ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಶೋಕವರ್ಧನರು ನೆನಸಿಕೊ೦ಡ ಕುಮಾರಪ್ಪ

ಅವಧಿಯಲ್ಲಿ ಎಸ್ ಎ೦ ನಟರಾಜು  ಕುಮಾರಪ್ಪನವರ ಕುರಿತು ಬರೆದಿದ್ದರು.  (ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.)  ಅದನ್ನು ಓದಿದ ಅತ್ರಿ ಅಶೋಕವರ್ಧನರು ಕುಮಾರಪ್ಪನವರ ಬಗೆಗಿನ ತಮ್ಮ ನೆನಪುಗಳನ್ನು ಇಲ್ಲಿ ಹ೦ಚಿಕೊ೦ಡಿದ್ದಾರೆ.

ಅಶೋಕವರ್ಧನ ಜಿ.ಎನ್   ಸುಮಾರು ಹದಿನೈದು ವರ್ಷಗಳ ಹಿಂದೆ, ನನ್ನ ಎರಡನೇ ಭಾರತ ಬೈಕ್ ಯಾನದ ಯೋಜನೆಯಲ್ಲಿದ್ದಂದು, ನನ್ನಂಗಡಿಗೆ ಹೀಗೇ ಬಂದಿದ್ದ ಕನ್ನಡ ವಿವಿ ಹಂಪಿಯ ಗ್ರಂಥಪಾಲೆ – ನಾಗವೇಣಿ ಒಂದೇ ಉಸುರಿಗೆ ಹೇಳಿದರು, “ಕಲ್ಕತ್ತಾದಲ್ಲಿ (ಆಗ ಇನ್ನೂ ಕೋಲ್ಕತ್ತಾ ಆಗಿರಲಿಲ್ಲ) ಕುಮಾರಪ್ಪನವರನ್ನು ಸಂಪರ್ಕಿಸಲು ಮರೆಯಬೇಡಿ.” (ಮತ್ತೆ ಅವರು ರಾಷ್ಟ್ರೀಯ ಗ್ರಂಥಾಲಯ ತೋರಿಸದೆ ಬಿಡುವುದಿಲ್ಲ ಎನ್ನುವುದನ್ನು ಪರೋಕ್ಷವಾಗಿ ಸೂಚಿಸಿದ್ದರು.)ನಾವು ಸ್ವಾಮಿ ಜಗದಾತ್ಮಾನಂದರ ಕೃಪೆಯಲ್ಲಿ ಕಲ್ಕತ್ತಾದ ಕನ್ನಡ ಸಂಘದಲ್ಲಿ ವಸತಿ ತಲಪಿದಂದೇ ಕುಮಾರಪ್ಪನವರು ನನ್ನನ್ನು ಕೇವಲ ಒಬ್ಬ ಕನ್ನಡ ಪುಸ್ತಕೋದ್ಯಮಿ ಎಂಬ ಅಭಿಮಾನದಲ್ಲಿ ಭೇಟಿಯಾಗಲು ಬಂದಿದ್ದರು. ಅವರ ಸೂಚನೆಯಂತೇ ಮಾರಣೇ ದಿನ ಗ್ರಂಥಾಲಯಕ್ಕೆ ಹೋಗಿದ್ದೆವು. ಹೆಸರು, ಇತಿಹಾಸಗಳಿಂದ ಯಾವುದೇ ಸಂಸ್ಥೆ (ಪುಸ್ತಕಗಳ ಮೊತ್ತದಿಂದ ಗ್ರಂಥಾಲಯ ಎಂದೂ ಧಾರಾಳ ಹೇಳಬಹುದು) ದೊಡ್ಡದು ಆಗುವುದಿಲ್ಲ. ಅದನ್ನು ಕಾಲದಿಂದ ಕಾಲಕ್ಕೆ ಸಾರ್ವಜನಿಕವಾಗಿ ಉಪಯುಕ್ತವಾಗುವಂತೆ ನಿರ್ವಹಿಸುವ ವ್ಯಕ್ತಿಯಿಂದಷ್ಟೇ ಅದು ಸಾಧ್ಯ. ಕುಮಾರಪ್ಪನವರು ಅಲ್ಲಿ ಕೇವಲ ಕನ್ನಡ ವಿಭಾಗದ ನಿರ್ವಾಹಕರಾಗಿದ್ದರು. ಆದರೆ ಅವರ ಪುಸ್ತಕ ಪ್ರೀತಿ, ಕೆಲಸದ ಮೇಲಿನ ಶ್ರದ್ದೆ ಆ ಬೃಹತ್ ಸಂಸ್ಥೆಯ (ವ್ಯಕ್ತಿ ಮತ್ತು ಭಾಷಾಬೇಧವಿಲ್ಲದೆ ಪುಸ್ತಕಗಳೂ ಸೇರಿ) ಅಂಗುಲಂಗುಲವನ್ನೂ ಆತ್ಮೀಯವಾಗಿಸಿಕೊಂಡಿತ್ತು. ಸುತ್ತಿಸಿದರು, ವಿವರಿಸಿದರು. ಸರಕಾರೀ ಪುಸ್ತಕೋದ್ಯಮದ ಬಗ್ಗೆ ತೀವ್ರ ಜಿಗುಪ್ಸೆಯನ್ನು ಬೆಳೆಸಿಕೊಂಡಿದ್ದ ನನಗೆ ಆತ್ಮೀಯ ಮಿತ್ರನ ನೆಲೆಯಲ್ಲಿ ರಾಷ್ಟ್ರೀಯ ಗ್ರಂಥಾಲಯದ ಔಚಿತ್ಯ ಮತ್ತು ನನ್ನಂಥವರ ಪಾಲ್ಗೊಳ್ಳುವಿಕೆಯ ಅಗತ್ಯವನ್ನು ಮನಗಾಣಿಸಿದರು. ಅರ್ಧ ದಿನವನ್ನೇ ಅಲ್ಲಿ ಕಳೆದಿದ್ದರೂ ಅದು ಏನೂ ಅಲ್ಲವೆನ್ನುವ ಭಾವ ನಮ್ಮಲ್ಲಿ ಬರುವುದಕ್ಕೆ ಏಕೈಕ ಕಾರಣಮೂರ್ತಿ ಕುಮಾರಪ್ಪ. ಇವರ ಕನ್ನಡ ಪ್ರೇಮ ಅಷ್ಟಕ್ಕೇ ಮುಗಿಯಲಿಲ್ಲ. ಹಿಂದಿನ ದಿನವೇ ನಮ್ಮನ್ನು ಅವರು ಒತ್ತಾಯಪೂರ್ವಕವಾಗಿ ಮಧ್ಯಾಹ್ನದ ಮನೆಯೂಟಕ್ಕೂ ಒಪ್ಪಿಸಿದ್ದನ್ನೂ ನಡೆಸಿಬಿಟ್ಟರು. (ನನ್ನ ನೆನಪು ಸರಿಯಿದ್ದರೆ) ಅವರ ಶ್ರೀಮತಿಯವರು ಇನ್ಯಾವುದೋ ಸಂಸ್ಥೆಯಲ್ಲಿ, ನಗರದ ಇನ್ಯಾವುದೋ ಮೂಲೆಯಲ್ಲಿ ನೌಕರಿಯಲ್ಲಿದ್ದರು. ಆದರೇನು, ಅವರಿಗೆ ಖುದ್ದು ಹಾಜರಿರಲು ಸಾಧ್ಯವಿಲ್ಲವಾಗಿದ್ದರೂ ಕುಮಾರಪ್ಪನವರ ಕನ್ನಡ ಪ್ರೀತಿಗೆ ಇಂಬಾಗಿದ್ದ ಅವರು, ನಮಗಾಗಿ ಹಬ್ಬದೂಟವನ್ನು ಸಜ್ಜುಗೊಳಿಸಿ ಇಟ್ಟಿದ್ದರು! ಭಾರತೀಯ ಪ್ರಕಾಶಕರೆಲ್ಲರೂ ದೇಶದ ರಾಷ್ಟ್ರೀಯ ಗ್ರಂಥಾಲಯಗಳಿಗೆ (ಆಗ ನಾಲ್ಕೋ ಐದೋ ಇತ್ತೆಂದು ನನ್ನ ನೆನಪು) ತಮ್ಮೆಲ್ಲಾ ಪ್ರಕಟಣೆಗಳ ಒಂದೊಂದು ಪ್ರತಿಯನ್ನು ಉಚಿತವಾಗಿ ಕಳಿಸಬೇಕೆಂದು ಶಾಸನಾತ್ಮಕ ಆದೇಶವಿದ್ದರೂ ಎಲ್ಲೋ ಕೆಲವೊಮ್ಮೆ ಪತ್ರಿಕಾ ಸಾದರ ಸ್ವೀಕಾರ ನೋಡಿದ ಕೆಲವು ಗ್ರಂಥಪಾಲರು ಪ್ರತ್ಯೇಕ ಮನವಿ ಕಳಿಸಿದರೂ ನಾನೆಂದೂ ಪುಸ್ತಕ ಕಳಿಸುವುದಿರಲಿ, ಉತ್ತರಿಸುವ ಗೋಜಿಗೂ ಹೋದವನಲ್ಲ. ಆದರೆ ಆ ಬಾರಿ ಪ್ರವಾಸ ಮುಗಿಸಿ ಮಂಗಳೂರಿಗೆ ಮರಳಿದ ಕೂಡಲೇ ನಾನು ಅದುವರೆಗಿನ ನನ್ನೆಲ್ಲ ಪ್ರಕಟಣೆಗಳ ಒಂದೊಂದು ಪ್ರತಿ ತೆಗೆದೆ. ಜೊತೆಗೆ ಕುಮಾರಪ್ಪನವರ ನಿರ್ವ್ಯಾಜ ಪ್ರೀತಿಗೆ ಸಣ್ನ ಕಾಣಿಕೆಯಾಗಿ ಕೆಲವು ಅನ್ಯ ಪ್ರಕಾಶಕರ ಕನ್ನಡ ಮಕ್ಕಳ ಪುಸ್ತಕಗಳನ್ನು ಅವರ ಪುಟಾಣಿಗಾಗಿ ಸೇರಿಸಿ, ಒಟ್ಟು ಕಳಿಸಿದೆ. ಕೆಲವೇ ದಿನಗಳಲ್ಲಿ ಕುಮಾರಪ್ಪನವರಿಂದ ನಿರೀಕ್ಷಿತ ಅಧಿಕೃತ ರಸೀದಿಯೇನೋ ಬಂತು. ಆದರೆ ಎಲ್ಲ ಪುಸ್ತಕಗಳನ್ನೂ ಗ್ರಂಥಾಲಯಕ್ಕೇ ತೆಗೆದುಕೊಂಡ ಕುಮಾರಪ್ಪನವರು, ಸಣ್ಣ ವೈಯಕ್ತಿಕ ಪತ್ರವನ್ನು ಲಗತ್ತಿಸಿದ್ದರು. ಆ ಕನ್ನಡ ಮಕ್ಕಳ ಪುಸ್ತಕಗಳೂ ಅವರ ಗ್ರಂಥಾಲಯಕ್ಕೆ ಬಂದಿರಲಿಲ್ಲವಂತೆ. ಕುಮಾರಪ್ಪ ಸಹಜವಾಗಿ ಅವನ್ನೂ ಗ್ರಂಥಾಲಯಕ್ಕೇ ತೆಗೆದುಕೊಂಡು ತನ್ನ ಪುಟಾಣಿಗೆ ಮಾತ್ರವಲ್ಲ, ಲೋಕದ ಎಲ್ಲಾ ಪುಟಾಣಿಗಳಿಗೂ ಸಾರ್ವಕಾಲಿಕವಾಗಿ ಅವು ಒದಗುವ ಅವಕಾಶವನ್ನು ಕಲ್ಪಿಸಿದ್ದು ತೀರಾ ಅನಿರೀಕ್ಷಿತ. ಕುಮಾರಪ್ಪನವರ ನಿಧನವೂ ಅಷ್ಟೇ ಅನಿರೀಕ್ಷಿತ, ಅಕಾಲಿಕ; “ಒಳ್ಳೆಯವರಿಗಿದು ಕಾಲವಲ್ಲ.”  ]]>

‍ಲೇಖಕರು G

14 June, 2012

3 Comments

  1. malathi S

    ಅರ್ಧ ದಿನವನ್ನೇ ಅಲ್ಲಿ ಕಳೆದಿದ್ದರೂ ಅದು ಏನೂ ಅಲ್ಲವೆನ್ನುವ ಭಾವ ನಮ್ಮಲ್ಲಿ ಬರುವುದಕ್ಕೆ ಏಕೈಕ ಕಾರಣಮೂರ್ತಿ ಕುಮಾರಪ್ಪ.
    nanagoo haage annisiddide…
    aaptavaagide Ashokavardhana avara bareda Kumarappa nenapina recall
    malathi S

  2. srujan

    ಕುಮಾರಪ್ಪ ಒಬ್ಬ ಅದ್ಭುತ ಚೈತನ್ಯ.ಮೊನ್ನೆ ಫಿಬ್ರವರಿಯಲ್ಲಿ ವಿಕ್ರಂ ವಿಸಾಜಿ ನಾನು ಕೊಲ್ಕತ್ತಾ ಗೆ ಹೋದಾಗ ಕುಮಾರಪ್ಪ ನವರನ್ನು ನ್ಯಾಷನಲ್ ಲೈಬ್ರರಿಯಲ್ಲಿ ಭೇಟಿಮಾಡಿದ್ದು,ತರಗತಿಯ ಮಕ್ಕಳ ಬಗ್ಗೆ ಇರುವ ಕಾಳಜಿಯಂತೆ ಅವರು ಇಡೀ ಲೈಬ್ರರಿ ಮತ್ತು ಎಲ್ಲಾ ಭಾಷೆಗಳ ಪುಸ್ತಕ ಸಂಗ್ರಹ ವಿವರಿಸಿದ್ದು,ಎಷ್ಟೊಂದು ಮಾತಾಡುತ್ತ ‘ರಾಗ ಮ್ಯುಸಿಕ್’ನಲ್ಲಿ ಅನರ್ಗಳ ಬೆಂಗಾಲಿ ಮಾತಾಡುತ್ತಾ ಸುಮಾರು ಬೆಂಗಾಲಿ ಸಿನಿಮಾ ಡಿ.ವಿ.ಡಿ.ಕೊಡಿಸಿದ್ದು ಇಡೀ ಮಧ್ಯಾಹ್ನ ಜೊತೆಯಲ್ಲಿ ಕೋಲ್ಕತ್ತಾ ತಿರುಗಿದ ಅಪೂರ್ವ ಅವಕಾಶವನ್ನು ಹೇಗೆ ಮರೆಯಲು ಸಾಧ್ಯ.ಪ್ರೀತಿಯಿಂದ ನೋಡಲು ಕೊಟ್ಟ ಅಪರ್ಣ ಸೇನ್ ನಿರ್ದೇಶನದ ಬೆಂಗಾಲಿ ಸಿನಿಮಾ’ಇತಿ ಮೃಣಾಲಿನಿ’ ಯ ಅದ್ಭುತ ಹಾಡುಗಳನ್ನು ಕೇಳುವಾಗಲೆಲ್ಲ,ಅವರೊಂದಿಗೆ ಕೊಂಡ ಸಿನಿಮಾ ಗಳ ಕಟ್ಟು ನೋಡಿದಾಗಲೆಲ್ಲಾ ನೆನಪಾಗುತ್ತಾರೆ ಕುಮಾರಪ್ಪ.
    ಅಶೋಕವರ್ಧನ ಲೇಖನ ತುಂಬಾ ಆಪ್ತವಾಗಿದೆ.

    • ಪಂಡಿತಾರಾಧ್ಯ

      ಅಶೋಕ ವರ್ಧನರ ಆಪ್ತ ಲೇಖನ ನನ್ನ ಶೋಕವನ್ನು ವರ್ಧಿಸಿತು.
      ನಾನು ಭೇಟಿಯಾಗ ಬಯಸಿದ್ದ ವ್ಯಕ್ತಿಯೊಬ್ಬರು ನನಗೆ ಅವಕಾಶ ಸಿಗುವಮುನ್ನವೇ ನಮ್ಮನ್ನು ಅಗಲಿದ್ದಾರೆ.
      ನಾನು ತಂದೆಯವರ ಪುಸ್ತಕಗಳು ನನ್ನ ಪುಸ್ತಕ ನವ ಪ್ರಕಾಶನದಲ್ಲಿ ಪಟ್ಟಿಯಾದಾಗ ಕಲ್ಕತ್ತಾದಿಂದ ಒಂದು ನೆನಪಿನೋಲೆ ಬರುತ್ತಿತ್ತು. ನಾನು ಆ ಕೂಡಲೆ ಅವರ ಪ್ರತಿಯನ್ನು ಅಂಚೆ ಮನೆಗೆ ತಲುಪಿಸುತ್ತಿದ್ದೆ.
      ಕಲ್ಕತ್ತೆಗೆ ಹೋಗಿ ಬಂದವರೆಲ್ಲ ಕುಮಾರಪ್ಪನವರ ಅಂತಃಕರಣದ ಆತಿಥ್ಯವನ್ನು ನೆನಸಿಕೊಳ್ಳುವುದನ್ನು ನೋಡಿ ಸಂತೋಷಪಡುತ್ತಿದ್ದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading