ಜೋಗಿ ಬರೆದ ಕಥೆ: ಅವಳು ಸೇಡು ತೀರಿಸಿಕೊಂಡಿದ್ದಳು!

jogi2

ಗಂಡ ಹೆಂಡಿರ ನಡುವೆ ಇರುವಷ್ಟು ತಕರಾರು ಮತ್ತು ಪ್ರೀತಿ ಮತ್ಯಾರ ನಡುವೆಯೂ ಇರುವುದಕ್ಕೆ ಸಾಧ್ಯವಿಲ್ಲ ಎಂದು ಅನೇಕ ಸಾರಿ ಅನ್ನಿಸುತ್ತದೆ. ವಿಶ್ವದ ಶ್ರೇಷ್ಠ ಕೃತಿಗಳಿಂದ ಹಿಡಿದು, ಹೊಸದಾಗಿ ಬರೆಯಲು ಆರಂಭಿಸಿದವರ ಬರಹಗಳ ತನಕ ಎಲ್ಲರ ಬರಹಗಳಲ್ಲೂ ದಾಂಪತ್ಯದ ಪ್ರಸ್ತಾರ, ಪ್ರಸ್ತಾಪ, ನೆನಪು. ಪ್ರೇಮ ಕವಿಕೂಡ ಅಂತಿಮವಾಗಿ ಬಂದು ತಲುಪುವುದು ದಾಂಪತ್ಯದ ಹದವಾದ ಸ್ಥಿತಿಗೇ. ಅದು ಪ್ರೇಮಕ್ಕಿಂತ ಒಳ್ಳೆಯ ಸ್ಥಿತಿ ಅಂತ ಹೇಳುವವರ ಬಗ್ಗೆ ನನಗೆ ಅಷ್ಟಾಗಿ ನಂಬಿಕೆಯಿಲ್ಲ. ಆದರೆ ಅದನ್ನು ನಿರಾಕರಿಸುವ ಧೈರ್ಯವೂ ಇಲ್ಲ. ಅದನ್ನು ಒಪ್ಪದವನಂತೆ ನಟಿಸುತ್ತಾ, ಒಪ್ಪಿಕೊಂಡು ಬದುಕುವುದು ನೆಮ್ಮದಿಯ ಜೀವನಕ್ಕೆ ಸೋಪಾನ ಅನ್ನುವುದನ್ನು ನಾನೂ ಅನುಭವದಿಂದ ಕಂಡುಕೊಂಡಿದ್ದೇನೆ.

ಎಷ್ಟೋ ವರ್ಷಗಳ ಹಿಂದೆ ಒಂದು ಕತೆ ಓದಿದ್ದೆ. ಅದರ ಹೆಸರಾಗಲೀ ವಿವರಗಳಾಗಲೀ ನೆನಪಿಲ್ಲ. ಆದರೆ ಆ ಕತೆಯ ತಿರುಳು ಮಾತ್ರ ಇವತ್ತಿಗೂ ಕಣ್ಣಿಗೆ ಕಟ್ಟಿದಂತಿದೆ. ಆ ತಿರುಳನ್ನು ಹೇಳಿದರೆ ರುಚಿಗೆಡುತ್ತದೆ ಎಂಬ ಕಾರಣಕ್ಕೆ ಅದನ್ನು ಕತೆಯ ರೂಪದಲ್ಲೇ ಮುಂದಿಡುತ್ತಿದ್ದೇನೆ.

music_painting2_blog

ಪರಮೇಶ್ವರಿಗೆ ಪುರಂದರದಾಸರ ಮುಪ್ಪಿನ ಗಂಡನು ಬೇಡಕ್ಕಾ, ತಪ್ಪದೇ ಪಡಿಪಾಟ ಪಡಲಾರೆನಕ್ಕಾ; ಎಂಬ ಹಾಡು ಕೇಳಿದಾಗೆಲ್ಲ ತನ್ನ ಗಂಡ ಸದಾಶಿವನ ನೆನಪಾಗಿ ಮನಸ್ಸು ಮುದುಡುತ್ತದೆ. ಅವರಿಬ್ಬರಿಗೂ ಮದುವೆಯಾಗಿ ಹನ್ನೆರಡು ವರುಷಗಳಾಗಿವೆ. ಈ ಹನ್ನೆರಡು ವರುಷಗಳ ಕಾಲಾವಧಿಯಲ್ಲಿ ತಮ್ಮ ಸಂಬಂಧ ಕ್ರಮೇಣ ಮಧುರವಾಗುತ್ತಾ ಹೋದೀತು ಎಂದು ಇಬ್ಬರೂ ಕಾಯುತ್ತಲೇ ಬಂದಿದ್ದಾರೆ. ಆದರೆ ಅಂಥ ಯಾವುದೇ ಪವಾಡಗಳು ಸಂಭವಿಸದೇ ಇದ್ದದ್ದರಿಂದ ಇಬ್ಬರೂ ಮೊದಲ ರಾತ್ರಿ ಹೇಗೆ ಒಬ್ಬರನ್ನೊಬ್ಬರು ಅಸಹನೆಯಿಂದ ನೋಡಿದ್ದರೋ ಈಗಲೂ ಹಾಗೇ ನೋಡುತ್ತಾ ಇದ್ದಾರೆ.

ಸದಾಶಿವ ಅತ್ಯಂತ ಶ್ರೀಮಂತ. ಐದೋ ಆರೋ ಸಂಸ್ಥೆಗಳಿಗೆ ಒಡೆಯ. ಚಿಕ್ಕಮಗಳೂರಲ್ಲಿ ಕಾಫಿ ಎಸ್ಟೇಟಿದೆ. ಬಳ್ಳಾರಿಯಲ್ಲೊಂದು ಪುಟ್ಟ ಗಣಿಯಿದೆ. ತಿಂಗಳಿಗೆ ಏನಿಲ್ಲವೆಂದರೂ ಐವತ್ತು ಲಕ್ಷ ಸಂಪಾದನೆಯಿದೆ. ಅವನಿಗೆ ಮಕ್ಕಳಾಗಿಲ್ಲ. ಸತ್ತ ಮೇಲೆ ಆ ಆಸ್ತಿ ಯಾರಿಗೆ ಸೇರುತ್ತದೆ ಅನ್ನುವುದನ್ನು ಅವನಿನ್ನೂ ನಿರ್ಧರಿಸಿಲ್ಲ. ತಾನು ಇಷ್ಟು ಬೇಗ ಸಾಯುವುದಿಲ್ಲ ಎಂದು ಅವನಿಗೆ ಗೊತ್ತು.

ಸದಾಶಿವ ಆರೋಗ್ಯವಂತ. ಬೆಳಗ್ಗೆ ಎದ್ದು ಟೆನಿಸ್ ಆಡುತ್ತಾನೆ. ಆಮೇಲೆ ತನ್ನ ಮನೆಯ ಆರನೆಯ ಮಹಡಿಯಲ್ಲಿರುವ ಈಜುಕೊಳದಲ್ಲಿ ಒಂದು ಗಂಟೆ ಈಜುತ್ತಾನೆ. ಅದಾದ ನಂತರ ಹದವಾಗಿ ಮೈಗೆ ಎಣ್ಣೆ ನೀವಿಸಿಕೊಂಡು ಸ್ನಾನ ಮಾಡುತ್ತಾನೆ. ಆಮೇಲೆ ಕುಚ್ಚಲಕ್ಕಿಯಿಂದ ಮಾಡಿದ ಗಂಜಿ, ಎರಡು ಮಿಳ್ಳೆ ತುಪ್ಪ ಮತ್ತು ಮೂರು ವರುಷದ ಹಿಂದಿನ ಮಿಡಿ ಉಪ್ಪಿನಕಾಯಿಯನ್ನು ತಿಂದು ಹೊರಟರೆ ಮಧ್ಯಾಹ್ನ ಕೇವಲ ಮೂಸಂಬಿ ರಸ. ಸಂಜೆ ಎರಡೇ ಪೆಗ್ಗು ವಿಸ್ಕಿ. ಎರಡು ಬೇಯಿಸಿದ ಮೊಟ್ಟೆ. ರಾತ್ರಿ ಮನೆಗೆ ಬಂದ ನಂತರ ಹನ್ನೊಂದು ಗಂಟೆಯ ತನಕ ಹಾಡು ಕೇಳುತ್ತಾ ಕೂತಿರುತ್ತಾನೆ. ಅವನು ಹಾಡು ಕೇಳುತ್ತಾ ತಲೆಯಾಡಿಸುತ್ತಿರುವುದು ದೂರದಿಂದಲೇ ಪರಮೇಶ್ವರಿಗೆ ಕಾಣಿಸುತ್ತದೆ.

ಪರಮೇಶ್ವರಿಯ ಜಗತ್ತೇ ಬೇರೆ. ಆಕೆಗೆ ಸಂಗೀತ ಎಂದರೆ ಅಷ್ಟಕ್ಕಷ್ಟೇ. ಅವಳ ಅತ್ಯಂತ ಆಸಕ್ತಿಯ ಕ್ಷೇತ್ರ ಅಡುಗೆ. ಮನೆಗೆ ಬಂದ ನೆಂಟರಿಗೆ ಬಗೆಬಗೆಯ ಭಕ್ಷ್ಯಗಳನ್ನು ಮಾಡಿ ಬಡಿಸುವುದರಲ್ಲೇ ಅವಳಿಗೆ ಆಸಕ್ತಿ. ಅವರು ಅದನ್ನು ತಿಂದು ಅದ್ಭುತವಾಗಿ ಅಡುಗೆ ಮಾಡ್ತೀಯ ಪರಮೇಶ್ವರಿ ಎಂದು ಹೊಗಳಿದರೆ ಆಕೆಗೆ ಜೀವನ ಸಾರ್ಥಕವಾದಂತೆ ಅನ್ನಿಸುತ್ತದೆ. ಆದರೆ ಸದಾಶಿವ ಮನೆಗೆ ಯಾರನ್ನೂ ಕರೆಯಬಾರದು ಎಂದು ತಾಕೀತು ಮಾಡಿದ್ದ.

124603691945tU88

ನೆಂಟರೋ ಮಿತ್ರರೋ ಬಂದರೆ ನೀನು ಮನೆಯಲ್ಲಿ ಅಡುಗೆ ಮಾಡುತ್ತಾ ಕೂರಬೇಕಾಗಿಲ್ಲ. ಅವರನ್ನು ಕರೆದುಕೊಂಡು ಹೋಗಿ ಹೊಟೆಲಲ್ಲಿ ಊಟ ಕೊಡಿಸಿದರೆ ಸಾಕು. ಮನೆಯನ್ನು ಗೆಸ್ಟ್ ಹೌಸ್ ಮಾಡುವುದು ಬೇಡ ಎನ್ನುತ್ತಿದ್ದ. ಆಗೆಲ್ಲ ತನ್ನ ಕಲಾಪ್ರದರ್ಶನಕ್ಕೆ ಅಡ್ಡಿಯಾದನಲ್ಲ ಎಂದು ಸದಾಶಿವನ ಮೇಲೆ ಆಕೆಗೆ ಸಿಕ್ಕಾಪಟ್ಟೆ ಸಿಟ್ಟು ಬರುತ್ತಿತ್ತು.

ಅವರಿಬ್ಬರೂ ಹೀಗೆ ಒಬ್ಬರನ್ನೊಬ್ಬರು ದ್ವೇಷಿಸುತ್ತಾ ಹನ್ನೆರಡು ವರುಷ ಬದುಕಿದ್ದೇ ಆಶ್ಚರ್ಯ. ಆ ಹನ್ನೆರಡು ವರುಷಗಳಲ್ಲಿ ಅವರು ಯಾವತ್ತೂ ಜಗಳ ಆಡಲಿಲ್ಲ. ಒಂದು ದಿನವೂ ಬೈದುಕೊಳ್ಳಲಿಲ್ಲ. ಅವಳೇನೇ ಮಾಡಿದರೂ ಸದಾಶಿವ ಅದನ್ನು ಕಂಡೂ ಕಾಣದಂತೆ ಇರುತ್ತಿದ್ದ. ಸದಾಶಿವ ಎಲ್ಲಿಗೇ ಹೋದರೂ ಏನೇ ಮಾಡಿದರೂ ಪರಮೇಶ್ವರಿ ತನ್ನ ಪಾಡಿಗೆ ತಾನಿರುತ್ತಿದ್ದಳು. ಅವಳು ಇಡೀ ಹಗಲು ಮತ್ತು ಇಡೀ ಇರುಳು ಏನು ಮಾಡುತ್ತಾಳೆ ಎಂಬ ಬಗ್ಗೆ ಸದಾಶಿವ ಯಾವತ್ತೂ ತಲೆ ಕೆಡಿಸಿಕೊಂಡಿರಲಿಲ್ಲ. ತಾನು ಮಾತ್ರ ತನ್ನ ವ್ಯಾಪಾರವನ್ನು ವಿಸ್ತರಿಸುತ್ತಾ, ಕಾಫಿ ತೋಟದಲ್ಲಿ ಸುತ್ತಾಡುತ್ತಾ ತನ್ನ ಸುಖಗಳನ್ನು ಹುಡುಕಿಕೊಳ್ಳುತ್ತಾ ನೆಮ್ಮದಿಯಾಗಿದ್ದ. ಶ್ರೀಮಂತನ ಮನೆಯಲಲ್ಲಿ ತೂಗು ಹಾಕಿದ ದುಬಾರಿ ಪೇಟಿಂಗಿನ ಹಾಗೆ ಪರಮೇಶ್ವರಿ ಆ ದೊಡ್ಡ ಮನೆಯಲ್ಲಿ ಇದ್ದಳು, ಇದ್ದಳು ಮತ್ತು ಇದ್ದಳು.

ಈ ಮಧ್ಯೆ ಸದಾಶಿವನ ಜೀವನದಲ್ಲೊಂದು ಸಣ್ಣ ರೋಚಕತೆ ಕಾಣಿಸಿಕೊಂಡಿತು. ಅವನು ಕಾಫಿ ಬೆಳೆ ಅಭಿವೃದ್ಧಿ ಸಂಘದ ಸಭೆಗೆಂದು ದೆಹಲಿಗೆ ಹೋದಾಗ ಅಲ್ಲಿ ಸುಮಾರು ಇಪ್ಪತ್ತೆಂಟು ವಯಸ್ಸಿನ ಸುಂದರಿಯೊಬ್ಬಳು ಅವನ ಜೊತೆ ಮಾತಾಡಿದಳು. ಕೊಂಚ ದಪ್ಪಕ್ಕೆ,. ಎತ್ತರಕ್ಕೆ ಇದ್ದ ಆಕೆಯನ್ನು ನೋಡಿದ್ದೇ ತಡ, ತಾನು ಇಷ್ಟು ವರ್ಷ ಹುಡುಕುತ್ತಿದ್ದ ವಸ್ತು ಸಿಕ್ಕೇ ಬಿಟ್ಟಿತು ಅನ್ನಿಸಿ ಸದಾಶಿವ ಖುಷಿಯಾದ. ಆಕೆಗೂ ಹಾಗೇ ಅನ್ನಿಸಿರಬೇಕು. ಸಭೆ ನಡೆಯುತ್ತಿದ್ದ ಮೂರೂ ದಿನ ಆಕೆ ಸದಾಶಿವನ ಜೊತೆ ತುಂಬಾ ಮಾತಾಡಿದಳು. ಇಬ್ಬರೂ ಜೊತೆಗೇ ಊಟ ಮಾಡಿದರು. ಕರ್ನಾಟಕ ಭವನಕ್ಕೆ ಹೋಗಿ ಅಡ್ಡಾಡಿದರು. ಅವಳನ್ನು ಆತ ದೆಹಲಿಯ ನಿರ್ಜನ ಬೀದಿಗಳಲ್ಲಿ ಸುತ್ತಾಡಿಸಿದ.

ಅವಳ ಹೆಸರು ಮಾಲವಿಕಾ. ಆಕೆಯೂ ಕರ್ನಾಟಕದವಳು ಎನ್ನುವುದು ಗೊತ್ತಾಗಿ ಅವನಿಗೆ ಮತ್ತಷ್ಟು ಸಂತೋಷವಾಯಿತು. ಅದೇನಾಯಿತೋ ಏನೋ ಭೇಟಿಯಾದ ಒಂದೇ ವಾರಕ್ಕೆ ಅವರ ಮಧ್ಯೆ ಮಧುವ ಸಂಬಂಧವೊಂದು ಅಂಕುರಿಸಿ, ಬೆಳೆದು ಜನ್ಮಾಂತರದ ಗೆಳೆಯರ ಹಾಗೆ ಇಬ್ಬರೂ ಒಬ್ಬರನ್ನೊಬ್ಬರು ಬಿಡದಂತೆ ಆಗಿಬಿಟ್ಟರು.

ಬೆಂಗಳೂರಿಗೆ ವಾಪಸ್ಸು ಮರಳಿದ ಮೇಲೆ ಸದಾಶಿವನಿಗೆ ಅದೇ ಧ್ಯಾನ. ಅವಳ ನೆನಪು, ಅವಳ ಭೇಟಿ. ಅಷ್ಟು ವರುಷಗಳ ನಂತರ ಅವನು ಮತ್ತೊಮ್ಮೆ ಪರಮೇಶ್ವರಿಯನ್ನು ನೋಡಿದ. ಮನಸ್ಸು ಮತ್ತಷ್ಟು ಮುದುಡಿತು. ಇವಳನ್ನು ನಾನು ಯಾಕೆ ಮದುವೆ ಆದೆ ಎಂದು ಯೋಚಿಸಿದ.

ಅವನ ಆಸ್ತಿಯಲ್ಲಿ ಅರ್ಧದಷ್ಟು ಅವನಿಗೆ ಬಂದದ್ದು ಅವಳಿಂದಲೇ. ಚಿಕ್ಕಮಗಳೂರಿನ ತೋಟವನ್ನು ಪರಮೇಶ್ವರಿಯ ಅಪ್ಪ ಮದುವೆಗೆ ಬಳುವಳಿಯಾಗಿ ಕೊಟ್ಟಿದ್ದ. ಬಳ್ಳಾರಿ ಗಣಿ ಕೂಡ ಅವನದೇ ಕೊಡುಗೆ. ಅವನ್ನೆಲ್ಲ ನೆಚ್ಚಿಕೊಂಡು ಆ ಆಸೆಗೋಸ್ಕರ ಅವಳನ್ನು ಮದುವೆ ಆದದ್ದು ತಪ್ಪು ಎನ್ನುವುದು ಅವನಿಗೆ ಕ್ರಮೇಣ ಅರ್ಥವಾಗತೊಡಗಿತು. ಆದರೆ ಅಷ್ಟು ಹೊತ್ತಿಗಾಗಲೇ ಹೊತ್ತು ಮೀರಿತ್ತು.

ಸದಾಶಿವನಿಗೆ ಮಾಲವಿಕಾಳನ್ನು ನೋಡುವ ತನಕ ಹೆಣ್ಣು ಅಷ್ಟೊಂದು ಮೋಹಕಳೂ ಮಧುವಂತಿಯೂ ಪ್ರೀತಿಸಬಲ್ಲವಳೂ ಆಗಿರುತ್ತಾಳೆ ಎಂಬ ಕಲ್ಪನೆಯೇ ಇರಲಿಲ್ಲ. ಅವಳ ದನಿ ಬಿಸಿಬಿಸಿ ಜಾಮೂನನ್ನು ಬೆಳ್ಳಿ ಚಮಚೆಯಿಂದ ಕತ್ತರಿಸಿದಷ್ಟು ಸವಿಯಾಗಿತ್ತು. ಅವಳು ನಕ್ಕರೆ ಹಾಗೇ ನಕ್ಷತ್ರಗಳು ಧರೆಗಿಳಿಯುತ್ತಿದ್ದವು. ಅವಳು ಪಕ್ಕ ಸುಳಿದರೆ ಸಾಕು ಮೂರು ಜನ್ಮಕ್ಕಾಗುಷ್ಟು ಸುಗಂಧ ಇಡೀ ಪರಿಸರವನ್ನು ವ್ಯಾಪಿಸಿಕೊಳ್ಳುತ್ತಿತ್ತು. ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದಂತೆ ತಾಯಗರ್ಭದಲ್ಲಿ ಅವಿತು ಕುಳಿತ ಬೆಚ್ಚನೆಯ ಭದ್ರ ಭಾವನೆ ಹುಟ್ಟುತ್ತಿತ್ತು.

ಅವರ ಸಂಬಂಧ ಕ್ರಮೇಣ ಆಪ್ತವಾಗುತ್ತಾ ಸಾಗಿತು. ಸಂಜೆಗಳನ್ನು ಸದಾಶಿವ ಅವಳ ಜೊತೆ ಕಳೆಯತೊಡಗಿದ. ಅದು ಕೆಲವೊಮ್ಮೆ ಮುಸ್ಸಂಜೆಯ ಹೊಸಿಲು ದಾಟಿ ರಾತ್ರಿಯೊಳಗೂ ಕಾಲಿಡುತ್ತಿತ್ತು. ಹೀಗಿರುತ್ತಾ ಅಷ್ಟೂ ವರ್ಷ ಕಳಕೊಂಡದ್ದನ್ನು ಮರಳಿ ಪಡೆಯಲೆತ್ನಿಸುತ್ತಾ ದಿವ್ಯವಾದ ಆನಂದವನ್ನು ಅನುಭವಿಸುತ್ತಿದ್ದ ಸದಾಶಿವನಿಗೆ, ಮಾಲವಿಕಾಳನ್ನು ಮದುವೆ ಆಗಬೇಕೆಂಬ ಆಸೆ ಮೂಡಿತು.

ಆದರೆ ಮದುವೆಯಾಗಲು ಹಾದಿಗಳಿರಲಿಲ್ಲ. ಮದುವೆಗೆ ಪರಮೇಶ್ವರಿ ಒಪ್ಪುತ್ತಾಳೆ ಎಂಬ ನಂಬಿಕೆಯೂ ಇರಲಿಲ್ಲ. ಅವಳ ಮುಂದೆ ಅದರ ಪ್ರಸ್ತಾಪ ಮಾಡಿದರೆ ಅವಳು ಆ ಸಂಬಂಧವನ್ನೇ ಮುರಿದು ಹಾಕುವ ಅಪಾಯವಿತ್ತು. ಈಗ ತುಂಬ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಅಂದುಕೊಂಡ.

ಅದಕ್ಕೂ ಮುಂಚೆ ಮಾಲವಿಕಾಳ ಹತ್ತಿರ ತನ್ನನ್ನು ಮದುವೆ ಆಗು ಎಂದು ಕೇಳಿಕೊಳ್ಳುವ ಹಾಗೂ ಇರಲಿಲ್ಲ. ಮದುವೆ ಅಸಾಧ್ಯ ಎಂದು ಅವಳಿಗೆ ಗೊತ್ತಿತ್ತು. ಹೆಂಡತಿಯನ್ನು ಕೊಲೆ ಮಾಡಿ ನಿನ್ನನ್ನು ಮದುವೆ ಆಗುತ್ತೇನೆ ಎಂದರೆ ಆಕೆ ತನ್ನ ಬಗ್ಗೆ ಅಸಹ್ಯಪಟ್ಟುಕೊಂಡಾಳು ಎಂಬ ಭಯವೂ ಅವನಿಗಿತ್ತು. ಹೀಗಾಗಿ ಇದನ್ನು ಉಪಾಯವಾಗಿ ಮಾಡಿ ಮುಗಿಸಬೇಕು ಅಂದುಕೊಂಡ.

ಆಗ ಅವನಿಗೆ ನೆನಪಾದದ್ದು ತನ್ನೂರಿನ ಬಂಟಮಲೆ ಗುಡ್ಡ. ಅದರ ತುದಿಯಲ್ಲೊಂದು ದೇವಸ್ಥಾನವಿತ್ತು. ಆ ಗುಡ್ಡವನ್ನೇರುವುದೂ ಪ್ರಯಾಸದ ಕೆಲಸ ಎಂದು ಅವನಿಗೆ ಗೊತ್ತಿತ್ತು. ಆದರೆ ಕಾಡಿನ ಮಧ್ಯೆ ಇರುವ ಆ ಬೆಟ್ಟದ ಸಮೀಪ ಕೂಡ ಯಾರೂ ಸುಳಿಯುತ್ತಿರಲಿಲ್ಲ. ಅಲ್ಲಿಗೆ ಕರೆದೊಯ್ದು ಅವಳನ್ನು ಬೆಟ್ಟದ ಹಿಂಭಾಗದಿಂದ ಕೆಳಗೆ ತಳ್ಳಿದರೆ ಸುಮಾರು ಏಳು ನೂರು ಮೀಟರ್ ಆಳದ ಪ್ರಪಾತಕ್ಕೆ ಆಕೆ ಬಿದ್ದು ಅವಳ ಅವಶೇಷಗಳೂ ಸಿಗುತ್ತಿರಲಿಲ್ಲ.

ಈ ಯೋಚನೆ ಬಂದ ಮೇಲೆ ಸದಾಶಿವ ತಡ ಮಾಡಲಿಲ್ಲ. ಎರಡು ದಿನ ಊರಲ್ಲಿರೋದಿಲ್ಲ ಎಂದು ಮಾಲವಿಕಾಗೆ ಹೇಳಿ ಪರಮೇಶ್ವರಿಯನ್ನು ಕರೆದುಕೊಂಡು ಹೊರಟೇ ಬಿಟ್ಟ. ಬೆಟ್ಟದ ತುದಿಯನ್ನು ಸೇರಿ ಪೂಜೆ ಮುಗಿಸಿದ್ದೂ ಆಯ್ತು. ಹಾಗೇ ಒಂದು ಸುತ್ತು ವಾಕಿಂಗ್ ಹೋಗಿ ಹೊರಡೋಣ ಎಂದು ಸದಾಶಿವ ಅವಳನ್ನು ಕರೆದ.

ಬೆಟ್ಟದ ಕಡಿದಾಗ ಜಾಗಕ್ಕೆ ಬರುವ ಹೊತ್ತಿಗೆ ಇಬ್ಬರೂ ಬೆವತಿದ್ದರು. ಸದಾಶಿವ ಅವಳ ಮುಖವನ್ನೇ ನೋಡಿದ. ಅವಳು ಬೆಟ್ಟದ ಕಡಿದಾದ ಆಳವನ್ನು ನೋಡುತ್ತಿದ್ದಳು. ಸದಾಶಿವ ಒಂದು ಹೆಜ್ಜೆ ಮುಂದಿಟ್ಟ. ಅವಳು ಥಟ್ಟನೆ ತಿರುಗಿ ನೋಡಿದಳು: ನಕ್ಕಳು.

ನೀವು ನನ್ನನ್ನು ಇಲ್ಲಿಗೆ ಕರಕೊಂಡು ಬಂದದ್ದು ಯಾಕೆ ಅಂತ ನಂಗೊತ್ತಿದೆ. ಆ ಹೊಸ ಹುಡುಗಿ ನನಗಿಂತ ಆಕರ್ಷಕವಾಗಿ ಕಂಡಿದ್ದಾಳೆ. ಅವಳನ್ನು ನೀವು ಮದುವೆ ಆಗಬೇಕು. ಅದಕ್ಕೆ ನನ್ನನ್ನು ಕೊಲೆ ಮಾಡಬೇಕು ಅಲ್ವಾ?’ ಪರಮೇಶ್ವರಿ ನೇರವಾಗಿ ಕೇಳಿದಳು. ಸದಾಶಿವ ಗಾಬರಿ ಬಿದ್ದ. ಪರಮೇಶ್ವರಿ ಮುಂದುವರಿಸಿದಳು.

ನೀವಿಲ್ಲಿಗೆ ಕರೆದಾಗಲೇ ನನಗಿದು ಗೊತ್ತಿತ್ತು. ನಾನು ಬಾರದೇ ಇರಬಹುದಾಗಿತ್ತು. ಆದರೂ ಬಂದೆ. ನೀವೀಗ ನನ್ನನ್ನು ಬೆಟ್ಟದಿಂದ ತಳ್ಳಿ ಸಾಯಿಸಿ, ನಂತರ ಅವಳು ಜಾರಿಬಿದ್ದಳೆಂದು ಹೇಳಿ ಮಾಲವಿಕಾಳನ್ನು ಮದುವೆ ಆಗುತ್ತೀರಿ, ಅಲ್ವಾ?’

ಸದಾಶಿವ ಮಾತಾಡಲಿಲ್ಲ.

ನನಗಿದೂ ಗೊತ್ತಿತ್ತು. ಅದಕ್ಕೆ ನೀವು ಮಾಲವಿಕಾ ಜೊತೆಯಾಗಿ ಓಡಾಡುವ ಕೆಲವು ಫೋಟೋಗಳನ್ನು ಎಲ್ಲರಿಗೂ ಕಾಣುವ ಹಾಗೆ ಇಟ್ಟುಬಂದಿದ್ದೇನೆ. ಒಂದು ಪ್ರತಿಯನ್ನು ಕವರಿಗೆ ಹಾಕಿ ಪೊಲೀಸರಿಗೆ ಕೊಟ್ಟು ನಾನು ಸತ್ತ ನಂತರ ತೆರೆಯುವಂತೆ ಹೇಳಿದ್ದೇನೆ. ನನ್ನ ಗಂಡ ಮತ್ತೊಂದು ಹೆಣ್ಣಿನ ಸಂಗಕ್ಕೆ ಬಿದ್ದು ನನ್ನನ್ನು ಕೊಲ್ಲುವ ಅಪಾಯವಿದೆ ಎಂದೂ ನನ್ನ ಅಣ್ಣನಿಗೆ ಪತ್ರ ಬರೆದಿದ್ದೇನೆ. ಅಲ್ಲದೇ..’

ಪರಮೇಶ್ವರಿ ಮೊಬೈಲ್ ಕೈಗೆತ್ತಿಕೊಂಡಳು.

ಇದರಲ್ಲೊಂದು ಮೆಸೇಜ್ ಟೈಪ್ ಮಾಡಿಟ್ಟುಕೊಂಡಿದ್ದೇನೆ. ಕಾಪಾಡಿ, ನನ್ನ ಗಂಡ ನನ್ನನ್ನು ಕೊಲ್ಲೋಕೆ ನೋಡ್ತಿದ್ದಾನೆ’ ಅಂತಷ್ಟೇ ಇದೆ. ಅದನ್ನೀಗ ನಾನು ಕಳಿಸುತ್ತಿದ್ದೇನೆ’ ಆಕೆ ಸೆಂಡ್ ಬಟನ್ ಒತ್ತುತ್ತಾಳೆ. ಮೆಸೇಜ್ ಹೋಗಿದ್ದಕ್ಕೆ ಸಾಕ್ಷಿಯಾಗಿ ಸೆಂಟ್ ರಿಪೋರ್ಟ್ ಬಂದು ಬಿದ್ದು ಮೊಬೈಲ್ ಸದ್ದಾಗುತ್ತದೆ.

ಸದಾಶಿವ ಬೇಡ, ಏನೂ ಕಳಿಸಬೇಡ. ನಾನೇನೂ ನಿನ್ನನ್ನು ಕೊಲ್ಲೋದಿಲ್ಲ. ಎಲ್ಲವನ್ನೂ ಮರೆಯೋಣ’ ಅನ್ನುತ್ತಾನೆ ಸದಾಶಿವ.

ಪರಮೇಶ್ವರಿ ಹೇಳುತ್ತಾಳೆ;

ನಂಗೊತ್ತಿದೆ ನೀವು ನನ್ನನ್ನು ಕೊಲ್ಲೋದಿಲ್ಲ. ಆದರೆ ನನ್ನ ಮೇಲೆ ನಿಮಗಿರುವುದಕ್ಕಿಂತ ಹೆಚ್ಚು ಸಿಟ್ಟು ನನಗೆ ನಿಮ್ಮ ಮೇಲಿದೆ. ನೀವು ನನ್ನನ್ನು ಕೊಲ್ಲುವುದಿಲ್ಲ, ಆದರೆ ನಾನು ಸಾಯುತ್ತಿದ್ದೇನೆ’.

ಪರಮೇಶ್ವರಿ ಬೆಟ್ಟದ ಅಂಚಿಗೆ ಸಾಗುತ್ತಾಳೆ. ಸದಾಶಿವ ಬೇಡ ಬೇಡ ಎಂದು ಕಿರುಚುವುದೂ ಅವಳು ಬೆಟ್ಟದ ಅಂಚಿನಿಂದ ಕೆಳಗೆ ಧುಮುಕುವುದೂ ಒಂದೇ ಹೊತ್ತಿಗೆ ನಡೆದುಹೋಗುತ್ತದೆ.

ಸದಾಶಿವ ಗಾಬರಿಯಾಗಿ ನಿಂತುಕೊಂಡಿರುವ ಹೊತ್ತಿಗೇ ಬೆಟ್ಟದ ಕೆಳಭಾಗದಲ್ಲಿ ಪೊಲೀಸ್ ಜೀಪು ಬಂದು ನಿಂತದ್ದೂ ಅದರಿಂದ ಇಳಿದು ಮೂವರು ಪೊಲೀಸರು ಓಡೋಡಿಕೊಂಡು ಬೆಟ್ಟ ಹತ್ತುತ್ತಿರುವುದೂ ಕಾಣಿಸುತ್ತದೆ.

‍ಲೇಖಕರು avadhi

August 11, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. minchulli

    “ಶ್ರೀಮಂತನ ಮನೆಯಲಲ್ಲಿ ತೂಗು ಹಾಕಿದ ದುಬಾರಿ ಪೇಟಿಂಗಿನ ಹಾಗೆ ಪರಮೇಶ್ವರಿ ಆ ದೊಡ್ಡ ಮನೆಯಲ್ಲಿ ಇದ್ದಳು, ಇದ್ದಳು ಮತ್ತು ಇದ್ದಳು.”, ಯಾವುದೇ ಪವಾಡಗಳು ಸಂಭವಿಸದೇ ಇದ್ದದ್ದರಿಂದ ಇಬ್ಬರೂ ಮೊದಲ ರಾತ್ರಿ ಹೇಗೆ ಒಬ್ಬರನ್ನೊಬ್ಬರು ಅಸಹನೆಯಿಂದ ನೋಡಿದ್ದರೋ ಈಗಲೂ ಹಾಗೇ ನೋಡುತ್ತಾ ಇದ್ದಾರೆ.” ನಂಗೊತ್ತಿದೆ ನೀವು ನನ್ನನ್ನು ಕೊಲ್ಲೋದಿಲ್ಲ. ಆದರೆ ನನ್ನ ಮೇಲೆ ನಿಮಗಿರುವುದಕ್ಕಿಂತ ಹೆಚ್ಚು ಸಿಟ್ಟು ನನಗೆ ನಿಮ್ಮ ಮೇಲಿದೆ. ನೀವು ನನ್ನನ್ನು ಕೊಲ್ಲುವುದಿಲ್ಲ, ಆದರೆ ನಾನು ಸಾಯುತ್ತಿದ್ದೇನೆ’.”

    ಇಂಥದ್ದೊಂದು ಕಥೆ ಬರೆಯಬಲ್ಲ ಇನ್ನೊದು ಹೆಸರೇನಾದರೂ ಇದ್ದಾರೆ “ಜೋಗಿ” ಮಾತ್ರ…. ಬದುಕು ಮತ್ತು ಸಾವು ಎರಡರ ರುದ್ರ ತಾಂಡವ ಇದೆ ಇಲ್ಲಿ…

    ಪ್ರತಿಕ್ರಿಯೆ
  2. ನವೋಮಿ

    ಇಷ್ಟೊಂದು ಕೋಪ ಇರುವ ಹೆಣ್ಣುಮಕ್ಕಳು ನಮ್ಮ ಸುತ್ತಮುತ್ತ ಇದ್ದಾರೆ..ಸದಾಶಿವ ಅಂಥವರು ಹೆಜ್ಜೆಹೆಜ್ಜೆಗೂ ಸಿಕ್ಕುತ್ತಾರೆ. ಆದರೆ ಅವನ್ನೆಲ್ಲ ಇಷ್ಟೊಂದು ಸರಳವಾಗಿ ಆಕರ್ಷಕವಾಗಿ ಬರೆಯೋದು ಜೋಗಿ ಕೈಲಿ ಮಾತ್ರ ಸಾಧ್ಯ..ಇದನ್ನು ಓದಿದ್ಮೇಲೆ ಅಯ್ಯೋ ನಂಗ್ಯಾಕೆ ಹೊಳೆಯಲಿಲ್ಲ ಅನ್ನಿಸ್ತು..

    ಪ್ರತಿಕ್ರಿಯೆ
  3. ನವೋಮಿ

    ನಮ್ಮಲ್ಲೊಬ್ಬಳ ಕಥೆ ಹೀಗೇ ಇತ್ತು.ಕಟ್ಟಿಕೊಂಡವನನ್ನು ಸುಧಾರಿಸೋಕೆ ತುಂಬ ಪ್ರಯತ್ನ ಪಟ್ಟಳಂತೆ.ಆತ ಸುಧಾರಿಸದೇ ಇದ್ದಾಗ ಅವಳೇ ಬದಲಾದ್ಲಂತೆ.ಹೇಗೆ ಅಂತ ನೀವೇ ಊಹಿಸ್ಬಹುದು….ಜೋಗಿ ನೀವು ತಂಬಾ ಚೆನ್ನಾಗಿ ಬರಿತೀರಿ.ಆದರೆ ಈ ಕಥೆ.ನನಗೆ ಹೊಳೆದಿದ್ರೆ ನಾನವಳನ್ನು ಸಾಯಿಸ್ತೀರಲಿಲ್ಲ.ಬದುಕು ಸುಂದರ.ಸ್ವಲ್ಪ ಅವಳು ಬದುಕೋ ರೀತಿ ಹೇಳಿಕೊಡಬೇಕಿತ್ತು..

    ಪ್ರತಿಕ್ರಿಯೆ
  4. prabhuling

    hi!!!!!!!!!!!!!nanu nimma barahagalannu ododu e karanakke.navirad bashe.kate kattuv shaili mattu mugisuv reti adbut.. manasu hagurvagudakke mattenu beku?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: