ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳ ಗುಂಗಿನಲ್ಲಿ..

ಹೂ ಕಂಪು ಸೂಸಿದವಳು
-ಅಜಯ್ ಅಂಗಡಿ

ಹೂ
ಹುಡುಗಿಯ
ಮುಡಿಯಲ್ಲಿ ಮಲ್ಲಿಗೆ
ಘಮಗುಡುತ ಮೆಲ್ಲಗೆ
ಕಂಪ ಸೂಸಿದೆ
ಗಾಳಿ ಬೀಸಿದಲ್ಲಿಗೆ.

ಬೀಸುವ
ಗಾಳಿಯಲ್ಲಿ ಲೀನವಾದ
ಮಲ್ಲಿಗೆಯ ಕಂಪು
ಸೀದಾ ತಲುಪಿದ್ದು
ಹೂದೋಟದ
ಚೆಲುವನಿರುವಲ್ಲಿಗೆ.

ಹೂದೋಟದಲ್ಲೇ
ಬೆಳೆದವನಿಗೆ ಹೂ
ಸುವಾಸನೆಯ ಜಾಡು
ಹಿಡಿಯುವುದು ಮನೋಗತ.

ಅರೆ! ಇದೇ ತೋಟದ ಹೂ,
ಕಂಪು ಬಂದ ಹಾದಿಯ
ಮೂಲ ಇಲ್ಲಿಯದಲ್ಲ!
ಹಾಗಾದರೆ?
ಯಾರಿರಬಹುದು ಆ ಕುಸುಮವೇಣಿ?
ಹೂ ಮನದ ರಾಣಿ!
ನೂರು ಯೋಚನೆಗಳು
ಹೂದೋಟದ ಚೆಲುವನ ಮನೋಭೂಮಿಕೆಯಲ್ಲಿ.

ಹುಡುಕಿ ಹೊರಟನವ
ನೂರು ಕನಸುಗಳ ತೇರಿನಲ್ಲಿ
ಭಾವಲೋಕದ ಹಾದಿಯಲ್ಲಿ.
ಸಿಗಲಿಲ್ಲ ಆ ಹುಡುಗಿ
ಕುಸುಮವೇಣಿ, ಹೊರಡೆಂದಿತು ಮನೋವಾಣಿ,
ಬೇಡೆಂದಿತು ಹೃದಯವಾಣಿ.

ಮನದಿಚ್ಛೆಯಂತೆ ಹೊರಡಬೇಕು
ಅನ್ನುವಾಗ ಬಂದೇಬಿಟ್ಟಳು
ಕುಸುಮವೇಣಿ ಸನಿಹದಲ್ಲೇ!
ನಿಂತು ನೋಡಿದಳು, ಮುಗುಳ್ನಕ್ಕು
ಹೂ ಪಕಳೆಗಳನೆಸೆದಳು ಅವನತ್ತ.

ಮುಗುಳ್ನಕ್ಕ ಚೆಲುವನಿಗೆ
ಮಾತೇ ಹೊರಡಲಿಲ್ಲ,
ತಿಳಿಸಿದ ಅವಳಿಗೆ
ಮೌನದಲ್ಲೇ ಎಲ್ಲ
ಬರೆದು ಪತ್ರದಲ್ಲಿ.

ರಾತ್ರಿ ಪೂರಾ ಅವಳ ಗುಂಗಿನಲ್ಲಿ
ಅವನದು ಸ್ವಪ್ನ ಸಂವಾದ.
ಮರುದಿನ ಅವಳ ಭೇಟಿಯ ತಾಣಕ್ಕೆ
ಹೋದವನಿಗಚ್ಚರಿ!
ಅಲ್ಲಿರಲಿಲ್ಲ ಸುಂದರಿ.

ಮಲ್ಲಿಗೆಯ ಪಕಳೆಗಳ ರಂಗವಲ್ಲಿ,
ಅಲಂಕೃತ ಆ ತಾಣದಲ್ಲಿ.
ನೋಡುತ್ತಾ ಮೈಮರೆತು ನಿಂತ ಹೂದೋಟದ
ಚೆಲುವನ ಕೆನ್ನೆಗೆ ಚುಂಬಿಸಿದಳು ಹೂ ಕಂಪು
ಸೂಸಿದವಳು ಅನುರಾಗದ ಹೊಸ್ತಿಲಲ್ಲಿ.

‍ಲೇಖಕರು Admin

16 November, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading