ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಕಾಶವಾಣಿಯಲ್ಲಿ ಪುಣ್ಯ’ಜೀವಿ’

ಸಾಯಿಲಕ್ಷ್ಮಿ ಎಸ್ ಅಯ್ಯರ್

ಸಾರಸ್ವತ ಲೋಕದ ಹಿರಿಯ ಜೀವಿ ಪ್ರೊ G V ಕಾಲನ ಗರ್ಭದಲ್ಲಿ ಸೇರಿ ಹೋದರು ಎಂದು ತಿಳಿದಾಗ‌ ಪರಂಪರೆಯೇ ಮರೆಯಾದಂತಹ ವಿಷಾದ ಭಾವ ಆವರಿಸಿತು. ಅವರ ಸರಳ ಸಹಜ ಪ್ರಾಮಾಣಿಕ ಬದುಕು ಸಹ ಅವರ ವಿದ್ವತ್ತಿನಷ್ಟೇ ಮಹತ್ತರ. ನಾವೆಲ್ಲ ಅವರನ್ನು ಕಂಡಿದ್ದೇವೆ ಅವರೊಡನೆ ಮಾತನಾಡಿದ್ದೇವೆ ಎಂಬುದೇ ನಮಗೆಲ್ಲ ಅಭಿಮಾನದ ಸಂಗತಿ.

ನಿಘಂಟು ತಜ್ಞ, ಪದ ಬ್ರಹ್ಮ ನಡೆದಾಡುವ ಕನ್ನಡ ವಿಶ್ವಕೋಶ ಜೀವಿ ಒಂದಷ್ಟು ವರುಷಗಳು ಆಕಾಶವಾಣಿಗೆ ಭೇಟಿ ನೀಡಿರಲಿಲ್ಲ. ಕೇಂದ್ರ ಸರ್ಕಾರದ ಗೌರವ ಧನದ ಬಗ್ಗೆ ಒಂದು ಸಣ್ಣ ಮುನಿಸು. ಆದದಿಷ್ಟು. ಒಮ್ಮೆ ಜಿ ವಿ ಅವರು ನಮ್ಮ ಆಕಾಶವಾಣಿಗೆ ತಮ್ಮ ಭಾಷಾ ವಿದ್ವಾಂಸ ಶಾಸನ ತಜ್ಞ ಶಿಷ್ಯರೊಬ್ಬರೊಂದಿಗೆ ಧ್ವನಿಮುದ್ರಣಕ್ಕೆ ಬಂದಿದ್ದರು. ಎರಡು ಮೇರು‌ ಪರ್ವತಗಳನ್ನೊಳಗೊಂಡ ಕಾರ್ಯಕ್ರಮ. ರೆಕಾರ್ಡಿಂಗ್ ಮುಗಿಯುತ್ತಿದ್ದಂತೆ ನಮ್ಮ‌ ಕ್ರಮದಂತೆ ಇಬ್ಬರಿಗೂ ಚೆಕ್ ವಿತರಿಸಲಾಯಿತು.

ಜಿವಿಯವರು ಕುತೂಹಲಕ್ಕೆಂಬಂತೆ ಶಿಷ್ಯನಿಗೆ ‘ಎಲ್ಲಪ್ಪಾ ನಿನ್ನ ಚೆಕ್ ಕೊಡು’ ಎಂದರಂತೆ. ಸಹಜವಾಗಿ ಅದರ ಮೇಲೆ ಕಣ್ಣಾಡಿಸಿದಾಗ ಅಲ್ಲಿ ನಮೂದಾದ ಮೊತ್ತ ಇವರದ್ದಕ್ಕಿಂತ ಹೆಚ್ಚಿತ್ತಂತೆ. ಬೇಸರಗೊಂಡ ಜಿ ವಿ ಯವರು ಅಂದಿನಿಂದ ಆಕಾಶವಾಣಿಗೆ ಬರುವುದನ್ನು ತೊರೆದರು. ಜಿ ವಿ ಯವರ ಶಿಷ್ಯ ಆಗ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕೃತರಾಗಿದ್ದೇ ಈ ಫೀ ವ್ಯತ್ಯಾಸಕ್ಕೆ ಕಾರಣ. ಅವರಿಗೆಂದೇ fees structureನಲ್ಲಿ ಹೆಚ್ಚಿನ ಗೌರವ ಧನ ನೀಡಬೇಕೆಂಬ ನಿರ್ದೇಶನವಿದ್ದು‌ ನಾವು ಅದನ್ನು‌ ಮಾನ್ಯ ಮಾಡಲೆಬೇಕು.

ಜಿ ವಿ ಯವರು ಕನ್ನಡದ ಕಾಯಕಕ್ಕಾಗಿಯೇ ಹುಟ್ಟಿದ ಮಹಾಪುರುಷರು ಅಂತಹವರನ್ನು ಆಕಾಶವಾಣಿಗೆ ಕರೆಸಲಾಗುತ್ತಿಲ್ಲ ಎಂಬುದು ನಮ್ಮ‌ಕಾರ್ಯಕ್ರಮ ವಿಭಾಗದವರ ಕೊರಗಾಗಿತ್ತು. ನಾನಾಗ ‘ಕನ್ನಡ ಭಾಷಣ’ ಕಾರ್ಯಕ್ರಮದ ನಿರ್ವಾಹಕಿಯಾಗಿದ್ದೆ. ಹೊರಗಿನ ಒಂದು ಕಾರ್ಯಕ್ರಮದಲ್ಲಿ ಜಿ ವಿ ಯವರನ್ನು ಮುಂದಿನ ಸಾಲಿನಲ್ಲಿ ಕಂಡೆ. ನಿಧಿ ಸಿಕ್ಕಷ್ಟು ಆನಂದವಾಯಿತು. ಪಕ್ಕದಲ್ಲಿ ಹೋಗಿ ಕುಳಿತೆ. ಎಂದಿನಂತೆ ಬಲು ವಿಶ್ವಾಸದಲ್ಲಿ ಕುಶಲ ವಿಚಾರಿಸಿದರು.

ಆಕಾಶವಾಣಿಯ ಕೆಲಸ ಕಾರ್ಯದ ಬಗ್ಗೆಯೂ ಪ್ರಸ್ತಾಪ ಬಂತು. ನಾನೇ ಆಹ್ವಾನಿಸಿದೆ. ಹಿಂದೆ ನಡೆದ ಘಟನೆಯ ಬಗ್ಗೆ ಕೇಂದ್ರ ಸರ್ಕಾರದ ರೀತಿನೀತಿಯೇ ಗೌರವ ಧನದ ನೀಡಿಕೆಯ ತಾರತಮ್ಯಕ್ಕೆ ಕಾರಣವೆಂದು ಮನವರಿಕೆ ಮಾಡಿ ತಪ್ಪೊಪ್ಪಿಗೆ ಬೇಡಿದೆ. ಅವರಿಗೆ ಆಗಿದ್ದ ನೋವು ಹಣದ ಬಗ್ಗೆ ಖಂಡಿತ ಅಗಿರಲಿಲ್ಲ ಅದು ಅವರ ಸ್ವಾಭಿಮಾನದ ಪ್ರಶ್ನೆಯಾಗಿತ್ತು. ಅವರ ಮಾತಲ್ಲಿ ನನಗೆ ಅರ್ಥವಾಯಿತು. ಆ ಕೂಡಲೇ ಮಗುವಿನಂತಹ ಮನಸ್ಥಿತಿಯ ಆ ಹಿರಿಯರು ಆಕಾಶವಾಣಿಗೆ ಬರಲು ಒಪ್ಪಿದರು. ನನಗೋ ಮಂಡಿಗೆ ಸವಿದಷ್ಟು ಖುಷಿ. ನನ್ನ ಭಾಗ್ಯಕ್ಕೆ ಹಿಗ್ಗಿ ಅವರಿಗೆ ವಂದಿಸಿದೆ.

ಶುರುವಾಯಿತು ಜಿ ವಿ ಯವರನ್ನು ಆಕಾಶವಾಣಿಗೆ ಕರೆಸಿಕೊಳ್ಳುವ ಪ್ರಕ್ರಿಯೆ. ಅಂದಿನ ನಮ್ಮ ನಿಲಯ ನಿರ್ದೇಶಕರಾಗಿದ್ದವರು ಅದಮ್ಯ ಉತ್ಸಾಹಿ
ಡಾ ಚೇತನ ಎಸ್ ನಾಯಕ್. ವಿಷಯ ತಿಳಿದು ಅವರು ಸಂತೋಷಪಟ್ಟರು. ಆ ದಿನಗಳಲ್ಲಿ ಅವರ ವಿವೇಚನೆಯ ಪರಿಧಿಯ ಗರಿಷ್ಠ ಫೀ ಭಾಷಣ ಕಾರ್ಯಕ್ರಮಕ್ಕೆ ನಿಗದಿಯಾಗಿದ್ದು 750 ರೂಪಾಯಿ. ಫೈಲ್ ಮೇಲೆ ಕೋರಿದೆ. ಅದನ್ನು‌ ಮಂಜೂರು ಮಾಡಿದರು.

ರೆಕಾರ್ಡಿಂಗ್ ಗೊತ್ತುಪಡಿಸಿದ ದಿನ ಸರಿಯಾದ ಸಮಯಕ್ಕೆ ನಮ್ಮ ಸಂಸ್ಥೆಯ ಅಂಬಾಸಿಡರ್ ಕಾರ್ ಅವರನ್ನು ಕರೆತಂದಿತು. ಡಾ ಚೇತನ ಜೀವಿ ಅವರನ್ನು ಸ್ವಾಗತಿಸಿದರು. ಸ್ಟುಡಿಯೋದಲ್ಲಿ ಆ ಮಹಾನುಭಾವರ ದನಿಯನ್ನು ರೆಕಾರ್ಡ್ ಮಾಡಿ, ಚೆಕ್ ನೀಡಿ ಮನೆ ತಲುಪಿಸಿದೆವು. ಆಕಾಶವಾಣಿಗೆ ಬಂದಿದ್ದು ಅವರಲ್ಲೂ ನಲಿವು ತಂದಿತ್ತು. ಹಳೆಯ ಪ್ರಸಂಗದ ಕಹಿ ಅವರ ನಿಷ್ಕಳಂಕ ಹೃದಯದಿಂದ ಮರೆಯಾಗಿದ್ದಂತೂ ಸತ್ಯ. ಮತ್ತೆ ಅವರ ಆಕಾಶವಾಣಿಯೊಂದಿಗಿನ ಮೈತ್ರಿ ಚಿಗುರಿತು.

ಇನ್ನು ವಿವಿಧಬಾರತಿ ಆಕಾಶವಾಣಿ ಬೆಂಗಳೂರು ಕೇಂದ್ರ ವೃಕ್ಷದ ಒಂದು‌ ಪ್ರಮುಖ ಶಾಖಾ ಕೊಂಬೆ. 2005-2011 ವರೆಗೆ ವಿವಿಧ ಭಾರತಿ ಯಿಂದ ನಿತ್ಯ ಬೆಳಗ್ಗೆ ನಂದನ ಕಾರ್ಯಕ್ರಮದ ಭಾಗವಾಗಿ ‘ಸಿರಿಗನ್ನಡ’ ಪ್ರಸಾರವಾಗುತ್ತಾ ಇತ್ತು. ಪ್ರೊ. ಜಿ. ವಿ. ಯವರ ಪುಸ್ತಕ ಆಧಾರಿತ ಈ ಕಾರ್ಯಕ್ರಮದಲ್ಲಿ ಕನ್ನಡ ನಾಡು, ನುಡಿ, ಇತಿಹಾಸ, ಸಾಹಿತ್ಯ, ಜಾನಪದ, ಸುಗಮ ಸಂಗೀತ ಮತ್ತು ನಾಡಿನ ಕ್ರೀಡೆಗಳ ಬಗ್ಗೆ ಮಾಹಿತಿ. ಪ್ರೊ.ಜೀ. ವಿ. ಅವರ ಪುಸ್ತಕದಿಂದ ಆಯ್ದ ಒಂದು ಪದದ ಪರಿಚಯ, ಕೇಳುಗರನ್ನೊಳಗೊಂಡ ರಸಪ್ರಶ್ನೆ ಮತ್ತು ಅದರ ಉತ್ತರ ಜೊತೆಗೊಂದು ಚಿತ್ರಗೀತೆ ಇರುತ್ತಿತ್ತು.

ಆಗ ರೇಡಿಯೊ ಸಿಟಿ ಎನ್ನುವ ಖಾಸಗಿ ಚಾನೆಲ್ನಲ್ಲಿ ಕನ್ನಡ ಶಬ್ಧ ಪರಿಚಯ ಅನ್ನೋ ಹೆಸರಿನಲ್ಲಿ local slang ಪದಗಳನ್ನು ಬಳಸಿಕೊಂಡು ಲೇವಡಿ ಮಾಡುವಂತಹ ಕಾರ್ಯಕ್ರಮ ಬರುತ್ತಿತ್ತು. ಅದರ ಬಗ್ಗೆ ನಮಗೆ ಇದ್ದ ಸಾತ್ವಿಕ ಕೋಪದಿಂದ ಈ ಕಾರ್ಯಕ್ರಮ ರೂಪಿತವಾಯ್ತು. ಬಹಳ ಜನಪ್ರಿಯವಾಗಿದ್ದ ಈ ಕಾರ್ಯಕ್ರಮವನ್ನು ಪ್ರಾರಂಭದಲ್ಲಿ ಶ್ರೀಮತಿ. ಮಾಲತಿ ಶರ್ಮ ನಡೆಸಿಕೊಡುತ್ತಿದ್ದರು. ನಂತರದಲ್ಲಿ ಸುಮಾ ಕುಲಕರ್ಣಿ ಮುಂದುವರಿಸಿದರು, ಅವರು VRS ಪಡೆದ ಬಳಿಕ ಅಲ್ಪಕಾಲಕ್ಕೆ ಶ್ರೀ.ಶಿವರಾಂ ನಡೆಸಿದರು. ಇದು ಬಹುಪ್ರಿಯವಾದ ಕನ್ನಡ ಭಾಷೆ ಕಟ್ಟುವ ದಾಖಲೆ ನಿರ್ಮಿಸಿದ ಕಾರ್ಯಕ್ರಮ.

ಮುಂದೆ ನಮ್ಮ ಜಿ ವಿ ಯವರು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನ ಮೈದಾನದಲ್ಕಿ ಆಯೋಜಿಸಲಾಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದರು. ನಾವು ಅವರ ಮನೆಗೆ ಹೋಗಿ ಅವರ ಸಂದರ್ಶನ ದ್ವನಿಮುದ್ರಿಸಿ ತಂದು ರಾಜ್ಯವ್ಯಾಪಿ ಪ್ರಸಾರ ಮಾಡಿದ್ದೇ ಅಲ್ಲದೆ ಸಾಹಿತ್ಯ ಸಮ್ಮೇಳನದ ಗೋಷ್ಠಿ, ಸಮ್ಮೇಳನದ ಅಧ್ಯಕ್ಷರಾದ ಜಿ ವಿ ಯವರ ಭಾಷಣ ಎಲ್ಲದರ ಅವತರಣಿಕೆಗಳನ್ನು ಕೇಳುಗಮಿತ್ರರಿಗೆ ತರಂಗಗಳ ಮೂಲಕ ತಲುಪಿಸಿದೆವು.

ಪಕ್ವಫಲದಂತೆ ಕಂಗೊಳಿಸುತ್ತಿದ್ದ ಜಿ ವಿ ಅವರ ಭಾಗವಹಿಸುವಿಕೆಯೇ ಸಮಾರಂಭಕ್ಕೆ ಅಪೂರ್ವ ಶೋಭೆ ನೀಡಿತ್ತು. ಸಮ್ಮೇಳನದ ಆರಂಭದಿಂದ ಅಂತ್ಯದವರೆಗೂ ಆ ಪ್ರಾಯದಲ್ಲೂ ಅವರು ಸಹಕರಿಸಿದ ರೀತಿ ತೋರಿದ ಆಸ್ಥೆ ಕಳಕಳಿ ಬಹುಶಃ ಅವರೊಬ್ಬರಿಂದ ಮಾತ್ರ ಸಾಧ್ಯ. ನಾವೆಲ್ಲರೂ ಯಾರೇ ಆಗಲಿ ಎಲ್ಲೇ ಇರಲಿ ನಮಗೆ ಅನ್ನ ನೀಡುವ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು. ಹೃದಯ ಹೃದಯಗಳನ್ನು ಬೆಸೆಯುವಲ್ಲಿ ನಮ್ಮ ಪಾತ್ರ ಹಿರಿದು ಹಾಗು ಅತ್ಯಂತ ಜವಾಬ್ದಾರಿಯುತವಾದದ್ದು. ಆಕಾಶವಾಣಿಯಂತು‌ ವರ್ಷವಿಡೀ ಕನ್ನಡವನ್ನೇ ಉಸಿರಾಡುವ ಒಂದು ಜೀವಂತ ಸಂಸ್ಥೆ. ಈ ಸಾಂಸ್ಕೃತಿಕ ವೃಕ್ಷದ ಮೇಲೆಲ್ಲ ಸಾಹಿತಿ ಕಲಾವಿದರ ಸಂಗೀತ ಸಾಹಿತ್ಯದ ಕಲರವ. ಅದನ್ನು‌ ಕಣ್ತುಂಬಿಕೊಂಡು ಕಿವಿಯ ಮೂಲಕ ಹೃದಯಕ್ಕಿಳಿಸಿಕೊಂಡ ನಾವೇ ಪುಣ್ಯವಂತರು.

‍ಲೇಖಕರು Avadhi

19 April, 2021

2 Comments

  1. Jayasrinivasa Rao

    Lovely reminiscences of a lively soul … may he continue spinning webs with words in God’s abode too … thank you Ms Sailakshmi Iyer …

  2. T S SHRAVANA KUMARI

    ನಿಜ, ನೀವೇ ಪುಣ್ಯವಂತರು ಸಾಯಿಲಕ್ಷ್ಮಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading