ಅಷ್ಟರ ಮಟ್ಟಿಗೆ ಹವಾ ಮೆಂಟೇನ್ ಮಾಡಿದ್ದು ಆ ನಾಟಕ

shivu morigeri

ಶಿವು ಮೋರಿಗೇರಿ

ಅಷ್ಟರ ಮಟ್ಟಿಗೆ ಹವಾ ಮೆಂಟೇನ್ ಮಾಡಿದ್ದು ಆ ಒಂದೇ ಒಂದು ನಾಟಕ.

ಬೆಳಗ್ಗೆ ನಂಗೆ ಎಚ್ಚರವಾಗಿದ್ದೇ ಆ ಮೊಬೈಲ್ ಸೌಂಡಿಂದ.’ ಹಾಳಾದ್ ಈ ಮೊಬೈಲನ್ನ ಸೈಲೆಂಟ್ ಮೋಡ್ ಗೆ ಬಿಸಾಕ್ಲಿಲ್ಲ ನೋಡು ಅಂದ್ಕೊಳ್ತಾ, ಹೆಂಗೂ ಎದ್ದಾಯ್ತಲ್ಲಾ ಇನ್ನೇನ್ ಮಾಡೋದು ಅದ್ಯಾರದ್ದೇನೋ ಮೆಸೇಜು ‘ ಅಂತ ನೋಡಿದರೆ ಖುಷಿಯಾಯ್ತು. ‘ಹ್ಯಾಪಿ ವಿವೇಕಾನಂದ ಜಯಂತಿ’ ಥಟ್ಟನೆ ನೆನಪಾಯ್ತು ಆ ಡೈಲಾಗ್ ! ಆ ಡೈಲಾಗನ್ನಿಲ್ಲಿ ಹೇಳ್ಬಿಡ್ತಿದ್ದೆ, ಆದ್ರೆ ಶುದ್ಧ ಕಿವಿಗಳಿಗೆ ಆ ಡೈಲಾಗ್ ಕಳೆ ಇದ್ದಂತೆ. ಕಿತ್ತೆಸಿತಾರಷ್ಟೆ. ಅದಕ್ಕೇ ಹೇಳ್ತಿಲ್ಲ.

ಆದ್ರೆ ಆ ಡೈಲಾಗ್ ನಂದಲ್ಲ. ಬಿಟ್ಟೂ ಬಿಡದೆ ಕಾಡ್ತಿದ್ದ ಆ ಡೈಲಾಗನ್ನ ವಾಟ್ಸಪ್ ನಲ್ಲಿ  ಫಟಾಫಟ್ ರೆಕಾರ್ಡ್ ಮಾಡಿ ಒಂದಿಬ್ಬರು ಗೆಳಯ ಗೆಳತಿಯರಿಗೆ ಕಳಿಸಿದ ಕೂಡಲೇ ತರೇವಾರಿ ರೆಸ್ಪಾನ್ಸ್. ಇಯರ್ ಫೋನ್ ಕಿವಿಗೆ ಹಾಕ್ಕೊಂಡು ಒಬ್ಬೊಬ್ಬನೇ ನಗ್ತಾ ರಸ್ತೆ ಪಕ್ಕ ನಡೆದದ್ದು ಇದು ಎರಡನೇ ಬಾರಿ. ಭಾರೀ ಐತಿ ಆ ಡೈಲಾಗ್ ಮಾತ್ರ. ಹೇಳ್ಬಿಡು ಅಂತ ಮಾತ್ರ ಕೇಳ್ಬೇಡಿ ಪ್ಲೀಸ್.

ಹದಿನಾರೇಳ್ವರ್ಷ ಕಳೆದ್ಹೋದ್ರೂ ಇನ್ನು ಹಂಗಂಗೇ ನೆಪ್ಪಿಡುವಂತೆ ಡೈಲಾಗ್ ಹೊಡಿದಿದಾನಲ್ಲಾ ಆಗ ಅಂವ ಲೋಕಲ್ ಹೀರೋ. ಅಲ್ಲಲ್ಲ, ಡೈಲಾಗ್ ಗಳ ಹೀರೋ. ಪರದೆಗಳ ಮೇಲಲ್ಲ. ಹೀಗಂದುಕೊಳ್ತಾನೇ ಚಕ್ಕನೆ ಆ ನೆನಪುಗಳು ಬಂದ್ಹೋದವು. ಅದೂ ಬಹುಶಃ ಸಾವಿರದೊಂಬೈನೂರಾ ತೊಂಭತ್ತೇಳೋ ತೊಂಭತ್ತೆಂಟೋ ಇರ್ಬೇಕು. ಪೂರಾ ನೆಪ್ಪಿಲ್ಲ.

