ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳು ದೋಸೆಗೆ ಚಟ್ನಿ ಅದ್ದುವ ಹಾಗೇ ನನ್ನನ್ನು ಅದ್ದಿಕೊಳ್ಳುತ್ತಿದ್ದಳು..

 

prasad shenoy r k

ಪ್ರಸಾದ್ ಶೆಣೈ ಆರ್ ಕೆ

ನೀನೇ ಬೇಕು ನೀನೇ ಬೇಕು ಅಂತ ಜೀವ ತಿನ್ನುತ್ತಿದ್ದ ಅವಳಿಗೆ, ಈಗ ನೀನು ಬೇಡ್ವೇ ಬೇಡ… ಅನ್ನಿಸುವಂತೆ ಮಾಡಿದ್ದು ಯಾವುದು? ನಿನ್ನೆಡೆಗೆ ಬರುವಾಗ ಸಿಂಗರದ ಹೊರೆ ಏಕೆ… ಸಡಗರದ ಮಾತುಗಳ ಬಿಂಕವೇಕೆ? ಅಂತ ಇಷ್ಟೇ ಇಷ್ಟು ಸಣ್ಣ ಬಿಂದಿಯಲ್ಲೂ ಬೂಂದಿ ಲಾಡು ತಿನ್ನಿಸುತ್ತಿದ್ದವಳು ಈಗ ಸಿಂಗಾರದ ಹೊರೆ ಬೇಕು ಹೊರೆ ಬೇಕು ಅಂತ ಡೌಲು ಮಾಡಿ ತಿರುಗುತ್ತಿದ್ದಾಳಲ್ಲಾ… ಅವಳನ್ನು ಆ ಶೃಂಗಾರದ ಹೊರೆಗೆ ನೂಕಿದ್ದು ಯಾವುದು? ಅನಿವಾರ್ಯತೆಯಾ? ಅಥವಾ ಹುಚ್ಚುಮೋಹವಾ? ಅವಳು ಬಯಸುತ್ತಿದ್ದದ್ದು ನಿನ್ನ ಬಹಿರಂಗಾ ಸೌಂದರ್ಯವಾ? ನೀನು ಹಾಕಿದ್ದ ಅಮಲಿನ ಸೆಂಟಾ? ಅಥವಾ ನಿನ್ನ ಪರ್ಸ್‌ನಲ್ಲಿ ಇರುವ ದುಡ್ಡಿನ ಗಂಟಾ?

tundu hykluಮಲ್ಪೆ ಕಡಲು ಗೆಜ್ಜೆ ಕಟ್ಟಿ ಕುಣಿಯುತ್ತಲೇ ಇತ್ತು. ನಾನು ಈ ಪ್ರಶ್ನೆಯನ್ನು ನನ್ನ ಸ್ನೇಹಿತನಿಗೆ ಅವನ ಪ್ರೇಮ ಪ್ರಕರಣವೊಂದರ ಹಿನ್ನೆಲೆಯಲ್ಲಿ ಕೇಳುತ್ತಿದ್ದೆನಾದರೂ, ಆ ಪ್ರಶ್ನೆಗಳನ್ನು ನನಗೇ ನಾನು ಮತ್ತೆ ಮತ್ತೆ ಕೇಳಿಕೊಳ್ಳುತ್ತಿದ್ದೆ. ನನ್ನ ಪ್ರಶ್ನೆಗಳು ಅವನದ್ದೂ ಆಗಿತ್ತು, ನನ್ನದೂ ಆಗಿತ್ತು. ನಮ್ಮಿಬ್ಬರ ದುಗುಡವೂ ಒಂದೇ ಆಗಿತ್ತು. ಬೇಕಿದ್ದರೆ ನೋಡಿ, ಇಬ್ಬರಲ್ಲೂ ಒಂದೇ ಪ್ರಶ್ನೆಗಳು ಏಕಕಾಲಕ್ಕೆ ಕೊರೆಯುತ್ತಿದ್ದರೆ ನಿಮ್ಮಲ್ಲಿ ಆ ಪ್ರಶ್ನೆಗಳ ಕುರಿತ ಆಪ್ತತೆ ಹೆಚ್ಚುತ್ತದೆ. ಅವನ ಪ್ರಶ್ನೆಯು ನಿಮ್ಮದ್ದೂ ಆಗಿರುವುದರಿಂದ ನೀವು ಬೇರೆ ಅವನು ಬೇರೆ ಅನ್ನಿಸೋದೇ ಇಲ್ಲ. ಆದರೆ ಇಬ್ಬರಿಗೂ ದಕ್ಕುವ ಉತ್ತರಗಳು ಮಾತ್ರ ಬೇರೆಯದ್ದೇ ಆಗಿರುತ್ತದೆ.

ಈಗ ಮಲ್ಪೆ ಕಡಲಿನ ಗೆಜ್ಜೆ ಸದ್ದು ಜೋರಾಗುತ್ತಲೇ ಹೋಯ್ತು…

ಯಾರನ್ನೂ ಬೇಕಾದ್ರೂ ಅರ್ಥ ಮಾಡಿಕೊಳ್ಳಬಹುದು ಆದರೆ ಹುಡುಗಿಯರನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ ಮಾರಾಯಾ ಅಂತ  ಇವನು ಈವರೆಗೂ ನನ್ನತ್ರ ಎಷ್ಟನೇ ಸಲ ಇದೇ ಕಡಲ ತಡಿಯಲ್ಲಿ ಕೂತು ಹೇಳುತ್ತಿದ್ದನೋ ನೆನಪಿಲ್ಲ.

ಯಾಕೋ ವಯಸ್ಸು ಹದಿಹರೆಯದಿಂದ ಸರಿದು ಸುಮಾರು 23-28 ಆಗೋವಾಗ ಮನಸ್ಸಿನ ಆಳದ ಭಾವಗಳಿಗೆ ಕನ್ನಡಿ ಹಿಡಿಯೋಳೊಬ್ಬಳು ಬೇಕು ಅನ್ನಿಸುತ್ತಲ್ಲಾ. ಅದೇ ಈಗ ನಮ್ಮಿಬ್ಬರಿಗೂ ಅನ್ನಿಸುತ್ತಿತ್ತು. ಆದರೆ ಕನ್ನಡಿ ಹಿಡಿಯೋರು ಯಾರು? ನಂಗೆ ಹಳೆ ಗೆಳತಿಯ ಪಿಸುಮಾತುಗಳು ನೆನಪಾಯ್ತು. ಹಾಗಂತ ನಾನು, ಅವಳು ಅನ್ನುವ ಒಂದು ಪ್ರಶ್ನೆ, ಅವಳು ಅನ್ನೋ ಒಂದು ಗೋಜಲು ಉತ್ತರ, ಅವಳು ಅನ್ನೋ ವಿಕ್ಷಿಪ್ತ ಮನಸ್ಸು, ಅವಳು ಅನ್ನೋ ಸಿಹಿ ಪೆಪ್ಪರ್‍ ಮಿಂಟು, ಅವಳು ಅನ್ನೋ ಹನುಮಾನ್ ಗುಂಡಿ, ಅವಳು ಅನ್ನೋ ಬಿಸೋ ಸುಂಟರಗಾಳಿ, ಅವಳು ನನಗೆ ಇಷ್ಟೆಲ್ಲಾ ಆಗಿದ್ದರೂ ಕೊನೆಗೂ ಅವಳೇನು ಅಂತ ಉತ್ತರ ಕೊಡದೇ, ಅವಳನ್ನು ದೀರ್ಘ ಬಂಧಿಯಾಗಿ ಮಾಡಿದ ಆ ಮೌನದ ಗುಹೆ.

ಹೀಗೆ ಅವಳನ್ನು ಸದಾ ಮನಸ್ಸಲ್ಲಿ ಕೆತ್ತುತ್ತಾ ಕೂತು ಯೋಚಿಸುವವನಲ್ಲ ನಾನು. ಆದರೂ ಕೆಲವೊಮ್ಮೆ ಗತಕಾಲದ ವೈಭವವನ್ನು ನೆನೆಯುತ್ತಾ ಕೂರುದರಲ್ಲಿಯೂ ಸುಖವಿದೆ. ಬಿಟ್ಟು ಹೋದವಳನ್ನು ಎಂತ ಯೋಚಿಸುದೋ ಮಾರಾಯಾ ಬೇರೆ ಕೆಲ್ಸಾ ಇಲ್ವಾ? ಅಂತ ನೀವು ಕೇಳಿದರೂ ಕೇಳಬಹುದು. ಆದರೆ ಹಾಗೇ ಹಳೆಯದ್ದನ್ನು ಯೋಚಿಸುತ್ತಾ ಕೂರುತ್ತಿದ್ದಂತೆಲ್ಲಾ ಕತೆ ಹುಟ್ಟುತ್ತದೆ. ಹಾಗೇ ಹುಟ್ಟಿ ಬೆಳೆಯುತ್ತಾ ಹೋಗುತ್ತದೆ, ಅರ್ಧ ದಾರಿಯಲ್ಲಿ ಕುಂಟುತ್ತದೆ. ಮತ್ತೆ ಮತ್ತೆ ಬೆಳೆಯುತ್ತದೆ. ಹೋ ಇದು ನನ್ನದೇ ಕತೆಯಲ್ವಾ? ಅಂತ ಬೆರಗಾಗುತ್ತಾ ಇನ್ನೂ ಬೆಳೆಯುತ್ತಿರುವ ಕತೆಯನ್ನು ಅದರ ಪಾಡಿಗೇ ಬಿಟ್ಟು ಬಿಡುತ್ತೇನೆ… ಅದೂ ಬೆಳೆಯುತ್ತಾ ಹೋಗಲಿ ಅನ್ನೋ ಆಸೆಯಿಂದ, ಕತೆ ಬೆಳೆಯುದಕ್ಕಾದರೂ ನೆನಪುಗಳು ಬೇಕು ಅನ್ನಿಸೋದೇ ಆವಾಗ.

she heಏನೋ ಹುಡುಗ? ಆ ಕ್ಷಣಕ್ಕೆ ನನ್ನನ್ನು ಅಷ್ಟು ಹಚ್ಚಿಕೊಳ್ಳುತ್ತಾ, ದೋಸೆಗೆ ಚಟ್ನಿ ಅದ್ದುವ ಹಾಗೇ ಬೇಕಾದಷ್ಟು ಅದ್ದಿಕೊಳ್ಳುತ್ತಾ ಇರುತ್ತಿದ್ದವಳು ಈ ಕ್ಷಣಕ್ಕೆ ಒಲವಿನ ಚಟ್ನಿಯೂ ಬೇಡ, ದೋಸೆಯೂ ಬೇಡ ಅಂತ ದೂರದೂರಿಗೆ ಹೊರಟಳಲ್ವಾ ಅಂತ ನಾ ಅಂದಾಗ ಬಸ್ಸು ಬರುತ್ತದೆ. ಮತ್ತು ಬಸ್ಸು ಹೋಗುತ್ತದೆ… ನೀನು ಬಸ್ಸನ್ನು ಹತ್ತಲೇಬೇಕು ಅಂತಿಲ್ಲ. ಯಾಕೆಂದ್ರೆ ಅದು ನಿನ್ನ ಬಯಕೆಯ ಊರಿಗೆ ಹೋಗುತ್ತದೆ ಎಂದಾದರೆ ಮಾತ್ರ ನೀನು ಹತ್ತಬೇಕು, ಇಲ್ಲದಿದ್ದರೆ ಹಾಗೇ ಹತ್ತಿಸುವ ಬಸ್ಸಿಗಾಗಿ ತುಸು ಹೊತ್ತು ಕಾಯುತ್ತಲೇ ಇರಬೇಕು. ನಿನ್ನೊಳಗಿನ ಬಸ್ಸು ಅಲ್ಲ ಅದು… ನಿನ್ನೊಲವಿನ ಊರಿಗೇನೇ ಕರಕೊಂಡು ಹೋಗೋ ಬಸ್ಸು ಬರುತ್ತದೆ ಕಾಯೋ ಪುಣ್ಯಾತ್ಮ, ಅಂತ ಅವನಂದಾಗ ಹೌದಲ್ಲಾ ಅನ್ನಿಸಿದೆ. ಒಲವ ಬಸ್ಸಿಯಾಗಿ ಕಾಯುತ್ತಾ ದಾರಿ ನಿಟ್ಟಿಸುತ್ತಿದ್ದೇನೆ.

ಒಡಲಾಳದ ಸ್ನೇಹಿತರು ಹತ್ತಿರ ಬಂದು ತಮ್ಮ ಕಳೆದು ಹೋದ ಮುತ್ತಿನ ಕತೆಗಳನ್ನು ಹರವಿಕೊಂಡಾಗ ನಾನು ಹೇಳೋದಿಷ್ಟೇ-‘ನೀನು ಹರಿಯುತ್ತಲೇ ಇರು, ಅವಳು ಹೋದಳೆಂದ ಕೂಡಲೇ ನೀನು ಕುಗ್ಗಿದರೆ ನೀನು ಅವಳಿಗೋಸ್ಕರಾನೇ ಬದುಕಿದ್ದು ಅಂತಾಗುತ್ತದೆ. ಅವಳು ನಿನ್ನ ಜೊತೆ ಇದ್ದಾಗ ಎಷ್ಟೊಂದು ಜೋಶ್‌ ನಲ್ಲಿದ್ದಿಯೋ ಅದಕ್ಕಿಂತ ಡಬ್ಬಲ್ ಜೋಶ್ ನಲ್ಲಿ ನೀನಿರಬೇಕು, ಅವಳಿದ್ದಾಗ ನೂರು ಕವಿತೆ ಬರೆದಿದ್ದಿಯಾ? ಈಗ ಇನ್ನೂರು ಬರಿ, ನಾನಂತೂ ಅವಳು ನನ್ನ ಬಿಟ್ಟು ಹೋದ ನಂತರಾನೇ ಕಾದಂಬರಿ ಬರಿಯೋಕೆ ಪ್ಲಾನ್ ಮಾಡಿದ್ದು, ನೀನೂ ಬರಿ. ಬರೆದ್ರೆ ಹೊಟ್ಟೆ ತುಂಬಲ್ಲ, ಅಂತೇಳುವವರು ತುಂಬಾ ಮಂದಿ ಇದ್ದಾರೆ.

ಹಾಗೇ ಹೇಳುವವರು ಯಾರೂ ಬರಿಯೋರಲ್ಲ. ಬರೆಯೊಂದರೆ ಹುಡುಕುವುದು, ಒಂದನ್ನೊಂದಕ್ಕೆ ತಾಳಿಸಿ ಮೇಳಿಸಿ, ತಡಕಾಡಿ ಹುಡುಕುವುದು. ಅಂತ ಹೇಳುತ್ತಲೇ ಅನಂತಮೂರ್ತಿ ಬರೆದದ್ದು. ನಮ್ಮನ್ನು ನಾವು ಹುಡುಕುವ ಮಾರಾಯ… ಅದಕ್ಕೆ ಹಳೆಯ ನೆನಪುಗಳೇ ನೆಪವಾಗಲಿ ಅಷ್ಟೇ. ಅಂತ ಅವನಿಗೆ ಹೇಳಿದ ಮೇಲೆ ಹೌದಲ್ಲ ಅಂತ ಬೆರಗುಗಣ್ಣಾದ. ಅವಳ ಚಂದ ಕಲಾಕೃತಿ ಒಂದನ್ನು ಮಾಡಬೇಕು ಅವಳು ಅಂತಹ ಹುಡುಗಿ ಮಾರಾಯಾ… ಅಂದ. ಅವಳು ಕೈ ಕೊಟ್ಟು ಹೋದರೂ ಅವಳ ಚಿತ್ರ ಬಿಡಿಸಬೇಕು ಅನ್ನುತ್ತಿರುವವನ ಮಾತು ಕೇಳಿ ಒಮ್ಮೆ ಥಕ್ಕಾದರೂ… ನಿರಾಶೆಯಲ್ಲೂ ಆಸೆಯ ಕ್ಯಾನ್ವಾಸು ರಂಗು ಬಳಿಯೋದು ಹೀಗೇ ಅಲ್ವಾ ಅಂತ ಮುದಗೊಂಡೆ. ಮಲ್ಪೆ ಕಡಲು ಗೆಜ್ಜೆ ಕಟ್ಟಿ ಕುಣಿಯುತ್ತಲೇ ಇತ್ತು. ಕೆಲವು ಸಾಲಿನ ಹಿಂದೆ ಇಲ್ಲೇ ಕೂತು ಅವಳಿದ್ದಾಗ ಬರೆದ ಸಾಲುಗಳು ಅಲೆ ಅಲೆಯಾಗಿ ಬಂತು.

ಎದೆಯ ವೀಣೆ ಮೀಟಿ ಬಂದುಕಡಲಿನಂತ ಅಮಲು ತಂದುಜೀಕು ಸಣ್ಣಗೇ ನನ್ನ ಸಂಜೆ ಮಲ್ಲಿಗೆ

ಕನಸಿನಂತ ಹಾಡು ನೀನು ಉಕ್ಕಿ ಮೊರೆಯೋ ರುಚಿಯ ಜೇನುಕೆನ್ನೆಯಂತೆ ಸುರಿಯೋ ಬಾನುತುಂಬು ಸಣ್ಣಗೇ ನನ್ನ ಕಣ್ಣ ಗಲ್ಲಿಗೆ..

ಈ ಸಾಲಿನ ಚುಂಗು ಹಿಡಿದು ಮತ್ತೂ ದೂರಕ್ಕೆ ಹೋಗಬೇಕು ಅನ್ನಿಸುತ್ತಿತ್ತು.

…ಅಲ್ಲಿ ಸುರಿವ ನೀರು ಇದೆ..ಕೇಳದಂತ ನಾದವಿದೆಬದುಕ ಪೊರೆಯೋ ಸ್ಪರ್ಶ ಮಾತ್ರ ನಿನ್ನ ಕೈಗಿದೆ..

ನಿರಾಶೆಯಲ್ಲಿಯೂ ಭೋರ್ಗರೆಯುತ್ತಿದ್ದ ಆಸೆಗಡಲಿನ ಮೊರೆತ ಮತ್ತೂ ಜಾಸ್ತಿಯಾಯ್ತು.

‍ಲೇಖಕರು admin

26 July, 2016

6 Comments

  1. Vikram Nayak

    ಚೆನ್ನಾಗಿದೆ ಪ್ರಸಾದ್

  2. madhukar

    ಚಂದದ ಬರಹ ಪ್ರಸಾದ್

  3. Sudha ChidanandGowd

    nice..

  4. devika

    chenaagide prasad

  5. Sangeeta Kalmane

    “ಮಲ್ಪೆಯ ಕಡಲ ತೀರ
    ಗೆಜ್ಜೆ ಕಟ್ಟಿ ಕುಣಿಯಿತು
    ಓದುತ್ತ ಓದುತ್ತ
    ಮೈ ಮರೆತೆ
    ಒಲೆ ಮೇಲಿನ ಹಾಲು
    ಉಕ್ಕಿ ಹರಿಯಿತು”

    ವಾವ್! ಸುಂದರ ವಣ೯ನೆ,
    ಚಂದ ಬರಹ
    ಅನುಗ್ರಹಿಸಿದ ಅವಧಿಗೂ
    ಇಗೋ ನನ್ನ ವಂದನೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading