
“ಡಾಕ್ಟರ್ಸ್ ಡೇ” (ಜೂನ್ 30)ಅಂತಲೂ ಒಂದು ಇದೆ ಅಂತ ಗೊತ್ತಿರಲಿಲ್ಲ, ಇದ್ದದ್ದು ಒಳ್ಳೆಯದೇ ಆಯಿತು. ನನಗೂ ಆಸ್ಪತ್ರೆಗಳಿಗೂ ಅಲ್ಲಿಯ ಡಾಕ್ಟರುಗಳಿಗೂ ಬಹಳ ವರ್ಷಗಳಿಂದ ನನ್ನದೇ ಆರೋಗ್ಯದ ಕಾರಣಕ್ಕಾಗಿಯೋ ತಂದೆ-ತಾಯಿ, ನೆಂಟರಿಷ್ಟರ ಕಾರಣಕ್ಕಾಗಿಯೋ ನಂಟು ಬೆಳೆದುಕೊಂಡು ಬಂದಿದೆ.
ನಾನು ಚಿಕ್ಕವನಿದ್ದಾಗ ಬೈಲಹೊಂಗಲವೆಂಬ ಇಪ್ಪತ್ತು ಸಾವಿರ ಜನಸಂಖ್ಯೆಯ ಪಟ್ಟಣದಲ್ಲಿ ಊರ ಹೊರಗೆ ಒಂದು ಸರಕಾರಿ ದವಾಖಾನೆ ಇದ್ದುದನ್ನು ಬಿಟ್ಟರೆ ಇನ್ನುಳಿದಂತೆ ಖಾಸಗಿ ಪ್ರ್ಯಾಕ್ಟೀಸ್ ಮಾಡುತ್ತಿದ್ದವರು ಎಣಿಸಿ ಐವರು ಡಾಕ್ಟರುಗಳಿದ್ದರು, ಖಾಸನೀಸ್, ಚಾಟೆ, ಭಟ್, ಮಹಾಂತಶೆಟ್ಟಿ ಮತ್ತು ಗಿಡದಹುಬ್ಬಳ್ಳಿ.ಈ ಐವರು ವೈದ್ಯರಲ್ಲಿ ಖಾಸನೀಸ್ ನಮ್ಮ ಮನೆ ಇದ್ದ ಬೀದಿಯಲ್ಲೇ ವಾಸವಾಗಿದ್ದರು. ದವಾಖಾನೆ ಪೇಟೆ ಬೀದಿಯಲ್ಲಿತ್ತು. ಭಟ್ ಡಾಕ್ಟ್ರ ಸ್ಟೈಲೇ ಬೇರೆ. ಜುಮ್ಮಾಮಸೀದಿ ಎದುರಿಗೆ ಇದ್ದ ಒಂದು ಕಟ್ಟಡದಲ್ಲಿ ದವಾಖಾನೆ ಇಟ್ಟುಕೊಂಡಿದ್ದ ಕುಳ್ಳ ನಿಲುವಿನ ಅವರು ಪ್ಯಾಂಟು,ಕೋಟು ತೊಟ್ಟು ಯುರೋಪಿಯನ್ ಮಾದರಿಯ ಒಂದು ಗುಳಬುಟ್ಟಿಯಂಥ ಹ್ಯಾಟ್ ಹಾಕಿರುತ್ತಿದ್ದರು. ಈ ಎಲ್ಲ ಡಾಕ್ಟ್ರುಗಳ ಬಳಿ ಇರುತ್ತಿದ್ದ ಏಕಮಾತ್ರ ಮಶಿನ್ ಎಂದರೆ ಸ್ಟೆಥೊಸ್ಕೋಪ್..! ಮೇಲ್ಕಾಣಿಸಿದ ವೈದ್ಯರಲ್ಲಿ ಕೊನೆಯವರಾದ ಗಿಡದಹುಬ್ಬಳ್ಳಿಯವರು ಹೆರಿಗೆ ವೈದ್ಯರಾದ್ದರಿಂದ ಅವರ ಬಳಿ ಹೋಗುವ ಪ್ರಮೇಯವಿರಲಿಲ್ಲ. ಇನ್ನುಳಿದ ಎಲ್ಲರ ಬಳಿಗೂ ನನ್ನನ್ನು ಕರೆದೊಯ್ಯಲಾಗುತ್ತಿತ್ತು. ಬೇರಾವ ಕಾರಣಕ್ಕೂ ಅಲ್ಲ, ಸಣ್ಣ ಪುಟ್ಟ ಜ್ವರ, ಗಾಯ ಇತ್ಯಾದಿಗಳಿಗಾಗಿ. ಬಹುಪಾಲು ಇತರೆ ಕಾಯಿಲೆ ಕಸಾಲೆಗಳಿಗೆ ಇಂಗು, ಜೀರಿಗೆ, ಅರಿಷಿಣ, ಅಜಿವಾಣ, ಬೆಳ್ಳುಳ್ಳಿ, ಕೊಬ್ರಿ ಎಣ್ಣೆ ಇತ್ಯಾದಿ ತಮ್ಮ ತರಹೇವಾರಿ ಔಷಧಿಗಳಿಂದ ನಮ್ಮ ಮನೆ ವೈದ್ಯರಾದ ನನ್ನ ತಂದೆ ವೀರಪ್ಪ ಶೆಟ್ಟರು ನನ್ನನ್ನು ಗುಣಪಡಿಸುತ್ತಿದ್ದರು.
ಹಲವು ವರ್ಷಗಟ್ಟಲೇ ನನ್ನನ್ನು ಹತ್ತಾರು ಊರುಗಳ ಹಲವಾರು ಡಾಕ್ಟರುಗಳ ಕಡೆ ಎಡತಾಕಿಸಿ ಸತಾಯಿಸಿದ ಕಾಯಿಲೆ ನನಗೆ ಮೊದಲ ಸಲ ೧೯೮೧ ರಲ್ಲಿ ಅಮರಿಕೊಂಡಿತು.ಸೋರಿಯಾಸಿಸ್ ಎಂಬ ನಾಮಧೇಯವಿರುವ ತ್ವಚಾಸಂಬಂಧಿ ಕಾಯಿಲೆ ಅದು. ನಾನು ದೆಹಲಿಗೆ ಓದಲು ಹೋದ ಮೊದಲ ವರ್ಷವೇ ಕಾಣಿಸಿಕೊಂಡು ನನ್ನನ್ನು ಚಿಂತಿತನನ್ನಾಗಿಸಿತು. ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (AIIMS) ತಿಂಗಳುಗಟ್ಟಲೇ ಚಿಕಿತ್ಸೆ ಪಡೆದರೂ ಅದು ಗುಣವಾಗುವ ಸೂಚನೆಗಳು ಅಷ್ಟಾಗಿ ಕಾಣಿಸದೇ ಇದ್ದಾಗ ನಾನು ಖಿನ್ನನಾಗುತ್ತ ಹೋದೆ. ಕೊನೆಗೆ ಅಲ್ಲಿದ್ದ ಡಾ. ಸತೀಶ್ ಎಂಬ ಡಾಕ್ಟರೊಬ್ಬರು ನನ್ನ ಬಗ್ಗೆ ಕೇಳಿ, ನನ್ನ ವಿಷಯ ಹಿಸ್ಟರಿ ಎಂಬುದನ್ನು ಕೇಳಿ ಇತಿಹಾಸದ ಪ್ರೊಫೆಸರ್ ಡಾ.ಷೇಕ್ ಅಲಿಯವರ ಬಗ್ಗೆ ಕೇಳಿ ಅವರು ನಿಮಗೆ ಹೇಗೆ ಗೊತ್ತು? ಎಂದು ನಾನು ಕೇಳಿದಾಗ ತಾವು ಕನ್ನಡಿಗರೆಂದು ಹೇಳಿ ಆಲೋಪಥಿ ವೈದ್ಯ ಪದ್ಧತಿಯಲ್ಲಿ ಸೋರಿಯಾಸಿಸ್ ಕಾಯಿಲೆಯನ್ನು ಶಾಶ್ವತವಾಗಿ ಗುಣಪಡಿಸುವಂಥ ಚಿಕಿತ್ಸೆ ಇಲ್ಲವೆಂದೂ ಇನ್ನು ಜೀವನದುದ್ದಕ್ಕೂ ಅದರೊಂದಿಗೆ ನಾನು ಬಾಳುವದು ಅನಿವಾರ್ಯವೆಂದೂ ತಿಳಿಸಿ ಹೇಳಿದರು.
ನನ್ನ ವಯಸ್ಸಿನ ಇಪ್ಪತ್ತೈದರ ಹರೆಯದ ಹಂತದಲ್ಲಿ ಬಂದು ಬಾಧಿಸಿದ ಆ ಕಾಯಿಲೆ ನನ್ನ ಬಹಳಷ್ಟು ಆಶಾಕಾಂಕ್ಷೆಗಳನ್ನು ಹೊಸಕಿ ಹಾಕಿತು. ಮೂರು ಡಿಗ್ರಿ ಸೆಲ್ಸಿಯಸ್ ನಷ್ಟು ತಂಪಾಗಿರುತ್ತಿದ್ದ ದಿಲ್ಲಿಯ ಚಳಿಯಲ್ಲಿ ನಾನು ಬಟ್ಟೆಗಳನ್ನೆಲ್ಲ ಬಿಚ್ಚಿ ಆಯಿಂಟಮೆಂಟ್ ಲೇಪಿಸಿಕೊಳ್ಳಬೇಕಾದ ಅನಿವಾರ್ಯತೆ ಇರುತ್ತಿತ್ತು. ವಾತಾವರಣವನ್ನು ಬೆಚ್ಚಗಿಡುವದಕ್ಕಾಗಿ ನಾನು ತಂದಿಟ್ಟುಕೊಂಡಿದ್ದ ಇಲೆಕ್ಟ್ರಿಕ್ ಒಲೆಯೊಳಗಿನ ಸುರುಳಿ ಸುರುಳಿ ತಂತಿಯ ಕಾಯಿಲ್ ತುಂಡರಿಸಿ ಹೋದಾಗ ನಾನು ಅದರ ಎಳೆಗಳನ್ನು ಜಗ್ಗಿ ಸೇರಿಸಿ ಹೊಸೆದು ಅದನ್ನು ಮತ್ತೆ ಕ್ರಿಯಾಶೀಲವಾಗಿಸುವಲ್ಲಿ ಸಾಧಿಸಿದ ಪರಿಣತಿಯ ಪರಿಣಾಮವಾಗಿ ಒಲೆ ಎಂಬ ವ್ಯವಸ್ಥೆಯ ಅಸ್ಥಿಪಂಜರವಾಗಿ ಮಾರ್ಪಟ್ಟಾಗ್ಯೂ ಅದು ತನ್ನ ಕೆಲಸ ನಿರ್ವಹಿಸಿ ನಗ್ನಮೂರ್ತಿಯಾಗಿರುತ್ತಿದ್ದ ನನಗೆ ಶಾಖವನ್ನು ಒದಗಿಸುವ ಅನಿವಾರ್ಯತೆಗೆ ತಾನು ಒಳಪಟ್ಟಿತ್ತು. ಅಂತಿಮವಾಗಿ ದೆಹಲಿಯನ್ನು ತೊರೆದು ಧಾರವಾಡಕ್ಕೆ ಬರುವಾಗ ನನ್ನ ಇತಿಹಾಸ ಮತ್ತು ಸಾಹಿತ್ಯಸಂಬಂಧಿ ಸಹಸ್ರಾರು ಪುಸ್ತಕಗಳನ್ನು ರೈಲ್ವೆಗೆ ಪಾರ್ಸಲ್ ಹಾಕಿಸಿ ಆ ಒಲೆಯನ್ನು ನನ್ನೊಂದಿಗೆ ಧಾರವಾಡಕ್ಕೆ ತಂದಿದ್ದೆ. (ನಾನು ಅವಿವಾಹಿತನಾಗಿದ್ದ ವರೆಗೆ ಅದು ಎಲ್ಲೋ ಒಂದೆಡೆ ಬಿದ್ದುಕೊಂಡಿತ್ತು. ಮದುವೆಯಾದ ಮೇಲೆ ಒಂದು ಸೀಮೆ ಎಣ್ಣೆ ಸ್ಟೌ ಮೇಲೆ ಅನ್ನ ಸಾರು ಕುದಿಸುತ್ತಿದ್ದ ನನ್ನ ಹೆಂಡತಿ ಅದರ ಜೊತೆಗೇ ಹಾಲು ಕಾಯಿಸುವದಕ್ಕೋ ಮತ್ತೊಂದಕ್ಕೋ ಈ ಇಲೆಕ್ಟ್ರಿಕ್ ಒಲೆಯನ್ನು ಬಳಸುತ್ತಿದ್ದಳು.)

ಎಲ್ಲರೂ ತಮ್ಮ ಸೌಂದರ್ಯವನ್ನು ತೋರ್ಪಡಿಸಿಕೊಳ್ಳಲು ಹಾರಾಡುವ ಕಾಲಮಾನದಲ್ಲಿ ನಾನು ಈ ಕಾಯಿಲೆಯಿಂದಾಗಿ ನನ್ನ ಕುರೂಪವನ್ನು ಮುಚ್ಚಿಡುವ ಹೋರಾಟದಲ್ಲಿ ತೊಡಗಿದ್ದೆ. ಆಲೋಪಥಿ ವೈದ್ಯ ಪದ್ಧತಿಯಲ್ಲದೇ, ಯುನಾನಿ, ಹೋಮಿಯೋಪತಿ,ಆಯುರ್ವೇದ ಇತ್ಯಾದಿ ಎಲ್ಲವನ್ನು ಪ್ರಯತ್ನಿಸಿ ಬೆಳಗಾವಿ, ಹುಬ್ಬಳ್ಳಿ, ವಿಜಾಪುರ, ಧಾರವಾಡ, ಹಾವೇರಿ, ಬೆಂಗಳೂರು ಹೀಗೆ ಹಲವೆಡೆ ಕಳೆದ ಮೂವತ್ತೆರಡು ವರ್ಷಗಳಿಂದ ಅಂಡಲೆದರೂ ಹಲವು ಬಗೆಯ ಪಥ್ಯಗಳಿಂದ ನನ್ನ ಶಕ್ತಿ ಕುಂದುತ್ತಿತ್ತೇ ವಿನ: ದೀರ್ಘಾವಧಿ ಪ್ರಯೋಜನವೇನೂ ಆಗುತ್ತಿರಲಿಲ್ಲ. ಇಲ್ಲಿ ಪ್ರೊಫೆಸರ್ ಆಗಿದ್ದು ನಿವೃತ್ತರಾಗಿದ್ದ ಮಹಿಳೆಯೊಬ್ಬರು ತಮ್ಮ ಮಗಳು ವೈದ್ಯ ವೃತ್ತಿಯಲ್ಲಿದ್ದ ಬೆಂಗಳೂರಿನ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ವೈದ್ಯರು ತಮಗೆ ಒಳ್ಳೆಯ ರಿಸಲ್ಟ್ ಕೊಟ್ಟಿದ್ದಾರೆಂದು ಹೇಳಿದಾಗ ನಾನೂ ಅಲ್ಲಿಗೆ ಹೋದೆನಾದರೂ ಅವರು ಕೊಡುತ್ತಿದ್ದ ನಿಯೋಟ್ರೆಕ್ಸೇಟ್, ಮೆಥೊಟ್ರೆಕ್ಸೇಟ್ ಮೊದಲಾದ ಮಾತ್ರೆಗಳ ಟಾಕ್ಸಿಕ್ ಪರಿಣಾಮ ನನ್ನನ್ನು ಬವಳಿ ಬರುವಂತೆ ಮಾಡಿ ಒಮ್ಮೆ ಅವೆನ್ಯೂ ರೋಡ್ ನಲ್ಲಿ ಒಂದು ಹೊಟೆಲ್ ನಲ್ಲಿ ತಿಂಡಿ ತಿನ್ನುತ್ತಿರಬೇಕಾದರೆ ಇದು ಸಾಕು ಅಂತ ನನಗೆ ಅನಿಸಿ ಬಿಟ್ಟಿತು. ಅಂತಿಮವಾಗಿ ಈ ಕಾಯಿಲೆಯನ್ನು ನಿಯಮಿತ ಜೀವನಕ್ರಮದಿಂದ ಒಂದು ಮಟ್ಟದಲ್ಲಿ ನಿಯಂತ್ರಣದಲ್ಲಿಟ್ಟುಕೊಂಡು ಹೋಗಬಹುದೆಂಬುದು ಗೊತ್ತಾಗಿ ನಾನೀ ಮಧ್ಯೆ ಅದರ ಕುರಿತು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ. ಮನಸಿಗೆ ಕ್ಷೋಭೆಯಾದಾಗ, ತೀವ್ರತರ ಒಣಗಾಳಿ ಇರುವ ಚಳಿಗಾಲದಲ್ಲಿ ಮತ್ತು ಇತ್ತೀಚೆಗೆ ತೀವೃತರವಾದ ಬೇಸಗೆಯಲ್ಲಿ ಕೂಡ ಅದು ಸ್ವಲ್ಪ ಉಲ್ಬಣಗೊಳ್ಳುತ್ತದೆ ಇನ್ನುಳಿದಂತೆ ನಿಯಂತ್ರಣದಲ್ಲಿರುತ್ತದೆ.
ಅದೇ ಕಾಯಿಲೆಯ ಚಿಕಿತ್ಸೆಗಾಗಿ ನಾನು ಸುಮಾರು ಇಪ್ಪತ್ತು ವರ್ಷಗಳ ಹಿಂದೊಮ್ಮೆ ಬೆಳಗಾವಿಯ ಶೇಖ್ ಹೋಮಿಯೋಪತಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸ್ಥಾಪಕರಾಗಿದ್ದ ಡಾ, ಎ.ಎಂ.ಶೇಖ್ ಅವರ ಬಳಿ ಹೋದಾಗ ಎಂಬತ್ತಕ್ಕೆ ಮೇಲ್ಪಟ್ಟು ವಯಸ್ಸಾಗಿದ್ದ ಅವರು ತ್ವಚೆ, ಅದರ ಕಾರ್ಯ, ಅದರ ಕಾಯಿಲೆ ಇತ್ಯಾದಿಗಳ ಕುರಿತು ಸ್ವಚ್ಛ ಕನ್ನಡದಲ್ಲಿ ಸುದೀರ್ಘವಾಗಿ ವಿವರಿಸಿ ನನಗೆ ಈ ಮೊದಲು ಯಾವ ಯಾವ ರೋಗಗಳು ಬಾಧಿಸಿದ್ದವೆಂದು ಕೇಳಿದರು. ನಾನು ಯಾವವೂ ಇಲ್ಲ ಎಂದೆ. ಕೆಲವಾರು ಕಾಯಿಲೆಗಳ ಹೆಸರು ಹೇಳಿ ಇವ್ಯಾವದೂ ಬಂದಿಲ್ಲಾ? ಎಂದರು. ಇಲ್ಲ ಎಂದೆ. “ನಿಮ್ಮ ಶರೀರ ಏನು ಕಲ್ಲಿಂದದನೋ ಕಬ್ಬಿಣದ್ದದನೋ” ಎಂದರು. “ಹಂಗೇನೂ ಇಲ್ರಿ, ಯಾವದೂ ಕಾಯಿಲೆ ಬಂದಿಲ್ಲ ಅಷ್ಟೇ” ಎಂದೆ. ಆದರೆ ಒಂದು ಕಾಯಿಲೆ ಬಂತು…!
ಸುಮಾರು ಹದಿನಾಲ್ಕು ವರ್ಷಗಳ ಹಿಂದೆ ಪ್ರತಿನಿತ್ಯ ಸಾಯಂಕಾಲ ಮೈ ಬಿಸಿಯಾಗತೊಡಗಿತು. ನಮ್ಮ ಫ್ಯಾಮಿಲಿ ಡಾಕ್ಟರ ಥರಾನೇ ಇದ್ದ ಡಾ. ಕಣವೀಕರ್ ಎಂಬವರು ಒಂದೇನೋ ಮಾತ್ರೆ ಕೊಟ್ಟರು. ರಾತ್ರಿ ಮಲಗಿದಾಗ ಎಷ್ಟು ಬೆವೆತೆನೆಂದರೆ ಮೈ ಎಲ್ಲ ಒದ್ದೆಯಾಗಿತ್ತು. ಜ್ವರ ನಿಲ್ಲಲಿಲ್ಲ. ರಕ್ತ ಪರೀಕ್ಷೆಗೆ ಹೇಳಿದರು. ಸ್ಪಂದನ ನರ್ಸಿಂಗ್ ಹೋಂನಲ್ಲಿ ಪರೀಕ್ಷೆ ಮಾಡಿದಾಗ ಪಲ್ಮೋನಾರಿ ಟ್ಯೂಬರಕ್ಯೂಲೋಸಿಸ್ ಅಂದರೆ ಶ್ವಾಸಕೋಶದ ಕ್ಷಯದ ಲಕ್ಷಣಗಳು ಕಂಡು ಬಂದವು. ಮಂಕಾಗಿ ಮನೆಗೆ ಬಂದು ವಿಷಯ ತಿಳಿಸಿದರೆ ನನ್ನ ಹೆಂಡತಿ ನಾನು ಸತ್ತೇ ಹೋಗುತ್ತೇನೇನೋ ಎಂಬಂತೆ ಅತ್ತಳು. ಧಾರವಾಡದ ಸುಪ್ರಸಿದ್ಧ ವೈದ್ಯ ಡಾ. ಎಸ್.ಆರ್.ರಾಮನಗೌಡರ್ ಅವರು ಎಕ್ಸರೇ ಮಾಡಿ ನೋಡಿ ಅದು ಕನ್ ಫರ್ಮ್ ಆದ ಮೇಲೆ “ಇದು ಬೇರೆಯವರಿಂದ ನಿಮಗೆ ಬಂದದ್ದು, ಇದು ಯಾರಿಗಾದರೂ ಬರಬಹುದು, ಗಂಡು ಹೆಣ್ಣು, ಶ್ರೀಮಂತ ಬಡವ, ಬಾಲಕ ವೃದ್ಧ ಎಂಬ ಭೇದವೇನೂ ಅದಕ್ಕಿಲ್ಲ” ಎಂದು ನನ್ನನ್ನು ಸಮಾಧಾನಿಸಿ ಅದಕ್ಕೆ ಸುಮಾರು ಹತ್ತು ತಿಂಗಳ ಸುದೀರ್ಘ ಚಿಕಿತ್ಸೆ ಕೊಟ್ಟರು. ನಾನು ಜೀವನದಲ್ಲಿ ನಿಯಮಿತವಾಗಿ ಮಾತ್ರೆಗಳನ್ನು ತೆಗೆದುಕೊಂಡು ನನ್ನ ವ್ಯಸನಗಳನ್ನು ದೂರವಿಟ್ಟ ಅವಧಿ ಅದು.

ಹತ್ತು ತಿಂಗಳ ಮಾತ್ರೆ ನುಂಗುವಿಕೆ ಮುಗಿಯುತ್ತ ಬಂದಾಗ ಕಾರ್ಯನಿಮಿತ್ತ ಮೈಸೂರಿಗೆ ಹೋದಾಗ ಕೃಷ್ಣರಾಜಸಾಗರಕ್ಕೆ ಹೋಗಿ ಕನ್ನಂಬಾಡಿ ಆಣೆಕಟ್ಟಿನ ಈ ತುದಿಯಿಂದ ಪಾಂಡವಪುರದ ದಿಕ್ಕಿನಲ್ಲಿದ್ದ ಆ ಇನ್ನೊಂದು ತುದಿಯ ವರೆಗೆ ಮೂರು ಕಿಲೋಮೀಟರ್ ಉದ್ದಕ್ಕೂ ನಡೆದುಕೊಂಡು ಹೋಗಿ ಅಲ್ಲಿ ಸೇತುವೆಯಿಂದ ಕೆಳಗಿಳಿದು ಅದರ ಬದಿಗೆ ಸೊಕ್ಕಿ ಬೆಳೆದಿದ್ದ ಹೊಂಗೆ ಮರಗಳ ತಂಪು ನೆರಳಲ್ಲಿ ನಡೆಯುತ್ತಿರಬೇಕಾದರೆ ಲವಲವಿಕೆಯಿಂದ ನಾನು ಪುಟಿಯುತ್ತಿದ್ದೇನೆನ್ನಿಸಿತು. “ಅಶೋಕಾ ಯೂ ಆರ್ ಫಿಟ್ ಅಂಡ್ ಫೈನ್ ನೌ” ಎಂದು ನನಗೆ ನಾನೇ ಹೇಳಿಕೊಂಡು ಮರಳಿ ಧಾರವಾಡಕ್ಕೆ ಬಂದು ಡಾ. ರಾಮನಗೌಡರ್ ಅವರ ಬಳಿ ಹೋಗಿ “ಡಾಕ್ಟ್ರೆ ಇನ್ನೊಮ್ಮೆ ಎಕ್ಸರೇ ಮಾಡಿಸಿ ನೋಡೋಣವೇ? ನಾನು ಗುಣವಾದೆ ಅನ್ನಿಸುತ್ತದೆ” ಅಂದೆ. ಎಕ್ಸರೇ ಮಾಡಿ ನೋಡಿದರು. ಭುಜದ ಮೇಲೆ ಕೈ ಇಟ್ಟು ಎಸ್ ಎಂದು ನಕ್ಕರು.
ಹನ್ನೆರಡು ವರ್ಷಗಳ ಹಿಂದೆ ನಾನು ಮನೆ ಕಟ್ಟಿಸಬೇಕೆಂದು ನಿರ್ಧರಿಸುವ ಹೊತ್ತಿಗೆ ನನಗೆ ಇಡೀ ಶರೀರದಲ್ಲಿನ ಸ್ನಾಯುಗಳು ಮತ್ತು ಕೀಲುಗಳು ವಿಶೇಷವಾಗಿ ಪಕ್ಕೆಲುಬುಗಳಲ್ಲಿ ಅಸಾಧ್ಯ ನೋವು ಅನುಭವಕ್ಕೆ ಬರತೊಡಗಿತು. ರಾತ್ರಿ ಮಗ್ಗಲು ಬದಲಿಸುವ ಅತ್ಯಂತ ಸಾಮಾನ್ಯ ಕ್ರಿಯೆಯೂ ಒಂದು ಶಿಕ್ಷೆ ಎಂಬಂತೆ ಭಾಸವಾಗತೊಡಗಿ ನನಗೆ ಫ್ರಾಂಝ್ ಕಾಫ್ಕನ ಮೆಟೊಮೊರ್ಫೊಸಿಸ್ ನೀಳ್ಗತೆಯ ಕಥಾನಾಯಕ ಸಂಸ ನೆನಪಾಗತೊಡಗಿದ. ಮನೆ ಕಟ್ಟುವ ನಿವೇಶನದಲ್ಲಿ ಭೂಮಿ ಪೂಜೆ ಮಾಡಿ ಮುಗಿದ ನಂತರ ಅದರ ಸಲುವಾಗಿ ಬಂದ ಸ್ವಾಮಿಯನ್ನು ನನ್ನ ದ್ವಿಚಕ್ರವಾಹನದ ಮೆಲೆ ಕರೆದುಕೊಂದು ಹೋಗಿ ಬಿಟ್ಟು ಬರುವದೂ ನನಗೆ ಸಾಧ್ಯವಿರಲಿಲ್ಲ.
ನಾನು ಯಥಾಪ್ರಕಾರ ಡಾ. ರಾಮನಗೌಡರ್ ಅವರ ಬಳಿ ಹೋಗುವವನಿದ್ದೆ. ನನ್ನ ಹೆಂಡತಿಯ ಅಕ್ಕನ ಮಗ ಶಿವಮೂರ್ತಿ ತಾನು ಕೆಲಸ ಮಾಡುತ್ತಿದ್ದ ಆಜ್ ತಕ್ ಸುದ್ದಿವಾಹಿನಿಗಾಗಿ ಏನೋ ಕಾರ್ಯಕ್ರಮ ಶೂಟ್ ಮಾಡಲು ಬೆಂಗಳೂರಿನಿಂದ ಧಾರವಾಡಕ್ಕೆ ಬಂದವ “ಅಂಕಲ್, ನೀವು ಅರ್ಥೋಪೀಡಿಶಿಯನ್ ನ ಕನ್ಸಲ್ಟ್ ಮಾಡುವದು ಒಳ್ಳೆಯದು” ಎಂದ. ಸಂದೀಪ್ ನೀರಲಗಿ ಎಂಬ ಯುವ ಡಾಕ್ಟರ್ ಬಳಿ ಹೋದೆ, ಅವರ ತಾಯಿ ನಮ್ಮಲ್ಲೇ ಮೆಥಮೆಟಿಕ್ಸ್ ಪ್ರೊಫೆಸರಾಗಿದ್ದರು. “ನೋಡಿ ಡಾಕ್ಟ್ರೆ ನಾನು ಮನೆ ಕಟ್ಟಿಸಬೇಕು, ನೂರೆಂಟು ಕೆಲಸ ಕಾರ್ಯಗಳು, ಓಡಾಟ ಇರುತ್ತವೆ, ನಾನು ಅವುಗಳನ್ನು ನಿರ್ವಹಿಸಬೇಕು. ಸಾಧ್ಯವಾ?” ಎಂದೆ. ಕ್ಯಾಲ್ಸಿಯಂ ನ ಕೊರತೆ ಉಂಟಾಗಿದೆ, ಅಲ್ಲಲ್ಲಿ ಮಸಲ್ ಸ್ತಿಫ್ ನೆಸ್ಸ್ ಕೂಡ ಇದೆ. ಯೋಚಿಸಬೇಡಿ ಎಂದು ಪ್ರಾರಂಭಿಕವಾಗಿ ಇಂಜೆಕ್ಷನ್ ಚುಚ್ಚಿ ಐದಾರು ತಿಂಗಳು ಮಾತ್ರೆಗಳನ್ನು ಕೊಡುತ್ತ ಹೋದರು. ಆಮೇಲೆ ಮತ್ತೆ “ಫಿಟ್ ಅಂಡ್ ಫೈನ್” ಆದೆ.
ಕೆಲ ವರ್ಷಗಳ ಹಿಂದೆ ಮತ್ತೊಂದಾವರ್ತಿ ಕ್ಯಾಲ್ಸಿಯಂ ಕೊರತೆ ಉಂಟಾಗಿ ಒಂದೆರಡು ಫರ್ಲಾಂಗ್ ನಡೆಯುವಷ್ಟರಲ್ಲಿ ಸುಸ್ತು ಕಾಣಿಸಿಕೊಂಡಾಗ ನನಗೆ ಚಿಕಿತ್ಸೆ ಕೊಟ್ಟ ಡಾ.ಇಮ್ತಿಯಾಜ್ ಶೇಖ್ ಎಂಬವರು ಇತ್ತೀಚಿನ ವರೆಗೆ ನನ್ನ ಎಲುವು ಕೀಲುಗಳ ಡಾಕ್ಟರಾಗಿದ್ದರು. ಸರಿಯಾಗಿ ಎರಡು ವರ್ಷಗಳ ಹಿಂದೆ ನನಗೆ ಪಾದದಲ್ಲಿ ಕಿರುಬೆರಳಿನ ಲೈನಿನಲ್ಲಿ ಸೆಳೆತ ಕಾಣಿಸಿಕೊಂಡಿತು. ತೊಡೆ ತುಂಬಿಕೊಂಡಂತೆ ಭಾಸವಾಗುವದು, ಸ್ವಲ್ಪ ನಡೆದರೂ ಸುಸ್ತಾಗುವದೆಲ್ಲ ಇತ್ತು. ಬೆಳಿಗ್ಗೆ ಎದ್ದೊಡನೆ ಸಲೀಸಾಗಿ ಹೆಜ್ಜೆ ಇಡುವದು ಸಾಧ್ಯವಾಗದಂಥ ಸ್ಟಿಫ್ ನೆಸ್ ಇರುತ್ತಿತ್ತು. ಕ್ಯಾಲ್ಸಿಯಂ ಮಾತ್ರೆ, ಇನ್ನೆಂಥದೋ ಮಾತ್ರೆ ಕೊಟ್ಟರು. ತೊಡೆಯ ಹಿಂಬಾಗದಲ್ಲಿ ನೋವಿರುತ್ತಿತ್ತು.ಅದು ನರಗಳಿಗೆ ಸಂಬಂಧಿಸಿದ ಸಮಸ್ಯೆ ಎಂದರು. ಅವರು ಕೊಟ್ಟ ಚಿಕಿತ್ಸೆ, ನೋವು ನಿವಾರಕಗಳಿಂದ ಸ್ವಲ್ಪ ಸಮಾಧಾನವಾದರೂ 2011 ರ ಡಿಸೆಂಬರ್ ನಲ್ಲಿ ಹತ್ತಾರು ದಿನ ದಿಲ್ಲಿ ಪಂಜಾಬ್ ಪ್ರವಾಸ ಮುಗಿಸಿ ಬಂದ ಮೇಲೆ ಸಮಸ್ಯೆ ಉಲ್ಬಣಿಸುತ್ತಲೇ ಹೋಯಿತು. ಪಾದದ ಹೆಬ್ಬೆರಳಿನ ಲೈನಿನಲ್ಲಿ ಊತ ಕಾಣಿಸಿಕೊಂಡಿತು. ಅದು ಗೌಟ್ (Gout) ಇರಬಹುದೆಂಬ ಅನುಮಾನದಿಂದ ರಕ್ತ ಪರೀಕ್ಷೆ ಮಾಡಿಸಲು ಹೇಳಿದರು. ರಕ್ತದಲ್ಲಿ ಯೂರಿಕ್ ಎಸಿಡ್ ಪ್ರಮಾಣ ಇರಬೇಕಾದುದಕ್ಕಿಂತ ಜಾಸ್ತಿ ಇತ್ತು. ಇದು ಯೂರಿಕೇಮಿಯಾ ಎಂದರು. ನಿಮಗೆ ಆದದ್ದು ಗೌಟ್ ಎಂದರು. ಮತ್ತೇನೋ ಮಾತ್ರೆ ಕೊಟ್ಟರು. ಸಮಸ್ಯೆ ಎಲ್ಲಿತ್ತೋ ಅಲ್ಲೇ ಇತ್ತು.
ಆ ಹಂತದಲ್ಲಿ ನನ್ನ ಹೆಂಡತಿಯ ಅಕ್ಕನ ಮಗಳು ಸ್ವತ: ಹೋಮಿಯೊಪಥಿ ವೈದ್ಯೆಯಾಗಿದ್ದು ಯೂರಿಕ್ ಎಸಿಡ ಪ್ರಮಾಣ ಜಾಸ್ತಿಯಾಗಿದ್ದರೆ ಒಮ್ಮೊಮ್ಮೆ ಅದು ಮೆಟಾಬಾಲಿಜಂ ನ ಏರುಪೇರುಗಳಿಂದಲೂ ಆಗಿರಬಹುದು, ನೀವು ಇಚ್ಛಿಸಿದರೆ ಸ್ಪಂದನ ಹಾಸ್ಪಿಟಲ್ ನ ಡಾ. ಹೆಬ್ಬಾಳ್ ಅವರ ಕಡೆ ಅಪಾಯಿಂಟಮೆಂಟ್ ತಗೋತೀನಿ ಎಂದಳು. ಸರಿ ಎಂದು ನಿಗದಿತ ದಿನ ಅವರ ಬಳಿ ಹೋದಾಗ ಅವರು ನನ್ನ ರಕ್ತದೊತ್ತಡ ನೋಡಿದರು. ನೋಡಿ ಮುಖ ಗಂಭೀರವಾಗಿಸಿಕೊಂಡು “ನಿಮ್ಮ ಬಿ ಪಿ ಭಾಳ ಹೈ ಅದ” ಎಂದರು. ನಾನೆಂದೂ ಬಿಪಿ ಚೆಕ್ ಮಾಡಿಸಿಕೊಂಡವನೇ ಅಲ್ಲ. ಬಿಪಿ,ಶುಗರ್,ಹಾರ್ಟ್ ಇತ್ಯಾದಿ ತೊಂದರೆಗಳು ಅವರಿಗೆ ಆದಾವು ಇವರಿಗೆ ಆದಾವು ನನಗ್ಯಾಕೆ ಆಗುತ್ತವೆ? ಎಂಬಂತೆ ನಿರಾಳವಾಗಿ ಬದುಕಿಕೊಂಡು ಹೊರಟುಬಿಟ್ಟವನು ನಾನು. ಹೀಗಾಗಿ ನಾರ್ಮಲ್ ಬಿ ಪಿ ರೇಂಜ್ ಎಷ್ಟಿರುತ್ತದೆ ಎಂಬುದೂ ನನಗೆ ಗೊತ್ತಿರಲಿಲ್ಲ. ನನ್ನ ಬಿ.ಪಿ 170/110 ಇತ್ತು. ಈಗಿಂದೀಗ ಹೋಗಿ ಇಸಿಜಿ ಮಾಡಿಸಿಕೊಳ್ಳಿ ಎಂದರು. ಮಾಡಿಸಿಕೊಂಡೆ. ಹಾರ್ಟ್ ಸರಿ ಇತ್ತು. ಬ್ಲಡ್ ಶುಗರ್ ಲೆವೆಲ್ ನೋಡಿದರು. ಅದೂ ಸರಿ ಇತ್ತು. ಲಿಪಿಡ್ ಪ್ರೊಫೈಲ್ ನೋಡಿದರು, ಅದೂ ಸರಿ ಇತ್ತು. ಯೂರಿನ್ ನಲ್ಲಿ ಯಾವ್ಯಾವ್ದು ಎಷ್ಟಿರಬೇಕೋ ಅವೆಲ್ಲ ಸರಿ ಇದ್ದವು ಇನ್ನೂ ಏನೇನೋ ಟೆಸ್ಟುಗಳು, ಅವುಗಳ ವರದಿಗಳು, ಒಟ್ಟಿನಲ್ಲಿ ಎಲ್ಲ ಸರಿ ಇತ್ತು, ಒಂದನ್ನು ಬಿಟ್ಟು. ರಕ್ತದಲ್ಲಿ ಕ್ರಿಯೇಟಿನಿನ್ ಪ್ರಮಾಣ ಜಾಸ್ತಿ ಇತ್ತು.