ನಮ್ಮೂರಿನ ಬಸ್ ಸ್ಟ್ಯಾಂಡಿನಲ್ಲಿರೋ ಕೊಟ್ರಜ್ಜ ಅನ್ನೋರ ಹೋಟೆಲ್ಲಿನ ಮುಂದೆ ಕಮ್ಮಿ ಕಮ್ಮಿ ಅಂದ್ರೂ ಇಪ್ಪತೈದು ಮುವ್ವತ್ತು ಜನ ಟವಲ್ಲನ್ನೇ ತಳಕ್ಕೆ ಹಾಕ್ಕೊಂಡು ಕೂಡೋರು. ಕುಂತಲ್ಲಿಗೇ ಚಾ ತರಿಸಿಕೊಂಡು ತಾಸುಗಟ್ಟಲೆ ತಲೆದೂಗೋರು. ಆ ಒಂದು ಗಂಟೆ ಯಾರನ್ನ ಯಾರೂ ಮಾತಾಡಿಸ್ತಿರಲಿಲ್ಲ. ಚಾ, ಬೀಡಿ, ಮನೆಯವರು ಕರೀತಾರೆ, ಕಣಕ್ಕೆ ಹೋಗು, ಕಟಿಗಿ ತಾ, ನೀರಿಗೆ ಹೋಗಬೇಕಿತ್ತು, ಈ ಎಲ್ಲಾ ಮಾತುಗಳೂ ಆಗ  ಸಜ್ಞೆಗಳಾಗಿಬಿಡ್ತಿದ್ವು. ಅಷ್ಟರ ಮಟ್ಟಿಗೆ ಹವಾ ಮೆಂಟೇನ್ ಮಾಡಿದ್ದು ಆ ಒಂದೇ ಒಂದು ನಾಟಕ.

RAJU

ಇಳಿಸಂಜೆ ಆಗ್ತಾಇದ್ದಂಗೆ ಆ ಹೊಟೆಲ್ ನ ಕೊಟ್ರೇಶಣ್ಣ ಅನ್ನೋರು, ನೇರ ಟೇಪ್ ರೆಕಾರ್ಡ್ ಬಳಿ ಬಂದು ಬೇರೆ ಯಾವುದೇ ಕ್ಯಾಸೆಟ್ ಹಾಕಲಿಕ್ಕೆ ಹೋದ್ರೂ ಮತ್ತೆ ಬೇಡಿಕೆ ಬರ್ತಿದ್ದಿದ್ದು ಮತ್ತದೇ ನಾಟಕಕ್ಕೆ. ‘ನಿಮ್ಮ ಕಾಲಾಗ ಸಾಕಾಗಿ ಹೋಗೈತ್ರೋ ಮಾರಾಯ್ರ’ ಅಂತ ನಾಟ್ಕ ಮಾಡ್ತಾನೇ ಅದೇ ಕ್ಯಾಸೆಟ್ ಹಾಕ್ತಿದ್ದ. ನಾಟಕ ಕೇಳಲಿಕ್ಕಾಗಿಯೇ ಒಂದೇ ಕಪ್ ಚಹಾವನ್ನ ಅರ್ಧ ಗಂಟೆವರ್ಗೂ ಮೆಂಟೇನ್ ಮಾಡೋರ ನಡುವೆ ಹೊಟೆಲ್ ಫುಲ್ ಆಗ್ತಿದ್ದಂಗೆ, ‘ಹೇ, ನೀವೆಲ್ಲಾ ಹೊರಗ ನಡೀರಪಾ, ಬೇಕಿದ್ರೆ ಸೌಂಡ್ ಜಾಸ್ತಿ ಕೊಡ್ತೀನಿ’ ಅಂತೇಳಿಸ್ಕಂಡ ನಾಟಕ ಅದು. ತುಸು ಗಾಳಿ ಜೋರಾಗಿ ಬೀಸಿ ಯಾವುದಾದ್ರೂ ಡೈಲಾಗ್ ಮಿಸ್ ಆದ್ರೆ ‘ಇನ್ನೊಂಚೂರು ಸೌಂಡ್ ಕೊಡಪ್ಪೋ’ ಅಂತ ಕೇಳಿಬಿಡ್ತಿದ್ದ ಅಭಿಮಾನಿಗಳನ್ನ ಕಾಯ್ದುಕೊಂಡಿದ್ದ ಆ ನಾಟಕ, ಬಹುಶಃ ರಾಜು ತಾಳಿಕೋಟೆಯವರ ಜೀವನದ ದಿಕ್ಕನ್ನೇ ಬದಲಿಸಿದ ನಾಟಕ. ಕಡ್ಡಾಯವಾಗಿ ಕುಡುಕರಲ್ಲದವರಿಗೆ ಮಾತ್ರ ಅನ್ನೋ ಸ್ಲೋಗನ್ನಿನ ಮೇಲಿತ್ತು ಆ ಹಾಸ್ಯ ನಾಟಕದ ಹೆಸ್ರು, ಕಲಿಯುಗದ ಕುಡುಕ.

1400x1400srಶ್ರೀಶ್ರೀ ವೀಡಿಯೋದವರಿಂದ ಬಂದಿತ್ತು ಆ ಕ್ಯಾಸೆಟ್. ಭರ್ತಿ ಒಂದು ಘಂಟೆ ಇಪ್ಪತ್ಮೂರು ನಿಮಿಷದ ಮ್ಯಾಲ ಹನ್ನೊಂದು ಸೆಕೆಂಡ್ ಇರೋ ಮಜಬೂತು ಹಾಸ್ಯ ನಾಟಕ ಅದು. ಇಡೀ ನಾಟಕದಲ್ಲಿ ಒಂದೇ ಒಂದು ಬೋರ್ ಅನ್ನಿಸುವ ಡೈಲಾಗ್ ಗಳಿಲ್ಲ. ದ್ವಂದ್ವಾರ್ಥಗಳ ಡೈಲಾಗ್ ? ಕಮರ್ಷಿಯಲ್ ಮೇರೆ ಮೀರಿಲ್ಲ. ಪಕ್ಕಾ ನುರಿತ ಬಾಣಸಿಗನೊಬ್ಬ ಮನಸ್ಸು ಕೊಟ್ಟು ಮಾಡಿಟ್ಟ ಅಡುಗೆಯ ರುಚಿ ಇರುತ್ತಲ್ಲಾ, ಥೇಟ್ ಅಂಥಹದ್ದೇ ಭಾವ ಬರ್ತಿತ್ತು ಈ ನಾಟಕ ಕೇಳಿದ್ರೆ.

ಮುಂದೆ ಇದೇ ರಾಜು ತಾಳಿಕೋಟಿ, ಕಲಿಯುಗದ ಕುಡುಕ ಭಾಗ 2, ಲತ್ತೀಗುಣಿ ಲಕ್ಕವ್ವ, ಕುಡುಕರ ಸಾಮ್ರಾಜ್ಯ, ಅಸಲಿ ಕುಡುಕ, ಹಿಂಗೆ ಸಾಲು ಸಾಲು ನಾಟಕಗಳನ್ನು ಕೊಟ್ರು. ಅಷ್ಟೊತ್ತಿಗೆಲ್ಲಾ ನಮ್ಮೂರಿನ ಬಹುತೇಕರ ಮನೆಗಳಿಗೆ ಟೇಪ್ ರೆಕಾರ್ಡ್, ಸಿಡಿಪ್ಲೇಯರ್, ಅಲ್ಲಲ್ಲಿ ಬ್ಲಾಕ್ ಅಂಡ್ ವೈಟ್ ಟಿವಿ, ಇಡೀ ಊರಿನ ಆ ಸರ್ಕಾರಿ ಶಾಲೆಯಲ್ಲಿ ಮಾತ್ರ ಕಂಪ್ಯೂಟರ್ ಗಳು ಬರುತ್ತಾ ಹೋದ್ವು.

ಅದಕ್ಕೂ ಒಂದೇ ಒಂದು ವರ್ಷದ ಹಿಂದಿನಿಂದಲೆಲ್ಲಾ ಬರೀ ರೇಡಿಯೋ ಮನರಂಜನೆಯ ಆಸ್ತಿ. ತೀರಾ ಕಳೆದ ನಾಲ್ಕೇ ನಾಲ್ಕು ವರ್ಷಗಳ ಕೆಳಗೆ ನಮ್ಮೂರಲ್ಲಿ ಕಂಪ್ಯೂಟರ್ ಕಲ್ತವ್ನೇ ಕಿಂಗು. ಮತ್ತಿವತ್ತು, ದನ ಕಾಯೋನು ಕೂಡಾ ನಾಲ್ಕಾರು ಕಂಪನಿಗಳ ಮೊಬೈಲ್ ಗಳನ್ನ ನಿರರ್ಗಳವಾಗಿ ಆರ್ಪೇಟ್ ಮಾಡ್ತಾನೆ. ಈ ಪರಿ ವೇಗದಲ್ಲಿ ಜನರೇಶನ್  ಫಾರ್ವರ್ಡ್ ಆಯ್ತಲ್ಲಾ ಅನ್ನೋ ಖುಷಿ ಇದ್ದಷ್ಟೇ, ಅದೆಷ್ಟು ವರ್ಷಗಳ ಕಾಲ ತಾಂತ್ರಿಕ ಜ್ಞಾನದಿಂದ ನಮ್ಮದೇ ಊರು ದೂರ ಉಳಿದಿತ್ತಲ್ವಾ ! ಅನ್ನೋದೂ ಸುಳಿತದೆ. ಯಾವುದೋ ಒಂದು ಡೈಲಾಗಿನ ನೆನಪೂ ಕೂಡಾ ಇತಿಹಾಸದ ಬೆಳವಣಿಗೆಯನ್ನು ಹೇಳಬಹುದು ಅಲ್ವಾ ?

‍ಲೇಖಕರು Admin

January 14, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: