ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವರು ‘ಶ್ರದ್ಧಾಂಜಲಿ’ ಬರೆದರು..

ಕಾಳಿಮುತ್ತು ನಲ್ಲತಂಬಿ 

ಖುಶ್ವಂತ್ ಸಿಂಗ್ ಅವರ ‘ಡೆತ್ ಅಟ್ ಮೈ ಡೋರ್ ಸ್ಟೆಪ್ಸ್’ (ಸಾವು ನನ್ನ ಹೊಸಿಲಲ್ಲಿ) ಎಂಬ ಪುಸ್ತಕವನ್ನು ಪರಿಚಯಿಸಿದ ಗೆಳಯರಾದ ಜಗದೀಶ್ ಕೊಪ್ಪ ಅವರಿಗೆ ಧನ್ಯವಾದಗಳನ್ನು ಹೇಳುತ್ತಾ –

ಈ ಪುಸ್ತಕ ಖುಶ್ವಂತ್ ಸಿಂಗ್ ಅವರಿಗೆ ಪರಿಚಯವಿರುವ, ಗೆಳೆಯರ, ಬೇಟಿಯಾದ, ಸಂದರ್ಶಿಸಿದ ಪ್ರಬಲ ವ್ಯಕ್ತಿಗಳ ಮತ್ತು ಪ್ರಮುಖವಲ್ಲದ ವ್ಯಕ್ತಿಗಳ ಸಂತಾಪ ಲೇಖನಗಳ ಸಂಗ್ರಹ.

ಖುಶ್ವಂತ್ ಸಿಂಗ್ ಅವರ ಆಂಗ್ಲ ಭಾಷೆಯ ಶೈಲಿ, ಅವರ ಕಠೋರ ಕುಚೋಧ್ಯ, ವಯಸ್ಸು ಎಂಬತ್ತು ಮೀರಿದ್ದರೂ ಇಪ್ಪತ್ತರ ‘ಬಿಲೋ ದ ಬೆಲ್ಟ್’ ಹಾಸ್ಯದ ತುಂಟತನ, ಅಷ್ಟೇ ತೀವ್ರವಾದ ಮಾನವೀಯ ನವಿರಾದ ಭಾವನೆಗಳು ಓದುಗರ ಮನ ಸೆಳೆಯದೆ ಬಿಡದು.

ಓದಿ ಮುಗಿಸಿದಮೇಲೆ ಸಾವಿನ ಬಗ್ಗೆ ಅನೇಕ ಭಾವನೆಗಳು ಹುಟ್ಟಿಕೊಂಡವು. ನಾವೆಲ್ಲರೂ ಬದುಕುವುದು ನಾವು ಅಮರರು ಎಂಬಂತೆ. ದಿನನಿತ್ಯ ಎಲ್ಲಾ ಬಗೆಯ ಮಾಧ್ಯಮಗಳಲ್ಲಿ, ನಮ್ಮ ಬಂದು ಬಾಂಧವರ, ಗೆಳೆಯರ ಸಾವುಗಳನ್ನು ಕೇಳಿ, ನೋಡಿದ್ದರೂ ನಮ್ಮನ್ನು ಸಾವು ಮುಟ್ಟದು ಎಂದು ಅಳುಕಿಲ್ಲದೆ ಬದುಕುತ್ತೇವೆ. ನಿದ್ದೆಯಿಂದ ಏಳುತ್ತೇವೊ ಎಂಬುದು ಖಚಿತವಿಲ್ಲದಿದ್ದರೂ ಶತಮಾನಗಳಿಗೆ ಬೇಕಾದ ಕನಸುಗಳನ್ನು ಕಾಣುತ್ತೇವೆ. ಆದರೂ ಒಮ್ಮೊಮ್ಮೆ ಸಾವು ಎಲ್ಲರನ್ನೂ ಬೆದರಿಸುತ್ತದೆ. ಬಹುಶಃ ಮನುಷ್ಯನನ್ನು ಬೆದರಿಸುವ ಶಕ್ತಿ ಸಾವಿಗೆ ಮಾತ್ರ ಎಂದಣಿಸುತ್ತದೆ. ಯಮನಿಗೂ ಸಾವಿದ್ದರೆ ಅವನೂ ಸಾವಿಗೆ ಹೆದರುತ್ತಿದ್ದನೋ ಏನೋ!

ಅಳಿವು ದೇಹಕ್ಕೆ, ಆತ್ಮ ಶಾಶ್ವತ ಎನ್ನುತ್ತಾನೆ ಕೃಷ್ಣ. ಅಳಿದು ಹೋಗುವ ದೇಹದಲ್ಲೇಕೆ ಇಷ್ಟೊಂದು ಭಾವನೆಗಳನ್ನು ತುಂಬಿದ ತಿಳಿಯದು – ಪ್ರೀತಿ, ಕರುಣೆ, ದ್ವೇಷ, ಕ್ರೌರ್ಯ, ಅಸೂಯೆ, ಅಭಿಮಾನ, ಬಿಗುಮಾನ ಹೀಗೆ. ಹಾಗೆ ಶಾಶ್ವತವಾಗಿ ಉಳಿದ ಆತ್ಮವ ನೋಡಿದವರನ್ನು ನಾನಿನ್ನೂ ಕಂಡಿಲ್ಲ. ಸಾವಿನ ನಂತರ ಹೋಗುವ ದೇಶ, ಊರು, ಕೇರಿ ನನಗೆ ಗೊತ್ತಿಲ್ಲ. ಕೆಲವರು ಸ್ವರ್ಗ ಎಂಬ ಹೆಸರಲ್ಲೂ, ಇನ್ನು ಕೆಲವರು ನರಕ ಎಂದೂ ಕರೆಯುತ್ತಾರೆ. ಅಲ್ಲಿಗೆ ಹೋಗಿ ಬಂದವರನ್ನು ನಾನಂತೂ ಕಂಡಿಲ್ಲ, ಕೇಳಿಲ್ಲ.

ರಜನೀಶ್, ಭುಟ್ಟೊ, ಸಂಜಯ್ ಗಾಂಧಿ, ಟಿಕ್ಕ ಖಾನ್, ಮಥಾಯಿ, ರಜನಿ ಪಟೇಲ್, ಧಿರೇನ್ ಭಗತ್, ಮೌಂಟ್ ಬೇಟ್ಟನ್, ಆರ್.ಕೆ.ನಾರಾಯಣ್, ಪ್ರೋತಿಮಾ ಬೇಡಿ, ಫೈಜ್ ಅಹಮದ್ ಫೈಜ್, ನರ್ಗೀಸ್ ದತ್, ಅಮೃತಾ ಸೈಗಲ್, ಚೇತನ್ ಆನಂದ್, ನೀರಜ್ ಚೌದ್ರಿ, ಪಿ.ಸಿ.ಲಾಲ್, ಅಲಿ ಸರ್ದಾರ್ ಜಫ್ರಿ ಹೀಗೆ ಇನ್ನೂ ಅನೇಕರ ಬಗ್ಗೆ ಬರೆಯುತ್ತಾರೆ.

ಸ್ಪಾನಿಷ್ ಲೇಖಕ ಗೇಬ್ರಿಯಲ್ ಗ್ರೇಶಿಯಾ ಮಾರ್ಕ್ವೆಸ್ ಒಂದು ಕನಸನ್ನು ವಿವರಿಸುತ್ತಾನೆ. ಅವನೇ ಖುದ್ಧಾಗಿ ಅವನ ಶವ ಮೆರವಣಿಗೆಯಲ್ಲಿ ಪಾಲ್ಗೊಂಡಂತೆ. ಶವ ಸಂಸ್ಕಾರವೆಲ್ಲ ಮುಗಿದ ಮೇಲೆ ನೆಂಟರು, ಗೆಳೆಯರು ಎಲ್ಲರೊಂದಿಗೆ ಇವನೂ ಹಿಂತಿರುಗುತ್ತಾನೆ. ಆಗ ಅವರಲ್ಲಿ ಒಬ್ಬ ‘ನೀನೊಬ್ಬ ಹಿಂದಿರುಗಲಾಗದು’ ಎನ್ನುತ್ತಾನೆ ಆಗ ಮಾರ್ಕ್ವೆಸ್ ಅಂದುಕೊಳ್ಳುತ್ತಾರೆ ‘Dying means never being with friends’ ಸಾಯುವುದೆಂದರೆ ಎಲ್ಲವನ್ನೂ ಕಳೆದುಕೊಳ್ಳುವುದೆಂದೇ? ಹಾಗೆ ಕಳೆದುಕೊಳ್ಳಬೇಕೆಂಬುದಕ್ಕಾಗಿಯೇ ಸಾವು ಬೇಡವೆನಿಸುತ್ತದೆಯೇ? ಉಳಿಸಿಕೊಳ್ಳುವುದರಲ್ಲಿ, ಉಳಿದು ಹೋಗುವುದರಲ್ಲಿ ನಮಗೇಕೆ ಅಷ್ಟೊಂದು ಮೋಹ?

ಸಾವಿಗೆ ಹೆದರದವರು ಬಹಳ ವಿರಳ. ಘಟಾನುಘಟಿಗಳು ಎನಿಸಿಕೊಂಡವರೂ ಹೆದರಿದರು. ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಜುಲ್ಪಿಕರ್ ಅಲಿ ಭುಟ್ಟೊ, ಮೂರನೆಯ ಜಗತ್ತಿನ ರಾಷ್ಟ್ರದ ನಾಯಕನೆನಿಸಿಕೊಳ್ಳಬೇಕೆಂದು ಕನಸು ಕಂಡವನು, ದೇಶ ವಿಭಜನೆಗೆ ಮೊದಲು ಬಾಲಿವುಡ್ಡಿನಲ್ಲಿ ಹೀರೋ ಆಗಬೇಕೆಂದುಕೊಂಡ ಸುಂದರಾಂಗ ಜಾಣ, ಜೈಲಿನಲ್ಲೂ ಸೂಟುಧಾರಿಯಾಗಿ ಮೆಟಿಕ್ಯುಲಸ್ಲಿ ದಿರಿಸು ಧರಿಸಿದವನು, ಶಿಕ್ಷೆಗೊಳಗಾಗಿ ಗಲ್ಲುಗಂಬ ಹತ್ತುವ ಸ್ವಲ್ಪ ದಿನಗಳ ಮುನ್ನ ಹೇಳಿದ ಮಾತು ‘ಮರ್ನಾ ಬಹುತ್ ಮುಷ್ಕಿಲ್ ಹೋತಾ ಹೈ’. ಅವನ ಅಭಿಪ್ರಾಯ ಹಾಗಿದ್ದರೆ ಇನ್ನು ಕೆಲವರದು ‘ಸಾಯುವ ಮುನ್ನ ಯಾರೊಂದಿಗೂ ಯಾವ ಋಣವೂ ಇರಬಾರದು. ಕ್ರಿಯಾ ಕರ್ಮದ ವೆಚ್ಚ ಸಹ ತಮ್ಮದೇ ಆಗಿರಬೇಕು’ – ‘ನಮ್ಮ ಇಚ್ಚೆಯಿಂದ ಬಂದಿಲ್ಲ, ನಮ್ಮ ಖುಷಿಯಿಂದ ಹೋಗಲಾಗದು.’

ಸಾಕೆಂದು ಸಾವನ್ನು ಬಯಸಿ ಸತ್ತ ಮಹಾತ್ಮರು, ಶ್ರೇಷ್ಠ ಉದ್ಧೇಶಗಳಿಗಾಗಿ ಮರಣವಪ್ಪಿದ ಹುತಾತ್ಮರು, ಕೊಲೆಯಾದವರು, ಅಪಘಾತಕ್ಕೆ ಈಡಾದವರು, ಆತ್ಮಹತ್ಯೆ ಮಾಡಿಕೊಂಡವರು ಅಬ್ಬಬ್ಬಾ, ಸಾವಿಗೆಷ್ಟೊಂದು ರೂಪಗಳು. ಆದರೆ ಸಾವು ಬಿಟ್ಟು ಹೋಗುವ ಬದುಕಿಗೆ ಯಾರು ಉತ್ತರ ಹೇಳುವುದು?

ವ್ಯಕ್ತಿ ಬದುಕಿರುವಾಗ ಅವನಿಗೆ ನ್ಯಾಯವಾಗಿ ಸಲ್ಲಬೇಕಾದ ಪ್ರೀತಿ, ಗೌರವ, ಮರ್ಯಾದೆ ದೊರಕಬೇಕು. ತಮಿಳು ಕವಿ ಸುಬ್ರಮಣ್ಯ ಭಾರತಿ ಸತ್ತಾಗ ಅವರ ಸಂಸ್ಕಾರಕ್ಕೆ ಕೇವಲ ಹದಿಮೂರು ಜನ ಇದ್ದರಂತೆ. ಆದರೆ ಇಂದು ಅವರನ್ನು ಸಾಹಿತ್ಯ ಲೋಕವೇ ಕೊಂಡಾಡುತ್ತಿದೆ. ಸತ್ತ ಮೇಲೆ ಕೊಡುವ ಮುತ್ತಿಗೆ ರುಚಿ ಇಲ್ಲ.

ಇನ್ನಿಲ್ಲದ ಕೆಲವರ ಫೋನ್ ನಂಬರ್ ಇಂದಿಗೂ ನನ್ನ ಮೊಬೈಲ್ ನಲ್ಲಿ ಉಳಿದಿದೆ. ಎಂದಾದರೂ ಕರೆ ಬರಬಹುದೆಂದು ಕಾಯುತ್ತಿದ್ದೇನೆಯೇ!

ಅಟಲ್ ಬಿಹಾರಿ ವಾಜಪೇಯಿ ಅವರ ‘ಮೇರೆ ಎಕ್ಯಾನ್ವಿ ಕವಿತಾಯೇ’ ಎಂಬ ಕವನ ಸಂಕಲನದ ಒಂದು ಕವಿತೆಯ ಸಾಲುಗಳು – “ಹೇ, ಈಶ್ವರ್ ಮುಜೆ ಇತ್ನಾ ಶಕ್ತಿ ದೇ, ಜಬ್ ತುಂ ದಸ್ತಕ್ ದೇತೆ ಹೋ ಥೋ, ಮೈ ಖುದ್ ಆಕೇ ದರ್ವಾಜಾ ಖೋಲ್ನಾ’, ಸಾವು ಬರುವಾಗ ಸ್ವಾಗತಿಸುವ ಧೈರ್ಯ ಇದ್ದರೆ ಸಾಕು ಬದುಕು ಸಾರ್ಥಕ!

ಸತ್ತ ಮೇಲೂ ಇನ್ನೊಂದಿಷ್ಟು ಕಾಲ ಭೂಮಿಯಲ್ಲಿ ಕೊನೆಯ ಪಕ್ಷ ಭಾಗಶಃವಾದರೂ ಬದುಕುಳಿಯುವ ನನಗೆ ತಿಳಿದ ಒಂದೇ ಮಾರ್ಗ – ಅಂಗಾಂಗ ದಾನ. ನಾವು ಸತ್ತ ಮೇಲೂ ನಮ್ಮ ಕಣ್ಣುಗಳು ಸೌಂದರ್ಯವನ್ನು ನೋಡಬಹುದು, ಹೃದಯ ಇನ್ಯಾರಿಗಾದರೂ ಬಡಿದುಕೊಳ್ಳಬಹುದು – ಹೀಗೆ.

ಮುಖೇಶ್, ರಾಜಕಪೂರ್ ನೆನಪಾಗುತ್ತಾರೆ – ‘ಜೀನ ಯಹ ಮರ್ನಾ ಯಹಾ ಇಸ್ಕೆ ಸಿವಾ ಜಾನ ಕಹಾ….’

Finally, we shed our colourless tears to the dead!

‍ಲೇಖಕರು avadhi

1 April, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading