ಜೋಗಿ ಬರೆದ ಅರಣ್ಯ ಪರ್ವ

ಹಬ್ಬಿದಾ ಮಲೆ ಮಧ್ಯದೊಳಗೆ…..

ಜೋಗಿ

ಸಂಜೆಯಾಗುತ್ತಿತ್ತು. ಕೊಳದ ನೀರು ಕಪ್ಪಾಗುತ್ತಾ ಹೋಗುತ್ತಿತ್ತು. ನಾವು ದಡದಲ್ಲಿ ಕೂತಿದ್ದೆವು. ಕೊಳಕ್ಕೆ ಬಾಗಿಕೊಂಡಿದ್ದ ಬಿದಿರ ಮೆಳೆಗಳಲ್ಲಿ ಕುಳಿತಿದ್ದ ಕೆಂಪುಕೊಕ್ಕಿನ ಹಕ್ಕಿಗಳು ಮಾತು ನಿಲ್ಲಿಸುತ್ತಿದ್ದಂತೆ ಅವರು ಮಾತಾಡಿದರು:

ನೋಯಿಸುವುದು ತುಂಬ ಸುಲಭ. ನೋಯುವುದು ಅದಕ್ಕಿಂತ ಸುಲಭ. ನೋಯಿಸಿದವನದು ಅಪರಾಧವಾ ನೊಂದವನದ್ದಾ ಅಂತ ಇನ್ನೂ ಗೊತ್ತಾಗಿಲ್ಲ ನನಗೆ. ನೀನು ನಿನ್ನ ಮೌನದಿಂದ, ನಿನ್ನ ಇರವಿನಿಂದ, ನಿನ್ನ ನಗುವಿನಿಂದ, ನಿನ್ನ ಸಂತೋಷದಿಂದ, ನಿನ್ನ ನೆಮ್ಮದಿಯಿಂದ ಕೂಡ ನೋಯಿಸಬಲ್ಲೆ. ನೋಯಿಸುತ್ತಿ ಅನ್ನುವುದು ನಿನಗೇ ಗೊತ್ತಿರುವುದಿಲ್ಲ. ಹೀಗಾಗಿ ನೋವು ಎಂಬ ಸಂಗತಿಯೇ ವಿಚಿತ್ರ. ಅದಕ್ಕೆ ಈ ಜಗತ್ತಿನಲ್ಲಿ ಅರ್ಥವಿಲ್ಲ. ಹಸಿದು ಕೂತ ಮುದಿಸಿಂಹಕ್ಕೆ ದೂರದಲ್ಲಿ ಮೇಯುತ್ತಿರುವ ಜಿಂಕೆಗಳ ಹಿಂಡು ಕಣ್ಣಿಗೆ ಬಿದ್ದರೆ ನೋವಾಗಬಹುದು. ತಾನು ಜಿಗಿದು ಅದನ್ನು ಹಿಡಿಯಲಾರೆನೇ ಅನ್ನುವ ನೋವು ಅದು. ಹಸಿದ ಸಿಂಹ ನೀನಾದರೆ ಸಿಂಹದ ನೋವು ನಿನ್ನದಾಗುತ್ತದೆ. ಬಿಸಿಲಲ್ಲಿ ಮೇಯುತ್ತಿರುವ ಜಿಂಕೆ ನೀನಾದರೆ ಜಿಂಕೆಯ ಸಂತೋಷ ನಿನ್ನದಾಗುತ್ತದೆ. ಅದೇ ಕ್ಷಣ ಸಿಂಹ ಇದ್ದಬದ್ದ ಶಕ್ತಿಯನ್ನೆಲ್ಲ ಮೈಗೂಡಿಸಿಕೊಂಡು ಜಿಂಕೆಗಳತ್ತ ಧಾವಿಸಿತು ಅಂತಿಟ್ಟುಕೋ ಆಗ ಸಿಂಹ ಶೌರ್ಯ, ಜಿಂಕೆಯ ಆತಂಕ ನಿನ್ನದಾಗುತ್ತದೆ. ನಿನ್ನೊಳಗೆ ಏನೂ ಇಲ್ಲ. ಎಲ್ಲವೂ ಹೊರಗಿನಿಂದ ಎರವಲು ತಂದದ್ದೇ. ಹೀಗೆ ಸಾಲ ತಂದ ಭಾವನೆಗಳು ನಿನ್ನನ್ನು ಆಟ ಆಡಿಸುತ್ತವೆ. ನಿನ್ನ ದುಃಖಕ್ಕೆ ಕಾರಣ ಆಗುತ್ತವೆ. ಒಳಗೆ ಹುಟ್ಟುವಂಥದ್ದು ಸಂತೋಷ. ಹೊರಗಿನಿಂದ ಬರುವಂಥದ್ದು ದುಃಖ.