ಅದರ ಪ್ರಸ್ತುತತೆ ಕಿಡ್ನಿಗೆ ಸಂಬಂಧಿಸಿದ್ದು. ನಿಮಗೆ ಈ ಮುಂಚೆ ಟ್ರೀಟಮೆಂಟ್ ಕೊಟ್ಟ ವೈದ್ಯರು ನಿಮಗೆ ನೋವುನಿವಾರಕಗಳನ್ನು ಕೊಟ್ಟಿರಬಹುದಾಗಿದೆ. ಅದರಿಂದಾಗಿ ಕ್ರಿಯೇಟಿನಿನ್ ಜಾಸ್ತಿ ಆಗಿದೆಯೋ ಹೇಗೋ ನೋಡೋಣ. ಎಂದರು ಬಿಪಿಗೆ ಮಾತ್ರೆ ಬರೆದುಕೊಟ್ಟರು. ಅದು ಕಿಡ್ನಿಯನ್ನೂ ರಕ್ಷಿಸುತ್ತದೆ ಎಂದರು. ವಾರದಲ್ಲಿ ಬಿಪಿ ಒಂದು ಹದಕ್ಕೆ ಬಂತು. ಮೈ ಕೈ ನೋವು? ಎಲುಬು ಕೀಲುಗಳ ನೋವು? ಅದೆಲ್ಲ ಹಾಗೇ ಉಳಿಯಿತು. ನಿಮಗಾಗಿರುವದು ಗೌಟ್ ಅಲ್ಲ. ಅರ್ಥ್ರೈಟಿಸ್ ಇರಬಹುದು ಎಂದು ಇಲ್ಲಿಗೆ ನನ್ನ ಕೆಲಸ ಮುಗಿಯಿತು ಎಂಬಂತೆ ಹೇಳಿ ಅಶೋಕ ಶೆಟ್ಟರನೆಂಬ ಚೆಂಡನ್ನು ಮರಳಿ ಅರ್ಥೋಪೀಡಿಶಿಯನ್ ರ ಅಂಗಳಕ್ಕೆ ಹೊಡೆದರು.
ಒಮ್ಮೆ ಹೀಗೇ ಪೇಪರ್ ಓದುತ್ತ ಕುಳಿತಾಗ ಹುಬ್ಬಳ್ಳಿಯ ಸುಶ್ರೂಷಾ ಎಂಬ ನರ್ಸಿಂಗ ಹೋಂನಲ್ಲಿ ಉಚಿತವಾಗಿ ಮೂಳೆ ಸಾಂದ್ರತೆಯ ಪರೀಕ್ಷೆ ನಡೆಸಲಾಗುತ್ತದೆ ಎಂದು ಇತ್ತು. ಅಲ್ಲಿಗೆ ಹೋದೆ. ಕ್ಯಾಲ್ಸಿಯಂ ಕೊರತೆ ತುಂಬಾ ಇತ್ತು. ಡಾಕ್ಟ್ರನ್ನು ಭೇಟಿಯಾಗುವದಾದರೆ ಆಗಿ, ಒಳಗಿದ್ದಾರೆ ಎಂದರು. ಅಲ್ಲಿ ಕುಳಿತಿದ್ದರು ಡಾ. ಪ್ರೀತಿ ಗಲಗಲಿಯವರು. ನನ್ನ ತೊಂದರೆಗಳನ್ನು ಹೇಳಿದೆ. “ನಿಮಗ ಆಸ್ಟಿಯೋ ಅರ್ಥ್ರೈಟಿಸ್ ಆಗೇದ, ಮತ್ತ ನಿಮಗ ಬ್ಯಾಕ್ ಪೇನ್ ಅದ. ಮತ್ತ ನಿಮಗ ಸ್ಲಿಪ್ ಡಿಸ್ಕ್ ಆಗೇದ” ಎಂದರು ಆಕೆ. ಓಕೆ ಡಾಕ್ಟರ್, ಸರಿ ಡಾಕ್ಟರ್ ಎನ್ನುತ್ತ ಕುಳಿತೆ. ಒಂದಷ್ಟು ಮಾತ್ರೆ ಬರೆದು ಕೊಟ್ಟು ಸ್ವಲ್ಪ ದಿನಗಳ ನಂತರ ಬರಲು ಹೇಳಿದರು. ಹೋದೆ ಅವರು ತಮ್ಮದೊಂದು ಚಿಕಿತ್ಸಾ ವಿಧಾನದ ಕುರಿತು ನನಗೆ ತಿಳಿಸಿದರು. ಓಝೋನ್ ನ್ಯೂಕ್ಲಿಯಾಲಿಸಿಸ್ ಎಂಬ ಆ ವಿಧಾನದಲ್ಲಿ ಬೆನ್ನು ಹುರಿಯಲ್ಲಿ ಸೂಜಿಯನ್ನು ಚುಚ್ಚಿ ಆ ಮೂಲಕ ಕೆಳಬೆನ್ನಿನ (ಲಂಬರ್) ಯಾವ ಡಿಸ್ಕ್ ಪ್ರಭಾವಿತವಾಗಿರುತ್ತದೋ ಅಲ್ಲಿ ಓಝೋನ್ ನ್ನು ಒಂದು ನಿರ್ಧರಿತ ಪ್ರಮಾಣದಲ್ಲಿ ಒದಗಿಸಲಾಗುತ್ತದೆ. ಸ್ಲಿಪ್ ಡಿಸ್ಕ್ ಚಿಕಿತ್ಸೆಯಲ್ಲಿ ಅದು ಪರಿಣಾಮಕಾರಿ ಎಂದು ಸಾಬೀತಾಗಿದೆ. ಅದನ್ನವರು ಕಲಕತ್ತೆಯಲ್ಲಿ ಕಲಿತುಕೊಂಡು ಬಂದಿದ್ದರು. ಅದರ ಖರ್ಚು ವೆಚ್ಚಗಳ ಕುರಿತು ಹೇಳಿದರು.
ಬೇಕೆಂದರೆ ಹೇಳಿ, ಆಪರೇಶನ್ ಥೇಟರ್ ಬುಕ್ ಮಾಡುತ್ತೇನೆ ಎಂದರು. ನನ್ನ ಮಗನತ್ತ ನೋಡಿದೆ. ಅವನು ಎಸ್ ಎಂಬಂತೆ ತಲೆಯಾಡಿಸಿದ. ಅದಕ್ಕೂ ಮುಂಚೆ ಒಮ್ಮೆ ಎನ್.ಎಮ್.ಆರ್ ಸ್ಕ್ಯಾನ್ ಮಾಡಿಸಿಬಿಡಿ. ಎಕ್ಸಾಕ್ಟ್ ಆಗಿ ಯಾವ ಡಿಸ್ಕ್, ಯಾವ ಫ್ಯಾಸೆಟ್ ಎಷ್ಟು ಪ್ರಭಾವಿತ ಆಗಿದೆ ಎಂಬುದು ಗೊತ್ತಾಗುತ್ತದೆ ಎಂದರು. ಒಂದು ಸಂಜೆ ಸ್ಕ್ಯಾನ್ ಸೆಂಟರ್ ಗೆ ಹೋದರೆ ಅದು ಮೀನಿನ ಮಾರುಕಟ್ಟೆಯಂತೆ ಗಿಜಿಗುಟ್ಟುತ್ತಿತ್ತು. ಅಂಗಾತ ಮಲಗಿಸಿ ನನ್ನ ಇಡೀ ಶರೀರವನ್ನು ಸ್ಕ್ಯಾನಿಂಗ್ ಯಂತ್ರದೊಳಗೆ ತಳ್ಳಿದರು. ಅದು ಹತ್ತು ನಿಮಿಷ ಬಿಟ್ಟೂ ಬಿಡದೇ ತಯ್ಯಾತಯ್ಯಾತಯ್ಯಾ, ಧಡಕ್ ಧಡಕ್ ಧಡಕ್ ಮುಂತಾದ ಬಗೆ ಬಗೆಯ ಸವುಂಡುಗಳನ್ನು ಕಿವಿಯ ಮೇಲೆ ಸುತ್ತಿಗೆಯಿಂದ ಹೊಡೆದಂತೆ ಹೊರಡಿಸಿ ಸುಸ್ತುಗೊಳಿಸಿತು. ಅದರ ವರದಿ ಡಾ.ಕೀರ್ತಿಯವರ ಗ್ರಹಿಕೆಗಳಿಗೆ ಪೂರಕವಾಗಿತ್ತು. ಒಂದು ನಿಗದಿತ ದಿನದಂದು ವಿವೇಕಾನಂದ ಆಸ್ಪತ್ರೆಯ ಓಟಿ ಬುಕ್ ಮಾಡಿ ನನ್ನನ್ನು ಬೋರಲಾಗಿ ಮಲಗಿಸಿ, C Arm ಸಹಾಯದಿಂದ ಮಾನಿಟರ್ ಒಂದರ ಸ್ಕ್ರೀನ್ ಮೇಲೆ ನೋಡುತ್ತಲೇ ಬೆನ್ನು ಹುರಿಯಲ್ಲಿ ಸರಿಯಾದ ಸ್ಥಳದಲ್ಲಿ ಸೂಜಿಯನ್ನು ತೂರಿಸುವ ಮೊದಲೆರಡು ಪ್ರಯತ್ನಗಳಲ್ಲಿ ತಪ್ಪಿ ನನ್ನ ಎಲುಬಿನೊಳಗೆ ಚುಚ್ಚ ಸೂಜಿ ಬದಲಿಸಿ ಕೊನೆಗೆ ಪ್ರಭಾವಿತ ಡಿಸ್ಕ್ ನಲ್ಲಿ ತೂರಿಸಿ, ಓಝೋನ್ ಒದಗಿಸಿ ತಮ್ಮ ಕೆಲಸ ಪೂರೈಸಿ ಈಗ ಇಲ್ಲಿಂದ ನನ್ನ ಕ್ಲಿನಿಕ್ ವರೆಗೆ ನಡೆದುಕೊಂಡೇ ಬನ್ನಿ ಎಂದರು. ಹೋದೆ. ಎಷ್ಟು ಪರ್ಸೆಂಟ್ ಗುಣ ಅನ್ನಿಸುತ್ತಿದೆ? ಎಂದರು. ಇಪ್ಪತ್ತು ಪರ್ಸೆಂಟ್ ಎಂದೆ. ಸರಿ ನಾಳೆಯಿಂದ ಪ್ರತಿನಿತ್ಯ ಬೆಳಿಗ್ಗೆ ನಲವತ್ತು ನಿಮಿಷ ವಾಕ್ ಮಾಡಿ. ಮೂರು ದಿನ ಬಿಟ್ಟು ಬನ್ನಿ ಒಂದಷ್ಟು ಫಿಜಿಯೋಥೆರಪಿ ಎಕ್ಸರ್ಸೈಜ್ ಹೇಳುತ್ತೇವೆ. ನಿಯಮಿತವಾಗಿ ಮಾಡುತ್ತಾ ಹೋಗಿ. ಸರಿಯಾಗುತ್ತದೆ ಎಂದರು. ಸರಿ ಆಯಿತು. ಮೆಟ್ಟಿಲ ಮೇಲೆ ಹತ್ತಿ ಇಳಿಯುವದೂ ನೋವಿನ ಕೆಲಸವಾಗಿದ್ದ ನನಗೆ ಬಿರುಸಿನ ವಾಕಿಂಗ್ ಖುಷಿ ಕೊಡತೊಡಗಿತು.
ಆದರೆ ಕ್ರಿಯೇಟಿನಿನ್ ತಿಂಗಳೆರಡು ತಿಂಗಳಾದರೂ ೧.೭, ೧.೮, ೧.೯ ಹೀಗೆ ಏರುಗತಿಯಲ್ಲಿತ್ತು. ಒಮ್ಮೆ ಕಿಡ್ನಿ ಸ್ಕ್ಯಾನ್ ಮಾಡಿಸಿಬಿಡಿ. ಸೈಜ್ ಚಿಕ್ಕದಾಗಿದೆಯೋ ಹೇಗೋ ಗೊತ್ತಾಗುತ್ತದೆ ಎಂದರು. ಡಾ. ರಾಜೀವ್ ಗೋಟೆ ಯವರು ತಮ್ಮ ಸ್ಕ್ಯಾನ್ ಲ್ಯಾಬ್ ನಲ್ಲಿ ಲಿವರ್ ಮತ್ತು ಕಿಡ್ನಿಯನ್ನು ಸ್ಕ್ಯಾನ್ ಮಾಡಿ ಕಿಡ್ನಿ ಸೈಜ್ ಸ್ವಲ್ಪ ಚಿಕ್ಕದಾಗಿದೆ, ಗ್ರೇಡ್ ಟೂ ಲೆವಲ್. ಅಷ್ಟೇನೂ ಚಿಂತೆ ಮಾಡುವಂಥದಲ್ಲ.. ಹುಬ್ಬಳ್ಳಿಯಲ್ಲಿ ಒಳ್ಳೆ ನೆಫ್ರೊಲೊಜಿಸ್ಟ್ಸ್ ಇದ್ದಾರೆ, ತೋರಿಸಿ ಎಂದರು. ರಾಜೀವ ಗೋಠೆಯವರು ಕೊಟ್ಟ ವರದಿ ನೋಡಿದ ಡಾ. ಹೆಬ್ಬಾಳ್ ಅವರು ಹುಬ್ಬಳ್ಳಿಯ ಡಾ. ವೆಂಕಟೇಶ್ ಮೋಗೆರ್ ಅವರಲ್ಲಿಗೆ ಕಳಿಸಿದರು. ಅವರು ಎಲ್ಲ ರಿಪೋರ್ಟ್ ನೋಡಿ, ನಿಮಗೆ ಕ್ರಾನಿಕ್ ಕಿಡ್ನಿ ಡಿಸೀಜ್ ಇದ್ದು ಅದು ಸ್ಟೇಜ್ ಥ್ರೀ ಯಲ್ಲಿದೆ. ಕಿಡ್ನಿ ೫೦ ಪರ್ಸೆಂಟ್ ಕಾರ್ಯನಿರ್ವಹಿಸುತ್ತಿದೆ ಎಂದರು. ಯೂ ಮೀನ್ ಫಿಫ್ಟೀನ್? ಒನ್ ಫೈವ್ ? ಎಂದು ಕೇಳಿದೆ. “ನೋ ಫಿಫ್ಟೀ., ಫೈವ್ ಝೀರೋ” ಎಂದರು. ನೀವು ಬ್ಲಡ್ ಟೆಸ್ಟ್ ಮಾಡಿಸಿ, ಹೆಪಾಟಿಟಿಸ್ ನೆಗೆಟಿವ್ ಇದ್ದರೆ ಅದಕ್ಕೆ ಇಮ್ಮ್ಯೂನೈಝೇಶನ್ ಲಭ್ಯವಿದೆ ಎಂದರು. ಆದರೆ ಅದು ಪಾಸಿಟಿವ್ ಇತ್ತು. ಹೀಗಾಗಿ ನನ್ನೊಳಗೆ ಹೆಪಾಟಿಟಿಸ್-ಬಿ ಕೂಡ ಇದೆ ಎಂದಾಯ್ತು…!
ಈಗ ನಿಯಮಿತವಾಗಿ ಅವರು ಕೊಟ್ಟ ಮಾತ್ರೆ ತೆಗೆದುಕೊಳ್ಳುತ್ತೇನೆ, ಹೆಚ್ಚು ಪ್ರೋಟೀನ್ ಯುಕ್ತ ಆಹಾರ ಸೇವಿಸುವದಿಲ್ಲ. ಹುಳಿ, ಉಪ್ಪು, ಮಸಾಲೆ, ಕರಿದ ಪದಾರ್ಥ, ಬೇಕರಿ ಪದಾರ್ಥ ಕಡಿಮೆ ತಿನ್ನುತ್ತೇನೆ. ತೂಕ ಹೆಚ್ಚಾಗದಂತೆ ನೋಡಿಕೊಳ್ಳುತ್ತಿದ್ದೇನೆ. ರಕ್ತದೊತ್ತಡ ಹೆಚ್ಚಾಗದಂತೆ ಕಾಳಜಿ ವಹಿಸುತ್ತೇನೆ. ಕ್ರಿಯೇಟಿನಿನ್ ಟೂ ಅಥವಾ ಟೂ ಪಾಯಿಂಟ್ ಒನ್ ಇಷ್ಟರಲ್ಲೇ ಉಳಿದಿದೆ. ಬ್ಲಡ್ ಯೂರಿಯಾ ಕೂಡ ನಿಯಂತ್ರಣದಲ್ಲಿದೆ. ಮೂರು ತಿಂಗಳಿಗೊಮ್ಮೆ ಡಾ. ಮೋಗೆರ್ ಬಳಿ ಹೋಗಿ ರಕ್ತ, ಮೂತ್ರ ಪರೀಕ್ಷೆ ಮಾಡಿಸಿ “ಸರಿ ಇದೆ. ಇದನ್ನೇ ಮುಂದುವರಿಸಿ, ಮತ್ತೆ ಮೂರು ತಿಂಗಳ ನಂತರ ಬನ್ನಿ” ಎಂದು ಅವರು ಅನ್ನುವದನ್ನು ಕೇಳುತ್ತೇನೆ, ಮತ್ತೆ ಮೂರು ತಿಂಗಳ ನಂತರದಂತೆ ಈಗ ಎರಡು ಬಾರಿ ಹೋಗಿದ್ದೇನೆ.
ಈಗ ನೀವು ನನ್ನ ಕಾಯಿಲೆಗಳ ಪುರಾಣ ಪುಣ್ಯ ವಾಚನದ ಕೊನೆಯ ಹಂತದಲ್ಲಿದ್ದೀರಿ. ನಾನಿದನ್ನೆಲ್ಲ ಯಾಕೆ ಹೇಳಿದೆ? ಕಾಯಿಲೆಗಳಿಗೆ ಹೆದರಬೇಕಾಗಿಲ್ಲ ಎಂಬುದನ್ನು ಹೇಳಲು. ಡಾಕ್ಟ್ರುಗಳು ಇದ್ದಾರೆ ಎಂಬ ಭರವಸೆ ಇರಲಿ ಎಂದು ಹೇಳಲು. ನಿಜ ಎಲ್ಲ ಕ್ಷೇತ್ರಗಳಲ್ಲಿ ಭ್ರಷ್ಟರು ಅಪ್ರಾಮಾಣಿಕರು ಇರುವಂತೆ ವೈದ್ಯವೃತ್ತಿಯಲ್ಲಿರುವವರಲ್ಲೂ ಅಂಥವರು ಇದ್ದಾರೆ. ಬಹುಪಾಲು ಡಾಕ್ಟ್ರುಗಳು ಒಳ್ಳೆಯವರಿರುತ್ತಾರೆ. ಡಾಕ್ಟ್ರುಗಳಿಲ್ಲದ ಸ್ಥಿತಿಯನ್ನು ಕಲ್ಪಿಸಿಕೊಳ್ಳಿ..! ಹೆದರಿಕೆ ಆಗುತ್ತದೆ, ಅಲ್ಲವೇ? ಡಾಕ್ಟ್ರನ್ನು ನಂಬಬೇಕು. ದಾಸರು ಹೇಳಿಲ್ಲವೆ? ನಂಬಿ ಕೆಟ್ಟವರಿಲ್ಲವೋ ಅಂತ…!
ಅಶೋಕ ಶೆಟ್ಟರ್ ಕಾಲಂ : ಧನ್ಯವಾದಗಳು ಡಾಕ್ಟ್ರೆ…
ನಿಮಗೆ ಇವೂ ಇಷ್ಟವಾಗಬಹುದು…




ondu sanna novaadaroo eneno kalpanegalu mane madatve…
kelavomme intaha barahagala tonic beke beku
ಸರ್, ದೇವರು ಕಾಯಿಲೆಗಳ ಪ್ರಯೋಗಾತ್ಮಕ ಪರೀಕ್ಷೆಗೆ ನಿಮ್ಮ ಶರೀರವನ್ನು ಆಯ್ದುಕೊಂಡಂತಿದೆ. ಓದುತ್ತ ಓದುತ್ತ ಎಲ್ಲೋ ಕೊನೆಯಲ್ಲಿ ಇದೆಲ್ಲ “ ಇಂಥಹವರಿಗೆ” ಆಗಿದ್ದುದು ಎಂದು ಸಮಾರೋಪದ ಸಾಲನ್ನು ಬರೆಯುತ್ತೀರಿ ಎಂದು ಕಾಯುತ್ತಿದ್ದೆ. ಇದೆಲ್ಲ ಶೆಟ್ಟರ್ ಅನ್ನುವ ಒಬ್ಬ ವ್ಯಕ್ತಿಯ ದೇಹದಲ್ಲೆ ಆದದ್ದು ಅನ್ನುವ ಸತ್ಯ ಅರಗಿಸಿಕೊಳ್ಳಲು ಕಷ್ಟ,ನೋವು. ನಿರ್ಲಿಪ್ತ ದಾಟಿಯಲ್ಲಿ ಬರೆದಿದ್ದರೂ ನೀವು ಅನುಭವಿಸಿರುವ ದೈಹಿಕ ಮತ್ತು ಮಾನಸಿಕ ಯಾತನೆಗಳ ಅರಿವು ತಟ್ಟುತ್ತದೆ.
ಈ ಲೇಖನ ಒಬ್ಬ ಡಾಕ್ಟರ್ ಕಾಯಿಲೆಗಳ ಕುರಿತು ಬರೆವ ಲೇಖನಕ್ಕಿಂತ ಹೆಚ್ಚು ಧೈರ್ಯವನ್ನು ಕೊಡುತ್ತದೆ ಅನ್ನುವುದು ನಿಜ.ಡಾಕ್ಟರುಗಳನ್ನು ನಂಬಬೇಕು ಅಷ್ಟೆ, ಬೇರೆ ದಾರಿ ಯಾವುದಿದೆಯಯ್ಯಾ ….
ವೈದ್ಯರಿಂದ ವೈದ್ಯರಿಗೆ ಅಲೆಯುವ, ಅವರು ಕೊಡುವ ಹೊಸ ವರದಿ, ಹೊಸ ಪ್ರಯೋಗ, ಚಿಕಿತ್ಸೆಗಳಿಗಳಿಗೆ ಒಡ್ಡಿಕೊಳ್ಳುವ, ಫಲಿತಾಂಶಗಳಿಗೆ ಕಾಯುವ ಕ್ರಿಯೆಯೇ ನೋವಿನದು!
ಆರೋಗ್ಯವೇ ಭಾಗ್ಯ! ಆ ಭಾಗ್ಯ ನಿಮಗಿರಲಿ ಎಂದು ಹಾರೈಸುವೆ. ಸರ್!
Abba eshtella kashtagala saalu saalu … ivelladara naduveyoo mankaagada nimma sense of humour … great ashok ….
ಈ ಎಲ್ಲ ಹೆಣ್ಣುಮಕ್ಕಳು ಬರೆದ ಕಮೆಂಟುಗಳಿಗೆ “ಲೈಕ್ ಬಟನ್” ಒತ್ತಬೇಕೆಂದರೆ ಅದು “ಅವಧಿ”ಎಂಬ ಈ ಇಲ್ಲಿ ಇಲ್ಲವಲ್ಲಾ ಏನ್ಮಾಡೋಣ..:(
ನೀವು ಲೈಕ್ ಮಾಡಲೆಂದು ಬರೆದ ಕಾಮೆಂಟುಗಳಲ್ಲ ಸರ್, ಅವು! ನಿಮ್ಮನ್ನು ತಾವು `ಲೈಕ್’ ಮಾಡುತ್ತಾರೆಂದು ತಿಳಿಸುವ ಕಾಮೆಂಟುಗಳು! 🙂
‘ರುಕ್ಮಿಣಿ’, ‘ಲಲಿತ’, ‘ತ್ರಿವೇಣಿ’, ‘ಭಾರತಿ’ ಮತ್ತು ನೀವು ‘ಅಶೋಕ್’ – ಮೂರಕ್ಷರದ ಮೋಡಿ ಇದೆ ಇಲ್ಲಿ. 🙂
sir istella kastagala naduve sikkaagalella estu lavalavikeyind odaadteeri… ade nimma aarogyad gutta?