ಅವಳ ಮೈ ಮೇಲಿನ ಮಚ್ಚೆಗಳನ್ನು ಎಣಿಸಿ ಇರುಳುಗಳನ್ನು ಕಳೆದ ಅವನಿಗೆ..


‘ಅವಳ ಕವಿತೆ’ ಎಂಬ ಹೆಣ್ಣೊಳ ನೋಟ..
ಹೆಣ್ಣಿನ ದೇಹ ಎನ್ನುವುದು ಇಂದಿನ ದಿನಗಳಲ್ಲಿ ವಿವಿಧ ರೀತಿಯ ಚರ್ಚೆಗೆ ಗ್ರಾಸವಾಗಿದೆ.  ಶ್ರವಣಬೆಳಗೊಳದಲ್ಲಿ ನಡೆದ ಹಳಗನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೆಣ್ಣಿನ ದೇಹ ಹೇಗೆ ಕನ್ನಡ ಸಾಹಿತ್ಯದಲ್ಲಿ ಎಲ್ಲೆಡೆಯೂ ಪ್ರಮುಖ ಪಾತ್ರವಹಿಸಿದೆ ಎಂಬ ಚರ್ಚೆ ದೊಡ್ಡದಾಗಿಯೇ ಸದ್ದು ಮಾಡಿತು.
ಇಡೀ ಹಳಗನ್ನಡ ಸಾಹಿತ್ಯದ ಉದ್ದಕ್ಕೂ  ಹೆಣ್ಣಿನ ದೇಹದ ಕಣ್ಣು ಕಿವಿ ಮೂಗು, ತುಟಿಗಳಷ್ಟೇ ಅಲ್ಲದೇ ಎದೆ, ಕಟಿ ಜಘನಗಳೂ ಎಗ್ಗು ಸಿಗ್ಗಿಲ್ಲದೇ ವರ್ಣನೆಗೊಂಡಿದ್ದನ್ನು ಹಿರಿಯ ಮಹಿಳಾ ಲೇಖಕರು ಎತ್ತಿ ತೋರಿಸಿದರು. ಪಂಪನಂತಹ ಪಂಪನೇ ತನ್ನ ಆದಿ ಪುರಾಣದಲ್ಲಿ ವಜ್ರದಂತ ತನ್ನ ಮಗಳು ಶ್ರೀಮತಿಯ ಬಾಡಿದ ಮುಖ, ಸೊರಗಿದ ದೇಹವನ್ನು ವರ್ಣಿಸುವ ರೀತಿಯಲ್ಲೂ ದೈಹಿಕ ವಾಂಛೆಯೇ ಕಂಡು ಬರುತ್ತದೆ ಎಂಬ ವಾದವೊಂದು ಕಡೆಯಾದರೆ, ಹಳೆಗನ್ನಡದಲ್ಲಿ ಅದನ್ನೆಲ್ಲ ಹೆಣ್ಣಿನ ದೇಹದ ವರ್ಣನೆ ಎಂದು ಗ್ರಹಿಸದೇ ಕೇವಲ ಕಾವ್ಯದ ಔನತ್ಯವನ್ನಷ್ಟೇ ಗಮನಿಸಬೇಕು ಎಂಬ ವಾದ ಇನ್ನೊಂದು ಕಡೆ.
ಹೆಣ್ಣಿನ ದೇಹವೇ ಕಾಮುಕರ, ವಿಕೃತಿಗಳ, ಜನಸಾಮಾನ್ಯರ ಆಡುಂಬೊಲ ಆಗಿರುವಂತೆಯೇ ಸಮಾಜದಲ್ಲಿ ಬುದ್ಧಿವಂತರೆನಿಸಿಕೊಂಡವರ ಕಾರ್ಯಕ್ಷೇತ್ರವೂ ಆಗುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಹೆಣ್ಣೆಂದರೆ ಬರೀ ದೇಹವಷ್ಟೇ ಅಲ್ಲ ಅದೊಂದು ನವಿರು ಭಾವನೆಗಳ ಮನಸ್ಸು, ಅಷ್ಟೇ ಅಲ್ಲ ಮಾನವ ಸಹಜವಾದ ಎಲ್ಲಾ ಭಾವ ಹಾಗೂ ಬಯಕೆಗಳ ಅಪೂರ್ವ ಸಂಗಮವಾಗಿ ನಮ್ಮೆದುರಿಗೆ ಒಂದು ಕವಿತಾ ಸಂಕಲನವಿದೆ.

ಹೆಣ್ಣಿನ ಮೇಲೆ ಏನನ್ನಾದರೂ ಬರೆಯಬೇಕೆಂದರೆ ಅದು ಅವಳ ದೇಹದ ಮೇಲೆಯೇ ಆಗಿರಬೇಕು ಎಂಬ ಸಿದ್ಧ ಸೂತ್ರಗಳನ್ನು ಮೀರುವ ಪ್ರಯತ್ನ ಇದಾಗಿದೆ. ಅದಕ್ಕೆಂದೇ ನಾನು ಈ ವಾರ ನಿಮಗೆ ಓದಲು ರೆಕಮಂಡ್ ಮಾಡುತ್ತಿರುವ ಪುಸ್ತಕ  ಎಂ ಎಸ್ ರುದ್ರೇಶ್ವರಸ್ವಾಮಿಯವರ “ಅವಳ ಕವಿತೆ”
ಅವಳ ಮೈ
ಮೇಲಿನ ಮಚ್ಚೆಗಳನ್ನು
ಎಣಿಸಿ ಇರುಳುಗಳನ್ನು
ಕಳೆದ  ಅವನಿಗೆ
ಅವಳ ಎದೆಯೊಳಗೆ ಹೊಳೆವ ನಕ್ಷತ್ರಗಳ
ಮಿಣುಕು ಬೆಳಕು
ತಲುಪಲಿಲ್ಲ. ಅವಳ
ಅಸ್ತಿತ್ವವನ್ನೇ   
ನಿರಾಕರಿಸಿದ ಅವನ ಮಾತು ಅವಳ
ಉಸಿರು ನಿಲ್ಲಿಸಿತು

ಎನ್ನುವ ಸಾಲುಗಳು ಅದೆಷ್ಟು ಸಶಕ್ತವಾಗಿ ಹೇಳಬೇಕಾದುದನ್ನು ಹೇಳುತ್ತಿವೆ. ಇದು ಯಾವುದೋ ಕೆಂಪು ದೀಪದ ಕೆಳಗಿನ ಸೋತ ಹೆಣ್ಣಿನ ಕಥೆಯಲ್ಲ. ನಮ್ಮ ನಿಮ್ಮ ನಡುವಿರುವ ಬಹುತೇಕ ಹೆಣ್ಣುಗಳ ಕಥೆಯೇ ಇದು. ಆತ ಮೈಮೇಲಿನ ಮಚ್ಚೆಗಳ ಲೆಕ್ಕವಿಡಬಲ್ಲ. ಕೊರಳಲ್ಲಿ ಅಚ್ಚಾದ ಉಂಗುರಗಳ ಬಗ್ಗೆ ಕರಾರುವಾಕ್ಕಾಗಿ ಹೇಳಬಲ್ಲ,  ಹೊಟ್ಟೆಗೆ ಬಿದ್ದ ಮಿಡಚೆಗಳನ್ನು ಎಣಿಸಬಲ್ಲ ಆದರೆ ಮನದ ಸುಕ್ಕುಗಳನ್ನು ಕಾಣಲೂ ಸಾಧ್ಯವಿಲ್ಲ.
ಕಣ್ಣಲ್ಲಿ ಜಿನುಗಿದ ಕಂಬನಿಯೆಡೆಗೆ ಆತನದ್ದು ದಿವ್ಯ ನಿರ್ಲಕ್ಷ. ನೋವಿನ ಕಣಜದ ಕಡೆ ದಿಟ್ಟಿಯನ್ನೂ ಹಾಯಿಸಲಾರ. ಅದೆಲ್ಲ ಹೋಗಲಿ ಎಂದರೆ ಎದೆಯೊಳಗೆ ತುಂಬಿ ತುಳುಕುತ್ತಿರುವ ಪ್ರೇಮವನ್ನೂ ಆತ ಗುರುತಿಸಲಾರ. ಉಬ್ಬು ತಗ್ಗುಗಳ ಬಗ್ಗೆ ಇಂಚಿಂಚಿನ ಲೆಕ್ಕ ಕೊಡುತ್ತಲೇ ಅಸ್ತಿತ್ವವನ್ನೇ ನಿರಾಕರಿಸುವ ಮಾತುಗಳನ್ನು ಸಲೀಸಾಗಿ ಆಡಿ ಬಿಡಬಲ್ಲ.
ಇಲ್ಲಿ ನಾವು ಬೆರಗಾಗುವುದು ಇದೊಂದೇ ಕವನಕ್ಕಲ್ಲ. ಇಂತಹ ಕವನಗಳ ಸಾಲು ಸಾಲುಗಳೇ ಇಲ್ಲಿ ಮೆರವಣಿಗೆ ಹೊರಟಿವೆ. ಅಂತಹ ಸಾಲುಗಳನ್ನು ರುದ್ರೇಶ್ವರ ಸ್ವಾಮಿಯವರು ಪ್ರತಿ ದಿನ, ದಿನಕ್ಕೊಂದರಂತೆ ಫೇಸ್ ಬುಕ್ ನಲ್ಲಿ ಬರೆಯುತ್ತಿದ್ದರು. ಫೇಸ್ ಬುಕ್ ತನಗೆ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ ಎನ್ನುತ್ತಲೇ ಮಾತಿಗಿಳಿಯುತ್ತಿದ್ದ ರುದ್ರೇಶ್ವರ ಸ್ವಾಮಿಯವರು ತೀರಾ ಮಿತಭಾಷಿ ಮತ್ತು ಅಷ್ಟೇ ಸೌಜನ್ಯಪೂರ್ಣ ನಡವಳಿಕೆಯವರು.
ಕಡಲ ಬಗೆಗಿನ ಕವಿತೆಗಳನ್ನು ಬರೆದಾಗಲೆಲ್ಲ, “ಏನು  ಗುರುಗಳೇ, ಇವತ್ತಿನ ಕಡಲ ದಂಡೆಯ ಮೇಲಿನ ಅವಳು ಎನ್ನುವುದು ನನಗೇ ಹೇಳಿದಂತಿದೆ” ಎಂದು ರೇಗಿಸಿದಾಗಲೆಲ್ಲ ಮೊದಮೊದಲು ಗಲಿಬಿಲಿಗೊಂಡು ತಡವರಿಸುತ್ತಿದ್ದರೂ ನನ್ನ ತುಂಟತನ ಅರಿವಾದ ಮೇಲೆ ಮತ್ತದೇ ಸೌಜನ್ಯದಿಂದಲೇ “ಇವಳು ಎಲ್ಲರಲ್ಲಿಯೂ ಇರುವ ಅವಳು” ಎಂದುತ್ತರಿಸಿ ಮತ್ತೊಂದು ಕವಿತೆಗೆ ಸಿದ್ಧವಾಗುತ್ತಿದ್ದರು. ಅವಳು ಕವಿತೆಯನ್ನು ಸುಮಾರು ಆರು ತಿಂಗಳುಗಳ ಕಾಲ ಒಂದು ತಪಸ್ಸಿನಂತೆ ಬರೆದರು.
ಬಿಡಿ ಬಿಡಿಯಾಗಿ ಓದಿದಾಗ ಇದೆಂತಹ ಕವನ ಎನ್ನಿಸಿದರೂ ಒಟ್ಟಾಗಿ ಓದಿದಾಗ ಆ ಕವನಗಳ ಲಾಲಿತ್ಯ ನಮ್ಮನ್ನು ತನ್ನೊಳಗೆ ಸೆಳೆದುಕೊಳ್ಳದೇ ಬಿಡದು.  ಕವನಗಳ ಆಯ್ಕೆ ಮುಗಿಸಿ ಪಿಡಿಎಫ್ ನ್ನು ಕಳಿಸಿದಾಗ ಅದರ ಮೊದಲ ಓದುಗಳಾಗಿ ನಾನು ಅನುಭವಿಸಿದ ಥ್ರಿಲ್ ನನಗೀಗಲೂ ನೆನಪಿದೆ. ತೀರಾ ಸರಳ ಪದಗಳಲ್ಲಿ ಏನೇನನ್ನೋ ಹೇಳುವ ಈ ಕವಿತೆಗಳ ಮಾಂತ್ರಿಕತೆಗೆ ನಾನು ಮಂತ್ರಮುಗ್ಧಳಾಗಿ ಹೋಗಿದ್ದೆ.

ಮನೆಯಾಕೆ ಈಗ ತಾನೆ
ಕಣ್ಣುಮುಚ್ಚಿದ್ದಾಳೆ, ಆವರಿಸಿಲ್ಲ
ಅವಳನ್ನು   ಇನ್ನೂ
ನಿದ್ರೆ, ಹೇಳಿಕೊಳ್ಳದ ಮಾತು ಇವೆ
ಅವಳೆದೆಯಲ್ಲಿಬ
ಒಂಟಿ ನಕ್ಷತ್ರ ಇದ್ದ
ಹಾಗೆ ಆಗಸದಲ್ಲಿ

ಅವಳ ಕವಿತೆ ಎನ್ನುವುದು ಬಿಡಿಯಾಗಿ ಓದಿದರೆ ಒಂದು  ತೀರಾ ಸಾಮಾನ್ಯರಲ್ಲಿ ಸಾಮಾನ್ಯ ಕವಿತೆ ಎನ್ನಿಸಿ ಬಿಡಬಹುದಾದ ಅಪಾಯಗಳಿದ್ದರೂ, ಅದನ್ನು ಬರೆದ ರೀತಿ ಅದನ್ನು ಸಾಮಾನ್ಯವಾಗಿಸಲು ಬಿಡುವುದಿಲ್ಲ. ಇಡೀ ಕವಿತೆಯನ್ನು ತಿದ್ದಿ ತೀಡಿ ಎಷ್ಟು ನಾಜೂಕುಗೊಳಿಸಿದ್ದಾರೆ ಎಂದರೆ ಥೇಟ್ ಬೆಣ್ಣೆ ಚಕ್ಕುಲಿಯ ಹಾಗೆ.
ಒಂದು ಮಿಳ್ಳೆ ಬೆಣ್ಣೆ ಹೆಚ್ಚು ಬಿದ್ದ ಚಕ್ಕುಲಿ ಹಿಟ್ಟನ್ನು ನಾದಿ ನಾದಿ ಚಕ್ಕುಲಿ ಮಾಡಿದ ನಂತರ ತಟ್ಟೆಯಲ್ಲಿಟ್ಟರೆ ಕೈಯ್ಯಲ್ಲಿ ನಾಜೂಕಾಗಿ ಹಿಡಿದರೂ ಮುರಿದು ಹೋಗುತ್ತದೆಯೇನೋ ಎಂದು ಭಾಸವಾಗುವಂತೆಯೇ ಈ ಅವಳ ಕವಿತೆಗಳೂ ಕೂಡ. ಗಟ್ಟಿಯಾಗಿ ಓದಿದರೂ ಧ್ಯಾನಕ್ಕೆ ಭಂಗ ಉಂಟಾಗುತ್ತದೆಯೇನೋ ಎಂಬ ಭಾವನೆ ಹುಟ್ಟಿಸುತ್ತದೆ. ಅಷ್ಟೊಂದು ನವಿರು, ಅಷ್ಟೊಂದು ಸಂವೇದನಾಶೀಲ,
 ಸ್ತ್ರೀ ಸಂವೇದನೆಗಳು ಎಂದರೆ ಎರಡು ಅಲಗಿನ ಚೂರಿಯಿದ್ದಂತೆ. ಹೇಗೆ ಮಾತನಾಡಿದರೂ, ಏನನ್ನೇ ಹೇಳಿದರೂ ಕೊಯ್ಯುವುದು ತಪ್ಪುವುದಿಲ್ಲ. ಸಾಂಪ್ರದಾಯಿಕವಾಗಿ ಹೆಣ್ತನದ ನೆಲೆಗಳನ್ನು ಬರೆದರೂ ಅಲ್ಲೊಂದು ಗೀರು ಗಾಯ, ಆಧುನಿಕ ನೆಲಗಟ್ಟಿನಲ್ಲಿ ನಿಂತು ಯೋಚಿಸಿದರೂ ಇಲ್ಲಿಯೂ ಒಂದು ಚಿಕ್ಕ ರಕ್ತ ಒಸರುವ ಗಾಯ. ಹೀಗಾಗಿ ಹೆಣ್ಣಿನ ಸಂವೇದನೆಯನ್ನು ಚಿತ್ರಿಸುವುದೆಂದರೆ ಅದೊಂದು ಧ್ಯಾನವೇ ಆಗಬೇಕು. ಮೂರ್ತದಿಂದ ಅಮೂರ್ತದೆಡೆಗೆ ಚಲಿಸುವಂತೆ ನಮ್ಮ ಮನಸ್ಸನ್ನು ನಾವೇ ಒತ್ತಡಕ್ಕೆ ಸಿಲುಕಿಸಿಕೊಳ್ಳಬೇಕು. ಹೀಗಾಗಿಯೇ ಹೆಣ್ಣಿನ ವಿಷಯಗಳನ್ನು ಒಂದಿಡಿ ಸಂಕಲನಕ್ಕಾಗುವಷ್ಟನ್ನು ಕಟ್ಟಿಕೊಡಬೇಕಾದ ಸಂದರ್ಭದಲ್ಲಿ ದುಡಿಸಿಕೊಳ್ಳಬೇಕಾದ ವಿಭಿನ್ನತೆಗಳು ಕೆಲವೊಮ್ಮೆ ವಿಪರೀತ ಗೊಂದಲಕ್ಕೆ ಸಿಲುಕಿಸುತ್ತದೆ.
ಹಾಗೆ ನೋಡಿದರೆ ಬಹಳಷ್ಟು ಕವಿಗಳ ಕವನ ಸಂಕಲನದ ಒಂದೆರಡು ಕವಿತೆಗಳನ್ನು ಓದಿದ ನಂತರ ಹೆಚ್ಚಿನವು ಅದೇ ದಾಟಿಯಲ್ಲಿ ಮುಂದುವರೆದು ಏಕತಾನತೆ ಎನ್ನಿಸಿ ಬಿಡುತ್ತದೆ. ಹೀಗಾದಾಗ  ಒಂದೇ ವಿಷಯಕ್ಕೆ ಒಂದಿಡೀ ಸಂಕಲನ ಬರೆಯುವಾಗ ಬಹಳಷ್ಟು ಭಾವಗಳು ಮತ್ತೆ ಮತ್ತೆ ಅಲ್ಲಲ್ಲಿ ಇಣುಕುವುದು ಅಸಹಜವೇನಲ್ಲ. ಆದರೆ ಅವಳ ಕವಿತೆಗಳು ಇಂತಹ ಏಕತಾನತೆಯನ್ನು ಮೀರಲೆಂಬಂತೆ ಹಲವಾರು ತಂತ್ರಗಳನ್ನು ತನ್ನೊಳಗೆ ಹುದುಗಿಸಿಕೊಂಡಿದೆ. ಹೀಗಾಗಿಯೇ ಈ ಕವನ ಸಂಕಲನ ಒಂದು ಕವಿತೆಯ ನಂತರ ಬರುವ ಮತ್ತೊಂದು ಕವಿತೆಯು ಅದರ ಮುಂದುವರಿದ ಭಾಗವೇನೋ ಎಂಬಂತೆ ಖಂಡ ಕಾವ್ಯದಂತೆ ಭಾಸವಾಗುತ್ತದೆ. ಆದ್ದರಿಂದಲೇ

ಹೆಣ್ಣು ಎಂದರೆ
ಮಣ್ಣಲ್ಲಿ ಅವಿತಿಟ್ಟುಕೊಂಡ ಬೇರು
ಒರತೆ ನೀರು
ಸದಾ ಮಿಡಿವ ಜೀವ ಚೇತನ
ನನ್ನ ಅವ್ವ ಪ್ರೇಯಸಿ, ಸೃಜನಶೀಲತೆ ಮತ್ತು ನನ್ನ ಕವಿತೆ

ಎನ್ನುವುದು ಹೆಣ್ಣು ಎಂದೂ ಬತ್ತದ ಜೀವದೊರತೆಯಾಗಿರುವುದಷ್ಟೇ ಅಲ್ಲ ಅದೆಷ್ಟು ಶತಮಾನ ಕಳೆದರೂ ಕವಿಗಳಿಗೆ ಸ್ಪೂರ್ತಿಯಾಗಿಯೇ ಇರುತ್ತಾಳೆ ಎಂಬುದನ್ನು ಪ್ರತಿಪಾದಿಸುತ್ತಾರೆ.
ದೊಡ್ಡ ನಗೆಯ, ಯಾವಾಗಲೂ ಖುಷಿಯಾಗಿರುವಂತೆ ಕಾಣುವ  ತನ್ನ ಸುತ್ತಲೂ ಸಂತಸವನ್ನು ಹರಡುವ ಹೆಣ್ಣೊಬ್ಬಳು ಆಂತರ್ಯದಲ್ಲಿ ಅಷ್ಟೇ ಖುಷಿಯಾಗಿರುತ್ತಾಳೆಯೇ? ನಾನು ಇದನ್ನು ಪದೇ ಪದೇ ಕೇಳಿಕೊಳ್ಳುತ್ತೇನೆ. ಬೇರೆಯವರ ಉದಾಹರಣೆ ಬಿಡಿ, ನಮ್ಮನ್ನೇ ನಾವು ಒಮ್ಮೆ ಈ ಪ್ರಶ್ನೆಯನ್ನು ಕೇಳಿಕೊಳ್ಳಲು ಇದು ಸಕಾಲ. ಒಂದಿಷ್ಟು ನೋವಿದ್ದಾಗ ತೀರಾ ಮೌನಿಯಾಗುವ ನಾನು, ಮನದ ನೋವು ಸಹಿಸಲಾಗುವುದಿಲ್ಲ ಎಂದೆನಿಸಿದಾಗಲೆಲ್ಲ ವಿಪರೀತ ಮಾತಿಗೆ, ನಗುವಿಗೆ ಶರಣಾಗುತ್ತೇನೆ.
ಯಾರ್ಯಾರೋ ಹಳೆಯ ಸ್ನೇಹಿತರನ್ನು ಹುಡುಕಿ ಮಾತಿಗೆಳೆಯುತ್ತೇನೆ, ಹಿಂದಿನ ಕಥೆಗಳನ್ನು ನೆನಪಿಸಿಕೊಂಡು ಬಾರದ ನಗೆಯನ್ನು ಅಬ್ಬರಿಸಿ ನಗುತ್ತೇನೆ. ಎಲ್ಲಾ ಹೆಣ್ಣುಗಳ ಕಥೆಯೂ ಇದೆ. ಕೋಪ ತೋರಿಸಿಕೊಳ್ಳುವಂತಿಲ್ಲ. ಎದುರು ಮಾತನಾಡುವಂತಿಲ್ಲ. ಏನೇ ಹೇಳಿದರೂ ಕೇಳಿಸಿಕೊಂಡು ಸುಮ್ಮನಾಗಬೇಕು. ಒಂದು ಮಾತನಾಡಿದರೆ ಸಂಸ್ಕಾರವೇ ಕಲಿಯದ ಗಂಡುಬೀರಿ. ಅರ್ಧ ಮಾತನಾಡಿದರೆ ಅಪ್ಪನ ಮನೆಯವರಿಗೆ ಮಾತೇ ಕಲಿಸದ ಅಪವಾದ. ಆದರೆ ನಮ್ಮ ಅದೃಷ್ಟಕ್ಕೆ ರುದ್ರೇಶ್ವರ ಸ್ವಾಮಿಯವರ ‘ಅವಳು’ ತನ್ನೆಲ್ಲ ಕೋಪವನ್ನು ಸಿಟ್ಟು ಸೆಡವುಗಳನ್ನು ಎಗ್ಗಿಲ್ಲದೇ ಪ್ರದರ್ಶಿಸುತ್ತಾಳೆ.  ಆ ಮಟ್ಟಿಗೆ ಅವಳು ನಮ್ಮೆಲ್ಲರಿಗೂ ಒಂದು ಸಮಾಧಾನಕರ ಆಶಾಕಿರಣವಾಗಿ ಗೋಚರಿಸುತ್ತಾಳೆ. ಅಡುಗೆ ಮನೆಯಲ್ಲಿ ಏನು ಮಾಡುತ್ತಿರುವೆ ತನಗೆ ವಿಪರೀತ ಹಸಿವು ಎಂದು ಕವಿ ಹೇಳಿದರೆ
“ಥೂ- ಹಾಳಾದ ಗಂಡಸರು,
ಯಾವಾಗಲೂ ಹಸಿವೆ ಇವಕ್ಕೆ
ಎಂದು ಜೋರು ಧ್ವನಿಯಲ್ಲಿ ಕೂಗಿ ರೇಗಾಡುತ್ತ  ಮೂದಲಿಸುವ ಅವಳುಅಷ್ಟಕ್ಕೇ ನಿಲ್ಲದೇ
“ಗಪಗಪನೆ ತಿನ್ನುತ್ತವೆ
ರುಚಿ ಕೂಡ ನೋಡದೇ
ಎಂದು ಗೊಣಗಿ ಇಡೀ ಗಂಡಸು ಕುಲವನ್ನೇ ಹಂಗಿಸಿ ಬಿಡುವಷ್ಟು ಧೈರ್ಯ ಅವಳಿಗಿದೆ.  
ಇವತ್ತು ಯಾಕೋ ಮೀನು ಸಾರು ರುಚಿನೇ ಆಗಲಿಲ್ಲ…. ಆಗಾಗ ಇವರು ಗೊಣಗುಟ್ಟುವುದಿದೆ.  ಹಾಗಂತ ಸಾರು ತುಂಬಾ ರುಚಿಯಾದ ದಿನ ಒಂದು ಹೊಗಳಿಕೆಯ ಮಾತೂ ಬರುವುದಿಲ್ಲ. “ಸಾರು ಚೆನ್ನಾಗಿ ಆಗಿದೆ ಅಲ್ವಾ….?”  ಅಂತೇನಾದರೂ ನಾನು ಕೇಳಿದರೆ ಬರಿದೇ “ಹ್ಞೂಂ….” ಎಂಬ ಒಂದುವರೆ ಅಕ್ಷರದ ಉತ್ತರ. “ಚೆನ್ನಾಗಿಲ್ಲದ ದಿನ ಬೇಸರದ ಧ್ವನಿಯಲ್ಲಿ ಚೆನ್ನಾಗಿಲ್ಲ ಎಂದು ಊರೆಲ್ಲ ತಿಳಿಯುವಂತೆ ಹೇಳುವವರು ಚೆನ್ನಾಗಿರುವ ದಿನ ಒಂದಿಷ್ಟು ಖುಷಿಯ ಧ್ವನಿಯಲ್ಲಿ ಚೆನ್ನಾಗಿದೆ ಎಂದರೆ ಗಂಟೇನು ಕರಗಿ ಹೋಗುತ್ತಾ?” ನಾನು ಗೊಣಗುತ್ತೇನೆ.
“ಎರಡು ಸಲ ಅನ್ನ ಹಾಕಿಕೊಂಡರೆ ನೀನು ಅರ್ಥ ಮಾಡಿಕೊಳ್ಳಬೇಕಪ್ಪಾ, ಸಾರು ಚೆನ್ನಾಗಿದೆ ಅಂತಾ…” ಎಲ್ಲಾ ಗಂಡಸರ ಮಾಮೂಲಿ ಉತ್ತರವೇ ನನಗೂ ಸಿಗುತ್ತದೆ,
“ಗಡಿಬಿಡಿಯಲ್ಲಿ ಉಟ ಮುಗಿಸಿದಾಗ ಸಾರು ಚೆನ್ನಾಗಿಲ್ಲ ಅಂತಾ ನಾನೇ ಅರ್ಥ ಮಾಡ್ಕೋತಿನಿ. ಆಗೆಲ್ಲ ಒತ್ತೀ ಒತ್ತಿ  ಹೇಳೋದ್ಯಾಕೆ….?” ನನ್ನ ಗೊಣಗಾಟ ಕೇಳಿಸಿಯೂ ಕೇಳಿಸದಂತಿರುವ ಧ್ವನಿಗೆ ಇಳಿಸುತ್ತೇನೆ.
ಇತ್ತೀಚೆಗೆ ಮಗನೂ “ಇವತ್ತು ಸಾರು ಯಾಕೋ  ತೀರಾ ತೆಳ್ಳಗೆ…….”
ಮೀನು ಪ್ರೈ ಯಾಕೋ ಖಡಕ್ ಆಗಿಲ್ಲ……”
ಉಪ್ಪು ಕಡಿಮೆ ಆಗಿದೆ, ನನಗೆ ಊಟ ಬೇಡ…
ಎನ್ನುವ ಮಾತುಗಳನ್ನೆಲ್ಲ ನಿಧಾನಕ್ಕೆ ರೂಢಿಸಿಕೊಳ್ಳುತ್ತಿರುವಾಗ “ಇಷ್ಟು ದಿನ ಅಪ್ಪನದ್ದಾಯಿತು. ಈಗ ಮಗನ ಪಾಳಿ” ಎಂದು ಅಪ್ಪ ಕೈ ತೊಳೆಯಲು ಎದ್ದು ಹೋದ ನಂತರ ಅವನ ತೋಳು ತಿವಿಯುತ್ತೇನೆ.
“ಅಮ್ಮ ಏನೇ ಮಾಡಿಕೊಟ್ಟರೂ ರುಚಿನೇ….” ಎಂದು ಮುಗ್ಧವಾಗಿ ಹೇಳುವ ಚಿಕ್ಕ ಮಗನಿಗೆ
“ಅಣ್ಣ ಗೊಣಗಾಟ ಪ್ರಾರಂಭಿಸಿದ. ಇನ್ನು ನೀನ್ಯಾವಾಗ ಅಮ್ಮನ ಮೇಲೆ ಅಪವಾದ ಹೊರೆಸುವುದು…? ನೀನೂ ಜಾಸ್ತಿ ತಡ ಮಾಡಬೇಡ ಬೇಗನೆ ಪ್ರಾರಂಭಿಸು” ಎಂದು  ಮಾತಿನಲ್ಲೇ ಚುಚ್ಚುತ್ತೇನೆ. ಅವಳ ಕವಿತೆಯಲ್ಲಿ
“ಯಾರು ಬಂದಿದ್ದರು?
ಟ್ರೆಯಲ್ಲಿ ಚಹಾದ ಕಪ್ಪಿದೆ
ಚಹಾದ ಕೆಟ್ಲುವಿನಲ್ಲಿ
ಇನ್ನೂ ಚಹಾ
ಇದೆ ಎಂದು ಕೇಳುತ್ತಾನೆ. ಅಪ್ಪನದಾಯಿತು
ಈಗ ಇವನ ಸರದಿ
ಇಂತಹ ಗೊಣಗಾಟಗಳು ಕೇವಲ ಅವಳದ್ದಲ್ಲ, ನನ್ನದಷ್ಟೇ ಅಲ್ಲ…ಬಹುತೇಕ ಎಲ್ಲ ಗೃಹಿಣಿಯರದ್ದೂ. ಅದರಲ್ಲೂ ಮನೆವಾರ್ತೆಯನ್ನಷ್ಟೇ ನೋಡಿಕೊಳ್ಳುವ ಹೆಣ್ಣಾದರಂತೂ ಮುಗಿದೇ ಹೋಯಿತು.
“ಮಾಡೋಕೆ ಬೇರೆ ಕೆಲಸ ಏನಿದೆ? ತಂದು ಹಾಕಿದ್ದನ್ನು ರುಚಿ ರುಚಿಯಾಗಿ ಮಾಡಿ ಹಾಕುವುದಕ್ಕೂ ಮೈ ಭಾರವೇ?ಕುಳಿತು ತಿನ್ನುವುದಷ್ಟೇ ಕೆಲಸವೇ?” ಎಂಬೆಲ್ಲ ಮೂದಲಿಕೆಗಳು ಸದಾ ಸಿದ್ಧವಾಗಿರುವುದನ್ನು ನಾನು ಬಹಳಷ್ಟು ಗೆಳತಿಯರ ಬದುಕಿನಲ್ಲಿ ನೋಡಿದ್ದೇನೆ.
ಅಮ್ಮಾ ಇಡೀ ದಿನ ಮನೆಲಿರ್ತೀಯಾ. ನಾವು ಬರುವಾಗ ರುಚಿ ರುಚಿಯಾಗಿ ಏನಾದರೂ ತಿಂಡಿ ಮಾಡಿರಬಾರದೇ? ಬರೇ ಉಪ್ಪಿಟ್ಟು… “ ಎಂದು ತಟ್ಟೆ ಬಿಸಾಡಿ ಹೋಗುವ ಮಕ್ಕಳನ್ನೂ ಗಮನಿಸಿದ್ದೇನೆ.
ಆದರೆ
ಮತ್ತೆ ಚಹಾ ಬಿಸಿ ಮಾಡಬೇಕು
ತಣ್ಣಗಾಗಿದೆ , ನನ್ನ ಬದುಕಿನಂತೆ……
ಎನ್ನುವ ಅವಳು ಎಲ್ಲ ಸ್ತ್ರೀ ಕುಲದ ಪ್ರತಿರೂಪವೆಂಬಂತೆ ಗೋಚರಿಸುತ್ತಾಳೆ. ¨ಬಾಲ್ಯದಲ್ಲಿ ತಂದೆಯ ನಿಯಂತ್ರಣದಲ್ಲೂ, ಯೌವ್ವನದಲ್ಲಿ ಗಂಡನ ಆಡಳಿತಕ್ಕೆ ಒಳಪಟ್ಟು,  ಮುಪ್ಪಿನಲ್ಲಿ ಮಕ್ಕಳ ಆಧೀನದಲ್ಲೂ ಇರಬೇಕಾದ ಸಂಸ್ಕೃತಿಯಲ್ಲವೇ ನಮ್ಮದು? ಹೀಗಾಗಿ ಇನ್ನೇನು ವಯಸ್ಸಾಯಿತು, ವಯಸ್ಸಿನ ಕಾರಣದಿಂದಾಗಿ ಗಂಡ ಕೂಡ ಮೆತ್ತಗಾಗಿದ್ದಾನೆ. ಅವನ ಮೂದಲಿಕೆ, ಹೀಯಾಳಿಕೆ, ಸಾರ್ವಭೌಮತ್ವ  ಮುಗಿಯುತ್ತ ಬಂತು ಎಂದು ಸಮಾಧಾನ ಪಟ್ಟುಕೊಳ್ಳುವಷ್ಟರಲ್ಲಿ ಮಗ ಎಂಬ ಗಂಡಸು ನಮ್ಮ ಮನಸ್ಸಿನ ಮೇಲೆ, ನಮ್ಮ ಚಟುವಟಿಕೆಯ ಮೇಲೆ, ನಿಯಂತ್ರಣ ಸಾಧಿಸುವುದಕ್ಕೆ ತೊಡಗುತ್ತಾನೆ. ಪುರುಷ ಸಂಬಂಧಗಳು ಎಂಬುದು ಸ್ತ್ರೀಗೆ ಸದಾ ಬೆಂಗಾವಲಂತೆ ಗೋಚರಿಸಿದರೂ ಅದೊಂದು  ಹೇರಿಕೆಯಾಗಷ್ಟೇ ಉಳಿದು ಬಿಡುವ ಅಪಾಯವನ್ನು ಸೂಕ್ಷ್ಮವಾಗಿ ಧ್ವನಿಸುತ್ತಾರೆ.
ಹೆಣ್ಣು ಮತ್ತು ಗಂಡಿನ ನಡುವಣ ಸಂಬಂಧಕ್ಕೆ ಅಣ್ಣ, ತಮ್ಮ, ಅಪ್ಪ, ಗೆಳೆಯ, ಪ್ರೇಮಿ, ಗುರು ಎಂಬಂತಹ ಒಂದು ನಿರ್ಧಿಷ್ಟ ಹೆಸರು ಬೇಕೇ? ಅಂತಹುದ್ದೊಂದು ನಿರ್ದಿಷ್ಟ ಹೆಸರುಗಳಿಲ್ಲದ ಆತ್ಮೀಯ ಸಂಬಂಧವೊಂದು ಯಾಕೆ ಸಾದ್ಯವಿಲ್ಲ?  ಅವನು ಎಂದರೆ ಅಣ್ಣ, ತಂದೆ, ಪ್ರಿಯಕರ, ಅಥವಾ ಗಂಡನೇ ಯಾಕಾಗಬೇಕು? ಬಹುಶಃ ಇಂತಹ ಹೆಸರೇ ಬೇಕಿಲ್ಲದ ಒಂದು ಆತ್ಮಬಂಧು ಪ್ರತಿಯೊಬ್ಬ ಹೆಣ್ಣಿನ ಮನದಾಳದ ಬಯಕೆ.
ಅಂತಹ ನಿಜವಾದ ಸಂಬಂಧವೊಂದು ದೊರಕಿದರೆ ಅವಳಷ್ಟು ಅದೃಷ್ಟವಂತರು ಮತ್ಯಾರಿದ್ದಾರೆ?  ಕವಿಗೂ ಅವಳಿಗೊಬ್ಬ ಅಂತಹ ಹೆಸರೇ ಬೇಕಿಲ್ಲದ ಸಂಬಂಧವೊಂದು ಬೇಕಿತ್ತು ಎಂಬುದನ್ನು ಗ್ರಹಿಸುತ್ತಾರಾದರೂ, ಆಕೆಗದು ಕನವರಿಕೆಯೇ. ಆದರೆ ಮಗಳು ತನು ಮಾತ್ರ, ತಿಂಗಳ ಮೇಲೆ ವಾರ ಕಳೆದರೂ ಸಂಜೆ ಬರುವ ಗೂಸ್ಲುವಿನ ಜೊತೆಗೆ ಮದುವೆ ಗಿದುವೆ ಏನಿಲ್ಲ ಎಂದು ನಿರ್ಭೀಡೆಯಿಂದ ಅಮ್ಮನಿಗೆ ಹೇಳುತ್ತಾಳೆ. ಅಮ್ಮ ಒಂದು ಕ್ಷಣ ಆಘಾತಕ್ಕೊಳಗಾದರೂ ತನಗಿಲ್ಲದ ಸ್ವಾತಂತ್ರ್ಯ ಮಗಳಿಗೆ ಲಭಿಸಿದ್ದಕ್ಕೆ ಸಮಾಧಾನಗೊಳ್ಳುತ್ತಾಳೆಯೇ? ಪ್ರಶ್ನೆಯೊಂದು ಹಾಗಿಯೇ ಉಳಿದು ಬಿಡುತ್ತದೆ.
ಇರಬೇಕು ಅಮದು ಕೊಂಡಿದ್ದೆವು
ಇಬ್ಬರು
ಸಹಯಾತ್ರಿಗಳು ಇದ್ದ ಹಾಗೆ, ಒಂದೇ
ರಸ್ತೆಯಲ್ಲಿ ನಡೆಯುತ್ತಿದ್ದರೂ
ಕಟ್ಟುಪಾಡಿಲ್ಲದ, ಬಂಧನ
ಬೀತಿಯಿಲ್ಲದ
ಮಾತು ಕೊಡಬೇಕಿಲ್ಲದ, ನಿರೀಕ್ಷೆ-
ಗಳಿಲ್ಲದ ಬದುಕು
ಬಾಳಬೇಕು ಎಂದು-
ಕೊಂಡಿದ್ದೆವು
ಎನ್ನುವಲ್ಲಿಯೂ ಕೂಡ ಇಂತಹುದ್ದೇ ಒಂದು ಹೆಸರೇ ಬೇಕಿಲ್ಲದ ಸಂಬಂಧದ ಸುಳಿವನ್ನು ನೀಡುತ್ತದೆ. ಓದುಗರಲ್ಲಿಯೂ ಅದನ್ನು ಕನವರಿಸುವಂತೆ ಮಾಡುತ್ತದೆ.
ಚಂದವಾಗಿ
ಮಾತೂ ಆಡುತ್ತಾನೆ
ನಿಮ್ಮ ಹಾಗೆ ಒಂಟಿ ಬಡಕ
ಅಲ್ಲೇಂದು
ಚುಚ್ಚಿದಳು..
….
 
ಇಡೀ ರಾತ್ರಿ ಅವನು ಪುಸ್ತಕ
ಗಳ ಜೊತೆ ಮಲಗುವುದಿಲ್ಲ
ಎನ್ನುವ ಮಾತು ಕೂಡ ಅದೇನೋ ಆಪ್ತ ಸಂಬಂಧವೊಂದನ್ನು ಸೂಚಿಸುತ್ತದೆ. ಆತ ಗಂಡ ಅಲ್ಲ, ಪ್ರಿಯಕರನೂ ಅಲ್ಲ… ಹೆಸರಿರುವ ಯಾವ ಸಂಬಂಧವೂ ಅಲ್ಲ. ಅವನು ಕೇವಲ ಅವನು ಅಷ್ಟೆ.
ಆದರೂ ತಾನು ಕಳೆದು ಕೊಂಡ ತನ್ನ ಮನಸನ್ನು ನಿಯಮಿತವಾಗಿಯಲ್ಲದಿದ್ದರೂ ಆಗಾಗ್ಗೆ ಬಿಚ್ಚಿಡುವ ಡೈರಿಗಾಗಿ ಹುಡುಕುವ ಅವಳಿಗೆ ಅದೊಂದು ಅಮೂಲ್ಯವಾದ ಆಸ್ತಿ. ಯಾರೂ ನೋಡದ, ನೋಡಲೂ ಬಾರದ ಆದರೆ ತನಗೆ ಬೇಕಾದ ಡೈರಿಯ ಬಗ್ಗೆ  ಎರಡು ಕವನಗಳಿವೆ.
ಕಳೆದು ಹೋದ
ಪುಸ್ತಕದಲ್ಲಿ ಬರೀ ಅವನ ಬಗ್ಗೆ
ಅವನ ಅಫೇರ್ ಬಗ್ಗೇನೇ
ಬರೆದದ್ದು. ಅದು ಹೇಗೆ
ಮಿಸ್ ಪ್ಲೇಸ್
ಆಯ್ತು ಗೊತ್ತಾಗ್ತಿಲ್ಲ ! ಇನ್ನೂ
ಹುಡುಕ್ತಿದ್ದೀನಿ ಅದನ್ನು
ಎಂದು ಒಂದು ಕಡೆ ಬರೆಯುತ್ತಾರೆ. ಅವನ ಅಫೇರ್ ಗಳ ಬಗ್ಗೆ ಬರದು ಜೋಪಾನ ಮಾಡಿದ ನೋಟ್ ಬುಕ್ ಪ್ರೇಮಿಗಳ ದಿನದ ನೆನಪಿನ ಕುರುಹಾಗಿ ಮೆಲಕು ಹಾಕಲು ಬೇಕೇ ಬೇಕು ಎಂಬ ಚಹಾ ತಂಪಾದ ಭಾವದೊಂದಿಗಿದ್ದರೆ , ಇದೇ ರಿತಿಯ ಮತ್ತೊಂದು ಪುಸ್ತಕದಲ್ಲಿ  
ನನ್ನದೂ ಅಂತ ಇದ್ದದ್ದು
ಅದೊಂದೇ…..
ನಿಮ್ಮ ರಾಶಿ – ರಾಶಿ ಪುಸ್ತಕಗಳಲ್ಲಿ
ಒಂದೇ ಒಂದು ಪುಸ್ತಕ
ಅತ್ತಿತ್ತಾಗದಂತೆ ನೋಡಿ-
ಕೊಂಡಿದ್ದೇನೆ
ನನ್ನದು ಅದೊಂದೆ ಇದ್ದದ್ದು, ಒಂದು
ಸಣ್ಣ ನೊಟ್ ಬುಕ್
ಯಾರ ಕೈಗೂ ಸಿಗದಂತೆ ಎತ್ತಿಟ್ಟಿದ್ದ ಆ ನೋಟ್ ಬುಕ್ ನ್ನು ಯಾವುದೋ ಅಮೂಲ್ಯ ವಸ್ತುವನ್ನು ಕಳೆದು ಕೊಂಡಂತೆ ಆಕೆ ದಿನವಿಡೀ ಹುಡುಕುತ್ತಿದ್ದರೂ ಆತ ಮಾತ್ರ ಅದಾವುದೂ ತನಗೆ ಸಂಬಂಧಿಸಿದ್ದಲ್ಲ ಎಂಬಂತೆ ಕೈಯ್ಯಲ್ಲೊಂದು ಪುಸ್ತಕ ಹಿಡಿದು ಕುಳಿತಿದ್ದಾನೆ. ಸೋತು ಹೋದ ಆಕೆ ತನ್ನ ಅಳಲನ್ನು ಕೇಳುವವರು ಯಾರೂ ಇಲ್ಲವೆಂಬ ನೋವಿನಲ್ಲಿ ಅಕ್ವೇರಿಯಂ ಬಳಿ ನಿಂತುಕೊಂಡು ಅಲ್ಲಿಯೂ ತನ್ನಂತೆ ಒಂಟಿಯಾಗಿ, ಹೊರಗಿನ ಗಾಳಿಗೆ ಮೈಯೊಡ್ಡುವುದನ್ನು ತಿಳಿಯದ, ಕಡಲ ಹಾದಿಯನ್ನು ಮರೆತು ಬಿಟ್ಟಿರುವ ಮೀನಿಗೆ  ಹೊಸ ನೋಟ್ ಬುಕ್ ನ್ನು ಖರೀದಿಸಿ ಮತ್ತೆ ಎಲ್ಲವನ್ನೂ ಕೇವಲ ತನಗೋಸ್ಕರ ಹೊಸದಾಗಿ ಬರೆಯುವ ತೀರ್ಮಾನವನ್ನು ಹೇಳುವ ಅವಳು ಹೊಸ ಲೋಕಕ್ಕೆ ರೆಕ್ಕೆ ಕಟ್ಟಿಕೊಂಡು ಹಾರುವ ಬೆಳ್ಳಿ ತಾರೆಯಂತೆ ಗೋಚರಿಸುತ್ತಾಳೆ,
ಸುಂದರ ಬಣ್ಣದ
ನೂಲಿನಿಂದ
ನೇಯ್ದದ್ದು. ಎಲ್ಲ ಕಡೆ ಕಸೂತಿ
ಚಿತ್ರ. ಅಂಚು ಅಂಚಿಗೆ
ಜರಿ,
ಎನ್ನುವ ಸಾಲುಗಳ  ಹೆಣ್ಣಿನ ಬದುಕು ಬಣ್ಣದ ನೂಲಿನ ಕಸೂತಿಯ ಹೆಣಿಕೆಯೇನೋ ಅನ್ನಿಸಿ ಬಿಡುತ್ತದೆ.
ನಾನು ಎರಡು ಮೂರನೆ ತರಗತಿಯಲ್ಲಿರುವಾಗ ಅಮ್ಮ ಚಂದದ ಕಸೂತಿ ಹೆಣೆಯುತ್ತಿದ್ದರು.  ಬಟ್ಟೆಯ ಆರಾಂ ಖುರ್ಚಿಯ ಹಿಂಬದಿಗೆ ಚಂದದ ಹಸಿರು ಮೇಟಿ ಬಟ್ಟೆಯಲ್ಲಿ ನೇಯ್ದ ತಾಜಮಹಲ್ ರೂಪುಗೊಳ್ಳುತ್ತಿತ್ತು. ಅಮ್ಮನ ಕಾಲ ಮೇಲೆ ಮಲಗಿಕೊಂಡು ಕಥೆ ಕೇಳುತ್ತ ಅವಳು ಹಾಕುವ ಕಸೂತಿ ನೋಡುತ್ತಿದ್ದ ನಾನು ಅದೊಂದು ರಾತ್ರಿ ಏಕಾ ಏಕಿ ನಾನೂ ಕಸೂತಿ ಹಾಕುತ್ತೇನೆ ಎಂದು ಘೋಷಿಸಿ ಬಿಟ್ಟಿದ್ದೆ.
ಒಂದು ಕ್ಷಣ ನನ್ನ ಮುಖ ನೋಡಿದ ಅಮ್ಮ ಮಾಮೂಲಿಯಾಗಿ ಇದು ನಾಲ್ಕು ದಿನದ ಉಮ್ಮೇದಿ ಎಂದುಕೊಂಡು “ಸರಿ ಸರಿ … ಇದನ್ನೇ ಹೇಳಿಕೊಡುತ್ತೇನೆ ಬಾ..” ಎಂದಿದ್ದರು. ಖಡಾಖಂಡಿತವಾಗಿ ನಿರಾಕರಿಸಿ ನನಗೊಂದು ಕಸೂತಿ ಬಟ್ಟೆಯನ್ನು ತಂದುಕೊಡು ಎಂದು ಹಠ ಹಿಡಿದು ಬಿಟ್ಟಿದ್ದೆ. ಹಿಂದೊಮ್ಮೆ ಬಾಗಿಲ ಪರದೆ ಮಾಡಿ ಹೆಚ್ಚುಳಿದಿದ್ದ ಬಟ್ಟೆಯನ್ನು ಚೌಕಾಕಾರವಾಗಿ ಕತ್ತರಿಸಿ  ಬಣ್ಣದ ದಾರ ಕೊಟ್ಟು ಹೂವು ಬಿಡಿಸುವುದನ್ನು ಹೇಳಿ ಕೊಟ್ಟಿದ್ದಳು.
ಕೆಲವೇ ದಿನಗಳಲ್ಲಿ ಒಂದು ಚಿಕ್ಕ ಚೌಕಾಕಾರದ ಚಂದನೆಯ ಹೂಗಳಿರುವ ಕಸೂತಿ ಮಾಡಿ, ಅದಕ್ಕೆ ಪಕ್ಕದ ಮನೆಯ ಬಾಲವಾಡಿ ಟೀಚರ್ ರಿಂದ ಝರಿ ಅಂಚು ಹೊಲೆಸಿ, ನಾಲ್ಕೂ ಮೂಲೆಗೆ ಕುಚ್ಚು ಕಟ್ಟಿ ಮೂಲೆಯಲ್ಲಿ ರಾಜಠೀವಿಯಿಂದ ಕುಳಿತಿದ್ದ ಟೆಲಿಫೋನ್ ಗೆ ಹೊದೆಸಿದ್ದೆ. ನನ್ನ ಮಗಳು ಎಷ್ಟು ಚಂದದ ಕಸೂತಿ ಮಾಡಿದ್ದಾಳೆ ನೋಡಿ ಎನ್ನುತ್ತ ಅಪ್ಪ ಬಂದವರಿಗೆಲ್ಲ ತೋರಿಸುತ್ತಿದ್ದ. ಅಮ್ಮ ಮಾಡಿದ ಸೂಕ್ಷ್ಮ ಹೆಣಿಗೆಯ ತಾಜ್ ಮಹಲ್ ಕಸೂತಿಗಿಂತ ನಾನು ಮಾಡಿದ ಕಸೂತಿಯೇ ಚಂದ ಎನ್ನುವಾಗಲೆಲ್ಲ ನಾನು ಅದು ನಿಜವೆಂದು ಎದೆಯುಬ್ಬಿಸಿ ಓಡಾಡುತ್ತಿದ್ದೆ.
ಆದರೆ ನಂತರ ದಿನಗಳೆದಂತೆ ಕಸೂತಿಯ ಸೂಕ್ಷ್ಮ ಹೆಣಿಗೆಯು ಕೈಗೂಡಿದಂತೆಲ್ಲ, ಅಮ್ಮ ಮಾಡುತ್ತಿದ್ದ ಆ ತಾಜ ಮಹಲ್ ಕಸೂತಿಗೆ ಅದೆಷ್ಟು ಸಹನೆ, ತಾಳ್ಮೆ ಬೇಕು ಎಂಬುದು ಅರ್ಥವಾಗಿತ್ತು. ಆದರೆ ಆ ಸೂಕ್ಷ್ಮತೆಯನ್ನು, ಸಹನೆಯನ್ನು ನಾನು ರೂಢಿಸಿಕೊಳ್ಳುವ ಮೊದಲೇ ಕಸೂತಿ ಮೇಲಿನ ನನ್ನ ಆಸಕ್ತಿ ಮುಗಿದಿತ್ತು. ಅತ್ತ ಸ್ವೆಟರ್ ಹೆಣಿಕೆಯದ್ದೂ ಅದೇ ಕಥೆ. ಉದ್ದುದ್ದ ಎರಡು ಕಡ್ಡಿಗಳನ್ನು ಹಿಡಿದು ಆಡಿಸುತ್ತ ಹೆಣೆಯುವುದು ಯಾವುದೋ ಇಂದ್ರಜಾಲದಂತೆ ಭಾಸವಾಗುವಾಗ, ಓದು, ಬರೆಹವನ್ನೆಲ್ಲ ಬಿಟ್ಟು ಉದ್ದದ ಕಡ್ಡಿಯ ಬೆನ್ನು ಬಿದ್ದಿದ್ದೆ. ತನ್ನದೇ ಕಡ್ಡಿಯಂದ ಸ್ವೆಟರ್ ಮಾಡು ಎಂದರೂ ಕೇಳದೇ ಹೊಸತೇ ಆದ ಕಡ್ಡಿಗಳನ್ನು ತರಿಸಿಕೊಂಡಿದ್ದೆ. ಆದರೆ ಒಂದು ಮಫ್ಲರ್, ಒಂದು ಸ್ವೆಟರ್ ಹಣಿಕೆ ಮುಗಿಯುವಷ್ಟರಲ್ಲಿ ಆ ಕಡ್ಡಿ ತನ್ನ ಮಾತ್ರಿಕತೆಯನ್ನು ಕಳೆದುಕೊಂಡು ಇಷ್ಟೇನಾ ಎನ್ನಿಸಿಕೊಂಡು ಮೂಲೆ ಸೇರಿತ್ತು.
“ಎಂತಾ ಹೆಣ್ಣೇ ನೀನು….? ಯಾವುದನ್ನೂ ಪೂರ್ತಿ ಮಾಡದವಳು… ಮುಂದೆ ಅದು ಹೇಗೆ ಸಂಸಾರ ಮಾಡ್ತೀಯೋ…” ಅಮ್ಮ ನನ್ನ ಒಂದೊಂದು ಸಾಹಸವೂ ಅರ್ಧಕ್ಕೆ ನಿಂತಾಗ ಹೀಗೇ ಬೈದುಕೊಳ್ಳುತ್ತಿದ್ದಳು  ಈಗ ಹಿರೆಗುತ್ತಿಯಲ್ಲಿರುವ ಕಪಾಟಿನ ಮೂಲೆಯಲ್ಲಿ ಅಡಗಿರುವ ಉಲ್ಲನ್ ದಾರ, ಸ್ವೆಟರ್ ಕಡ್ಡಿ, ಕಸೂತಿ ಬಟ್ಟೆಗಳೆಲ್ಲ ಕೆಲವೊಮ್ಮೆ ಯಾವುದೋ ವಸ್ತಗಳ ಜೊತೆ ಹೊರ ಬಂದು ನನ್ನನ್ನು ಅಣುಕಿಸುತ್ತವೆ. ಅವಳ ಕವನದಲ್ಲಿನ ಈ ಕಸೂತಿಯ ಚಿತ್ರ ಹಾಗೂ ಜರಿ ಅಂಚು ಮತ್ತೆ ನನ್ನನ್ನು ಅವಳನ್ನಾಗಿಸುತ್ತದೆ. ಅದೇ ಮೂರು- ನಾಲ್ಕನೆ ತರಗತಿಯ ಫ್ರಾಕಿನ ಹುಡುಗಿಯನ್ನು.
ಸಂಸಾರ ಎಂದರೆ ಹೆಣ್ಣಿನ ಪಾಲಿಗೆ ಎಲ್ಲವೂ. ಆದರೆ ಮನಸೊಪ್ಪದ ಸಂಸಾರದಲ್ಲೂ ಆಕೆ ಯಾವುದೇ ಅಪಸ್ವರ ಹೊರಡದಂತೆ ಶೃತಿಯನ್ನು ಕಾಪಾಡಿಕೊಳ್ಳುತ್ತಾಳೆ. ಮನಸ್ಸಿಲ್ಲದಿದ್ದರೂ, ಪ್ರೀತಿ ಸತ್ತು ಹೋದಾಗಲೂ ಏನೂ ಆಗದಂತೆ ಹಾಸಿಗೆಯಲ್ಲಿ ಸಹಕರಿಸುವ  ಹೆಣ್ಣಿಗೆ ಇರುವುದು ಕೇವಲ ಸಂಸಾರವನ್ನು ಕಾಪಿಟ್ಟುಕೊಳ್ಳುವ ಇರಾದೆ ಮಾತ್ರ.
ಕವಿತೆ ಹೇಳುತ್ತಲ್ಲ
ಪೊಸೆಸೀವ್ನೆಸ್, ಅಸೂಯೆ,
ಗಂಡಸರ ಕ್ರೌರ್ಯ
ಇದ್ಯಾವುದೂ ‘ಮಿಸ್- ಮ್ಯಾಚ್’
ಅನ್ನಿಸಿಕೊಳ್ಳಲ್ಲ. ಉಂಡು
ಜೊತೆಗೆ ಮಲಗಿದರೂ
ಹತ್ತಿರ ತರಲಾಗದ್ದು
ಒಬ್ಬಂಟಿತನ ಇದ್ದರೂ ಇಲ್ಲದ ಹಾಗೆ
ಇರೋದು, ನಿಮಗೆ
ಅರ್ಥವಾಗದ್ದು ಇಷ್ಟವಿಲ್ಲದೇ
ಇದ್ದಾಗಲೂ
ಪ್ರೀತಿ ಸತ್ತೋಗಿರುವಾಗಲೂ ಮೈಕೊಟ್ಟು
ದೂರ ಇರ್ತೀವಲ್ಲ, ಅದು……
ಈ ಮಾತು ಅದೆಷ್ಟು ಹೆಣ್ಣುಗಳ ಒಡಲಾಳದ ಮಾತುಗಳೋ… ಅದೆಷ್ಟು ಮಹಿಳೆಯರು ಇಂತಹ ಮಿಸ್ ಮ್ಯಾಚ್ ಗಳಲ್ಲಿ ನಲುಗುತ್ತಿದ್ದಾರೋ..
ಅಂದಹಾಗೆ ಪ್ರತಿ ಕವನದ ಮೊದಲು ಇಂಗ್ಲೀಷ್ ನ ಪ್ರೊವರ್ಬ ತರಹದ ಒಂದು ಅಥವಾ ಎರಡು ಸಾಲುಗಳನ್ನು ಬರೆದಿದ್ದಾರೆ. ಆ ಸಾಲುಗಳುಕವಿತೆಯ ಒಳ ಹೊಕ್ಕು ನೋಡುವುದಕ್ಕೆ, ಅವಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಅದೆಷ್ಟು ಸಹಕಾರಿ ಎಂದರೆ  ಕೆಲವೊಮ್ಮೆ ಆ ಸಾಲುಗಳೇ ಎಲ್ಲವನ್ನು ಹೇಳಿಬಿಡುತ್ತವೆ. ಮತ್ತೂ ಕೆಲವೆಡೆ ಆ ಸಾಲುಗಳು ಕವಿತೆ ಹೇಳುವುದಕ್ಕಿಂತಲೂ ಹೆಚ್ಚಿನದೇನನ್ನೋ ತನ್ನೊಡಲಲ್ಲಿ ಹುದುಗಿಸಿಕೊಂಡಿದೆ ಎಂಬ ಭಾವವನ್ನು ಹುಟ್ಟಿಸುತ್ತದೆ.
ನನ್ನ ಎರಡನೆಯ ರೌಂಡ್ ನ ಓದಿನಲ್ಲಿ  ಆ ಇಂಗ್ಲೀಷ್ ಸಾಲುಗಳನ್ನಷ್ಟೇ ಓದಿ ಮುಂದು ಹೋಗಿದ್ದೂ ಇದೆ. ಆದರೆ ನಾನು ಆ ಸಾಲುಗಳನ್ನು ಇಲ್ಲಿ ನಿಮ್ಮ ಮುಂದೆ ತೆರೆದಿಡಲಾರೆ. ನೀವೇ ಒಮ್ಮೆ ಓದಿ ಮನಸಾರೆ ಅವುಗಳನ್ನು ಆಸ್ವಾದಿಸಿ. ಕವಿತೆ ಬರೆವ ಪುಟ್ಟ ಬಿಳಿ ಹಾಳೆಯಂತಿರುವ ಅವಳು ಸಹೃದಯರ ಮನದೊಳಗೆ ಮೂಡಿದ ಭಾವನೆಗಳಿಗೆ ಅಕ್ಷರವಾಗಲಿ.

‍ಲೇಖಕರು Avadhi

July 8, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: