ನಾ ದಿವಾಕರ್
ಸಂಪನ್ಮೂಲಗಳಿಗಾಗಿ ನಡೆಯುವ ಸಮರವನ್ನು ನಾಗರೀಕತೆಯ ಸಂಘರ್ಷ ಎಂದು ಬಿಂಬಿಸಲಾಗುತ್ತದೆ. ಮಾನವ ಜಗತ್ತಿನ ಒಳಿತಿಗಾಗಿ ದುಷ್ಟ ಶಕ್ತಿಗಳನ್ನು ಮಣಿಸುವ ಒಂದು ತಂತ್ರವನ್ನಾಗಿ ಸಮರವನ್ನು ಬಿಂಬಿಸಲಾಗುತ್ತದೆ. ಈ ನಿಮಿತ್ತ ಪುರಾಣಗಳಲ್ಲಿ ಬಿಂಬಿಸುವಂತೆ ಕೆಲವು ಸಂಪತ್ತಿನ ತೊಟ್ಟಿಲುಗಳ ಸರದಾರರನ್ನು ಅಸುರಾದಿ ದುಷ್ಟ ಶಕ್ತಿಗಳಂತೆ ಬಂಬಿಸಲಾಗುತ್ತದೆ. ಜನಸಮುದಾಯಗಳಲ್ಲಿನ ಸಾಂಸ್ಕೃತಿಕ, ಸಾಮಾಜಿಕ ಸಂಘರ್ಷಗಳನ್ನು ಚಾರಿತ್ರಿಕ ಹಿನ್ನೆಲೆಯಲ್ಲಿ ಪರಿಭಾವಿಸಿ ವಿಭಿನ್ನ ಜನಸಮುದಾಯಗಳಲ್ಲಿ ಭ್ರಾತೃಘಾತುಕತೆಯನ್ನು ಸೃಷ್ಟಿಸಿ ಕಂದರ ಸೃಷ್ಟಿಸಲಾಗುತ್ತದೆ. ಪ್ರಜಾತಂತ್ರ ಮೌಲ್ಯಗಳ ರಕ್ಷಣೆಯ ನೆಪದಲ್ಲಿ ರಾಜಕೀಯ ಅತಂತ್ರವನ್ನು ಸೃಷ್ಟಿಸಿ ಅರಾಜಕತೆಯನ್ನು ಹರಡಲಾಗುತ್ತದೆ. ಜನಸಮುದಾಯಗಳ ನಡುವಿನ ಪಾರಂಪರಿಕ ಸಂಘರ್ಷಗಳನ್ನು ವಿನಾಶದ ಪೀಠಿಕೆಯನ್ನಾಗಿ ಪರಿವತರ್ಿಸಲಾಗುತ್ತದೆ. ಈ ಭೀಕರ ಹಾದಿಯನ್ನು ಸವೆಸುತ್ತಾ ಸವೆಸುತ್ತಾ ಆಧುನಿಕ ಸಾಮ್ರಾಟರು ಸಾಮ್ರಾಜ್ಯಶಾಹಿ ಮೌಲ್ಯಗಳ ಚೌಕಟ್ಟಿನಲ್ಲಿ ನಿಸರ್ಗದತ್ತ ಸಂಪನ್ಮೂಲಗಳ ಮೇಲೆ ತಮ್ಮ ಅಧಿಪತ್ಯ ಸಾಧಿಸುತ್ತಾರೆ. ಬಹುಶಃ ತನ್ನ ಈ ಕ್ಷುದ್ರ ರಾಜಕಾರಣವನ್ನು ಒಂದು ಶತಮಾನದಿಂದಲೂ ಯಶಸ್ವಿಯಾಗಿ ಮುನ್ನಡೆಸುತ್ತಾ ಬಂದಿರುವ ವಿಶ್ವ ಸಮುದಾಯದ ದೊಡ್ಡಣ್ಣ, ಸಾಮ್ರಾಜ್ಯಶಾಹಿ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ತಮ್ಮ ಯಶಸ್ಸಿನ ಶಿಖರದತ್ತ ಅಂತಿಮ ಹೆಜ್ಜೆ ಹಾಕುತ್ತಿವೆ. ತನ್ನ ಭೋಗ ಜೀವನದ ಲಾಲಸೆಗೆ ಒಂದು ನಾಗರೀಕತೆಯನ್ನೇ ಅಳಿಸಿಹಾಕುವ ನಿಟ್ಟಿನಲ್ಲಿ ಅಮೆರಿಕ ಹೆಜ್ಜೆ ಮುಂದಿಟ್ಟಿದೆ.

ಭಯೋತ್ಪಾದನೆಯನ್ನು ಹತ್ತಿಕ್ಕಿ ಇರಾಕ್ನಲ್ಲಿ ನಡೆಯುತ್ತಿರುವ ನರಮೇಧವನ್ನು ತಡೆಗಟ್ಟಲು 300 ಸೇನಾ ತಜ್ಞರನ್ನು ಇರಾಕ್ಗೆ ಕಳುಹಿಸುವುದಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ. ಆದರೆ ಅಮೆರಿಕದ ಉದ್ದೇಶ ಇರಾಕ್ನ ರಕ್ಷಣೆಯಲ್ಲ. ತನ್ನ ರಾಯಭಾರಿಗಳು ಮತ್ತು ಇತರ ಅಧಿಕಾರಿಗಳ ರಕ್ಷಣೆ ಮತ್ತು ಅಮೆರಿಕದ ಸೇನೆಯ ರಕ್ಷಣೆ. 2003-10ರ ಅವಧಿಯಲ್ಲಿ ಇರಾಕ್ನ ಹೊಸ ಸೇನೆಗೆ ತರಬೇತಿ ನೀಡಲು 25 ಶತಕೋಟಿ ಡಾಲರ್ ಖರ್ಚು ಮಾಡಿರುವ ಅಮೆರಿಕ ಇದರ ದುಪ್ಪಟ್ಟು ಹಣ ಪಡೆದು ಇರಾಕ್ ಸರ್ಕಾರಕ್ಕೆ ಅತ್ಯಾಧುನಿಕ ಎಂ1ಟ್ಯಾಂಕುಗಳು, ಅಪಾಚೆ ಹೆಲಿಕಾಪ್ಟರ್ ಮತ್ತು ಎಫ್16 ಯುದ್ಧ ವಿಮಾನಗಳನ್ನು ಪೂರೈಸಿದೆ. ಆದರೆ 2010ರಲ್ಲಿ ಅಮೆರಿಕದ ಸೇನೆಯ ವಾಪಸಾತಿಯ ನಂತರದಲ್ಲಿ ಈ ಶಸ್ತ್ರಾಸ್ತ್ರಗಳು ಜಿಹಾದಿಗಳ ಕೈಸೇರಿದ್ದು ಸಿರಿಯಾದಲ್ಲಿ ಸುನ್ನಿಗಳ ವಿರುದ್ಧ ಹೋರಾಡುತ್ತಿರುವ ಶಿಯಾ ಭಯೋತ್ಪಾದಕ ಗುಂಪುಗಳಿಗೂ ನೆರವಾಗಿದೆ. 2002ರಲ್ಲಿ ಅಮೆರಿಕ ಇರಾಕ್ ಮೇಲೆ ದಾಳಿ ನಡೆಸಿ ಆಕ್ರಮಿಸಿಕೊಂಡ ನಂತರ 1 ಲಕ್ಷ 80 ಸಾವಿರ ಇರಾಕಿಗಳು ಮೃತರಾಗಿದ್ದು ಇರಾಕ್ 1.7 ಶತಶತಕೋಟಿ ಡಾಲರ್ ಆರ್ಥಿಕ ನಷ್ಟ ಅನುಭವಿಸಿದೆ.
ಈ ಬೆಳವಣಿಗೆಗೆ ಮೂಲ ಕಾರಣ ಅಮೆರಿಕ ಸರ್ಕಾರದ ದುಸ್ಸಾಹಸವೇ ಎಂದು ಹೇಳಬೇಕಿಲ್ಲ. 2003ರಲ್ಲಿ ಇರಾಕ್ ಆಕ್ರಮಣದ ನಂತರ ಅಲ್ಲಿನ 4 ಲಕ್ಷ ಸೈನಿಕರ ಪ್ರಬಲ ಸೇನೆಯನ್ನು ಅಮೆರಿಕ ನಿಶ್ಶಸ್ತ್ರಗೊಳಿಸಿ ಅಳಿಸಿಹಾಕಿತ್ತು. ಸಾವಿರಾರು ಮಾಜಿ ಸೈನಿಕರು ನಿರ್ಗತಿಕರಾಗಿ ಬೀದಿ ಪಾಲಾದರು. ಇದೇ ಸೈನಿಕರೇ ಇಂದು ಭಯೋತ್ಪಾದಕ ಸಂಘಟನೆಗಳ ಸಕ್ರಿಯ ಯೋಧರಾಗಿದ್ದಾರೆ. ಪರಿಣಾಮ ಹತ್ತು ಲಕ್ಷಕ್ಕೂ ಹೆಚ್ಚು ಇರಾಕಿಗಳು ಇಂದು ಸಂಘರ್ಷದ ಮಾರ್ಗದಲ್ಲಿ ಮುನ್ನಡೆದಿದ್ದು ಭಯೋತ್ಪಾದಕ ಸಂಘಟನೆಗಳ ಕುತಂತ್ರಗಳಿಗೆ ಬಲಿಯಾಗಿದ್ದಾರೆ. ಇರಾಕ್ ಮೇಲೆ ನಿಯಂತ್ರಣ ಸಾಧಿಸಲು ಭಯೋತ್ಪಾದಕ ಸಂಘಟನೆಗಳು ಮತ್ತು ಇರಾಕ್ ಸೇನೆಯ ನಡುವೆ ಸಂಘéರ್ಷ ಹೆಚ್ಚಾದಂತೆಲ್ಲಾ ಉಗ್ರವಾದಿಗಳ ಗುಂಪಿಗೆ ಸೇರುವವರ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತದೆ. ಒಂದು ರೀತಿಯಲ್ಲಿ ಈಗಾಗಲೇ ಇರಾಕ್ ನಿರಾಶ್ರಿತರ ದೇಶವಾಗಿ ಪರಿಣಮಿಸಿದೆ. ಸುನ್ನಿ ಭಯೋತ್ಪಾದಕರ ಬೆಂಬಲ ಇರುವ ಅಲ್ಖೈದಾ ಸಂಘಟನೆಯ ಕೂಸು ಐಎಸ್ಐಎಸ್ ಪ್ರಬಲವಾಗುತ್ತಿದ್ದು, ಮತ್ತಷ್ಟು ನಗರಗಳು ಭಯೋತ್ಪಾದಕರ ಆಕ್ರಮಣಕ್ಕೊಳಗಾಗುವ ಭೀತಿ ಎದುರಾಗಿದೆ. ಸದ್ದಾಂ ಹುಸೇನ್ ಬಳಸುತ್ತಿದ್ದ ರಾಸಾಯನಿಕ ಅಸ್ತ್ರಗಳ ಅಡಗುತಾಣಗಳನ್ನು ಈಗಾಗಲೇ ಭಯೋತ್ಪಾದಕರು ಆಕ್ರಮಿಸಿಕೊಂಡಿರುವುದು ಮುಂಬರುವ ಕರಾಳ ದಿನಗಳ ಮುನ್ಸೂಚನೆಯಾಗಿದೆ.
ತನ್ನ ಸ್ವಾರ್ಥ ಸಾಮ್ರಾಜ್ಯ ವಿಸ್ತರಣೆಯ ಕುಟಿಲ ನೀತಿಯಿಂದ ಭ್ರಾತೃಘಾತುಕತೆಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುವ ಅಮೆರಿಕ ನವ ಉದಾರವಾದದ ಯಶಸ್ವಿ ಮುನ್ನಡೆಗೆ ತೈಲ ಸಂಪತ್ತಿನ ಒಡೆತನವೇ ಮೂಲ ಎಂಬ ವಾಸ್ತವವನ್ನು ಅರಿತಿದ್ದು ಈ ಹಿನ್ನೆಲೆಯಲ್ಲೇ ಇರಾಕ್ನ ಸಂಘéರ್ಷವನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಿದೆ. ಇಸ್ಲಾಮಿಕ್ ಭಯೋತ್ಪಾದನೆಯ ವಿರುದ್ಧ ಸಮರ ಸಾರುವ ಉತ್ಸಾಹದಲ್ಲಿ ಭಾರತದಂತಹ ಹಲವು ರಾಷ್ಟ್ರಗಳು ಅಮೆರಿಕದ ಕುಟಿಲ ನೀತಿಗೆ ಪರೋಕ್ಷವಾಗಿ, ನೇರವಾಗಿ ಬೆಂಬಲ ನೀಡುತ್ತಿರುವುದು ಇತಿಹಾಸದ ದುರಂತ. 1970ರಲ್ಲಿ ಲೆಬನಾನ್ ದೇಶದಲ್ಲಿ ಇದೇ ರೀತಿಯ ಕ್ಷುದ್ರ ರಾಜಕೀಯ ನಾಟಕವಾಡಿದ ಅಮೆರಿಕ ಆ ದೇಶವನ್ನು ಛಿದ್ರಛಿದ್ರಗೊಳಿಸಿತ್ತು. ಎಷ್ಟರ ಮಟ್ಟಿಗೆ ಎಂದರೆ ಯಾವುದೇ ಒಂದು ದೇಶ ಛಿದ್ರವಾದರೆ ಅದನ್ನು ಲೆಬನನೀಕರಣ ಎಂದು ಕರೆಯಲಾಗುತ್ತಿತ್ತು. ಈಗ ಇರಾಕ್ ಇದೇ ಸಾಲಿನಲ್ಲಿ ನಿಂತಿದೆ. ಇರಾಕ್ ಮೇಲೆ ತನ್ನ ಪೂರ್ಣ ಹಿಡಿತ ಸಾಧಿಸಿದ ನಂತರ ಅಮೆರಿಕದ ಕಾಕದೃಷ್ಟಿ ಇರಾನ್ ಮೇಲೆ ಬೀಳಲಿದೆ. ಸಮರಶೀಲತೆ, ನವ ಉದಾರವಾದ, ಸಾಮ್ರಾಜ್ಯಶಾಹಿ ಧೋರಣೆ ಮತ್ತು ಮತೀಯ ರಾಷ್ಟ್ರವಾದದ ಸವರ್ಾಧಿಕಾರಿ ಧೋರಣೆ ಇವೆಲ್ಲವೂ ಒಂದಕ್ಕೊಂದು ಪೂರಕವಾದ ವಿದ್ಯಮಾನಗಳು. ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಪ್ರಜ್ಞಾವಂತ ಜನತೆ, ಪ್ರಜಾತಂತ್ರ ಮೌಲ್ಯಗಳನ್ನು ರಕ್ಷಿಸಲು ಈ ವಿದ್ಯಮಾನಗಳ ವಿರುದ್ಧ ನಿರಂತರ ಹೋರಾಟ ನಡೆಸುವುದು ಅಗತ್ಯ. ಇಲ್ಲವಾದಲ್ಲಿ ಇರಾಕ್ ಲೆಬನಾನ್ನಂತೆ ಮತ್ತೊಂದು ನಿದರ್ಶನವಾಗುತ್ತದೆ.






America is doing what it is doing right now BECAUSE IT CAN!
If it faces a stiff resistance from strong native leaders they won’t succeed, for example IRAN.
India should support fight against terrorism not to support America but India itself is a sitting target for global terrorism and must do everything in its capacity to protect itself.
“ಸಮರಶೀಲತೆ, ನವ ಉದಾರವಾದ, ಸಾಮ್ರಾಜ್ಯಶಾಹಿ ಧೋರಣೆ ಮತ್ತು ಮತೀಯ ರಾಷ್ಟ್ರವಾದದ ಸವರ್ಾಧಿಕಾರಿ ಧೋರಣೆ ಇವೆಲ್ಲವೂ ಒಂದಕ್ಕೊಂದು ಪೂರಕವಾದ ವಿದ್ಯಮಾನಗಳು.” None of these things are as strong a reason as MONEY! Its pure and simple greed that is driving most things in our current world than these lofted & outdated concepts.
yes money is the prime factor but behind these what you term lofted and outdated concept lies the bane of capital, ie., money and capitalism.