ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಶೋಕ್ ಶೆಟ್ಟರ್ ಕಾಲಂ : ಶ್ರದ್ಧೆ ಕರೆತಂದಿತು, ಪ್ರವಾಹ ಕೊಂಡೊಯ್ಯಿತು…

ಪಂಚತರ್ಣಿಯಲ್ಲಿ ಹೆಲಿಕಾಪ್ಟರ್ ಇಳಿದು ಅಲ್ಲಿಂದ ಮುಂದೆ ಸಮುದ್ರ ಮಟ್ಟದಿಂದ ಹನ್ನೆರಡು ಸಾವಿರ ಅಡಿಗೆ ಮೇಲ್ಪಟ್ಟ ಎತ್ತರದಲ್ಲಿ ಸಬ್ ಝೀರೋ ಉಷ್ಣತಾಮಾನದಲ್ಲೂ ಪ್ರಾಣವಾಯು ನೂರಕ್ಕೆ ಇಪ್ಪತ್ತೈದು ಭಾಗ ಕಡಿಮೆ ಇರುವಲ್ಲೂ ಸ್ಥಿತವಾಗಿರುವ ಅಮರನಾಥದ ಆರು ಮೈಲು ಅಂತರವನ್ನು ಏರುಮುಖವಾಗಿ ನನ್ನ ಅಷ್ಟೇನೂ ಬಲಶಾಲಿಯಲ್ಲದ ಶರೀರವನ್ನು ಅನುನಯದಿಂದ ಮನವೊಲಿಸಿ ಕಾಲ್ನಡಿಗೆಯಲ್ಲಿ ಕ್ರಮಿಸಿ ತಲುಪಿ ಅಲ್ಲಿರುವ ಹಿಮಲಿಂಗವನ್ನು ನೋಡಿ ಬರುವ ಯೋಜನೆ ಹಾಕಿಕೊಂಡು ಕುಳಿತಿರುವ ನನಗೆ ಉತ್ತರಾಖಂಡ್ ರಾಜ್ಯವನ್ನಪ್ಪಳಿಸಿರುವ ಅನಾಹುತ ಚಿಂತೆಗೀಡು ಮಾಡಿದೆ.
ಅಮರನಾಥ ಸ್ಥಿತವಾಗಿರುವ ದಿಕ್ಕೇ ಬೇರೆ ಮತ್ತು ಅಲ್ಲಿ ತಮ್ಮ ಪಾತ್ರಗಳನ್ನು ಮೀರಿ ಮೈತುಂಬಿ ಹರಿದು ಇಡೀ ಪ್ರದೇಶದಲ್ಲಿ ಜಲಪ್ರಳಯ ಸೃಷ್ಟಿಸುವ ಗುಣವುಳ್ಳ ಗಂಗೆ, ಯಮುನೆ, ಅಲಕನಂದೆ, ಮಂದಾಕಿನಿಯರು ಇಲ್ಲವೆಂಬುದು ಸದ್ಯದ ಸಮಾಧಾನ. ಆದರೆ ಮಳೆ ಮಳೆಯೇ. ಅಂಥದೊಂದು ಮುಸಲಧಾರೆಯ ಪರಿಣಾಮವಾಗಿಯೇ ಯಾತ್ರಾರ್ಥಿಗಳು ಬೀಡು ಬಿಟ್ಟಿದ್ದ ಬೇಸ್ ಕ್ಯಾಂಪ್ ನ ಮೇಲೆ ಪರ್ವತದ ಒಂದು ಇಡೀ ಭಾಗವೇ ಕುಸಿದು ನೃತ್ಯಗಾತಿ ಪ್ರೊತಿಮಾ ಬೇಡಿ ಸಮೇತ ನೂರಾರು ಜನ ಜೀವಂತ ಸಮಾಧಿಯಾಗಿ ಹೋದದ್ದು ಇತ್ತೀಚಿನ ಇತಿಹಾಸ.
ಅದಿರಲಿ ಉತ್ತರಾಖಂಡದಲ್ಲಿ ಸಂಭವಿಸಿದ ವಿಕೋಪ ವೈಯಕ್ತಿಕ ಚಿಂತೆ ಚಿಂತನೆಗಳಿಗಾತೀತವಾದದ್ದು.
ಅದು ಇತ್ತೀಚಿನ ಇತಿಹಾಸದಲ್ಲಿ ನಡೆದ ಅತಿ ಗಂಭೀರ ಮಾನವ ದುರಂತಗಳಲ್ಲೊಂದು. ಉತ್ತರಾಖಂಡ ರಾಜ್ಯದಲ್ಲಿ ಕಳೆದ ವಾರ ಅಭೂತಪೂರ್ವವೆಂಬಂತೆ ಸುರಿದ ಮಳೆಯಿಂದಾದ ಪ್ರವಾಹ ಉಂಟು ಮಾಡಿದ ಅಲ್ಲೋಲ ಕಲ್ಲೋಲದ ಕುರಿತು ಸ್ವಾಭಾವಿಕವಾಗಿಯೇ ನೂರೆಂಟು ವಿಶ್ಲೇಷಣೆಗಳು, ವಿವರಣೆಗಳು, ಸಚಿತ್ರ ವರದಿಗಳು, ಸಲಹೆ ಸೂಚನೆಗಳು, ಸಾವಿನ ದವಡೆಗೆ ಸಿಕ್ಕು ಹೊರಬಂದವರ ಅನುಭವ ಕಥನಗಳು ಈ ವಾರವಿಡೀ ಎಲ್ಲ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿವೆ. ಸತ್ತವರ ಸಂಖ್ಯೆ ನೂರಕ್ಕೆ ಮಿಕ್ಕಿದೆ ಎಂಬ ಆರಂಭಿಕ ಅಂದಾಜು ದಿನಂಪ್ರತಿ ಬದಲಾಗುತ್ತ ಈಗ ಐದು ಸಾವಿರದ ಅಂಕಿಯನ್ನು ದಾಟಿದೆ. ವಾಸ್ತವ ಸಂಖ್ಯೆ ಇದಕ್ಕಿಂತ ತುಂಬ ಹೆಚ್ಚಾಗಿರುತ್ತದೆ ಮತ್ತು ಅದು ನಿಖರವಾಗಿ ಗೊತ್ತಾಗುವದೇ ಇಲ್ಲ ಎಂಬುದು ಎಲ್ಲರಿಗೂ ಗೊತ್ತು!
ಪರಿಹಾರಕಾರ್ಯದ ಕುರಿತು ಅಸಮಾಧಾನ ಕೆಲವರಲ್ಲಿದ್ದರೆ ಇಂಡೋ-ಟಿಬೇಟಿಯನ್ ಬಾರ್ಡರ್ ಪೋಲಿಸ್ ನಂಥ ಪ್ಯಾರಾಮಿಲಿಟರಿ ಪಡೆಗಳು ಮತ್ತು ಭಾರತೀಯ ಸೈನ್ಯದ ವಿವಿಧ ತುಕಡಿಗಳು ನಡೆಸಿದ ಕಾರ್ಯಾಚರಣೆಯ ಕುರಿತ ಕೃತಜ್ಞತೆ ಅವರಿಂದ ರಕ್ಷಿಸಲ್ಪಟ್ಟ ಸಾವಿರಾರು ಇತರರಿಂದ ವ್ಯಕ್ತವಾಗುತ್ತಿದೆ. ಸುಮಾರು ೮೦,೦೦೦ ಜನರನ್ನು ಅಪಾಯದಿಂದ ಪಾರು ಮಾಡಲಾಗಿದೆ. ಅವಘಡ ಸಂಭವಿಸಿದ ಒಂದು ವಾರದ ನಂತರವೂ ಹಗಲು ರಾತ್ರಿಯೆನ್ನದೇ ನಡೆದ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಯ ಹೊರತಾಗಿಯೂ ಇನ್ನೂ ಸುಮಾರು ೧೫೦೦೦ ಜನ ಭರವಸೆಯ ಕಣ್ಣುಗಳಿಂದ ರಕ್ಷಣೆಗಾಗಿ ಕಾದಿದ್ದಾರೆ.
ಬದ್ರಿನಾಥ ಒಂದರಲ್ಲೇ ಅನ್ನಾಹಾರಗಳಿಲ್ಲದೇ ನಿತ್ರಾಣರಾದ ಇನ್ನೂ ಮೂರು ಸಹಸ್ರ ಜನ ಸಾವಿನ ದವಡೆಯಿಂದ ತಮ್ಮನ್ನು ರಕ್ಷಿಸುವವರಿಗೆ ಕಾಯುತ್ತ ಕುಳಿತಿದ್ದಾರೆನ್ನುತ್ತವೆ ವರದಿಗಳು. ಈ ಭೀಕರ ಮಾನವ ದುರಂತ ಮಾನವನೇ ಕಾರಣವಾಗಿ ಉಂಟಾದ ಮಾನವ ನಿರ್ಮಿತ ದುರಂತ,( man-made disaster)ಎಂಬ ಗ್ರಹಿಕೆ ಬಲಗೊಳ್ಳುತ್ತಿದೆ. ಉಷ್ಣತಾಮಾನದ ಹೆಚ್ಚಳದಿಂದಾಗಿ ಹೆಚ್ಚಿನ ತೀವೃತೆಯ ವರ್ಷಧಾರೆ ಸುರಿಯುವ ಸಂದರ್ಭಗಳೂ ಹೆಚ್ಚುತ್ತಿದ್ದು ಜನ ಇಂಥ ಅನಾಹುತಗಳಿಗೆ ಇನ್ನು ಪದೇ ಪದೇ ಸಿದ್ಧವಾಗಿರಬೇಕಾದ ಸಂಭಾವ್ಯತೆಯ ಕುರಿತು ಪರಿಸರವಾದಿಗಳು, ವಿಜ್ಞಾನಿಗಳು ಎಚ್ಚರಿಸುತ್ತಿದ್ದಾರೆ.

ತೊಂದರೆಗೆ ಸಿಲುಕಿದವರ ಅಥವಾ ಪ್ರವಾಹದ ಸೆಳೆತಕ್ಕೆ ಸಿಕ್ಕಿ ಮರಣಿಸಿದವರ ಅಸಮಾಧಾನ, ದೂರು, ಸಂಕಟಗಳೇನೇ ಇರಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆ ಇಲ್ಲಿ ತುಂಬ ಕಷ್ಟದ್ದಾಗಿದೆ ಎನ್ನುವದನ್ನು ಒಪ್ಪಲೇ ಬೇಕು. ಇಲ್ಲಿ ಯಾವುದೋ ಒಂದು ಸ್ಥಳದಲ್ಲಿ ಜನ ಸಿಕ್ಕಿ ಹಾಕಿಕೊಂಡಿಲ್ಲ. ಒಂದೊಮ್ಮೆ ಉತ್ತರ ಪ್ರದೇಶದ ಭಾಗವಾಗಿದ್ದ ಈಗ ಉತ್ತರಾಖಂಡ್ ಎಂದು ಸ್ವತಂತ್ರ ರಾಜ್ಯವಾಗಿರುವ ಈ ಪ್ರದೇಶವು, ಶಿಖ್ಖರ ಪವಿತ್ರ ಕ್ಷೇತ್ರಗಳಲ್ಲೊಂದಾಗಿರುವ ಹೇಮಕುಂಡ್ ಸಾಹೀಬ್ ಹೊರತುಪಡಿಸಿ, ಹಲವಾರು ಪುರಾಣಪ್ರಸಿದ್ಧ ಶೈವ ತೀರ್ಥಕ್ಷೇತ್ರಗಳ ಆಗರ. ದೇಶಾದ್ಯಂತದಿಂದ ವೈಶಾಖದಿಂದ ಕಾರ್ತಿಕ ಮಾಸದ ವರೆಗೆ ಸರಿಸುಮಾರಾಗಿ ಲಕ್ಷಾವಧಿ ಯಾತ್ರಾರ್ಥಿಗಳು ಇಲ್ಲಿ ಆಗಮಿಸುತ್ತಾರೆ. ಸಹಜ ಸನ್ನಿವೇಶಗಳಲ್ಲಿ ಅದೊಂದು ಅಪೂರ್ವ ಅನುಭವವೇ ಆಗಿರಬೇಕು. ಸ್ತ್ರೀ ಪುರುಷರೆನ್ನದೇ, ಮಕ್ಕಳಿಂದ ವೃದ್ಧರ ವರೆಗೆ ಎಲ್ಲೆಡೆಯಿಂದ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ತಕ್ಕ ಮಟ್ಟಿಗಿನ ವ್ಯವಸ್ಥೆಗಳಿಂದ ಕೂಡಿದ ಈ ಕ್ಷೇತ್ರಗಳಿಗೆ ಆಗಮಿಸುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

ಅಮರನಾಥ್ ಹಾಗೂ ಕೈಲಾಸ್ ಮಾನಸ ಸರೋವರದಂಥ ಪೂರ್ವ ನಿರ್ಧರಿತ ಮತ್ತು ನಿಯಂತ್ರಿತ ರೀತಿಯ ಯಾತ್ರೆಗಳಂತಲ್ಲದ “ಚಾರ್ ಧಾಮ್ ಯಾತ್ರಾ” ಎಂದು ಕರೆಯಲ್ಪಡುವ ಈ ಕ್ಷೇತ್ರಗಳ ಯಾತ್ರೆ ಮುಖ್ಯವಾಗಿ ಉತ್ತರಕಾಶಿಯ ಗಂಗೋತ್ರಿ, ಯಮುನೋತ್ರಿ,ಬದರಿನಾಥ್ ಹಾಗೂ ಕೇದಾರನಾಥ್ ಗಳನ್ನು ಒಳಗೊಂಡಿರುತ್ತದಾದರೂ ಪ್ರವಾಸಿಗಳು ಹಲವು ಇತರ ಕ್ಷೇತ್ರಗಳನ್ನೂ ದರ್ಶಿಸಿಯೇ ಹೋಗುವದರಿಂದ ಸಹಸ್ರಾರು ಚದರ ಮೈಲು ವಿಸ್ತಾರದ ಹಲವು ನೆಲೆಗಳಲ್ಲಿ ಅವರು ಸಿಲುಕಿಕೊಂಡಿದ್ದಾರೆ. ಪ್ರಮುಖ ಮಾರ್ಗಗಳಲ್ಲದೇ ವಿವಿಧ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ಕಾಲುದಾರಿಗಳೂ ಇಲ್ಲಿದ್ದು ಜನ ಅವುಗಳನ್ನೂ ಅನುಸರಿಸುತ್ತಾರೆ. ಬದರಿನಾಥ, ಕೇದಾರನಾಥ ಗಂಗೋತ್ರಿ, ಯಮುನೋತ್ರಿ ಅಲ್ಲದೇ ಗೋವಿಂದಘಾಟ.ಜಂಗಲ್ ಚಟ್ಟಿ, ಹೃಷಿಕೇಶ, ಹರಿದ್ವಾರ, ದೇವಪ್ರಯಾಗ,ಸೋನ್ ಪ್ರಯಾಗ, ರುದ್ರಪ್ರಯಾಗ, ಗೌಚರ್, ಹರ್ಷಿಲ್,ಹೇಮಕುಂಡ, ಹನುಮಾನ್ ಚೆಟ್ಟಿ, ಗೌರಿಕುಂಡ,ರಾಮ್ ಬನ್, ಗುಪ್ತ್ ಕಾಶಿ, ಮೊದಲಾದೆಡೆ ಸಾವಿರ ಸಾವಿರ ಸಂಖ್ಯೆಯಲ್ಲಿ ಸಿಲುಕಿದ ಇವರನ್ನು ಆಕಾಶ ಮಾರ್ಗದಲ್ಲಷ್ಟೇ ರಕ್ಷಿಸಲು ಸಾಧ್ಯ. ಏಕೆಂದರೆ ಇವೆಲ್ಲ ಸ್ಥಳಗಳಿಗೆ ಪರಸ್ಪರ ಸಂಪರ್ಕ ಕಲ್ಪಿಸುವ ನೂರಾರು ಸಣ್ಣ ದೊಡ್ಡ ರಸ್ತೆಗಳು ಪ್ರವಾಹದ ಹೊಡೆತಕ್ಕೆ ಸಿಕ್ಕು ಇದ್ದವೋ ಇಲ್ಲವೋ ಎನ್ನುವಂತಾಗಿದೆ. ಅದೂ ಕೇವಲ ಹೆಲಿಕಾಪ್ಟರುಗಳಿಂದ ಈ ಕಾರ್ಯಾಚರಣೆ ಸಾಧ್ಯ.
೯೦ ಡಿಗ್ರಿ ಇನ್ ಕ್ಲೈನೇಶನ್ ಹೊಂದಿದ ಈ ಪರ್ವತ ಪ್ರದೇಶದಲ್ಲಿ ಒಂದು ಹೆಲಿಪ್ಯಾಡ್ ನಿರ್ಮಿಸುವಷ್ಟು ಸಮತಟ್ಟಾದ ನೆಲ ಸಿಗುವದೂ ದುರ್ಲಭವೇ. ಹೀಗಾಗಿ ನೆಲದಿಂದ ಹತ್ತಾರು ಅಡಿ ಎತ್ತರದಿಂದ ಪ್ಯಾರಾಟ್ರೂಪರ್ ಗಳನ್ನು ಇಳಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ನದಿಗಳಿಗೆ ಪರ್ವತಗಳಿಗೆ ಅಡ್ಡವಾಗಿ ಬರ್ಮಾ ಬ್ರಿಡ್ಜ್ ,ರೋಪ್ ಬ್ರಿಡ್ಜ್ ಇತ್ಯಾದಿ ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಿ ಜನರನ್ನು ರಕ್ಷಿಸಲಾಗುತ್ತಿದೆ. ಡೆಹರಾಡೂನ್ ಸದ್ಯ ನಡೆಯುತ್ತಿರುವ ಕಾರ್ಯಾಚರಣೆಯ ಕೇಂದ್ರವಾಗಿದ್ದು ಬದುಕುಳಿದವರನ್ನು ಸುರಕ್ಷಿತ ನೆಲೆಗೆ ಮುಟ್ಟಿಸುವ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಿದೆ. ಈಗೆರಡು ದಿನಗಳಿಂದ ಮಳೆಯಾಗುತ್ತಿದ್ದು ಅಲ್ಲಿಯ ಏರ್ ಬೇಸ್ ನಲ್ಲೂ ನೀರು ತುಂಬಿಕೊಂಡಿದೆ. ಸುಪ್ರಸಿದ್ಧ ಶ್ರದ್ಧಾಕೇಂದ್ರಗಳಲ್ಲಿ ಜಲಪ್ರಳಯ ಸೃಷ್ಟಿಸಿದ, ಇತ್ತೀಚಿನ ಇತಿಹಾಸದಲ್ಲೇ ಭೀಕರವೂ ಕ್ಷಿಪ್ರವೂ ಆದ ಈ ಅನಾಹುತದಲ್ಲಿ ನಿರೀಕ್ಷೆಯಂತೇ ಯಾರು ಬದುಕುಳಿದರೋ ಅವರು ಅದೃಷ್ಟವಂತರು. ಯಾರು ಇನ್ನೂ ಸಿಕ್ಕಿ ಹಾಕಿಕೊಂಡಿದ್ದಾರೋ ಅವರು ಬದುಕುಳಿಯಲು ತೀರ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬಂದಿದೆ. ಮತ್ತೆ ಧಾರಾಕಾರ ಮಳೆಯ ಮುನ್ಸೂಚನೆ ಇದ್ದು ಪರಿಹಾರ ಕಾರ್ಯ ಚುರುಕುಗೊಳ್ಳಲೇ ಬೇಕಾದ ಅನಿವಾರ್ಯತೆಯಲ್ಲಿ ರಕ್ಷಣಾ ಪಡೆಗಳು ಹಗಲಿರುಳು ಶ್ರಮಿಸುತ್ತಿವೆ.

ಇಂಥ ಅವಘಡಗಳು ಸಂಭವಿಸಿದಾಗ ವಿವಿಧ ಘಟಕಗಳ ಮಧ್ಯೆ ಸಂಯೋಜಿತ ಯತ್ನ ಮುಖ್ಯ. ಆದರೆ ನಮ್ಮ ದೇಶದಲ್ಲಿ ಅದೇ ದೊಡ್ಡ ಕೊರತೆ. ಮೊದಲನೆಯದಾಗಿ ದೇಶದ ಪ್ರಧಾನ ಮಂತ್ರಿಯ ನೇತೃತ್ವದಲ್ಲೇ ನ್ಯಾಶನಲ್ ಡಿಸಾಸ್ಟರ್ ಮ್ಯಾನೇಜಮೆಂಟ್ ಅಥಾರಿಟಿ ಎಂಬ ಸಂಘಟನೆಯೊಂದು ಇದೆಯಾದರೂ ಅದು ಯಾವ ದುರಂತಗಳನ್ನೂ ಭಲೇ ಎನ್ನುವಂತೆ ನಿರ್ವಹಿಸಿದ ಉದಾಹರಣೆಗಳಿಲ್ಲ. ತನ್ನ ಕಾರ್ಯಕ್ಷಮತೆಯ ಬಗ್ಗೆ ಕಂಟ್ರೋಲರ್ ಆಂಡ್ ಆಡಿಟರ್ ಜನರಲ್ ಕಚೇರಿಯಿಂದಲೇ ನಕಾರಾತ್ಮಕ ಶರಾ ಬರೆಸಿಕೊಂಡ ಸಂಘಟನೆ ಅದು. ಅದರ ವಕ್ತಾರ ಹವಾಮಾನ ಇಲಾಖೆಯ ವೈಫಲ್ಯವನ್ನು ದೂಷಿಸುತ್ತ ಕುಳಿತರೆ ಹವಾಮಾನ ಇಲಾಖೆ ಇನ್ನೊಂದೇನೋ ಸಬೂಬು ಹೇಳುತ್ತ ಕೂಡ್ರುತ್ತದೆ. ಬೇಕಾಬಿಟ್ಟಿಯಾಗಿ ಅಭಿವೃದ್ಧಿ ಮಂತ್ರ ಜಪಿಸುವವರಿಗೆ ಎಲ್ಲ ಪ್ರದೇಶಗಳೂ ಒಂದೇ ಎಂಬಂಥ ಗ್ರಹಿಕೆಗಳಿವೆ. ವಿಭಿನ್ನ ಬಗೆಯ ecological ಘಟಕಗಳಲ್ಲಿ ಹಿಮಾಲಯದಂಥವುಗಳು ಸೂಕ್ಷ್ಮ ಸ್ವರೂಪದವಾಗಿವೆ ಎಂಬ ಸಲಹೆಗಳನ್ನು ಗಾಳಿಗೆ ತೂರಿ ಜಲ ವಿದ್ಯುತ್ ಉತ್ಪಾದನಾ ಘಟಕಗಳು , ರಸ್ತೆಗಳು, ಸೇತುವೆಗಳು ಮುಂತಾದವುಗಳ ನಿರ್ಮಾಣಕ್ಕೆ ಸ್ಫೋಟಕ ವಸ್ತುಗಳನ್ನು ಬಳಸಿ ಮೊದಲೇ ಒಳಗೆ ಇನ್ನೂ ಗಟ್ಟಿಗೊಂಡಿರದ ಸ್ವರೂಪದ ಪರ್ವತಾವಳಿಯ ಒಡಲು ಇನ್ನೂ ಶಿಥಿಲವಾಗುವಂತಾಗಿದೆ. ಇದರೊಂದಿಗೆ ಅರಣ್ಯ ನಾಶವೂ ಕೂಡಿ ಭೂಮಿಯ ಒಳಗೆ ಮಳೆ ನೀರು ಇಂಗುವಂತೆ ಗಿಡಮರಗಳು ನಿರ್ಮಿಸುವ ಪೂರಕ ಸನ್ನಿವೇಶ ಎಕ್ಕುಟ್ಟಿ ಹೋಗಿ ಬಿದ್ದ ಮಳೆ ನೀರು ಇಳಿಜಾರಿನಗುಂಟ ಹರಿದು ನದಿಕೊಳ್ಳಗಳನ್ನು ಕ್ಷಿಪ್ರವಾಗಿ ಪ್ರವೇಶಿಸಿ ಅನಾಹುತ ಸೃಷ್ಟಿಸಲು ಕಾರಣವಾಗುತ್ತಿದೆ.
 
ಧಾರ್ಮಿಕ ಶ್ರದ್ಧೆ, ನಂಬಿಕೆ, ಆಸ್ಥೆ ಸಹಸ್ರಾರು ಜನರನ್ನು ಕರೆದುಕೊಂಡು ಬಂದವು, ಹಾಂ ಹಾಂ ಅನ್ನುವಷ್ಟರಲ್ಲಿ ರುದ್ರಾವತಾರ ತಾಳಿದ ಪ್ರವಾಹ ಸಹಸ್ರಾರು ಜನರನ್ನು ಕೊಚ್ಚಿಕೊಂಡು ಹೋಯಿತು. ಎಲ್ಲ ಅಳೆದು ಸುರಿದು ಯೋಚಿಸಿದ ಮೇಲೆ ಕೊನೆಗೂ ಉಳಿಯುವದು ನಿರೀಕ್ಷೆ, ನಿಟ್ಟುಸಿರು, ಉಮ್ಮಳಿಸಿ ಬರುವ ದು:ಖ, ಹಟಾತ್ತಾಗಿ ಬಂದೆರಗಿದ ವೈಧವ್ಯ, ವಿದುರತ್ವಗಳು, ಪ್ರೀತಿಪಾತ್ರರನ್ನು ಶಾಶ್ವತವಾಗಿ ಕಳೆದುಕೊಂಡ ನೋವು… ಇವೆಲ್ಲ ಶಬ್ದಕ್ಕೆ ಮೀರಿದಂಥವುಗಳು.
ಈ ಅನುಭವದಿಂದ ಜನ ಪಾಠ ಕಲಿಯುತ್ತಾರೆಂದಾಗಲೀ ಆಡಳಿತಗಳು ಜಾಗರೂಕವಾಗುತ್ತವೆಂದಾಗಲೀ ಭಾವಿಸಲಾಗುವದಿಲ್ಲ. Public memory is short ಎನ್ನುತ್ತಾರೆ. ಸತ್ತವರು ಸಂಖ್ಯೆಗಳಾಗಿ, ಬದುಕಿ ಬಂದವರಿಗೆ ಇದು ಸದಾ ಕಾಲ ಕಥನಿಸುವ ಕಟು ಅನುಭವವಾಗಿ, ಒಂದು ಘಟನೆಯಾಗಿ ದಾಖಲಾಗಿ ಹತ್ತಾರು ವರ್ಷಗಳಲ್ಲಿ ಮತ್ತೆ ಅದೇ ಶೃದ್ಧೆಯಿಂದ, ಅದೇ ಉತ್ಸಾಹದೊಂದಿಗೆ, ಅದೇ ಸ್ಥಳಗಳಿಗೆ, ಅದೇ ಕಾಲದಲ್ಲಿ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳು ಬರುತ್ತಲೇ ಇರುತ್ತಾರೆ.
ಈ ಸಂದರ್ಭದಲ್ಲಿ ಧಾರವಾಡದವರೇ ಆದ ಏಕಕಾಲಕ್ಕೆ ಲೌಕಿಕವೂ ಅಧ್ಯಾತ್ಮಿಕವೂ ಆದ ಆಸಕ್ತಿಗಳನ್ನೂ, ಧಾರ್ಮಿಕ ಹಾಗೂ ತಾತ್ವಿಕ ಓದಿನ ಹಿನ್ನೆಲೆಯನ್ನೂ ಹೊಂದಿರುವ ಯುವಕ ದತ್ತ ರಾಜ್ ”ಪೂಜೆ ಎಂದರೇನು” ಎಂಬ ತಮ್ಮ ಬರವಣಿಗೆಯಲ್ಲಿ ತೀರ್ಥಯಾತ್ರೆಯ ವಾಸ್ತವ ಅರ್ಥ ಹಾಗೂ ಈಗ ಅದು ಪಡೆದುಕೊಂಡಿರುವ ಸ್ವರೂಪದ ಕುರಿತು ಇತ್ತೀಚೆ ಹಂಚಿಕೊಂಡ ಕೆಲ ಸಾಲುಗಳು ಹೀಗಿವೆ:
“ಜೀವನ ಪೂರ್ತಿ ನ್ಯಾಯ ನೀತಿ ಧರ್ಮ.. ದೇವರು ಎಲ್ಲ ಬಿಟ್ಟು .. ಶಿಕ್ಷಣ, ಕೆಲಸ, ಮದುವೆ, ಸಂಸಾರ, ಮಕ್ಕಳು ಆಸ್ತಿ … ಎಲ್ಲ ಮುಗಿದ ಮೇಲೆ ಪುಣ್ಯ ಸಂಪಾದನೆ ಮಾಡ್ತೀವಿ, ತೀರ್ಥ ಕ್ಷೇತ್ರ ನೋಡ್ತೀವಿ … ದೇವರು ಎಲ್ಲ ಪಾಪ ನಾಶ ಮಾಡ್ತಾನೆ ಅನ್ನೋ ಭಾವನೆಯೇ ಮೂರ್ಖತನದಿಂದ ಕೂಡಿದ್ದು. ಆ ಮೂರ್ಖರನ್ನು ಆ ವ್ಯಾಪಾರಿಗಳು ಮತ್ತು ಟ್ರಾವೆಲ್ ಏಜೆಂಟರು ಸುಲಿದು ಹಾಕುವುದರಲ್ಲಿ ಯಾವುದೇ ಅಸಹಜತೆ ಇಲ್ಲ.
ತೀರ್ಥಕ್ಷೇತ್ರಗಳಿಗೆ ಹೋದರೆ ಪುಣ್ಯ ಅಂತ ಪುರಾಣಗಳಲ್ಲಿ ಉಲ್ಲೇಖ ಇದೆ ನಿಜ. ಆದರೆ ತೀರ್ಥಕ್ಷೇತ್ರಗಳಿಗೆ ಹೋಗುವ ವಿಧಾನ ಬೇರೆ ಇದೆ. ಒಂದು ಸಮಾನ ಮನಸ್ಕ ಗುಂಪು ಕಾಲ್ನಡಿಗೆಯಿಂದ ದಾರಿಯುದ್ದಕ್ಕೂ ದೇವರ ನಾಮಸ್ಮರಣೆ ಮಾಡುತ್ತಾ, ಮಧ್ಯೆ ಮಧ್ಯೆ ಸಿಗುವ ಊರುಗಳಲ್ಲಿ ಭಿಕ್ಷೆ ಸ್ವೀಕರಿಸಿ ಅದರಿಂದ ಹೊಟ್ಟೆ ತುಂಬಿಸಿಕೊಂಡು ತಿಂಗಳುಗಟ್ಟಲೆ ಪ್ರಯಾಣ ಮಾಡಿ ಅಲ್ಲಿ ಆ ದೇವರ ಕ್ಷೇತ್ರವನ್ನು ತಲುಪುವ ಹೊತ್ತಿಗೆ ಸಂಪೂರ್ಣವಾಗಿ ಬೇರೆಯದೇ ರೀತಿಯ ಮನುಷ್ಯರಾಗಿ ಪರಿವರ್ತಿತಗೊಂಡಿರುತ್ತಾರೆ. ಸಮಯ, ಆರೋಗ್ಯ ಸ್ವಪ್ರತಿಷ್ಥೆ, ಅಹಂಕಾರ ಎಲ್ಲವನ್ನು ಕಳೆದುಕೊಂಡು ಜ್ಞಾನವನ್ನು ಮಾತ್ರ ಪಡೆದು ದೇವರ ಮುಂದೆ ಶರಣಾಗಲು ಸಿದ್ಧವಾಗಿರುತ್ತಾರೆ . ಪ್ರಕೃತಿಯ ಆಗಾಧತೆ, ಲೋಕದ ವಿಲಕ್ಷಣತೆ ಮಾನವನ ಅಸಹಾಯಕತೆ ಇವೆಲ್ಲವುಗಳನ್ನು ಅನುಭವದಿಂದ ಗಳಿಸಿರುತ್ತಾರೆ. ಆ ಮಟ್ಟಕ್ಕೆ ಬೆಳೆಯಲು ಆ ತೀರ್ಥಯಾತ್ರೆಯೆ ಕಾರಣ . ಹಾಗಾಗಿ ತೀರ್ಥ ಯಾತ್ರೆಗೆ ಅಷ್ಟು ಮಹತ್ವ ಇತ್ತು. ಆ ದೇವಸ್ಥಾನದಲ್ಲಿ ಏನು ವಿಶೇಷ ಇರುವುದಿಲ್ಲ. ಯಾತ್ರೆಯ ಅನುಭವ … ದಾರಿಯಲ್ಲಿ ಕಥಾಶ್ರವಣ, ನಾಮಸ್ಮರಣೆ ಮತ್ತು ಸ್ವಾಭಾವಿಕವಾಗಿ ಆಗುವ ಜೇವನದ realization ನಿಜವಾದ ಫಲ.
ನಾಳೆಯ ಊಟದ ಮತ್ತು ವಾಸದ ವ್ಯಸ್ಥೆಯ ಬಗ್ಗೆ ಚಿಂತೆಯನ್ನು ಬಿಟ್ಟು ಮುಂದುವರೆದರೆ ಅದು ತೀರ್ಥ ಯಾತ್ರೆ. ನನಗೆ ಗೊತ್ತಿರುವ ಒಬ್ಬರು ಅವಧೂತರು ಕೇವಲ ಇಬ್ಬರು ಸ್ನೇಹಿತರನ್ನು ಜೊತೆಗೆ ಇಟ್ಟುಕೊಂಡು ಒಂದು ಪೈಸೆ ದುಡ್ಡು ಕೈಯಲ್ಲ್ಲಿ ಇಲ್ಲದೆ ಎರಡು ಜೊತೆ ಬಟ್ಟೆ ಇಟ್ಟುಕೊಂಡು ಗೋದಾವರಿ ನದಿಯನ್ನು ಪೂರ್ತಿಯಾಗಿ ಪ್ರದಕ್ಷಿಣೆ ಮಾಡಿ ಬಂದಿದ್ದಾರೆ. ಕಾಲ್ನಡಿಗೆ, ಭಿಕ್ಷೆ ಮತ್ತು ನಾಮಸ್ಮರಣೆ ಈ ಮೂರರ ಸಹಾಯದಿಂದ ಯಾತ್ರೆ ಮುಗಿಸಿದ್ದಾರೆ. ಅದು ನಿಜವಾದ ತೀರ್ಥಯಾತ್ರೆ”
ಚಿಂತನಾರ್ಹವಾದ ಮಾತುಗಳು, ಅಲ್ಲವೇ?

‍ಲೇಖಕರು avadhi

26 June, 2013

10 Comments

  1. ಸತೀಶ್ ನಾಯ್ಕ್

    ಪ್ರಾಯಸ್ಚಿತ್ತಕಾಗಿ.. ಮಾಡಿದ ಪಾಪದ ಪರಿಹಾರಕ್ಕಾಗಿ.. ಜೀವನದ ಮಹೋನ್ನತ ಆಸೆ ಉದ್ದೇಶ ಮತ್ತು ಗುರಿ ಎಂಬುದಾಗಿ ಇಂಥಾ ತೀರ್ಥಯಾತ್ರೆಗಳು ಬಹುತೇಕ ಎಲ್ಲರ ಜೀವನದ ಕನಸುಗಳಾಗಿರುತ್ತವೆ. ಒಟ್ಟಾರೆ ಭಗವಂತನ ಸನ್ನಿಧಾನದಲ್ಲಿ ತಮ್ಮನ್ನ ತಾವು ಶರಣಾಗಿಸಿ ಕೊಳ್ಳುವುದು ಎಲ್ಲರ ಅಭಿಲಾಷೆಯೂ ಆಗಿರುತ್ತದೆ. ಅದಕ್ಕಾಗಿಯೆ ಹಲವರ ಬದುಕಿನ ಪರಿಯೋಜನೆಗಳಲ್ಲಿ ತೀರ್ಥ ಯಾತ್ರೆಯೂ ಒಂದು ಭಾಗವಾಗಿ ಆಯೋಜಿಸಲ್ಪಡುತ್ತದೆ. ಹಾಗೆ ಹೋದವರನ್ನು ಭಗವಂತ ಅಥವಾ ಪ್ರಕೃತಿ ಹೀಗೆ ಪರೀಕ್ಷಿಸುತ್ತದೆ ಅನ್ನುವುದು ಬಹುಷಃ ಯಾರ ಕಲ್ಪನೆಗೂ ನಿಲುಕಿರದು. ನಿಜ ಇದು ಇತ್ತೀಚಿನ ದಿನಗಳಲ್ಲಿನ ಅತಿ ದೊಡ್ಡ ಜಲ ದುರಂತಗಳಲ್ಲೊಂದು. ತಾನೊಂದು ಬಗೆದರೆ ದೈವ ಒಂದು ಬಗೆಯುವುದು ಅನ್ನೋ ಮಾತು ಅದೆಷ್ಟು ಸಾರಿ ನಿಜ ಅನ್ನಿಸುತ್ತೆ.. ಮನುಷ್ಯನ ಕಲ್ಪನೆ.. ವಿಚಾರ.. ಬುದ್ಧಿಮತ್ತೆ.. ಯೋಜನೆಗಳೆಲ್ಲ ಸಾಕಾರಗೊಂಡು ಗಿರಿ ಕಂದರ ಕಾಡು ಕಣಿವೆಗಳಲ್ಲೂ ಒಂದು ವ್ಯವಸ್ತಿತ ನಗರ ಅಥವಾ ನಾಗರೀಕತೆಯ ನೆಲೆ ನೆಲೆಗೊಳ್ಳುತ್ತದೆ. ಆದರೆ ಪ್ರಕೃತಿ ಮುನಿದರೆ ಅವೆಲ್ಲದರ ದಮನಕ್ಕೆ ನಿಮಿಷಗಳಷ್ಟು ಸಮಯ ಸಾಕು.. ಮನುಷ್ಯನ ಮುಂದೆ ಪ್ರಕೃತಿ ಯಾವತ್ತಿಗೂ ಶಕ್ತಿಶಾಲಿ. ಅದಕ್ಕೊಂದು ನಿದರ್ಶನ ಅಷ್ಟೇ ಈ ಘಟನೆ. ಅದೆಷ್ಟು ಸಹಸ್ರ ಸಂಖ್ಯೆಯಲ್ಲಿದ್ದರೂ ಮನುಷ್ಯನ ಶಕ್ತಿ ಈ ಘಟನೆಯ ಮುಂದೆ ಬಲಾಹೀನ.
    ಹೇಗೋ ಅಲ್ಲಿ ಮಿಕ್ಕುಳಿದಿರುವವರೆಲ್ಲ ಕ್ಷೇಮವಾಗಿ ವಾಪಾಸು ಬರುವಂತಾಗಲಿ ಎಂಬುದು ಎಲ್ಲರ ಹಾರೈಕೆಯಷ್ಟೇ.. ರಕ್ಷಣಾ ಕಾರ್ಯಗಳು ರಾಜಕೀಯದ ಮುಖವಾಡ ಹಾಕದೆ ಮನಷ್ಯತ್ವಕ್ಕೆ ಮನ ಕೊಟ್ಟು ಎಲ್ಲರೂ ಸುರಕ್ಷಿತರಾದಲ್ಲಿ ಸಾಕು.. ಸರ್ವೇ ಜನೋ ಸುಖಿನೋ ಭವಂತು..

  2. ಶಮ, ನಂದಿಬೆಟ್ಟ

    ಗಂಗೆಯಲ್ಲಿ ಪಾಪ ತೊಳೆವೆನೆನ್ನುತ್ತ ಮಾನವ ಮತ್ತೆ ಅದನ್ನು ಮಾಡುತ್ತಲೇ ಇರುತ್ತಾನೆ. ತನ್ನೊಡಲು ಪಾಪಗಳಿಂದಲೇ ಭಾರವೆನಿಸಿದಾಗ ಮತ್ತದನ್ನು ಮನುಜನ ತಲೆಮೇಲೆಯೇ ಸುರಿದಳಾ ಗಂಗೆ ಅನ್ನಿಸದಿರಲಿಲ್ಲ. ಒಟ್ಟಿನಲ್ಲಿ ಅಲ್ಲಿರುವ ಻ಷ್ಟೂ ಜನ ಸುರಕ್ಷಿತವಾಗಿ ಹಿಂದುರಗಲೆಂಬ ಆಶಯ ಅಷ್ಟೇ.

  3. Dattaraj

    ನನ್ನ ಬರವಣಿಗೆಯ ಸಾಲುಗಳನ್ನು ಎತ್ತಿಕೊಂಡು ಈ ಲೇಖನದಲ್ಲಿ ಬಳಸಿದ್ದು ನೋಡಿ ಆಶ್ಚರ್ಯ ಮತ್ತು ಸಂತೋಷ ಎರಡೂ ಒಮ್ಮೆಗೇ ಆದವು. ಅದರ ಸ್ವಲ್ಪ ಗಾಭರಿನೂ ಆಗೇದ. ಯಾಕಂದ್ರ ಅದರಲ್ಲಿ ನಾನು ಭಿಕ್ಷೆ ಪಕ್ಷೆ ಅಂತ ಏನೇನೋ ಬರೆದಿದ್ದೆ. ಮೊದಲೇ ನನ್ನ ಮಾತುಗಳು ಅಪಾರ್ಥಕ್ಕೊಳಗಾಗುವುದು ಹೆಚ್ಚು. ಅದರಲ್ಲಿ ಇದು ಬೆರೆ. ”ನಾವ್ಯಾಕ್ರಿ ಭಿಕ್ಷೆ ಬೇಡಬೇಕು? ನಂಗೇನ್ ಗತಿ ಇಲ್ವಾ”. ಅಂತ ಯಾರಾದ್ರು ಯಾತ್ರಿಗಳು ತಿರುಗಿ ಬಿದ್ರೆ ಕಷ್ಟ. ನಮ್ಮಲ್ಲಿ ಈ ”ಭಿಕ್ಷೆ” ಅನ್ನೋ ಶಬ್ದದ ಪರಿಭಾಷೆ ಕಾಲದ ಹೊಡೆತಕ್ಕ ಸಿಕ್ಕಿ ಬದಲಾಗಿ ಹೋಗಿದೆ.

  4. Sripathi manjanabailu

    ಪಂಡರಪುರದ ವಿಟ್ಟಲನ ಭೇಟಿಗೆ ಕಾಲ್ನಡಿಗೆಯಲ್ಲಿ ಹೋಗಿ ಬರುವ ಪ್ರಕ್ರಿಯೆಯನ್ನು ‘ದಿಂಡಿ’ ಎಂದು ಕರೆಯುತ್ತಾರೆ.

  5. Ananda Prasad

    ಉತ್ತರಾಖಂಡದಲ್ಲಿ ಮೇಘಸ್ಫೋಟ, ಪ್ರವಾಹ, ಭೂಕುಸಿತದ ಭೀಕರ ಸಂಕಟದಲ್ಲಿ ಸಿಲುಕಿಕೊಂಡ ಸಾವಿರಾರು ಯಾತ್ರಿಗಳನ್ನು ರಕ್ಷಿಸಿ ಕರೆತರುವಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದ ಸಹಾಯ ಅಮೋಘವಾದುದು . ವಿಜ್ಞಾನದ ಆವಿಷ್ಕಾರವಾದ ಹೆಲಿಕಾಪ್ಟರ್ ಎಂಬ ಆಪದ್ಬಾಂಧವ ಇಲ್ಲದೆ ಹೋಗಿದ್ದರೆ ಆಹಾರ ಪೊಟ್ಟಣ ಹಾಗೂ ಕುಡಿಯುವ ಶುದ್ಧ ನೀರು ಮೊದಲಾದ ಅತೀ ಅವಶ್ಯಕ ವಸ್ತುಗಳನ್ನು ಶೀಘ್ರವಾಗಿ ಸಾವಿರಾರು ಜನರಿಗೆ ತಲುಪಿಸುವುದು ಸಾಧ್ಯವೇ ಇರಲಿಲ್ಲ. ಇದು ಹಲವರ ಜೀವ ಉಳಿಸಲು ಸಹಾಯವಾಗಿದೆ. ಅದೇ ರೀತಿ ಪರಿಹಾರ ಕಾರ್ಯದ ಸಮನ್ವಯಕ್ಕೆ ಸಂಪರ್ಕ ಸಾಧಿಸಲು ಉಪಗ್ರಹ ಫೋನ್ಗಳು ಮಾತ್ರವೇ ಏಕೈಕ ಮಾಧ್ಯವಾಗಿವೆ ಇಂಥ ದುರ್ಗಮ ಪ್ರದೇಶದಲ್ಲಿ. ಯಾವುದೇ ಹೋಮ ಹವನ, ಯಾಗಗಳು ಜೀವ ಉಳಿಸುವಲ್ಲಿ ವಿಫಲವಾದ ಇಂಥ ಘಳಿಗೆಯಲ್ಲಿ ವಿಜ್ಞಾನವು ನೀಡಿದ ಸಹಾಯ ಅಮೋಘವಾದುದು ಆದರೆ ಇದನ್ನು ಯಾರೂ ಎತ್ತಿ ಹಿಡಿದಿರುವುದು ಇದುವರೆಗೂ ಕಂಡು ಬಂದಿಲ್ಲ ಹಾಗೂ ವಿಜ್ಞಾನಕ್ಕೆ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದ್ದು ಎಲ್ಲಿಯೂ ಕಂಡುಬರುವುದಿಲ್ಲ. ಯಾವ ದೇವರೂ ಜೀವ ಉಳಿಸಲು ಸಹಾಯ ಮಾಡದ ಇಂಥ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಜನರ ಪ್ರಾಣ ಉಳಿಸಲು ಅಮೋಘ ಸಹಾಯ ಮಾಡಿದ ವಿಜ್ಞಾನಕ್ಕೆ ಒಂದು ಜೈ ಹೇಳುವುದು ಅಗತ್ಯ. ಜೈ ವಿಜ್ಞಾನ. ಜೈ ತಂತ್ರಜ್ಞಾನ.

    • ವಿಜಯ್

      ಬಿಟ್ಟು ಹೋದ ಶಬ್ದಗಳು..
      ಜೈ ಪ್ರಗತಿಪರರು, ಜೈ ಪ್ರಜ್ಞಾವಂತರು, ಜೈ ಸಾಕ್ಷಿಪ್ರಜ್ಞೆ !!

  6. ವಿಜಯ್

    ಇದೊಂದು ಮಾನವನಿರ್ಮಿತ ದುರಂತವೆ..ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಕಂಡ-ಕಂಡಲ್ಲಿ ವಸತಿಗೃಹಗಳು,ಕಾಟೇಜುಗಳು, ವಿಜ್ಞಾನ ನೆತ್ತಿಗೇರಿ ಮಾನವ ಅವೈಜ್ಞಾನಿಕವಾಗಿ ನಿರ್ಮಿಸಿದ ಡ್ಯಾಂಗಳು, ಉಳಿದ ನಿರ್ಮಾಣಗಳು ಅಲ್ಲಿಯ ಪರಿಸರದ ಮೇಲೆ ಅನಗತ್ಯ ಒತ್ತಡ ಹೇರಿದ್ದವು. ಶಿವ ಭೋರ್ಗರೆಯುವ ಗಂಗೆಯನ್ನು ಜಟೆಯಲ್ಲಿ ಬಂದಿಸಿದ್ದು ಪುರಾಣ ಕತೆಯಾದರೂ, ಅದರ ಹರಿವು, ವಿಸ್ತಾರವನ್ನು ,ರೌದ್ರತೆಯನ್ನು ಪರಿಚಯಿಸುತ್ತದೆ.. ಆ ರೌದ್ರತೆ ಈಗ ಮತ್ತೊಮ್ಮೆ ಕಂಡುಬಂದಿದೆ..ಜಟೆಯಲಿ ಬಂಧಿಸಲು ಶಿವನಿಲ್ಲ..
    ದತ್ತರಾಜ ಅವರ ವಾಕ್ಯಗಳನ್ನು ಓದಿದಾಗ ರಾಮಕೃಷ್ಣ ಮಿಶಿನ್ ನ ಸ್ವಾಮಿಜಿಯೊಬ್ಬರು (ಅವರ ಹೆಸರು ಜ್ಞಾಪಕಕ್ಕೆ ಬರುತ್ತಿಲ್ಲ) ವಿದೇಶಿ ರಾಷ್ಟ್ರವೊಂದಕ್ಕೆ ಕಿಸೆಯಲ್ಲಿ ಒಂದು ರೂಪಾಯಿಲ್ಲದೇ ಹೋಗಿಬಂದದ್ದು ನೆನಪಾಯಿತು. ನಮ್ಮ ಲೌಕಿಕದಿಂದ ದೇವರನ್ನು ಅಳೆದಾಗ ಅದರ ಕೊನೆಯಾಗುವುದು ತಿರುಪತಿ ತಿಮ್ಮಪ್ಪನಿಗೆ ವಜ್ರದ ಕಿರೀಟ ಮಾಡಿಕೊಟ್ಟು ಪುಣ್ಯವಂತನಾದೆ ಎಂದು ಕುಣಿದಾಡುವಲ್ಲಿ.
    ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಕಾರ್ಯ ನಿರ್ವಹಿಸಿದ ನಮ್ಮ ಸೇನಾ ಜವಾನರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆಯೆ. ಉತ್ತರಾಖಂಡದಲ್ಲಿ ಸಿಕ್ಕಿ ಬಿದ್ದವರೆಲ್ಲ ಪಾರಾಗಿ ಬರಲಿ, ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಅಗಲುವಿಕೆಯನ್ನು ಸಹಿಸಿಕೊಳ್ಳುವ ಶಕ್ತಿ ಬರಲಿ ಎಂಬುದೇ ಈ ಕ್ಷಣದ ಪ್ರಾರ್ಥನೆ.

  7. Ananda Prasad

    ವಿಜ್ಞಾನ ಹಾಗೂ ತಂತ್ರಜ್ಞಾನ ಆಯುಧ ಇದ್ದಂತೆ. ಅದನ್ನು ಬಳಸುವ ಜಾಣ್ಮೆ ಮನುಷ್ಯನಿಗೆ ಇರಬೇಕು. ಯಾತ್ರೆಯನ್ನು ಪ್ರವಾಸೋದ್ಯಮದ ರೀತಿ ಬೆಳೆಸಿದ್ದು ಮನುಷ್ಯನ ತಪ್ಪು. ದೇವರ ಹೆಸರಿನಲ್ಲಿ ಎಲ್ಲರೂ ಒಂದೇ ಬಾರಿ ಒಂದು ಪ್ರದೇಶಕ್ಕೆ ಮುಗಿಬೀಳುವುದು, ಹಾಗೆ ಮುಗಿಬೀಳುವಂತೆ ಅಮಾಯಕ ಜನರನ್ನು ಪ್ರೇರೇಪಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಂಬಂಧಪಟ್ಟವರು ಚಿಂತಿಸಬೇಕಾಗಿದೆ. ವಿಜ್ಞಾನಿಗಳು, ಪರಿಸರ ಚಿಂತಕರು ಎಚ್ಚರಿಕೆ ನೀಡುತ್ತಿದ್ದರೂ ಅದೆಲ್ಲವನ್ನೂ ಅಭಿವೃದ್ಧಿಯ ಹೆಸರಿನಲ್ಲಿ ಧಿಕ್ಕರಿಸಿದ್ದು ಇಂಥ ಘೋರ ದುರಂತಗಳಿಗೆ ಕಾರಣ.

  8. Ashok Shettar

    Let us keep aside Jaikaaraas and Dhikkaaras for some time.
    Let us salute thousands of soldiers of Indian Armed Forces who are struggling hard day and night in the most hostile terrain and inclement weather to rescue tens of thousands of helpless devotees stranded in pilgrim centers of Uttarakhand. May the souls of those who have lost their lives rest in peace.

  9. Triveni

    ಶೀರ್ಷಿಕೆ ಬಹಳ ಅರ್ಥಪೂರ್ಣವಾಗಿದೆ. ಯಾವುದೇ ಪ್ರವಾಹ ಬಂದರೂ ನಾಶವಾಗದು ಮನಸ್ಸುಗಳ ಶ್ರದ್ಧೆ. ಅಲ್ಲಿಗೆ ಹೋಗಿಬರುವ ಆಸೆ ಅಳಿಯದು, ನನಗೂ ಇದೆ ಆ ಆಸೆ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading