ಅವರು ಸಚಾರ್..

ಶ್ರದ್ಧಾಂಜಲಿ
ನ್ಯಾಯಮೂರ್ತಿ ರಾಜೇಂದ್ರ ಸಚಾರ್

ಶೂದ್ರ ಶ್ರೀನಿವಾಸ್

ಇತ್ತೀಚೆಗೆ ತಮ್ಮ 94 ನೆಯ ವಯಸ್ಸಿನಲ್ಲಿ ನ್ಯಾಯಮೂರ್ತಿ ಸಚಾರ್ ಅವರು ನಿಧನರಾದರು. ಒಬ್ಬ ಸಮಾಜವಾದಿಯಾಗಿ, ಮಾನವ ಹಕ್ಕುಗಳ ಹೋರಾಟಗಾರರಾಗಿ ತಮ್ಮ ಬದುಕಿನುದ್ದಕ್ಕೂ ತೊಡಗಿಸಿಕೊಂಡವರು.

ತಮ್ಮ ವಿದ್ಯಾರ್ಥಿ ದಿನಗಳಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವುದರ ಜೊತೆಗೆ ಜಯಪ್ರಕಾಶ್ ನಾರಾಯಣ್, ರಾಮಮನೋಹರ ಲೋಹಿಯಾ ಮುಂತಾದವರ ಸಂಪರ್ಕದಿಂದ ಸಮಾಜವಾದಿ ಚಿಂತನೆಗಳನ್ನು ತಮ್ಮದಾಗಿಸಿಕೊಂಡರು.

ತಮ್ಮ ಬಾಲ್ಯಕಾಲವನ್ನೆಲ್ಲ ಲಾಹೋರ್ ನಲ್ಲಿ ಕಳೆದರು. ಕಾಲೇಜು ವಿದ್ಯಾಭ್ಯಾಸದ ಜೊತೆಗೆ ಕಾನೂನು ಪದವಿಯನ್ನು ಅಲ್ಲಿಯೇ ಪಡೆದರು. ಆದರೆ ಭಾರತ ವಿಭಜನೆಗೊಂಡಮೇಲೆ ಅತ್ಯಂತ ವಿಷಾದದಿಂದ ಸಿಮ್ಲಾದಲ್ಲಿ ನ್ಯಾಯವಾದಿಯಾಗಿ ಕಾರ್ಯನಿರ್ವಹಿಸಬೇಕಾಯಿತು.

ವಿಭಜನೆಯ ಸಮಯದಲ್ಲಿ ಎರಡೂ ದೇಶಗಳ ಜನತೆ ಅನುಭವಿಸಿದ ಸಂಕಷ್ಟಗಳನ್ನು ಅತ್ಯಂತ ಮಾನವೀಯ ಚೌಕಟ್ಟಿನಲ್ಲಿ ಗ್ರಹಿಸಲು ಪ್ರಯತ್ನಿಸಿದರು. ಆ ಹಿನ್ನೆಲೆಯಲ್ಲಿ ನ್ಯಾಯವಾದಿಯಾಗಿ ದುಡಿಯುತ್ತಲೇ ದೆಹಲಿಯ ಮುಖ್ಯ ‌ನ್ಯಾಯಾಧೀಶರಾಗಿ ನಿವೃತ್ತಿ ಹೊಂದಿದರು.

ಜಯಪ್ರಕಾಶ್ ನಾರಾಯಣ್ ಅವರು ಮಾನವ ಹಕ್ಕುಗಳ ರಕ್ಷಣೆಗಾಗಿ ಎರಡು ಬಹುಮುಖ್ಯ ಸಂಘಟನೆಗಳನ್ನು ಈ ದೇಶಕ್ಕೆ ಕೊಟ್ಡರು. ಒಂದು ಪಿ.ಯು.ಸಿ.ಎಲ್  (ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ )  ಮತ್ತೊಂದು ಸಿ.ಎಫ್.ಡಿ (ಸಿಟಿಜನ್ ಫಾರ್ ಡೆಮಾಕ್ರಸಿ)

ಇಂದು ಈ ಎರಡೂ ಸಂಘಟನೆಗಳು ಭಾರತದ ಉದ್ದಗಲಕ್ಕೂ ಎಲ್ಲಾ ವರ್ಗದ ಪ್ರಜ್ಞಾವಂತರನ್ನು ತೊಡಗಿಸಿಕೊಂಡಿರುವಂತದ್ದು. ಇದರಲ್ಲಿ ನ್ಯಾಯಮೂರ್ತಿ ಸಚಾರ್ ಅವರು ತಮ್ಮನ್ನು ತೊಡಗಿಸಿಕೊಂಡು ಮಾಡಿರುವ ಕೆಲಸ ಸ್ಮರಣೀಯವಾದದ್ದು. ಇಂಥ ಮಹನೀಯರ ಜೊತೆಗೆ ನ್ಯಾಯಮೂರ್ತಿ ಕೃಷ್ಣಯ್ಯರ್, ನ್ಯಾಯಮೂರ್ತಿ ಶ್ರೀಕೃಷ್ಣ, ಪ್ರಸಿದ್ಧ ನ್ಯಾಯವಾದಿ ವಿ.ಎಂ.ತಾರ್ಕುಂಡೆಯಂತಹವರು ರಾಷ್ಟ್ರದುದ್ದಗಲಕ್ಕೂ ಸುತ್ತಾಡಿ ಅತ್ಯಂತ ಪರಿಣಾಮಕಾರಿಯಾಗಿ ಜೀವ ತುಂಬಿದರು. ಕುಲದೀಪ ನಯ್ಯರ್, ಅರುಣ್ ಶೌರಿಯಂತಹವರೂ ನ್ಯಾಯಮೂರ್ತಿ ಸಚಾರ್ ಅವರ ಜೊತೆಯಲ್ಲಿ ಕೆಲಸಮಾಡಿದವರು.

ನಾವು ಕೆಲವರು ಪಾಕಿಸ್ತಾನದ ಲಾಹೋರ್ ನಲ್ಲಿ ನಡೆದ ಶಾಂತಿ ಸಮಾವೇಶದಲ್ಲಿ ಭಾಗವಹಿಸಿ ದೆಹಲಿಯಲ್ಲಿ ಕುಲದೀಪ ನಯ್ಯರ್ ಅವರ ಮನೆಗೆ ಹೋಗಿ ಸಮಾವೇಶದ ಹೆಚ್ಚುಗಾರಿಕೆಯನ್ನು ತಿಳಿಸುತ್ತಿದ್ದಾಗ ಅವರು ‘ಇದನ್ನು ಜಸ್ಟೀಸ್ ಸಚಾರ್ ಅವರಿಗೂ ತಿಳಿಸಿ ಅವರು ತುಂಬಾ ಸಂತೋಷಪಡುತ್ತಾರೆ’ ಎಂದರು. ಸಚಾರ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ನಮ್ಮನ್ನು ಕಳಿಸಿಕೊಟ್ಟರು. ನಮಗೆ ಸಂಭ್ರಮ. ಅಂತಹ ಹಿರಿಯರನ್ನು ನೋಡುವ ಅವಕಾಶ ಸಿಗುತ್ತಿದೆಯಲ್ಲ ಎಂದು.

ನಾವು ನಯ್ಯರ್ ಅವರಿಗೆ ಧನ್ಯವಾದಗಳನ್ನು ತಿಳಿಸಿ ಅವರನ್ನು ಭೇಟಿಯಾಗಲು ಹೋದೆವು. ಅತ್ಯಂತ ಸರಳವಾದ ಮನೆ. ಎಲ್ಲಿನೋಡಿದರಲ್ಲಿ ಪುಸ್ತಕ ಗಳು, ವಿವಿಧ ನಿಯತಕಾಲಿಕೆಗಳು. ನವೆಂಬರ್ ತಿಂಗಳ ಚಳಿಯಲ್ಲಿ ಅವರ ಬೆಚ್ಚನೆಯ ಮಾತಿಗೆ ಫುಳಕಿತರಾಗಿದ್ದೆವು.

ಲಾಹೋರ್ ಶಾಂತಿ ಸಮಾವೇಶದ ಹೆಚ್ಚುಗಾರಿಕೆಯನ್ನು ವಿವರಿಸಿದಾಗ; ಅವರು ಮತ್ತೆ ತಮ್ಮ ಬಾಲ್ಯದ ನೆನಪಿಗೆ ಹೋದವರ ರೀತಿಯಲ್ಲಿ ಪ್ರೀತಿ ಮತ್ತು ಅಭಿಮಾನವನ್ನು ನಮಗೆ ಧಾರೆಯೆರೆದಿದ್ದರು. ಅದರಲ್ಲೂ ಲಾಹೋರ್ ಎಂಥ ಅಪೂರ್ವ ನಗರ ಎಂದು ಹೇಳುತ್ತಲೇ ಅದರ ಸಾಂಸ್ಕೃತಿಕ ‌ಶ್ರೀಮಂತಿಕೆಯನ್ನು ನಮಗೆ ವಿವರಿಸಿದ್ದರು.

ನಾನು ಲೋಹಿಯಾ ಅವರು ಇದ್ದ ಜೈಲನ್ನು ನೋಡಿಬಂದೆ ಎಂದಾಗ; “ಲೋಹಿಯಾ ಅವರು ಆ ಜೈಲಿನಲ್ಲಿ ಅತ್ಯಂತ ಭೀಕರ ಸಂಕಷ್ಟಗಳನ್ನು ಅನುಭವಿಸಿದ ಕಾರಣಕ್ಕಾಗಿ ‘ಯೋಗದಲ್ಲಿ ಒಂದು ಅಧ್ಯಾಯ ‘ ಎಂಬ ಅಮೂಲ್ಯ ಲೇಖನ ಬರಲು‌ ಸಾಧ್ಯವಾಯಿತು. ನೀವೆಲ್ಲ ಓದಲೇಬೆಕಾದ ಲೇಖನ” ಎಂದಾಗ ನಾನು ಅದು ನನಗೆ ತುಂಬಾ ಪ್ರಿಯವಾದ ಲೇಖನ ಎಂದು ತಿಳಿಸಿದಾಗ ನನ್ನ ಕೈಕುಲುಕಿದ್ದರು.

ಈ ಲೇಖನ ನಮ್ಮ ಶಾಂತವೇರಿ ಗೋಪಾಲಗೌಡರಿಗೆ ಆತ್ಮೀಯವಾದ ಲೇಖನ. ಗೌಡರು ತಮ್ಮ ಕೊನೆಯ ದಿನಗಳಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೈಬಲ್ ರೀತಿಯಲ್ಲಿ ಅದನ್ನು ಓದಿ ಕೊಳ್ಳುತ್ತಿದ್ದರು. ಆ ಲೇಖನದಲ್ಲಿ “ಹೋರಾಟಗಾರನಿಗೆ ಎಲ್ಲಾ ಭೀಕರ ಸಂಕಷ್ಟಗಳನ್ನು ಎದುರಿಸುವುದಕ್ಕೆ ಸಹನಾಮಯತೆ ಬೇಕಾಗುತ್ತದೆ. ಅದು ಲಾಹೋರ್ ಜೈಲು ಕಲಿಸಿತು” ಎಂದು ಲೋಹಿಯಾ ಮಾರ್ಮಿಕವಾಗಿ ನುಡಿಯುವರು.

ನಾವು ನ್ಯಾಯಮೂರ್ತಿ ಸಚಾರ್ ಅವರ ಮನೆಯನ್ನು ಬಿಡುವ ಸಮಯದಲ್ಲಿ ಗೇಟಿನ ಬಳಿ ಬಂದು ಮತ್ತಷ್ಟು ಮಾತಾಡಿ ಕಳಿಸಿಕೊಟ್ಟರು.ಅವರ ವ್ಯಕ್ತಿತ್ವದ ಬಾಹುಳ್ಯವನ್ನು ಕಂಡು ಪ್ರೊಫೆಸರ್ ಹಸನ್ ಮನ್ಸೂರ್ ಮತ್ತು ಗೆಳೆಯರಾದ ಜಿ.ಕೆ.ಸಿ ರೆಡ್ಡಿ ಯವರು ದಾರಿಯುದ್ದಕ್ಕೂ ಆ ಹಿರಿಯ ಚೇತನವನ್ನು ಕೊಂಡಾಡುತ್ತಲೇ ಇದ್ದರು.

ಇಂತಹ ಬಹುದೊಡ್ಡ ವ್ಯಕ್ತಿತ್ವ ಇದ್ದುದರಿಂದ 2005 ರಲ್ಲಿ ಮನಮೋಹನ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಮುಸ್ಲಿಮ್ ಬಾಂಧವರ ಶೈಕ್ಷಣಿಕ, ಆರ್ಥಿಕ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಒಂದು ವರದಿಯನ್ನು ಸಿದ್ಧಪಡಿಸಲು ಸಮಿತಿಯನ್ನು ರಚಿಸಿದರು. ಅದರ ಅಧ್ಯಕ್ಷರಾಗಿ ನ್ಯಾಯಮೂರ್ತಿ ಸಚಾರ್ ಅವರನ್ನು ನೇಮಿಸಿತು. ಅವರ ಧಕ್ಷತೆಯ ಕಾರಣಕ್ಕಾಗಿ ‘ಸಚಾರ್ ವರದಿ’ ಎಂದು ‌ಭಾರತದ ಉದ್ದಗಲಕ್ಕೂ ಚರ್ಚೆಯಾಗತೊಡಗಿತು. ಮುಸ್ಲಿಮ್ ಬಾಂಧವರು ಅದನ್ನು ಅತ್ಯಂತ ಆಶಾಭಾವದಿಂದ ಬರಮಾಡಿಕೊಂಡರು.

ಯಾವುದೇ ನಾಗರೀಕ ಸಮಾಜದಲ್ಲಿ ಸಮಾನತೆಯೇ ಅದರ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಮೃದ್ಧತೆಯನ್ನು ಕಾಪಾಡಿ ಬೆಳೆಸುವುದು ಎಂಬುದನ್ನು ಗಂಭೀರವಾಗಿ ನಂಬಿದ್ದರು. ಈ ನೆಲೆಯಲ್ಲಿ ಅವರು ಬೆಂಗಳೂರಿನಲ್ಲಿ ಕೊಟ್ಟ ಎರಡು ಉಪನ್ಯಾಸ ಸ್ಮರಣೀಯವಾದದ್ದು.

ಅವರ ಬದುಕಿನ ಚೈತನ್ಯಶೀಲತೆ ಈ ದೇಶದ ಎಲ್ಲ ಸುಶಿಕ್ಷಿತ ಮನಸ್ಸುಗಳಲ್ಲಿ ಸದಾ ಗುನುಗುನಿಸಲಿ ಎಂದು ಶ್ರದ್ಧಾಂಜಲಿಯ ನೆಪದಲ್ಲಿ ಆಶಿಸುವೆ.

‍ಲೇಖಕರು avadhi

April 25, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: