ಅಷ್ಟೇ..

ದೀಪ್ತಿ ಭದ್ರಾವತಿ

ಸಾಕು ಬಿಡು ಶಕುಂತಲ
ಎಷ್ಟೆಂದು ಈ ಖಾಲಿ ರಸ್ತೆಗಳ
ಕಣ್ಣಿನಲಿ ತುಂಬಿಕೊಳ್ಳುತ್ತಿ
ಹೊರಡುವ ಹುನ್ನಾರ ಇಟ್ಟುಕೊಂಡು
ಬಂದವರು ನೆವ ಹೆಕ್ಕುವ
ಹೂಕಿಯಲ್ಲೆ ಇರುತ್ತಾರೆ
ಅದು ಉಂಗುರ, ಬೈಗುಳ, ಸಣ್ಣ ತಕರಾರು
ಯಾವುದು ಆಗಿರಬಹುದು

ತಿರಸ್ಕರಿಸುವ ಹಕ್ಕಿರುವುದು ನಮಗಷ್ಟೆ
ಕಣೆ ಬೇಕಂತಲೆ ಮರೆತಿದ್ದೇವೆ
ಲಕ್ಷಾಂತರ
ವೀರ್ಯಾಣುಗಳ ಸಲೀಸು ಹೊರಗೆ ಬಿಸುಟು
ಬೇಕಾದನ್ನು ಹೆಕ್ಕಿ ಉಸಿರು ಬಿತ್ತುವ ತಾಕತ್ತು
ಅಂಡಾಣಿದ್ದಲ್ಲದೆ ಮತ್ಯಾರದ್ದು ಹೇಳು?

ಕಟ್ಟಿದ ಗರ್ಭಕ್ಕೆಲ್ಲ ಪ್ರೀತಿಯ ಲೇಪ ಹಚ್ಚಿ
ನೋವುಗಳು ಎದ್ದ ಸಂಕರದಲಿ
ನಲಿವಿನ ಬೆಳಕ ಹುಡುಕಿ
ಅವನೊಳಗೆ ಲೋಕ ಕಂಡು
ಲೋಕದೊಳಗೂ ಅವನನ್ನೇ ಕಂಡು ಅಸ್ತಿತ್ವದ
ಚಾದರವ ಒಲುಮೆಯ ಗೂಟಕ್ಕೆ
ಸಿಕ್ಕಿಸಿ ಬರಿದೇ ಕಾಯುತ್ತೇವಷ್ಟೆ

ಪಡೆದು ಗೊತ್ತಿದ್ದವರಿಗೆ ಕೊಡುವ ಅಭ್ಯಾಸ
ಇರುವುದಿಲ್ಲವೆ
ನಿಲ್ಲಿಸಿ ಹೋಗುವುದು ನಮಗೂ ಕಷ್ಟದ್ದೇನಲ್ಲ

ತಾಯಿ ಹಕ್ಕಿಯೊಂದು ತನ್ನಿಷ್ಟದಂತೆ
ಬಯಲು ಹುಡುಕಿ
ಹೊರಟರೆ?
ಕಾವು ಕೊಡುವಷ್ಟೆ ಕೊಡಬೇಕು ಗೆಳತಿ
ಎದೆ ಹೊಟ್ಟಿ ಹೋಗುವಷ್ಟಲ್ಲ

ಇಷ್ಟಕ್ಕು ನಾವು ಮರೆವಿನ ಗುಳಿಗಳಾಗುವುದು ಕಷ್ಟವೇನೆ
ಹುಡುಗಿ?
ಉಂಗುರದ ಬದಲು ಸಿಗರೇಟು
ರೂಪಕವಾಗಬೇಕು
ಅಷ್ಟೇ..

‍ಲೇಖಕರು Avadhi

October 2, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ವಿಜಯ ಅಮೃತರಾಜ್ ಕೊಪ್ಪಳ

    ಕಾವ್ಯ ಕಟ್ಟುವಿಕೆಯಲ್ಲಿ ಹೊಸತನವಿದೆ ಓದುಗನಿಗೆ ಹೊಸ ಪ್ರಪಂಚ ತೆರೆಯುತ್ತದೆ.

    ಪ್ರತಿಕ್ರಿಯೆ
  2. ಲಲಿತಾ ಸಿದ್ಧಬಸವಯ್ಯ

    ಈ ಕವನ ಓದಿ ವಾರವಾಯ್ತು. ವಾರದಿಂದ ಯೋಚಿಸುತ್ತಿದ್ದೇನೆ. ಅಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಕವನ.

    ಅಂಡಾಣುವಿಗೆ , ಚಿಮ್ಮಿ ತನ್ನತ್ತ ಬರುವ ಅಸಂಖ್ಯಾತ ವೀರಾಧಿವೀರ್ಯರಲ್ಲಿ ಒಬ್ಬನನ್ನು ಆಯ್ಕೆ ಮಾಡಿ ಒಳ ಬರಗೊಡುವ ಹಕ್ಕು ಇರಬೇಕಾಗಿತ್ತು, ಇಲ್ಲ!! ಅದು ಪ್ರಕೃತಿಯ ಮೋಸ. ಅಲ್ಲಿ ಆಯ್ಕೆ, ತಿರಸ್ಕಾರ ಎರಡೂ ಅಂಡಾಣುವಿನ ಕೈಯಲ್ಲಿಲ್ಲ.
    ಬಹು ವೀರ್ಯರು ಪರಸ್ಪರ ಹೊಡೆದಾಡಿ ಗೆದ್ದವನು ಸಮಾಗಮದ ಹಕ್ಕು ಪಡೆಯುವನು. ಅಥವಾ ಅಂಡಾಣುವನ್ನು “ಹೊಡೆದು” ಕೊಳ್ಳುವನು. ಸಮಾಗಮದ ತರುವಾಯ ಫಲಿತ/ಅಫಲಿತ ಎರಡರ ಬಗ್ಗೆಯೂ ಈ ವೀರ್ಯಸೂರ್ಯನೇನು ಬಾಧೆ ಪಡನು. ಆಮೇಲಿನದೇನಿದ್ದರೂ ಅಂಡಾಣು ಹೊತ್ತ ಹೊಟ್ಟೆಯ ಹೊಣೆ.

    ಎಲ್ಲವೂ ವಿಧಿವತ್ತಾಗಿ ನಡೆದಿರುವ‌ “ಕೇಸು” ಗಳಲ್ಲಿ ಫಲದ ದೇಖರೇಖೆಗೆ ಎಲ್ಲಾ ಇರುತ್ತಾರೆ. ಶಕುಂತಲೆಯರ “ಕೇಸು” ಗಳಲ್ಲಿ ಯಾರೂ ಇರುವುದಿಲ್ಲ. ಅದು ಸಮಸ್ಯೆ. ತೀರದ ಸಮಸ್ಯೆ. ಎಲ್ಲ ಶಕುಂತಲೆಯರಿಗೂ ಬಾಣಂತನಕ್ಕೆ ಋಷ್ಯಾಶ್ರಮ ದಕ್ಕುವುದಿಲ್ಲ.

    ಆಗ ” ಕಾವು ಕೊಡುವಷ್ಟೆ ಕೊಡುವುದರಿಂದ” ಸಮಸ್ಯೆ ತೀರಲಾರದು. ಕಾವಿಗೆ ಬರುವ ಮೊದಲೇ ಫಲವನ್ನು ತೊಟ್ಟು ಕಳಚಿಸಿದರೆ ಒಳ್ಳೆಯದು. ಹೀಗೆಂದ ತಕ್ಷಣ ಎಂತೆಂಥಹ ಘನಂದಾರಿ ಪ್ರಶ್ನೆಗಳೇಳಬಹುದು ?

    ಒಟ್ಟಾರೆ ದೀಪ್ತಿ, ಬಹುರೀತಿಯಲ್ಲಿ ಪ್ರಶ್ನೆ ಕೇಳಿಕೊಳ್ಳುವಂತೆ ಮಾಡಿದ್ದೀರಿ,, ನಿಮಗೆ ಬಹಳ ಧನ್ಯವಾದಗಳು. ನನ್ನ ಪ್ರಶ್ನೆಯೆ ಇತರರಿಗೂ ಎದ್ದಿರಬಹುದು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: