ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳಾಡಿದ ಆ ಮಾತು ಅಂದು ನನ್ನ ಎದೆಗೆ ತಾಕದಿದ್ದರೆ…

ದಾಂಪತ್ಯವೆಂಬುದು ದೇಹ ಮೀಮಾಂಸೆಯಲ್ಲ…

ಡಾ. ಎನ್.ಜಗದೀಶ್ ಕೊಪ್ಪ

ಕಳೆದ ಎರಡು ದಶಕಗಳಲ್ಲಿ ಈ ಜಗತ್ತು ಮತ್ತು ಜಗತ್ತಿನೊಂದಿಗೆ ತಳಕುಹಾಕಿಕೊಂಡಿರುವ ನಮ್ಮ ಕೌಟುಂಬಿಕ ಬದುಕು, ಇವುಗಳು ಪಡೆದುಕೊಂಡಿರುವ ವೇಗವನ್ನು ಗಮನಿಸಿದರೆ ಅಶ್ಚರ್ಯವಾಗುತ್ತದೆ. ಈ ಕಾರಣದಿಂದಾಗಿಯೆ, ನನ್ನ ತಲೆಮಾರಿಗೆ ವರ್ತಮಾನದ ಜಗತ್ತು ತೀರಾ ಪರಕೀಯವಾಗಿ ಕಾಣುವುದರ ಮೂಲಕ ನಾವು ಬದುಕುತ್ತಿರುವ ಬದುಕು ನಮ್ಮದಲ್ಲ ಎನಿಸಿಬಿಟ್ಟಿದೆ. ಬದಲಾದ ಬದುಕಿನೊಂದಿಗೆ ತೀವ್ರವಾಗಿ ತಿರುವು ತೆಗೆದು ಕೊಂಡ ನಮ್ಮ ಆಲೋಚನಾ ಕ್ರಮಗಳು, ಮನುಷ್ಯ-ಮನುಷ್ಯರ ನಡುವಿನ ಸಂಬಂಧಗಳಲ್ಲಿನ ಬದ್ಧತೆ ಮತ್ತು ವಿಶ್ವಾಸ ಹಾಗೂ ನಂಬಿಕೆಗಳ ತಳಹದಿ ಕುಸಿಯತೊಡಗಿದೆ. ಸರ್ವಜನೊ ಸುಖಿನೊ ಭವಂತು ಎಂಬ ಮನುಕುಲದ ಒಳಿತಿಗಾಗಿ ಇದ್ದ ಪ್ರಾರ್ಥನೆ ಅಳಿಸಿಹೋಗಿ, ಈಗ ಯಾರು ಹೇಗಾದರೂ ಇರಲಿ, ನಾನು ಮತ್ತು ನನ್ನ ಕುಟುಂಬ ಮಾತ್ರ ಕ್ಷೇಮವಾಗಿರಲಿ ಎಂಬ ನೂತನ ಸೂತ್ರಕ್ಕೆ ಬದ್ಧರಾಗಿ ಬದುಕತೊಡಗಿದ್ದೇವೆ. ವೈಯಕ್ತಿಕ ಒಳಿತಿಗಾಗಿ ಹುಟ್ಟುಕೊಂಡ ಇಂತಹ ಅಪಕ್ವ ಪರಿಕಲ್ಪನೆಯಿಂದಾಗಿ ಈ ದಿನಗಳಲ್ಲಿ ಮನುಷ್ಯ ಸಂಬಂಧಗಳ ನಡುವೆ ಅಪನಂಬಿಕೆಯ ಭೂತ ಎದ್ದು ನಿಂತಿದೆ..

ಇತ್ತೀಚೆಗಿನ ವಿವಾಹಗಳು ಮತ್ತು ವಿಚ್ಚೇಧನಗಳನ್ನು ಗಮನಿಸಿದರೆ, ದಾಂಪತ್ಯವೆಂಬುದು ಎರಡು ದೇಹಗಳ ವಾಂಛೆಯನ್ನು ತೀರಿಸಿಕೊಳ್ಳುವ ಸಲುವಾಗಿ ಸಮಾಜದಿಂದ ಅಂಗೀಕರಿಸಲ್ಪಟ್ಟ ಒಂದು ಕುಟುಂಬ ವ್ಯವಸ್ಥೆ ಎಂಬಂತಾಗಿದೆ. ಇದು ಅಧುನಿಕತೆಯ ಭ್ರಮೆಗಳನ್ನು ಬೆಂಬತ್ತಿರುವ ಮಂದಿ ನಂಬಬಹುದಾದ ಒಂದು ಅಪಕ್ವ ಪರಿಕಲ್ಪನೆ ಅಷ್ಟೆ. ಮನುಷ್ಯನ ಮೂಲ ಭೂತ ಅವಶ್ಯಕತೆಗಳಲ್ಲಿ ನೀರಡಿಕೆ ಮತ್ತು ಹಸಿವಿನಂತೆ, ಕಾಮ ಕೂಡ ದಾಂಪತ್ಯದಲ್ಲಿ ಒಂದು. ಆದರೆ, ಇದನ್ನು ಮೀರಿ ಗಂಡು ಹೆಣ್ಣಿನ ನಡುವೆ ನಂಬಿಕೆ, ವಿಶ್ವಾಸ, ನಿಷ್ಟೆ, ಪರಸ್ಪರ ಬದ್ಧತೆ ಇವೆಲ್ಲವೂ ದಾಂಪತ್ಯದಲ್ಲಿ ಅಡಕವಾಗಿರುತ್ತವೆ. ಎರಡು ಸಮಾನ ಮನಸ್ಕ ಹೆಣ್ಣು ಗಂಡಿನ ನಡುವೆ ಬೆಳೆಯುವ ವಿಶ್ವಾಸ, ಪರಸ್ಪರ ಗೌರವ, ಇಬ್ಬರಲ್ಲೂ ಅಡಗಿರಬಹುದಾದ ಪ್ರತಿಭೆಯನ್ನು ಗುರುತಿಸಿ, ಗೌರವಿಸುವಂತಹ ಘನತೆಯುಳ್ಳ ಚಿಂತನೆ ಇವುಗಳು ಎಂದೂ ದಾಂಪತ್ಯಕ್ಕೆ ಎರವಾಗಿಲ್ಲ. ಆದರೆ, ಕಾಲದ ಪರಿಸ್ಥಿತಿಯ ಕೂಸುಗಳಂತೆ ಕಾಣುವ ಇಂದಿನ ತಲೆಮಾರಿಗೆ ಇವುಗಳ ಕುರಿತು ತಣ್ಣಗೆ ಯೋಚಿಸುವ ವ್ಯವಧಾನ ಅಥವಾ ವಿವೇಚನೆ ಕೂಡ ಇದ್ದಂತಿಲ್ಲ.

ದಾಂಪತ್ಯದ ಬದುಕಿನ ವಿರಸದಲ್ಲಿ ನಮಗೆ ಅರಿವಿಲ್ಲದಂತೆ ಅನೇಕ ಅಂಶಗಳು ನಮ್ಮ ಬದುಕಿನೊಂದಿಗೆ ಮಿಳಿತಗೊಂಡಿವೆ. ಇಂದಿನ ಹೆಣ್ಣು ಶಿಕ್ಷಣದ ಮೂಲಕ ಪಡೆದುಕೊಂಡ ಅರಿವು, ಸ್ವಾವಲಂಬಿತನ, ಜಗತ್ತನ್ನು ಎದುರಿಸಬಲ್ಲ ಛಲ ಇವೆಲ್ಲವೂ ಆಕೆಗೆ ಆತ್ಮವಿಶ್ವಾಸ ತಂದುಕೊಟ್ಟವು. ಆದರೆ, ದಾಂಪತ್ಯದ ಬದುಕಿನ ಸಂದರ್ಭಕ್ಕೆ ಇರಬೇಕಾದ ತಾಳ್ಮೆಯನ್ನು ಕಸಿದುಕೊಂಡವು. ಪುರುಷನಾಗಿ ಸಮನಾಗಿ ದುಡಿಯುವ, ಸಂಪಾದಿಸುವ ಮಹಿಳೆ, ತನ್ನ ದೈಹಿಕ ಮತ್ತು ಮಾನಸಿಕ ದಣಿವಿನ ನಡುವೆ ಮನೆಕೆಲಸ, ಮತ್ತು ಇಷ್ಟ ಇರಲಿ, ಇಲ್ಲದಿರಲಿ, ಗಂಡನ ತೃಷೆಯನ್ನು ತೀರಿಸಬೇಕಾದ ಅನಿವಾರ್ಯತೆ ಹೀಗೆ ಹಲವು ಸಂದರ್ಭಗಳಲ್ಲಿ ಆಕೆಯನ್ನು ದಾಂಪತ್ಯದ ವಿಷಯದಲ್ಲಿ ತಾಳ್ಮೆ ಕಳೆದುಕೊಳ್ಳುವಂತೆ ಮಾಡಿವೆ. ಹಿಂದೆ ಪತಿ-ಪತ್ನಿಯ ವಿರಸಕ್ಕೆ ಬಾಂಧವ್ಯದ ಬೆಸುಗೆ ಬೆಸೆಯುತ್ತಿದ ಮಕ್ಕಳು, ಈಗಿನ ದುಡಿಯುವ ದಂಪತಿಗಳ ಪಾಲಿಗೆ ಬೇಡವಾಗಿವೆ. ಅವುಗಳ ಪಾಲನೆ, ಪೋಷಣೆ ದುಡಿಯುವ ದಂಪತಿಗಳಿಗೆ ನಿಜಕ್ಕೂ ಸವಾಲಿನ ವಿಷಯವಾಗಿದೆ. ಭಾರತೀಯ ಸಮಾಜದಲ್ಲಿ ಅಸ್ತಿತ್ವದಲ್ಲಿ ಇದ್ದ ಅವಿಭಕ್ತ ಕುಟುಂಬಗಳ ಪದ್ದತಿ ಕಣ್ಮರೆಯಾಗುತ್ತಿರುವುದು ವರ್ತಮಾನದ ದಾಂಪತ್ಯದ ಬದುಕಿಗೆ ತೊಡಕಾಗಿದೆ.

ಹಿಂದೆ ಸಂಸಾರದ ನೊಗ ಹೊತ್ತ ಪುರುಷ ತನ್ನ ವ್ಯವಹಾರ ಅಥವಾ ಉದ್ಯೋಗದ ವಿಷಯಗಳನ್ನು ಮನೆಯಿಂದ ಹೊರಗಿರಿಸಿ ಬಂದು, ಕುಟುಂಬದಲ್ಲಿ ಪತಿಯಾಗಿ, ಮಕ್ಕಳಿಗೆ ತಂದೆಯಾಗಿ ವರ್ತಿಸುತ್ತಿದ್ದ. ಆದರೆ ಇಂದಿನ ದಿನಗಳಲ್ಲಿ ಉದ್ಯೋಗದ ಸ್ಥಳ ಮತ್ತು ಕುಟುಂಬದ ಸ್ಥಳಗಳ ನಡುವೆ ಇದ್ದ ಗಡಿರೇಖೆ ಅಳಿಸಿ ಹೋಗುತ್ತಿದೆ. ಕೆಲಸದ ಅಭದ್ರತೆ, ನಿಗದಿತ ಅವಧಿಯಲ್ಲಿ ವಹಿಸಿದ ಕೆಲಸವನ್ನು ಮುಗಿಸಬೇಕಾದ ದಾವಂತ ಇವೆಲ್ಲವೂ ಅವನನ್ನು ಕೆಂಡದ ಮೇಲೆ ನಡೆಯುವಂತೆ ಮಾಡಿದೆ. ಕಣ್ಣಿಗೆ ಕಾಣುವ ಇಂತಹ ಸುಡುವ ಸಂಗತಿಗಳ ನಡುವೆ ದಾಂಪತ್ಯದಲ್ಲಿ ನಿಷ್ಟೆ, ಸಂಯಮ, ಮತ್ತು ಬದ್ಧತೆ ಅನಿವಾರ್ಯ. ಆದರೆ, ಬದಲಾಗುತ್ತಿರುವ ಸಂದರ್ಭದಲ್ಲಿ ಸಾಮಾಜಿಕ ನಂಬಿಕೆಗಳು ಮತ್ತು ನೈತಿಕತೆ ಇವೆಲ್ಲವೂ ಪಲ್ಲಟಗೊಂಡಿವೆ.

ಮಾನಸಿಕವಾಗಿ ಇನ್ನೊಬ್ಬ ಪುರುಷನ ಬಗ್ಗೆ ಅಥವಾ ಇನ್ನೊಬ್ಬ ಮಹಿಳೆ ಕುರಿತು ಅಲೋಚಿಸುವುದು ಕೂಡ ಅಪರಾಧ ಅಥವಾ ಅನೈತಿಕೆಯ ಮಾರ್ಗ ಎನ್ನುವ ನಂಬಿಕೆಯ ಕಾಲ ಒಂದಿತ್ತು. ಆದರೆ, ಈಗಿನ ತಲೆಮಾರಿಗೆ ಇವೆಲ್ಲವೂ ಗೊಡ್ಡು ಸಂಗತಿಗಳಾಗಿ ದೇಹದ ಯಾವುದೇ ಅಂಗಾಂಗಗಳನ್ನು ಯಾರೂ ಬೇಕಾದರೂ ಸ್ಪರ್ಶಿಸ ಬಹುದಾದ, ಬಳಸಬಹುದಾದ ಭಾಗಗಳು ಎಂಬಂತಾಗಿವೆ. ಇಂತಹ ಸಂದರ್ಭದಲ್ಲಿ ದಾಂಪತ್ಯ ನಿಷ್ಟೆ ಎಂಬುದು ಅರ್ಥಹೀನ ಸಂಗತಿಯಾಗಿದೆ. ಉದ್ಯೋಗದ ಸ್ಥಳಗಳಲ್ಲಿ ಗಂಟೆಗಟ್ಟಲೆ ಜೊತೆಯಾಗಿರುವ ಸಂದರ್ಭದಲ್ಲಿ ಉಂಟಾದ ಸ್ನೇಹ, ಗೆಳತನ ಆಪ್ತತೆಯನ್ನು ಮೀರಿ, ದಾಂಪತ್ಯದಾಚೆಗಿನ ಸಂಬಂಧಕ್ಕೆ ಕಾರಣವಾಗಿದೆ. ಇವು, ಪತಿ-ಪತ್ನಿಯ ನಡುವೆ ಅಪನಂಬಿಕೆಗೆ ಮೂಲವಾಗಿ ವಿಚ್ಛೇಧನಕ್ಕೆ ಕಾರಣವಾಗುತ್ತಿವೆ.

ಯಾವುದೇ ವಿಚ್ಛೇಧನ ಪ್ರಕರಣಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಅಲ್ಲಿ ಪತಿ ಅಥವಾ ಪತ್ನಿ ಎತ್ತುತ್ತಿರುವ ಪ್ರಶ್ನೆಗಳು ಕ್ಷುಲ್ಲಕ ಸಂಗತಿಗಳಾಗಿ ತೋರುತ್ತವೆ. ನನ್ನ ತಲೆಮಾರಿನ ಅವ್ವ ಮತ್ತು ಅಪ್ಪಂದಿರು ವಿವಾಹಕ್ಕೆ ಮುನ್ನ ಒಬ್ಬರೊನ್ನಬರು ನೋಡದೆ, ಮಾತನಾಡದೆ, ಮನಸ್ಸುಗಳನ್ನು ಅರಿಯದೆ, ಮದುವೆ ಚಪ್ಪರದ ಅಡಿ ಅಂಕದ ಪರದೆ ಸರಿಸಿದಾಗ ಪರಸ್ಪರ ಮುಖನೋಡಿಕೊಂಡು, ಸಂಸಾರ ಮಾಡಿ ಮಕ್ಕಳನ್ನು ಹೆತ್ತು  ಬದುಕಿನ ಕಂತೆ ಒಗೆದು ಹೋದ ಪರಿ ನೆನಪಾಗುತ್ತಿದೆ. ಅವರು ಕೂಡ ಈಗಿನ ದಂಪತಿಗಳ ಹಾಗೆ ಕಿತ್ತಾಟಿಕೊಂಡಿದ್ದರೆ, ನಾವು ಈ ಭೂಮಿಗೆ ಬರಲು ಸಾಧ್ಯವಿತ್ತೆ? ಈ ಕುರಿತು ಯಾವಾಗಲೂ ನಾನು ತಣ್ಣಗೆ ಕುಳಿತು ಯೋಚಿಸುತ್ತಾ ಇರುತ್ತೀನಿ. ಇದು ನೀವು ನೋಡಿರದ ದೃಶ್ಯವೇನಲ್ಲ. ನಾವು ರಸ್ತೆಯಲ್ಲಿ ಸಂಚರಿಸುವಾಗ ಸುಡುವ ಉರಿ ಬಿಸಿಲಿನಲ್ಲಿ ರಸ್ತೆಗೆ ಟಾರ್ ಹಾಕುವ ದಂಪತಿಗಳನ್ನು ಒಮ್ಮೆಯಾದರೂ ಗಮನಿಸಿದ್ದೀರಾ? ಹೆಂಡತಿ ಟಾರ್ ಹಾಕುವ ನೆಲದ ಮೇಲಿನ ದೂಳನ್ನು ಪರ ಪರ ಕೆರದು ಗುಡಿಸಿ ಸ್ವಚ್ಛ ಮಾಡುತ್ತಾ ಇರುತ್ತಾಳೆ.

ಗಂಡ ರಸ್ತೆಯ ಮೇಲೆ ಹರಡಿದ ಜಲ್ಲಿ ಕಲ್ಲಿನ ಮೇಲೆ ಸುಡುವ ಟಾರ್ ಹಾಕುತ್ತಿರುತ್ತಾನೆ. ದಿನವಿಡಿ ದುಡಿದು ರಸ್ತೆಯ ಪಕ್ಕದಲ್ಲಿ ಖಾಲಿಯಾದ ಟಾರ್ ಡ್ರಮ್ ಗಳನ್ನು ಕತ್ತರಿಸಿದ ಶೀಟ್ ನಿಂದ ಮಾಡಿಕೊಂಡ ಕೇವಲ ಮೂರು ಅಡಿ ಎತ್ತರದ ಗೂಡಿನಲ್ಲಿ ವಾಸಿಸುತ್ತಾರೆ. ಗೂಡಿನ ಮುಂದೆ ಮೂರು ಕಲ್ಲು ಸೇರಿಸಿ, ಮಾಡಿದ ಒಲೆಯಲ್ಲಿ ಅಡುಗೆ ಬೇಯಿಸಿ ತಿಂದು ಮಲಗಿದಾಗ ಅವರ ಪಾಲಿಗೆ ಆದಿನ ಮುಗಿಯಿತು. ನಿನ್ನೆಗಳ ಪರಿವಿಲ್ಲದ, ನಾಳೆಗಳ ಚಿಂತೆಗಳಿಲ್ಲದ, ವರ್ತಮಾನಕ್ಕಷ್ಟೇ ಅಂಟಿಕೊಂಡು ಬದುಕುವ ಅವರು ಎಂದೂ ತಮ್ಮೊಳಗಿನ ಅಹಂ ಕುರಿತು ಚಿಂತಿಸಲಿಲ್ಲ. ನಮ್ಮ ಪಾಲಿಗೆ ಅಶಿಕ್ಷಿತರಂತೆ, ಅಸ್ಪೃಶ್ಯರಂತೆ ಕಾಣುವ ಈ ಮುಗ್ದ ಜನರಿಂದ ನಾವು ಕಲಿಯಬಹುದಾದ ಅನೇಕ ಪಾಠಗಳಿವೆ.

ಒಮ್ಮೆ ಹಳ್ಳಿಗಳತ್ತ ಹೋದಾಗ ಅಲ್ಲಿನ ವೃದ್ಧ ದಂಪತಿಗಳನ್ನು ಗಮನಿಸಿದಾಗ ಆಶ್ಚರ್ಯವಾಗುತ್ತದೆ. ದೃಷ್ಟಿ ಕಳೆದುಕೊಂಡು, ಕೈ ಕಾಲುಗಳ ಶಕ್ತಿ ಕಳೆದು ಕೊಂಡು ಮಗುವಿನಂತಾಗಿರುವ ತನ್ನ ಗಂಡನಿಗೆ ಅಜ್ಜಿಯೊಬ್ಬಳು ಅವನ ಮುಖ, ಮುಕುಳಿ ತೊಳೆದು ಸ್ವಚ್ಛ ಮಾಡುವಾಗ ದಾಂಪತ್ಯ ಎಂದರೆ ಏನು ಎಂಬುದು ಅರ್ಥವಾಗತೊಡಗುತ್ತದೆ. ಇಂತಹವರು ನಮ್ಮಂತಹವರ ಪಾಲಿಗೆ ದಾಂಪತ್ಯ ಕುರಿತ ಅಲಿಖಿತ ಪಠ್ಯಗಳು. ನಾವು ಘಟಿಸಿದ ಒಂದು ಕ್ಷಣ ಅಥವಾ ಒಂದು ದಿನವನ್ನು ಕುರಿತು, ಆ ಸಂದರ್ಭದ ನಮ್ಮ ನಡುವಳಿಕೆಗಳನ್ನು ಪರಾಮರ್ಶಿಸಿದರೆ, ಎಷ್ಟೋ ಬಾರಿ ಆ ರೀತಿ ನಾನು ನಡೆದುಕೊಳ್ಳಬಾರದಿತ್ತು ಎಂದು ಮನಸ್ಸಿಗೆ ಅನಿಸುತ್ತದೆ. ಇಂತಹ ಮನಸ್ಥಿತಿ ನಮ್ಮ ದಾಂಪತ್ಯದಲ್ಲಿ ಇರಬೇಕು. ಪರಸ್ಪರ ತಪ್ಪುಗಳನ್ನು ಅರಿತು ನಡೆಯುವ ಮನಸ್ಸುಗಳಿಗೆ ದಾಂಪತ್ಯ ಎಂದೂ ಕಹಿಯಾಗಿಲ್ಲ. ಈ ಸಂದರ್ಭದಲ್ಲಿ ಹಾಲೆಂಡಿನ ವಿಶ್ವ ವಿಖ್ಯಾತ ಕಲಾವಿದ ರೆಂಬ್ರಾಂಡೆಂಟ್ನ ಬದುಕು ನೆನಪಾಗುತ್ತಿದೆ. 17 ನೇ ಶತಮಾನದ ವಿಶ್ವದ ಶ್ರೇಷ್ಟ ಕಲಾವಿದರಲ್ಲಿ ಒಬ್ಬನಾಗಿದ್ದ ರೆಂಬ್ರಾಂಡೆಂಟ್ಗೆ ಮೊದಲಿನಿಂದಲೂ ಮನುಷ್ಯರ ಏಕಾಂಗಿತನದ ವರ್ತನೆಗಳನ್ನು ಗಮನಿಸುವ ಹುಚ್ಚು. ಚಿತ್ರ ರಚಿಸುವ ಮುನ್ನ ರಸ್ತೆಗಳಲ್ಲಿ ಸಂಚರಿಸುತ್ತಾ, ಚಪ್ಪಲಿ ಹೊಲೆಯುವವ, ಅಥವಾ ಬೂಟ್ ಪಾಲಿಷ್ ಮಾಡುವ ವ್ಯಕ್ತಿಯೊಬ್ಬ ಆಸೆಗಣ್ಣಿನಿಂದ ಅವರ ಮುಂದೆ ನಡೆದಾಡುವ ಜನಗಳ ಪಾದರಕ್ಷೆಗಳನ್ನು ಗಮನಿಸುವುದನ್ನು ಮತ್ತು ಬಿಕ್ಷುಕರು ಆಸೆಯಿಂದ ಕೈಯೊಡ್ಡುವ ಕ್ಷಣ, ಬಿಕ್ಷೆ ನೀಡದೆ ವ್ಯಕ್ತಿಯೊಬ್ಬ ಮುಂದೆ ಸಾಗಿದಾಕ್ಷಣ ಬಿಕ್ಷುಕನ ಮುಖದಲ್ಲಿ ಉಂಟಾಗುವ ನಿರಾಸೆ ಹೀಗೆ ಇಂತಹ ಅನೇಕ ಸಂಗತಿಗಳನ್ನು ಗಮನಿಸುವುದು ರೆಂಬ್ರಾಂಡೆಂಟ್ಗೆ ದಿನಚರಿಯಾಗಿತ್ತು .

ಕೊನೆಗೆ ಇದು ಅವನ ಪಾಲಿಗೆ ವ್ಯಸನವಾಗಿ ತನ್ನ ಮನೆಯಲ್ಲಿ ಪತ್ನಿ ಏಕಾಂಗಿಯಾಗಿ ಅಡುಗೆ ಮಾಡುವಾಗ ಅಥವಾ ಸ್ನಾನ ಮಾಡುವಾಗ, ಕದ್ದು ಇಣುಕಿ ನೋಡುವ ಹುಚ್ಚಾಗಿ ಪರಣಮಿಸಿಬಿಟ್ಟಿತು. ಅವನ ಈ ಹುಚ್ಚಿನಿಂದಾಗಿ ಇಬ್ಬರು ಪತ್ನಿಯರು ಅವನನ್ನು ತ್ಯಜಿಸಿ ಹೋದರು. ಮೂರನೇಯವಳಾಗಿ ಬಂದ ಒಬ್ಬ ಅಶಿಕ್ಷಿತೆ ಹೆಣ್ಣು ಮಗಳು ರೆಂಬ್ರಾಂಡೆಂಟ್ನ ಹುಚ್ಚುಗಳಿಗೆ ತಲೆ ಕೆಡಿಸಿಕೊಳ್ಳದೆ, ಆತನೊಂದಿಗೆ ಸುಧೀರ್ಘ ದಾಂಪತ್ಯ ನಡೆಸಿದಳು. ಆತನ ಕೊನೆಯ ದಿನಗಳಲ್ಲಿ ಮುವತ್ತೈದು ವರ್ಷದ ಮಗ, ತನ್ನ ಅಪ್ಪನ ಈ ವಿಚಿತ್ರ ವರ್ತನೆಯನ್ನು ಪ್ರಶ್ನಿಸಿ, ಇಷ್ಟು ವರ್ಷಗಳಲ್ಲಿ ನಿನ್ನನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ರೇಗಾಡುತ್ತಾನೆ. ಆಗ ರೆಂಬ್ರಾಂಡೆಂಟ್ ಮಗನಿಗೆ ತಣ್ಣನೆಯ ಧ್ವನಿಯಲ್ಲಿ ಉತ್ತರಿಸುತ್ತಾ, ಈ ಎಪ್ಪತ್ತೈದು ವರ್ಷಗಳಲ್ಲಿ ನನ್ನನ್ನು ನಾನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ, ಇನ್ನು ಮುವ್ವತ್ತೈದು ವರ್ಷದ ನೀನು ಹೇಗೆ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂಬ ಪ್ರಶ್ನೆಯನ್ನು ಎಸೆದು, ಮಗನ ಬಳಿ ನಿಂತಿದ್ದ ಹತ್ತು ವರ್ಷದ ಮೊಮ್ಮಗನ ಕೈ ಹಿಡಿದುಕೊಂಡು ಮನೆಯ ಮುಂದಿನ ದಿಬ್ಬದತ್ತ ಸಂಜೆಯ ವ್ಯಾಯಾಮಕ್ಕಾಗಿ ಹೆಜ್ಜೆ ಹಾಕುತ್ತಾನೆ.

ಇದು ಮನುಷ್ಯ ತನ್ನನ್ನು ತಾನು ಅರಿಯುವ ಪರಿ ಎಂದು ನಾನು ಭಾವಿಸುತ್ತೇನೆ. ಹಾಗೆ ನೋಡಿದರೆ, ನನ್ನ ಬದುಕು ಮತ್ತು ದಾಂಪತ್ಯ ವಿಸ್ಮಯವಾದುದು. 42 ವರ್ಷಗಳ ಹಿಂದೆ ( 1972 ರಲ್ಲಿ) ಎಸ್.ಎಸ್.ಎಲ್.ಸಿ. ಪಾಸಾಗಿ ಅಪ್ಪ ತೆಗೆದುಕೊಟ್ಟ ಎರಡು ಕುರಿ ಹಾಗೂ ಒಂದು ಹಸುವನ್ನು ಮೇಯಿಸುತ್ತಿದ್ದೆ. ಊರಿಗೆ ಹೊಸ ಇಂಜಿನಿಯರ್ ಆಗಿ ಬಂದ ಆ ಕಾಲದ ಕೋಟಾಧೀಶ್ವರನ 13 ವರ್ಷದ ಮಗಳೊಬ್ಬಳು ಲೇ ಹುಡುಗ ನೀನು ಅಂದ್ರೆ ನನಗಿಷ್ಟ ಕಣೋ ಎಂದುಬಿಟ್ಟಳು. ಅವಳನ್ನು ಮದುವೆಯಾಗುವ ಏಕೈಕ ಗುರಿಯೊಂದಿಗೆ ಮತ್ತೆ ನಾಲ್ಕು ವರ್ಷಗಳ ಅಂತರ ನಡುವೆಯೂ ಶಿಕ್ಷಣ ಮುಂದುವರಿಸಿ, ಸ್ನಾತಕೋತ್ತರ ಪದವಿ ಮುಗಿಸಿ ಅವಳಪ್ಪನ ಮುಂದೆ ಬಂದು ನಾನು ನಿಲ್ಲುವ ವೇಳೆಗೆ, ನನ್ನನ್ನು ಪ್ರೀತಿಸಿದ ತಪ್ಪಿಗೆ ಮತ್ತು ಅವಳಪ್ಪನ ಸಿಟ್ಟಿಗೆ ಬಲಿಯಾದ ನನ್ನ ಪ್ರೀತಿಯ ಹುಡುಗಿ 15 ವರ್ಷ ಗೃಹ ಬಂಧನದಲ್ಲಿದ್ದಳು. ಅವಳಾಡಿದ ಆ ಮಾತು ಅಂದು ನನ್ನ ಎದೆಗೆ ತಾಕದಿದ್ದರೆ, ಇಂದು ನಾನು ಒಬ್ಬ ಪತ್ರಕರ್ತನಾಗಿ, ಲೇಖಕನಾಗಿ ಹೊರಹೊಮ್ಮಲು ಸಾಧ್ಯವಾಗುತ್ತಿರಲಿಲ್ಲ. ಬೇಸಾಯಗಾರನಾಗಿ ಕಳೆದು ಹೋಗುತ್ತಿದ್ದೆ.

ಅಂದಿನ ಕಾಲದ ನಮ್ಮ ಹೋರಾಟದಲ್ಲಿ ನಾವಿಬ್ಬರೂ ಅನುಭವಿಸಿದ ಅಪಮಾನ, ಹಿಂಸೆ, ನೋವುಗಳ ನಡುವೆ ಆ ದಿನಗಳಲ್ಲಿ ಇಬ್ಬರಿಗೂ ಇದ್ದದ್ದು ಒಂದೇ ಗುರಿ, ಕೇವಲ ಒಂದು ದಿನವಾದರೂ ಸರಿ ನಾವು ದಂಪತಿಗಳಾಗಿ ಬದುಕಿ ಈ ಸಮಾಜಕ್ಕೆ ತೋರಿಸಬೇಕು ಎಂಬ ಹಠ. ಇಂತಹ ಹಠವೇ ನಮ್ಮನ್ನು 25 ವರ್ಷದ ದಾಂಪತ್ಯದ ಬದುಕಿಗೆ, 40 ವರ್ಷದ ಪ್ರೀತಿಯ ಬದುಕಿನ ಅಂಚಿಗೆ ತಂದು ನಿಲ್ಲಿಸಿದೆ. ಎಂದೂ ನಮ್ಮಗಳ ನಡುವೆ ಅಹಂ ಆಗಲಿ, ಸಂಶಯವಾಗಲಿ ಇಣುಕಲಿಲ್ಲ. ಅವಳು ನನ್ನ ಪಾಲಿಗೆ ಗೆಳತಿ, ಗುರು, ತಾಯಿ, ಹೆಂಡತಿಯಾದರೆ, ನಾನು ಅವಳ ಪಾಲಿಗೆ ಗಂಡ, ಗೆಳೆಯ, ಇತ್ಯಾದಿ. ಈ ಕಾರಣಕ್ಕಾಗಿ ನನ್ನ ಪಾಲಿಗೆ ದಾಂಪತ್ಯವೆಂಬುದು ದೇಹ ಮೀಮಾಂಸೆಯಂತೆ ಎಂದೂ ಕಂಡು ಬರಲಿಲ್ಲ.

( ಸಹೋದರಿ, ಕಥೆಗಾರ್ತಿ, ಸುನಂದಾ ಕಡಮೆ ಅವರ ಕೋರಿಕೆ ಮೇರೆಗೆ ದಾಂಪತ್ಯ ಕುರಿತ ಸಮೀಕ್ಷೆಗೆ ನೀಡಿದ ಪ್ರತಿಕ್ರಿಯೆ)

‍ಲೇಖಕರು avadhi

21 May, 2013

5 Comments

  1. ರೂಪ ಹಾಸನ

    ಮನಸು ಮುಟ್ಟುವ ಬರಹ ಸರ್. ಧನ್ಯವಾದಗಳು.

  2. kumar

    Beautiful words…. i am really great full to u…

  3. ಪ್ರಮೋದ್

    ಒಳ್ಳೆಯ, ಆಪ್ತ, ಹೃದಯಕ್ಕೆ ಹತ್ತಿರದ ಬರಹ.
    ನೀವು ಹೇಳುವುದು ನಿಜ.
    ” ಬದಕು ಎನ್ನುವುದು ಕೊಳಲು ಇದ್ದಂತೆ.ಅದರಲ್ಲಿ ತುಂಬಾ ರಂಧ್ರಗಳು,ಖಾಲಿತನವೇ ತುಂಬಿರುತ್ತೆ.ಆದರೆ ಜಾಣತನದಿಂದ ನುಡಿಸುವ ಕಲೆ ಒಲಿದರೆ ಆ ರಂಧ್ರ ಹಾಗೂ ಖಾಲಿತನಗಳಿಂದ ಅದ್ಭುತ ಜೀವನ ಸಂಗೀತವನ್ನು ನುಡಿಸಬಹುದು.” ~ ಡಾ॥ ವಿರೂಪಾಕ್ಷ ದೇವರಮನೆ (ಸ್ವಲ್ಪ ಮಾತಾಡಿ ಪ್ಲೀಸ್)

  4. Swarna

    ಸುಂದರ ಬರಹ

  5. nagraj.harapanahalli

    ವಿಶ್ವ ವಿಖ್ಯಾತ ಕಲಾವಿದ ರೆಂಬ್ರಾಂಡೆಂಟ್ನ ಬದುಕಿನಂತೆ ಮನುಷ್ಯ ಮನಸ್ಸು ಸಂಕೀರ್ಣ ವಾದುದು . ಹಾಗಾಗಿ ಮನುಷ್ಯ ಯಾಕಾಗಿ ಹೀಗೆ ವರ್ತಿಸುತ್ತಾನೆ ಎಂದು ಹೇಳಲಾಗದು. ೪೦-೪೫ ರ ಅಸುಪಾಸಿನಲ್ಲಿ ನಾವಿದ್ದೇವೆ. ಆಗಿನ ಆದರ್ಶ ಮರೆಯಾಗುತ್ತಿದೆ. ಕಾಲದೊಂದಿಗೆ ಹೆಜ್ಜೆ ಹಾಕುವುದಷ್ಟೇ ನಮಗೆ ಉಳಿದಿರುವ ದಾರಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading