ಮೊನ್ನೆ (೧೯ ಮೇ ೨೦೧೩) ಧಾರವಾಡದಲ್ಲಿ “ಮೇ ಸಾಹಿತ್ಯ ಮೇಳ” ಹೆಸರಿನ ಸಮಾವೇಶವೊಂದು ನಡೆಯಿತು. ಇತ್ತೀಚೆಗಷ್ಟೇ ಜನಸಾಹಿತ್ಯ ಸಮಾವೇಶ ನಡೆದು ಅದರ ನೆನಪುಗಳು ಹಸಿರಾಗಿರುವಾಗಲೇ ಜರುಗಿದ ಈ ಸಮಾವೇಶ ಬಸವರಾಜ ಸೂಳಿಬಾವಿಯವರ ಮೂರು ಕವನ ಸಂಕಲನಗಳ ಬಿಡುಗಡೆಯ ಸಂದರ್ಭದಲ್ಲಿ ನಡೆದದ್ದಾದರೂ ಅದು ನಿಮಿತ್ಯಮಾತ್ರವಾಗಿ ಕನ್ನಡ ಸಾಹಿತ್ಯ, ಸಮಾಜ,ಸಂಸ್ಕೃತಿಯ ಹಲವು ವಿಷಯ ವಿದ್ಯಮಾನಗಳ ಕುರಿತ ಚಿಂತನಮಂಥನಕ್ಕೆ ವೇದಿಕೆಯಾಯಿತು.
ತೆಲುಗಿನ ದಿಗಂಬರ ಪಂಥದ ಖ್ಯಾತ ಕವಿ ನಗ್ನಮುನಿಯವರಿಂದ ಉದ್ಘಾಟನೆಗೊಂಡ ಈ ಮೇಳದಲ್ಲಿ ಡಾ ಎಚ್.ಎಸ್.ಅನುಪಮಾ, ಡಾ.ರಾಜೇಂದ್ರ ಚೆನ್ನಿ, ಡಾ. ನಟರಾಜ ಬೂದಾಳು, ಡಾ.ಬಂಜಗೆರೆ ಜಯಪ್ರಕಾಶ್, ಸಂವರ್ಥ್ ಸಾಹಿಲ್, ವಿಷ್ಣು ನಾಯ್ಕ, ಕೆ.ಫಣಿರಾಜ್, ಜಿ.ಪಿ.ಬಸವರಾಜು, ಎಸ್.ಸಿ.ದಿನೇಶ್ ಕುಮಾರ, ಡಾ.ವಸುಂಧರಾ ಭೂಪತಿ, ಲಕ್ಕೂರು ಆನಂದ್, ರಂಜಾನ್ ದರ್ಗಾ ಮೊದಲಾದವರು ಭಾಗವಹಿಸಿದ್ದರು.
ಕನ್ನಡ ಸಾಹಿತ್ಯ, ಕರ್ನಾಟಕದ ಜನಪರ ಹೋರಾಟಗಳು ಮತ್ತು ಪುಸ್ತಕ ವಿತರಣೆಯಂಥ ಕ್ಷೇತ್ರಗಳಲ್ಲಿ ಬಸವರಾಜ್ ಸೂಳಿಭಾವಿ ಪರಿಚಿತ ಹೆಸರು. ಇಪ್ಪತ್ತು ವರ್ಷಗಳ ಹಿಂದೆ ನಾನು ಬರೆದ ಕವಿತೆಗಳನ್ನೆಲ್ಲ ಸಂಗ್ರಹ ರೂಪದಲ್ಲಿ ಪ್ರಕಟಿಸಬೇಕೆಂದು ನನ್ನನ್ನು ಪ್ರೇರೇಪಿಸಿದ್ದು ಇದೇ ಬಸವರಾಜ. ಮುಖಪುಟದ ಸಾವಿರ ಪ್ರತಿಗಳನ್ನು ಮುದ್ರಿಸಿಕೊಂಡು ನಾನು ಗದಗ್ ಗೆ ಹೋದಾಗ ಆ ಬಂಡಲ್ಲನ್ನು ತನ್ನ ಹೆಗಲ ಮೇಲಿಟ್ಟುಕೊಂಡು ಗಂಗಾಪೂರಪೇಟೆಯ ತ್ವರಿತ ಮುದ್ರಣಾಲಯದತ್ತ ನನ್ನೊಂದಿಗೆ ಹೆಜ್ಜೆ ಹಾಕಿದವ.
ನಾನು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಅಧ್ಯಾಪಕನೆಂದು ನಿಯುಕ್ತನಾಗಿ ಬಂದ ಹೊಸದರಲ್ಲಿ ಸಾಹಿತ್ಯ ಸಮಾಜ ಹೋರಾಟ ಮೊದಲಾದ ಸೆಳೆತಗಳಿಗೆ ಮರುಳುಗೊಂಡಿದ್ದ ವಿದ್ಯಾರ್ಥಿ ವಿದ್ಯಾರ್ಥಿನಿಯರ ಒಂದು ಪಡೆಯೇ ವಿವಿಧ ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರ ರೂಪದಲ್ಲಿ ಇಲ್ಲಿಗೆ ಆಗಮಿಸಿತು.. ಅದರಲ್ಲಿ ಎಂ.ಡಿ.ಒಕ್ಕುಂದ್, ವಿನಯಾ, ದಿಲಾವರ್ ರಾಮದುರ್ಗ್ ಮುಂತಾದವರು ಸಾಹಿತ್ಯ ಚೇತನ ವೇದಿಕೆ ಎಂಬುದೊಂದನ್ನು ಮಾಡಿಕೊಂಡು ಸಾಹಿತ್ಯ ವಾಚನ, ಪ್ರಚಲಿತ ವಿದ್ಯಮಾನಗಳ ಕುರಿತ ಚರ್ಚೆ ಇಂಥವುಗಳನ್ನು ಹಮ್ಮಿಕೊಂಡಿರುತ್ತಿದ್ದರು. ಪ್ರೊ. ಚಂಪಾ, ಡಾ.ಹಿಂಗಮಿರೆ, ಡಾ.ಚುಳಕಿಮಠ,ಡಾ.ಮುರಿಗೆಪ್ಪ, ಪ್ರೊ.ತೋಂಟದಾರ್ಯ, ಡಾ.ಮಹೇಶ್ವರಯ್ಯ, ನಾನು ಹೀಗೆ ಕೆಲ ಅಧ್ಯಾಪಕರೂ ಅವರೊಂದಿಗೆ ಸಾಧ್ಯವಾದಾಗೆಲ್ಲ ಬೆರೆಯುತ್ತಿದ್ದೆವು.
ಆಮೇಲೆ ಅರೆಕಾಲಿಕ ಅಧ್ಯಾಪನವೃತ್ತಿಯಲ್ಲಿರುತ್ತಲೇ ಹೋರಾಟಗಳಲ್ಲಿ ತೊಡಗಿಕೊಂಡಿರುತ್ತಿದ್ದ ಬಸವರಾಜ, ಗದಗ ಮುಂಡರಗಿ ಸೀಮೆಯಲ್ಲಿ ಒಂದು ವಾತಾವರಣವನ್ನು ಸೃಷ್ಟಿಸಿ, ಅದರ ಭಾಗವಾಗಿ ಲಡಾಯಿ ಎಂಬ ಪತ್ರಿಕೆಯೊಂದನ್ನು ಪ್ರಾರಂಭಿಸಿ ಕೆಲವರನ್ನು ಎದುರು ಹಾಕಿಕೊಂಡ. ಇತ್ತೀಚಿನ ವರ್ಷಗಳಲ್ಲಿ ಪೊಸ್ಕೊ ಸಲುವಾಗಿ ರೈತರ ಕೃಷಿ ಭೂಮಿಯನ್ನು ಬೃಹತ್ ಉದ್ಯಮಪತಿಗಳಿಗೆ ಪರಭಾರೆ ಮಾಡುವ ಉದ್ದೇಶದಿಂದ ಸ್ವಾಧೀನ ಪಡಿಸಿಕೊಳ್ಳುವ ಸರಕಾರದ ಕ್ರಮದ ವಿರುದ್ಧ ನಡೆದ ಹೋರಾಟದಲ್ಲೂ ಇದ್ದ. ಈ ನಡುವೆ ಲಡಾಯಿ ಪ್ರಕಾಶನವನ್ನು ಪ್ರಾರಂಭಿಸಿ ತನ್ನದೇನನ್ನೂ ಅದರಡಿ ಪ್ರಕಟಿಸದೇ ಬೇರೆ ಹಲವು ಇತರರ ವಿಚಾರ, ವಿಮರ್ಶೆ, ಸಂಶೋಧನೆ, ಕಾವ್ಯ, ಕಥೆ ಮೊದಲಾದ ಪ್ರಕಾರಗಳ ಪುಸ್ತಕಗಳನ್ನು ಪ್ರಕಟಿಸಿದ. ಆ ಪೈಕಿ ಒಬ್ಬಿಬ್ಬರು ಸೂಳಿಬಾವಿಯ ಕುರಿತು ನನ್ನ ಮುಂದೆ ಗೊಣಗಿಕೊಂಡಿದ್ದಾರೆ, ದೂರಿದ್ದಾರೆ. ನನಗೆ ಅದರ ಹಿಂದು ಮುಂದು ಗೊತ್ತಿರುವದಿಲ್ಲವಾದ್ದರಿಂದ ಅದರ ಕುರಿತು ನಾನು ಮಾತನಾಡಲೊಲ್ಲೆ…
ನನಗೆ ಗೊತ್ತಿರುವಂತೆ ಬಸವರಾಜ ಕಾವ್ಯವನ್ನು ಹಟಕ್ಕೆ ಬಿದ್ದವರಂತೆ ಕುಳಿತು ಕೆತ್ತುವವನಲ್ಲ. ಕವಿತೆಗಳು ತನ್ನೊಳಗೆ ಮೊಳೆತಾಗ ಸ್ವಲ್ಪ ಪಾತಿ ಮಾಡಿ, ಸ್ವಲ್ಪ ಮಣ್ಣು ಹಾಕಿ, ಸ್ವಲ್ಪ ನೀರು ಸುರಿದು, ಹೂವಾಗಿ ಅರಳಿದರೆ ನೇವರಿಸಿ ಮೆಲ್ಲಗೆ ಕಿತ್ತು ಕಾವ್ಯಪ್ರೇಮಿಗಳ ಮುಂದಿಡುವವ. ಕೊನೆಗೂ ತನ್ನ ಕವಿತೆಗಳನ್ನು ಸಂಕಲನರೂಪದಲ್ಲಿ ತಂದಿದ್ದಾನೆ. ಪ್ರಕಟಿಸಿದ್ದು ತನ್ನದೇ ಪ್ರಕಾಶನದಿಂದಲ್ಲ, ಹೊನ್ನಾವರ ಹತ್ತಿರದ ಕವಲಕ್ಕಿಯ ವೈದ್ಯ ದಂಪತಿ ಕೃಷ್ಣ ಗಿಳಿಯಾರ್ ಮತ್ತು ಎಚ್.ಎಸ್.ಅನುಪಮಾ ತಮ್ಮ “ಕವಿ ಪ್ರಕಾಶನ”ದಿಂದ ಇವುಗಳನ್ನು ಪ್ರಕಟಿಸಿದ್ದಾರೆ. ದಿನಪತ್ರಿಕೆಗಳು “ಹೆತ್ತಳಾ ಮಹಾತಾಯಿ” ಥರದ ಶೀರ್ಷಿಕೆ ಕೊಟ್ಟು ಅಪರೂಪಕ್ಕೆ ಇಂತಿಂಥ ಊರಲ್ಲಿ ಇಂತಿಂಥ ಹೆಣ್ಣುಮಗಳು ಇಂಥ ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳನ್ನು ಹಡೆದಿದ್ದಾಳೆಂದೂ ಕೂಸುಗಳು ಆರೋಗ್ಯದಿಂದಿವೆ ಎಂದೂ ಸುದ್ದಿಯನ್ನು ಪ್ರಕಟಿಸುತ್ತವಲ್ಲ, ಹಾಗೆ ಒಮ್ಮೆಲೇ ಮೂರು ಹಡೆದಿದ್ದಾನೆ. ಮೂರೂ ಆರೋಗ್ಯದಿಂದಿವೆ..! ಈ ಮೂರು ಕವಿತಾ ಸಂಕಲನಗಳು ಹಲವು ಕವಿ-ವಿಮರ್ಶಕರ ಮುನ್ನುಡಿ ಹಿನ್ನುಡಿಗಳೊಂದಿಗೆ ಪ್ರಕಟಗೊಂಡಿವೆ.
ನಿನ್ನೆಯ ಮೇಳದಲ್ಲಿ ಅವು ಬಿಡುಗಡೆಗೊಂಡಾದ ಮೇಲೆ ಒಂದೊಂದು ಸಂಕಲನದ ಕುರಿತು ಪ್ರತ್ಯೇಕವಾಗಿ ಒಬ್ಬರಂತೆ ಮೂರು ಜನ- ಬಂಜಗೆರೆ ಜಯಪ್ರಕಾಶ್, ನಟರಾಜ ಬೂದಾಳು ಹಾಗೂ ರಾಜೇಂದ್ರ ಚೆನ್ನಿ- ಮಾತನಾಡಿದರು. ತಮ್ಮ ಕಾವ್ಯವನ್ನು ಅರ್ಥಮಾಡಿಸಬೇಕೆನ್ನುವ ಹಪಾಹಪಿಗೆ ಬಿದ್ದು ವಾಚ್ಯಗೊಳಿಸದೇ ಈ ಸಂಕಲನದ ಕವಿ ಹೇಗೆ ನೋವನ್ನು, ವಿಷಾದವನ್ನು ಅತ್ಯಂತ ಸಾಂದ್ರವಾಗಿ ಮೆಲುದನಿಯಲ್ಲೇ ಹಲವು ಧ್ವನಿಗಳು ಧ್ವನಿತಗೊಳ್ಳುವಂತೆ ನಿರ್ವಹಿಸಿ ಇಚ್ಛಿತ ಪರಿಣಾಮ ಸಾಧಿಸುತ್ತಾನೆ ಎಂಬುದನ್ನು ಜಯಪ್ರಕಾಶ್ ಹಲವು ಉದಾಹರಣೆಗಳೊಂದಿಗೆ ಹೇಳಿದರೆ, ನಟರಾಜರು ಕೊಳ್ಳುವವರಿಲ್ಲದಿದ್ದರೂ ಓದುವವರಿಲ್ಲದಿದ್ದರೂ ಬಹುದೊಡ್ಡ ಸಂಖ್ಯೆಯಲ್ಲಿ ಕಾವ್ಯ ಸಂಕಲನಗಳು ಪ್ರಕಟವಾಗುವಲ್ಲಿರುವ ಕಾವ್ಯದ ಯಜಮಾನಿಕೆಯ ಕುರಿತು ಬೆರಗುಗೊಳ್ಳುತ್ತ “ನಾವೆಷ್ಟು ಜನ ಕವನ ಸಂಕಲನಗಳನ್ನು ಕೊಳ್ಳುತ್ತೇವೆ? ಎಷ್ಟು ಜನ ಕಾವ್ಯವನ್ನು ಓದುತ್ತೇವೆ? ಓದಿದರೂ ಎಷ್ಟು ತನ್ಮಯರಾಗಿ ಓದುತ್ತೇವೆ?” ಇತ್ಯಾದಿ ಪ್ರಶ್ನೆಗಳನ್ನು ಧ್ವನಿಯ ಏರಿಳಿತಗಳ ತಮ್ಮದೇ ಆದ ವಿಶಿಷ್ಟ, ಅನನುಕರಣೀಯ ಶೈಲಿಯಲ್ಲಿ ಹಾಕಿದರು (ಈ ಮೂರರಲ್ಲಿ ಮೊದಲ ಪ್ರಶ್ನೆಯಿಂದ ಪ್ರಭಾವಿತನಾದ ನಾನು ತನ್ನ ಮೂರು ಸಂಕಲಗಳನ್ನು ಬಸವರಾಜ ನನಗೆ “ಪ್ರೀತಿಯಿಂದ” ಕೊಟ್ಟು “ಇಲ್ಲ, ಇಲ್ಲ.,ಸರ್, ಬೇಡ, ಬೇಡ” ಎನ್ನುತ್ತಿದ್ದರೂ ಸಾಂಕೇತಿಕವಾಗಿ ಇನ್ನೂರು ರೂಪಾಯಿಗಳನ್ನು ಬಲವಂತದಿಂದ ಅವನ ಜೇಬಿಗಿಳಿಸಿದೆ…!) ಮುಖ್ಯವಾಗಿ ಕವಿತೆಯ ಪ್ರವೇಶದ ಮೊದಲ ಒಂದೆರಡು ಸಾಲುಗಳಲ್ಲಿ ಉಪಸ್ಥಿತನಿರುವ ಕವಿ ಹೇಗೆ ಆಮೇಲೆ ಕವಿತೆಗಳಲ್ಲಿಂದ ನಿರ್ಗಮಿಸಿ ಬಿಡುತ್ತಾನೆ, ಹೇಗೆ ಆಮೇಲೆ ಅದರ ಗ್ರಹಿಕೆ ಅರ್ಥೈಸುವಿಕೆ ಓದುಗನ ಸ್ವಾಯತ್ತ ಲೋಕವಾಗಿ ಬಿಡುತ್ತದೆ ಎಂಬುದನ್ನು ನಟರಾಜ ಹೇಳಿದರೆ, ರಾಜೇಂದ್ರ ಚೆನ್ನಿ ಹೋರಾಟಗಾರ ಮತ್ತು ಕವಿ ಇಬ್ಬರೂ ಮೇಳೈಸಿರುವ ಬಸವರಾಜನ ಗುಣವನ್ನು ವಿಶೇಷವಾಗಿ ಪ್ರಸ್ತಾಪಿಸಿದರು.
“ಹೋರಾಟಗಾರರಾದರೂ ತುಂಬ ಒಳ್ಳೆಯ ಕಾವ್ಯವನ್ನು ಬರೆದಿದ್ದಾರೆ” ಎಂಬಂಥ ನುಡಿಗಟ್ಟುಗಳಲ್ಲಿ ಹೇಗೆ ಕಾವ್ಯ ಮತ್ತು ಹೋರಾಟ ಒಂದರಿಂದೊಂದು ಭಿನ್ನವಾದ, ಜೊತೆಗೂಡಿ ಸಾಗದ ಸಂಗತಿಗಳು ಎಂಬಂತೆ ಗ್ರಹಿಸಲಾಗುತ್ತದೆ ಎಂಬುದರ ಹುಸಿತನವನ್ನು ವಿವಿಧ ಸಾಹಿತ್ಯಿಕ ಉದಾಹರಣೆಗಳೊಂದಿಗೆ ಬಿಡಿಸಿಟ್ಟರು. ಜಾಗತಿಕರಣ ಏನೇನೆಲ್ಲ ಕಿತ್ತುಕೊಂಡಿದೆ ಎಂದು ಹೇಳುತ್ತ ಅಂತಿಮವಾಗಿ ಮನುಷ್ಯನಿಂದ ಮನುಷ್ಯತ್ವವನ್ನು ಕಿತ್ತುಕೊಳ್ಳುವ ಸನ್ನಾಹದಲ್ಲಿ ಅದು ಇರುವ ಸಂದರ್ಭದಲ್ಲಿ, ಭಾವಲೋಕವನ್ನು ಕಾಪಿಟ್ಟುಕೊಳ್ಳಬೇಕಾಗಿರುವದು ಕಾವ್ಯ ಮಾಡಬೇಕಾದ ಅಗತ್ಯ ಕೆಲಸವಾಗಿದೆ ಎಂದರು.
ಮುಂಬರಲಿರುವ ಕಾವ್ಯದ ಕುರಿತು ಅಪರಾಹ್ನ ನಡೆದ ಗೋಷ್ಟಿಯಲ್ಲಿ ಕೆ.ಫಣಿರಾಜ್ ರ ಮಾತುಗಳಿಗೆ ಎಲ್ಲರ ಕಿವಿಗಳು ಸಮರ್ಪಿತವಾಗಿದ್ದವು. ಅವರು ಪೂರ್ವಾಹ್ನ ಕವನ ಸಂಕಲನಗಳ ಬಿಡುಗಡೆಯ ಸಂದರ್ಭದ ವಿಮರ್ಶಕರ ಮಾತುಗಳಿಗೂ ಅದಕ್ಕೆ ಮುನ್ನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಕ್ರಾಂತಿಕಾರಿ ಕವಿ ನಗ್ನಮುನಿಯವರ ವಿಚಾರಗಳಿಗೂ ಮಧ್ಯೆ ವ್ಯತ್ಯಾಸಗಳನ್ನು ಗುರುತಿಸಿ ಅದರ ಹಿನ್ನೆಲೆಯಾಗಿದ್ದ ಸಂದರ್ಭಗಳ ಕುರಿತ ತಮ್ಮ ವಿಚಾರಗಳಿಗೆ ಆಕಾರ ಕೊಡುತ್ತಿದ್ದರು. ವಿಶೇಷವಾಗಿ ಭಾವುಕತೆಯ ಆದ್ಯತೆಯ ಬಗ್ಗೆ ಚೆನ್ನಿ ಹೇಳಿದ್ದ ಮಾತುಗಳ ಕುರಿತು ಬೇಸರಗೊಂಡಿದ್ದ ಅವರು ಈ ಮಾತುಗಳು ಬದಲಾದ ಸಂದರ್ಭಗಳ ಮಾನದಂಡಗಳನ್ನು ಸೂಚಿಸುತ್ತವೆ. ಇದೇ ಕವಿತೆಗಳು ೧೯೭೫-೭೭ ರ ನಡುವಿನ ಅವಧಿಯಲ್ಲಿ ಬಂದಿದ್ದರೆ ತುರ್ತುಸ್ಥಿತಿ, ಬಂಡಾಯ, ಸಮುದಾಯ, ನರಗುಂದ ರೈತ ಚಳುವಳಿಯಂಥ ನಿಗಿನಿಗಿ ಕಾವಿನ ಆ ದಿನಗಳಲ್ಲಿ ಸೂಳಿಭಾವಿಯನ್ನು ಪೆಟಿ ಬೂರ್ಜ್ವ ಕವಿ ಎಂದೋ, ರಿವಿಜನಿಸ್ಟ್ ಎಂದೋ ಕರೆದುಬಿಡಲಾಗುತ್ತಿತ್ತೋ ಏನೋ ಎಂದರು.
ಈಗಿನ ಕವಿಗಳು ಹೋರಾಟದ ಸಾಹಿತ್ಯವನ್ನು, ಪ್ರತಿಭಟಣೆಯ ಕಾವ್ಯವನ್ನು, ಜನಪರ ಸಾಹಿತ್ಯವನ್ನು ಸೃಷ್ಟಿಸುವಂತೆ ತೋರಿದರೂ, ಜನವಿರೋಧಿ ಮೌಲ್ಯಗಳನ್ನು ವಿರೋಧಿಸುವಂತೆ ಕಂಡರೂ ಸಮಕಾಲಿಕವಾಗಿ ನಡೆಯುವ ಚಳುವಳಿಗಳತ್ತ ಮುಖ ಕೂಡ ಹಾಕದಂತೆ ಇರುವ ಕುರಿತು ಪ್ರಸ್ತಾಪಿಸಿದರು. “ಜನ”ರ ಕುರಿತು ಕಾವ್ಯ-ಸಾಹಿತ್ಯಗಳಲ್ಲಿ, ನಮ್ಮ ಪ್ರಗತಿಪರ ಮೀಮಾಂಸೆಗಳಲ್ಲಿ ಇರುವ ಆದರ್ಶೀಕೃತ ಗ್ರಹಿಕೆಗಳಿಗೂ ಜನವಿರೋಧಿ, ಜೀವವಿರೋಧಿ, ಸಮಾಜವಿರೋಧಿ ಮೌಲ್ಯಗಳನ್ನು ಪ್ರತಿನಿಧಿಸುವ ಶಕ್ತಿಗಳೊಂದಿಗೆ ಅದೇ ಜನ ಸೇರಿಕೊಂಡಿರುವ ವಾಸ್ತವಗಳಿಗೂ ನಡುವೆ ಇರುವ ಕಂದರಗಳ ಕುರಿತು ತಮ್ಮ ಸಂಶೋಧನೆಯ ತಿರುಗಾಟಗಳಲ್ಲಿ ಕಂಡುಕೊಂಡದ್ದನ್ನು ರಹಮತ್ ತರೀಕೆರೆ ತಮ್ಮೊಡನೆ ಹಂಚಿಕೊಂಡದ್ದನ್ನು ಹೇಳುತ್ತ ಜಗತ್ತಿನ ಶ್ರೇಷ್ಠ ಕ್ರಾಂತಿಕಾರಿ, ವಿದ್ರೋಹಿ ಸಾಹಿತ್ಯ ಕೃತ್ರಿಮವಾಗಿ ಸೃಷ್ಟಿಯಾದದ್ದಲ್ಲ ಅದಕ್ಕೆ ಸುದೀರ್ಘ ಹೋರಾಟದ ಕಾವಿನ, ಮತ್ತು ಥರಾವರಿ ವಾಸ್ತವಗಳ ಗ್ರಹಿಕೆಯ ಹಿನ್ನೆಲೆ ಇದ್ದವು ಎಂದರು..
ಬರ್ಟೋಲ್ಟ್ ಬ್ರೆಕ್ಟ್ ತಾನು ಎಳೆಹರೆಯದವನಾಗಿದ್ದಾಗ ಆಸ್ಫೋಟಿಸಿದ ಜಗತ್ತಿನ ಮಹಾಯುದ್ಧದಿಂದ ಮೊದಲ್ಗೊಂಡು ಹಿಟ್ಲರನ ನಾಝಿ ಆಳ್ವಿಕೆ ಹಾಗೂ ಜಗತ್ತಿನ ಎರಡನೆಯ ಮಹಾಯುದ್ಧದ ವರೆಗಿನ, ರಾಜಕೀಯ ಪ್ರಕ್ಷೋಭೆಗಳು, ವೈಯಕ್ತಿಕ ತೊತ್ತಳದುಳಿತಗಳು, ಹಿಟ್ಲರನ ಆಳ್ವಿಕೆಯ ಬೇಟೆಯ ಬಲಿಯಾಗುವ ಆತಂಕದಿಂದಾಗಿ ಜರ್ಮನಿಯನ್ನು ತೊರೆದು ಪ್ರಗ್, ಜ್ಯೂರಿಚ್, ಪ್ಯಾರಿಸ್ ಮೊದಲಾದೆಡೆ ನೆಲೆಸಿ ಆಮೇಲೆ ಸ್ವೀಡನ್ ಗೆ ಹೋದರೆ ವರ್ಷೊಪ್ಪತ್ತಿನಲ್ಲಿ ಅದರ ನೆರೆಯ ನಾರ್ವೆ ಮೇಲೆಯೂ ಹಿಟ್ಲರ್ ನ ದಾಳಿಯಾಗಿ ಅಲ್ಲಿಂದ ಮತ್ತೆ ಫಿನ್ಲ್ಯಾಂಡ್ ಹೋಗಿ ಹೀಗೆ ಎಲ್ಲೆಲ್ಲೋ ನೆಲೆಸುತ್ತ ಹೋದ ನೆಲೆತಪ್ಪಿದ ಬದುಕು, ನಂತರದ ಕೋಲ್ಡ್ ವಾರ್ ಅವಧಿಯಲ್ಲಿಯ ಘಟನೆಗಳು ಇವೆಲ್ಲವುಗಳನ್ನು ಕಂಡವ, ಅನುಭವಿಸಿದವ, ಪ್ರಭಾವಿತನಾದವ. ನಾಝಿ ಮತ್ತು ಫ್ಯಾಸಿಸ್ಟ್ ಚಳುವಳಿಗಳ ವಿರೋಧ ಅವನ ಪ್ರಧಾನ ನಾಟಕಗಳಲ್ಲಿ ಅಭಿವ್ಯಕ್ತಗೊಂಡ ಹಿನ್ನೆಲೆಯಲ್ಲಿ ಇವೆಲ್ಲ ಅನುಭವಗಳ ದ್ರವ್ಯವಿದೆ.
ಹಾಗೆಯೇ ಸಾಮ್ರಾಜ್ಯಶಾಹಿ ಹಾಗೂ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಸೆಣಸುವ ಅಗತ್ಯವನ್ನು ಸಾರಲೆಂದೇ ೧೯೪೦ರ ದಶಕದ ಆದಿಯಲ್ಲಿ ಸ್ಥಾಪಿತವಾದ ವಿಪ್ಲವ ರಚಯಿತಲ ಸಂಘಂ, ಅಭ್ಯುದಯ ರಚಯಿತಲ ಸಂಘಂ ಗಳ ಕಾವ್ಯಸೃಷ್ಟಿಗೆ ಹಿನ್ನೆಲೆಯಾಗಿ ದಾವಾನಲದಂತೆ ಹಬ್ಬಿ ಪ್ರಭುತ್ವದ ನಿದ್ದೆಗೆಡಿಸಿದ್ದ ತೆಲಂಗಾಣ ಚಳುವಳಿ ಇತ್ತು. ಜಡಗೊಂಡ ತೆಲುಗು ಕಾವ್ಯಕ್ಕೆ ಶ್ರೀ ಶ್ರೀಯವರು (ಶ್ರೀರಂಗಂ ಶ್ರೀನಿವಾಸ್ ರಾವ್) ಪ್ರಗತಿಪರ ಆಶಯದ ಜೊತೆಗೆ ಮಹಾಪ್ರಸ್ಥಾನಂ, ಮರೋಚರಿತ್ರಂನಂಥ ಸಂಕಲನಗಳಲ್ಲಿ ಸರ್ರಿಯಲ್ ಸ್ಪರ್ಶವಿದ್ದ ಕಾವ್ಯಶೈಲಿಯೊಂದನ್ನು ರೂಪಿಸಿಕೊಂಡು ಹೊಸ ಜೀವಸೆಲೆಯನ್ನೇ ಹರಿಸಿದ್ದ ಹಿನ್ನೆಲೆಯಿದೆ. ಆ ರಾಜಕೀಯ ಸಾಮಾಜಿಕ ಹಿನ್ನೆಲೆ,ಮಾರ್ಕ್ಸವಾದಿ ಚಿಂತನೆ, ಜನಹೋರಾಟಗಳ ಸಾಂಗತ್ಯದಲ್ಲಿ ತೆಲುಗಿನಲ್ಲಿ ವಿವಿಧ ಗುಂಪುಗಳು ಹಲವು ಇತರ ಸಾಹಿತ್ಯ ಚಳುವಳಿಗಳ ಸೃಷ್ಟಿಗೆ ಕಾರಣವಾದವು. ಇವುಗಳಲ್ಲಿ ದಿಗಂಬರ ಪಂಥವೆಂಬುದು ನಗ್ನಮುನಿ,ಚೇರಬಂಡರಾಜು,ಭೈರವಯ್ಯ,ಮಹಾಸ್ವಪ್ನ,ನಿಖಿಲೇಶ್ವರ,ಜ್ವಾಲಾಮುಖಿ ಮೊದಲಾದ ಕಾವ್ಯನಾಮಗಳುಳ್ಳ ಕವಿಗಳನ್ನು ಒಳಗೊಂಡಿತ್ತು. ಅವರ ಕಾವ್ಯದ ಹಿನ್ನೆಲೆಯಲ್ಲೂ ಸಮಕಾಲಿಕವಾಗಿ ನಡೆಯುತ್ತಿದ್ದ ಹೋರಾಟಗಳ ಕಾವಿತ್ತು, ಅನುಭವಗಳ ಜೀವದ್ರವ್ಯವಿತ್ತು.
ಅದೇ ರೀತಿಯಾಗಿ ಉತ್ತರಭಾರತದ ಉರ್ದು ಭಾಷಿಕ ಕ್ರಾಂತಿಕಾರಿ ಕಾವ್ಯದಲ್ಲಿ ದೇಶವಿಭಜನೆಯ ಅನುಭವ, ಅಳಲುಗಳ,ಕೋಮುದಳ್ಳುರಿಯ ದುರಂತ,ದುಮ್ಮಾನಗಳ ಕಥನಗಳಿದ್ದವು. ಅಂದರೆ ವಿದ್ರೋಹಿ ಕಾವ್ಯ ಇದ್ದಕ್ಕಿದ್ದಂತೆ ಹುಟ್ಟಿದುದಲ್ಲ. ಅದಕ್ಕೆ ದೀರ್ಘ ಹೋರಾಟಗಳ, ಪ್ರಭುತ್ವದ ಕ್ರೌರ್ಯದ ಸಂದರ್ಭಗಳಿದ್ದವು. ಈಗ ಅವೆಲ್ಲಿವೆ? ಹೋರಾಟದೊಂದಿಗೆ ಎಷ್ಟು ಜನ ಕವಿ-ಸಾಹಿತಿಗಳು ಇದ್ದಾರೆ? ಇದು ಫಣಿರಾಜ್ ಅವರ ಪ್ರಶ್ನೆ. “ಸಾಹಿತ್ಯದ ಆಚೆಗೆ ಚಾಚಿಕೊಂಡು ಹೋರಾಟಗಳತ್ತ ನಡೆದುಹೋಗಿ, ಅಲ್ಲಿ ಗ್ರಹಿಕೆ ವಾಸ್ತವಗಳ ನಡುವಿನ ಕಂದಕಗಳ ಅನುಭವ ರಾಚಿದರೆ ಅದೂ ನೋವಿನ ವಿಷಯವೇ ಅಲ್ವ ಅದರಿಂದ ಕಾವ್ಯಕ್ಕಾಗಲೀ ಹೋರಾಟಕ್ಕಾಗಲೀ ಪ್ರಯೋಜನವಾಗದಿದ್ದರೆ?” ಎಂಬ ನನ್ನ ಪ್ರಶ್ನೆಗೆ ಉತ್ತರವಾಗಿ ಫಣಿರಾಜರು ಪ್ಯಾಲೆಸ್ತಿನಿಯನ್ ಕವಿ ಮೊಹಮದ್ ದರ್ವಿಶ್ ನ “ಮೊದಮೊದಲು ಕಾವ್ಯವು ಲೋಕವನ್ನು ಬದಲಿಸುತ್ತದೆ ಎಂದು ಭಾವಿಸಿದ್ದೆ. ಕವಿಯನ್ನು ಲೋಕದ ಜೊತೆ ಅಂಟಿಕೊಳ್ಳುವಂತೆ ಮಾಡಲು, ಜನರನ್ನು ಹಚ್ಚಿಕೊಳ್ಳುವಂತೆ ಮಾಡಲು ಇಂಥ ಭ್ರಮೆಗಳು ಬೇಕು. ಆದರೆ ಈಗ ಕಾವ್ಯವು ಕವಿಯನ್ನು ಮಾತ್ರ ಬದಲಿಸುತ್ತದೆ ಎಂದು ಅನ್ನಿಸುತ್ತಿದೆ” ಎಂಬ ಮಾತನ್ನು ಹೇಳಿದಾಗ ಸುಮ್ಮನಾದೆ..
ಕೆಲ ಹೊಸಕವಿಗಳು ತಾವು ಚಳುವಳಿಗಳ ಸಂಪರ್ಕದಲ್ಲಿರುವದಾಗಿ ಫಣಿರಾಜರೊಂದಿಗೆ ವಾದಿಸುತ್ತಿದ್ದರು. ಕರಾವಳಿ ಜಿಲ್ಲೆಗಳಲ್ಲಿ ಕೊಬ್ಬಿ ಬೆಳೆದಿರುವ ಕೋಮುವಿಭಜನೆಯ ವಿರುದ್ಧದ ಹೋರಾಟದಲ್ಲಿ ತೊಡಗಿಕೊಂಡ ತಮ್ಮ ಅನುಭವಗಳ ಹಿನ್ನೆಲೆಯಲ್ಲಿ ಕವಿ ಸಾಹಿತಿಗಳ ಭಾಗವಹಿಸುವಿಕೆಯ ನಗಣ್ಯತೆಯ ಕುರಿತ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುತ್ತಿರುವದಾಗಿ ತಿಳಿಸಿದ ಫಣಿರಾಜ್ “ನೀವು ಚಳುವಳಿಗಳಲ್ಲಿ ಭಾಗವಹಿಸುತ್ತಿದ್ದೀರಾದರೆ ಸಂತೋಷ. ನಾನು ಕವಿಗಳನ್ನು ಬೀದಿಗಿಳಿದು ಚಳುವಳಿ ಮಾಡುವಂತೆ ಒತ್ತಾಯಿಸುತ್ತಿದ್ದೇನೆ ಎಂದು ಭಾವಿಸಬೇಡಿ” ಎಂಬುದಾಗಿ ವಿನಂತಿಸಿದರು. ಕೆಲ ಕವಯಿತ್ರಿಯರು ಬದಲಾವಣೆಗೆ, ಹೋರಾಟಗಳಿಗೆ ಪೂರಕವಾಗಿ ತಾವು ಕಾವ್ಯದಲ್ಲಿ ಮಾಡುತ್ತಿರುವದು ಸಾಲದೇ? ಎಂಬ ಪ್ರಶ್ನೆ ಎತ್ತಿದ್ದನ್ನು ಪ್ರಸ್ತಾಪಿಸುತ್ತ ಫಣಿರಾಜ್ ಕಾವ್ಯದಲ್ಲಿ ಕ್ರಾಂತಿ ಸಂಭವಿಸುವ ವಿಧಾನದ ಭಿನ್ನತೆಯ ಕುರಿತೇ ತಾವು ಮಾತಾಡುತ್ತಿರುವದಾಗಿ ಹೇಳಿ ಒಟ್ಟಿನಲ್ಲಿ ಹೋರಾಟದ ಕಾವ್ಯ, ಜನಪರವೂ ಸಮಾಜಮುಖಿಯೂ ಆದ ಕಾವ್ಯ, ಸಮಾಜದ ವಾಸ್ತವಗಳ ತಳಮಟ್ಟದ ಸ್ವರ್ಶವನ್ನು ಹೊಂದಿ ಒಂದು ಹೊಸದೇ ಆದ ಈಸ್ಥಟಿಕ್ಸ್ ಸೃಷ್ಟಿಸಿಕೊಳ್ಳದಿದ್ದರೆ ಅದರಲ್ಲಿ ಸ್ವಾಭಾವಿಕವಾಗಿಯೇ ಕೃತಕತೆ ಇರುತ್ತದೆ ಎಂದರು.
ನಂತರ ನಡೆದ ಗೋಷ್ಠಿಯ ಅಧ್ಯಕ್ಶತೆ ವಹಿಸಿದ್ದ ಜಿ.ಪಿ.ಬಸವರಾಜು ಅವರು ಫಣಿರಾಜ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು. ನನಗೂ ಅದು ಹೌದೆನ್ನಿಸಿತು






ಹೌದು ಫಣಿರಾಜ ಸರ್ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ವೈಯಕ್ತಿಕ ವರ್ಚಸ್ಸಿನ ನಡುವೆ ಕಾವ್ಯದ ಹುಟ್ಟು ಬರೀ ಶೃಂಗಾರ ಮತ್ತು ಅಡಗುದಾಣಗಳ ಪ್ರತಿಮೆ, ರೂಪಕಗಳ ಧ್ಯಾನದಲ್ಲಿಯೇ ಆಗುತ್ತಿದೆ.