ನಾವು ಅರ್ಥವಾದಂತೆ ನಟಿಸಿದೆವು. ಅವರಿಗೂ ಅದು ಗೊತ್ತಿತ್ತು. ಅದರಿಂದ ಅವರಿಗೆ ನೋವೇನೂ ಆದಂತಿರಲಿಲ್ಲ. ಅವರು ಮತ್ತೇನೋ ಹೇಳಬೇಕು ಅನ್ನುವಷ್ಟರಲ್ಲಿ ಮತ್ತೆ ಹಕ್ಕಿಗಳು ಮಾತಾಡಲಾರಂಭಿಸಿದವು. ಸಂಜೆಯ ಮಾತು. ಆ ಮಾತನ್ನು ಕತ್ತರಿಸಬಾರದು ಅಂತ ಅವರು ತುಟಿಯ ಮೇಲೆ ಬೆರಳಿಟ್ಟು ನಮ್ಮನ್ನು ಸುಮ್ಮನಿರಿಸಿ, ತಾವೂ ಸುಮ್ಮನಾದರು.

ಸೂರ್ಯ ಏದುಸಿರುಬಿಟ್ಟುಕೊಂಡು ಬೆಟ್ಟ ಹತ್ತುತ್ತಿದ್ದ. ಬಿದಿರು ಮೆಳೆಗಳು ಮೈ ಮುರಿಯುತ್ತಾ ನೆಟಿಕೆ ತೆಗೆಯುತ್ತಿದ್ದವು. ಬಿದಿರಿಗೆ ತೂತು ಕೊರೆಯಲಾರದ ಮರಕುಟುಕನ ಬಗ್ಗೆ ಅವರು ಹೇಳಿದರು. ಬಿದಿರನ್ನು ಯಾವ ಪ್ರಾಣಿಯೂ ಏನೂ ಮಾಡಲಾರದು. ಅದಕ್ಕೆ ಗೆದ್ದಲು ಹತ್ತುವುದಿಲ್ಲ, ಹಂದಿಗಳು ಬಿದಿರ ಮೆಳೆಯನ್ನು ಮುರಿದು ತಿನ್ನುವುದಿಲ್ಲ. ಆನೆಗಳು ಬಿದಿರ ಎಲೆಗಳನ್ನಷ್ಟೇ ಮೇಯುತ್ತವೆ. ಮರಕುಟುಕ ಬಿದಿರಿಗೆ ತೂತು ಕೊರೆಯಲಾರದು. ಚಂಡಮಾರುತ ಕೂಡ ಬಿದಿರ ಮೆಳೆಯನ್ನು ಬುಡಮೇಲು ಮಾಡಲಾರದು. ಯಾಕೆಂದರೆ ಬಿದಿರು ಇಡೀ ಕಾಡಿಗೆ ಅನ್ನ ಕೊಡುತ್ತದೆ. ಹಕ್ಕಿಗಳು, ಇಲಿಗಳು, ಅಳಿಲುಗಳು ಬದುಕುವುದಕ್ಕೆ ಬಿದಿರಕ್ಕಿಯೇ ಬೇಕು. ಒಂದು ಸಂವತ್ಸರ ಚಕ್ರ ಕಳೆಯುತ್ತಿದ್ದಂತೆ ಬಿದಿರು ಹೂ ಬಿಡುತ್ತದೆ. ಕೊನೆಯ ಸಂವತ್ಸರದ ಹೆಸರು ಕ್ಷಯ. ಆ ಹೊತ್ತಿಗೆ ಎಲ್ಲವೂ ನಾಶವಾಗಿ, ಎಲ್ಲೆಡೆ ಹಸಿವಿಗಾಗಿ ಹಾಹಾಕಾರ ಶುರುವಾಗಿರುತ್ತದೆ. ಅಂಥ ಹೊತ್ತಲ್ಲಿ ಬಿದಿರು ಹೂಬಿಟ್ಟು, ಅಕ್ಕಿ ನೆಲಕ್ಕೆ ಉದುರುತ್ತದೆ. ಅದನ್ನು ತಿನ್ನುತ್ತ ಸಸ್ಯಾಹಾರಿ ಪ್ರಾಣಿಗಳು ಬದುಕುತ್ತವೆ. ಮರಿ ಹಾಕುತ್ತವೆ, ಸಂಸಾರ ಬೆಳೆಸುತ್ತವೆ. ಅವುಗಳನ್ನು ತಿಂದು ಮಾಂಸಾಹಾರಿ ಪ್ರಾಣಿಗಳು ಬದುಕುತ್ತವೆ. ಹೀಗೊಂದು ಚಕ್ರ ಪೂರ್ತಿಯಾಗುತ್ತದೆ.

ಕಾಡನ್ನು ಪೂರ್ತಿ ಬಲ್ಲವರಂತೆ ಅವರು ಕಾಡಿನ ಒಳಗೊಳಗೆ ನಮ್ಮನ್ನು ಕರಕೊಂಡು ಹೋದರು. ಕತ್ತಲು ಮುತ್ತಿಕೊಂಡು ನಡೆಯುವ ದಾರಿ ಕೂಡ ಕಾಣಿಸುತ್ತಿರಲಿಲ್ಲ. ನಿಮ್ಮ ಕಾಲಲ್ಲಿರುವ ಚಪ್ಪಲಿ ಬಿಚ್ಚಿಡಿ. ಬರಿಗಾಲಲ್ಲಿ ನಡೆಯಿರಿ, ನಿಮಗೆ ದಾರಿ ಸಿಗುತ್ತದೆ. ಕಾಡಿನಲ್ಲಿ ದಾರಿತಪ್ಪಿದವನಿಗೆ ಕಣ್ಣಿದ್ದು ಪ್ರಯೋಜನ ಇಲ್ಲ. ಅಲ್ಲಿ ಕಾಲೇ ಕಣ್ಣು. ನಡೆದಾಡುವ ಹಾದಿ ಯಾವುದು, ನಡೆಯದ ಜಾರಿ ಯಾವುದು ಅನ್ನೋದು ಕಾಲಿಗಷ್ಟೇ ಗೊತ್ತಾಗುತ್ತದೆ ಅಂದರು. ನಾವು ಚಪ್ಪಲಿ ಬಿಚ್ಚಿ ಕೈಯಲ್ಲಿ ಹಿಡಕೊಂಡೆವು. ಅದನ್ನು ಅಲ್ಲೆಲ್ಲಾದರೂ ಎಸೀರಿ. ಅದರಿಂದ ನಿಮಗೆ ಉಪಯೋಗ ಇಲ್ಲ. ನಿಮ್ಮ ಎಲ್ಲ ಒತ್ತಡಗಳಿಗೂ ನೀವು ಹಾಕುವ ಪಾದರಕ್ಷೆಗಳೇ ಕಾರಣ. ಬರಿಗಾಲಲ್ಲಿ ದಿನಕ್ಕೆ ಒಂದೋ ಎರಡೋ ಗಂಟೆ ನಡೆದು ನೋಡಿ. ನಿಮಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಮಾನಸಿಕ ಒತ್ತಡ ಬಂದರೆ ಕೇಳಿ. ಮನುಷ್ಯ ಚಪ್ಪಲಿ ಹಾಕುವುದಕ್ಕೆ ಶುರು ಮಾಡಿದಂದಿನಿಂದ ಅವನ ಮತ್ತು ನೆಲದ ಸಂಪರ್ಕ ತಪ್ಪಿಹೋಯಿತು. ನೆಲವೂ ಇಲ್ಲದ ಮುಗಿಲೂ ಇಲ್ಲದ ಮನುಷ್ಯರಾದಿರಿ ನೀವೆಲ್ಲ ಅನ್ನುತ್ತಿದ್ದಂತೆ ಮರುಮಾತಾಡದೇ ನಾವು ಚಪ್ಪಲಿಗಳನ್ನು ಬಿದಿರ ಮೆಳೆಯೊಳಗೆ ಎಸೆದವು. ಅವರು ಅದನ್ನು ಎತ್ತಿಕೊಂಡು ಒಂದು ಮರದ ಕೊಂಬೆಗೆ ಜೋತುಹಾಕಿದರು.

ಈ ಚಪ್ಪಲಿಗಳನ್ನು ಇಲ್ಲಿ ನೋಡಿದರೆ ಈ ಕೆರೆಯತ್ತ ಯಾವ ಪ್ರಾಣಿಗಳೂ ಬರುವುದಿಲ್ಲ. ಈ ಜಾಗವನ್ನು ಬಿಟ್ಟು ಮತ್ತೊಂದು ಕೆರೆಯನ್ನು ಹುಡುಕಿಕೊಂಡು ಹೋಗುತ್ತವೆ. ಅವುಗಳಿಗೆ ಅನೈಸರ್ಗಿಕವಾದದ್ದು ಯಾವುದು ಅಂತ ಥಟ್ಟನೆ ಗೊತ್ತಾಗುತ್ತದೆ. ನೀವೂ ಕಾಡಿಗೆ ಸೇರಿದವರು ಅಂತ ಅವುಗಳಿಗೆ ಗೊತ್ತಾಗದ ಹೊರತು ನಿಮಗೆ ಉಳಿಗಾಲ ಇಲ್ಲ ಅಂತ ಅವರು ಮುಗುಳ್ನಕ್ಕರು.

ನಮಗೆ ಗಾಬರಿ ಶುರುವಾಯಿತು.

‍ಲೇಖಕರು avadhi

June 19, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: