ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವ್ವನ ಜಗಳ

ಕೆ. ಪಿ ಲಕ್ಷ್ಮಣ

ಗೌತಮಿಗೆ ಒಬ್ಬನೇ ಮಗ
ಒಬ್ಬ ಮಗನಿರುವ ಅವ್ವಂದಿರನ್ನೊಮ್ಮೆ ಮಾತಾಡಿಸಿ
ಕಡಲು,ಕಾಡು,ಬೆಟ್ಟ, ಗುಡ್ಡ
ನದಿ, ಕಣಿವೆಗಳ ಒಡತಿಯರು ತಾವೇ
ಅನ್ನುವಂಗೆ ಮೆರೆಯುತ್ತಾರೆ
ಮಗ ಕಣ್ಣ ಮುಂದಿದ್ದರೆ ಸಾಕು
ಉಣ್ಣುತ್ತಾ ಆಡುತ್ತಾ ಓಡಾಡುತ್ತಾ ರೇಗಾಡುತ್ತಾ

ಇವಳದು ಒಳಗೊಳಗೆ ಕುಣಿತ
ಕಡಲು ಕಾಡು ಬೆಟ್ಟ ಗುಡ್ಡ ನದಿ ಕಣಿವೆಗಳ ಒಡತಿ
ಅಷ್ಟಾದರೂ ಕುಣಿಯ ಬೇಡವೆ
ಅವ್ವ ಗೌತಮಿ!

ಮಗ ಮನೆ ಬಿಟ್ಟು ಓಡಿ ಹೋಗಿ ಬುದ್ಧನಾದ
ಕಣ್ಣೆದುರೆ ಬೆಟ್ಟ ನೊಂದು ಕರಗಿ ಹೋಯಿತು
ಒಡತಿಯಾಗಿದ್ದ ಅವ್ವ ಗೌತಮಿ
ಈಗ ಬುದ್ಧನ ಸಂಘದೊಳಗೊಬ್ಬಳು ಬಿಕ್ಖು
ಹೌದು ಗೌತಮಿ
ಕಡಲು ಕಾಡು ನದಿ ಕಣಿಗಳ
ಮುಂದೆ ನಿಂತು
ಬಿಕ್ಕುವಷ್ಟು ಬಿಕ್ಕಿ ಬಿಕ್ಖುವಾದಳು!

ಅದೊಂದು ಚಳಿಗಾಲ
ಬುದ್ಧನಿಗಿರುವುದು ಮೂರೇ ತುಂಡು ಬಟ್ಟೆ
ಮಗನಿಗೆ ಚಳಿ ತಡೆಯಲಾಗುವುದಿಲ್ಲ
ಅವ್ವನ ಜೀವ ತಡೆಯುವುದಿಲ್ಲ
ಕವಿಗೆ ಕಾಣದ್ದೂ ಕೂಡ ಅವ್ವನಿಗೆ ಕಾಣುತ್ತದೆ
ಕರುಳು ಚುರ್ರ್ ಅಂತದೇ
ಮಗನನ್ನೂ ,ಸುತ್ತ ಇರುವ ಬಿಕ್ಖುಗಳನ್ನೂ ಬೈದುಕೊಂಡಳು

‘ಇವನಿಗೆ ಏನೂ ತಿಳಿಯುವುದೇ ಇಲ್ಲ
ಇನ್ನು ಜ್ಞಾನೋದಯವೇನು ಬಂತು ಮಣ್ಣು ‘

ಕುಂತು ನೇಯ್ದಳು ನೂಲು ನೂಲು ಬೆಸೆದು
ಬಣ್ಣ ನೀಲಿ ಬಿಳಿ ಹೊಸೆದು
ಮಗನ ಜೀವ ಬೆಚ್ಚಗಿಡಲು ತುಂಡು ಚಾದರ
ಹೋಯ್ದಳು ಬುದ್ಧನೆದುರಿಗೆ

‘ಇತರರಿಗಿರದ ತುಂಡು ಚಾದರ
ನನಗ್ಯಾಕವ್ವಾ ,ಬೇಡಾ
ಕೊಡುವುದಿದ್ದರೆ ಎಲ್ಲರಿಗೂ ಕೊಡು’ ಅಂದ ಬುದ್ಧ

ಜೋರು ಜಗಳ ಶುರುವಾಯಿತು ಅವ್ವನಿಗೂ ಮಗನಿಗೂ
ಜನ ಸೇರಿದರು
ಅವ್ವ ರಚ್ಚೆ ಹಿಡಿದಳು ಮಗನೆದುರು ಮಗುವಿನಂತೆ
ಬುದ್ಧ ನ್ಯಾಯವಂತ ಮಾತು ತಪ್ಪಲಾರ
ಸಂಘಕ್ಕಿರದನ್ನು ತಾನು ಸ್ವೀಕರಿಸಲಾರ

‘ತುಂಡು ಚಾದರ ನಿನ್ನ ಕಡಿಮೆ ಬುದ್ಧನ್ನನ್ನಾಗಿಸುತ್ತದೇನು?’
‘ಅಲ್ಲವ್ವಾ ಅದು ಹಾಗಲ್ಲ ..’
‘ಅವ್ವನಿಗಿಂತ ಬೀದಿ ಜನ ಹೆಚ್ಚಾದರೇನೋ ‘
‘ಅಲ್ಲವ್ವಾ ಅದು ಹಾಗಲ್ಲ ‘

ಜಗಳ ಈಗಲೂ ನಡೆದೇ ಇದೇ!
ಇಬ್ಬರಿಗೂ ಮಾತಿಲ್ಲ ಬರಿ ಮೌನ
ಅವ್ವ ಮಗನ ಜಗಳವೆಂದರೆ ಹೀಗೆಯೇ
ಕೊನೆಯಿಲ್ಲ ಮೊದಲಿಲ್ಲ ಸೋಲಿಲ್ಲ ಗೆಲುವಿಲ್ಲ
ಬರೀ ಇಲ್ಲಗಳದ್ದೆ ಸರಪಳಿ

ಬಿಡಿ ಕಂಡವರ ಮನೆ ಸುದ್ದಿ ನಮಗ್ಯಾಕೆ
ಆದರೂ
ಲೋಕವನ್ನು ಸಮಾಧಾನಿಸುವ ಬುದ್ಧ
ಅವ್ವನನ್ನು ಸಮಾಧಾನ ಮಾಡಲು ಆಗಲಿಲ್ಲವಲ್ಲ!

ಕಡಲು ಕಾಡು ಬೆಟ್ಟ ಗುಡ್ಡ
ನದಿ ಕಣಿವೆಗಳ ಒಡತಿ ಅವ್ವನ ಕೈಯಲ್ಲಿ
ನೀಲಿ ಬಿಳಿ ಬಣ್ಣದ ತುಂಡು ಚಾದರವಿದೆ
ಮಗ ಬುದ್ಧನಾಗಿ ಕುಳಿತಿದ್ದಾನೆ!

ಮೌನ ಅರಿವನ್ನು ಹೆಚ್ಚಿಸುತ್ತದೆ
ಬುದ್ಧನೇ ಬೋಧಿಸಿದ್ದು

ಕೆ. ಪಿ ಲಕ್ಷ್ಮಣ ಸೂಕ್ಷ್ಮ ಸಂವೇದನೆಯ ಕವಿ ಮತ್ತು ರಂಗಕರ್ಮಿ

‍ಲೇಖಕರು Avadhi

18 October, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading