ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಶೋಕ ಶೆಟ್ಟರ್ ಕಾಲಂ: ಫಾದರ್ಸ್ ಡೇ ಬೇಕೆ ಅಪ್ಪನನ್ನು ಸ್ಮರಿಸಲು?

ಕಾರ್ಮಿಕರ ದಿನ, ಅಂತರ್ರಾಷ್ಟ್ರೀಯ ಮಹಿಳಾ ದಿನಗಳೇನೋ ಗೊತ್ತಿದ್ದವು, ಇನ್ನುಳಿದ ತಂಬಾಕು ರಹಿತ ದಿನ, ಪರಿಸರ ದಿನ, ಪ್ರೇಮಿಗಳ ದಿನ ಇತ್ಯಾದಿಗಳು ಯಾವಾಗ ಪ್ರಾರಂಭವಾದವೋ ಗೊತ್ತಿಲ್ಲ . ಈಗ ಗುಬ್ಬಿಗಳಿಗಾಗಿ (ಕಾಮನ್ ಸ್ಪ್ಯಾರೊ) ಒಂದು ದಿನ, ಏಡ್ಸ್ ಇತ್ಯಾದಿ ವಿವಿಧ ಕಾಯಿಲೆಗಳಿಗೆ ಒಂದೊಂದು ದಿನಗಳು ನಿಗದಿಯಾಗಿವೆ. ಹಾಗೆ ಇಂದು “ಫಾದರ್ಸ್ ಡೇ” ಅಂತೆ. ಸಾಮಾನ್ಯವಾಗಿ ಮಕ್ಕಳಿಗೆ ಹಡೆದ ತಂದೆ ತಾಯಿ ಬದುಕಿನುದ್ದಕ್ಕೂ ತಮ್ಮ ಸ್ಮರಣೆಯ ಭಾಗವಾಗಿ ಇದ್ದೇ ಇರುತ್ತಾರೆ.ನಾನೂ ಇದಕ್ಕೆ ಹೊರತಲ್ಲ. ನನ್ನ ತಂದೆಯ ಕುರಿತ ನನ್ನ ಕೆಲ ನೆನಹುಗಳು ಇಲ್ಲಿವೆ.
ನನ್ನ ತಂದೆಯ ಊರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೌಜಲಗಿ. ಅಲ್ಲಿಯ ಪರಶೆಟ್ಟೆಪ್ಪ ಶೆಟ್ಟರ ಪುತ್ರನಾಗಿ ನನ್ನ ತಂದೆ ಜನಿಸಿದ್ದು ೨೮ ಡಿಸೆಂಬರ್ ೧೯೦೯ರಲ್ಲಿ. ಪರಶೆಟ್ಟೆಪ್ಪ ಶೆಟ್ಟರು ನನ್ನ ತಂದೆಯ ಎಳವೆಯಲ್ಲೇ ಮುಂಬಯಿಗೆ ಹೋಗಿ ಅಲ್ಲಿ ತೇಜಿ-ಮಂದಿ ವ್ಯಾಪಾರ ಮಾಡುತ್ತಿದ್ದರು. ಅದು ಸರಕು ಸಾಮಗ್ರಿಗಳನ್ನು ಕೊಂಡಿಟ್ಟು ಹೆಚ್ಚು ಬೆಲೆ ಬಂದಾಗ ಮಾರುವ ವ್ಯಾಪಾರವಿದ್ದೀತು. ನನ್ನ ತಂದೆ ಮುಂಬಯಿಯಲ್ಲಿನ ತಮ್ಮ ಬಾಲ್ಯದ ಕುರಿತು ಹೇಳಿಕೊಳ್ಳುವಾಗ ಭಯ್ಯಾಗಳ ಅಂಗಡಿಗಳಲ್ಲಿ ಹಣ ಕೊಟ್ಟು ಮನಸೋ ಇಚ್ಛೆ ಹಾಲು ಕುಡಿಯುತ್ತಿದ್ದುದು, ಕುದುರೆ ಸವಾರಿ ಮಾಡುತ್ತಿದ್ದುದು-ಇಂಥ ಪ್ರಸಂಗಗಳು ಕೆಲಕಾಲ ನನ್ನ ಅಜ್ಜನ ಆರ್ಥಿಕ ಸ್ಥಿತಿ ಚೆನ್ನಾಗಿತ್ತೆಂಬುದಕ್ಕಿಂತ ಹೆಚ್ಚಿಗೆ ಹೇಳುವದಿಲ್ಲ. ನನ್ನ ತಂದೆ ಅಲ್ಲಿ ಮರಾಠಿ ಪ್ರಾಥಮಿಕ ಶಿಕ್ಷಣ ಪಡೆದರು. ನನ್ನ ತಂದೆಯ ಮರಾಠಿ ಓದು, ಬರಹ, ಮಾತು ಅವರ ಕನ್ನಡದಷ್ಟೇ ನಿರರ್ಗಳ.
ತಮ್ಮ ಕಾರ್ಯನಿಮಿತ್ತ ಅವರು ಮಿರಜ್, ಸಾಂಗ್ಲಿ, ಗಡ್ ಹಿಂಗ್ಲಜ್, ನಿಪ್ಪಾಣಿಗೆ ಹೋದಾಗೆಲ್ಲ ಲೋಕಸತ್ತಾ, ಸಕಾಳ, ತರುಣ ಭಾರತ್ ಇತ್ಯಾದಿ ಒಂದು ಸಿವುಡು ಮರಾಠಿ ಪತ್ರಿಕೆಗಳನ್ನು ತೆಗೆದುಕೊಂಡು ಬಂದು ಅರೆಪದ್ಮಾಸನದಲ್ಲಿ ಕುಳಿತು ರಾತ್ರಿ ಹನ್ನೆರಡು-ಒಂದು ಗಂಟೆಯವರೆಗೆ ಓದುತ್ತಿದ್ದುದು, “ಟಾಯಮ್ ಬಾಳ ಆತ, ಮಕ್ಕೊರ್ರೀ ಇನ್ನs” ಎಂದು ನಮ್ಮವ್ವ ಪದೇ ಪದೇ ಹೇಳುವದು ನಮಗೆ ಸಾಮಾನ್ಯ ದೃಶ್ಯವಾಗಿರುತ್ತಿತ್ತು.
ನನ್ನ ಅಜ್ಜನ ಸುಭಿಕ್ಷದ ಕಾಲ ಮುಗಿದು ಅವರು ತಮ್ಮ ವ್ಯವಹಾರದಲ್ಲಿ ಸಂಪೂರ್ಣ ನೆಲ ಕಚ್ಚಿದ್ದರು. ಈ ಅಜ್ಜನ ನೆನಪು ನನಗೆ ಮಸಕು ಮಸಕಾಗಿ ಇದೆ. ಬೈಲಹೊಂಗಲದಲ್ಲಿ ನಾವು ಬಾಡಿಗೆಗಿದ್ದ ಮನೆಯೊಂದರ ಹೊರಕೋಣೆಯಲ್ಲಿ ಆತನ ವಾಸ. ಜೋಳದ ಒಣ ದಂಟು ಸುಲಿದು ಅದರ ಬೆಂಡು ಮತ್ತು ಸಿಬರುಗಳಿಂದ ಆತ ತಾಸುಗಟ್ಟಲೆ ಶ್ರದ್ಧೆ ವಹಿಸಿ ಮಾಡಿಕೊಟ್ಟ ಆಟದ ಬಂಡಿಯನ್ನು ನಾನು ಮುದ್ದಾಂ ಕೆಡಿಸಿ ಅವನ ಕೋಪಕ್ಕೆ ಕಾರಣನಾಗುತ್ತಿದ್ದುದು ನನಗೆ ನೆನಪಿದೆ.
ಮತ್ತೊಂದು ಸ್ಪಷ್ಟ ನೆನಪು ಬಿಳಿ ರುಮಾಲು,ಧೋತ್ರ, ಬಗಲಗಸಿ ಅಂಗಿಯಿಂದಲಂಕೃತವಾದ ಆ ನನ್ನ ಅಜ್ಜನ ಪಾರ್ಥಿವ ಶರೀರವನ್ನು ಮಂದ ಬೆಳಕಿನ ಹೊರಕೋಣೆಯಲ್ಲಿ ಗೋಡೆಗೊರಗಿಸಿ ಕುಳ್ಳಿರಿಸಿದ್ದು. ನನ್ನ ತಂದೆಯ ತಾಯಿಯನ್ನು ನಾನು ನೋಡಿಲ್ಲ. ಆಕೆ ಮೊದಲೇ ಗತಿಸಿದ್ದಳೆಂದು ತೋರುತ್ತದೆ. ಆಕೆ ಮತ್ತು ಖ್ಯಾತ ಜಾನಪದ ಗಾಯಕರಾಗಿದ್ದ ಹುಕ್ಕೇರಿ ಬಾಳಪ್ಪನವರ ತಾಯಿ ಅಕ್ಕ-ತಂಗಿಯರು. ಸವದತ್ತಿ ತಾಲೂಕಿನ ಆಲದಕಟ್ಟಿ ಅವರ ತವರುಮನೆ. ಆ ಮನೆಯ ಹಿರಿಯರು ತಲ್ಲೂರು ದೇಸಾಯರ ಬಳಿ ಕಾರಭಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದುದರಿಂದ ತಲ್ಲೂರ ಶೆಟ್ಟರು ಎಂದೇ ಕರೆಸಿಕೊಳ್ಳುತ್ತಿದ್ದರು.
ಮುಂಬಯಿಯಿಂದ ಮರಳಿದ ನಂತರ ಅಲ್ಲಿ ತಾವು ಅದುವರೆಗೆ ಪಡೆದ ಹಂತದ ಶಿಕ್ಷಣವನ್ನು ನನ್ನ ತಂದೆ ಪುನ: ಕನ್ನಡದಲ್ಲಿ ಪಡೆಯಬೇಕಾಯಿತು.ಆಗಿನ ಮುಲ್ಕಿ (೭ನೇ ಇಯತ್ತೆ) ಮುಗಿಸಿ ಅವರು ಶಿಕ್ಷಣ ಕೊನೆಗೊಳಿಸಿದ್ದರು. ಬೈಲಹೊಂಗಲಕ್ಕೆ ಬಂದು ನೆಲೆಗೊಳ್ಳುವ ಮುನ್ನ ಅಪ್ಪ ಒಂದಷ್ಟು ವರ್ಷ ಗೋಕಾಕದಲ್ಲಿ, ಒಂದೆರಡು ವರ್ಷ ಮುನವಳ್ಳಿಯಲ್ಲಿ ಇದ್ದರು. ಮತ್ತೊಬ್ಬನ ಪಾಲುದಾರಿಕೆಯಲ್ಲಿ ವ್ಯವಹಾರವೊಂದನ್ನು ಪ್ರಾರಂಭಿಸಿದ್ದರಾದರೂ ಪಾಲುದಾರನ ವಂಚಕ ಬುದ್ಧಿಯಿಂದಾಗಿ ಅದನ್ನೂ ಕೈ ಬಿಟ್ಟಿದ್ದರು. ಕೊನೆಗೆ ತಲ್ಲೂರ ಶೆಟ್ಟರು ಎಂದು ಕರೆಸಿಕೊಳ್ಳುತ್ತಿದ್ದ ತನ್ನ ಸೋದರಮಾವಂದಿರ ಆಶ್ರಯಕ್ಕೆ ಬೈಲಹೊಂಗಲಕ್ಕೆ ಬಂದರು. ಆಮೇಲೆ ಬೈಲಹೊಂಗಲದ ವಿಜಯ ಕಾಟನ್ ಮತ್ತು ಆಯಿಲ್ ಮಿಲ್ ನಲ್ಲಿ ಕ್ಲೆರಿಕಲ್ ನೌಕರಿ ಮಾಡುತ್ತ ಪ್ರತ್ಯೇಕವಾಗಿ ಬದುಕಿದರು.

ಹಾಗೆ ಬೈಲಹೊಗಲದಲ್ಲಿ ನನ್ನ ನೆನಪುಗಳು ನಿಚ್ಚಳವಾಗಿ ಹಿಂದಕ್ಕೆ ಹೋಗುವಷ್ಟು ಅವಧಿಯಲ್ಲಿ ನಾವು ಬದುಕಿದ್ದು ಒಂದು ತೀರ ಸಾಮಾನ್ಯ ಮನೆಯಲ್ಲಿ. ಅದಕ್ಕೆ ನಾನಾಗಲೇ ಪ್ರಸ್ತಾಪಿಸಿದ ಪ್ರತ್ಯೇಕವಾಗಿದ್ದ ಒಂದು ಹೊರಕೋಣೆ, ಅದನ್ನು ಬಿಟ್ಟರೆ ಎರಡೇ ಅಂಕಣ- ಒಂದು ಪಡಸಾಲೆ ಮತ್ತು ಒಂದು ಅಡುಗೆಮನೆ. ದೊಡ್ಡದಾಗಿದ್ದ ಅಡುಗೆಮನೆಯ ಒಂದು ಮೂಲೆಯಲ್ಲಿ ಬಚ್ಚಲಿತ್ತು. ಹಿತ್ತಲಲ್ಲಿ ಕಸಕಡ್ಡಿ ಸಗಣಿ-ಗಂಜಳಗಳ ತಿಪ್ಪೆ. ಏಕೆಂದರೆ ನಮ್ಮವ್ವ ಒಂದು ಆಕಳನ್ನು ಸಾಕಿಕೊಂಡಿದ್ದಳು. ಒಂಬತ್ತು ಮಕ್ಕಳ ಪೈಕಿ ಚೊಚ್ಚಲು ಮಗುವಾಗಿ ಹುಟ್ಟಿ ಎಳವೆಯಲ್ಲೇ ತೀರಿಹೋದ ಒಂದು ಗಂಡು ಮತ್ತು ಬಾಲ್ಯಾವಸ್ಥೆಗೆ ತಲುಪಿ ಕಣ್ಮುಚ್ಚಿದ ಒಂದು ಹೆಣ್ಣು ಬಿಟ್ಟು ಉಳಿದವರು ನಾವು ಏಳು ಜನ ಇದ್ದೆವು. ಅಕ್ಕಂದಿರ ಪೈಕಿ ಒಬ್ಬಳನ್ನು ನನ್ನ ಸೋದರಮಾವನಿಗೆ ಮದುವೆ ಮಾಡಿಕೊಟ್ಟಿದ್ದು ಅವಳು ನನ್ನ ತಾಯಿಯ ತವರೂರಾಗಿದ್ದ ಸವದತ್ತಿ ತಾಲೂಕಿನ ಸತ್ತೀಗೇರಿಯಲ್ಲಿದ್ದುದರಿಂದ ನಮ್ಮ ಮನೆಯಲ್ಲಿ ನಾವು ಆರು ಜನ ಮಕ್ಕಳು, ನನ್ನ ತಂದೆ,ತಾಯಿ ಹಾಗೂ ನಮ್ಮ ಅಜ್ಜ ಹೀಗೆ ಒಂಬತ್ತು ಜನ ಇದ್ದೆವು. ಕೊನೆಯವನಾಗಿ ಹುಟ್ಟಿದ ನನ್ನ ತಮ್ಮ ಆಗಿನ್ನೂ ಕೈಗೂಸು. ಅವನು ಹುಟ್ಟುವ ಹೊತ್ತಿಗೆ ನನ್ನ ತಂದೆಗೆ ೫೦ ವರ್ಷ, ನನ್ನ ತಾಯಿಗೆ ೪೦. ಆ ವಯಸ್ಸಿನಲ್ಲಿ ಮತ್ತೊಂದು ಹಡೆಯಬೇಕಾಗಿ ಬಂದುದು “ನಾಚಿಕಿ ಸಾವಾ”ಗಿತ್ತು ಎಂದು ನನ್ನವ್ವ ಒಮ್ಮೆ ಅಂದಂತಿತ್ತು. ಅದು ಸಂಕೋಚವೋ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಒಂಬತ್ತು ಮಕ್ಕಳನ್ನು ಹಡೆಯುವ ಸ್ಥಿತಿಯ ಕುರಿತ ಬೇಸರವೋ ಗೊತ್ತಿಲ್ಲ.
ಆಗ ನನ್ನ ತಂದೆಗೆ ಸಿಗುತ್ತಿದ್ದುದು ವಾರಕ್ಕೆ ೨೫ ಅಂದರೆ ತಿಂಗಳಿಗೆ ೧೦೦ ರೂಪಾಯಿಯ ವೇತನ. ಅದರಲ್ಲಿ ಮನೆ ಬಾಡಿಗೆ ಎಂದು ೧೦ ರೂಪಾಯಿ ಕಳೆದು ಉಳಿದ ೯೦ ರೂಪಾಯಿಯಲ್ಲಿ ಒಂಬತ್ತು ಜನರ ಬದುಕು ನಡೆಯಬೇಕಿತ್ತು. ಈಗ ನಾನು ಹೇಳುತ್ತಿರುವುದು ೧೯೬೨-೬೩ರ ಮಾತು. ಬಾಡಿಗೆಯ ಹತ್ತು ರೂಪಾಯಿ ಕೊಡುವಲ್ಲಿ ವಿಳಂಬವಾದರೆ ಮನೆಯ ಮಾಲಿಕ ಯಡಳ್ಳಿ ಬಸವಣ್ಣೆಪ್ಪನೆಂಬ ವೃದ್ಧ ಬಂದು ಮನೆಯಂಗಳದಲ್ಲಿ ನಿಂತು ಕೂಗಾಡುವದು ಶತಸ್ಸಿದ್ಧವಿತ್ತು. ಬ್ರಿಟಿಷರಂಥ ಸ್ವಚ್ಛ ಮೈಬಣ್ಣದ ಆ ಸ್ಫುರದ್ರೂಪಿ ಮುದುಕ ತಲೆಯ ಮೇಲೊಂದು ಹಳದಿ ರುಮಾಲು ಸುತ್ತಿ, ಬಿಳಿ ಅಂಗಿ,ಕೋಟು,ಧೋತರ ಉಟ್ಟು, ಕೈಲೊಂದು ಛತ್ರಿ ಹಿಡಿದು ಬರುತ್ತಿದ್ದ. ತಲೆಯ ಮೇಲಿನ ರುಮಾಲು ತೆಗೆದು ಮೈಸೂರು ಪೇಟ ತೊಡಿಸಿದರೆ ಸಾಕ್ಷಾತ್ ಮುದ್ದೇನಹಳ್ಳಿಯ ಮೋಕ್ಷಗುಂಡಂ ವಿಶ್ವೇಶ್ವರಯ್ಯ! ವಾಸ್ತವವಾಗಿ ಬದುಕು ಕಷ್ಟಸಾಧ್ಯವಾಗಿತ್ತು. ಪಡಸಾಲೆಯ ನೆಲದ ಮೇಲೆ ಜಮಖಾನ ಹಾಸಿ ಎಲ್ಲರೂ ಒಬ್ಬರ ಪಕ್ಕದಲ್ಲೊಬ್ಬರು ಮಲಗುತ್ತಿದ್ದೆವು.
ಆ ಮನೆಯಲ್ಲಿ ತುಂಬಿಕೊಳ್ಳುತ್ತಿದ್ದ ಹೊಗೆ ನಮ್ಮ ಅತಿ ದೊಡ್ಡ ಸಮಸ್ಯೆಯಾಗಿತ್ತು. ಚಿಕ್ಕ ಕಿಟಕಿಯೊಂದರ ಹೊರತು ಅದಕ್ಕೊಂದು ಔಟ್ ಲೆಟ್ ಅಂತ ಇರಲಿಲ್ಲ. ಅದು ಅಲ್ಲೇ ಸುತ್ತಿ ಮನೆಗೋಡೆಗಳು ಮಸಿಹಿಡಿದಿದ್ದವು. ನನ್ನವ್ವ ಪ್ರತಿನಿತ್ಯ ಅದನ್ನು ಶಪಿಸುತ್ತಿದ್ದಳು. ಮನೆಯಲ್ಲಿ ಕತ್ತಲೆ ಸದಾ ಡೇರೆ ಹಾಕಿರುತಿತ್ತು. ನನ್ನ ತಂದೆಯ ಸೋದರಮಾವಂದಿರಿಗೆ ಪೇಟೆಯ ಉಪಬೀದಿಯಲ್ಲಿ ಸ್ವಂತ ಮನೆಗಳಿದ್ದವು, ಕಮೀಶನ್ ಏಜನ್ಸಿ ಇತ್ತು, ಸ್ಥಿತಿವಂತಿಕೆ ಇತ್ತು. ಚನಬಸಪ್ಪ ಮತ್ತು ಅಪ್ಪಯ್ಯಪ್ಪ ಎಂಬ ಆ ಸೋದರಮಾವಂದಿರ ಪೈಕಿ ಹಿರಿಯವನಾದ ಚನಬಸಪ್ಪ-ಅದಾಗಲೇ ಹಣ್ಣು ಹಣ್ಣು ಮುದುಕನಾಗಿದ್ದವ-ಹೊರಕೋಣೆಯಲ್ಲಿ ಒಬ್ಬನೇ ಇಸ್ಪೀಟ್ ಎಲೆಗಳನ್ನು ಹರವಿಕೊಂಡು ಅದೇನೋ ಆಡುತ್ತ ಕುಳಿತಿರುತ್ತಿದ್ದ. ಯಲಿಗಾರ್ ಮನೆತನದ ಬಾಲಕನೊಬ್ಬ ತನ್ನ ತಾಯಿಯ ತವರೂರಾದ ಹುಣಸಿಕಟ್ಟೆಯಿಂದ ಬಂದು ಹಾಗೊಮ್ಮೆ ಭೆಟ್ಟಿಯಾದ ಸಂದರ್ಭದಲ್ಲಿ ಚನಬಸಪ್ಪ ಅವನಿಗೆ ಹೇಳಿದ್ದು, “ತಮ್ಮಾ ನಿನಗೆ ವಿದೇಶಯೋಗವಿದೆ ಎಂಬ ಮಾತು. ಅದು ಸತ್ಯವಾಯಿತು. ಮುಂದೆ ಕುಮಾರಸ್ವಾಮಿಗಳೆಂದು ಖ್ಯಾತರಾದ ಆ ಯೋಗಿ ದೇಶ ವಿದೇಶ ಸುತ್ತಿ, ಪೋಪ್ ಜಾನ್ ಪಾಲ್ ರನ್ನು ವ್ಯಾಟಿಕನ್ ಸಿಟಿಯಲ್ಲಿ ಕಂಡು ಇಷ್ಟಲಿಂಗವನ್ನು ಕೊಟ್ಟು ಬಂದರು. ಧಾರವಾಡದಲ್ಲಿ ತಪೋವನ ಸ್ಥಾಪಿಸಿದರು. ಇದನ್ನೆಲ್ಲ ನನ್ನ ತಂದೆ ಹೇಳುತ್ತಿದ್ದರು. ಆದರೆ ಗಣೇಶ ಚತುರ್ಥಿಯ ಸಂದರ್ಭದಲ್ಲಿ ತಲ್ಲೂರ ಶೆಟ್ಟರ ಮನೆಯಲ್ಲಿ ನಮಗೆ ನಿಯಮಿತವಾಗಿ ಆಮಂತ್ರಣವಿರುತ್ತಿದ್ದು ಆಗ ಊಟಕ್ಕೆ ನಮ್ಮ ತಂದೆ ನನ್ನನ್ನು ಕರೆದುಕೊಂಡು ಹೋಗುತ್ತಿದ್ದುದು ಬಿಟ್ಟರೆ ಇನ್ನುಳಿದಂತೆ ಸಹಾಯ ಯಾಚಿಸಿಯಾಗಲಿ ಸುಮ್ಮನೇ ಆಗಲಿ ಅವರಲ್ಲಿ ಹೋಗುತ್ತಿರಲಿಲ್ಲ.

ನಮ್ಮ ತಂದೆ ಬದುಕನ್ನು ಸ್ವೀಕರಿಸಿದ ರೀತಿಯೇ ಅದ್ಭುತವಾಗಿತ್ತು. ಬೈಲಹೊಂಗಲಕ್ಕೆ ಬಂದು ನೆಲೆಗೊಳ್ಳುವ ಮುನ್ನ ಗೋಕಾಕದಲ್ಲಿ ಇದ್ದಾಗಲೇ ನನ್ನ ತಂದೆ ಮತ್ತು ಅವರ ತಮ್ಮ ಮಹಾಲಿಂಗಪ್ಪ ಶೆಟ್ಟರ್ ಇಬ್ಬರೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರು. ರಾಷ್ಟ್ರೀಯವಾದ ನನ್ನ ತಂದೆಯ ಆದರ್ಶವಾಗಿತ್ತು. ಅನಿಶ್ಚಿತತೆ, ಸಂಸಾರದ ತೊತ್ತಳದುಳಿತಗಳು ಅದಕ್ಕೆ ತಡೆಯಾಗಲಿಲ್ಲ. ನನ್ನ ಜೊತೆ ಅವರು ಹಂಚಿಕೊಂಡ ತಮ್ಮ ಯರವಡಾ, ಹಿಂಡಲಗಾ ಜೇಲುಗಳಲ್ಲಿಯ ವಾಸದ ಅವಧಿಯ ನೆನಪುಗಳಲ್ಲಿ ಒಂದು ಘಟನೆ ನನಗೆ ನನ್ನ ತಂದೆಯ ನಿರ್ಧಾರದ ದಿಟ್ಟತನವನ್ನು ತೋರಿತ್ತು. ಒಮ್ಮೆ ಅವರು ಬ್ರಿಟಿಷ್ ಸರಕಾರದಿಂದ ಶಿಕ್ಷೆಗೊಳಗಾಗಿ ಜೇಲಿನಲ್ಲಿದ್ದಾಗ ನನ್ನ ತಾಯಿಗೆ ಅವಳ ತವರಿನಲ್ಲಿ ಹೆರಿಗೆಯಾಗಿ, ಆ ಸಂದರ್ಭದಲ್ಲಿ ನಮ್ಮ ತಂದೆಯವರನ್ನು ನೋಡಬೇಕೆನ್ನಿಸಿ ಪತ್ರ ಬರೆಸಿದ್ದರಂತೆ. ಜೇಲಿನ ಆಡಳಿತ ಅವರನ್ನು ಪೆರೋಲ್ ಮೇಲೆ ಬಿಡಲು ಸಿದ್ಧವೂ ಆಯಿತು.
ಆದರೆ ಅದಕ್ಕೊಂದು ಪೂರ್ವಶರತ್ತು ಇತ್ತು. ಸತ್ಯಾಗ್ರಹದಲ್ಲಿ ತಾನು ಪಾಲ್ಗೊಂಡಿದ್ದು ತಪ್ಪು ಎಂದು ನನ್ನ ತಂದೆ ಲಿಖಿತವಾಗಿ ಕ್ಷಮಾಪಣೆ ಕೋರಬೇಕಿತ್ತು. ನನ್ನ ತಂದೆ ಅದಕ್ಕೆ ಸಿದ್ಧರಾಗಲಿಲ್ಲ. ಅವರ ಮನದಲ್ಲಿದ್ದ ಆಲೋಚನೆಗಳು ಎರಡು- ಮೊದಲನೆಯದು ಆದರ್ಶದ ಮಾತು. ನನ್ನ ತಂದೆ ಸ್ವತ: ಗಾಂಧೀಜಿಯವರನ್ನು ಕಂಡು ಸತ್ಯಾಗ್ರಹದಲ್ಲಿ ಭಾಗವಹಿಸುವ ಇಚ್ಚೆಯನ್ನು ವ್ಯಕ್ತಗೊಳಿಸಿ ಧುಮುಕಿದ್ದ ಆಂದೋಲನವಾಗಿತ್ತದು. (ಗಾಂಧೀಜಿಯನ್ನು ಮುಖತ: ಕಂಡು ವೈಯಕ್ತಿಕ ಸತ್ಯಾಗ್ರಹದಲ್ಲಿ ಭಾಗವಹಿಸುವದಾಗಿ ಹೇಳಿ ಅವರ ಸಮ್ಮತಿ ಪಡೆದು ಬಂದದ್ದು ನನ್ನ ತಂದೆಯ ಮಟ್ಟಿಗೆ ತಮ್ಮ ಬದುಕಿನ ಅತ್ಯಂತ ಸ್ಮರಣಾರ್ಹ ಘಟನೆಯಾಗಿತ್ತು). ಎರಡನೆಯದು ಸರಳ ತರ್ಕದ ಮಾತು. ಹೇಗೂ ಕೂಸು ಬಾಣಂತಿ ಆರಾಮವಾಗಿದ್ದಾರೆ ಎಂದಿತ್ತು ಪತ್ರ. ಹಾಗಿದ್ದ ಮೇಲೆ ಹೋಗುವ ಅಗತ್ಯವೇನು?
ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ಚಿಂತನೆಯನ್ನು ವ್ಯಕ್ತಿತ್ವವನ್ನು ತೀವ್ರವಾಗಿ ಪ್ರಭಾವಿಸಿದ ವಿಚಾರಗಳು ತತ್ತ್ವಗಳು ಸ್ವಾತಂತ್ರ್ಯಾನಂತರ ನನ್ನ ತಂದೆಯ ಬದುಕಿನ ಆದರ್ಶಗಳಾದವು. ನನ್ನ ತಂದೆಯ ವ್ಯಕ್ತಿತ್ವಕ್ಕೊಂದು ಸರಳತೆ ಇತ್ತು, ಸಜ್ಜನಿಕೆ ಇತ್ತು. ಬಿಳಿಯ ಉದ್ದ ತೋಳಿನ ಶರ್ಟು,ಕೋಟು,ಧೋತರ ಹಾಗೂ ಗಾಂಧೀ ಟೋಪಿ ಇವು ಜೀವನದುದ್ದಕ್ಕೂ ಅವರ ಉಡುಗೆಗಳು. ಸಭ್ಯತೆ ಅವರ ವ್ಯಕ್ತಿತ್ವದ ಒಟ್ಟು ಸಾರ. ಯಾರೊಂದಿಗೂ ಅವರು ಕಲಹ ಮಾಡಿದ್ದಾಗಲಿ, ತಮಗೆ ಸಂಬಂಧವಿರದ ವಿಷಯಗಳಲ್ಲಿ ತಲೆ ಹಾಕಿದ್ದಾಗಲಿ, ಅವರಿವರ ಬಗ್ಗೆ ಸಲ್ಲದ ಮಾತಾಡಿದ್ದಾಗಲಿ ನಾನೆಂದೂ ನೋಡಲಿಲ್ಲ. ಯಾವ ವ್ಯಸನಗಳೂ ಇರಲಿಲ್ಲವಾಗಿ ಸ್ವಂತದ್ದೆನ್ನುವ ಖರ್ಚುಗಳೂ ಇರಲಿಲ್ಲ.

ನನ್ನ ತಂದೆ ಚಿಂತಾಕ್ರಾಂತರಾಗಿ ತಲೆ ಮೇಲೆ ಕೈಹೊತ್ತು ಕುಳಿತದ್ದಾಗಲೀ, ಕೈಲಾಗದವರಂತೆ ಸಿಡುಕಿದ್ದಾಗಲೀ, ಅಸಹನೆಯಿಂದ ವರ್ತಿಸಿದ್ದಾಗಲೀ ನಮಗೆ ಅನುಭವಕ್ಕೆ ಬರಲಿಲ್ಲ. ನಾನು ಈಗ ಯೋಚಿಸುವಂತೆ ನಾವಾಗ ಬದುಕಿದ್ದ ಪರಿಸರ ನಮ್ಮ ತಂದೆಯ ಸುಸಂಸ್ಕೃತ ವ್ಯಕ್ತಿತ್ವಕ್ಕಾಗಲೀ ನಮ್ಮ ಕುಟುಂಬದ ಹಿನ್ನೆಲೆಗಾಗಲಿ ಪ್ರಶಸ್ತವಾದುದಾಗಿರಲಿಲ್ಲ. ಬಸ್ ಸ್ಟ್ಯಾಂಡಿನ ಪಾರ್ಶ್ವದಲ್ಲಿ ಎರಡು ತೋಟಗಳ ನಡುವೆ ನೇರವಾಗಿ ಸಾಗುವ ಬೀದಿಯ ಕೊನೆಯೇ ನಮ್ಮ ಓಣಿಯಾಗಿತ್ತು. ಅದನ್ನು ತಾಸೇದಾರ ಓಣಿ ಎನ್ನುತ್ತಿದ್ದರು. ಅಲ್ಲಿಯ ಮನೆಗಳಲ್ಲಿ ಬಾಡಿಗೆಗೆ ಇದ್ದುದು ಬಹುಪಾಲು ಸಭ್ಯ ಜನರೇ. ನಮ್ಮ, ಒಬ್ಬ ಉಡುಪಿ ಹೊಟೆಲ್ ಮಾಲೀಕನ, ಕೆಎಸ್ಸಾರ್ಟಿಸಿಯ ಒಬ್ಬ ಡ್ರೈವರನ, ಮತ್ತೊಬ್ಬ ಕಂಡಕ್ಟರನ ಮನೆಗಳು, ಮತ್ತೆ ಕೆಲವು ಮುಸ್ಲಿಮರ ಮನೆಗಳು ಒಂದು ಸಾಲಿನಲ್ಲಿದ್ದವು. ಕಿರಿದಾದ ರಸ್ತೆಯಾಚೆ ನಮಗೆದುರಾಗಿದ್ದ ಗಿರೆಣ್ಣವರ ಎಂಬುವರ ಮನೆಯ ಬಾಗಿಲು ವಾಸ್ತವವಾಗಿ ಅವರ ಹಿತ್ತಿಲು ಬಾಗಿಲಾಗಿದ್ದು ಅಲ್ಲಿ ಪ್ರವೇಶಿಸಿ ತಲೆಬಾಗಿಲಿನಿಂದ ಹೊರಬಿದ್ದರೆ ಅದು ರಾಣಿ ಕಿತ್ತೂರು ಚೆನ್ನಮ್ಮನನ್ನು ಬಂಧಿಸಿಟ್ಟ ಸೆರೆಮನೆಯ ಶಿಥಿಲ ಅವಶೇಷಗಳಿಗೆ ಮುಖ ಮಾಡಿ ತೆರೆದುಕೊಳ್ಳುತ್ತಿತ್ತು. ಅದಕ್ಕೆ ಹೂಡೆ ಎನ್ನುತ್ತಿದ್ದರು.
ಹೀಗಾಗಿ ಅದು ಹೂಡೇದ ಓಣಿ. ಆ ಒಟ್ಟು ಪರಿಸರದ ಕೆಲ ಮನೆಗಳಲ್ಲಿ ಬಟ್ಟಿ ಸಾರಾಯಿ ತಯಾರಾಗುತ್ತಿತ್ತೆಂಬ ಕಾರಣಕ್ಕೆ ಆಗಾಗ ರೇಡ್ ಮಾಡುತ್ತಿದ್ದ ಪೋಲೀಸಿನವರು ಅಂಥವರ ಮನೆಗಳನ್ನಷ್ಟೇ ಅಲ್ಲದೇ ನಮ್ಮ ಮನೆಯನ್ನು ಒಳಗೊಂಡು ಸಾಲು ಮನೆಗಳನ್ನು ಪ್ರವೇಶಿಸಿ ಹಿತ್ತಲಿನ ತಿಪ್ಪೆಗಳನ್ನು ಕೋಲು ಚುಚ್ಚಿ ಪರೀಕ್ಷಿಸುತ್ತಿದ್ದರು. ಬಟ್ಟಿಸಾರಾಯಿಯನ್ನು ಕದ್ದು ಮುಚ್ಚಿ ಕುಡಿಯಲು ಗಿರಾಕಿಗಳು ಅಲ್ಲಿಗೆ ಬರುತ್ತಿದ್ದುದು, ಕೆಲವರು ತಮ್ಮ ಉಪಪತ್ನಿಯರನ್ನು ಅಲ್ಲಿಯ ಒಂದೆರಡು ಮನೆಗಳಲ್ಲಿ ನೆಲೆಗೊಳಿಸಿದ್ದು ಹೀಗೆ ಒಂದು ನಿಗೂಢತೆ ಅಲ್ಲಿತ್ತೇನೋ. ಹಾಗೆ ನಮ್ಮ ಮನೆಯ ಹಿತ್ತಿಲನ್ನು ಪರೀಕ್ಷಿಸುತ್ತಿದ್ದ ಪೋಲಿಸರು ಕೊನೆಗೆ ಅದು ಮೆಟಗುಡ್ ಅವರ ಮಿಲ್ಲಿನಲ್ಲಿ ಉದ್ಯೋಗಿಯಾಗಿದ್ದ ವೀರಪ್ಪ ಶೆಟ್ಟರೆಂಬ ಸಜ್ಜನನೊಬ್ಬನ ಮನೆಯೆಂದು ಮನದಟ್ಟಾಗಿ ಹಾಗೆ ಮಾಡುವದನ್ನು ನಿಲ್ಲಿಸಿದರು.
ನಾನು ಹೈಸ್ಕೂಲ್ ನಲ್ಲಿ ಓದುತ್ತಿದ್ದ ಹೊತ್ತಿಗೆ ಅವರ ವೇತನ ತಿಂಗಳಿಗೆ ೨೫೦ ರೂಪಾಯಿ ಆಗಿತ್ತು. ಎಲ್ಲ ಸಮಸ್ಯೆಗಳ ನಡುವೆ ನಮ್ಮ ತಂದೆ ಮಿಲ್ ನ ಲೆಕ್ಕ ಪತ್ರ ಬರೆಯುವ ತಮ್ಮ ಕೆಲಸ ನೋಡಿಕೊಂಡು ಹೋಗುತ್ತಿದ್ದರು. ಅವರದು ನಿಯಮಿತವಾದ ದಿನಚರಿ. ಮುಂಜಾನೆ ಸ್ನಾನ ತಿಂಡಿ ಮುಗಿಸಿ ೯ ಗಂಟೆಗೆ ಮಿಲ್ ಗೆ ಹೋಗುವದು, ಮಧ್ಯಾಹ್ನ ಬಂದು ಊಟ ಮಾಡಿ ಸ್ವಲ್ಪ ವಿಶ್ರಮಿಸಿ ಮಿಲ್ ಗೆ ಹೋಗಿ ರಾತ್ರಿ ೮ ಗಂಟೆಗೆ ಮನೆಗೆ ಬರುವದು. ಹಿತಮಿತವಾದ ಊಟ. ನನ್ನ ತಾಯಿ ಮಹಾ ದೈವಭೀರು. ನನ್ನ ತಂದೆ ಆಸ್ತಿಕರೇ ಆಗಿದ್ದರೂ ಪೂಜೆ-ಪುನಸ್ಕಾರ ಎಂದು ಸಮಯ ವ್ಯಯಿಸಿದ್ದು ನಾನು ನೋಡಿಲ್ಲ. ಅಮಾವಾಸ್ಯೆ- ಹಬ್ಬದಂಥ ಸಂದರ್ಭಗಳಲ್ಲಿ ತಾವೇ ಪೂಜೆ ಮಾಡುತ್ತಿದ್ದರಾದರೂ ತಾಸುಗಟ್ಟಲೆ ಪೂಜೆ ಮಾಡುತ್ತ ಕುಳಿತಿರುವದು ಅವರ ದೃಷ್ಟಿಯಲ್ಲಿ ಅವ್ಯಾವಹಾರಿಕವಾಗಿತ್ತು. ಉಲ್ಲಸಿತರಾಗಿದ್ದಾಗ “ಪರಮಪ್ರಭುವೇ ನಿಮ್ಮ ಸ್ಮರಣೆಯೊಳೆನ್ನ ಮನ ಸ್ಥಿರವಾಗಿ ನಿಂತು ಧ್ಯಾನಿಸುತಿರಲಿ, ಕರಿಗೆ ಕೇಸರಿ ವೈರಿಯೆಂತೆನ್ನ ದುರಿತಕ್ಕೆ ಹರ ನಿಮ್ಮ ನಾಮವು ಹಗೆಯಾಗಲಿ” ಎಂಬ ಪದ್ಯವನ್ನು ಹಾಡಿಕೊಳುತ್ತಿದ್ದರು.
ಏನೇ ತೊಂದರೆ ತಾಪತ್ರಯಗಳಿದ್ದರೂ ಕುಟುಂಬದ ಅಸ್ತಿತ್ವಕ್ಕೊಂದು ನೆಮ್ಮದಿ ಇದ್ದೇ ಇತ್ತು. ಅಪ್ಪನಿಗೆ ಕುಟುಂಬದ ಬಗ್ಗೆಯೂ ಗಮನ ಇರುತ್ತಿತ್ತು. ಆಯಾಯ ಸೀಜನ್ನಿನಲ್ಲಿ ಬರುವ ಹಣ್ಣುಗಳನ್ನು ಧೋತರದ ಉಡಿಯಲ್ಲಿ ಇಟ್ಟುಕೊಂಡು ತರುತ್ತಿದ್ದರು. ಕಾರ್ಯನಿಮಿತ್ತ ಹೊರ ಊರುಗಳಿಗೆ ಹೋದಾಗ ಕುಂದಾ, ಗೋಕಾಕ ಕರದಂಟು ಇತ್ಯಾದಿ ತರುತ್ತಿದ್ದರು. ಅಪ್ರಾಮಾಣಿಕತೆ ಎಂಬುದು ಅವರ ಚಿಂತನೆಯಲ್ಲೇ ಇರಲಿಲ್ಲ. ಸದಾ ಕ್ರಿಯಾಶೀಲರಾಗಿರುತ್ತಿದ್ದರು. ಓದುವದು, ನಿಯಮಿತವಾಗಿ ಅಣ್ಣನಿಗೆ, ಅಕ್ಕಂದಿರಿಗೆ, ಅಳಿಯಂದಿರಿಗೆ ಪತ್ರಗಳನ್ನು ಬರೆಯುವದು, ಉದ್ದನೆಯ ಕೋಲಿಗೆ ಕಟ್ಟಿದ ಪೊರಕೆಯಿಂದ ಮನೆಯ ಮೂಲೆ ಮೂಲೆಯ ಜೇಡನ ಬಲೆಗಳನ್ನು ನಾಶಗೊಳಿಸುವದು, ಬಲೆಯಲಿ ಬಿದ್ದ ಇಲಿಗಳನ್ನು ದೂರ ಬಿಟ್ಟುಬರಲು ಕೊಂಡೊಯ್ಯುವದು, ಮಂಚದ ಕಬ್ಬಿಣದ ಕಾಲು, ಕಟ್ಟಿಗೆಯ ಹಲಗೆಗಳನ್ನು ಬಿಸಿಲಿಗೆ ಇಟ್ಟು ತಿಗಣೆ -ಚಿಕ್ಕಾಡುಗಳನ್ನು ನಿವಾರಿಸುವದು, ಏನೂ ಕೆಲಸವಿಲ್ಲವೆಂದರೆ ಕೊನೆಗೆ ನಾಲ್ಕು ಗೋಣಿಚೀಲಗಳ ಹೊಲಿಗೆಯನ್ನು ಬಿಚ್ಚಿ ಅವುಗಳ ಅಂಚುಗಳನ್ನು ಸೇರಿಸಿ ಡಬ್ಬಣ ಹುರಿ ತೆಗೆದುಕೊಂಡು ಮತ್ತೆ ಹೊಲಿದು ಹಾಸಿಕೊಳ್ಳಲು ತಟ್ಟುಗಳನ್ನು ತಯಾರಿಸುವದು…, ಒಟ್ಟಿನಲ್ಲಿ ಸದಾ ಏನಾದರೂ ಮಾಡುತ್ತಿದ್ದರು. ರಾತ್ರಿ ಊಟವಾದ ಮೇಲೆ ಮಕ್ಕಳೊಂದಿಗೆ ಚೌಕಾಬಾರ ಆಟ ಹೂಡುತ್ತಿದ್ದರು.
ಬಾಲ್ಯದಲ್ಲಿ ನನ್ನ ಕಿಡಿಗೇಡಿತನ ಅತಿಯಾದುದಾಗಿತ್ತು. ನನ್ನ ಸಲುವಾಗಿ ನನ್ನವ್ವ ಹಲವು ಸಲ ಕಣ್ಣೀರಿಟ್ಟಳು. ನಾಲ್ಕಾರು ತಾಸು ನಾನು ಮನೆಗೆ ಬಾರದೇ ಹೋದರೆ ಕಳವಳ ಪಟ್ಟು ಸುತ್ತಲಿನ ಓಣಿ ಬೀದಿಗಳಲ್ಲಿ ಅವರಿವರನ್ನು ಕೇಳುತ್ತ ಹುಡುಕುತ್ತ ಹೋಗುತ್ತಿದ್ದಳು. ಅತಿಯಾದ ಕೋಪ ಬಂದಾಗ ಹೊಡೆಯುತ್ತಿದ್ದಳಾದರೂ ಅದರಿಂದ ಅವಳಿಗೇ ನೋವಾಗುತ್ತಿತ್ತು ಅಥವಾ ಮೇಲೇರಿಸಿದ ಬಳೆ ಹೊಡೆಯುವ ಭರದಲ್ಲಿ ಮುಂಗೈಗಿಳಿದು ಒಡೆದು ಅವಳ ಕೈ ರಕ್ತವೇ ಜಿನುಗುತ್ತಿತ್ತು. ನಾನು ನಗುತ್ತಿದ್ದೆ. ಅದು ಅವಳಿಗೆ ಇನ್ನಷ್ಟು ಕಿರಿಕಿರಿಯಾಗುತ್ತಿತ್ತು. ಸೋತು ಕೈಚೆಲ್ಲಿ ಕೊನೆಗೆ ಅವಳು “ಈವೊತ್ತ್ ಅವರ ಮಿಲ್ಲಿನಿಂದ ಮನೀಗಿ ಬರ್ಲಿ ನಿಂದ್ರ್, ನಿಂದೆಲ್ಲಾ ಹೇಳ್ತೇನ. ಇಕೇನ್ ಹೇಳ್ತಾಳ್ ಬಿಡ ಅಂತ ತಿಳ್ಕೊಂಡೀಯೇನ್ ನೀ ಎಲ್ಲ್ಯೋ,ಇವೊತ್ತ್ ನಿಂದೆಲ್ಲಾ ಹೇಳದಿದ್ದರ ನಮ್ಮಪ್ಪನ ಮಗಳs ಅಲ್ಲ ನಾ” ಎಂದೆಲ್ಲ ತಾನೇ ಆಣೆ-ಪ್ರಮಾಣ ಹಾಕಿಕೊಂಡು ತನ್ನ ನಿರ್ಧಾರದ ದೃಢತೆಯನ್ನು ಬಿಂಬಿಸಿ ಹೆದರಿಸುತ್ತಿದ್ದಳು.
ಹಾಗೆ ಅವಳು ನನ್ನ ತಂದೆಯ ಮುಂದೆ ಹೇಳಿದಾಗ ನನಗೆ ಉಗ್ರ ಶಿಕ್ಷೆಯಾಗುತ್ತಿತ್ತೆಂದು ಯಾರೂ ಭಾವಿಸಬೇಕಿಲ್ಲ. ಅವಳು ಹೇಳುವದನ್ನೆಲ್ಲಾ ಕೇಳಿಯಾದ ಮೇಲೆ ನಮ್ಮ ತಂದೆ “ಹಂಗೆಲ್ಲಾ ಮಾಡಬಾರದೋ,ಶಾಣ್ಯಾ ಆಗಬೇಕಪಾ” ಎನ್ನುತ್ತಿದ್ದರು ಅಷ್ಟೇ. ಅವರು ಮಕ್ಕಳನ್ನು ಹೊಡೆದದ್ದಾಗಲಿ “ಎಲಾ ಲಫಂಗಾ” ಎಂಬುದಕ್ಕಿಂತ ಉಗ್ರವಾಗಿ ಬೈದದ್ದಾಗಲಿ ನನಗೆ ಗೊತ್ತೇ ಇಲ್ಲ. ಎಸ್ಸೆಸ್ಸೆಲ್ಸಿಯಲ್ಲಿ ನಾನು ಫೇಲಾದೆ. ಗಣಿತದಲ್ಲಿ ಫೇಲಾಗುವೆನೆಂದುಕೊಂಡಿದ್ದೆ. ಆದರೆ ಸೈನ್ಸ್ ನಲ್ಲಿ ಫೇಲಾಗಿದ್ದೆ. ಹೀಗಾಗಿ ಸಮಾಧಾನವೇ ಆಗಿತ್ತು. ಮುಂದೆ ಅಕ್ಟೋಬರ್ ಪೂರಕ ಪರೀಕ್ಷೆಯ ಫಲಿತಾಂಶ ಹೊರಬರಲಿದ್ದ ದಿನ ಅಪ್ಪ ಹೇಳಿದರು: “ಪಾಸಾಗಲಿ ನಪಾಸಾಗಲಿ, ರಿಸಲ್ಟ್ ನೋಡಿಕೊಂಡ ಸೀದಾ ಮನಿಗೇ ಬಾ”. ಆ ಮೇಲೆ ನನ್ನ ಪ್ರಥಮ ಪಿಯುಸಿ ಫಲಿತಾಂಶ ಸೆಕೆಂಡ್ ಕ್ಲಾಸ್ ಆಗಿತ್ತು. ಹಾಗಂತ ನಮ್ಮ ತಂದೆಗೆ ಹೇಳಿದಾಗ “ಒಟ್ ಪಾಸಾತಿಲ್ಲೋ” ಎಂದಿದ್ದರವರು!
೧೯೭೫ರಲ್ಲಿ ಪದವಿ ವ್ಯಾಸಂಗಕ್ಕಾಗಿ ಧಾರವಾಡಕ್ಕೆ ಹೋಗುವದಾಗಿ ನಾನು ಹಟ ಹಿಡಿದೆ. ಅದು ನನ್ನ ತಂದೆಗೆ ಸಮಸ್ಯೆಯಾಯಿತು. ಆದರೆ ನನ್ನ ಹಟವೂ ದೃಢವಾದುದಾಗಿತ್ತು. ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಕನ್ನಡ ಇವುಗಳಲ್ಲೊಂದನ್ನು ಪ್ರಧಾನ ವಿಷಯವನ್ನಾಗಿ ಆಯ್ದುಕೊಂಡು ಪದವಿ ಅಭ್ಯಾಸ ಮಾಡುವ ಅವಕಾಶ ಬೈಲಹೊಂಗಲದ ಡಿಗ್ರಿ ಕಾಲೇಜಿನಲ್ಲೇ ಇತ್ತು. ಆದರೆ ನನಗೆ ಇತಿಹಾಸ ಓದಬೇಕಿತ್ತು. ಅದಕ್ಕೆ ವಿಶೇಷವಾಗಿ ನನ್ನ ತಂದೆಯೇ ಕಾರಣ. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದ ನನ್ನ ತಂದೆ ಆ ಕಾಲಘಟ್ಟದ ರಾಜಕೀಯ ವಿದ್ಯಮಾನಗಳಲ್ಲಿ ಆಳದ ಆಸಕ್ತಿಯನ್ನಿಟ್ಟುಕೊಂಡವರು. ನನಗೆ ದ್ವಿತೀಯ ಮಹಾಯುದ್ಧದ ಕುರಿತು ಹೇಳುತ್ತಿದ್ದರು. ಗಾಂಧಿ,ನೆಹರೂ,ಜಿನ್ನಾ,ಹಿಟ್ಲರ್,ಸ್ಟಾಲಿನ್,ಮಹಾಜನ್ ಆಯೋಗ,ಇಂದಿರಾ ಗಾಂಧಿ, ಮೊರಾರ್ಜಿ, ವೈ.ಬಿ.ಚವಾಣ್…!!
ತಂದೆಯಂತಿರದೇ ಸ್ನೇಹಿತನಂತಿದ್ದ ಅವರು ಇಂಥ ವಿಷಯಗಳ ಕುರಿತು ಆಗಾಗ ಮಾತನಾಡುತ್ತಿದ್ದರು. ನಾನು ಧಾರವಾಡಕ್ಕೆ ಹೋಗುವದು ನನ್ನ ತಂದೆಗೆ ಸಮ್ಮತವಿರಲಿಲ್ಲ. ಅದಕ್ಕೆ ಪ್ರಮುಖ ಕಾರಣ ಆರ್ಥಿಕವಾದುದಾಗಿತ್ತು. ಈ ನಡುವೆ ನನ್ನಣ್ಣ ಧಾರವಾಡ ಕೃಷಿ ಕಾಲೇಜಿನಲ್ಲಿ ಎಂ.ಎಸ್ಸಿ ಮುಗಿಸಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕನೆಂದು ನಿಯುಕ್ತನಾಗಿದ್ದರೂ ಆತನ ವಿವಾಹವಾಗಿದ್ದು ಮನೆ ಹೂಡಿದ್ದರಿಂದ ತನ್ನ ಕುಟುಂಬದ ಖರ್ಚು ವೆಚ್ಚಗಳಿಗೆ ಅವನ ವೇತನ ವಿನಿಯೋಗವಾಗಿ ಅವನಿಂದ ನಮಗೆ ವಿಶೇಷ ಧನಸಹಾಯವೇನೂ ಇರಲಿಲ್ಲ. ಈ ಸ್ಥಿತಿ ನನಗೂ ಗೊತ್ತಿತ್ತು. ಕೊನೆಗೆ ವಿವಾಹವಾಗಿ ಧಾರವಾಡದಲ್ಲಿದ್ದ ನನ್ನ ಕಿರಿಯ ಅಕ್ಕನ ಮನೆಯಲ್ಲಿದ್ದುಕೊಂಡು ನಾನು ಓದುವದೆಂದಾಯಿತು. ಪ್ರತಿ ತಿಂಗಳು ತಾವು ೫೦ ರೂಪಾಯಿ ಕಳಿಸುವದಾಗಿಯೂ ಅದರಲ್ಲಿ ೧೦ ರೂಪಾಯಿ ನಾನಿಟ್ಟುಕೊಂಡು ೪೦ ರೂಪಾಯಿಗಳನ್ನು ನನ್ನಕ್ಕನಿಗೆ ಕೊಡಬೇಕೆಂದೂ ಹೇಳಿ ನನ್ನ ತಂದೆ ಸಮ್ಮತಿಸಿದರು. ಕರ್ನಾಟಕ ಕಾಲೇಜಿಗೆ ಪ್ರವೇಶವೇನೋ ದೊರೆಯಿತು. ಆರಂಭಿಕ ಶುಲ್ಕ ಸಂದಾಯ ಮಾಡಲು ಹಣ ಬೇಕಿತ್ತು. ಊರಿಗೆ ಹೋದೆ. ನನ್ನ ತಾಯಿ ತನ್ನ ಕೊರಳಲ್ಲಿದ್ದ ಗುಂಡಿನ ಸರ ತೆಗೆದು ಹಿರಿಯಕ್ಕನ ಕೈಲಿಟ್ಟಳು. ಮಟಮಟ ಮಧ್ಯಾಹ್ನ ನಾನೂ ನನ್ನ ಹಿರಿಯಕ್ಕನೂ ಹೋಗಿ ಲೇವಾದೇವಿ ಮಾಡುತ್ತಿದ್ದ ವಕೀಲನೊಬ್ಬನ ಬಳಿ ಅದನ್ನು ಒತ್ತೆ ಇಟ್ಟು ಹಣ ತೆಗೆದುಕೊಂಡು ಬಂದೆವು. ನಾನು ಧಾರವಾಡಕ್ಕೆ ಬಂದು ಕಾಲೇಜಿಗೆ ಪ್ರವೇಶ ಪಡೆದೆ.
ನಾನು ಎಂ.ಎ ಮುಗಿಸಿ ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಕಾಲೇಜಿನಲ್ಲಿ ಒಂದು ವರ್ಷ ಅರೆಕಾಲಿಕ ಉಪನ್ಯಾಸಕನಾಗಿದ್ದು ಅದೂ ಬೇಸರವಾಗಿ ೧೯೮೧ ರಲ್ಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಓದಲೆಂದು ದೆಹಲಿಗೆ ಹೊರಟು ನಿಂತಾಗ ನನ್ನವ್ವ ತುಂಬ ಕಳವಳ ಪಟ್ಟಿದ್ದಳು. ಈ ಮಧ್ಯೆ ನನ್ನ ತಮ್ಮನೂ ಡೆಲ್ಲಿ ಸ್ಕೂಲ್ ಆಫ್ ಇಕನಾಮಿಕ್ಸ್ ನ ಭಾಗವಾಗಿದ್ದ ಸಮಾಜಶಾಸ್ತ್ರ ಅಧ್ಯಯನ ಕೇಂದ್ರದಲ್ಲಿ ಓದಲೆಂದು ದೆಹಲಿಗೆ ಬಂದು ನನ್ನೊಂದಿಗೇ ವಾಸಿಸತೊಡಗಿದ. ದಿಲ್ಲಿ ಎಂದರೆ ತನ್ನ ಇಬ್ಬರು ಗಂಡು ಮಕ್ಕಳು ಎಂದು ಸಮೀಕರಿಸಿದ್ದ ನನ್ನ ತಾಯಿ ೧೯೮೪ರಲ್ಲಿ ಇಂದಿರಾ ಗಾಂಧಿ ಹತ್ಯೆಯ ನಂತರ ದಿಲ್ಲಿಯಲ್ಲಿ ಭುಗಿಲೆದ್ದ ವ್ಯಾಪಕ ಹಿಂಸಾಚಾರದ ವರದಿಗಳನ್ನು ಕೇಳಿ ಬೆಂಕಿಯ ಮೇಲೆ ನಿಂತಂತೆ ಚಡಪಡಿಸಿದ್ದಳು. ಈ ಎಲ್ಲ ಬೆಳವಣಿಗೆಗಳ ನಡುವೆ ನನ್ನ ತಂದೆ ಸ್ಥಿತಪ್ರಜ್ಞ.
ಇದು ಶಬ್ದದ ಚೆಲುವಿಕೆಗಾಗಿ ಹೇಳುತ್ತಿರುವ ಮಾತಲ್ಲ. ಭಗವದ್ಗೀತೆಯನ್ನು ಆಳವಾಗಿ ಅಭ್ಯಸಿಸಿದವರಿದ್ದಾರೆ. ಅದರ ಕುರಿತು ಭಾಷಣ ಬಿಗಿಯುವವರಿದ್ದಾರೆ. ಆದರೆ ನನ್ನಪ್ಪ ಭಗವದ್ಗೀತೆಯನ್ನು ಬದುಕಿದರು. ಅದರ ಸಂದೇಶ ಅವರ ಜೀವನದ ತತ್ವವಾಗಿತ್ತು. ನಾಗರೀಲಿಪಿಯ ಸಂಸ್ಕೃತ ಪಠ್ಯದಲ್ಲಿ ನನ್ನ ತಂದೆ ಅದನ್ನು ತನ್ಮಯರಾಗಿ ಓದುತಿದ್ದರು. ಫಲಾಪೇಕ್ಷೆಗಳಿಲ್ಲದ ಕರ್ತವ್ಯವಾಗಿ ಮಾಡುವ ಕರ್ಮದ ಕುರಿತಾದ ಅದರ ಸಂದೇಶ ನನ್ನ ತಂದೆಯ ಅತ್ಯಂತ ಶ್ರದ್ಧೆಯ-ಪ್ರೀತಿಯ ಭಾಗವಾಗಿತ್ತು. ಟಿಳಕರ “ಗೀತಾರಹಸ್ಯ” ಎಂಬ ಮರಾಠಿ ಕೃತಿಯನ್ನೊಳಗೊಂಡು ಭಗವದ್ಗೀತೆಯನ್ನು ಅರ್ಥೈಸುವ ಹಲವು ಪುಸ್ತಕಗಳು ನಮ್ಮ ಮನೆಯಲ್ಲಿದ್ದವು. ತನ್ನೊಬ್ಬ ಮೊಮ್ಮಗಳಿಗೆ ನನ್ನ ತಂದೆ ಗೀತಾ ಎಂದು ಹೆಸರಿಟ್ಟರು.”ಅಲ್ಲಪಾ ಕೃಷ್ಣಾ, ಯುದ್ಧಾ ಮಾಡೂ ಅಂತೀ, ಎದುರಿಗಿ ನಿಂತವರರs ಯಾರು? ನನಗ ವಿದ್ಯಾ ಕಲಿಸಿದ ಗುರು,ನನ್ ಅಪ್ಪಗ ಒಡಹುಟ್ಟಿದವನ ಮಕ್ಕಳು,..ಇಂಥಾ ಯುದ್ಧ ಪಾಪ ಅಲ್ಲೇನೂ?” ಅಂತ ಅರ್ಜುನ ಕೇಳಿದಾಗ ಕೃಷ್ಣ ಹೇಳ್ತಾನ, “ಇದು ಕರ್ತವ್ಯದ ಪ್ರಶ್ನೆ, ನೀ ಈಗ ಸ್ಥಿತಪ್ರಜ್ಞ ಆಗಬೇಕು.””ಹಂಗಾರ ಸ್ಥಿತಪ್ರಜ್ಞ ಅಂದರ ಯಾರು? ಅವನ ಲಕ್ಷಣ ಏನು?” ಅಂತ ಅರ್ಜುನ ಕೇಳಿದಾಗ ಕೃಷ್ಣ ಹೇಳತಾನ,”ಸುಖೇದು:ಖೇ ಸಮೇಕೃತ್ವಾ ಲಾಭಾಲಾಭೌ ಜಯಾಜಯೌ…” ಹೀಗೇ ಸಾಗುತ್ತಿತ್ತು ನನ್ನ ತಂದೆಯ ಮಾತು. ನನ್ನನ್ನು ಮುಂದೆ ಕೂಡ್ರಿಸಿಕೊಂಡು ಇದನ್ನೆಲ್ಲ ಎಷ್ಟು ಸಲ ಹೇಳಿದರೂ ನನ್ನ ತಂದೆಗೆ ಬೇಸರವಿರಲಿಲ್ಲ. ಕೇಳಿ ಕೇಳಿ ನನಗೇ ಬಾಯಿಪಾಠವಾಗಿ ಹೋಗಿತ್ತು.

ನನ್ನಪ್ಪ ಎಂಥ ಸ್ಥಿತಪ್ರಜ್ಞನೆಂಬುದನ್ನು ಕಾಣುವ ಸಂದರ್ಭವೂ ಬಂದಿತು. ೧೯೭೯ರ ಮೇ ತಿಂಗಳಾಂತ್ಯದ ಒಂದು ದಿನ ನನ್ನ ಗೆಳೆಯ ರವಿ ಬೆಳಗೆರೆಯ ಮದುವೆಗೆಂದು ಬಳ್ಳಾರಿಗೆ ಹೋಗಲು ನಾನು ಸಿದ್ಧನಾಗುತ್ತಿದ್ದಾಗ ಧಾವಿಸಿ ಬಂದ ನನ್ನ ಸೋದರಳಿಯ ಒಂದು ದಾರುಣ ವಾರ್ತೆ ತಂದಿದ್ದ. ಈ ಮಧ್ಯೆ ಬೆಂಗಳೂರಿನಿಂದ ಧಾರವಾಡದ ಕೃಷಿ ಕಾಲೇಜಿಗೆ ಅಧ್ಯಾಪಕನಾಗಿ ಬಂದು ಸಾರಸ್ವತಪುರದಲ್ಲಿ ತನ್ನ ಹೆಂಡತಿಯ ತವರುಮನೆಯ ಔಟ್ ಹೌಸ್ ನಲ್ಲಿ ನೆಲೆಸಿದ್ದ ನನ್ನ ಅಣ್ಣ ತನ್ನ ಅಧ್ಯಯನ ವಿಭಾಗದಲ್ಲಿ ತಾನು ಅನುಭವಿಸುತ್ತಿದ್ದ ಉಪೇಕ್ಷೆ ಮತ್ತು ತಾರತಮ್ಯಗಳಿಂದ ನೊಂದು ಅಂತರ್ಮುಖಿಯಾಗಿ ಕೊನೆಗೆ ಆತ್ಮಹತ್ಯೆಯ ನಿರ್ಧಾರ ಕೈಗೊಂಡು ಮರಣವನ್ನಪ್ಪಿದ್ದ. ಅದು ನಮಗೆ ಅತ್ಯಂತ ಅನಿರೀಕ್ಷಿತವಾದ ಘಟನೆ. ರಾತ್ರಿ ಎಂಟು ಗಂಟೆಯ ಹೊತ್ತಿಗೆ ಸೈಕಲ್ಲೇರಿ ನಾನು ಮರಣೋತ್ತರ ಶವಪರೀಕ್ಷೆ ನಡೆಯುತ್ತಿದ್ದ ಸಿವಿಲ್ ಆಸ್ಪತ್ರೆಗೆ ಹೋಗುವಾಗ ಮಾರ್ಗಮಧ್ಯದಲ್ಲೇ APMC ಹತ್ತಿರ ಒಬ್ಬಂಟಿಯಾಗಿ ಬರುತ್ತಿದ್ದ ನನ್ನಪ್ಪ ಸಿಕ್ಕರು. ನನಗಾಗಿದ್ದ ಶಾಕ್ ನನ್ನ ತಂದೆಯ ಮುಖಭಾವದಲ್ಲೂ ಇತ್ತೆ? ಗೊತ್ತಾಗಲಿಲ್ಲ.”ದವಾಖಾನ್ಯಾಗ ಅದೆಲ್ಲಾ ಮುಗೀಬೇಕಾದ್ರ ತಡಾ ಆಗ್ತೈತಿ. ನೀ ಒಂದ್ ಸ್ವಲ್ಪ ಏನರs ತಿಂದ ಚಾ ಕುಡೀವಂತೀ ನಡೀ” ಎಂದರು. ನನ್ನ ಪ್ರಶ್ನೆಗಳಿಗೆ ಚುಟುಕಾಗಿ ಉತ್ತರಿಸಿದರು.
ಒಂದೆಡೆ ಸ್ವಲ್ಪ ಹೊತ್ತು ನಿಂತು ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತ ಹೇಳಿದರು: “ಯಾವಾಗ ಬಸವ ಹಿಂಗಿಂಗ್ ಮಾಡಿಕೊಂಡಾನಂತ ಅವರ ಮಾವನ ಟೆಲಿಗ್ರಾಂ ಬಂದು ನನಗ ವಿಷಯ ತಿಳೀತೂ ಆವಾಗs ನಾ ಬಸವನ್ನ ಮರತ ಬಿಟ್ನಿ”. ಮೂವರು ಹೆಣ್ಣುಮಕ್ಕಳ ನಂತರ ಹುಟ್ಟಿದ ತಮ್ಮ ಪ್ರೀತಿಯ ಪುತ್ರ, ಕುಟುಂಬದ ಹೆಮ್ಮೆಯ ಸದಸ್ಯ, ಯಾರ ಅಭ್ಯುದಯಕ್ಕಾಗಿ ಕುಟುಂಬದ ಎಲ್ಲರೂ ಹತ್ತಾರು ವರ್ಷ ಶ್ರಮಿಸಿದ್ದೆವೋ ಆ ಜೀವ ಹೀಗೆ ತನ್ನನ್ನು ಕೊನೆಗೊಳಿಸಿಕೊಂಡ ಬಗ್ಗೆ ನನ್ನ ತಂದೆಗೆ ದು:ಖ ಬೇಸರ ಇತ್ತೆ? ಇರಲಿಲ್ಲವೇ? ಇದಾದ ಕೆಲ ದಿನಗಳ ನಂತರ ಬೈಲಹೊಂಗಲದ ನಮ್ಮ ಮನೆಯಲ್ಲಿ ಹಿತ್ತಿಲ ಕಡೆಯಿಂದ ನನ್ನ ತಂದೆಯನ್ನು ರಟ್ಟೆ ಹಿಡಿದು ನಡೆಸಿಕೊಂಡು ಬಂದ ನಮ್ಮ ಹಿರಿಯಕ್ಕ ನಡುಮನೆಯಲ್ಲಿದ್ದ ನನಗೆ ಹೇಳಿದಳು, “ಬಚ್ಚಲ ಕಟ್ಟೀ ಮ್ಯಾಲ ಕುಂತ ಅಪ್ಪಾ ಅಳಾಕ್ಹತ್ತಿದ್ದ.” ಬಹಳ ಹೊತ್ತಿನ ನಂತರ ಅಪ್ಪ ನನಗೆ ವಿವರಣೆ ಕೊಡುವ ರೀತಿಯಲ್ಲಿ ಹೇಳಿದರು:”ಏನಿಲ್ಲ, ಆ ರೈಲಿನ ಗಾಲಿ ಬಸವನ ಶರೀರಾ ಜಗ್ಗಿಕೊಂಡ್ ಹಳೀಗುಂಟ ಓಡೂವಾಗ ಆ ಶರೀರಕ್ಕ ಎಷ್ಟ ಹಿಂಸಾ ಆಗಿದ್ದೀತು ಅಂತ ವಿಚಾರ ಬಂದು ಮನಸೀಗಿ ದು:ಖಾತು”.
ಇಂಥ ನನ್ನ ತಂದೆ ಎಂಬತ್ತು ವರ್ಷ ವಯಸ್ಸಾಗುವ ವರೆಗೆ ಓಡಾಡಿಕೊಂಡೇ ಇದ್ದರು. ಆಮೇಲೆ ಕೀಲು ನೋವಿನಿಂದ ಮನೆಯಲ್ಲಿಯೇ ಇರುವ ಸ್ಥಿತಿ ಬಂತು. ಮೂತ್ರವಿಸರ್ಜನೆಯ ತೊಂದರೆ ಉಂಟಾದಾಗ ಎರಡು ಸಲ ಧಾರವಾಡದ ಡಾ.ರಾಮನಗೌಡರ್ ನರ್ಸಿಂಗ್ ಹೋಮ್ ಗೆ ಎಡ್ಮಿಟ್ ಮಾಡಿದೆವು. ವೈದ್ಯರ ಸೂಚನೆಯ ಮೇರೆಗೆ ಬೆಳಗಾವಿಯಿಂದ ಡಾ. ಅಚರೇಕರ್ ಎಂಬುವವರನ್ನು ಕರೆದುಕೊಂಡು ಬಂದೆವಾದರೂ ನನ್ನ ತಂದೆಯಲ್ಲಿ ಪಾರ್ಶ್ವವಾಯುವಿನ ಸೂಕ್ಷ್ಮ ಸೂಚನೆಯನ್ನು ಗುರುತಿಸಿದ ವೈದ್ಯರು ಶಸ್ತ್ರಚಿಕಿತ್ಸೆಗೆ ಅವರ ದೇಹಸ್ಥಿತಿ ಪೂರಕವಾಗಿಲ್ಲವೆಂದು ತಿಳಿಸಿ ಕೆಥಟರೈಝೇಶನ್ ವ್ಯವಸ್ಥೆ ಮಾಡಿದರು. ಆ ವ್ಯವಸ್ಥೆಯಲ್ಲಿ ಇನ್ಫೆಕ್ಶನ್ ಆಗಿ ಜ್ವರ ಬರುವ ಸಾಧ್ಯತೆಗಳಿರುತ್ತಿದ್ದುದರಿಂದ ತಿಂಗಳಿಗೊಮ್ಮೆ ಬೈಲಹೊಂಗಲಕ್ಕೆ ಹೋಗಿ ಅಲ್ಲಿಯ ವೈದ್ಯರ ನೆರವಿನಿಂದ ಕೆಥೆಟರ್ ಬದಲಿಸಿ ಬರುತ್ತಿದ್ದೆವು. ಆಮೇಲಾಮೇಲೆ ಪೂರ್ತಿಯಾಗಿ ಹಾಸಿಗೆ ಹಿಡಿದ ತಂದೆಗೆ ಬೆಡ್ ಸೋರ್ಸ್ ಆಗಿ ತಿಂಗಳೊಪ್ಪತ್ತು ತುಂಬ ಯಾತನೆ ಅನುಭವಿಸಿ ಕೊನೆಗೆ ೮ ಜೂನ್ ೧೯೯೫ರಲ್ಲಿ ನಿದ್ರೆಯಲ್ಲಿದ್ದಾಗಲೇ ಕೊನೆಯುಸಿರೆಳೆದರು.
ನಮ್ಮ ತಂದೆ ಇಂದು ನಮ್ಮೊಂದಿಗೆ ಇಲ್ಲ, ಆದರೆ ಅವರ ನೆನಪು ಸದಾ ಜೀವಂತವಾಗಿ ನನ್ನೊಳಗೆ ಇದ್ದೇ ಇವೆ.

‍ಲೇಖಕರು avadhi

19 June, 2013

4 Comments

  1. deepaG

    ಅಂಕಲ್ ಇಂಥ ಶ್ರೇಷ್ಟ ಶ್ರಮಿಕ ನಿಷ್ಟಾವಂತ ತಂದೆಗೆ ವರುಷದಲ್ಲೊಂದು ದಿನ ಫಾದರ್ಸ್ ಡೇ ಮಾಡಿ ಮುಗಿಸುತ್ಟೇವೆನ್ನುವುದು ನಮ್ಮ ಹುಚ್ಚುತನದ ಪರಮಾವಧಿ ತಂದೆಯ ದೇಹದ ಅವರ ಗುಣದ ಒಂದು ಭಾಗವೇ ಆಗಿರುವ ಮಕ್ಕಳಿಗೆ ಪ್ರತಿ ದಿನವೂ ತನ್ನ ತಂದೆ ಕೊಟ್ಟ ಪ್ರೀತಿಯ ದಿನ ನಮ್ಮ ಪ್ರತಿದಿನದಲ್ಲೂ ಅವರ ಸ್ಮರಣೆಗೆ ಒಂದು ಬಾಗ ಮೀಸಲು.. ಅಜ್ಜನ(ನಿಮ್ಮ ತಂದೆ ನನಗೆ ಅಜ್ಜ ಅಲ್ವಾ) ಆದರ್ಶ,ಕ್ರಿಯಾಶೀಲತೆ, ಸ್ತಿತಪ್ರಜ್ಞೆ ಎಂತಾವರಿಗಾದರೂ ಆದರ್ಶಪ್ರಾಯ. ಧಾರ್ಮಿಕತೆಯನ್ನ ಹೇಳದೆ ಅದರಂತೆ ಬದುಕಿರುವುದನ್ನ ಓದುತ್ತಾ ಹೋದರೆ ನನಗೆ ಅವರನ್ನು ಹೋಲಿಸಲು ಯಾವ ವ್ಯಕ್ತಿಯು ಸಿಗುತ್ತಿಲ್ಲ ಅಜ್ಜನೇ ಒಂದು ಪರಿಪೂರ್ಣ ವ್ಯಕ್ತಿತ್ವ. ಇಂಥ ವ್ಯಕ್ತಿತ್ವದ ಬಗ್ಗೆ ಓದಲು ಅವಕಾಶ ಮಾಡಿ ಕೊಟ್ಟ ನೆಪಮಾತ್ರದ ಫಾದರ್ಸ್ ಡೇ ಗೆ ದನ್ಯವಾದಗಳು ಮತ್ತು ನಿಮಗೂ…

  2. Srinidhi Rao

    ಓದಿ ಕಣ್ಣೆಲ್ಲಾ ಒದ್ದೆ ಒದ್ದೆ. ಇಂತಹ ವ್ಯಕ್ತಿತ್ವದ ಬಗ್ಗೆ ಪರಿಚಯ ಮಾಡಿ ಕೊಟ್ಟದ್ದಕ್ಕಾಗಿ ವಂದನೆಗಳು .

  3. swathigowda

    loved it

  4. Sripathi manjanabailu

    ಅಪ್ಪನ ದಿನ, ಅಮ್ಮನ ದಿನ ಇಂತಹ ದಿನಾಚರಣೆಗಳು ಜಾಗತೀಕರಣದ ಕಪಟ ಆರ್ಥಿಕ ಸುಬದ್ರತೆಯ ಸೋಗಿನಾಟಗಳು. ಸಂಬಂಧವೆಂಬ ರಾಸಾಯನಿಕ ಪ್ರಕ್ರಿಯೆಗಳಿಲ್ಲದ ರೋಬೋಟ್ ಸಂಬಂಧಗಳು. ಹೀಗಾಗಿ ನಾವು ಅವರಿಂದ ಪಡೆದುದನ್ನು, ನಮ್ಮ ಮಕ್ಕಳಿಗೆ ‘ಅಂತೆ’ ಕೊಡಲಾರೆವು. ಇದು ನಾಡ ಮನಸುಗಳ ಜಾಗತೀಕರಣ. ಏನೇ ಇರಲಿ ಲೇಖನ ತುಂಬಾ ಚೆನ್ನಾಗಿದೆ .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading