ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಶೋಕ ಶೆಟ್ಟರ್ ಕಾಲಂ: ಜಾತಿ ಮತ ಮೀರಿದ ಪ್ರೇಮಿಗಳ ಮೆಚ್ಚುತ್ತ..


ಸದ್ದು ಗದ್ದಲವಿಲ್ಲದೇ ಫೋನ್ ನಲ್ಲಿ ಮಾತಾಡುತ್ತ ಮಗ ಟೆರೆಸ್ ಮೇಲೆ ಹೋದದ್ದೇನೋ ಶ್ರೇಷ್ಠಿಗಳ ಗಮನಕ್ಕೆ ಬಂದಿತ್ತು. ಆದರೆ ಆ ಸಂಭಾಷಣೆ ತೀವ್ರವಾಗುತ್ತ, ಗಡುಸಾಗುತ್ತ, ಕಲಹದಂತೆ ತೋರುತ್ತ, ದೊಡ್ಡ ಧ್ವನಿಯಾಗಿ ಕಿವಿಗೆ ತಟ್ಟಿದಾಗ ಶ್ರೇಷ್ಠಿಗಳು ಮೇಲೆ ಹೋದರು. ಶ್ರೇಷ್ಠಿಪುತ್ರ ದುಮುದುಮು ಉರಿಯುತ್ತಿದ್ದ. “ಏನಲೇ?” ಎಂದರು. ಇವನ ಸ್ನೇಹಿತೆಯಾಗಿದ್ದ ಒಬ್ಬ ಹುಡುಗಿ, BCA ಮುಗಿಸಿದವಳು ಉದ್ಯೋಗಕ್ಕೆ ಆಯ್ಕೆಯಾಗಿ ಇನ್ಫೋಸಿಸ್ ನಲ್ಲಿ ಬೆಂಗಳೂರಿನಲ್ಲಿ ಟ್ರೇನಿಂಗ್ ನಲ್ಲಿದ್ದವಳು ಚಹ ಕುಡಿಯಲು ತನ್ನ ಜೊತೆ ಅದೇ ತರಬೇತಿಯಲ್ಲಿ ಇದ್ದ ಸಹೋದ್ಯೋಗಿಗಳೊಂದಿಗೆ ಹೋಗುತ್ತಿದ್ದುದನ್ನೇ ಅಲ್ಲೇ ಇದ್ದ ಅದ್ಯಾವುದೋ ಹುಡುಗಿ ಬಣ್ಣ ಕಟ್ಟಿ ಹೇಳಿದ್ದೇ ಕಾರಣವಾಗಿ ಅವಳ “ಬೇವಫಾಯಿ”ಯಿಂದ ನೊಂದ ಮಗ “ಡ್ಯಾಡೀ…” ಎಂದು ಶುರು ಮಾಡಿ ಹೇಳಿದ ಪ್ರವರವೆಲ್ಲ ಕೇಳಿಸಿಕೊಂಡ ಮೇಲೆ ಶ್ರೇಷ್ಠಿಗಳು ಕೇಳಿದ್ದು ಒಂದೇ ಪ್ರಶ್ನೆ: “ಆಯ್ತು, ಅದರ ಬಗ್ಗೆ ನೀನೇಕೆ ವ್ಯಗ್ರನಾಗಿ ಇಷ್ಟು ಕೂಗಾಡಬೇಕು? ಅವಳೇನು ನಿನ್ನ ಹೆಂಡತಿಯಾ?” ಅದಕ್ಕವನು “ಅವಳು ನನ್ನ ಹೆಂಡತಿಯಾಗುವವಳು ಡ್ಯಾಡ್ಡೀ. ನಾನೇಕೆ ಇಷ್ಟು ಸಿಟ್ಟಿಗೆದ್ದಿದ್ದೇನೆಂದರೆ ಇಟ್ ಇಸ್ ದಿ ಕ್ವಶ್ಚನ್ ಆಫ್ ಮೈ ಲೈಫ್. ಐ ಲವ್ ಹರ್, ಐ ವಾಂಟ್ ಟೂ ಮ್ಯಾರ್ರೀ ಹರ್” ಎಂದದ್ದನ್ನು ಕೇಳಿಸಿಕೊಂಡು ಮನಸಿನಲ್ಲೇ “ಎಲಾ ಮಗನೇ” ಎಂದುಕೊಂಡ ಶ್ರೇಷ್ಠಿಗಳಿಗೆ ಈ ವಿಷಯ ಅನಿರೀಕ್ಷಿತವೇ.
ಆ ಹುಡುಗಿ ಆಗಾಗ ಮನೆಗೆ ಬರುತ್ತಿದ್ದಳು. ಮಗನ ಹಲವಾರು ಗೆಳೆಯ ಗೆಳತಿಯರಲ್ಲಿ ಅವಳೊಬ್ಬಳು ಅಷ್ಟೇ ಎಂಬುದು ಶ್ರೇಷ್ಠಿಗಳ ತಿಳುವಳಿಕೆ.”ಈ ಹುಡುಗಿಯ ಜೊತೆ ನನಗೆ ಪ್ರೇಮಸಂಬಂಧ ಇದೆ, ಮದುವೆಯಾಗುವ ವಿಚಾರವಿದೆ ಎಂಬುದನ್ನು ನೀನು ನನಗೆ ಮೊದಲೇ ಏಕೆ ಹೇಳಲಿಲ್ಲ?” ಎಂದು ಅವರು ಕೇಳಿದ್ದಕ್ಕೆ “ನಿಮ್ಮಿಂದ ಮುಚ್ಚಿಡುವ ಉದ್ದೇಶವೇನೂ ಇರಲಿಲ್ಲ ಡ್ಯಾಡೀ, ಏನೋ ಒಂದು ದಡಕ್ಕೆ ತಲುಪಿದ ಮೇಲೆ ಹೇಳೋಣ ಅಂತಿದ್ದೆ ಅಷ್ಟೇ”. ಎಂದ ಮಗ.
ಸಿಟ್ಟಿನ ಭರದಲ್ಲಿ “ನಂದೂ ನಿಂದೂ ಇಲ್ಲೀಗಿ ಮುಗೀತ್ “ಎಂದು ಅವಳಿಗೆ ಫೋನಿನಲ್ಲಿ ಹೇಳಿ ಮಲಗಿದ್ದನಾದರೂ ಮರುದಿನ ಮುಂಜಾನೆ ನೋಡಿದರೆ ಆಕಾಶವೇ ತಲೆ ಮೇಲೆ ಕಳಚಿಕೊಂಡು ಬಿದ್ದಂತೆ ಹಾಸಿಗೆಯಲ್ಲಿ ಕುಳಿತಿದ್ದ. ತಾನು ಅವಳಿಗೆ ಕೋಪದಲ್ಲಿ ಏನೇನೋ ಅಂದಿದ್ದು ಅನ್ಯಾಯ ಅಂತ ಅವನಿಗನ್ನಿಸಿದಂತಿತ್ತು. “ಅವಳ ನಂಬರ್ ಗೆ ಫೋನ್ ಮಾಡಿ ನನಗೆ ಕೊಡು” ಎಂದರು ಶ್ರೇಷ್ಠಿಗಳು. ಕೊಟ್ಟ. ಕನ್ಯೆ ಅಳುತ್ತಳುತ್ತ ಹೇಳಿದ್ದಿಷ್ಟೇ: “ಅಂಕಲ್ ಶ್ರೇಷ್ಠಿಪುತ್ರ ಸುಮ್ ಸುಮ್ನೇ ಏನೇನೋ ಮಿಸ್ ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡ್ ಕೂತಾನ. ಅಂಥಾದ್ದೇನೂ ಇಲ್ಲಾ. ನಾ ಅವನ್ನ ಪ್ರೀತೀ ಮಾಡ್ತೇನಿ. ನಾ ಮದಿವಿ ಆದ್ರ ಅವನ್ನಾ ಆಗಾಕಿ” ಆಯ್ತು ಬಿಡಮ್ಮ ಅವನಲ್ಲಿ ನಿನಗೆ ಈ ಮಟ್ಟದ ಅನುರಕ್ತಿ ಇದ್ದರೆ ನಾನು ಅದನ್ನು ಈಡೇರಿಸುತ್ತೇನೆ” ಎಂದು ಹೇಳಿದ ಶ್ರೇಷ್ಠಿಗಳ ಫೋನಿಗೆ ಕನ್ಯೆಯಿಂದ ಮೆಸೇಜೊಂದು ಬಂತು. ಅದರಲ್ಲಿ ಶ್ರೇಷ್ಠಿಪುತ್ರನ ಕುರಿತ ತನ್ನ ಪ್ರೇಮ ಅವನನ್ನು ಬಿಟ್ಟು ಬದುಕಿರುವದು ಎಷ್ಟು ಅಸಾಧ್ಯವೆನ್ನುವದರೊಂದಿಗೆ ತಮ್ಮ ಆಕಾಂಕ್ಷೆಗೆ ಸಕಾರಾತ್ಮಕವಾಗಿ ಸಮ್ಮತಿಸಿದ್ದಕ್ಕೆ ಒಂದು ಧನ್ಯವಾದವಿತ್ತು.
ಕನ್ಯೆಯದು ಶ್ರೇಷ್ಠಿಪುತ್ರನಿಗೆ ಒಂದೇ ಒರಾತ. “ನಾವು ಮದುವೆ ಆಗೋಣ”. ಶ್ರೇಷ್ಠಿಪುತ್ರನದೂ ತನ್ನ ತಂದೆಯ ಮುಂದೆ ಅದೇ ಮಾತು. “ಮದುವೆ ಬೇಗ ಮುಗಿಸಿಕೊಂಡು ಬಿಡುವದು ಒಳ್ಳೆಯದು ಡ್ಯಾಡಿ”. ಒನ್ ಫೈನ್ ಈವ್ನಿಂಗ್ ಕನ್ಯೆ ಆಚಾರ್ಯರ ಮುಂದೆ ತನ್ನ ಮನದಿಂಗಿತವನ್ನು ಹೇಳಿಯೇ ಬಿಟ್ಟಳು. ಆಚಾರ್ಯರು ವಿಲಿವಿಲಿಗುಟ್ಟಿದರು. ಸದಾ ಕಾಲ ತಮ್ಮ ಮನೆಯಲ್ಲಿ ತಮ್ಮ ಮಾತೇ ನಡೆಯುವಂತೆ ಇಟ್ಟುಕೊಂಡಿದ್ದ ಅವರಿಗೆ ಅದು ವಜ್ರಾಘಾತವಾಗಿತ್ತು. ಶ್ರೇಷ್ಠಿಗಳು ಅದೇ ಬ್ರಾಹ್ಮಣ ಸಮುದಾಯದ ಒಬ್ಬಿಬ್ಬರನ್ನು ಕಳಿಸಿ ಎಲ್ಲ ರೀತಿಯಿಂದ ಅವರು ಆಚಾರ್ಯರಿಗೆ ತಿಳಿಹೇಳಲು ನೋಡಿ, ಮನದಟ್ಟು ಮಾಡುವ ಪ್ರಯತ್ನ ಮಾಡಿ ವಿಫಲವಾದರು. ತಿರಗಾ ಅವರಿಗೇ ಆಚಾರ್ಯರು ನೀವೂ ಜನಿವಾರದವರು. ಈ ಪ್ರೇಮವನ್ನು ಮುರಿದು ನನ್ನ ಜನಿವಾರದ ಮಾನ ಕಾಪಾಡಿ ಎಂದರು. ಯಾರ ಮೈಮೇಲೋ ಯಾವುದೋ ದೇವಿ ಬರುತ್ತಿದ್ದು ಆ ದೇವಿಯ ಬಾಯಲ್ಲೂ ಕನ್ಯೆಗೆ ಬುದ್ಧಿವಾದ ಹೇಳಿಸಲಾಯಿತು. ದೇವಿಗೇಕೆ ನಿರಾಶೆ ಮಾಡಬೇಕೆಂದು ಕನ್ಯೆ ಆಯ್ತು ಎಂದಳು. ಒಂದೆರಡು ಸಲ ಆಚಾರ್ಯರು ಮಗಳ ಮನದಿಂದ ಶ್ರೇಷ್ಠಿಪುತ್ರ ಮರೆಯಾಗೇ ಹೋದ ಎಂದು ಭಾವಿಸಿ “ನಿನ್ನದೊಂದು ಗಂಡಾಂತರ ಕಳೆಯಿತು ಮಗಳೇ” ಎಂದು ನಿಸೂರಾದರು.
ಶ್ರೇಷ್ಠಿಗಳು ಕೊನೆಗೂ ಒಂದು ತೀರ್ಮಾನಕ್ಕೆ ಬಂದರು. ಅದರಂತೆ ತನ್ನ ಅಂತಿಮ ಪ್ರಯೋಗಿಕ ಪರೀಕ್ಷೆ ಮುಗಿದ ಮರುದಿನ ಕನ್ಯೆ ಕಾಲೇಜಿನಲ್ಲಿ ಕೆಲವು ಕೆಲಸಗಳಿರುವದಾಗಿ ಹೇಳಿ ಸೀದಾ ನಡೆದು ಶ್ರೇಷ್ಠಿಗಳ ಮನೆಗೆ ಬಂದಳು. ಅಲ್ಲಿಂದ ಬಂಧು ಬಾಂಧವರು ಶ್ರೇಷ್ಠಿಪುತ್ರನ ಗೆಳೆಯಂದಿರು ಹೀಗೆ ನಲವತ್ತೈವತ್ತು ಜನ ಸೇರಿಕೊಂಡು ವಿವಾಹ ನೋಂದಣಾಧಿಕಾರಿಯ ಕಚೇರಿಯ ಮುಂದೆ ಜಮಾಯಿಸಿ ಪೂರ್ವನಿರ್ಧರಿತವಾದಂತೆ ವಿವಾಹ ನೋಂದಾವಣೆ ಆಗಿ ಅಲ್ಲಿಂದ ಮುಂದೆ ಒಂದು ದೇವಸ್ಥಾನಕ್ಕೆ ಹೋಗಿ ಮಂಗಳಾರತಿ ಮಾಡಿಸಿ ಒಂದು ಮೊದಲೇ ನಿರ್ಧರಿಸಿದ್ದ ಹೊಟೆಲ್ ನ ಪಾರ್ಟಿ ಹಾಲ್ ನಲ್ಲಿ ಸಣ್ಣದೊಂದು ಸಂತೋಷ ಕೂಟವನ್ನು ಏರ್ಪಡಿಸಿ ಪರಸ್ಪರ ಹೂಹಾರಗಳ ವಿನಿಮಯ ಮಾಡಿಕೊಂಡು ಕನ್ಯೆಯು ತಮ್ಮ ಮನೆಗೂ ಇತರರು ತಮ್ಮ ತಮ್ಮ ಮನೆಗೂ ಮರಳುವದರೊಂದಿಗೆ ಒಂದು ಅಧ್ಯಾಯ ಮುಗಿದರೂ ನಿಜವಾದ ವಿಷಯ ಇನ್ನಷ್ಟೇ ತೀರ್ಮಾನವಾಗಬೇಕಿತ್ತು. ಈಗ ಅವಳು ವಿವಾಹ ನೋಂದಾವಣೆ ಆಗಿರುವದನ್ನು ತಮ್ಮ ಮನೆಯಲ್ಲಿ ಹೇಳದೇ ನವೆಂಬರ್ ವರೆಗೆ ತಮ್ಮ ಮನೆಯಲ್ಲೇ ಇರುವದು. ಆಗ ಮದುವೆಯ ಮುಹೂರ್ತಗಳಿದ್ದು ಮದುವೆ ಮಾಡುವದು. ಅಷ್ಟರೊಳಗೆ ಅವರ ಮನೆಯಲ್ಲಿ ಗೊತ್ತಾಗಿ ರಾದ್ಧಾಂತವಾದರೆ ಅವಳು ಮನೆ ಬಿಟ್ಟು ಬರುವದು, ಒಂದು ಪೇಯಿಂಗ್ ಗೆಸ್ಟ್ ಸ್ಥಳದಲ್ಲಿ ಇರುವದು ಇತ್ಯಾದಿ. ಇನ್ನೊಂದು ಸಾಧ್ಯತೆ ಜುಲೈ ತಿಂಗಳಲ್ಲೇ ಇರುವ ನಾಲ್ಕು ಮುಹೂರ್ತಗಳ ಪೈಕಿ ಒಂದರಂದು ಸ್ವಲ್ಪ ಅವಸರವಸರವಾಗಿ ಸಿದ್ಧತೆ ಮಾಡಿಕೊಳ್ಳುವಂತಾದರೂ ಸರಿಯೇ ಮದುವೆ ಮಾಡಿ ಮುಗಿಸಿಬಿಡುವದು. ಅದಕ್ಕೆ ಕೇವಲ ಒಂದು ತಿಂಗಳು ಕಾಲಾವಕಾಶವಿತ್ತು.

ಎಲ್ಲರೂ ಮಾಡಿ ಮುಗಿಸಿಯೇ ಬಿಡುವಂತೆ ಸಲಹೆ ನೀಡಿದ ಪ್ರಕಾರ ಮತ್ತೊಂದಾವರ್ತಿ ಒಬ್ಬ ಪತ್ರಕರ್ತನೂ ಒಳಗೊಂಡ ಜನಿವಾರದವರೇ ಆದ ಆ ಇಬ್ಬರನ್ನು ಸಂಧಾನಕ್ಕೆ ಮತ್ತೆ ಆಚಾರ್ಯರ ಮನೆಗೆ ಕಳಿಸಲಾಯಿತು. ಅವರೊಂದಿಗೆ ಹೋಗಿದ್ದ ಶ್ರೇಷ್ಠಿಗಳ ಪತ್ನಿ ಕೂಡ ಪರಿಪರಿಯಿಂದ ತಿಳಿಸಿ ಹೇಳಿದಳು. “ನನ್ನ ಮಗಳು ಅವನನ್ನು ಮದುವೆಯಾಗುವ ಹಟ ಹಿಡಿದರೆ ನಾಳೆ ಮುಂಜಾನೆ ನಾನು ಬದುಕಿರುವದಿಲ್ಲ”. ಎಂದು ಆಚಾರ್ಯರೂ, “ಈ ಕಾರಣಕ್ಕೆ ನನ್ನ ಮಗನಿಗೇನಾದರೂ ಹೆಚ್ಚು ಕಡಿಮೆಯಾದರೆ ನಿಮ್ಮ ಮನೆಯ ಮುಂದೇ ಬಂದು ನಾನು ಪ್ರಾಣ ಬಿಡುತ್ತೇನೆ” ಎಂದು ಶ್ರೇಷ್ಠಿಗಳ ಹೆಂಡತಿಯೂ ಅಂದಾಡಿ ಕೊನೆಗೂ ಕುಲದೇವರಾಣೆ ನಾನು ನನ್ನ ಮಗಳನ್ನು ಬ್ರಾಹ್ಮಣನಿಗೇ ಕೊಟ್ಟು ಮದುವೆ ಮಾಡುವದು ಎಂದರು ಆಚಾರ್ಯರು.ಪದೇ ಪದೇ ಕೈ ಮುಗಿದು ನಮ್ಮನ್ನು ನಮ್ಮಷ್ಟಕ್ಕೆ ಬಿಡಿ ಎಂದರು.ಮಗಳಿಗೂ ಮಾತಿನಲ್ಲೇ ತಿವಿದರು. ಅವರೊಂದಿಗೆ ಹೋಗಿದ್ದ ಶ್ರೇಷ್ಠಿಪುತ್ರನ ಸ್ನೇಹಿತ “ಕನ್ಯಾ ಹೀಗಾದರೆ ನಿನ್ನ ಮದುವೆ ನಿನ್ನ ಪ್ರೇಮಿಯೊಂದಿಗೆ ಆಗುವದು ಶಕ್ಯವೇ ಇಲ್ಲ. ಬಾ ಕಾರು ಹತ್ತು” ಎಂದಾಗ ಕಾರು ಹತ್ತಿ ಕೂತ ಕನ್ಯೆ ಕಣ್ಣೀರಾಗಿ ಶ್ರೇಷ್ಠಿಗಳ ಮನೆಗೆ ಬಂದಳು. ಕೈಯ್ಯಲ್ಲೊಂದು ಬ್ಯಾಗ್ ಕೂಡ ಇಲ್ಲದೇ ಉಟ್ಟ ಬಟ್ಟೆಯಲ್ಲೇ. ತನ್ನ ಮದುವೆ ನೋಂದಣಿ ಆಗಿರುವದಾಗಿ ತನ್ನ ಅಕ್ಕನಿಗೆ ತಿಳಿಸಿದಳು. ಆಮೇಲೆ ಫೋನ್ ಮೇಲೆ ಫೋನು.
ಎಲ್ಲೆಲ್ಲಿ ಅವಳ ಸಂಬಂಧಿಕರಿದ್ದರೋ ಅಲ್ಲಿಂದೆಲ್ಲ. “ನೀನು ಇಂದು ಸಂಜೆ ಮನೆಗೆ ಹೋಗು. ನಮ್ಮನ್ನು ನಂಬು. ನಾವು ನಿನ್ನ ಇಷ್ಟದಂತೆ ಮದುವೆ ಮಾಡಿ ಕೊಡುತ್ತೇವೆ”. ಶ್ರೇಷ್ಠಿಗಳ ಮನೆಯಲ್ಲಿ ಇದನ್ನು ನಂಬಲು ಯಾರೂ ಸಿದ್ಧರಿರಲಿಲ್ಲ. ಸ್ವತ: ಕನ್ಯೆಗೇ ಭರವಸೆ ಇರಲಿಲ್ಲ. ಅವಳು ದೃಢವಾಗಿ ನಿರ್ಧರಿಸಿಯಾಗಿತ್ತು. ಮರುದಿನ ಮತ್ತೆ ಎಲ್ಲರೂ ಆಚಾರ್ಯರ ಮನೆಗೆ ಹೋದರು. ಆಚಾರ್ಯರ ನಿಲುವಿನಲ್ಲಿ ಬದಲಾವಣೆ ಇರಲಿಲ್ಲ. ಹುಡುಗಿ ಮತ್ತೆ ಹೊರಟು ಬಂದಳು. ಕೊನೆಗೆ ಅವಳ ಬ್ಯಾಗ್ ಎತ್ತಿಕೊಂಡು ಹೋಗಲು ಹೇಳು ಎಂದು ಆಚಾರ್ಯರು ಅವಳ ಅಕ್ಕನಿಗೆ ಹೇಳಿದಾಗ ಶ್ರೇಷ್ಠಿಪುತ್ರನೂ ಅವನ ಗೆಳೆಯನೂ ತಾಸೆರಡು ತಾಸು ಅವಳನ್ನು ಅವಳ ಮನೆಯಲ್ಲಿ ಬಿಟ್ಟು ಬಂದರು. ಬ್ಯಾಗ್ ಸಿದ್ಧ ಪಡಿಸಿಕೊಂಡಳು ಅಕ್ಕ, ತಾಯಿ ಅಪ್ಪುಇಕೊಂಡು ಅತ್ತರು. ಸೀರೆಯೊಂದನ್ನು ಕೊಟ್ಟು ಆಯ್ತು ಇಷ್ಟ ಪಟ್ಟವನನ್ನು ಮದುವೆ ಆಗಿ ಸುಖವಾಗಿರು ಎಂಬೆರಡು ಮಾತು ಹೇಳಿ ಕೈ ತೊಳೆದುಕೊಂಡರು. ಹುಡುಗರಿಬ್ಬರೂ ಮತ್ತೆ ಅವಳನ್ನು ಕಾರಲ್ಲಿ ಹತ್ತಿಸಿಕೊಂಡು ಮನೆಗೆ ಬಂದರು.
ಶ್ರೇಷ್ಠಿಗಳ ಇಡೀ ಕುಟುಂಬ ಸಿದ್ಧತೆಯಲ್ಲಿ ತೊಡಗಿತು. ಮದುವೆಯ ಆಮಂತ್ರಣ ಪತ್ರಗಳ ಆಯ್ಕೆ, ಮುದ್ರಣ, ವಿತರಣೆ, ಜವಳಿ ಖರೀದಿ, ಮಾಂಗಲ್ಯ, ಬಳೆ, ಕಾಲುಂಗುರ,ಗೆಜ್ಜೆ ಇತ್ಯಾದಿಗಳ ಖರೀದಿ, ಯಥಾಪ್ರಕಾರದ ಹಂದರಗಂಬ ನೆಡುವದು, ಬಳೆ ಇಡಿಸುವದು,ಲಗ್ನದಕ್ಕಿಯ ಗಂಟು ಕಟ್ಟಿಸುವದು, ಅರಿಷಿಣ, ಸುರಗಿ,ಮಾಂಗಲ್ಯಧಾರಣ, ಅಕ್ಷತಾರೋಪಣ. ಮದುವೆ ಮುಗಿಯಿತು.

*******

ಮದುವೆ ಮುಗಿದ ದಿನ ಸಂಜೆ ಪ್ರಜ್ಞಾ ಎಂಬ ನಾಮಧೇಯದ ಕನ್ಯೆ ನಮ್ಮ ಮನೆಯ ಸೊಸೆಯಾಗಿ, ಹೊಸ್ತಿಲ ಮೇಲಿಟ್ಟಿದ್ದ ಪಡಿಯಲ್ಲಿದ್ದ ಧಾನ್ಯವನ್ನು ಕಾಲಿನಿಂದ ನೂಕಿ ಬಲಗಾಲಿಟ್ಟು ಮನೆಯೊಳಗೆ ಬಂದಳು. ಆರತಿ ಬೆಳಗಿ ಅವಳ ಕೆನ್ನೆಯನ್ನು ಸ್ಪರ್ಶಿಸಿ ನನ್ನ ಪತ್ನಿ ತನ್ನ ಸೊಸೆಯನ್ನು ಬರಮಾಡಿಕೊಂಡಳು.
ತಮ್ಮ ಸಿದ್ಧಾಂತವನ್ನು ತಾವು ಬಿಡಲಾರೆವೆಂದರಂತೆ ಆಚಾರ್ಯರು. ಪರಸ್ಪರರನ್ನು ಒಲಿದು ಒಂದಾಗ ಬಯಸಿದ ಎರಡು ಎಳೆಯ ಜೀವಗಳ ಮನದಿಂಗಿತವನ್ನು ಅರಿತು ಅವರು ಸತಿ-ಪತಿಗಳಾಗಿ ಬಾಳಲು ಅವಕಾಶ ಮಾಡಿ ಕೊಡದೇ ಅದಕ್ಕೆ ಅಡ್ಡ ಬರುವ ಕರ್ಮಠತನವನ್ನು ಸಿದ್ಧಾಂತವೆಂದು ಭಾವಿಸಲು ನಿರಾಕರಿಸಿದ ನಾನು ಕಳೆದೆರಡು ದಿನಗಳಲ್ಲಿ ಹಲವರಿಂದ ಇಂಥ ಅಂತರ್ಜಾತೀಯ ಮದುವೆಗಳ ಬಗ್ಗೆ ಕೇಳಿದೆ. ದೀರ್ಘವೆನ್ನಬಹುದಾದ ಕಾಯಿಲೆಯಿಂದ ಇದೀಗ ಚೇತರಿಸಿಕೊಳ್ಳುತ್ತಿರುವ ಗೆಳೆಯ ರವಿ ಬೆಳಗೆರೆ ತನ್ನೆಲ್ಲ ದೈಹಿಕ ನಿಶ್ಯಕ್ತತೆಯ ನಡುವೆಯೂ ನನ್ನ ಮಗನ ಮದುವೆಗೆ ಬಂದು ನನ್ನ ಸಂತೋಷವನ್ನು ಇಮ್ಮಡಿಗೊಳಿಸಿ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಬೇರೆ ಜಾತಿಗಳ ಹುಡುಗರಿಗೆ ಮದುವೆ ಮಾಡಿ ಕೊಟ್ಟಿದ್ದನ್ನು ನೆನಪಿಸಿಕೊಂಡ. ಜಾತಿಯಿಂದ ಒಕ್ಕಲಿಗರಾದ ಗೆಳೆಯ ಜಗದೀಶ ಕೊಪ್ಪ ತಮ್ಮ ಮಗ ಲಿಂಗಾಯತ ಹುಡುಗಿಯನ್ನು ಮದುವೆಯಾಗಬಯಸಿದ್ದಾಗಿ ತಿಳಿಸಿದರು. ಆಚಾರ್ಯರೊಂದಿಗೆ ಸಂಧಾನಕ್ಕೆ ಹೋದ ಪತ್ರಕರ್ತ ರವಿ ಕುಲಕರ್ಣಿಯ ಹೆಂಡತಿಯ ತಮ್ಮ ಚಿತ್ಪಾವನ ಬ್ರಾಹ್ಮಣ ಸಮುದಾಯದ ವರ ನಿನ್ನೆ ಗೋಕಾಕದ ಲಿಂಗಾಯತ ಹುಡುಗಿಯನ್ನು ಮದುವೆಯಾದ. ನಾನು ಮದುವೆಗೆ ಹೋಗಿದ್ದೆ. ತನ್ನ ಮಕ್ಕಳು ತನ್ನ ಮುಸ್ಲಿಂ ಸಮುದಾಯದ ಹೊರಗೆ ಮದುವೆಯಾದ ಕುರಿತು ಗೆಳೆಯ ರಂಜಾನ್ ದರ್ಗಾ ಹೇಳಿ “ಇಂಥ ಬದಲಾವಣೆಯನ್ನು ನಾವು ಮಾಡದೇ ಇನ್ನಾರು ಮಾಡಬೇಕು? ವಿ ಮಸ್ಟ್ ಎನ್ಕರೇಜ್ ಸಚ್ ಮ್ಯಾರೇಜಸ್” ಎಂದ.
ಬೇಸರವಿಲ್ಲ. ವಾಸ್ತವವಾಗಿ ಜಾತಿ ವ್ಯವಸ್ಥೆ ಇದೆ ಎಂದೋ ಇಲ್ಲವೆಂದೋ ಪಂಡಿತ-ಪಾಮರರು ಗಟ್ಟಿಯಾಗಿ ವಾದಾಡಿಕೊಳ್ಳುತ್ತಿರುವಲ್ಲಿ ಸದ್ದು ಗದ್ದಲವಿಲ್ಲದೇ ಮನದ ಮಾತನ್ನು ಕೇಳಿಸಿಕೊಂಡು ಜಾತಿ ಕಂದರಗಳನ್ನು ಲಂಘಿಸುತ್ತಿರುವವರಲ್ಲಿ ನನ್ನ ಮಗ ಸೊಸೆ ಕೂಡ ಇದ್ದಾರೆಂಬ ಹೆಮ್ಮೆ ಇದೆ.
 

‍ಲೇಖಕರು avadhi

17 July, 2013

18 Comments

  1. laxminarasimha

    ಯಾಗದೋ ಕಥೆ ಎಂಬಂತೆ ಶುರು ಮಾಡಿ, ಪ್ರಕರಣದ ಸಾಮಾಜಿಕತೆಯೆಲ್ಲವನ್ನೂ ಬಿಚ್ಚಿಡುತ್ತ, ಯಾರ ಮೇಲೂ ದ್ವೇಷ ಹುಟ್ಟಿಸದಂತಹ ಪರಿಸರ ನಿರ್ಮಿಸಿ; ಕೊನೆಗೆ ವೈಯಕ್ತಿಕಗೊಳಿಸಿದ ಪರಿ ತುಂಬಾ ಚನ್ನಾಗಿದೆ ಅಶೋಕ್ ಶೆಟ್ಟರ್ ಅವರೆ. ಪರಿಸ್ಥಿತಿಯನ್ನು, ನಾಜೂಕಾಗಿ ನಿರ್ವಹಿಸಿದ ನಿಮ್ಮಗಳ ನಡುವಳಿಕೆ ಸಾಂಕ್ರಾಮಿಕವಾಗಲಿ. ನಿಮಗೂ ನಿಮ್ಮ ಮಗ ಸೊಸೆಗೂ ಅಭಿನಂದನೆಗಳು

  2. Rj

    ಶೆಟ್ಟರ್ ಸರ್,
    ಇದನ್ಶು ಓದುತ್ತಿರುವಾಗಲೇ ಇದು ನಿಮ್ಮನೆ ಕಥೆಯೇ ಇರಬಹುದು ಎಂಬ ಅನುಮಾನ ಬಂದಿತ್ತು.ಓದುತ್ತ ಹೋದಂತೆಲ್ಲ ಅದು ನಿಜವಾಗುತ್ತ ಬಂತು.ಜಾತಿ ವ್ಯವಸ್ಥೆ ಕುರಿತಂತೆ ಬರೆಯಬಹುದಾದ ಬರಹ-ಕತೆ ಮತ್ತು ಮಾಡಬಹುದಾದ ಎಲ್ಲ ವಾದಗಳೆಂಬ ನಿರರ್ಥಕ ಕಸರತ್ತುಗಳಿಗಿಂತ ನಿಮ್ಮ ನಿರ್ಧಾರ ಲಕ್ಷ ಪಾಲು ಶ್ರೇಷ್ಟವಾದದ್ದು ಮತ್ತು ಅನುಕರಣೀಯವಾದದ್ದು.
    ನೂತನ ದಂಪತಿಗಳಿಗೆ ಶುಭ ಹಾರೈಕೆಗಳು.
    ಪ್ರೀತಿಗೆ ಬೆಂಬಲವಾಗಿ ನಿಂತ ನಿಮಗೆ ನಮಸ್ಕಾರಗಳು.
    -Rj

  3. mahantesh navalkal

    inthaha maduvege sakshiyada khushi nanage
    mahantesh navalkal

  4. ಜಿ.ಎನ್ ನಾಗರಾಜ್

    ” ನಿರ್ಭಯವಾಗಿ ಪ್ರೀತಿಸಿ, ಹೊಣೆಗಾರಿಕೆಯಿಂದ ವರ್ತಿಸಿ ” ಇದು ಯುವಕರಿಗೆ ಪ್ರಗತಿಪರ ಯುವ ಸಂಘಟನೆ( ಡಿವೈಎಫ್ಐ )ಯುವಕರಿಗೆ ಕೊಟ್ಟ ಧೈರ್ಯ.ಈ ಸಂಘಟನೆ ನನಗೆ ಈ ಬಗ್ಗೆ ಒಂದು ಪುಸ್ತಕ ರೂಪಿಸಲು ಹೇಳಿದೆ. ಇದು ನನಗೆ ನಮ್ಮ ಪುರಾಣ,ಕಾವ್ಯಗಳನ್ನು, ಕಥೆಗಳನ್ನು ಪುನರವಲೋಕನ ಮಾಡಲು ಅವಕಾಶ ನೀಡಿತು. ಯಾವ ಕರ್ಮಠ ಹಿಂದು ಧರ್ಮವನ್ನು ಇವರೆಲ್ಲರೂ ಪ್ರತಿಪಾದಿಸುತ್ತಿದ್ದಾರೆಯೋ ಅವರು ನಿಜವಾಗಿ ತಮ್ಮ ದೇವರುಗಳ ಮಾರ್ಗವನ್ನು ತುಳಿದಿದ್ದೇ ಆದರೆ ಇವರೆಲ್ಲರೂ ಪ್ರೀತಿ ಪ್ರೀತಿ ಮತ್ತು ಪ್ರೀತಿಯಲ್ಲದೇ ಮತ್ತೆ ಯಾವುದಕ್ಕೂ ಅವರು ಬೆಂಬಲ ನೀಡಲಾಗುವುದಿಲ್ಲ.ಹಿಂದು ಧರ್ಮದ ಎಲ್ಲ ದೇವರುಗಳೂ ಪ್ರೀತಿಸಿ ಮದುವೆಯಾದವರೇ. ಅದರಲ್ಲಿ ಶಿವನನ್ನು ಒಲಿಸಿಕೊಳ್ಳಲು ಒಮ್ಮೆ ಸತಿ,ಮತ್ತೊಮ್ಮೆ ಪಾರ್ವತಿ ಎಷ್ಟು ಶ್ರಮ ಪಟ್ಟಿದ್ದಾರೆ ಹೇಳಲೀಸದು.ಶಿವ ನಮ್ಮ ದೇವರಲ್ಲ ಎನ್ನುವವರು ಕೃಷ್ಣನ ಪ್ರಸಂಗಗಳು, ಬೇರೆಯವಿರಲಿ ರುಕ್ಮಿಣಿ ಅಪಹರಣವನ್ನೇ ನೋಡಲಿ. ಹೇಗೆ ಅವಳ ಕುಟುಂಬವನ್ನು ಧಿಕ್ಕರಿಸಿ ಇಡೀ ಕೃಷ್ಣನ ಕುಟುಂಬವೇ ಸೇರಿ ಅಪಹರಣ ನಡೆಸಿದರು ಎಂಬುದನ್ನು ಗಮನಿಸಲಿ. ಇನ್ನು ಮೇಲುಕೋಟೆ ಚೆಲುವರಾಯ ಬೀಬಿ ನಾಚ್ಚಿಯಾರ್ ರವರ ಪ್ರೇಮ ಪ್ರಸಂಗದ ಬಗ್ಗೆ ? ಜಾನಪದದಲ್ಲಿ ಲಿಂಗಾಯತರ ನಂಜುಂಡೇಶ್ವರ-ಬೇಟೇಗಾರ ಕುಲದ ಚಾಮುಂಡಿ, ಹಾಗೇಯೇ ಲಿಂಗಾಯತರ ಶಿವ-ಬೆಸ್ತರ ಗಂಗೆ,ಸೋಲಿಗರ ಬಿಳಿಗಿರಿ ರಂಗ ಮತ್ತು ಬ್ರಾಹ್ಮಣರ ಲಕ್ಷ್ಮಿ ಹಿಗೆ ಜಾತಿಯನ್ನು ಮೀರಿದ ಅನೇಕ ಸಂಬಂಧಗಳನ್ನು ಜಾನಪದರು ಕಂಡುಕೊಂಡು ಹಾಡುತ್ತಾ ಸಂಭ್ರಮಿಸಿದ್ದಾರೆ. ಇದು ಜಾತಿ ವ್ಯವಸ್ಥೆಯ ಮೇಲು ಕೀಳುಗಳ ಲೋಕದಿಂದ ಹೊರಬರುವ ಜಾನಪದರ ತವಕವನ್ನು ಇದು ಎತ್ತಿ ತೋರಿಸುತ್ತದೆ.ಹೀಗೆ ಅಸಂಖ್ಯ ಉದಾಹರಣೆಗಳನ್ನು ಹೇಳಬಹುದು ಆದ್ದರಿಂದ ಪ್ರೇಮ ವಿವಾಹಗಳಿಗೆ ಅಡ್ಡ್ಬರುವವರು ಸ್ವತಃ ಹಿಂದೂ ಧರ್ಮಕ್ಕೆ ವಿರೋಧವಾಗಿದ್ದಾರೆಯೇ ಹೊರತು ಅದರಲ್ಲಿ ತೊಡಗುವವರಲ್ಲ.

  5. armanikanth

    ಬಹಳ ಖುಷಿಯಾಯಿತು ಸರ್
    ನವ ದಂಪತಿಗೆ ಅಭಿನಂದನೆ
    ನಿಮಗೂ…
    ಮಣಿಕಾಂತ್

  6. Sudha ChidanandaGowda

    congrats sir
    happy married life to them
    ನಂ ಕಡೆ ಒಮ್ಮೆ ಬನ್ನಿ
    ನಂ ಸಂಸಾರಾನು ನೋಡಿಕೊಂಡು ಹೋಗುವಿರಂತೆ.

  7. ಜಿ.ಸೋಮಲಿಂಗ

    ನಿಮ್ಮ ಸ್ನೇಹಿತರ ಮಕ್ಕಳು ದಲಿತರ, ಹಿಂದುಳಿದರು, ಬಡವರ ಜೊತೆಗೆ ಪ್ರೀತಿಗೆ ಬಿಳದಿದ್ದದ್ದು ಆಶ್ಚರ್ಯವೆ!. ಲಿಂಗಾಯತ, ಒಕ್ಕಲಿಗ,ಬ್ರಾಹ್ಮಣರಲ್ಲೇ ಕತೆ ಮುಗಿದಿದೆ. ರಂಜಾನ ದರ್ಗಾವರದ್ದು ಏನೊ ಗೊತ್ತಿಲ್ಲ. ಶೆಟ್ಟರ ಸರ್, ಉನ್ನತ ವಿಚಾರ ಹೊಂದಿದ ಯಾರಾದರೂ ಲಿಂಗಾಯತ, ಬ್ರಾಹ್ಮಣ, ಒಕ್ಕಲಿಗ ಸಾಹಿತಿಗಳು ತಾವಾಗಿಯೇ ದಲಿತ, ಹಿಂದುಳಿದ ಜಾತಿಯವರಿಗೆ ತಮ್ಮ ಮಕ್ಕಳನ್ನು ಮದುವೆ ಮಾಡಿಕೊಟ್ಟವರು ಗೊತ್ತೆ ನಿಮಗೆ? ಆಗಿದಿದ್ದರೆ, ಆಗ ಅದು ನಿಜವಾಗಿ ಹೆಮ್ಮೆ ಪಡುವ ಸಂದರ್ಭ ಆಗಬಹುದು. ನವದಂಪತಿಗಳಿಗೆ ಶುಭಾಶಯಗಳು.

    • Amaresh

      ಅಯ್ಯೋ ಬಿಡಿ ಸರ್! ಲಿಂಗಾಯತ, ಬ್ರಾಹ್ಮಣ, ಒಕ್ಕಲಿಗ ಸಾಹಿತಿಗಳು ತಾವಾಗಿಯೇ ದಲಿತ, ಹಿಂದುಳಿದ ಜಾತಿಯವರಿಗೆ ತಮ್ಮ ಮಕ್ಕಳನ್ನು ಮದುವೆ ಮಾಡಿಕೊಡುವುದು ಇರಲಿ, ಸ್ವತಃ ಎಡಗೈ ದಲಿತರು ಬಲಗೈ ದಲಿತರಿಗೆ ಕೊಡುವುದಿಲ್ಲ! ದಲಿತರು ಎಡಗೈ ಬಲಗೈ ಬಿಟ್ಟು ತಮ್ಮೊಳಗೆ ಸಂಬಂಧ ಬೆಳೆಸಿದರೆ grass roots revolution ಆಗುತ್ತದೆ.

      • Amaresh

        Santa ende itteechege kareyalpaduttiruva dalita saahiti chintakaru obbaru maduveyaagiddu braahmana hengasannu anta naanu baredaddu yaako sampaadakarige apathyavenisitu. avaru kattari aadisi nanna comment annu apoornagolisiddaare!

  8. ಜಿ.ಎನ್ ನಾಗರಾಜ್

    ಇಲ್ಲಿ ಸಾಹಿತಿಗಳು ತಮ್ಮ ಮಕ್ಕಳನ್ನು ಮದುವೆ ಮಾಡಿಕೊಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಯುವಕ-ಯುವತಿಯರು ತಾವು ತಾವೇ ಮೆಚ್ಚಿ ಮದುವೆಯಾಗುವ ಪ್ರಶ್ನೆ. ಪ್ರಗತಿಪರರ ಪಾತ್ರ ಮಕ್ಕಳು ಹಾಗೆ ಜಾತಿ ಮೀರಿ ಮದುವೆಯಾಗಲು ಹೊರಟಾಗ ಅದಕ್ಕೆ ಅಡ್ಡಿಪಡಿಸದಿರುವುದು, ಉತ್ತೇಜನ ನೀಡುವುದು, ಅವರು ದಲಿತರನ್ನು ಮದುವೆಯಾಗ ಹೊರಟರೂ ಅಥವಾ ಇತರ ಕೆಳ ಜಾತಿಗಳನ್ನು ಮದುವೆಯಾದರೂ ಅದು ಪ್ರೀತಿ ಮಾಡುವವರ ಇಚ್ಚೆ. ಇನ್ನೂ ಹೆಚ್ಚೆಂದರೆ ತಾವು ದಲಿತರ ಇತರರ ವಿಷಯವಾಗಿ ಬೇಧವೆಣಿಸದೆ ಎಲ್ಲರೊಡನೆ ಬೆರೆಯುವ ಮೂಲಕ, ತಮ್ಮ ಮನೆಗೆ ಆಹ್ವಾನಿಸಿ ಪ್ರೀತಿಯಿಂದ ಸತ್ಕರಿಸುವ ಮೂಲಕ, ಻ವರ ಮನೆಗಳಿಗೆ ಕುತುಂಬ ಸಹಿತವಾಗಿ ಹೊಗಿ ಬರುವ ಾತ್ಮೀಯ ಸಂಬಂಧ ಬೆಳೆಸುವ ಮೂಲಕ ಮಕ್ಕಳೂ ಕೂಡ ೆಲ್ಲರೂ ಒಂದೇ ಎಂಬ ಹೊಸ ಅರಿವು ಅವರ ಮನೋಗತವಾಗುವಂತೆ ಬೆಳೆಸುವುದು ನಂತರ ಆವರ ಆಯ್ಕೆ ಅವರು ಮಾಡಿಕೊಳ್ಳಲು ಸ್ವಾತಂತ್ರ್ಯ ನೀಡುವುದು. ನಾನು ಪ್ರಗತಿಪರನೆಂದು ಸಾರಬೇಕಾಗಿದೆ ಆದ್ದರಿಂದ ನಿಮಗೆ ದಲಿತರೊಡನೆ ಮದುವೆ ಮಾಡುತ್ತೇನೆ ಎಂದು ಹೇರುವುದು ಎಳ್ಳಿನಷ್ಟೂ ಪ್ರಗತಿಪರವಲ್ಲ.

    • ಕೊನಿಕಾ

      “ನಾನು ಪ್ರಗತಿಪರನೆಂದು ಸಾರಬೇಕಾಗಿದೆ ಆದ್ದರಿಂದ ನಿಮಗೆ ದಲಿತರೊಡನೆ ಮದುವೆ ಮಾಡುತ್ತೇನೆ ಎಂದು ಹೇರುವುದು ಎಳ್ಳಿನಷ್ಟೂ ಪ್ರಗತಿಪರವಲ್ಲ.” ನಿಜ. ಆದರೆ ತಾವುಗಳು ಪ್ರಗತಿಪರರಾಗಿರುವುದರಿಂದ ತಮ್ಮ ಮಕ್ಕಳನ್ನು ದಲಿತರೊಡನೆ ಮದುವೆ ಮಾಡುವುದು (ವಿಚಾರವಾದ ಬಲದಿಂದ ವಧು ವರರನ್ನು ಒಲಿಸಿಕೊಂಡು ಅವರ ಸಹಮತದೊಂದಿಗೆ) ತಮ್ಮ ಕರ್ತವ್ಯವೇ ಆಗಿದೆ.

    • ಜಿ.ಸೋಮಲಿಂಗ

      ಹೌದಾ ನಾಗರಾಜ್ ಸರ್, ಕ್ಷಮಿಸಿ, ನನಗೆ ಗೊತ್ತಿರಲಿಲ್ಲ ಇದು. ಹಾಗಾದರೆ ಒಬ್ಬ ಖ್ಯಾತ ಜನಿವಾರ ಪತ್ರಕರ್ತರು ಬರೆಯುತ್ತಿದ್ದ ‘ಎಲ್ಲರೂ ಭಗತಸಿಂಗ್ ,ಸುಭಾಸರು ಹುಟ್ಟಬೇಕು ಅಂತಾರೆ, ಆದರೆ ನಮ್ಮ ಮನೆಯಲ್ಲಲ್ಲ, ಪಕ್ಕದ ಮನೆಯಲ್ಲಿ’ ಎಂದಿದ್ದು ಸತ್ಯವೆ ಎಂದಾಯ್ತು. ಅಂತರ್ಜಾತಿ ವಿವಾಹ ನಡಿಬೇಕು, ಜಾತಿ ನಿರ್ಮೂಲನೆ ಆಗಬೇಕು ಅಂದಿದ್ದು ಬರೆಯಲು, ಮಾತಿಗೆ ಅಂದಂಗಾಯ್ತು. ಬೇರೆಯವರ ಮಕ್ಕಳನ್ನ ಬಾವಿಗೆ ತಳ್ಳಿ ನೋಡೋದು ಅಂತಾಯ್ತು. ಅಂತರ್ಜಾತಿ ಅಂದರೆ ಕೇವಲ ಲಿಂಗಾಯಿತರು, ಬ್ರಾಹ್ಮಣರು, ಒಕ್ಕಲಿಗರ ನಡುವಿನ ಸಂಬಂಧಾನಾ ಸರ್? ಅದೇ ಕ್ರಾಂತಿನಾ ಸರ್? ಅಕಸ್ಮಾತ ಇವರ ಮಕ್ಕಳು ಪ್ರೀತಿಗೆ ಬಿಳದಿದ್ದರೆ, ಇವರೇ ಹೆಣ್ಣು,ಗಂಡು ಹುಡುಕ್ತಾರಲ್ಲ ಸರ್, ಆಗಲಾದ್ರೂ ದಲಿತ, ಹಿಂದುಳಿದವರ ಮಕ್ಕಳನ್ನು ತಮ್ಮ ಮನೆಗೆ ಕರ್ಕೊಬಹುದಲ್ಲ,ಅಲ್ವರಾ? ತಾವು ಹೇಳೋದು ಬಾಯ್ಮಾತಿಗಲ್ಲ ಅಂತ ತೋರಿಸಿಕೊಡಬಹುದು ಅಲ್ವರಾ? ನೀವು ಮುಂದುವರಿದ ,ಶ್ರೀಮಂತ, ಅಧಿಕಾರಿವರ್ಗದ, ರಾಜಕಾರಣಿ ದಲಿತರನ್ನ ಮನೆಗೆ ಕರೆದು ಸತ್ಕಾರ ಮಾಡ್ತಿರಿ ನನಗೆ ಗೊತ್ತು, ಆದರೆ ಗುಡಸಲಿಲ್ಲಿರೋರ್ನ, ನಿಮಗಿಂತ ಕೆಳಸ್ಥರದಲ್ಲಿರೋರ್ನಾ ಕರೆತೀರಾ ಸರ್ ಮನೆಗೆ? ನಿಮ್ಮ ಊಟದ ಮನೆಯಲ್ಲೇ, ಪಕ್ಕದಲ್ಲೇ ಕೂಡಿಸ್ಕೊಂಡು ಊಟ ಹಾಕ್ತಿರ ? ಬಾಯಿ ಮಾತಿನ ಕರುಣೆ,ಸಹಾನುಭೂತಿ ತೆಗೆದ್ಕೊಂಡು ಏನು ಮಾಡೋದು ಸರ್?

  9. venkatesh

    ನಮಸ್ಕಾರ ಶೆಟ್ಟರ್ ಸರ್, ಕಾಮೆಂಟ್ ಗಿರಲ್ಲಿ ಬಹಳ ಮಂದಿ ಆಚಾರ್ಯರು ಮಾಡಿದ್ದು ತಪ್ಪು, ನಿಮ್ಮದು ಪ್ರಗತಿಪರ ವಿಚಾರ , ಧೋರಣೆ ಅಂತ ಹೇಳ್ತಾ ಇದ್ದಾರೆ, ಸರಿ ಆದ್ರೆ ಯಾರು ಈ ಕೆಳಗಿನ ಅಂಶಗಳ ಬಗ್ಗೆ ವಿಚಾರ ಮಾಡದೇ ಇದ್ದಿದು ಮಾತ್ರ ವಿಪರ್ಯಾಸನೋ ಅಥವಾ ಕಾಲದ ವ್ಯಂಗ್ಯನೋ ಅಂತ ತಿಳಿಲಿಲ್ಲ .
    ೧. ಅಲ್ಲ ಸರ್, ನಿಮ್ಮ ಮಗ ಆ ಹುಡುಗಿನ ಅಷ್ಟು ವರ್ಷದಿಂದ ಪ್ರೀತಿಸ್ತಿದ್ದ ಅಂತ ಹೇಳಿದ್ರಲ, ಅಷ್ಟು ಇದ್ರೂ ನಿಮ್ ಮಾತಲ್ಲೇ ಹೇಳೋದಾದ್ರೆ ‘ಯಾವ್ದೋ ತಲೆಮಾಸಿದ’ ಒಬ್ಬ ಹುಡುಗಿ ಏನೋ ಅಂದ್ಲು ಅಂತ ತನ್ನ ಪ್ರೀತಿಸಿದ ಹುಡುಗಿನೇ ಅನುಮಾನ ಪಡ್ತಾನೆ ಅಂದ್ರೆ ಅದು ಪಕ್ವವಾಗಿರೋ ಪ್ರೀತಿ ಅಂತ ನಿಮಗೆ ಅನ್ಸುತ್ತಾ? ಏನೋ ನಿಮ್ಮಂತ ತಿಳಿದವರು ಅಪ್ಪ ಆಗಿದ್ದಕ್ಕೆ ನಿಮ್ ಮಗಗೆ ಬುದ್ಧಿ ಹೇಳಿ ಸರಿ ಮಾಡಿದಿರಿ, ಇಲ್ಲ ಅಂದ್ರೆ ಆ ಹುಡುಗಿ ಏನ್ ಮಾಡಬೇಕಿತ್ತು? ನೀವು ಆ ಹುಡುಗಿ ಜಾಗದಲ್ಲಿ ಇದ್ರೆ ಏನ್ ಮಾಡ್ತಾ ಇದ್ರಾ?
    ೨. ನಿಮ್ ಮಗ ಅನುಮಾನ ಪಟ್ಟ ಅಂತ ಆ ಹುಡುಗಿ ಬಿಟ್ಟಿದ್ರೆ , ಅದಕ್ಕೂ ಆಚರ್ಯರನ್ನೇ ಹೊಣೆ ಮಾಡ್ತಿದ್ದರ?
    ೩. ” ಆಚಾರ್ಯರು ವಿಲಿವಿಲಿಗುಟ್ಟಿದರು” , “ವಜ್ರಾಘಾತವಾಗಿತ್ತು” ಅಂತೆಲ್ಲ ಬರೆಯೋ ನೀವು ನಿಮ್ ಮಗಳು ಇದೆ ಜಾಗಾದಲ್ಲಿ ಇದ್ದು ಅಂತ ಅನುಮಾನಪಡೋ ಹುಡುಗನ್ನ ಮಾಡುವೆ ಆಗ್ತೀನಿ ಅಂದಿದ್ರೆ ನೀವು ಒಪ್ತಿದ್ರ?
    ಸರ್, ಇದರಲ್ಲಿ ನಾನು ಯಾರನ್ನು ತೆಗಳುವ ಅಥವಾ ಮನನೋಯಿಸೋ ಉದ್ದೇಶ ಇಟ್ಕೊಂಡು ಹೇಳ್ತಾ ಇಲ್ಲ, ಆದ್ರೆ ಎಲ್ಲದಕ್ಕೂ ಬ್ರಾಹ್ಮಣರನ್ನೇ ಗುರಿಯಾಗಿ ಅವರದೇ ತಪ್ಪು ಅನ್ನೋ ಥರ ಹೇಳ್ತಾ ಇರೋದರಿಂದ ಹೀಗೆ ಹೇಳಬೇಕಯ್ತು. ಇನ್ನೊಂದು ವಿಷಯ ಅಂದ್ರೆ, ಎಲ್ಲರಿಗು ನಿಮ್ಮಂತ ಅಪ್ಪ ಸಿಗಲ್ಲ ಸರ್, who can give suggetion/guidance/assurance whenever the younger generation or so called inter-marriage lovers and their supporters are in need.
    And I wish a happy married life to ur son and daughter-in law.

  10. Amaresh

    ಪ್ರಿಯ ನಾಗರಾಜ್ ಸರ್, ಬಹುತೇಕ ಪ್ರೇಮ ವಿವಾಹಗಳು “ಜಾತಿ ಕಂದರಗಳನ್ನು ಲಂಘಿಸುವ” ಉದ್ದೇಶದಿಂದ ಕೈಗೊಂಡ ಕ್ರಿಯೆ ಅಲ್ಲ, ಅವು ಪ್ರೇಮಿಗಳು ತಮ್ಮ ಸ್ವಾರ್ಥಕ್ಕೆ ಕೈಗೊಂಡ ಕ್ರಿಯೆ. ಅಪ್ಪ ಅಮ್ಮ ತಮ್ಮ ಮಕ್ಕಳ ಸ್ವಾರ್ಥ ಸಾಧನೆಗೆ ವಿರೋಧ ವ್ಯಕ್ತಪಡಿಸಿದಾಗ ತಮ್ಮಂತಹ “ಪ್ರಗತಿಪರರು” ಆ ತಂದೆತಾಯಿಗಳಲ್ಲಿ ಜಾತಿಪ್ರೇಮವನ್ನೂ ಪ್ರೇಮಿಗಳಲ್ಲಿ ಜಾತ್ಯತೀತ ಭಾವವನ್ನೂ ಕಾಣುತ್ತೀರಿ; ಅಪ್ಪ ಅಮ್ಮನನ್ನು ವಿರೋಧಿಸುತ್ತೀರಿ, ಪ್ರೇಮಿಗಳಿಗೆ ಗೃಹಭಂಜಿಸಲು ಉತ್ತೇಜನ ನೀಡುತ್ತೀರಿ. ಇಲ್ಲಿ ಪ್ರಗತಿಪರವಾದದ್ದು ಏನಿದೆ?!!
    ನಮ್ಮ ನಾಡಿನ ಸಾಮಾಜಿಕ ಜೀವನದಲ್ಲಿ arranged marriage ಹಾಸು ಹೊಕ್ಕಾಗಿದೆ. ಜಾತಿಯು ಆರೋಗ್ಯಕರ ಸಾಮಾಜಿಕ ಜೀವನಕ್ಕೆ ಅಡ್ಡಿ ಬರುತ್ತದೆ ಎಂದು ತಾವುಗಳು ಭಾವಿಸುತ್ತೀರಿ ಅಲ್ಲವೇ? ಹಾಗಾದರೆ ತಾವು “ಪ್ರಗತಿಪರರು” ಮಾಡಬೇಕಾದ ಮೊದಲ ಕೆಲಸ ಅಂತರ್ಜಾತೀಯ arranged marriage ಗಳನ್ನು ನಡೆಸುವುದು. ತಮ್ಮ ಮಕ್ಕಳಿಂದಲೇ ಶುರು ಮಾಡಿದರೆ grass roots ಕ್ರಾಂತಿ ಆಗುತ್ತದೆ.

  11. Anonymous

    ಅಪ್ಪ ಅಮ್ಮಂದಿರಿಗೆ ಮಕ್ಕಳ ಮೇಲೆ ತಮ್ಮ ಇಚ್ಚೆಯನ್ನು ಹೇರುವ ಯಾವ ಹಕ್ಕೂ ಇಲ್ಲ. ಅವರನ್ನು ಅವರವರ ಇಚ್ಚೆಗನುಗುಣವಾಗಿ ಪ್ರೀತಿಸಲು ಮದುವೆಯಾಗಲು ಅಡ್ಡಿ ಮಾಡದಿರುವುದೇ ಇಲ್ಲ ಚರ್ಚಿತವಾಗುತ್ತಿರುವ ವಿಷಯದಲ್ಲಿ ಅತ್ಯಂತ ಪ್ರಧಾನವಾದದ್ದು.ಅಲ್ಲಿಂದ ಮುಂದೆ ಎಲ್ಲರೂ ಒಂದೇ ಎನ್ನುವ ಭಾವನೆ ಮೂಡಲು ಮೊದಲಾಗುತ್ತದೆ. ಇನ್ನು ಅರೇಂಜ್ ಡ್ ಮದುವೆಗಳ ಪ್ರಶ್ನೆಯೇ ಬಾಲ್ಯ ವಿವಾಹ ಕಾಲದ, ಮಕ್ಕಳನ್ನು ಸಮಾಜದಲ್ಲಿ ಬೆರೆಯಲು-ವಿದ್ಯಾಭ್ಯಾಸ, ಉದ್ಯೋಗಗಳಿಗಾಗಿ,ಇತರ ಸಾಮಾಜಿಕ ಕ್ರಿಯೆಗಳಲ್ಲಿ- ಬಿಡದ ಕಾಲದ ಓಬಿರಾಯನ ಕಾಲದ ಪದ್ಧತಿ. ಆದ್ದರಿಂದ ಜಾತಿರಹಿತ ಅರೇಂಜ್ಡ್ ವಿವಾಹಗಳು ಜಾತಿಯೊಳಗಿನ ಅರೇಂಜ್ಡ್ ವಿವಾಹಳಂತಹುದೇ ಪ್ರಕ್ರಿಯೆ . ನಿಜ ಪ್ರೇಮ ವಿವಾಹಗಳು ಜಾತಿ ಕಂದರಗಳನ್ನು ಲಂಘಿಸುವ ಉದ್ದೇಶದಿಂದ ಕೈಗೊಂಡ ಕ್ರಿಯೆಗಳೇನಲ್ಲ. ಆದರೆ ಪ್ರೇಮಿಗಳ ಮೇಲೆ ಸ್ವಾರ್ಥವನ್ನು ಆರೋಪಿಸುವುದು ಮಾತ್ರ ಅತ್ಯಂತ ಸ್ವಾರ್ಥದ ಕ್ರಿಯೆ. ಪ್ರೀತಿಸಿ ವಿವಾಹವಾಗುವುದು ಮಾನವರಾಗೋಣ ನಾವು ಮಾನವರಾಗೋಣ ಎನ್ನುವ ಆರಂಭಿಕ ಕ್ರಿಯೆ. ಪ್ರೇಮ ವಿವಾಹಗಳು ಸಮಾಜವನ್ನೆಲ್ಲಾ ವ್ಯಾಪಿಸ ತೊಡಗಿದಾಗ ತಂತಾನೆ ಜಾತಿಯ ಕಂದರಗಳನ್ನು ಲಂಘಿಸುವ ಕ್ರಿಯೆಯೂ ಆಗುತ್ತದೆ. ಈಗಲೂ ಅನೇಕ ಬಾರಿ ಅದು ಜಾತಿರಹಿತ ಮನೋಭಾವದಿಂದ ಹುಟ್ಟಿ ಮನೆಯವರು ವಿರೋಧ ಮಾಡಿದಾಗ ಜಾತಿ ವ್ಯವಸ್ಥೆಯ ವಿರುದ್ಧ ಪ್ರಜ್ಞಾ ಪೂರ್ವಕ ಹೋರಾಟವಾಗಿ ಮಾರ್ಪಡುತ್ತದೆ. ಇದಿಷ್ಟೂ ಇಲ್ಲಿ ಚರ್ಚೆಗೆ ಬಂದಿರುವ ವಷಯದ ಬಗೆಗಿನ ುತ್ತರ.ಇನ್ನು ವೈಯುಕ್ತಿಕ ಪ್ರಶ್ನೆ- ನಾನು ಕೆಲಸ ಮಾಡುವುದೇ ದಲಿತರೇ ಹೆಚ್ಚಾಗಿರುವ ಕೃಷಿ ಕೂಲಿಕಾರರೊಡನೆ. ಅವರು ನಮ್ಮ ಮನೆಗೆ ಬಂದು ಹೋಗುವುದು ನಮ್ಮ ಜೊತೆಯಲ್ಲಿಯೇ ಸರಿ ಸಮನಾಗಿ ಕುಳಿತು ಊಟ ಮಾಡುವುದು. ನಾನು ಅವರ ಗುಡಿಸಲುಗಳಲ್ಲಿ ತಂಗುವುದು, ಊಟ ಮಾಡುವುದು ದಿನನಿತ್ಯದ ಅಲ್ಲದಿರಬಹುದು ಆದರೇ ಪ್ರತಿವಾರದ ಚರ್ಯೆ. ಇನ್ನು ಬಡವ ದಲಿತರ ಹಾಗೂ ಶ್ರೀಮಂತ ಮೇಲ್ಜಾತಿಯವರ ಮದುವೆಗಳನ್ನಂತೂ ನಡೆಯುವ ಸಂಭವ ಕಂಡಾಗೆಲ್ಲಾ ಪ್ರೋತ್ಸಾಹಿಸಿದ್ದೇನೆ, ಸಹಾಯ ಮಾಡಿದ್ದೇನೆ.

  12. ಜಿ.ಎನ್. ನಾಗರಾಜ.

    ಪ್ರೀತಿಸುವವರತಿಗೆ ಜಾತಿ ಕಂದರಗಳನ್ನು ಲಂಘಿಸುವ ಗುರಿಯೇನೂ ಇರುವುದಿಲ್ಲವೆಂಬ ಮಾತು ಸರಿಯಾದದ್ದೇ. ಆದರೆ ಅದು ಸ್ವಾರ್ಥದಿಂದ ಕೂಡಿದ್ದು ಎಂದು ಆರೋಪಿಸುವುದು ಅತ್ಯಂತ ನಿಸ್ವಾರ್ಥದ ಸಂಬಂಧಕ್ಕೆ ಕೆಸರೆರೆಚುವ ಅತ್ಯಂತ ಸ್ವಾರ್ಥದ ಕ್ರಿಯೆ. ಪ್ರೇಮಿಸುವಾಗ ಮೂಡುವ ಒಂದೇ ಭಾವ- ನಾವೆಲ್ಲರು ಒಂದೇ ಮಾನವ ಕುಲಕ್ಕೆ ಸೇರಿದವರು ಎಂಬ ಅಪ್ರಜ್ಞಾಪೂರ್ವಕ ಭಾವನೆ.ಜಾತಿ ಭಾವನೆ ವಿರಹಿತವಾದ ಪ್ರೀತಿಯನ್ನು ಮನೆಯವರು ಜಾತಿ ಭಾವನೆಯಿಂದ, ಸ್ವಾರ್ಥದಿಂದ ವಿರೋಧಿಸಿದಾಗ ಅದನ್ನು ಎದುರಿಸುವುದು ಜಾತಿ ವ್ಯವಸ್ಥೆಯ ವಿರುದ್ಧದ ಹೋರಾಟದ ಕ್ರಿಯೆಯಾಗಿ ಪರಿಣಮಿಸುತ್ತದೆ. ಇನ್ನು ವೈಯುಕ್ತಿಕ ಪ್ರಶ್ನೆ ನಾನು ಹೆಚ್ಚಾಗಿ ದಲಿತರೇ ಇರುವ ಕೃಷಿ ಕೂಲಿಕಾರರ ನಡುವೆ ಅವರ ಸಮಾನತೆಗಾಗಿ ಕೆಲಸ ಮಾಡುವವನು. ಾದ್ದರಿಂದ ಻ವರು ನಮ್ಮ ಮನೆಗೆ ಬರುವುದು ನನ್ನ ಜೊತೆಯಲ್ಲಿಯೇ ಊಟ ಮಾಡುವುದು, ನಾನು ಅವರ ಗುಡಿಸಿನಲ್ಲಿ ತಂಗುವುದು, ಊಟ ಮಾಡುವುದು ತಿಂಗಳಿಗೆ ಹಲವು ಬಾರಿ ನಡೆಯುವ ಘಟನೆಗಳು. ದಲಿತ ಕೂಲಿಕಾರರ ಹಾಗೂ ಮೇಲ್ಜಾತಿ ಶ್ರೀಮಂತರ ನಡುವೆ ಪ್ರೀತಿ,ಮದುವೆಗಳ ಸಂಭವ ಉಂಟಾದಾಗೆಲ್ಲಾ ಸಂತೋಷದಿಂದ ಅದಕ್ಕೆ ಪ್ರೋತ್ಸಾಹ , ನೆರವು ನೀಡಿದವನು ಎಂದಷ್ಟೇ ಹೇಳ ಬಲ್ಲೆ ನನ್ನ ಬಗ್ಗೆ ನಾನೇ ಬಹಳ ಹೇಳಿಕೊಳ್ಳುವುದು ತರವಲ್ಲ.

    • ಜಿ.ಸೋಮಲಿಂಗ

      ಹೌದೆ ಸಾರ್, ಗೊತ್ತಾಯ್ತು ಬಿಡಿ, ನೀವೆಲ್ಲಾ ಹೇಳೊ ಪ್ರಗತಿಪರತೆ ಅಂದರೆ ಏನೆಂದು, ಆಚಾರ ಹೇಳೊಕೆ, ಬದನೆಕಾಯಿ ತಿನ್ನೊಕೆ ಅಂದಗಾಯ್ತು. ಅರೆಂಜ್ಡ ಮ್ಯಾರೆಜ್ ಒಬಿರಾಯನ ಕಾಲದ ಪದ್ಧತಿ ಅಂದು ಬಿಟ್ಟರೆ ಈಗ ಈ ವಿಷಯದಿಂದ ಪಲಾಯನ ಮಾಡ್ಲಿಕ್ಕೆ ಒಂದು ದಾರಿ ಆಯ್ತು ಅಲ್ವರಾ?. ಇನ್ನು ಮುಂದೆ ಶಾಲೆ-ಕಾಲೇಜುಗಳಲ್ಲಿ ಪ್ರೀತಿಗೆ ಬಿಳೋದು ಹೇಗೆ, ಬಿಳಿಸೋದು ಹೇಗೆ, ಪ್ರೀತಿಸುವುದು ಹೇಗೆ ಎಂದೆಲ್ಲ ಪಠ್ಯ ಸೇರಿಸೋದರ ಜೊತೆಗೆ ಕೆಳ ಜಾತಿಯವರ ಜೊತೆ ಪ್ರೀತಿಗೆ ಬೀಳೊದು ಹೇಗೆ ಎಂಬೋದನ್ನು ಸೇರಿಸ್ಬೇಕು. ನೀವೆಲ್ಲ ಇಲ್ಲಿ ಹೇಳ್ತಿದ್ದ ಮಧುವರಸಯ್ಯ-ಹರಳಯ್ಯ ಮಕ್ಕಳ ಮದುವೆ ಕ್ರಾಂತಿ ಎಂತದ್ದು ಸಾರ್? ಲವ್ ಮ್ಯಾರೆಜಾ ? ವಚನಕಾರರ ಉಳಿದೆಲ್ಲ ತತ್ವಗಳು ಈಗ ಹೊಂದುತ್ತವೆಯಾದರೆ, ಇದ್ಯಾಕೆ ಹೊಂದಲ್ಲ ಸಾರ್?
      ಇನ್ನೊಂದೇನೆಂದರೆ, ಅವರ ಗುಡಿಸಲಿನಲ್ಲಿ ಕೂತು, ಅವರು ಮಾಡಿದ ಊಟಾನೇ ನೀವು ಮಾಡ್ತಿರಿ ಅಂದ್ರೆ ನಿಮ್ಮನ್ನು ಮೆಚ್ತಿನಿ. ಇದೊಂದು ಒಳ್ಳೆಯ ಕೆಲಸ ಸಮಾಜಾನ್ನ ಹತ್ರ ತರೋಕೆ.

  13. ಶಮ, ನಂದಿಬೆಟ್ಟ

    “ವಾಸ್ತವವಾಗಿ ಜಾತಿ ವ್ಯವಸ್ಥೆ ಇದೆ ಎಂದೋ ಇಲ್ಲವೆಂದೋ ಪಂಡಿತ-ಪಾಮರರು ಗಟ್ಟಿಯಾಗಿ ವಾದಾಡಿಕೊಳ್ಳುತ್ತಿರುವಲ್ಲಿ ಸದ್ದು ಗದ್ದಲವಿಲ್ಲದೇ ಮನದ ಮಾತನ್ನು ಕೇಳಿಸಿಕೊಂಡು ಜಾತಿ ಕಂದರಗಳನ್ನು ಲಂಘಿಸುತ್ತಿರುವವರಲ್ಲಿ ನನ್ನ ಮಗ ಸೊಸೆ ಕೂಡ ಇದ್ದಾರೆಂಬ ಹೆಮ್ಮೆ ಇದೆ.”
    ನಿಮ್ಮ ಬಗ್ಗೆ ಹೆಮ್ಮೆ ನಮಗಿದೆ..
    ದಂಪತಿಗಳಿಗೆ ಶುಭ ಹಾರೈಕೆಗಳು..:)

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading