– ಡಾ ಎಸ್ ಬಿ ಜೋಗುರ
ಈಚೆಗೆ ಹೈದರಾಬಾದದಲ್ಲಿ ವೃದ್ಧರನ್ನು ಕುರಿತು ಒಂದು 12 ನೇ ಅಂತರರಾಷ್ಟ್ರೀಯ ಸಮ್ಮೇಳನ ಜರುಗಿತು. ಅಲ್ಲಿ ನೋಬೆಲ್ ಪ್ರಶಸ್ತಿ ಪುರಷ್ಕೃತ ಮೊಹ್ಮದ ಯೂನಸ್ ರಂಥವರು ಮಾತನಾಡಿದರು. ಆ ಸಭೆಯಲ್ಲಿ ಫೈಜರ್ ಎಂಬ ಬಹುದೊಡ್ಡ ಔಷಧಿ ಕಂಪನಿಯ ಜಾಕ್ ವ್ಯಾಟರ್ಸ್ ಎನ್ನುವವರು ಮಾತನಾಡಿ ‘ಈಗ ಸದ್ಯ ಭಾರತದಲ್ಲಿ ಸುಮಾರು 7 ಪ್ರತಿಶತ ವೃದ್ಧರಿದ್ದಾರೆ 2050 ರ ಹೊತ್ತಿಗೆ ಆ ಸಂಖ್ಯೆ 20 ಪ್ರತಿಶತ ತಲುಪಲಿದೆ’ ಎಂದರು. ಒಂದು ದೇಶದ ಅಭಿವೃದ್ಧಿಯಲ್ಲಿ ಅಲ್ಲಿಯ ದುಡಿಯುವ ಜನಸಂಖ್ಯೆಯ ಪ್ರಮಾಣ ತೀರಾ ನಿರ್ಣಾಯಕ. ಗಾತ್ರದಲ್ಲಿ ಬರೀ ಜನಸಂಖ್ಯೆ ಅಪಾರವಾಗಿರುವುದಷ್ಟೇ ಮುಖ್ಯವಲ್ಲ ಅದರ ಆರೋಗ್ಯ ಹೇಗಿದೆ ಎನ್ನುವುದು ಕೂಡಾ ಅಷ್ಟೇ ಮುಖ್ಯ ಎನ್ನುವ ಚರ್ಚೆಗಳು ಅಲ್ಲಿ ಕೇಳಿಬಂದವು. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಅದರಲ್ಲೂ ಗ್ರಾಮೀಣ ಭಾಗದ ಜನರ ಆರೋಗ್ಯದ ಕಡೆಗೆ ವಿಶೇಷ ಗಮನಹರಿಸಬೇಕಿದೆ ಎನ್ನುವುದು ಇನ್ನೊಂದು ಅಭಿಪ್ರಾಯ. ಒಂದು ದೇಶದ ಜನತೆ ಮತ್ತು ಅಲ್ಲಿಯ ಔಷಧಿಯ ಮಧ್ಯೆ ಯಾವಾಗಲೂ ದರ ಎನ್ನುವುದು ತೊಡಕಾಗಬಾರದು. ಆಯಾ ರಾಷ್ಟ್ರದ ಸರಕಾರಗಳು ಅದನ್ನು ಗಂಭೀರವಾಗಿ ಪರಿಗಣಿಸಿ ಸಾಮಾನ್ಯ ಜನತೆಗೂ ಸುಲಭವಾದ ದರದಲ್ಲಿ ತೀರಾ ಅವಶ್ಯಕವಾಗಿರುವ ಔಷಧಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಎನ್ನುವುದು ಆ ಸಮ್ಮೇಲನದಲ್ಲಿ ಭಾಗವಹಿಸಿದವರ ಅಭಿಮತ.
ವಾಟರ್ಸ್ ಎಂಬ ಚಿಂತಕ ಹೇಳುವಂತೆ ರಾಜಕೀಯ ಇಚ್ಚಾಶಕ್ತಿಯ ಎದುರು ಯಾವುದೂ ಸಮಸ್ಯೆಯಾಗಿ ನಿಲ್ಲುವದಿಲ್ಲ. ಭಾರತದಂತಹ ರಾಷ್ಟ್ರಗಳು ತೀರಾ ರಿಮೋಟ್ ಆಗಿರುವ ಹಳ್ಳಿಗಳಿಗೂ ತಲುಪುವ ಮೂಲಕ ಪೋಲಿಯೋದಂತಹ ಕಾಯಿಲೆಯನ್ನು ಬೇರು ಸಮೇತ ಉತ್ಪಾಟನೆ ಮಾಡಲು ಸಾಧ್ಯ ಎಂದರು. ಆ ಸಮ್ಮೇಳನದಲ್ಲಿ ಅತಿ ಮುಖ್ಯವಾಗಿ ಜನರಿಗೆ ಪ್ರಮುಖವಾಗಿರುವ ಔಷಧಿಗಳು ದರದ ಹಿನ್ನೆಲೆಯಲ್ಲಿ ತೊಡಕಾಗಬಾರದು ಎನ್ನುವ ಮಾತುಗಳೇ ಹೆಚ್ಚಾಗಿ ಕೇಳಿಬಂದವು. ನಮ್ಮಲ್ಲಿ ಈಗಲೂ ಬಹುತೇಕರು ಆಸ್ಪತ್ರೆ ಮತ್ತು ಔಷಧಿಯ ಖರ್ಚು ವೆಚ್ಚವನ್ನು ಭರಿಸಲಾಗದೇ ಕಾಯಿಲೆಯನ್ನೇ ಉಪೇಕ್ಷಿಸಿ ತೊಂದರೆಯನ್ನು ಅನುಭವಿಸುವದಿದೆ. ಮಧ್ಯಮವರ್ಗಗಳಂತೂ ವೈದ್ಯರು ಬರೆದ ಎಲ್ಲ ಔಷಧಿಯನ್ನು ಖರೀದಿಸದೇ ಕೇವಲ ಅಲ್ಪ ಸ್ವಲ್ಪ ಖರೀದಿಸಿ ಅದರಲ್ಲಿಯೇ ಗುಣವಾಗಲು ನೋಡುತ್ತಾರೆ ಅದಕ್ಕೆ ಕಾರಣ ದುಬಾರಿ ದರ. ತೀರಾ ಅವಶ್ಯವಾಗಿರುವ ಜ್ವರದ ಮಾತ್ರೆಯೇ ಎರಡು-ಮೂರು ರೂಪಾಯಿಗಳಷ್ಟಾಗಿದೆ.

ಕೇಂದ್ರ ಸರಕಾರ ಅದಾಗಲೇ ಈ ಔಷಧಿಗಳ ದರದ ಬಗ್ಗೆ ಗಂಭೀರವಾಗಿ ಆಲೋಚಿಸಿ ಸಾಧ್ಯವಾದರೆ ಸುಮಾರು ತೀರಾ ಅವಶ್ಯಕವಾಗಿರುವ ಔಷಧಿ ಮತ್ತು ಮಾತ್ರೆಯನ್ನು ಉಚಿತವಾಗಿ ಕೊಡುವ ಬಗ್ಗೆ ಯೋಚಿಸುತ್ತಿದೆ. ಕೇಂದ್ರ ಆರೋಗ್ಯ ಖಾತೆ ಸಚಿವ ಹರ್ಷ ವರ್ಧನ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಈ ದಿಸೆಯಲ್ಲಿ ಅದಾಗಲೇ ಕಾರ್ಯೋನ್ಮುಖರಾಗಿದ್ದಾರೆ. ಸುಮಾರು 75 ಪ್ರತಿಶತ ಜನರಿಗೆ ಪ್ರಯೋಜನಕಾರಿಯಾಗುವ ಹಾಗೆ ಈ ಯೋಜನೆಯನ್ನು ರೂಪಿಸಲಿದ್ದು ಇದರಿಂದ ದೇಶದ ಎಲ್ಲ ಜನಸಾಮಾನ್ಯನಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನೆರವಾಗುವಂತೆ ಪ್ರಯತ್ನಿಸಲಾಗುತ್ತಿದೆ. ಈ ಯೋಜನೆಯನ್ನು ದಿಢೀರನೇ ಏಕ ಕಾಲಕ್ಕೆ ರಾಷ್ಟ್ರವ್ಯಾಪಿಯಾಗಿ ಅಳವಡಿಸುವುದು ಕಷ್ಟ ಹೀಗಾಗಿ ಆರಂಭದಲ್ಲಿ ಇದನ್ನು ಒಂದು ಹಂತದ ಯೋಜನೆಯಾಗಿ ಕೆಲವು ಪ್ರಮುಖ ಸರಕಾರಿ ಆಸ್ಪತ್ರೆಗಳಲ್ಲಿ ಆರಂಭಿಸಲಾಗುವುದು ನಂತರ ಅದರ ಫéಲಿತಾಂಶವನ್ನು ಗಮನಿಸಿ, ಹಂತ ಹಂತವಾಗಿ ದೇಶದಾದ್ಯಂತ ಪರಿಚಯಿಸುವ ಆಲೋಚನೆಯನ್ನು ಹೊಂದಲಾಗಿದೆ. ತೀರಾ ಅವಶ್ಯಕ ಎನಿಸುವ ಸುಮಾರು 50 ಔಷಧಿಗಳನ್ನು ಸಾರ್ವಜನಿಕ ಆಸ್ಪತ್ರೆ ಮತ್ತು ಔಷಧಾಲಯಗಳಲ್ಲಿ ಉಚಿತವಾಗಿ ದೊರೆಯುವಂತೆ ಮಾಡಲಾಗುವ ಈ ಯೋಜನೆ ನಿಜವಾಗಿಯೂ ಭಾರತದಂತಹ ಬಡ ರಾಷ್ಟ್ರಗಳಿಗೆ ಒಂದು ವರದಾನವೇ ಹೌದು. ಆದರೆ ಇದನ್ನು ಪರಿಚಯಿಸುವಷ್ಟೇ ಅದನ್ನು ಪ್ರಾಮಾಣಿಕವಾಗಿ ಜಾರಿಗೊಳಿಸುವಲ್ಲಿಯೂ ಕ್ರಮಗಳನ್ನು ಕೈಗೊಳ್ಳಬೇಕು. ಇಂಥಾ ಯೋಜನೆಗಳು ಬರುವ ಮುನ್ನವೇ ಭ್ರಷ್ಟರು ತಂತ್ರಗಾರಿಕೆಯನ್ನು ರೂಪಿಸಿ ಯೋಜನೆಗೆ ಕನ್ನ ಹಾಕಲು ಹೊಂಚು ಹಾಕಿ ಕುಳಿತಿರುತ್ತಾರೆ. ಆ ಬಗ್ಗೆಯೂ ಕಟ್ಟು ನಿಟ್ಟಾದ ಕ್ರಮಗಳನ್ನು ಕೈಗೊಳ್ಳಬೇಕು. ಅನೇಕ ಆಸ್ಪತ್ರೆಗಳಲ್ಲಿ ಒದಗಿಸಲಾದ ಔಷಧಿಯನ್ನು ಸರಿಯಾಗಿ ವಿತರಿಸಲಾಗದೇ ತಗ್ಗು ತೆಗೆದು ಹೂಳುವ ಪ್ರಸಂಗಗಳು ಎದುರಾಗುವದೂ ಇದೆ. ಹಾಗೆಯೇ ಕೆಲ ಕಡೆ ವಿಪರೀತ ಕೊರತೆಯಿದ್ದು ತೀರಾ ಅವಶ್ಯಕವಿರುವ ಔಷಧಿಗಳೂ ಇಲ್ಲದಿರುವ ಆಸ್ಪತ್ರೆಗಳಿವೆ. ಹೀಗಾಗದಂತೆ ಗಮನ ಹರಿಸುವುದು ಕೂಡಾ ಅಷ್ಟೇ ಮುಖ್ಯ.
ಭಾರತದಲ್ಲಿ ಆರೋಗ್ಯ ವಿಷಯವಾಗಿ ನಾವು ಖರ್ಚು ಮಾಡುವುದು ಮತ್ತು ಆ ಬಗ್ಗೆ ವಿಶೇಷ ಗಮನಹರಿಸುವುದು ತೀರಾ ಕಡಿಮೆ. ಅಮೇರಿಕಾ, ಇಂಗ್ಲಂಡ್, ನಾರ್ವೆದಂತಹ ರಾಷ್ಟ್ರಗಳು 18 ಪ್ರತಿಶತ ಆರೋಗ್ಯಕ್ಕಾಗಿ ಖರ್ಚು ಮಾಡಿದರೆ ನಮ್ಮಲ್ಲಿ ಕೇವಲ 4 ಪ್ರತಿಶತದಷ್ಟು ಮಾತ್ರ ನಾವು ಖರ್ಚು ಮಾಡುವದಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ ನಮ್ಮಲ್ಲಿ ಕೇವಲ 7 ಪ್ರತಿಶತ ವೈದ್ಯರಿದ್ದಾರೆ. ಒಂದು ಮೆಡಿಕಲ್ ಜರ್ನಲ್ ವರದಿಯಂತೆ ನಮ್ಮಲ್ಲಿ ಈಗ ಅಧಿಕೃತವಾಗಿ [2013] 840130 ವೈದ್ಯರಿದ್ದಾರೆ. ಕೆಲ ದಶಕಗಳ ಹಿಂದೆ 6300 ಜನರಿಗೆ ಒಬ್ಬರು ವೈದ್ಯರಿದ್ದರೆ ಈಗ 1800 ಜನರಿಗೆ ಒಬ್ಬ ವೈದ್ಯರಿದ್ದಾರೆ. 1000 ಜನರಿಗೆ ಒಬ್ಬರು ವೈದ್ಯರು ಲಭ್ಯವಿರುವಂತಾಗಬೇಕು ಎನ್ನುವುದು ಭಾರತ ಸರಕಾರದ ಯೋಜನೆ. 1955 ರ ಸಂದರ್ಭದಲ್ಲಿ ಕೇವಲ ನಮ್ಮಲ್ಲಿ 77 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದರೆ ಆ ಸಂಖ್ಯೆ 2011 ರ ಸಂದರ್ಭದಲ್ಲಿ 23887 ರಷ್ಟಿದೆ. ಹೀಗೆಲ್ಲಾ ಇರುವಾಗಲೂ ನಮ್ಮಲ್ಲಿ ಇನ್ನೂ ಸಾಕಷ್ಟು ಪ್ರಮಾಣದ ವೈದ್ಯಕೀಯ ಸೌಲಭ್ಯಗಳಿಲ್ಲ. ಅತಿ ಮುಖ್ಯವಾಗಿ ಗ್ರಾಮೀಣ ಭಾಗಗಳಲ್ಲಿ ಆಸ್ಪತ್ರೆ ಮತ್ತು ವೈದ್ಯರ ಕೊರತೆ ಇದ್ದೇ ಇದೆ. ತೀರಾ ಪ್ರಮುಖವಾಗಿರುವ 50 ಪ್ರಕಾರದ ಔಷಧಿಯನ್ನು ಉಚಿತವಾಗಿ ಒದಗಿಸುವ ಮೂಲಕ ಒಂದು ಹೊಸ ಅಧ್ಯಾಯವನ್ನು ಭಾರತೀಯ ಆರೋಗ್ಯದ ವಲಯದಲ್ಲಿ ಆರಂಭಿಸಬೇಕಿದೆ. ಇಡೀ ವಿಶ್ವದಲ್ಲಿಯೇ ಒಂದು ಅಪರೂಪದ ಯೋಜನೆಯಾಗಿ ಅದು ಗುರುತಿಸಿಕೊಳ್ಳುವಂತಾಗಲಿ.






0 Comments