ಯುದ್ಧ ಅಮಲು
ಎನ್ ರವಿಕುಮಾರ್ ಟೆಲೆಕ್ಸ್
ಸಖೀ.
ನಿನ್ನ ಕೋಮಲ ತುಟಿಗಳ
ಬಣ್ಣದ ಕುರಿತೇ ಯೋಚಿಸುತ್ತಿರುವಾಗ
ಗಡಿಯಲ್ಲಿ ನನ್ನ ಯೋಧನ ಮುಖದಲ್ಲಿ
ರಕ್ತ ಮುಕ್ಕಳಿಸುತ್ತಿತ್ತು
ತುಟಿ ಬಣ್ಣ ಮತ್ತು ಯೋಧನ ಮುಖ ಬಣ್ಣ
ಕೆಂಪು….ಕೆಂಪು
ನಿನ್ನ ಕೊರಳ ಇಳಿಜಾರಿನ
ಎದೆಯ ಕಣಿವೆಯಲ್ಲಿ
ಮುಖ ಹುದುಗಿಸಿ
ಮೈಮರೆವಾಗ ಯುದ್ಧದ ಕರೆ ಬಂದಿದೆ
ಗೊಬೆಲ್ ನ ಸುಳ್ಳು ವೇದ್ಯಗಳ
ಅಮಲಿನ ಕರೆಯಲ್ಲಿ
ನಿನ್ನ ಪ್ರೇಮದ ಅಮಲು ಯಾವ ಲೆಕ್ಕ?
ನಾನು ಯುದ್ಧಕ್ಕೆ ಹೊರಡಬೇಕು
ಹಾಳು ಕವಿತೆಗಳು ಎದೆತುಂಬಿಕೊಂಡು
ಒಂದೇ ಸಮನೆ ಜೀವ ಹಿಂಡುತ್ತಿವೆ.
ಏನಾದರಾಗಲಿ ; ಕವಿತೆಗಳ ಕೊಂಡೊಯ್ಯುತ್ತೇನೆ
ಎಷ್ಟೇ ಆಗಲಿ ಅವು ಬಿಳಿ ಪಾರಿವಾಳದಂತೆ

ನಿನಗೆ ಗೊತ್ತಾ,? ಅವನಾಗಲೇ
ಸಿದ್ದನಾಗಿದ್ದಾನೆ; ಹೆಣಗಳ ಲೆಕ್ಕ ಪಡೆಯಲು
ಓಟಿನ ಬೂತುಗಳಲ್ಲಿ ಸಾಲು ನಿಂತವರ
ಬೆರಳ ತುದಿಗೆ ಯುದ್ಧ ಕಣದಿಂದ ತಂದ
ನೆತ್ತರದ ಗುರುತ ಮೆತ್ತಲು
ಗಡಿಯಲ್ಲಿ ಮದ್ದು – ಗುಂಡು ಫಿರಂಗಿಗಳ
ಜಮಾ ಆಗುತ್ತಿದೆ.
ಇತ್ತ ದೇಶಪ್ರೇಮದ ಮದ್ದು ತಿನಿಸಿ
ಮತ್ತು ಭರಿಸಲಾಗುತ್ತಿದೆ
ನಿನ್ನ ಪ್ರೇಮದ ಬಗ್ಗೆ ಯಾರಿಗೆ ಹೇಳಲಿ?!
ಯುದ್ಧದ ಸೋಲು – ಗೆಲುವು ನಮ್ಮಿಬ್ಬರ ಇಚ್ಛೆಯದ್ದಲ್ಲ
ಅದು ಆಳುವವರ ಇಚ್ಛೆಗೆ ಬಿಟ್ಟದ್ದು
ಅವರವರ ಪಾಲಿನ ಹೆಣಗಳಿಗೆ ಜಾಗ ಹುಡುಕಬೇಕಿದೆ
ಸಾವಿಗೂ ವ್ಯಾಪಾರಿ ಇದ್ದಾನೆ;
ಅವನಿಗೆ ಜೀವ- ಪ್ರೇಮ ಮತ್ತು ಕವಿತೆಗಳಿಗಿಂತ
ಮೆಚ್ಚಿನದ್ದು ಅಧಿಕಾರ ಮಾತ್ರ.
ಶವಪೆಟ್ಟಿಗೆಯ ಮೆರವಣಿಗೆ ಬರುವಾಗ
ಬೀದಿಯಲ್ಲಿ ನಿಂತು ಬಿಕ್ಕಿ ಅಳಬೇಡ
ಕಣ್ಣೀರೀಗೆ ಅವಧಿ ತೀರಿದೆ.
ವ್ಯಾಪಾರಿಯ ಮುಂದೆ ಅದಕ್ಕೆ ಬೆಲೆ ಇಲ್ಲ






0 Comments