ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವ್ವ ಮತ್ತು ಬೆಕ್ಕು

ರೇಣುಕಾ ರಮಾನಂದ

ಅವ್ವ ಮೆಹನತ್ ಮಾಡಿದ
ಗದ್ದೆಯಲ್ಲೀಗ ಗೆದ್ದಲುಗಳ
ಗದ್ದುಗೆಗಳು

ಅವಳು ಸಾಕಿದ ಬೆಕ್ಕು
ಹುಡುಕಿಕೊಂಡಿದೆ
ಹೊಟ್ಟೆಪಾಡಿಗಾಗಿ
ತೀರ ಹತ್ತಿರದ ಮನೆ
ಎಂದಾದರೊಂದು ದಿನ
ಅವ್ವ ಬಂದಾಳೆಂಬ
ವಾಂಛೆ ಅದಕ್ಕೆ

ಅಷ್ಟ ದಿಕ್ಕಿಗೆ ಕುಳಿತರೂ
ಅದರ ಮುಖ
ಮನೆಯ ದಿಕ್ಕಿಗೇ……
ಅಪರೂಪಕ್ಕೆ ಕಳ್ಳಬೆಕ್ಕಿನಂತೆ
ಬಂದುಹೋಗುವ ನನ್ನ
ಗುರಿಯಿಟ್ಟು
ಬೇಟೆಯಾಡಲೆಂಬಂತೆ

ಅವ್ವನ ಬದಲು ಸುಳಿದಾಗಲೆಲ್ಲ ನಾನು
ಸುತ್ತುತ್ತದೆ ಕಾಲು
ಕರುಳಿಗೇ ಗುರಿಯಿಟ್ಟಂತೆ
ಕೊನೆಗೊಮ್ಮೆ ಮೀಸೆ ಅದುರಿಸಿ
ಹಲ್ಲು ಕಡಿದು ಗುರುಗುಟ್ಟುತ್ತದೆ
ತೆಗೆ ಬೀಗ, ಗುಡಿಸು ಒರೆಸು
ಒಂದೂ ಬಿಡದೆ ಕೀಳು ಅಂಗಳದ ಹುಲ್ಲು
ಮೊದಲಿನಂತೆ

ಮರಳುವ ಸುಳಿವಾದರೆ ಸಾಕು
ಪರಚುತ್ತದೆ ನೆಲ
ಬೆನ್ನಟ್ಟುತ್ತದೆ ಬಹುದೂರ
ಅಂತರ ಹೆಚ್ಚಾದಂತೆ ಹೊರಳುತ್ತದೆ
ಆವೇಶದ ಸಿಟ್ಟು ಬಾಕಿ ಇಟ್ಟು

ಸರಿರಾತ್ರಿ ಪ್ರಾಣಭಯದಂತೆ
ಕಾಡುತ್ತಿದೆ ಈಗೀಗ ಬೆಕ್ಕು
ಸತ್ತಂತೆ ಕನಸು
ಛಿಲ್ಲನೆ ಬೆವೆತು ಎದ್ದು ಕುಳಿತವಳಿಗೆ
ಸತ್ತದ್ದು ಅವ್ವನೋ ಬೆಕ್ಕೋ
ಮಸುಕು ಮಸುಕು

ಅವ್ವ ಮಲಗಿದ್ದಾಳೆ ಇಲ್ಲಿ ನನ್ನಲ್ಲಿ
ಇಹಪರಗಳೊಂದಾದ ಪರಿಯಲ್ಲಿ
ಬೆಕ್ಕನ್ನೂ ಮನೆಯನ್ನೂ
ಮರೆತು

‍ಲೇಖಕರು avadhi

14 May, 2017

1 Comment

  1. prathibha nandakumar

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading