
ಸಮಸ್ಯೆ ಕೊನೆಗೊಂಡಿದೆ. ದೆಹಲಿಯ ಲೆಫ್ಟನೆಂಟ್ ಗವ್ಹರ್ನರ್ ಆದೇಶವೊಂದನ್ನು ಹೊರಡಿಸಿ ಆಮ್ ಆದ್ಮಿ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದ ಮಾಲವೀಯ ನಗರದ ಸ್ಟೇಶನ್ ಹೌಸ್ ಆಫೀಸರ್ ಮತ್ತು ಪಹಾಡಗಂಜ್ ನ ಪಿಸಿಆರ್ ರನ್ನು ವಿಚಾರಣೆ ಮುಗಿವ ವರೆಗೆ ರಜೆಯ ಮೇಲೆ ತೆರಳುವಂತೆ ಸೂಚಿಸಿ ನ್ಯಾಯಾಂಗಿಕ ವಿಚಾರಣೆಗೂ ಆದೇಶಿಸಿ ಧರಣಿಯನ್ನು ಕೈಬಿಡುವಂತೆ ಮಾಡಿಕೊಂಡ ವಿನಂತಿಯನ್ನು ಮನ್ನಿಸಿ ಕೇಜ್ರಿವಾಲ್ ತಮ್ಮ ಆಂದೋಲನವನ್ನು ಸ್ಥಗಿತಗೊಳಿಸಿದ್ದಾರೆ. ತಮ್ಮ ಬೇಡಿಕೆ ಲೆಫ್ಟನೆಂಟ್ ಗವ್ಹರ್ನರ್ ರ ಈ ಆದೇಶದಿಂದ ಭಾಗಶ: ಈಡೇರಿದ್ದು ಇದು ದೆಹಲಿ ನಗರದ ಜನತೆಯ ಗೆಲುವು ಎಂದು ಕೇಜ್ರಿವಾಲ್ ಘೋಷಿಸಿದ್ದಾರೆ. ದೇಶ ಸಮಾಧಾನದ ನಿಟ್ಟುಸಿರು ಬಿಟ್ಟಿದೆ.
ಕಳೆದೆರಡು ದಿನಗಳಿಂದ ಒಂದು ವಿಲಕ್ಷಣ ಸ್ಥಿತಿ ನಿರ್ಮಾಣವಾಗಿತ್ತು. ದೆಹಲಿ ರಾಜ್ಯದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತನ್ನ ಮಂತ್ರಿಮಂಡಲದ ಸಹೋದ್ಯೋಗಿಗಳು, ತನ್ನ ಪಕ್ಷದ ಸಹಸ್ರಾರು ಸದಸ್ಯರು ಮತ್ತು ಬೆಂಬಲಿಗರೊಂದಿಗೆ ಬೀದಿಗಿಳಿದಿದ್ದರು, ಕೇಂದ್ರ ಸರಕಾರದ ಗೃಹ ಮಂತ್ರಿಯ ವಿರುದ್ಧ ಸಮರ ಸಾರಿದ್ದರು. ದೆಹಲಿಯ ಹೃದಯ ಭಾಗದಂತಿರುವ- ವಿಜಯ ಚೌಕ್, ರಾಜಪಥ್, ಕೇಂದ್ರ ಸಚಿವಾಲಯದ ಸಮುಚ್ಛಯ ಇತ್ಯಾದಿಗಳಿಗೆ ಸಮೀಪವರ್ತಿಯಾಗಿರುವ- ಸ್ಥಳದಲ್ಲಿ, ರೇಲ್ ಭವನದ ಪಕ್ಕದ ರಸ್ತೆಯಲ್ಲಿ ಮುಖ್ಯಮಂತ್ರಿಗಳು ಕಳೆದೆರಡು ದಿನಗಳಿಂದ ಧರಣಿ ಹೂಡಿದ್ದರು. ಇಂದು ಮಧ್ಯಾಹ್ನದಿಂದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮತ್ತು ಆ ಪಕ್ಷದ ಬೆಂಬಲಿಗರಿಗರಾಗಿರುವ ದೆಹಲಿ ನಾಗರಿಕರು ಪೋಲೀಸರೊಂದಿಗೆ ಕೈ ಕೈ ಮಿಲಾಯಿಸಿ ಆ ಸಂಘರ್ಷದಲ್ಲಿ ಹಲವರಿಗೆ ಗಾಯಗಳೂ ಆಗಿದ್ದವು. ಪರಿಸ್ಥಿತಿ ಕೈಮೀರುವ ಎಲ್ಲ ಸೂಚನೆಗಳಿಂದಾಗಿ ಆತಂಕ ಸೃಷ್ಟಿಯಾಗಿತ್ತು
ಕಾಂಗ್ರೆಸ್, ಬಿಜೆಪಿ ಮತ್ತು ಝೀ ನ್ಯೂಜ್, ಟೈಮ್ಸ್ ನೌ ನಂಥ ಕೆಲ ಸುದ್ದಿವಾಹಿನಿಗಳ ಆಂಕರ್ ಗಳು ಆಮ್ ಆದ್ಮಿ ಪಕ್ಷದ ಈ ನಡತೆಯನ್ನು ಏಕಪ್ರಕಾರವಾಗಿ ಟೀಕಿಸಿದರು. ಖಂಡಿಸಿದರು .ಹಿಂದೆ ಅಣ್ಣಾ ಹಜಾರೆಯ ನೇತೃತ್ವದ ಭ್ರಷ್ಟಾಚಾರ ಹೋರಾಟದಲ್ಲಿ ಕೇಜ್ರಿವಾಲ್ ರೊಂದಿಗೆ ಸಹಭಾಗಿಯಾಗಿದ್ದ ಮತ್ತು ಈಗ ಇದ್ದಕ್ಕಿದ್ದಂತೆ ಸ್ಥಿರ, ಭದ್ರ, ಬಲಿಷ್ಟ ಭಾರತಕ್ಕೆ ನರೇಂದ್ರ ಮೋದಿಯ ನಾಯಕತ್ವ ಏಕಮಾತ್ರ ದಾರಿ, ನನ್ನ ಮತ ನರೇಂದ್ರ ಮೋದಿಗೆ ಎನ್ನುತ್ತಿರುವ ನಿವೃತ್ತ ಪೋಲೀಸ್ ಅಧಿಕಾರಿ ಕಿರಣ್ ಬೇಡಿ ಇದನ್ನು ಅರಾಜಕತೆ ಎಂದು ಕರೆದು ಅನಾರ್ಕಿ ಎಂಬುದರ ಡಿಕ್ಷನರಿ ಅರ್ಥಗಳನ್ನು ಓದಿ ಹೇಳುತ್ತಿದ್ದರೆ, ಆಮ್ ಆದ್ಮಿ ಪಕ್ಷದ ಗ್ರಹಮಂತ್ರಿಯ ವರ್ತನೆಯನ್ನು ವಿಜಿಲಾಂಟಿಸಂ ಎಂದು ಕರೆದ ಟೈಮ್ಸ್ ನೌ ನ ಅರ್ನಾಬ್ ಗೋಸ್ವಾಮಿ ಆ ಶಬ್ದದ ಡಿಕ್ಷನರಿ ಅರ್ಥಗಳನ್ನು ಓದಿ ಹೇಳುತ್ತಿದ್ದುದು ಮಜವಾಗಿತ್ತು.
ಏನಿದ್ದರೂ ಈ ಘಟಣಾವಳಿಗಳು ಡಿಸ್ಟರ್ಬಿಂಗ್ ಆಗಿದ್ದವು ಎನ್ನದೇ ವಿಧಿ ಇಲ್ಲ. ಸರಕಾರಗಳು, ವ್ಯಕ್ತಿಗಳು ಪ್ರತಿಷ್ಠೆಗೆ ಕಟ್ಟು ಬಿದ್ದು ಸಮಸ್ಯೆಗಳು ಕಗ್ಗಂಟಾಗುವದಕ್ಕೆ ಹೇಗೆ ಕಾರಣರಾಗುತ್ತಾರೆ ಎಂದು ಇದನ್ನು ಸರಳೀಕರಿಸಿ ಬಿಡಬಹುದು. ಆದರೆ ಇದು ಅಷ್ಟು ಸುಲಭವಿಲ್ಲ. ಇದರಲ್ಲಿ ಇರುವದು ಯಥಾಪ್ರಕಾರದ ಭಾರತೀಯ ರಾಜಕಾರಣದ ಚದುರಂಗದಾಟ, ರಾಜಕೀಯ ಲಾಭ-ಹಾನಿಗಳ ಕುಟಿಲ ಲೆಕ್ಕಾಚಾರಗಳು.
ದೆಹಲಿಗೆ ಪ್ರತಿಭಟಣೆ ಧರಣಿ ಹೋರಾಟಗಳು ಹೊಸದಲ್ಲ. ಲಕ್ಷಾಂತರ ಜನರು ಒಂದೆಡೆ ಸೇರಿ ಕಾನೂನು ಸುವ್ಯವಸ್ಥೆಗೆ ಸವಾಲೆಸೆಯುವಂಥ ಸನ್ನಿವೇಶಗಳೂ ಹೊಸದಲ್ಲ. ಹಿಂದೆ ಅಕಾಲಿ ಚಳುವಳಿಗಳ, ಕಿಸಾನ್ ಹೋರಾಟಗಳ ಸಂದರ್ಭಗಳಲ್ಲಿ ದೆಹಲಿ ಪೊಲೀಸರು ಇಂಥವುಗಳನ್ನು ಸಮರ್ಥವಾಗೇ ನಿಭಾಯಿಸಿದ್ದಾರೆ. ಆದರೆ ಈಗ ಸಮಸ್ಯೆಯಾಗಿರುವದು ಆ ಜನಜಂಗುಳಿಯ ಜೊತೆ ಸ್ವತ: ಮುಖ್ಯಮಂತ್ರಿ ಹಾಗೂ ದೆಹಲಿ ರಾಜ್ಯ ಸರಕಾರದ ಇತರ ಏಳು ಜನ ಸಚಿವರೂ ಇದ್ದದ್ದು ಮತ್ತು ನಾಳಿದ್ದು ಸಂಜೆಯ ಹೊತ್ತಿಗೆ ಆ ಇಡೀ ಪ್ರದೇಶವನ್ನು ಭದ್ರತಾ ದೃಷ್ಟಿಯಿಂದ ಸಮಗ್ರವಾಗಿ ಪರಿಶೀಲಿಸಿ, ಸ್ಯಾನಿಟೈಜ್ ಮಾಡಿದ ನಂತರ ಅದನ್ನು ಭಾರತೀಯ ಸೇನೆಯ ವಶಕ್ಕೊಪ್ಪಿಸಬೇಕಾಗಿದ್ದ ಸನ್ನಿವೇಶ. ಏಕೆಂದರೆ ಅದಾದ ಮೂರನೇಯ ದಿನ ಭಾನುವಾರ ಇಪ್ಪತ್ತಾರನೇ ತಾರೀಖು ಬೆಳಕು ಹರಿಯುತ್ತಲೇ ಗಣರಾಜ್ಯೋತ್ಸವದ ಅಲಂಕಾರಿಕ ಪರೇಡ್ ನೂರಾರು ವಿದೇಶಿ ಗಣ್ಯರು ಮತ್ತು ಸಾವಿರಾರು ನಾಗರಿಕರ ಸಮ್ಮುಖದಲ್ಲಿ ಅಲ್ಲಿ ಸಾಂಗವಾಗಿ ನೆರವೇರಬೇಕಾಗಿದೆ. ಈಗ ಮುಖ್ಯಮಂತ್ರಿ ಒಂದು ಹೆಜ್ಜೆ ಮುಂದೆ ಹೋಗಿ ಜನರ ಬದುಕಿಗೆ ರಕ್ಷಣೆ ಭದ್ರತೆಯೇ ಇಲ್ಲದಾಗ ಆ ಗಣರಾಜ್ಯೋತ್ಸವವೆಂಬ ವಿಐಪಿ ಜನರ ಅವಗಾಹನೆಗೆ ನಡೆಯುವ ಆಚರಣೆಗೆ ಏನರ್ಥವಿದೆ ಎಂದು ಅದರ ಪಾವಿತ್ರ್ಯವನ್ನೇ ಪ್ರಶ್ನಿಸುವ ಮೂರ್ತಿಭಂಜಕ ನಿಲುವನ್ನೂ ತಾಳಿಯಾಯಿತು. ಕಾಂಗ್ರೆಸ್ ಗೆ ಈ ಆಮ್ ಆದ್ಮಿ ಪಕ್ಷ ಮತ್ತು ಸ್ವತ: ತಾನು ಬಾಹ್ಯ ಬೆಂಬಲ ಕೊಟ್ಟು ದೆಹಲಿ ರಾಜ್ಯದ ಅಧಿಕಾರ ಗದ್ದುಗೆಗೆ ಏರಿಸಿದ ಅದರ ಸರಕಾರ ಈಗ ನುಂಗಲೂ ಆಗದ ಉಗುಳಲೂ ಆಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ ಎಂಬುದು ಈ ವಿದ್ಯಮಾನಗಳಿಂದ ಸಾಬೀತಾಗಿದೆ. ಕೆಲದಿನಗಳ ಹಿಂದೆ ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಗಳ ಫಲಿತಾಂಶ ವಿಭಜಿತ ಜನಾದೇಶ ಒದಗಿಸಿದ ಹಿನ್ನೆಲೆಯಲ್ಲಿ ತಮ್ಮಷ್ಟಕ್ಕೇ ಸ್ವತಂತ್ರವಾಗಿ ಯಾವ ಪಕ್ಷವೂ ಅಧಿಕಾರದ ಚುಕ್ಕಾಣಿ ಹಿಡಿಯುವದು ಅಸಾಧ್ಯವಾಗಿತ್ತು. ಕೇವಲ ಇಪ್ಪತ್ತೆಂಟು ಸದಸ್ಯಬಲದ ಆಮ್ ಆದ್ಮಿ ಪಕ್ಷವು ಕಾಂಗ್ರೆಸ್ ಅಥವಾ ಬಿಜೇಪಿಯ ಬೆಂಬಲದೊಂದಿಗೆ ಸರಕಾರ ರಚಿಸಲು ಉತ್ಸುಕತೆ ತೋರದೇ ಹೋದಾಗ ಮತ್ತೊಮ್ಮೆ ಚುನಾವಣೆ ಎದುರಿಸುವ ಧೈರ್ಯವಿಲ್ಲದ ಕಾಂಗ್ರೆಸ್ ಆಮ್ ಆದ್ಮಿಗೆ ಹೊರಗಿನಿಂದ ಬೆಂಬಲ ನೀಡಿ ಸರಕಾರ ರಚಿಸಲು ಅದಕ್ಕೆ ನೆರವು ನೀಡುವ ಪ್ರಸ್ತಾಪ ಮುಂದಿಟ್ಟಿತ್ತು. ಎಸ್.ಎಂ.ಎಸ್ ಮೂಲಕ ಜನಾಭಿಪ್ರಾಯ ಕೇಳಿ ಅಥವಾ ಕೇಳಿದಂತೆ ಮಾಡಿ ಆಮ್ ಆದ್ಮಿ ಪಾರ್ಟಿ ಸರಕಾರ ರಚಿಸಿತ್ತು

ಮೇಲ್ನೋಟಕ್ಕೆ ಈ ಇಡೀ ವಿದ್ಯಮಾನಕ್ಕೆ ಕಾರಣವಾಗಿರುವ ಘಟಣೆ ಮತ್ತು ಕೇಂದ್ರ ಸರಕಾರದ ಗೃಹ ಸಚಿವಾಲಯದ ಮುಂದೆ ಆಮ್ ಆದ್ಮಿ ಪಕ್ಷ ಇಟ್ಟ ಬೇಡಿಕೆ ಎಷ್ಟು ಸಾಮಾನ್ಯ ಎನ್ನಿಸುತ್ತದೆಂದರೆ ಹೌದಲ್ಲ, ಕೇಂದ್ರ ಸರಕಾರ ಇಷ್ಟು ಮಾತ್ರದ ಒಂದು ಬೇಡಿಕೆಯನ್ನು ಈಡೇರಿಸಿ ಈ ಪರಿ ರಾದ್ಧಾಂತವಾಗದಂತೆ ತಡೆಯಬಹುದಿತ್ತಲ್ಲ ಎನ್ನಿಸುವಂಥದು. ದೆಹಲಿಯ ಮಾಲವೀಯ ನಗರದ ಜನವಸತಿ ಪ್ರದೇಶದಲ್ಲಿ ವಾಸವಾಗಿರುವ ಉಗಾಂಡ ನೈಜೀರಿಯ ಮೊದಲಾದ ಕೆಲ ವಿದೇಶಿ ಪುರುಷರು ಮಹಿಳೆಯರು ಮಾದಕ ದ್ರವ್ಯಗಳ ಮಾರಾಟ, ವೇಶ್ಯಾವಾಟಿಕೆಯೇ ಮೊದಲಾದ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿರುವ ಕುರಿತ ಸ್ಥಳೀಯರ ದೂರುಗಳನ್ನಾಲಿಸಿ ದೆಹಲಿ ರಾಜ್ಯದ ಆಮ್ ಆದ್ಮಿ ಪಕ್ಷದ ಸರಕಾರದ ಗೃಹ ಮಂತ್ರಿ ಆ ಸ್ಥಳಕ್ಕೆ ತಾವೇ ಹೋಗಿ ಪರಿಶೀಲಿಸಿ ಶಂಕಿತರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಬೇಕೆಂಬ ಬೇಡಿಕೆ ಇಟ್ಟಾಗ ಸಂಬಂಧಿತ ಪೊಲೀಸ್ ಠಾಣೆಗಳ ಅಧಿಕಾರಿಗಳು ಹಾಗೆ ಮಾಡಲು ನಿರಾಕರಿಸಿದ್ದಷ್ಟೇ ಅಲ್ಲ ದೆಹಲಿ ರಾಜ್ಯದ ಗೃಹಮಂತ್ರಿಯ ಜೊತೆ ವಾಗ್ವಾದಕ್ಕಿಳಿದದ್ದು ಇದಕ್ಕೆಲ್ಲ ಮೂಲಕಾರಣ. ಆ ಉದ್ಧಟ ಪೊಲೀಸ್ ಅಧಿಕಾರಿಗಳ ಮೇಲೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕೆನ್ನುವದು ಆಮ್ ಆದ್ಮಿ ಬೇಡಿಕೆ. ವಿಚಾರಣೆ ನಡೆಯುತ್ತಿದೆ. ಅದು ಮುಗಿದು ಅವರು ತಪ್ಪಿತಸ್ಥರು ಎಂದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವದು ಎಂಬ ಯಥಾಪ್ರಕಾರದ ನಿಲುವು ಗೃಹ ಮಂತ್ರಿ ಸಿಂಧೆ ಅವರದು. ಕೆಲದಿನಗಳ ಹಿಂದೆ ಕಲ್ಲು ತೂರಾಟದಲ್ಲಿ ತಮ್ಮ ನಿವಾಸದ ಗಾಜು ಒಡೆದಾಗ ಅದರ ಭದ್ರತೆಗೆ ನಿಯುಕ್ತರಾಗಿದ್ದ ಹನ್ನೆರಡು ಜನ ಅಧಿಕಾರಿಗಳನ್ನು ಕಿತ್ತೆಸೆದಿರಲ್ಲಾ ಆಗಲೂ ವಿಚಾರಣೆ ಜರುಗಿಸಿ ಹಾಗೆ ಮಾಡಿದ್ದಿರಾ? ಎಂಬುದು ಸುಶೀಲ್ ಕುಮಾರ್ ಶಿಂಧೆಯವರಿಗೆ ಕೇಜ್ರಿವಾಲ್ ಪ್ರಶ್ನೆ. ದೆಹಲಿ ನಗರದ ಪೊಲೀಸ್ ವ್ಯವಸ್ಥೆ ದೆಹಲಿ ರಾಜ್ಯಸರಕಾರದ ಆಧೀನದಲ್ಲಿರಬೇಕು ಮತ್ತು ಅದಕ್ಕೆ ಉತ್ತರದಾಯಿ ಆಗಿರಬೇಕು ಎಂಬುದು ಆಮ್ ಆದ್ಮಿ ಬೇಡಿಕೆ. ಅದು ಸಾಧ್ಯವಿಲ್ಲ ಅಮೇರಿಕವನ್ನೂ ಒಳಗೊಂಡು ಜಗತ್ತಿನ ಎಲ್ಲ ಪ್ರಮುಖ ದೇಶಗಳ ರಾಜಧಾನಿ ನಗರಗಳ ಪೊಲೀಸ್ ವ್ಯವಸ್ಥೆ ಕೇಂದ್ರ ಸರಕಾರಕ್ಕೇ ಆಧೀನವಾಗಿದೆ. ಅದು ಇರಬೇಕಾದುದೇ ಹಾಗೆ ಎಂಬುದು ಸಿಂಧೆಯವರ ವಾದ. ಹಾಗಿದ್ದರೆ ದೆಹಲಿ ವಿಧಾನಸಭೆಗೆ ಚುನಾವಣೆ ಮಾಡಿದಿರೇಕೆ, ಅದಕ್ಕೊಬ್ಬ ಮುಖ್ಯಮಂತ್ರಿ, ಗೃಹಮಂತ್ರಿ ಇದೆಲ್ಲ ಯಾಕೆ ಬೇಕು ದೆಹಲಿಯ ಪೊಲೀಸ್ ಕಮೀಶನರ್ ಅವರನ್ನೇ ಮುಖ್ಯ ಮಂತ್ರಿ ಮಾಡಬಹುದಲ್ಲ ಎಂಬುದು ಖೇಜ್ರಿವಾಲ್ ರ ಪ್ರತಿಕ್ರಿಯೆ.
ವಾಸ್ತವವಾಗಿ ಈ ಸಮಸ್ಯೆ ಇಂದು ನಿನ್ನೆಯದಲ್ಲ. ದಶಕಗಳಿಂದ ಈ ತಿಕ್ಕಾಟ ಇದೆ. ಹಿಂದೆ ಬಿಜೆಪಿ ದೆಹಲಿ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದಿದ್ದಾಗ, ಅನಂತರ ಕಾಂಗ್ರೆಸ್ಸಿನದೇ ಸರಕಾರ ಅಲ್ಲಿದ್ದು ಶೀಲಾ ದೀಕ್ಷಿತ್ ಮುಖ್ಯಮಂತ್ರಿಯಾಗಿದ್ದಾಗಲೂ ದೆಹಲಿ ಪೊಲೀಸ್ ವ್ಯವಸ್ಥೆಯ ಉತ್ತರದಾಯಿತ್ವದ ಈ ಪ್ರಶ್ನೆ ಎದ್ದಿವೆ. ಏಕೆಂದರೆ ಪ್ರಚಲಿತ ವ್ಯವಸ್ಥೆಯಲ್ಲಿ ದೆಹಲಿ ಪೊಲೀಸ್ ಉತ್ತರದಾಯಿ ಆಗಿರುವದು ದೆಹಲಿ ರಾಜ್ಯ ಸರಕಾರಕ್ಕಲ್ಲ, ಕೇಂದ್ರ ಸರಕಾರದ ಗ್ರಹ ಮಂತ್ರಿಗೆ. ದೆಹಲಿಯಲ್ಲಿ ಮಹಿಳೆಯರ ಮೇಲೆ ಮಾನಭಂಗದಂಥ ಘಟಣೆಗಳು ಬೆಚ್ಚಿ ಬೀಳಿಸುವಂಥ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಮಹಿಳೆಯರಲ್ಲಿ ಅಭದ್ರತೆಯ ಭಾವನೆ ಮನೆಮಾಡಿದಂಥ ಸ್ಥಿತಿಯಿದೆ. ಒಂದು ವಿಭಿನ್ನ ಪಾತಳಿಯಿಂದ ಮೂಡಿಬಂದು ಒಂದು ಪರ್ಯಾಯ ಮತ್ತು ಭಿನ್ನ ರಾಜಕೀಯ ಸಂಸ್ಕೃತಿಯ ಆಶೆಯನ್ನು ಜನರಲ್ಲಿ ಹುಟ್ಟಿಸಿರುವ ಆಮ್ ಆದ್ಮಿ ಸರಕಾರದ ಕುರಿತು ಜನರಲ್ಲಿ ಅಪಾರ ನಿರೀಕ್ಷೆಗಳಿವೆ. ವಂಶಪಾರಂಪರ್ಯದ, ಹಣಬಲದ, ತೋಳ್ಬಲದ, ರಾಜಕೀಯ ಅಧಿಕಾರದ ಆಶೆಗಾಗಿ ಜಾತಿ-ಧರ್ಮ ಎಲ್ಲವನ್ನೂ ಬಳಸಿಕೊಂಡು ಜನರನ್ನು ವಿಭಜಿಸಿ ಬೆಂಕಿ ಹಚ್ಚಿ ತಮ್ಮ ಕಾರ್ಯಸಿದ್ಧಿಸಿಕೊಳ್ಳಬಯಸುವ ಹೀಗೆ ಥರಾವರಿ ಶಕ್ತಿಗಳ ಮಧ್ಯೆ ಅದು ಬದುಕಿ ಬೆಳೆಯಬೇಕಾಗಿದೆ. ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಅತ್ಯಾಚಾರದಂಥ ಘಟನೆಗಳಲ್ಲಿ “ಏನು ಮಾಡುವದು? ದೆಹಲಿ ಪೊಲೀಸ್ ವ್ಯವಸ್ಥೆ ನನ್ನ ಆಧೀನದಲ್ಲಿಲ್ಲ” ಎನ್ನುತ್ತಿದ್ದ ಮಾಜಿ ಮುಖ್ಯಮಂತ್ರಿಯನ್ನು ಆ ಹೇಳಿಕೆಗೆ ಪ್ರತಿಯಾಗಿ ಟೀಕಿಸುತ್ತಿದ್ದ ಕೇಜ್ರಿವಾಲ್ ಈಗ ತಾನೂ ಅದನ್ನೇ ಹೇಳಿ ಬಚಾವಾಗುವದು ಸಾಧ್ಯವಿಲ್ಲ. ಅಂತೆಯೆ ಕೇಂದ್ರ ಸರಕಾರದ ವಿರುದ್ಧ ಈ ಘರ್ಷಣೆ.
ಇಷ್ಟು ಮಾತ್ರ ನಿಜ, ತಮ್ಮ, ತಮ್ಮ ಪಕ್ಷದ ಹಾಗೂ ಅದು ಪ್ರತಿನಿಧಿಸುವ ಮೌಲ್ಯ ಮತ್ತು ಆಶಯಗಳ ಹಿತೈಷಿಗಳು ಕೂಡ ನೇರವಾಗಿ ಬೀದಿಗಿಳಿದು ಸಾರ್ವಜನಿಕರಿಗೆ ಅನಾನುಕೂಲ ಉಂಟಾಗುವಂಥ ಸನ್ನಿವೇಶವನ್ನು ತಾವು ನಿರ್ಮಿಸಿದ ಕುರಿತು ಬೇಸರಿಸಿಕೊಂಡಿದ್ದಾರೆ ಎಂಬ ಸತ್ಯವನ್ನು ಕೇಜ್ರಿವಾಲ್ ಅರ್ಥ ಮಾಡಿಕೊಂಡಿದ್ದಾರೆ. ಗಣರಾಜ್ಯೋತ್ಸವ ಮುಸ್ಸಂಜೆಯಲ್ಲಿ ಪರಿಸ್ಥಿತಿ ಹತೋಟಿ ಮೀರಿ ಹೋಗುತ್ತಿದ್ದ ವಾಸ್ತವವನ್ನು ಅರ್ಥ ಮಾಡಿಕೊಂಡು ತಮ್ಮ ಕಠಿಣ ನಿಲುವನ್ನು ಸಡಿಲಿಸುವ ವಿವೇಕ ಮೆರೆದಿದ್ದಾರೆ. ಅದೇ ಕಾಲಕ್ಕೆ ತಮ್ಮ ರಾಜಕೀಯ ಹಾಗೂ ಸಂಘಟಣಾತ್ಮಕ ಸಾಮರ್ಥ್ಯದ ಸೂಚನೆಯನ್ನೂ ತಮ್ಮ ರಾಜಕೀಯ ಎದುರಾಳಿಗಳಿಗೆ ರವಾನಿಸಿದ್ದಾರೆ.
ಜನರ ಸಮಸ್ಯೆಗಳನ್ನು ಪರಿಹರಿಸುವದು ತನಗೆ ಅಸಾಧ್ಯವೆಂದು ಮನಗಂಡ ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ತನ್ನ ಸರ್ಕಾರಕ್ಕೆ ಕೊಟ್ಟ ಬೆಂಬಲವನ್ನು ಹಿಂತೆಗೆದುಕೊಂಡು ತನ್ನ ಸರಕಾರ ಕೆಡವಲಿ, ಅಥವಾ ಹಾಗೆ ತನ್ನ ಸರಕಾರ ಬಿದ್ದುಹೋದ ಪಕ್ಷದಲ್ಲಿ ಆ ಹುತಾತ್ಮಾಗಿರಿಯನ್ನೇ ಮುಂಬರುವ ಪಾರ್ಲಿಮೆಂಟ್ ಚುನಾವಣೆಯಲ್ಲಿ ತನ್ನ ಪ್ರಚಾರದ ಪ್ರಮುಖ ಪ್ಲ್ಯಾಂಕ್ ಮಾಡಿಕೊಂಡು ದೊಡ್ಡದಾಗಿ ಲಾಭ ಪಡೆದು ದೇಶದ ಪ್ರಧಾನ ಮಂತ್ರಿಯಾಗಬೇಕೆಂದು ಅರವಿಂದ್ ಕೇಜ್ರಿವಾಲ್ ಉದ್ದೇಶಪೂರ್ವಕವಾಗಿ ಹೀಗೆ ಸಂಘರ್ಷದ ದಾರಿ ತುಳಿದಿದ್ದಾರೆ ಎಂಬ ವಾದಗಳು ಮಾತ್ರ ತಲೆಕೆಳಗಾಗಿ ಬಿದ್ದಿವೆ. ಮತ್ತು ಕಾಂಗ್ರೆಸ್ ಹಾಗೂ ಬಿಜೆಪಿ ಎಂಬ ಒಂದೇ ನಾಣ್ಯದ ಎರಡು ಮುಖಗಳಂತಿರುವ ರಾಜಕೀಯ ಪಕ್ಷಗಳು ಈ ಆಮ್ ಆದ್ಮಿ ಪಕ್ಷ ಮತ್ತು ಅರವಿಂದ್ ಕೇಜ್ರಿವಾಲ್ ಎಂಬ ಮನುಷ್ಯನ ಕುರಿತು ಮತ್ತಷ್ಟು ತಲೆ ಕೆಡಿಸಿಕೊಂಡು ಕೂಡ್ರುವಂತಾಗಿದೆ
ಅಶೋಕ ಶೆಟ್ಟರ್ ಕಾಲಂ : ಆಮ್ ಆದ್ಮಿ ಎಂಬ ’ಅನಾರ್ಕಿಸ್ಟ್’ ಕೂಸು..
ನಿಮಗೆ ಇವೂ ಇಷ್ಟವಾಗಬಹುದು…




When everyone is busy bashing AAP, you have expressed a balanced (maap maadida 🙂 ) view
haan
ARMY theatened to withdraw from republic day thats why AAP has withdrawn agitation.
ತಮ್ಮ, ತಮ್ಮ ಪಕ್ಷದ ಹಾಗೂ ಅದು ಪ್ರತಿನಿಧಿಸುವ ಮೌಲ್ಯ ಮತ್ತು ಆಶಯಗಳ ಹಿತೈಷಿಗಳು ಕೂಡ ನೇರವಾಗಿ ಬೀದಿಗಿಳಿದು ಸಾರ್ವಜನಿಕರಿಗೆ ಅನಾನುಕೂಲ ಉಂಟಾಗುವಂಥ ಸನ್ನಿವೇಶವನ್ನು ತಾವು ನಿರ್ಮಿಸಿದ ಕುರಿತು ಬೇಸರಿಸಿಕೊಂಡಿದ್ದಾರೆ ಎಂಬ ಸತ್ಯವನ್ನು ಕೇಜ್ರಿವಾಲ್ ಅರ್ಥ ಮಾಡಿಕೊಂಡಿದ್ದಾರೆ. ಗಣರಾಜ್ಯೋತ್ಸವ ಮುಸ್ಸಂಜೆಯಲ್ಲಿ ಪರಿಸ್ಥಿತಿ ಹತೋಟಿ ಮೀರಿ ಹೋಗುತ್ತಿದ್ದ ವಾಸ್ತವವನ್ನು ಅರ್ಥ ಮಾಡಿಕೊಂಡು ತಮ್ಮ ಕಠಿಣ ನಿಲುವನ್ನು ಸಡಿಲಿಸುವ ವಿವೇಕ ಮೆರೆದಿದ್ದಾರೆ. ಅದೇ ಕಾಲಕ್ಕೆ ತಮ್ಮ ರಾಜಕೀಯ ಹಾಗೂ ಸಂಘಟಣಾತ್ಮಕ ಸಾಮರ್ಥ್ಯದ ಸೂಚನೆಯನ್ನೂ ತಮ್ಮ ರಾಜಕೀಯ ಎದುರಾಳಿಗಳಿಗೆ ರವಾನಿಸಿದ್ದಾರೆ. embudu khandita oppalebekada vimarshe
I don’t agree that the views expressed here are balanced, it is soft on AAP, and views Congress & BJP from same angle, which is totally wrong.
First thing you are ignoring is the fact that a AAP minister wanted police to raid a house without warrant, which the police rightly refused. This fact has been reported by many papers. All AAP can and will do and good at is mobilizing people to hijack the capital, which they are enjoying right now. Once this becomes a nuisance people will have to look for a new alternative. Administration and activism are different. Simple.