಗ ತನ್ನನ್ನು ತಾನು ಸಂಭಾಳಿಸಿಕೊಳ್ಳಲು ಆಕೆ ಕಂಡುಕೊಂಡ ಮಾರ್ಗ- ಓದು. ಅದು ಆಕೆಗೆ ಎಷ್ಟು ಸಹಾಯ ಆಗಿದೆ ಎಂದರೆ ಪಿ ಹೆಚ್ ಡಿ, ಎಂಫಿಲ್ ಗಳೆಲ್ಲಾ ಆಕೆಯ ಮುಡಿಗೇರಿ ಆಕೆ ಧೈರ್ಯದಿಂದ ಜೀವನದಲ್ಲಿ ಮುನ್ನುಗ್ಗುವುದಕ್ಕೆ ಸಾಧ್ಯವಾಗಿದೆ. ಅದನ್ನೇ ಆಕೆ ನನಗೂ ಹೇಳುತ್ತಿದ್ದುದು ಈಗಲೂ ನೆನಪಿದೆ. ಆಡಿಕೊಳ್ಳುವವರ ಮುಂದೆ, ಹಿಂದೆ ತಳ್ಳುವವರ ಮುಂದೆ ತಾವು ತಮ್ಮ ಕೆಲಸದ ಮೂಲಕವೇ ಉತ್ತರಿಸಬೇಕು ಎಂದು.

ವಿಧಿ ನಿರ್ಧರಿಸಿದ್ದೇ ಬೇರೆ…

ಅಂತಹುದರಲ್ಲಿ ಅತ್ಯಂತ ಬುದ್ದಿಮತ್ತೆಯ ಈಕೆಯ ಮೆದುಳಿಗೆ ಸಂಬಂಧಿಸಿದ ಖಾಯಿಲೆಯೇ ಬಂದಿದೆ ಎಂದರೆ ಎಂತಹಾ ಆಘಾತ. ದೇವರು ಇಷ್ಟೂ ನಿಷ್ಕರುಣಿಯಾಗೋದು ಸಾಧ್ಯಾನಾ?

ನೋವಿನಿಂದ ಸಿಕ್ಕಿದ ಬಿಡುಗಡೆ!

ಇದೀಗ ಇನ್ನು ಅತ್ಮೀಯ ಗೆಳತಿ ಮಾತು ಕೇಳಲಾರೆ. ಹೇಳಲು ಬಹಳವಿದೆ. ನಮ್ಮನ್ನೆಲ್ಲಾ ನೋವಲ್ಲಿ ಬಿಟ್ಟು ಆಕೆಯು ನೋವಿನಿಂದ ಮುಕ್ತಳಾದಳು ಅನ್ನಲೇ. ಗೆಳತಿ ಇನ್ನೊಮ್ಮೆ ಹುಟ್ಟಿ ಬರುವ ಹಾಗಿದ್ದರೆ ನನ್ನ ಗೆಳತಿಯಾಗಿಯೇ ಬನ್ನಿ. ತುಂಬು ಬದುಕನ್ನು ಬದುಕುವಂತಾಗಿ. ಕೊನೆಯ ಕ್ಷಣದಲ್ಲಿ ನೋಡಲೂ ಸಾಧ್ಯವಾಗದ ಸಂಕಟ ನನ್ನದು. ಬರವಣಿಗೆಯನ್ನೇ ಪ್ರೀತಿಸುವ ಗೆಳತಿಗೆ ಅಕ್ಷರದ ಅಶ್ರುತರ್ಪಣ. ಹೋಗಿ ಬನ್ನಿ..

‍ಲೇಖಕರು avadhi

May 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Nagraj Harapanahalli.karwar

    ಸೀತಾಲಕ್ಷ್ಮಿ ಹಠಾತ್ತಾಗಿ ಎದ್ದು‌ಹೋದ‌ ಸಹೋದರಿ.‌‌ ಬದುಕು ಅನಿಶ್ಚಿತವಾದುದು.ಅಶಾಶ್ವತವಾದುದು.‌ ಅಸಂಗತ ಈ‌ ಬದುಕಿನಲ್ಲಿ ಓದು‌,ಬರಹದ ಮೂಲಕ ಅಸ್ತಿತ್ವ ಕಟ್ಟಿಕೊಂಡವರು ಸೀತಾಲಕ್ಷ್ಮಿ ಕರ್ಕಿಕೋಡಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: