ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಶೋಕ ಶೆಟ್ಟರ್ ಕಾಲಂ : 'ದಾಟು' ಮತ್ತು 'ಮಾಗಿಯ ಕಾಲ'


ಧಾರವಾಡದಲ್ಲಿ ಆವಿಷ್ಕಾರ್ ಸಾಂಸ್ಕೃತಿಕ ಸಂಘಟಣೆ ತನ್ನ ಜನಪರ ಹೋರಾಟಗಳ ಭಾಗವಾಗಿ ಕಳೆದ ಹತ್ತು ವರ್ಷದಿಂದ ಪ್ರತಿವರ್ಷ ಸಾಂಸ್ಕೃತಿಕ ಜನೋತ್ಸವ ನಡೆಸಿಕೊಂಡು ಬರುತ್ತಿದೆ.
ಜಿಲ್ಲಾಡಳಿತ ನಡೆಸುವ ಅದ್ದೂರಿಯ ಧಾರವಾಡ ಉತ್ಸವ, ಖಾಸಗಿ ಟ್ರಸ್ಟೊಂದು ನಡೆಸುವ ಗೊತ್ತು-ಗುರಿಗಳಿಲ್ಲದ ಸಾಹಿತ್ಯ ಸಂಭ್ರಮದಂಥ ಕಾರ್ಯಕ್ರಮಗಳ ನಡುವೆ ಪುಟ್ಟ ಪುಟ್ಟ ಮಕ್ಕಳನ್ನು, ಕಾಲೇಜು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಹಾಡು, ನೃತ್ಯ ನಾಟಕ, ಚಲನಚಿತ್ರ ಪ್ರದರ್ಶನ, ಚರ್ಚೆ, ಸಂವಾದಗಳಿಂದ ಕೂಡಿದ ಜನೋತ್ಸವ ಸಮಾಜಮುಖಿಯಾದ ಆಶಯಗಳನ್ನು, ಪ್ರಬುದ್ಧ ಅಭಿರುಚಿಗಳನ್ನು ನೆಲೆಗೊಳಿಸುವ ಕೆಲಸದಲ್ಲಿ ನಿರತವಾಗಿದೆ.
ಇದೇ (೨೦೧೪ ಫೆಬ್ರವರಿ) ೨೩ ರಿಂದ ೨೬ ರವರೆಗೆ ನಡೆದ ಹನ್ನೊಂದನೇ ಜನೋತ್ಸವದಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ “Life is Beautiful” ಹಾಗೂ “ದಾಟು” ಮತ್ತು ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಬಯೋಟೆಕ್ನಾಲಜಿ ಅಡಿಟೋರಿಯಂನಲ್ಲಿ “ಮಾಗಿಯ ಕಾಲ” ಎಂಬ ಚಲನಚಿತ್ರಗಳ ಪ್ರದರ್ಶನ ನಡೆಯಿತು. “ಮಾಗಿಯ ಕಾಲ” ಪ್ರದರ್ಶನದ ನಂತರ ನಡೆದ ಸಂವಾದದಲ್ಲಿ “ದಾಟು” ಚಿತ್ರಕ್ಕೆ ಸಂಭಾಷಣೆ ಬರೆದ ಲಕ್ಷ್ಮೀಪತಿ ಕೋಲಾರ ಮತ್ತು ನಾನು ಭಾಗವಹಿಸಿದ್ದೆವು. ಅಲ್ಲಿ ಯಥಾಪ್ರಕಾರ ಅದ್ದೂರಿ ಕಮರ್ಶಿಯಲ್ ಸಿನಿಮಗಳ ನಡುವೆ ಪರ್ಯಾಯ ಸಿನಿಮಾಗಳು ಎಂದು ಗುರುತಿಸಲಾಗುವ ಇಂಥ ಕಲಾತ್ಮಕ, ಸಾಮಾಜಿಕ ಸಂವೇದನೆಯ, ಕಡಿಮೆ ಬಜೆಟ್ಟಿನ ಚಿತ್ರಗಳು ಸ್ಪರ್ಧಿಸುವಲ್ಲಿರುವ ತೊಂದರೆಗಳು, ಅವುಗಳ ವಿತರಣೆಗೆ ವ್ಯವಸ್ಥೆ ಇಲ್ಲದಿರುವದು, ಅವು ಜನರನ್ನು ತಲುಪಲಾಗದಿರುವ ಸಂಕಟ ಎಲ್ಲ ಚರ್ಚಿತವಾದವು. ಆ ವಿವರಗಳಿಗೆ ಹೊಗದೇ ನಾನು “ದಾಟು” ಮತ್ತು “ಮಾಗಿಯ ಕಾಲ” ಎಂಬೆರಡು ಚಿತ್ರಗಳ ಕುರಿತು ಕೆಲ ವಿಚಾರಗಳನ್ನು ಹೇಳುವೆ.
ಇವುಗಳಲ್ಲಿ “ದಾಟು” ಪನೋರಮಾಗೆ ಆಯ್ಕೆಯಾಗಿದ್ದ, ರಾಜ್ಯಪ್ರಶಸ್ತಿ ಪಡೆದ, ೨೦೦೮ರ ಸಾಲಿನ ಝಿಂಬಾಬ್ವೆಯ IIFFW ಪ್ರಶಸ್ತಿ ವಿಜೇತ ಚಿತ್ರವಾಗಿದ್ದರೆ, “ಮಾಗಿಯ ಕಾಲ” ಇತ್ತೀಚೆಗಷ್ಟೆ ಧಾರವಾಡದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ೨೦೧೦-೧೧ರ ಸಾಲಿನ ಶ್ರೇಷ್ಠ ಚಿತ್ರವೆಂದು ರಾಜ್ಯ ಪ್ರಶಸ್ತಿ ಪಡೆಯಿತು. ಇವೆರಡೂ ಚಿತ್ರಗಳ ನಿರ್ದೇಶಕರು ಕೆ. ಶಿವರುದ್ರಯ್ಯ. ಮೊದಲಾಗಿ ನನಗನಿಸಿದ್ದೆಂದರೆ ಒಂದು ಚಿತ್ರ (ದಾಟು) ಸಂಪೂರ್ಣ ಗ್ರಾಮೀಣ ಹಿನ್ನೆಲೆಯದಾಗಿದ್ದರೆ ಇನ್ನೊಂದು (ಮಾಗಿಯ ಕಾಲ) ನಗರ ಬದುಕಿನ ಹಿನ್ನೆಲೆಯದು. ಹೀಗೆ ಒಂದರಿಂದೊಂದು ಭಿನ್ನವಾದ ಎರಡೂ ಪ್ರಪಂಚಗಳನ್ನವರು ಅಷ್ಟೇ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
“ದಾಟು” ಜಾತಿ ಕಟ್ಟುಪಾಡುಗಳ ಮತ್ತು ಧಾರ್ಮಿಕ ಸಂಪ್ರದಾಯಗಳ ಹಿಡಿತ ಇನ್ನೂ ಬಲವಾಗಿದ್ದ ಸಂದರ್ಭವೊಂದರ ಗ್ರಾಮೀಣ ಸಮಾಜದಲ್ಲಿ ಮನುಷ್ಯ ಸಂಬಂಧಗಳ, ಮಾನವೀಯ ಮೌಲ್ಯಗಳ ಮತ್ತು ಹೆಣ್ಣಿನ ಘನತೆಯ ಪ್ರಜ್ಞೆಯು ಪರಂಪರೆಯ ಪರಿಗಣನೆಗಳನ್ನು ಧಿಕ್ಕರಿಸುವ ಕಥಾನಕವನ್ನು ಹೊಂದಿದೆ. ಸರಕಾರದ ಪರವಾಗಿ ಗ್ರಾಮದಲ್ಲಿ ಕಂದಾಯ ಇತ್ಯಾದಿ ವಸೂಲು ಮಾಡುವ, ಇನ್ನುಳಿದಂತೆ ಅದೇ ಗ್ರಾಮದ ಅಗ್ರಹಾರದ ಭಾಗವಾದ ಓರ್ವ ಶಾನುಭೋಗ, ಆತನ ಮಡದಿ, ಒಬ್ಬ ಮಗ, ತಾಯಿ ಹಾಗೂ ಸೋದರಿ ಇಷ್ಟು ಜನರ ಪುಟ್ಟ ಕುಟುಂಬವೊಂದು ಇದ್ದುದರಲ್ಲೇ ಉಂಡುಟ್ಟು ಸುಖವಾಗೇ ಇರುತ್ತದೆ.
ಆದರೆ ಎರಡು ವರ್ಷ, ಮೂರು ವರ್ಷ ಮತ್ತು ಒಬ್ಬಿಬ್ಬರು ಆರು ವರ್ಷ ಹೀಗೆ ಕಂದಾಯ ಬಾಕಿ ಉಳಿಸಿಕೊಂಡಿದ್ದು, ಅವರು ಇಂದು ಕೊಡುತ್ತೇವೆ ನಾಳೆ ಕೊಡುತ್ತೇವೆ ಎಂದು ಹೇಳುವದನ್ನು ಶಾನುಭೋಗರು ಕೇಳಿಕೊಂಡಿರುವದನ್ನು ಬಿಟ್ಟು ಬೇರೆ ದಾರಿ ಇಲ್ಲ ಎಂಬಂತಿರುತ್ತದೆ. ಏಕೆಂದರೆ ಮಳೆ ಬೆಳೆ ಇಲ್ಲದ ಸ್ಥಿತಿ ಶಾನುಭೋಗರಿಗೂ ಪರಿಚಯ ಇದ್ದದ್ದೇ. ಆದರೆ ಅದನ್ನು ವಸೂಲು ಮಾಡಿದರೆ ತಾನೇ ಸರಕಾರ ತನ್ನಂಥ, ಶಾನುಭೋಗರಂಥ ನೌಕರರಿಗೆ ಸಂಬಳ ಕೊಡುವ ಸ್ಥಿತಿಯಲ್ಲಿರುವದು ಎನ್ನುವ ಮೇಲಧಿಕಾರಿ ಕಂದಾಯ ವಸೂಲಾತಿಗೆ ಸಂಬಂಧಿಸಿ ಶಾನುಭೋಗರ ಅಸಾಮರ್ಥ್ಯದ ಕುರಿತು ಆಕ್ಷೇಪವೆತ್ತಿ ಪಂಚಾಯ್ತಿ ಸಭೆಗೆ ಏರ್ಪಾಡು ಮಾಡಿ, ಕಂದಾಯ ಬಾಕಿ ಕೊಡದಿದ್ದರೆ ಕಾನೂನಾತ್ಮಕ ಕ್ರಮಗಳ ಕುರಿತು ತಾನು ಸ್ವತ: ಬಂದು ಜನರನ್ನು ಎಚ್ಚರಿಸುವದಾಗಿ ಹೇಳಿದಾಗ ಶಾನುಭೋಗರು ಒಂದು ಸಭೆ ನಡೆಸಲೇ ಬೇಕಾಗುತ್ತದೆ.
ದೀರ್ಘಾವಧಿ ಬಾಕಿ ಉಳಿಸಿಕೊಂಡವರಲ್ಲಿ ಓರ್ವರು ಅಗ್ರಹಾರದ ಹಿರಿಯರು. ಯಾವುದೋ ಹಳೆಯ ಮುನಿಸಿನಿಂದ ಹಲವಾರು ವರ್ಷಗಳಿಂದ ಶಾನುಭೋಗರ ಮನೆಯ ಹೊಸ್ತಿಲನ್ನೂ ತುಳಿದವರಲ್ಲ. ಆದರೆ ಅವರ ಮಗಳು ಮಾತ್ರ ಮನೆ ಬಾಗಿಲಿಗೆ ಬಳೆಗಾರ ಬಂದರೆ ಬಾ ಅಲ್ಲಿ ನಮ್ಮ ಶಾನುಭೋಗರ ಹೆಂಡತಿಯ ಕೈಗುಣ ಚೆನ್ನಾಗಿದೆ, ಅವರಿಂದ ಬೋಣಿ ಮಾಡಿಸೋಣ ಎಂದು ಅವರ ಮನೆಗೆ ಕರೆದೊಯ್ಯುವಂಥವಳು, ತಂದೆ ಆಕ್ಷೇಪಿಸಿದರೂ ಲೆಕ್ಕಿಸದೇ. ಸಭೆಯಲ್ಲಿ ಬಾಕಿ ಉಳಿಸಿಕೊಂಡಿರುವ ಕುರಿತು ಅವರನ್ನು ಟೀಕಿಸುವ ಅಧಿಕಾರಿ ಒಂದು ವಾಯದೆಯೊಳಗೆ ಬಾಕಿ ತೀರಿಸದಿದ್ದರೆ ಸಾಮಾನು ಜಪ್ತಿ ಇತ್ಯಾದಿ ಮಾತಾಡಿ ಎಲ್ಲರ ನಡುವೆ ಅವರಿಗೆ ಮುಖಭಂಗವಾಗುತ್ತದೆ. ಆದರೆ ಶಾನುಭೋಗರದು ಆ ಅಗ್ರಹಾರದ ಹಿರಿಯರ ಪರ ವಾದಿಸಲಾಗದ ಅಸಹಾಯಕತೆ.
ಇತ್ತ ಒಂದು ದಿನ ಶಾನುಭೋಗರ ಹೆಂಡತಿ ದೇವರ ಕೋಣೆಯನ್ನು ಸ್ವಚ್ಛ ಮಾಡುತ್ತಿರಬೇಕಾದರೆ ಒಂದು ಬಟ್ಟೆಯ ಗಂಟು ಕಂಡು ಅದರಲ್ಲೇನಿದೆ ಎಂದು ನೋಡಿದರೆ ಒಂದು ಜೊತೆ ಕಾಲ್ಗಡಗಗಳಿರುತ್ತವೆ. ಅವು ಶಾನುಬೋಗರ ಮನೆತನದಲ್ಲಿ ಈ ಮುಂಚಿನ ತಲೆಮಾರಿನ ಸೊಸೆಯೊಬ್ಬಳ ಕಾಲ್ಗಡಗಗಳಾಗಿರುತ್ತವೆ. ಪತಿ ಸತ್ತಾಗ ಸಹಗಮನ ಮಾಡಿ ಮಹಾಸತಿಯಾಗಿ ಹೋದವಳಾಕೆ ಎನ್ನುತ್ತಾಳೆ ಅತ್ತೆ. ಆಗಿಂದ ಅವಳನ್ನು ದೇವತೆ ಎಂದು ಪರಿಭಾವಿಸಿ ಅವಳ ಪೂಜೆಗೊಂದು ಮಾಸ್ತಿಕಟ್ಟೆ ನಿರ್ಮಿಸಿದಾಗಿನಿಂದ ಯಾರೂ ಮುಟ್ಟಿರದಿದ್ದ ಆ ಕಡಗಗಳನ್ನು ತನ್ನ ಅತ್ತಿಗೆ ಮುಟ್ಟಿದ್ದು ನೋಡಿ ಅವಳ ನಾದಿನಿ (ಗಂಡನ ಸೋದರಿ) ಅಪಚಾರವಾಯಿತು, ಮೈಲಿಗೆ ಆಯಿತು, ಏನು ಕೇಡು ಕಾದಿದೆಯೋ ಎಂದು ತಾಯಿಯನ್ನು ಕರೆದು ತೋರಿ ಅದನ್ನೇ ದೊಡ್ಡದು ಮಾಡಿದಾಗ ಶಾನುಬೋಗರ ತಾಯಿ ಅದರ ಪ್ರಾಯಶ್ಚಿತ್ತವಾಗಿ ಇಪ್ಪತ್ತೊಂದು ದಿನ ಪ್ರತಿನಿತ್ಯ ಮುಂಜಾನೆ ಹೊಳೆಯಲ್ಲಿ ಮಿಂದು ಒದ್ದೆಬಟ್ಟೆಯಲ್ಲಿ ಮಾಸ್ತಿಕಟ್ಟೆಯ ಪೂಜೆ ಮಾಡುವಂತೆ ಸೊಸೆಗೆ ಸೂಚಿಸುತ್ತಾಳೆ.

ನಾದಿನಿಗೆ ತನ್ನ ಅತ್ತಿಗೆ ಎಂದರೆ ಅಷ್ಟಕ್ಕಷ್ಟೇ. ಈ ಮುಂಚೆ ಮನೆಯ ಆಳೊಬ್ಬನ ಹೆಂಡತಿ ಹಾದರ ಮಾಡಿ ಓಡಿಹೋಗಿ ಹಾಗೆ ಆಕೆಯನ್ನು ಕರೆದುಕೊಂಡು ಹೋದವನು ವಂಚಿಸಿದಾಗ ಆತನ ಪಿಂಡವನ್ನು ಹೊಟ್ಟೆಯಲ್ಲಿ ಹೊತ್ತು ಆಕೆ ಮರಳಿದಾಗ ಆಕೆಯನ್ನು ನಿಂದಿಸಿ ಮನೆಯಲ್ಲಿ ಕರೆದುಕೊಳ್ಳಲು ಈ ನಾದಿನಿ ನಿರಾಕರಿಸಿರುತ್ತಾಳೆ. ಆದರೆ ತಪ್ಪಿಗೆ ಪಶ್ಚಾತ್ತಾಪ ಪಟ್ಟು ಬಂದು ಕ್ಷಮೆ ಕೇಳಿದ ಆಕೆಯನ್ನು ತಿರಸ್ಕರಿಸುವದು ನ್ಯಾಯವಲ್ಲ ಎಂದು ಅತ್ತಿಗೆ ಗಂಡನಿಗೆ ಹೇಳಿ, ಆ ಕೆಲಸದಾಕೆಯ ಗಂಡನೂ ಆಕೆಯನ್ನು ಕ್ಷಮಿಸಿ ಆಕೆ ತನ್ನೊಂದಿಗಿರಲು ಒಪ್ಪಿದಾಗ ಈ ನಾದಿನಿ ಅನಿವಾರ್ಯವಾಗಿ ಸುಮ್ಮನಾಗಿರುತ್ತಾಳೆ.
ಒಂದು ಸಲ ಹೀಗೆ ಹೊಳೆಯಲ್ಲಿ ಮಿಂದು ಒದ್ದೆಬಟ್ಟೆಯಲಿ ಮಾಸ್ತಿಕಟ್ಟೆಯ ಪೂಜೆ ಮಾಡುತ್ತಿದ್ದ ಶಾನುಬೋಗರ ಹೆಂಡತಿಯ ಮೈಸಿರಿಯನ್ನು ಒಬ್ಬ ಆಗಂತುಕ ನೋಡುತ್ತಾನೆ ಆತ ಪಕ್ಕದ ರಾಜ್ಯದಿಂದ ತನ್ನ ಸಹೋದರ ಮತ್ತು ತಂದೆಯೊಂದಿಗೆ ಬಟ್ಟೆ ಬರೆ ವ್ಯಾಪಾರ ಮಾಡಲೆಂದು ಹಳ್ಳಿಯಲ್ಲಿ ಬೀಡು ಬಿಟ್ಟ ಒಬ್ಬ ಮುಸ್ಲಿಂ ಯುವಕ. ಶಾನುಬೋಗರ ಹೆಂಡತಿಯ ಕೈಗುಣದ ಖ್ಯಾತಿಯಿಂದಾಗಿ ಅವಳಿಂದಲೇ ಬೋಣಿ ಮಾಡಿಸಲಾಗುತ್ತದೆ. ಮುಂಜಾನೆ ಆಕೆ ಒದ್ದೆ ಬಟ್ಟೆಯಲ್ಲಿ ಪೂಜೆ ಮಾಡುವದನ್ನು ಆತ ನೋಡುವದು ಮುಂದುವರಿದಿರುತ್ತದೆ. ತಾವು ಊರು ಬಿಡುವ ಮುನ್ನಾದಿನ ತಂದೆಯನ್ನು ಬಸ್ಸಿಗೆ ಬರುವಂತೆ ಹೇಳಿ ಕಳಿಸಿ ಆತ ಶಾನುಬೋಗರ ಹೆಂಡತಿಯನ್ನು ಬಾಯಿಕಟ್ಟಿ ಬಲಾತ್ಕಾರವಾಗಿ ಹೊತ್ತೊಯ್ದು ತನ್ನೂರಿಗೆ ಕೊಂಡೊಯ್ಯುತ್ತಾನೆ. ಆತನಿಗಾಗಲೇ ಮದುವೆಯಾಗಿದೆ. ಅಪಹರಿಸಿ ತಂದವಳನ್ನು ಇಸ್ಲಾಂ ಗೆ ಮತಾಂತರಿಸಿ ಮದುವೆಯಾಗುವ ಆತನ ಯೋಜನೆಗೆ ಸ್ಥಳೀಯ ಮೌಲ್ವಿ ಒಲ್ಲದ ಮನಸಿನಿಂದಲೇ ಒಪ್ಪುತ್ತಾನೆ.
ಮತಾಂತರಕ್ಕೆ ಅವಳ ಒಪ್ಪಿಗೆ ಇರುವ ಕುರಿತು ಆಕೆ ಉಚ್ಛರಿಸಬೇಕಾದದ್ದನ್ನು ಆಕೆ ಉಚ್ಛರಿಸದೇ ಇವಳನ್ನು ಮದುವೆಯಾಗಬಯಸಿದವನ ಹೆಂಡತಿ ಮುಸುಕು ಹಾಕಿಕೊಂಡು ಕುಳಿತವಳು ಹೇಳುತ್ತಾಳೆ. ಅಲ್ಲಿಗೆ ಅದು ಮುಗಿದು ಮರುದಿನ ಮದುವೆ ಆಗಬೇಕಿರುವ ಗಂಡು ಗಂಡು ಮಗ ಇನ್ನಿತರ ತನ್ನ ಗೆಳೆಯರ ಜೊತೆ ಹೊರಗೆಲ್ಲೋ ಹೋಗಿ ಪಾರ್ಟಿ ಮಾಡುತ್ತಿರಬೇಕಾದರೆ ಅವರ ತಂದೆ ಮಜೀದ್ ಖಾನ್ ಮನೆಗೆ ಮರಳುತ್ತಾನೆ. ಸೊಸೆಯಿಂದ ವಿಷಯ ತಿಳಿದ ಅವನು ತನ್ನ ಮಕ್ಕಳ ವರ್ತನೆಯಿಂದ ನೊಂದು ಕ್ಷಮಾಪಣೆ ಕೇಳಿ ಶಾನುಭೋಗನ ಹೆಂಡತಿಗೆ ಒಂದು ಬುರ್ಖಾ ತೊಡಿಸಿ ಗುಪ್ತವಾಗಿ ಹೊಳೆ ದಾಟಿಸಿ ಅವಳೂರ ಗಡಿವರೆಗೆ ತಂದು ಅವಳನ್ನು ಬಿಡುತ್ತಾನೆ.
ತಾನು ಮತಾಂತರವಾಗಿಲ್ಲ ಎಂಬುದನ್ನೇನೋ ಆಕೆ ಗಂಡನಿಗೆ ಮನದಟ್ಟು ಮಾಡುತ್ತಾಳೆ. ಆದರೆ ಇದು ಬರಿದೇ ಗಂಡ ಹೆಂಡತಿಯರ ನಡುವಿನ ವಿಷಯವಲ್ಲ. ಅನ್ಯಮತದವರ ಮನೆಯಲ್ಲಿದ್ದು ಬಂದ ಅವಳನ್ನು ಒಳಗೆ ಸೇರಿಸುವದು ಹೇಗೆ? ಇದು ನಾದಿನಿಯ ತಕರಾರು. ಅಗ್ರಹಾರದ ಹಿರಿಯರನ್ನು ಕೇಳಬೇಕು, ಇಲ್ಲವೆಂದರೆ ಜಾತಿ ಬಹಿಷ್ಕಾರದ ತೂಗುಗತ್ತಿ. ಅಗ್ರಹಾರದ ಹಿರಿಯರೋ ಅದೇ ಶಾನುಬೋಗರ ಕುರಿತು ಒಂದು ಬಗೆಯ ಕುನಸು ಉಳ್ಳವರು. ಅವರು ಸೂಚಿಸುವ ಪರಿಹಾರ ಬಹಳ ಕ್ರೂರವಾಗಿರುತ್ತದೆ. ಮನೆಯ ಗೌರವ ಕಾಪಾಡಲು ಆಕೆ ಜೀವತ್ಯಾಗ ಮಾಡುವದಾದರೆ ಮುಂಚಿನ ತಲೆಮಾರಿನ ಆ ಸೊಸೆಯನ್ನು ದೈವತ್ವಕ್ಕೇರಿಸಿ ಪೂಜಿಸಿದಂತೆ ಪೂಜಿಸುತ್ತೇವೆ ಎಂದು ಅತ್ತೆ ಹೇಳಿದಾಗ ಗಂಡ ಪ್ರತಿಭಟಿಸುತ್ತಾನೆ. ಊರ ಗೌಡ ಈ ಅನ್ಯಾಯವನ್ನು ಖಂಡಿಸುತ್ತಾನೆ ಆದರೆ ಇದು ಬ್ರಾಹ್ಮಣರ ಆಂತರಿಕ ವಿಷಯವೂ ಆಗಿರುವದರಿಂದ ಆತ ಬಹಳ ಮುಂದುವರಿಯಲಾರ.
ಆಗ ಅಗ್ರಹಾರದ ಬ್ರಾಹ್ಮಣವರ್ಗದಲ್ಲೇ ಒಂದು ಅಂತ:ಸ್ಸಾಕ್ಷಿಯ ಧ್ವನಿ ಹೊಮ್ಮುತ್ತದೆ. ಶಾನುಭೋಗರ ಹೆಂಡತಿಯ ಗುಣಸ್ವಭಾವ ನಮಗೆಲ್ಲ ಗೊತ್ತಿರುವಾಗ, ಸಂಪ್ರದಾಯದ ಉರುಳಿನಲ್ಲಿ ಸಿಗಿಸುವದು ಯೋಗ್ಯವಲ್ಲ, ಮನುಷ್ಯನಿಗಾಗಿ ಸಂಪ್ರದಾಯಗಳೇ ಹೊರತು ಸಂಪ್ರದಾಯಗಳಿಗಾಗಿ ಮನುಷ್ಯನಲ್ಲ ಎಂಬ ವಿವೇಕದ ಧ್ವನಿ ಇನ್ನೊಬ್ಬ ಬ್ರಾಹ್ಮಣ ಹಿರಿಯನಿಂದ ಬರುವದರೊಂದಿಗೆ ಶಾನುಬೋಗರ ಹೆಂಡತಿಯ ಇಚ್ಛೆ ದಿಟ್ಟವಾಗುತ್ತದೆ. ಈ ಮಧ್ಯೆ ಮಾಸ್ತಿದೇವತೆಯಾಗಿ ಪೂಜಿಸಲ್ಪಡುತ್ತಿದ್ದ ಹಳೆಯ ತಲೆಮಾರಿನ ಸೊಸೆಯದು ಸ್ವ ಇಚ್ಛೆಯ ಸಹಗಮನವಲ್ಲ ಅದು ಬಲವಂತದ್ದು ಎಂಬುದು ಒಬ್ಬ ವಯೋವೃದ್ಧ ಬ್ರಾಹ್ಮಣ ವಿಧವೆಯಿಂದ ಆಕೆಗೆ ಗೊತ್ತಾಗಿರುತ್ತದೆ. ಆಕೆ ನಡೆದು ಪೂಜಾಗೃಹಕ್ಕೆ ಹೋಗಿ ಅತ್ತೆ ಮತ್ತು ನಾದಿನಿ ನೋಡುತ್ತಿರುವಂತೆಯೇ ಅದೇ ನಿಷಿದ್ಧ ಕಾಲ್ಗಡಗಗಳನ್ನು ಧರಿಸುತ್ತಾಳೆ. ಮಗನನ್ನು ಕರೆದುಕೊಂಡು ಮನೆಯಿಂದ ಹೊರಡುತ್ತಾಳೆ. ಮಜೀದ್ ಖಾನ್ ಇನ್ನೂ ಊರ ಗಡಿ ದಾಟಿರುವದಿಲ್ಲ, ಜಾತಿ ಧರ್ಮಗಳಿಂದ ಮುಕ್ತವಾಗಿ ಒಂದು ಸೂರ್ಯೋದಯವನ್ನು ನೋಡಲು ಆಕೆ ಬರುತ್ತಾಳೆ. ಸೂರ್ಯರಶ್ಮಿಗಳ ಹೊಳಪಿನಲ್ಲಿ ಮಜೀದ್ ಖಾನ್ ಹಿಂದಿರುಗಿ ಅವಳತ್ತ ನೋಡುತ್ತಾನೆ.
ಸ್ವಲ್ಪ ಅತ್ತಿತ್ತ ವಾಲಿದರೂ ಅಪಾರ್ಥಕ್ಕೆಡೆಯಾಗಬಹುದಾದ ಈ ಕಥೆ ಕಾಮವಾಂಛೆ, ಅಮಾನವೀಯ ಸಂಪ್ರದಾಯನಿಷ್ಠೆಗಳನ್ನು ಜಾತಿ ಧರ್ಮಕ್ಕೆ ಹೊರತಾದ ಬರಿದೇ ವ್ಯಕ್ತಿವಿಶಿಷ್ಟ ಲಕ್ಷಣಗಳನ್ನಾಗಿ ನೋಡುವಲ್ಲಿ ಗೆದ್ದಿದೆ. ಒಳಿತು ಕೆಡಕು ಇವು ಜಾತಿ ಅಥವ ಧರ್ಮವಿಶಿಷ್ಟವಲ್ಲವೆಂಬುದು ಬಲಾತ್ಕಾರವಾಗಿ ಹೊತ್ತೊಯ್ದ ಮುಸ್ಲಿಂ ಯುವಕನ ತಂದೆಯೇ ಆಕೆಯನ್ನು ಮರಳಿ ಊರಿಗೆ ತಲುಪಿಸುವದರಲ್ಲಿ ಒಂದು ನೆಲೆಯಲ್ಲಿ ವ್ಯಕ್ತವಾದರೆ ಬ್ರಾಹ್ಮಣರಲ್ಲೇ ಬಹುಪಾಲು ಜನರ ಅಭಿಪ್ರಾಯ ಸಂಪ್ರದಾಯನಿಷ್ಠವಾಗಿ ಅಮಾನವೀಯವಾದಾಗ ಅದರಲ್ಲೇ ಒಂದು ವಿವೇಕದ ಧ್ವನಿ ಮೊಳಗುವದರಲ್ಲಿ ಇನ್ನೊಂದು ನೆಲೆಯಲ್ಲಿ ವ್ಯಕ್ತವಾಗುತ್ತದೆ.
ಇನ್ನೊಂದು ಚಿತ್ರ, “ಮಾಗಿಯ ಕಾಲ”. ಇದು ನಗರದ ಕತೆ, ನಗರೀಕರಣದ ಕತೆ, ಜಾಗತೀಕರಣದ ವಿಲಕ್ಷಣ ವರ್ತುಲದಲ್ಲಿ ಸಿಕ್ಕು ಮನುಷ್ಯ ಸಂಬಂಧಗಳು ಶಿಥಿಲವಾದ ಕತೆ. ವೃತ್ತಿಯಿಂದ ಆರ್ಕಿಟೆಕ್ಟ್ ಆದ ಒಬ್ಬ ನವಬೌದ್ಧ, (ಹಾಗೆ ವಾಚ್ಯವಾಗಿ ಹೇಳಿರದಿದ್ದರೂ, ದಲಿತನಾದ) ಒಬ್ಬ ಯುವಕ ಬಾಲ್ಯದಲ್ಲೇ ತನ್ನ ತಂದೆತಾಯಿಯನ್ನು ಕಳೆದುಕೊಂಡು ಕೊನೆಗೆ ತನ್ನ ಕಾರ್ಯಕ್ಷೇತ್ರದಲ್ಲಿ, ಧರ್ಮದಿಂದ ಕ್ರಿಶ್ಚಿಯನ್ ಆದ ತನ್ನ ಬಾಸ್ ನಲ್ಲೇ ತಂದೆ-ತಾಯಿ, ಗೆಳೆಯ, ಮಾರ್ಗದರ್ಶಕ ಎಲ್ಲರನ್ನೂ ಕಂಡುಕೊಂಡು ಆಪ್ತತೆಯನ್ನು ಅನುಭವಿಸುತ್ತ ನೆಮ್ಮದಿಯಿಂದಿರುವಾಗ ಆತನಿಗೆ ಆಘಾತವೆಂಬುದು ತನ್ನ ಪಾಲಿಗೆ ಎಲ್ಲ ಆಗಿದ್ದ ಬಾಸ್ ನ ಸಾವಿನ ರೂಪದಲ್ಲೆರಗುತ್ತದೆ. ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡು ಆತ ಖಿನ್ನನಾಗಿದ್ದಾಗ ಬೌದ್ಧ ಗುರು ಬಂತೇಜಿ ಆತನಿಗೆ ಒಂದು ಪರಿಹಾರ ಸೂಚಿಸುತ್ತಾರೆ:
ವೃದ್ಧಾಶ್ರಮದಿಂದ ಯಾರನ್ನಾದರೂ ತಂದೆ-ತಾಯಿ ಎಂದು ದತ್ತು ಪಡೆದು ಪೋಷಿಸು. ಆ ಪ್ರಕಾರ ಆತ ಛಾಯಾಚಿತ್ರಗ್ರಾಹಕ ಗೆಳೆಯನೊಬ್ಬನೊಂದಿಗೆ ವೃದ್ಧಾಶ್ರಮಕ್ಕೆ ಹೋದಾಗ ಜಾಗತೀಕರಣದ ಸೈಡ್ ಇಫೆಕ್ಟ್ ಗಳಂತಿರುವ ವೃದ್ಧೆಯರು ವೃದ್ಧರ ಒಂದು ಲೋಕವೇ ಅನಾವರಣಗೊಳ್ಳುತ್ತದೆ. ಪೀತಾಂಬರಂ ಎಂಬ ಒಬ್ಬ ವ್ಯಕ್ತಿ ಮತ್ತು ವೃದ್ಧಾಶ್ರಮದಲ್ಲೇ ಅವನಿಗೆ ಜೊತೆಗಾತಿಯಾಗಿದ್ದ ಒಬ್ಬ ಮಹಿಳೆ ಇವರನ್ನು ಆತ ತನ್ನ ಮಾತಾ-ಪಿತರೆಂದು ಆಯ್ಕೆ ಮಾಡಿಕೊಂಡು ಕರೆ ತರುತ್ತಾನೆ. ನಂತರ ತನ್ನ ಛಾಯಾಗ್ರಾಹಕ ಗೆಳೆಯನ ತಂಗಿಯ ಜೊತೆಗೇ ಆತನ ಮದುವೆಯೂ ಆಗುತ್ತದೆ. ಇಲ್ಲಿ ಕತೆ ಸಣ್ಣ ಪುಟ್ಟ ನಾಟಕೀಯ ತಿರುವುಗಳನ್ನು ಪಡೆಯುತ್ತದೆ.
ಪೀತಾಂಬರಂ ಗೆ ಒಂದು ಹಿನ್ನೆಲೆ ಇರುತ್ತದೆ. ಆತ ಒಂದು ಅಪರಾಧದಲ್ಲಿ ಆರೋಪಿಯಾಗಿ ಜೈಲಿನಲ್ಲಿದ್ದವನು. ಅವನ ಗೆಳೆಯ ಕರಿಯಪ್ಪ ಮತ್ತು ಆತ ಕುದುರೆ ರೇಸಿನ ಟಿಕೆಟ್ ಕೌಂಟರ್ ನ ನೌಕರರು. ಜಾಕಿಗಳ ಜೊತೆ ಶಾಮೀಲಾಗಿ ಹಣ ಮಾಡುತ್ತಾರೆ. ಒಂದು ದಿನ ದುರಾಶೆಗೆ ಬಿದ್ದು ಕೌಂಟರ್ ನಲ್ಲಿ ಸಂಗ್ರಹವಾದ ಎಲ್ಲ ಹಣವನ್ನೂ ಒಂದು ಪೂರ್ವನಿರ್ಧರಿತ ಕುದುರೆಯ ಮೇಲೆ ಹೂಡುತ್ತಾರೆ. ಇವರ ದುರಾದೃಷ್ಟಕ್ಕೆ ಆ ಕುದುರೆ ಅಂದೇ ಮುಗ್ಗರಿಸುತ್ತದೆ. ಇವರ ಬಾನಗಡಿ ಗೊತ್ತಾಗಿ ಜೈಲಾಗುತ್ತದೆ.
ಪೀತಾಂಬರಂ ನನ್ನು ದತ್ತು ತಂದೆಯಾಗಿ ಪಡೆದ ಯುವಕ ತನ್ನದೊಂದು ಪ್ರೊಜೆಕ್ಟ್ ಪೂರ್ತಿಯಾದ ಸಂತೋಷಕ್ಕೆ ಒಂದು ಪಾರ್ಟಿ ಇಟ್ಟುಕೊಂಡಾಗ ಅಲ್ಲಿಗೆ ಬಂದ ಅವನ ಸ್ನೇಹಿತ, ಪೋಲಿಸ್ ಅಧಿಕಾರಿ ಪೀತಾಂಬರಂ ನನ್ನು ಗುರುತಿಸಿ ಮರುದಿನದೊಳಗಾಗಿ ತನ್ನ ಸ್ನೇಹಿತನ ಮನೆಯಿಂದ ತೊಲಗಬೇಕೆಂದು ಹೇಳಿದ ಪರಿಣಾಮವಾಗಿ ಅವನು ಮನೆ ಬಿಟ್ಟು ಹೋಗುತ್ತಾನೆ. ಆದರೆ ಆರ್ಕಿಟೆಕ್ಟ್ ಆರ್ತನನ್ನು ಹುಡುಕಿ ಮತ್ತೆ ಮನೆಗೆ ಕರೆತರುತ್ತಾನೆ. ಈ ಮಧ್ಯೆ ಈ ಆರ್ಕಿಟೆಕ್ಟ್ ನ ಕ್ಲೈಂಟ್ ಒಬ್ಬ ಮನೆಗೆ ಬಂದಾಗ ಪೀತಾಂಬರಂ ನನ್ನು ನೋಡಿ ವಿಸ್ಮಿತನಾಗುತ್ತಾನೆ.
ಏಕೆಂದರೆ ಅವನು ಪಿತಾಂಬರಂ ನ ಖಾಸ ಮಗ. ಯಾವುದೋ ವಿಷಯಕ್ಕೆ ಕಟು ಮಾತಾಡಿದಾಗ ಪೀತಾಂಬರಂ ಮನೆ ಬಿಟ್ಟು ಹೋಗಿರುತ್ತಾನೆ. ಮಗನಿಗೆ ಅಪರಾಧಿ ಭಾವ ಕಾಡುತ್ತದೆ. ಬಂದು ತಮ್ಮೊಂದಿಗೇ ಇರುವಂತೆ ತಂದೆಯನ್ನು ಕೋರುತ್ತಾನೆ. ತಂದೆಗೆ ಧರ್ಮ ಸಂಕಟ ತಾನು ತನ್ನನ್ನು ದತ್ತು ಪಡೆದವನ ಜೊತೆ ಸಂತೋಷದಿಂದಲೇ ಇರುವದಾಗಿ ಹೇಳಿ ಆತನನ್ನು ಒಂದು ಮಾತು ಕೇಳುವದಾಗಿ ಹೇಳುತ್ತಾನೆ. ಒಲ್ಲದ ಮನಸಿನಿಂದ ದತ್ತು ಪಡೆದ ಆರ್ಕಿಟೆಕ್ಟ್ ಸಮ್ಮತಿಸುತ್ತಾನೆ. ಬೀಳ್ಕೊಡುಗೆಯ ದಿನ ಬರುತ್ತದೆ. ವೃದ್ಧಾಶ್ರಮದ ತನ್ನ ಜೊತೆಗಾತಿ, ದತ್ತು ಪಡೆದು ಸುಖವಾಗಿಟ್ಟ ಮಗ, ಬಸುರಿಯಾದಾಗ ಮಾವಿನ ಕಾಯಿ ಬಯಸಿದಳೆಂಬುದಕ್ಕೆ ಅಕಾಲದಲ್ಲಿ ಮಾವಿನಕಾಯಿಗೆ ಹುಡುಕಿ ಯಾವ ಸೊಸೆಯ ಬಯಕೆ ತೀರಿಸಲು ಅಲೆದಿದ್ದನೋ ಆ ಸೊಸೆ, ನವಜಾತ ಮೊಮ್ಮಗು ಎಲ್ಲರನ್ನೂ ಬೀಳ್ಕೊಳ್ಳುವ ಸಂಕಟದಲ್ಲಿ ಆತ ಇರಬೇಕಾದರೆ ಕಾರ್ ಪಕ್ಕ ನಿಂತು ಕಾಯುತ್ತಿದ್ದ ಖಾಸಾ ಮಗ ಈ ವಿಳಂಬದ ಕಾರಣ ಸಹನೆ ಕಳೆದುಕೊಂಡು ಹಾರ್ನ್ ಬಾರಿಸುತ್ತಾನೆ. ಕೊನೆಗೆ ತಂದೆ ಬರುತ್ತಾನೆ.
ಇನ್ನು ವಿಳಂವಾದರೇನಂತೆ, ಹತ್ತೂವರೆಗೆ ಮೀಟಿಂಗ್ ಇತ್ತು, ಅದೀಗ ಮುಗಿಯಿತು ಎನ್ನುತ್ತಾನೆ ಮಗ. ಈ ಮಗನೊಂದಿಗೆ ತಾನು ಸುಖವಾಗಿರಬಲ್ಲೆನೆಂದು ಪೀತಾಂಬರಂ ಗೆ ಅನ್ನಿಸುವದಿಲ್ಲ. ಹಿಂದಿರುಗಿ ನೋಡುತ್ತಾನೆ, ಇಡೀ ಅಂತ:ಕರಣದ ಜೀವಗಳು ಅಲ್ಲಿ ನಿಂತಿವೆ ಒಂದೊಂದೇ ಹೆಜ್ಜೆಯಿಡುತ್ತ ಅವರಲ್ಲಿಗೆ ಮರಳುತ್ತಾನೆ. ಎಲ್ಲೆಲ್ಲೋ ಬೆಸೆದ ಮಾನವ ಸಂಬಂಧಗಳೇ ನಿಜದ ಸಂಬಂಧಗಳಾಗಿ ಕಕ್ಕುಲಾತಿಯಿಂದ ಅವನನ್ನು ಸ್ವಾಗತಿಸುತ್ತವೆ. ಸ್ವಂತದ ಮಗ ಬರಿಗೈಯ್ಯಲ್ಲಿ ಮರಳುತ್ತಾನೆ.
ಈ ಎರಡು ಚಿತ್ರಗಳೂ ಸರಳರೇಖಾತ್ಮಕವಾಗಿವೆಯಾದರೂ ಇವುಗಳಲ್ಲಿ ನಾಟಕೀಯ ತಿರುವುಗಳೂ ಅಲ್ಲಲ್ಲಿ ಇವೆ. ಆದರೆ ಅದು ನಮ್ಮ ಕಮರ್ಶಿಯಲ್ ಸಿನಿಮಗಳಂಥ ಮೆಲೊಡ್ರಾಮಾ ಅಲ್ಲ. ಈ ಚಿತ್ರಗಳು ಅತಿ ಆದರ್ಶೀಕೃತ, ಭಾವುಕ ಮತ್ತು ಒಮ್ಮೊಮ್ಮೆ ಬಹಳ naive ಎನ್ನಿಸುತ್ತವೆ. ಈ ಚಿತ್ರಗಳ ಗ್ರಹಿಕೆ ಸಂದೇಶಗಳು ಯುಟೊಪಿಯನ್ ಎನ್ನಿಸುವದಕ್ಕೆ ಒಂದು ನೆಲೆಯಲ್ಲಿ ಬಹುಶ: ಪತಿಯಿಂದಲೇ ಪತ್ನಿಯ ಕೊಲೆ, ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ, ಪ್ರಿಯಕರನೊಂದಿಗೆ ಸೇರಿ ಪತ್ನಿಯಿಂದ ಪತಿಯ ಕೊಲೆ, ವಿದ್ಯಾರ್ಥಿನಿಗೆ ಶಿಕ್ಷಕನಿಂದಲೇ ಲೈಂಗಿಕ ಕಿರಿಕುಳ ಎಂಬ “ಬ್ರೆಕಿಂಗ್ ನ್ಯೂಜ್”ಗಳ ನಡುವೆ ಜೀವಿಸುತ್ತಿರುವ ನಮ್ಮ ಸಂವೇದನೆಗಳ ಪೆಡಸುತನವೂ ಕಾರಣವಾಗಿರಬಹುದು. ಮತ್ತು, ಅದೇ ಕಾರಣಕ್ಕಾಗಿ, ಈ ಚಿತ್ರಗಳು ಕಟ್ಟಿಕೊಡುವ ನಿಷ್ಕಪಟ ಮನುಷ್ಯ ಸಂಬಂಧಗಳ ಲೋಕ ತನ್ನ ಆ naivete, ತನ್ನ ಆ ಮುಗ್ಧತನದಿಂದಲೇ ಆಪ್ತವಾಗುತ್ತದೆ.
ಛಾಯಾಗ್ರಹಣ ಧ್ವನಿಗ್ರಹಣ, ಅಭಿನಯ ಎಲ್ಲದರಲ್ಲೂ ಸಮರ್ಪಕವಾಗಿರುವ ಈ ಚಿತ್ರಗಳ ಬಂಧ ಸ್ವಲ್ಪ ಬಿಗಿಯಾಗಿರಬೇಕಾಗಿತ್ತೆಂಬುದನ್ನು ಹೊರತು ಪಡಿಸಿದರೆ ಈ ಚಿತ್ರಗಳ ಕುರಿತು ಒಡಕು ಮಾತುಗಳಿಗೆ ಹೆಚ್ಚು ಆಸ್ಪದವಿದೆ ಎನ್ನಿಸುವದಿಲ್ಲ.
 

‍ಲೇಖಕರು G

5 March, 2014

2 Comments

  1. Triveni

    ಎರಡೂ ಚಿತ್ರಗಳನ್ನು ಚೆನ್ನಾಗಿ ಪರಿಚಯಿಸಿದ್ದೀರಿ, ಧನ್ಯವಾದಗಳು.

  2. ಪ್ರತಾಪ ರಾಠೋಡ

    ಅದ್ಬುತ್ ಕಥಾ ತಿರುವಗಳ ಸರಣಿ ,ವಾಸ್ತವಕೆ ತೀರ ಹತ್ತೀರವಿದ್ದು ಲೇಖನ ಮುಗಿಯವರಿಗೆ ಓದಿಸಿಕೊಂಡು ಹೋಗುವ ನಿಮ್ಮ ಬರಹದ ಶೈಲಿ ನನಗೆ ಬಹಳ ಹಿಸಡಿಸಿತು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading