ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳೂ ದುಡ್ಡು ಕೊಟ್ಟಳು!

ಇವನ ಕಣ್ಣಿಗೆ ಅರೆನಗ್ನ ಚೆಲುವೆ ಕಾಣಲೇ ಇಲ್ಲ!

ನರಸಿಂಹರಾಜು ಬಿ ಕೆ

ಹಾದಿ ಬದಿಯಲ್ಲೊಂದು ಪುಟ್ಟ ಪೆಟ್ಟಿಗೆ ಅಂಗಡಿ
ಅದರಲ್ಲೊಬ್ಬ ಕಾಲಿಲ್ಲದವ!
ಕಾಲಿಗೆ ಚಪ್ಪಲಿಯೊಲೆಯುತ್ತಿದ್ದ!

ಕಾಲಿಲ್ಲವೆಂಬ ಕಾರಣಕ್ಕೆ
ಆ ಊರ ಶ್ರೀಮಂತರೆಲ್ಲಾ ಸೇರಿ
ಇಟ್ಟು ಕೊಟ್ಟ ಪುಟ್ಟ ಅಂಗಡಿ!

ನೆನ್ನೆಯಷ್ಟೇ ಫೇಸ್ ಬುಕ್ ವಾಟ್ಸ್ ಆಪ್ ತುಂಬೆಲ್ಲಾ
ಸೆಲ್ಫೀ ತೆಗೆದು ಹಂಚಿಕೊಂಡ
ಇವರೆಲ್ಲರ ಕಾಲಲ್ಲಿದ್ದುದು
ಬಾಟಾ ಲೀ ಲೂನಾಸ್ ನಂತಹ ಬ್ರಾಂಡೆಡ್ಡು ಷೂಗಳು!

ಅದೆಷ್ಟು ವಾಹನ ದಟ್ಟಣೆ!
ಎಲ್ಲರೂ ನನ್ನ ಅಂಗಡಿಗೆ ಬಂದಿದ್ದರೆ
ಎನ್ನುವ ಕೌತುಕ!

ಕಣ್ಣೆದುರೇ ಟ್ರಾಫೀಕು ಪೋಲೀಸು
ತಡೆದು ನಿಲ್ಲಿಸಿದರೂ ನಿಲ್ಲದ ಸವಾರರು
ತಟ್ಟನೆ ನಿಂತು ಬಿಟ್ಟರು!
ಅರೆನಗ್ನ ಚೆಲುವೆಯೊಬ್ಬಳು ರಸ್ತೆ ದಾಟುತ್ತಿದ್ದಕ್ಕೆ!

ಇವನ ಕಣ್ಣಿಗೆ ಅರೆನಗ್ನ ಚೆಲುವೆ
ಕಾಣಲೇ ಇಲ್ಲ!
ಅವನ ಕಣ್ಣಿಗೆ ಬಿದ್ದಿದ್ದು ಅವಳ ಹರಿದ ಚಪ್ಪಲಿಯಷ್ಟೇ!

ಚಪ್ಪಲಿಯ ಅಂಗಾತ ಮಲಗಿಸಿ
ಬೆನ್ನಿಗೆ ಚೂಪನೆ ಮೊಳೆಯನಿಟ್ಟು
ರಪ್ಪನೆ ಬಡಿದುಬಿಟ್ಟ!
ಚಪ್ಪಲಿ ನಕ್ಕಿತು ! ಹಣೆ ಬೆವರ ಕಕ್ಕುತ್ತಿತ್ತು!

ಅವಳೂ ದುಡ್ಡು ಕೊಟ್ಟಳು
ಕೊಟ್ಟ ದುಡ್ಡು ಚಪ್ಪಲಿ ರಿಪೇರಿಮಾಡಿದ್ದಕ್ಕಷ್ಟೇ!
ಅವಳ ಪಾದಕ್ಕಂಟಿದ ದೂಳ ಒರೆಸಿದ್ದಕ್ಕಲ್ಲ!

 

‍ಲೇಖಕರು admin

23 April, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading