
ಮೊನ್ನೆ ನರಕ ಚತುರ್ದಶಿಯಂದು ಕೊಡಗಿನ ಸೋಮವಾರಪೇಟೆಯಲ್ಲಿ ನಾವು ತಂಗಿದ್ದ ಹೋಂ ಸ್ಟೇನಿಂದ ನಸುಕಿನಲ್ಲಿ ಹೊರಟ ನಾವು ಮಡಿಕೇರಿಗೆ ಹೋಗುವ ಮಾರ್ಗದಲ್ಲಿರುವ ಮಕ್ಕಂದೂರು ಎಂಬ ಊರಿಂದ ಮುಂದೆ ಸಾಗಿ ಒಂದೆಡೆ ಅಬ್ಬಿ ಜಲಪಾತಕ್ಕೂ ಇನ್ನೊಂದೆಡೆ ಪುಷ್ಪಗಿರಿಯಲ್ಲಿ ಸ್ಥಿತವಾಗಿರುವ ಶೀತಲ ಗಾಳಿ ಬೀಸುವ ಮಾಂದಲಪಟ್ಟಿ ಎಂಬ ಹೆಸರಿನ ಬೆಟ್ಟಕ್ಕೂ ದಾರಿ ಕವಲೊಡೆಯುವಲ್ಲಿಗೆ ಬಂದು ತಲುಪಿದೆವು. ಅಲ್ಲಿ ಆಗಲೇ ಪ್ರವಾಸಿಗಳನ್ನು ಮಾಂದಲಪಟ್ಟಿಗೆ ಕೊಂಡೊಯ್ಯಲು ಏಳೆಂಟು ಬಾಡಿಗೆ ಜೀಪುಗಳು ನಿಂತಿದ್ದವು. ಅಲ್ಲಿಂದ ಮುಂದೆ ಸುಮಾರು ಹದಿನಾರು ಕಿಲೋಮೀಟರುಗಳಷ್ಟು ದೂರದ ಪ್ರಯಾಣದ ಅರ್ಧದಷ್ಟು ಭಾಗ ದೊಡ್ಡ ದೊಡ್ಡ ಕಲ್ಲುಗಳಿಂದಲೂ, ಹಳಕುಮಣ್ಣಿನ ಹರಳುಗಳಿಂದಲೂ, ತಗ್ಗುದಿನ್ನೆಗಳಿಂದಲೂ ಕೂಡಿದ ಒರಟು ಏರು ದಾರಿ. ನಮ್ಮ ಫೋರ್ಡ್ ಫಿಗೊ ಕಾರನ್ನೇ ಕೊಂಡೊಯ್ಯ ಬಹುದೆಂದು ಅನಿಸಿದರೂ ಅದಕ್ಕೇನಾದರೂ ಹೆಚ್ಚು ಕಮ್ಮಿ ಆದರೆ ಮಡಿಕೇರಿಯಿಂದ ಮೆಕ್ಯಾನಿಕ್ ಗಳು ಬರಬೇಕು. ಹಿಂದಿನ ದಿನ ಮಲ್ಲಹಳ್ಳಿ ಜಲಪಾತದ ದಾರಿಯಲ್ಲಿ ಮರಳುವಾಗ ನನ್ನ ಮಗ ಒಂದೆಡೆ ತುಂಬ ಒಡಕಾಗಿದ್ದ ಸ್ಟೀಪ್ ಏರೊಂದನ್ನು ಏರಿಸುವ ಯತ್ನದಲ್ಲಿ ಸ್ವಲ್ಪ ದೀರ್ಘ ಕಾಲ ಡಿಕ್ಲಚ್ ಮಾಡುತ್ತ ಎಕ್ಸಲೆರೇಟರ್ ಒತ್ತಿದ ಪರಿಣಾಮವಾಗಿ ಕ್ಲಚ್ ಪ್ಲೇಟುಗಳು ಉಜ್ಜಿಕೊಂಡು ಉಂಟಾದ ಕಾವು ಔಟ್ಲೆಟ್ ಪೈಪ್ ನಿಂದ ಹೊಗೆಯಾಗಿ ಹೊರಟು ನಮ್ಮ ಕಾರಿನ ಬಾನೆಟ್ ನಿಂದ ಸುಟ್ಟ ವಾಸನೆ ಸಮೇತ ಹೊರ ಚಾಚಿ ಆತಂಕ ಉಂಟು ಮಾಡಿತ್ತು ಬೇರೆ. ಯಾಕಿದ್ದೀತು ಎಂದು ಕಾರನ್ನು ಅಲ್ಲೇ ಪಾರ್ಕ್ ಮಾಡಿ ಒಂದು ಜೀಪು ಗೊತ್ತು ಮಾಡಿಕೊಂಡು ಹೊರಟೆವು.
ಜೀಪಿನ ಡ್ರೈವರ್ ಬಲು ಕುಶಾಲಿನಿಂದ ಮಾತನಾಡುತ್ತ ತಾನು ಹೇಗೆ ವಾರಕ್ಕೊಮ್ಮೆ ಜೀಪನ್ನು ಗ್ಯಾರೇಜಿಗೆ ಕೊಂಡೊಯ್ದು ಅದರ ನಟ್ಟುಬೋಲ್ಟುಗಳನ್ನು ಬಿಗಿಗೊಳಿಸಬೇಕಾಗುತ್ತದೆ, ಹೇಗೆ ನಾಲ್ಕು ಸಾವಿರ ಕಿಲೋಮೀಟರ್ ಓಡಿ ಮುಗಿಸಿದ ಮೇಲೆ ಸಪಾಟಾದ ಅದರ ಟೈರುಗಳನ್ನು ಬದಲಿಸಬೇಕಾಗುತ್ತದೆ ಎಂದೆಲ್ಲ ಮಾತಾಡುತ್ತ ಆ ಒಡಕು ಏರುದಾರಿ ತನಗೂ ತನ್ನ ಸೆಕೆಂಡ್ ಹ್ಯಾಂಡ್ ಮಹಿಂದ್ರಾ ಜೀಪಿಗೂ ಒಂದು ಲೆಕ್ಕವೇ ಅಲ್ಲ ಎಂಬಂತೆ ಬಂಡೀಗಾಲಿಯ ಮರಿಯಂತಿದ್ದ ದೊಡ್ಡ ಸ್ಟೀರಿಂಗ್ ವ್ಹೀಲನ್ನು ತಿರುವುತ್ತ ಓಡಿಸುತ್ತಿದ್ದ. ಮಾರ್ಗಮಧ್ಯೆ ಎಡಗಡೆ ತಿರುಗಿದಾಗ ಬಲಬದಿಯ ಏರುದಾರಿಯತ್ತ ಕೈತೋರಿದ ನನ್ನ ಮಗ ನಾವು ಮಾಂದಲಪಟ್ಟಿಗೆ ಹೋಗಬೇಕಾದ ದಾರಿ ಅದಲ್ಲವೇ? ಎಂದ. ಮೊದಲು ಹಾಗೇ ಹೋಗುತ್ತಿದ್ದೆವು, ಈಗ ಹಳ್ಳಿಯೊಂದಕ್ಕೆ ಹೋಗುವ ಈ ಕಚ್ಚಾ ದಾರಿಗೆ ಟಾರು ಹಾಕಿದ ಮೇಲೆ ಆ ಮೊದಲಿನ ಮಾರ್ಗಕ್ಕಿಂತ ಐದು ಕಿಲೋಮೀಟರ್ ಕಡಿಮೆ ಅಂತರದ ಈ ದಾರಿಯಲ್ಲೇ ನಮ್ಮ ಜೀಪುಗಳು ಓಡುವದು ಎಂದ. ನನ್ನ ಮಗನಿಗೆ ನಿರಾಶೆಯಾಯಿತು. ಅವನು ಒಂದೆರಡು ಸಲ ಕಡಿದಾದ ಆ ಮಾರ್ಗದಿಂದ ಮಾಂದಲಪೇಟೆಗೆ ಹೋಗಿದ್ದ. ಅದರ ಕುರಿತು ನಮ್ಮ ಜೊತೆ ಹಿಂದಿನ ದಿನ ಮಾತಾಡಿದ್ದ. ನನ್ನ ಮಗನ ಆಸಕ್ತಿಯನ್ನು ಗಮನಿಸಿದ ಡ್ರೈವರ್ ನಾವು ಚೌಕಾಶಿ ಮಾಡಿ ನಿಗದಿಗೊಳಿಸಿದ ಸಾವಿರ ರೂಪಾಯಿಗಿಂತ ತಾನು ಕೇಳಿದ್ದ ಸಾವಿರದಿನ್ನೂರು ರೂಪಾಯಿಗಳನ್ನು ನಾವು ಸಂಪ್ರೀತರಾದ ಪಕ್ಷದಲ್ಲಿ ತನಗೆ ಕೊಡಬಹುದೆಂಬ ಆಶೆಯಿಂದ ಮರಳಿ ಬರುವಾಗ ನಾವು ಇಚ್ಛಿಸಿದರೆ ಆ ಮಾರ್ಗದಲ್ಲಿ ಕರೆ ತರುವದಾಗಿ ಹೇಳಿದ.
ಮಾಂದಲಪಟ್ಟಿಯ ಪದತಲದಲ್ಲಿ ಇಳಿದ ನಾವು ಕಲ್ಲುಮಣ್ಣುಹುಲ್ಲು ಮಿಶ್ರಿತ ಮಬ್ಬುಗೆಂಪು ದಿಬ್ಬವನ್ನು ಏರತೊಡಗಿದೆವು. ನನ್ನ ಸೊಸೆ ಮತ್ತು ಹೆಂಡತಿ ಗಾಳಿಪಟ ಸಿನಿಮಾದಲ್ಲಿ ಮುಗಿಲುಪೇಟೆ ಎಂಬ ಹೆಸರಿನ ಸ್ಥಳದ ಶೂಟಿಂಗ್ ಆದದ್ದು ಇಲ್ಲೇ ಎಂದು ಮಾತಾಡಿಕೊಳ್ಳುತ್ತಿದ್ದರು. ನಾನು ಆಗಲೇ ತಣ್ಣೀರು ಗೊಜ್ಜಿದ ಇಫೆಕ್ಟ್ ನೊಂದಿಗೆ ಭರ್ರನೇ ಬೀಸುತ್ತಿದ್ದ ಗಾಳಿಗೆ ಮುದುಡತೊಡಗಿದ್ದೆ. ಹಸಿರು ವೆಲ್ವೆಟ್ ಬಟ್ಟೆ ತೊಟ್ಟಂತೆ ನವಿರಾಗಿ ತೋರುತ್ತಿದ್ದ ಆ ವಿಸ್ತಾರವಾದ ಪಶ್ಚಿಮ ಘಟ್ಟದ ಬೆಟ್ಟಗುಡ್ಡಗಳ ಸಾಲನ್ನು ಕಣ್ತುಂಬಿಕೊಳ್ಳುತ್ತ, ಫೋಟೋ ತೆಗೆಯುತ್ತ ಒಂದು ತಾಸು ಅಲ್ಲಿ ಕಳೆದು ನನ್ನ ಮಗ ಮೊದಲು ಹೋಗಿದ್ದ ಹೆಚ್ಚು ಒಡಕು, ಒರಟು, ಬಳಸು ಮಾರ್ಗದಲ್ಲಿ ಮರಳಿದೆವು. ಡ್ರೈವರ್ ಮಾತಾಡುತ್ತಲೇ ಇದ್ದ. ಗುಜರಾತಿಯೊಬ್ಬ ಕೂಡ ಇತ್ತೀಚೆ ಈ ಒಡಕು ದಾರಿಯಲ್ಲೇ ತನ್ನನ್ನು ಕೊಂಡೊಯ್ಯುವಂತೆ ಕೇಳಿದ್ದನೆಂದೂ, ಆ ದಾರಿಯಲ್ಲಿ ಹೋದರೆ ಮಜಾ ಆಯೇಗಾ ಎನ್ನುತ್ತ ಅದರಲ್ಲಿ ಕೊಂಡೊಯ್ದರೆ ತಾನು ಏಕ ಹಜಾರ್ ರುಪಯಾ ಕೊಡುವದಾಗಿ ಹೇಳಿದ್ದನೆಂದೂ, ಹಿಂದಿ ಬಾರದ ತಾನು ಕೊನೆಗೆ ಎಷ್ಟು ಕೊಡಲಿ? ಎಂದು ಅವನು ಕೇಳಿದರೆ ಮಾಮೂಲಾಗಿ ಹೇಳುವಂತೆ ಥೌಸಂಡ್ ಟೂ ಹಂಡ್ರೆಡ್ ಎಂದಾಗ “ಎರಡು ಸಾವಿರದಾ ಇನ್ನೂರು ರೂಪಾಯಿ ಕೊಡಬೇಕೆಂದು ನಾನಿದ್ದರೆ ನೀನು ಸಾವಿರದಿನ್ನೂರು ಕೇಳ್ತಿಯಲ್ಲಾ” ಎಂದು ನಕ್ಕನಂತೆ. ಗುಜರಾತಿನಲ್ಲಿ ಯಾವುದು ಫೇಮಸ್? ಎಂದು ಕೇಳಿದನಂತೆ. ಅಂಥದೇನೂ ಗೊತ್ತಿಲ್ಲದ ಈ ಡ್ರೈವರ್ ತನಗೆ ಗೊತ್ತಿದ್ದ ಏಕಮಾತ್ರ ಗುಜರಾತಿ ಫೇಮಸ್ ನರೇಂದ್ರ ಮೋದಿ ಹೆಸರು ಹೇಳಿದಾಗ ಅವನು “ತಗೋ ಇನ್ನು ನೂರು” ಅಂತ ಮತ್ತೊಂದು ನೂರರ ನೋಟು ಕೊಟ್ಟನಂತೆ….” ಆ ಗುಜರಾತಿಗೆ ಹಣ ಹೆಚ್ಚಾಗಿತ್ತೆಂದು ತೋರುತ್ತದೆ ಎಂದು ನಾನೆಂದಾಗ ನಕ್ಕ.
ಅವನ ತಮಾಷೆಯ ಮಾತು ಕೇಳುತ್ತಿದ್ದರೂ ನನ್ನ ಲಕ್ಷ್ಯವಿದ್ದುದು ತಲಕಾವೇರಿ, ಭಾಗಮಂಡಲದತ್ತ. ಅವನಿಗೆ ಸಾವಿರದಿನ್ನೂರು ಕೊಟ್ಟು ನಾವು ಮಡಿಕೇರಿಯನ್ನು ದಾಟಿ, ಅಲ್ಲಿಂದ ಸುಮಾರು ನಲವತ್ತೈದು ಕಿಲೋಮೀಟರ್ ದೂರದ ಭಾಗಮಂಡಲದತ್ತ ಹೊರಟೆವು. ಕೊಡಗಿನ ಕಾಫಿ-ಮೆಣಸು ಬೆಳೆಯುವ ಎಸ್ಟೇಟ್ ಗಳೆಂಬ ವಿಸ್ತಾರವಾದ ತೋಟಗಳನ್ನು ದಾಟಿ ಪಶ್ಚಿಮ ಘಟ್ಟದ ಗಿರಿಶೃಂಗದ ಕಾಡುಗಳನ್ನು ಹತ್ತಿ ಭಾಗಮಂಡಲ ತಲುಪಿದೆವು. ಭಗಂಡೇಶ್ವರ ದೇಗುಲದ ಪರಿಸರದಲ್ಲಿ ಜನದಟ್ಟಣೆಯೂ ವಾಹನಗಳೂ ಹೆಚ್ಚಾಗಿದ್ದು ಗದ್ದಲ ತುಂಬಾ ಇತ್ತು. ಇಲ್ಲಿ ಮರಳಿ ಬರುವಾಗ ನಿಲ್ಲೋಣ ಮೊದಲು ತಲಕಾವೇರಿಗೇ ಹೋಗೋಣ ಎಂದೆ ನಾನು. ತಲಕಾವೇರಿಯಲ್ಲೂ ವಾಹನಗಳ ದಟ್ಟಣೆ ತುಂಬ ಇತ್ತು. ಜನಸಂದಣಿ ಏಕಿಷ್ಟು ಎಂದು ಯೋಚಿಸುತ್ತಿರುವಾಗ ಇಂದು ತಮ್ಮ ಪೂರ್ವಪಿತೃಗಳಿಗೆ ಕೊಡವರು ತರ್ಪಣ ಕೊಡುವ ದಿನವೆಂದೂ ಸ್ಥಳೀಯ ಕೊಡವರೂ ಹೆಚ್ಚಿನ ಸಂಖ್ಯೆಯಲ್ಲಿ ಇರುವದರಿಂದ ಜನಸಂದಣಿ ಹೆಚ್ಚಿದೆಯಂದೂ ಯಾರೋ ಹೇಳಿದರು. ಕೊಡವರಿಗೆ ವಿಶಿಷ್ಟವಾದ ಸಾಂಪ್ರದಾಯಿಕ ಶೈಲಿಯಲ್ಲಿ ಸೀರೆಯುಟ್ಟ ಮಹಿಳೆಯರು ಅಂದು ಸಾಕಷ್ಟು ಸಂಖ್ಯೆಯಲ್ಲಿದ್ದರು. ಕಾವೇರಿ ಕೊಡವರಿಗೆ ಕುಲದೇವಿ ಇದ್ದಂತೆ. ಬೆಂಗಳೂರಿನಿಂದಂತೂ ಎಷ್ಟು ಜನ ಬಂದಿದ್ದರೆಂದರೆ ಹತ್ತು ವಾಹನಗಳು ದಾಟಿ ಹೋದರೆ ಅದರಲ್ಲಿ ಎಂಟು ಬೆಂಗಳೂರು ರಜಿಸ್ಟ್ರೇಶನ್ ನಂಬರಿನ ಕಾರುಗಳು. ಕಾವೇರಿಯ ನೀರನ್ನು ಕುಡಿಯುವ, ಕಾವೇರಿಯ ನೀರುಣಿಸಿ ಬತ್ತ ಬೆಳೆಯುವ ತಮಿಳರೂ ಸಾಕಷ್ಟು ಸಂಖ್ಯೆಯಲ್ಲಿದ್ದರು. ಕರ್ನಾಟಕದ ವಿವಿಧೆಡೆಯಿಂದ ಬಂದ ಜನರಲ್ಲದೇ ಉತ್ತರ ಭಾರತದವರೂ ಇದ್ದರು.
ದಿನನಿತ್ಯ ಕೈಗೆ ಕಣ್ಣಿಗೆ ನದಿಯೊಂದು ಎಟಕುವ ಸ್ಥಳವಲ್ಲ ನಾನೀಗ ಜೀವಿಸುತ್ತಿರುವ ಧಾರವಾಡ. ನಾನು ಕಂಡ ಮೊದಲ ನದಿ ನಮ್ಮ ಬೆಳಗಾವಿ ಜಿಲ್ಲೆಯಲ್ಲೇ ಹುಟ್ಟಿ ಹರಿಯುವ ಮಲಪ್ರಭೆ. ನಾನು ಬಾಲ್ಯದಲ್ಲಿ ರಾಮದುರ್ಗಕ್ಕೆ ನಮ್ಮ ಚಿಕ್ಕಮ್ಮನ ಮನೆಗೆ ಹೋದಾಗ ಅವರು ಬಟ್ಟೆ ತೊಳೆಯಲು ನದಿಗೆ ಹೊರಟರೆ ಅವರೊಂದಿಗೆ ಹೋಗಿ ಅವರ ಕಣ್ಣಳತೆಯಲ್ಲೇ ಈಜು ಬಾರದಿದ್ದರೂ ಮೊಳಕಾಲುದ್ದ ನೀರಿರುವ ಮಟ್ಟದಲ್ಲಿ ಸ್ವಲ್ಪ ಈಜಿದಂತೆ ಮಾಡುತ್ತಿದ್ದೆ. ನದಿಯಲ್ಲಿ ಸೆಳವು ಜಾಸ್ತಿ ಇದ್ದರೆ ಅದಕ್ಕೂ ಅವರು ಅವಕಾಶ ಕೊಡುತ್ತಿರಲಿಲ್ಲ. ನಮ್ಮ ಪರಿಸರದ ಮಲಪ್ರಭಾ, ಘಟಪ್ರಭಾ, ಭೀಮಾ, ಕೃಷ್ಣಾ, ಕಾನೇರಿ, ಕಾಳಿ ನದಿಗಳಂತೂ ಸರಿಯೇ. ಬೆಳೆಯುತ್ತ ಬೆಳೆಯುತ್ತ ಬದುಕು ಕೊಂಡೊಯ್ದಲ್ಲಿ ಇರುವಾಗ, ಪ್ರವಾಸ ಮಾಡುವಾಗ ತುಂಗಾ, ಭದ್ರಾ, ಮಾಂಡವಿ, ಕಬಿನಿ, ಶರಾವತಿ, ಹೇಮಾವತಿ, ಕಾವೇರಿ ಅಲ್ಲದೇ ನರ್ಮದಾ, ತವಿ,ಗೋದಾವರಿ, ಯಮುನಾ, ಗಂಗಾ, ಬಿಯಾಸ್ ಮೊದಲಾದ ನದಿಗಳನ್ನು ನೋಡುತ್ತ ಹೋದೆ. ಆದರೆ ಒಂದೇ ಒಂದು ನದಿಮೂಲವನ್ನೂ ನೋಡಿರಲಿಲ್ಲ. ಇಲ್ಲೇ ಧಾರವಾಡದ ಹೊರವಲಯದಲ್ಲಿ ಶಿವನ ಅತಿ ಪುರಾತನ ದೇಗುಲವಿರುವ ಸೋಮೇಶ್ವರ ಎಂಬ ಸ್ಥಳದಲ್ಲಿರುವ ಜಲಭರಿತ ಕಲ್ಯಾಣಿಯಂಥ ವಿಶಾಲ ರಚನೆ ಶಾಲ್ಮಲಾ ನದಿಯ ಉಗಮಸ್ಥಳವೆಂದೇ ಖ್ಯಾತವಾಗಿದೆ. ಆದರೆ ಶಾಲ್ಮಲೆ ಹರಿದದ್ದನ್ನು ಕಂಡವರಿಲ್ಲ. ಆಕೆ ಗುಪ್ತಗಾಮಿನಿಯಂತೆ.
ಬ್ರಹ್ಮಗಿರಿ ಎಂಬ ಬೆಟ್ಟದ ತಪ್ಪಲಿನಲ್ಲಿರುವ ತಲಕಾವೇರಿಯಲ್ಲಿ ಕಾರನ್ನು ಕೆಳಗೇ ಪಾರ್ಕ್ ಮಾಡಿ ಏರುಮುಖವಾದ ದಾರಿಯಲ್ಲಿ ನಡೆದು ಪ್ರತಿವರ್ಷ ತುಲಾ ಸಂಕ್ರಮಣದಂದು ಉಬುಕಿದಂತೆ ನೀರುಬುಗ್ಗೆಗಳೇಳುವ ತೀರ್ಥೋದ್ಭವ ಸ್ಥಳವನ್ನು ನಾವು ತಲುಪಿದೆವು. ಅದೊಂದು ಅಷ್ಟೇನೂ ವಿಸ್ತಾರವಲ್ಲದ ಕಲ್ಯಾಣಿ. ಮಡಿಯಾಗಿ ಪೂಜೆ ಸಲ್ಲಿಸಲು ಪುರುಷರು, ಮಹಿಳೆಯರು- ತಮ್ಮ ಮಕ್ಕಳನ್ನೂ ಎತ್ತಿಕೊಂಡು ಮೆಟ್ಟಿಲಿಳಿದು ಅದರಲ್ಲಿ ಎದೆಯುದ್ದ ಇದ್ದ ನೀರಿನಲ್ಲಿ ನಡೆಯುತ್ತ ಕಲ್ಯಾಣಿಯ ಒಂದು ದಂಡೆಯಲ್ಲಿರುವ ಬ್ರಹ್ಮಕುಂಡಿಕೆಯ ಜಲವನ್ನು ಅಲ್ಲಿಯ ಪುರೋಹಿತನೊಬ್ಬನಿಂದ ಪ್ರೋಕ್ಷಣೆ ಮಾಡಿಸಿಕೊಳ್ಳಲು ಬರುತ್ತಿದ್ದರೆ ಪಾರ್ಶ್ವದ ದಂಡೆಯುದ್ದಕ್ಕೂ ಬ್ರಹ್ಮಕುಂಡಿಕೆಯ ಮುಂದೆ ಕ್ಷಣ ನಿಂತು ಅಲ್ಲಿದ್ದ ಇನ್ನೊಬ್ಬ ಪುರೋಹಿತನಿಂದ ತೀರ್ಥ ತೆಗೆದುಕೊಂಡು ದಾಟಿ ಹೋಗಲು ಸರತಿ ಸಾಲಿನಲ್ಲಿ ಬರುತ್ತಿದ್ದ ಇನ್ನಷ್ಟು ಜನ. ಈ ತೀರ್ಥೋದ್ಭವ ಹೊಂಡದ ಪಕ್ಕ ಅನತಿ ದೂರದಲ್ಲಿ ಮೆಟ್ಟಿಲೇರಿ, ಬ್ರಹ್ಮಗಿರಿಯ ತುದಿ ತಲುಪಿ ಕಾವೇರಿಯ ಉಗಮಸ್ಥಳವನ್ನು ನೋಡಲು ಹೊರಟ ಮತ್ತಷ್ಟು ಜನ.

ತಲಕಾವೇರಿಯ ಸ್ಥಳಪುರಾಣಗಳ ಕುರಿತ ವಿವರಗಳು ನನಗೆ ಗೊತ್ತಿಲ್ಲ. ಒಂದು ಕಥಾನಕದ ಪ್ರಕಾರ ಅಗಸ್ತ್ಯ ಋಷಿಯು ತನ್ನ ಕಮಂಡಲದಿಂದ ಕಾವೇರಿಯನ್ನು ಹಿಡಿದಿಟ್ಟಿದ್ದಾಗ ಕಾಗೆಯ ರೂಪದಲ್ಲಿ ಬಂದ ಗಣೇಶನು ಅಗಸ್ತ್ಯ ಋಷಿಯು ತಪಸ್ಸು ಮಾಡುತ್ತಿದ್ದ ಸಂದರ್ಭ ಸಾಧಿಸಿ ಕಮಂಡಲವನ್ನು ಬೆಟ್ಟದ ಮೇಲಿನಿಂದ ಬೀಳಿಸುತ್ತಾನೆ. ಆ ಬೆಟ್ಟವೇ ಬ್ರಹ್ಮಗಿರಿ. ಅದರ ಪದತಲದಲ್ಲಿರುವ ಕಾವೇರಿಯ ಉಗಮಜಲದಲ್ಲಿ ಸ್ನಾನ ಮಾಡುವುದರಿಂದ ಪುಣ್ಯ ಬರುತ್ತದೆ, ಎಲ್ಲ ರೋಗಗಳಿಂದ ಮುಕ್ತಿ ಸಿಗುತ್ತದೆ ಎಂಬುದು ಜನರ ನಂಬಿಕೆ. ಏನಿದ್ದರೂ ಕಲ್ಯಾಣಿಯ ಒಂದು ಅಂಚಿಗೆ ಕಾವೇರಿ ತೀರ್ಥಸ್ವರೂಪಿಯಾಗಿ ವರ್ಷಾವರ್ತಿ ನೀರುಬುಗ್ಗೆಯಾಗಿ ಉಬುಕಿ, ಮರುಹುಟ್ಟು ಪಡೆದು ಝರಿಯಾಗಿ ಹರಿಯುವ ಬ್ರಹ್ಮಕಂಡಿಕೆಯ ಮೇಲ್ಗಡೆ ಅಗಸ್ತ್ಯೇಶ್ವರ ಹೆಸರಿನ ಶಿವದೇಗುಲವಿದ್ದು ಅದರ ಪಕ್ಕಕ್ಕೆ ಗಣಪತಿ ದೇವಸ್ಥಾನವಿದೆ.
ಕಾವೇರಿಯ ಈ ತೊಟ್ಟಿಲನ್ನು ನೋಡುತ್ತ ನಿಂತಾಗ ನನ್ನ ಮನಸಿನಲ್ಲಿ ಕನ್ನಂಬಾಡಿ ಕಟ್ಟೆಯ ಹಿಂದೆ ಸಾಗರದೋಪಾದಿಯಲ್ಲಿ ನಿಂತ ನೀರಿನ ಚಿತ್ರ ಸುಳಿಯುತ್ತಿತ್ತು. ಕಾವೇರಿಯನ್ನು ನಾನು ಅಲ್ಲಿಲ್ಲಿ ಕಂಡ, ಅವಳ ಹರಿವಿನ, ಅವಳ ಪಾತ್ರದ ಅಗಲದ ಚಿತ್ರಗಳು ಸುಳಿಯುತ್ತಿದ್ದವು. ನಾನು ದೆಹಲಿಯ ಜೆ ಎನ್ ಯು ನಲ್ಲಿ ಓದುತ್ತಿದ್ದಾಗ ನನ್ನ ಸಂಶೋಧನೆಯ ಭೌಗೋಲಿಕ ಪ್ರದೇಶದೊಂದಿಗೆ ಪ್ರತ್ಯಕ್ಷ ಸಂಪರ್ಕ ಹೊಂದುವಂತೆ ನನ್ನ ಮಾರ್ಗದರ್ಶಕರಾಗಿದ್ದ ಪ್ರೊ. ಬಿ.ಡಿ.ಚಟ್ಟೋಪಾಧ್ಯಾಯ ಅವರು ಕೊಟ್ಟ ಸಲಹೆಯ ಮೇರೆಗೆ ನಾನೊಮ್ಮೆ ಹುಣಸೂರು, ಯಳಂದೂರು, ಪೆರಿಯಾಪಟ್ಣ, ಟಿ.ನರಸಿಪುರ ಮೊದಲಾದೆಡೆ ೧೯೮೪-೮೫ರ ಸುಮಾರಿಗೆ ಸಂಚರಿಸಿದ್ದೆ. ಹಾಗೆ ಒಂದು ರಾತ್ರಿ ತಿರುಮಕೂಡ್ಲು ನರಸಿಪುರದ ಲಾಡ್ಜಿಂಗ್ ಒಂದರಲ್ಲಿದ್ದು ಬೆಳಿಗ್ಗೆ ಬೇಗನೆದ್ದು ಕಾವೇರಿ ಹಾಗೂ ಕಬಿನಿ ನದಿಗಳು ಸಂಗಮಿಸುವ ಅಪೂರ್ವ ಸ್ಥಳವನ್ನು ಸೂರ್ಯೋದಯದ ಬೆಳಕಿನಲ್ಲಿ ನೋಡಬೇಕೆಂದು ಹೋದವನಿಗೆ ಸಾಲಾಗಿ ಬಯಲು ಶೌಚಕ್ಕೆ ಕುಳಿತಿದ್ದ, ಗುದಪ್ರಕ್ಷಾಳನ ಮಾಡಿಕೊಳ್ಳುತ್ತಿದ್ದ ನಾಗರಿಕರು ಕಂಡರು. ಇನ್ನೊಮ್ಮೆ ಕನಕಪುರದಾಚೆ ಕಾವೇರಿ ಹಾಗೂ ಅರ್ಕಾವತಿ ಸಂಗಮಿಸುವ ಸಂಗಮಕ್ಕೆ ಹೋದಾಗ ಎದೆಮಟ್ಟದ ನೀರಿನಲ್ಲಿ ಗಟ್ಟಿಯಾಗಿ ಹೆಜ್ಜೆ ಕೀಳುತ್ತ ನಾವು ಕಾವೇರಿಯ ಈ ದಂಡೆಯಿಂದ ಆ ದಂಡೆಗೆ ಸಾಗುತ್ತಿದ್ದಾಗ ಯಾವನೋ ಪ್ರವಾಸಿ ತಾನು ಕುಡಿದು ಎಸೆದಿದ್ದ ಬಾಟಲಿಯ ಒಡೆದ ಗಾಜಿನ ಚೂರೊಂದು ನಮ್ಮ ಜೊತೆಗಿದ್ದ ಮಹಿಳೆಯೊಬ್ಬಳ ಕಾಲಿಗೆ ನೆಟ್ಟು ರಕ್ತ ಒಸರುತ್ತಿದ್ದ ಅವಳ ಒಂದು ಕಾಲನ್ನು ಅವಳು ಊರದಂತೆ ಕೈಯ್ಯಾಸರೆ ಕೊಟ್ಟು ಅವಳನ್ನು ದಡಕ್ಕೆ ಕರೆದೊಯ್ಯಬೇಕಾಗಿ ಬಂದಿತ್ತು. ನಮ್ಮ ಜೀವ ನದಿಗಳ ಕುರಿತು ಜನರ ಇಂಥ ಉಡಾಫೆ ಮತ್ತು ಉದಾಸೀನ ನೋಡಿದ ನನಗೆ ತಲಕಾವೇರಿಯಲ್ಲಿ ಸೇರಿದ್ದ ಜನರ ಮುಖದಲ್ಲಿ ಕಾವೇರಿಯ ಕುರಿತ ಪ್ರೀತಿ, ಶ್ರದ್ದೆ ಮತ್ತು ಕೃತಜ್ಞತೆ ಕಂಡಾಗ ಮನಸು ಮುದಗೊಂಡಿತ್ತು.
ಅಲ್ಲಿಂದ ಆರೆಂಟು ಕಿಲೋಮೀಟರ್ ದೂರದ ಭಾಗಮಂಡಲಕ್ಕೆ ನಾವು ಮರಳಿ ಬಂದಾಗ ಗದ್ದಲವೆಲ್ಲ ಕರಗಿತ್ತು. ಏಕೆಂದರೆ ದೇಗುಲ ಟೈಮ್ ಟೇಬಲ್ ಪ್ರಕಾರ ಒಂದೂವರೆಗೆ ಕ್ಲೋಜ್ ಆಗಿತ್ತು. ನನ್ನ ಹೆಂಡತಿಗೆ ನಿರಾಶೆಯಾಯಿತು. ಸುಮ್ಮನೇ ದೇಗುಲದ ಒಳಾವರಣದಲ್ಲಿ ಅಡ್ಡಾಡಿ ಕೆಳಗೆ ಬಂದೆವು. ಅಲ್ಲಿ ಮೇಲೆ ತಲಕಾವೇರಿಯಲ್ಲಿ ತೊಟ್ಟಿಲಲ್ಲಿದ್ದ ಕಾವೇರಿ ಅಂಬೆಗಾಲಿಟ್ಟು ನಡೆದಂತೆ ಕೆಳಗೆ ಹರಿದು ಬಂದಿದ್ದಳು. ನೀರು ಮೊಳಕಾಲುದ್ದವೂ ಇರಲಿಲ್ಲ. ಕೆಲವೆಡೆ ನೀರು ಸರಿದು ಮಧ್ಯೆ ಮಧ್ಯೆ ಉಸುಕಷ್ಟೇ ಕಾಣುತ್ತಿತ್ತು. ಒಬ್ಬ ಬಾಲಕ ಮೊಳಕಾಲುದ್ದದ ಆ ನೀರಲ್ಲಿ ಈಸುವ ನಾಟಕವಾಡುತ್ತ ಹೊಟ್ಟೆ ನೆಲಕ್ಕೆ ಹಚ್ಚಿದ್ದ. ಕಾವೇರಿಯ ಅಗಲ ನಲವತ್ತು ಅಡಿಗಿಂತ ಕಡಿಮೆಯೇ ಇದ್ದೀತು. ಶೂಸ್ ಬಿಚ್ಚಿಟ್ಟು ನದಿಗಿಳಿದೆ. ಅಲ್ಲೇ ಮಗ್ಗುಲಲ್ಲಿ ಕನ್ನಿಕೆ ಹಾಗೂ ಸುಜ್ಯೋತಿ ಎಂಬ ಇನ್ನೆರಡು ಎಳಸು ನದಿಗಳು ಎರಡು ದಿಕ್ಕುಗಳಿಂದ ಬಂದು ಕಾವೇರಿಯನ್ನು ಸೇರುವ ತ್ರಿವೇಣಿ ಸಂಗಮದತ್ತ ನೋಡುತ್ತ ಎಳೆಯ ಕಾವೇರಿಯೊಂದಿಗೆ ಮಾತಿಗಿಳಿದೆ. ಆಗಲೇ ಇಬ್ಬರು ಗೆಳತಿಯರನ್ನೂ ಇಲ್ಲೇ ಇಷ್ಟು ಬೇಗ ಕಂಡುಕೊಂಡೆಯಾ? ಎಂದೆ.
ಶತಮಾನಕ್ಕೂ ಮಿಕ್ಕಿದ ಕಾಲದಿಂದ ನೀರಿನ ಹಂಚಿಕೆಯ ವಿಷಯವಾಗಿ ಕರ್ನಾಟಕ ತಮಿಳ್ನಾಡು ರಾಜ್ಯಗಳ ವ್ಯಾಜ್ಯಕ್ಕೆ ವಸ್ತುವಾದ, ಕೇರಳ ಹಾಗೂ ಕೇಂದ್ರಾಡಳಿತದ ಪುದುಚೇರಿಗಳನ್ನು ವ್ಯಾಜ್ಯದ ತೆಕ್ಕೆಗೆಳೆದುಕೊಂಡು ಸುಪ್ರೀಮ್ ಕೋರ್ಟ್ ಮೆಟ್ಟಿಲು ಹತ್ತಿದ, ಭಾರತದ ಪ್ರಧಾನ ಮಂತ್ರಿಯ ನೇರ ಉಸ್ತುವಾರಿಯ ಪ್ರಾಧಿಕಾರದ ರಚನೆಗೆ ಕಾರಣವಾದ, ಹಲವು ಜಲವಿದ್ಯುತ್ ಯೋಜನೆಗಳನ್ನು ಪೊರೆಯುತ್ತಿರುವ, ಏಳೂವರೆನೂರು ಕಿಲೋಮೀಟರ್ ದೂರ ಹರಿದು ಭಾರತದ ಅತಿ ಉದ್ದದ ನದಿಗಳಲ್ಲೊಂದಾಗಿರುವ, ಹೊಸ ಯೋಜನೆಗಳನ್ನು ಹಮ್ಮಿಕೊಳ್ಳದಂತೆ ನಿರ್ಬಂಧ ಹೇರಿ ಕೇಂದ್ರ ರಾಜಕಾರಣದಲ್ಲಿ ತನ್ನ ಸಂಸದರ ಸಂಖ್ಯಾಬಲದಿಂದ ಒತ್ತಡ ಹೇರಿ ನಮ್ಮ ರಾಜ್ಯದ ರೈತರಲ್ಲಿ ಆತಂಕಕ್ಕೆ ಕಾರಣವಾಗುವ, ಒಮ್ಮೊಮ್ಮೆ ಗರಿಷ್ಟ ಮಟ್ಟಕ್ಕೆ ತುಂಬಿ ಬಾಗಿನ ಬಿಡಿಸಿಗೊಳ್ಳುವಂತೆ ಕೃಷ್ಣರಾಜಸಾಗರದಲ್ಲಿ ಸಂಗ್ರಹವಾಗಿ ನಿಲ್ಲುವ, ಒಮ್ಮೊಮ್ಮೆ ತನ್ನ ಅಂಗಳವನ್ನು ಬರಿದಾಗಿಸಿಕೊಳ್ಳುವದಷ್ಟೇ ಅಲ್ಲ ತನ್ನನ್ನು ನಂಬಿ ಮೇಲೆದ್ದ ಹಾರಂಗಿ, ಕಬಿನಿ, ಹೇಮಾವತಿ ಯೋಜನೆಯ ಕಟ್ಟೆಗಳೆಲ್ಲವೂ ಬರಿದೋ ಬರಿದಾಗುವ, ಹಾದಿಯುದ್ದಕ್ಕೂ ಹಲವು ಹೊಳೆಗಳನ್ನು ತನ್ನೊಂದಿಗೆ ಎಳೆದೊಯ್ಯುವ, ಇನ್ನೆಲ್ಲೋ ಮೇಲಿಂದ ಧುಮುಕಿ ಬಿದ್ದು ಎರಡು ಚುಕ್ಕಿಗಳಾಗುವ, ಮತ್ತೆಲ್ಲೋ ಭೂಭಾಗಗಳನ್ನು ದ್ವೀಪಗಳಾಗಿಸುವ, ಎರಡು ದೊಡ್ಡ ರಾಜ್ಯಗಳ ಸಾವಿರಾರು ಹೆಕ್ಟೇರ್ ನೆಲದ ಬೆಳೆಗೆ ನೀರುಣ್ಣಿಸುವ, ಜನ-ಜಾನುವಾರುಗಳ ತೃಷೆ ತಣಿಸುವ ಮಹಾಮಹಿಮ ಕಾವೇರಿ ಎಂಬ ನದಿ ತಾನು ತಾರುಣ್ಯಾವಸ್ಥೆಯಲ್ಲಿರುವ ಭಾಗಮಂಡಲದಲ್ಲಿ ೨೦೧೩ ರ ನವೆಂಬರ್ ೨ ರಂದು ನರಕ ಚತುರ್ದಶಿಯ ದಿನ ಮಧ್ಯಾಹ್ನ ಎರಡು ಗಂಟೆಗೆ ಬಿಸಿಲಿನ ತಾಪದಿಂದ ತನ್ನೊಳಗಿಳಿದ ನನ್ನ ಪಾದಗಳನ್ನು ತಂಪಾಗಿಸುತ್ತಿದ್ದಳು..ಹಿತದಿಂದ ಕ್ಷಣಕಾಲ ಕಣ್ಮುಚ್ಚಿ ನಿಂತೆ.






ವಯ್ಯಾರಿ, ಕಾವೇರಿಯ ಬೆಡಗನ್ನು ತುಂಬಾ ಆಪ್ತವಾಗಿ ವಿವರಿಸಿದ್ದಿರಿ. ಒಮ್ಮೊಮ್ಮೆ ಈ ಸ್ಥಳ ಮಹಾತ್ಮೆಗಳು ಇರುವದೇ ಒಳ್ಳೆಯದೇನೊ ಎನಿಸುತ್ತದೆ- ಜನ ಭಕ್ತಿಯಿಂದಾದರು ಈ ಸ್ಥಳಗಳ ನೈರ್ಮಲ್ಯ ಕಾಪಾಡಿಕೊಳ್ಳುತ್ತಾರೆ.
-ಅನಿಲ ತಾಳಿಕೋಟಿ