ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವರು 'ಮೀಡಿಯಾ ಡೈರಿ' ಗೌಡ್ರು..

ಆ ಕರಾಳ ರಾತ್ರಿಯಲ್ಲಿ ಮೆದುಳ ಚೂರು ಹುಡುಕಿದ

ಪತ್ರಕರ್ತ ಪುಸ್ತಕಬರೆದ …

ನಾಗರಾಜ್ ಹೆತ್ತೂರು

ಅದೊಂದು ಕರಾಳ ರಾತ್ರಿ. ಹಾಸನದ ವಿದ್ಯಾನಗರದಲ್ಲಿದ್ದ ಮನೆಗೆ ಹೋಗಬೇಕಿತ್ತು. ರಾತ್ರಿ 2 ರ ಸಮಯ. ಈ ಹಾಸನದ ಎಂ.ಜಿ ರಸ್ತೆಯಲ್ಲಿ ಸಂಚರಿಸುವುದು ಭಯ ಎಂಬಂತಿತ್ತು. ಆದರೆ ನಾವು ಪತ್ರಕರ್ತರು ದೆವ್ವ ಭೂತಗಳಿಗೆ ಹೆದರುವುದಿಲ್ಲ ಎಂಬ ನಂಬಿಕೆ. ಆದರೂ ಎಲ್ಲೋ ಒಂದು ಕಡೆ ಅಳುಕು. ಆದರೆ ಪತ್ರಕರ್ತರ ಗಂಟಲಿಗೆ ದೇವರಸ ಇಳಿಯಿತೆಂದರೆ ಯಾವ ಅಳುಕೂ ಇಲ್ಲ, ಪಳುಕೂ ಇಲ್ಲ. ಇಂತಹ ಸಂದರ್ಭದಲ್ಲಿ ಹಾಸನದ ಎಂ.ಜಿ. ರಸ್ತೆಯಲ್ಲಿ ಇಲ್ಲಿನ ಪ್ರತಿಷ್ಠಿತ ವ್ಯಕ್ತಿಯೊಬ್ಬರ ಮಗ ಬೇಗವಾಗಿ ಬೈಕ್ ಓಡಿಸಿ ಮರಕ್ಕೆ ಡಿಕ್ಕಿ ಹೊಡೆದು ಪ್ರಾಣ ಬಿಟ್ಟ. ಆ ಅಪಘಾತ ನಿಜಕ್ಕೂ ಹಾರಿಬಲ್ ನನ್ನನ್ನೂ ಒಳಗೊಂಡಂತೆ ಖುದ್ದು ಇಡೀ ಹಾಸನದ ಜನತೆ ಆ ಅಪಘಾತ ನೋಡಿ ದಂಗು ಬಡಿದಿದ್ದರು. ಅಪಘಾತದ ತೀವ್ರ ಹೇಗಿತ್ತೆಂದರೆ ಅಪಘಾತ ನಡೆದ ರಭಸಕ್ಕೆ ಆ ವ್ಯಕ್ತಿಯ ಮೆದುಳು ಚಿಪ್ಪು ಹಾರಿ ಮಾಂಸದ ಚೂರು ಮರಕ್ಕೆ ಅಂಟಿಕೊಂಡಿತ್ತು. ಮೆದುಳಿನ ಚೂರುಗಳು ಮಾರನೆ ದಿನ ಬೆಳಗ್ಗೆವರೆಗೂ ಅಪ್ಪಚ್ಚಿಯಾಗಿ ಅಂಟಿಕೊಂಡಿದ್ದವು. ಅಂತಹ ಬೀಕರ ಅಪಘಾತ.
ಹೀಗಾಗಿ ಅಪಘಾತ ನಡೆದ ವಾರದವರೆಗೂ ಆ ಭಾಗದಲ್ಲಿ ಜನ 10 ರ ನಂತರ ನಡೆದಾಡಲು ಭಯಪಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಒಂದು ದಿನ ನಾನು ನನ್ನ ಗೆಳೆಯ ಕೆಲಸ ಮುಗಿಸಿ ಮಧ್ಯರಾತ್ರಿ ಹಾಸನದ ಬಸ್ ನಿಲ್ಧಾಣದಲ್ಲಿ ಹರಟೆ ಹೊಡೆಯುತ್ತ ಕುಳಿತೆವು. ಅದು ನಮ್ಮ ಮಾಮೂಲಿ ಜಾಗ. ಲೋಕಾಭಿರಾಮ ಹರಟೆ ಜತೆ ವಾದ-ವಾಗ್ವಾದಗಳು ನಡೆದವು. ನಾವು ಸೇರಿಕೊಂಡಲ್ಲಿ ವಾದವಿವಾದಗಳಿಗೆ ಕೊನೆಯೇ ಇಲ್ಲ. ಸರಿ ಮನೆಗೆ ಹೋಗೋಣ ಎಂದು ಸರಿ ರಾತ್ರಿ ಹೊರಟೆವು. ಎಂ.ಜಿ ರಸ್ತೆಗೆ ಬರುವಷ್ಟರಲ್ಲಿ ನನ್ನ ಆ ಆಸ್ನೇಹಿತನಿಗೆ ಏನೆನ್ನಿಸಿತೋ ಏನೋ, `ಲೋ ನಾಗ ಮೊನ್ನೆ ಆಕ್ಸಿಡೆಂಟ್ ಆಯಿತಲ್ಲಾ ಆ ಮರದ ಹತ್ತಿರ ಹೋಗೋಣ’ ಎಂದ.

ನನಗೆ ಭಯ ಜತೆಗೆ ಅಚ್ಚರಿ. `ಮಗಾ ಬೇಡ ಈಗಾಗಲೇ ಇಲ್ಲಿ ಅದು, ಇದು ಹೆದುರುಸ್ತಿದೆ ಅನ್ತಿದ್ದಾರೆ. ಅದ್ರು ಜತೆಗೆ ಮೆದುಳು ಚಿಪ್ಪು ಹಾರಿ ಹೋಗಿರುವುದರಿಂದ ಯಾರಿಗಾದ್ರೂ ತಗಲು ಹಾಕೊಳ್ಳೋ ಚಾನ್ಸಿದೆ ಅಂತ ಮಾತಾಡ್ತಿದ್ದಾರೆ ಸುಮ್ನೆ ಮನೆಗೆ ಹೋಗೋಣ’ ಎಂದೆ. ಆದರೆ ಆ ಆಸಾಮಿ ಬಿಡುವಂತೆ ಕಾಣಲಿಲ್ಲ. ಅದೇನಾದ್ರೂ ಆಗ್ಲಿ ಮಗಾ ಈವತ್ತು ಅಲ್ಲಿ ಹೋಗಿ ನೋಡೇ ಬಿಡೋಣ ಎಂದವನೇ ಬೈಕಿನಲ್ಲಿ ಕುಳಿತ. ಚಿತ್ತಾದ ಪರಿಸ್ಥಿತಿಯ ನಡುವೆ ನೋಡಿಯೇ ಬಿಡೋಣ ಎಂದು ಇಬ್ಬರೂ ಹೊರಟೆವು.
ಇಲ್ಲಿನ ಪೆಟ್ರೋಲ್ ಬಂಕ್ ದಾಟಿ ಮರದ ಹತ್ತಿ ಬರುತ್ತಿದ್ದಂತೆ ನನ್ನ ಎದೆ ಬಡಿತ ಹೆಚ್ಚುತ್ತಿತ್ತು. ಆದರೂ ಭಂಡ ಧೈರ್ಯ. ನಮ್ಮೆದುರಿಗೆ ಇದ್ದ ಆ ಭೀಮಗಾತ್ರದ ಮರ ನೋಡಿಯೇ ನಮಗೆ ಒಂದು ಕ್ಷಣ ಹತ್ತಾರು ಆಲೋಚನೆಗಳು ಪ್ರಾರಂಭವಾದವು. ನೋಡನೋಡುತ್ತಿದ್ದಂತೆ ನನ್ನ ಆ ಸ್ನೇಹಿತ ಮರದ ಮುಮದೆ ನಿಂತವನೇ ಮರವನ್ನು ಮುಟ್ಟಿ ಏನು ಆಗುವುದಿಲ್ಲ ಎಂದು ಖಾತ್ರಿ ಮಾಡಿಕೊಂಡ. `ಮುಟ್ಟು ಮಗ’ ಎಂದು ನನ್ನನ್ನೂ ಪ್ರೇರೇಪಿಸಿದ. ನಾನೋ ಹೆದರುತ್ತಲೇ ಮುಟ್ಟಿದೆ. ನೋಡು ಮಗಾ ಇಲ್ಲಿಯೇ ಅಂಟಿಕೊಂಡಿದ್ದು ಮೆದುಳಿನ ಚಿಪ್ಪು ಎಂದು ಕೆದಕಿ ಕೆದಕಿ ತೆಗೆಯಲಾರಂಭಿಸಿದ. ಕೊನೆಗೆ ಇಬ್ಬರೂ ಇನ್ವೆಸ್ಟಿಗೇಷನ್ ಶುರು ಮಾಡಿದೆವು. ಬೈಕ್ ಹೇಗೆ ಬಂದು ಹೊಡೆಸಿರಬಹುದು ಎಂದು. ಅಂತಹ ಕರಾಳ ರಾತ್ರಿಯಲ್ಲಿ ನಿಜಕ್ಕೂ ಅದೊಂದು ಅದ್ಭುತ ಅನುಭವ. ರಸ್ತೆ ಬದಿಯ ಒಂದು ಲೈಟ್ ಬಿಟ್ಟರೇ ಮತ್ತೇನೂ ಇಲ್ಲ. ಹೀಗೆ ಇಬ್ಬರೂ ಮರ ಮುಟ್ಟಿದ್ದು ಆಯಿತು.. ತಬ್ಬಿದ್ದೂ ಆಯಿತು. ಅವನಿಗೆ ಅದು ಯಾವ ಪರಿ ಇಷ್ಟವಾಯಿತೆಂದರೆ ಮಗಾ ನೋಡು ಇದೊಂದು ಅದ್ಭುತ ಅನುಭವ ಅಲ್ಲವಾ..? ಎನ್ನುತ್ತಿದ್ದ. ಅರ್ಧ ಘಂಟೆ ಕಳೆದ ನಾವು ಜೀವ ತೆಗೆದುಕೊಂಡ ಈ ಮರದ ಕೆಳಗೆ ಒಂದು ಐತಿಹಾಸಿಕ ತೀರ್ಮಾನ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿದೆವು. ಆ ಮರವನ್ನು ತಬ್ಬಿ ಹಿಡಿದು ನಮಸ್ಕರಿಸಿದ ನಾವು ಇನ್ನು ಮುಂದೆ ಬೈಕನ್ನು ಸ್ಪೀಡಾಗಿ ಓಡಿಸಬಾರದು ಎಂಬ ತೀರ್ಮಾನ ಮಾಡಿ ಮರಕ್ಕೆ ಆಣೆ ಮಾಡಿಕೊಂಡೆವು. ಅಷ್ಟು ಹೊತ್ತಿನಲ್ಲಿ ನಾವು ಮಾಡಿಕೊಂಡ ಆಣೆಗೆ ಮರ ಮಾತ್ರ ಸಾಕ್ಷಿಯಾಗಿತ್ತು.

ಅಷ್ಟು ಹೊತ್ತಿನಲ್ಲಿ ಆ ಮರವನ್ನು ತಬ್ಬಿಕೊಂಡು ರಿಸರ್ಚ್ ಮಾಡಿ ಆಣೆ ಮಾಡಿಕೊಂಡ ವ್ಯಕ್ತಿ ಬೇರೆ ಯಾರೂ ಅಲ್ಲ ಅದೇ ‘ಕೌಬಾಯ್’ ಎಂದೇ ಖ್ಯಾತವಾಗಿರುವ ಪತ್ರಕರ್ತ ಎಂ.ಬಿ. ಶ್ರೀನಿವಾಸಗೌಡ.
ಗೌಡನನ್ನು ಈಗ ನೆನಪಿಸಿಕೊಳ್ಳಲು ಮತ್ತು ಈ ಘಟನೆಯನ್ನು ಹೇಳಲು ಕಾರಣವಾಗಿದ್ದು ಈಚೆಗೆ ಆತ ಬರೆದಿರುವ ಜಿ.ಎನ್ ಮೋಹನ್ ಸಂಪಾದಕತ್ವದ ‘ಮೀಡಿಯಾ ಡೈರಿ’ ಎಂಬ ಪುಸ್ತಕವನ್ನು ತಿರುವಿ ಹಾಕುತ್ತಿದ್ದೆ. ಆಗ ನೆನಪಾಯಿತು ಈ ಘಟನೆ. ನನ್ನ ಆತ್ಮೀಯರಲ್ಲಿ ಒಬ್ಬನಾದ ಗೌಡ ಮೈಸೂರಿನಲ್ಲಿ ನನ್ನ ಕಾಲೇಜು ಸಹಪಾಠಿ. ಎಲ್ಲಕ್ಕೂ ಮಿಗಿಲಾಗಿ ನಾವೆಲ್ಲ ಒಂದು ಗುಂಪು ವ್ಯವಸ್ಥೆ ಬಗ್ಗೆ ಅಪಾರವಾಗಿ ಚರ್ಚಿಸುವ, ಅಸಹನೆ ವ್ಯಕ್ತಪಡಿಸುವ, ಖಂಡಿಸುವ ಕ್ರಾಂತಿಕಾರಿಗಳು ಎಂದರೂ ತಪ್ಪಿಲ್ಲ. ಜನ ನಾವೂ ಇದ್ದೇವೆ ಎಂದು ಒಂದಷ್ಟು ಹೋರಾಟ ಮಾಡಿ ಹಾಸನದಲ್ಲಿ ನಮ್ಮದೇ ಯುವಕರ ಒಂದು ಸಾಂಸ್ಕೃತಿಕ ಚೌಕಟ್ಟಿಗೆ ಬುನಾದಿ ಹಾಕಿದ್ದು , ನಾನು, ಗೌಡ, ಕೆ.ಜಿ. ಸುರೇಶ್, ಪಿ ಮಂಜುನಾಥ್, ಮಂಜು ಬನವಾಸೆ, ಹಳ್ಳಿ ಸುರೇಶ್ ಮುಂತಾದವರು.
ಅದಿರಲಿ,
ಇಂತಹ ಗೌಡ ಹೇಗೆ ಪುಸ್ತಕ ಬರೆದಿದ್ದಾನೆ ಎಂಬ ಕುತೂಹಲ ಇತ್ತು. ಒಬ್ಬ ಪತ್ರಕರ್ತನಾದವನಿಗೆ ಸೂಕ್ಷ್ಮತೆ ಯಾವ ಮಟ್ಟದಲ್ಲಿರಬೇಕು ಎಂಬುದನ್ನು ಗ್ರಹಿಸಬೇಕಾದರೆ ಗೌಡನ ಮೀಡಿಯಾ ಡೈರಿ ಓದಬೇಕು. ಗೌಡ ಹೈದರಾಬಾದ್ನಲ್ಲಿ, ಹಾಸನದಲ್ಲಿ ನಂತರ ಬೆಂಗಳೂರು ಹೀಗೆ ಈಟಿವಿ ವರದಿಗಾರನಾಗಿ ದೆಹಲಿಯಲ್ಲಿ ಕಾರ್ಯನಿರ್ವಹಿಸಿದ್ದಾನೆ.
ಹೀಗೆ ತಾನು ಕೆಲಸ ಮಾಡುವ ಸಂದರ್ಭದಲ್ಲಿ ಕಂಡ ಘಟನಾವಳಿಗಳನ್ನು, ಅನುಭವಗಳನ್ನು ಅದ್ಭುತವಾಗಿ ಗ್ರಹಿಸಿ ದಾಖಲಿಸಿದ್ದಾನೆ. ಈ ಎಲ್ಲಾ ಲೇಖನಗಳನ್ನು ಓದುತ್ತಾ ಹೋದರೆ ನಿಜಕ್ಕೂ ಪತ್ರಕರ್ತನಾಗಲು ಹೊರಟವರಿಗೆ ಮೊದಲ ಪಾಠದಂತಿವೆ. ಮತ್ತು ಆಸಕ್ತಿ ಹುಟ್ಟಿಸುತ್ತವೆ. ಕೆಲವು ಸಂದರ್ಭದಲ್ಲಿ ಪತ್ರ್ರಕರ್ತರಿಗೆ ಎಲ್ಲರೂ ಕೇಳುತ್ತಿರುತ್ತಾರೆ ನಿಮಗೆ ಹೇಗೆ ಸುದ್ದಿ ಸಿಗುತ್ತವೆ ? ಎಂದು. ಅದಕ್ಕೆ ಗೌಡನ ಈ ಪುಸ್ತಕದಲ್ಲಿ ಉತ್ತರವಿದೆ. ಹಾಸನದಲ್ಲಿ ಈ ಗೌಡ ಯಾವ ಮಟ್ಟದಲ್ಲಿ ಹವಾ ಎಬ್ಬಿಸಿದ್ದ ಎಂದರೆ ಮಾಜಿ ಸಚಿವ ರೇವಣ್ಣ ಯಾವುದೇ ಪತ್ರಿಕಾಗೋಷ್ಠಿ ನಡೆದರೂ `ಗೌಡ್ರು ಎಲ್ರಿ ಅವ್ರು ಬರೊವರ್ಗು ಕಾಯ್ರಿ ಎಂದು ಕಾಯಿಸುತ್ತಿದ್ದರು. ಇದರಿಂದ ಇತರೆ ಪತ್ರಕರ್ತರಿಂದ ಸಿಟ್ಟಿಗೂ ಒಳಗಾಗಿದ್ದ. ಮಹಾನ್ ಮಾತುಗಾರ. ಅದು ಯಾವ ಮಟ್ಟಿಗೆ ಹೋಗಿತ್ತೆಂದರೆ ಒಮ್ಮೆ ರೇವಣ್ಣ ಬರ ನೋಡುತ್ತೇವೆ ಎಂದು ಹಾಸನದಲ್ಲಿ ಇಳಿದಿದ್ದಾಗ ಗೌಡನನ್ನು ಹೆಲಿಕಾಪ್ಟರ್ ನಲ್ಲಿ ಕೂರಿಸಿಕೊಂಡು ಹೋಗಿದ್ದರು. ಇಡೀ ಪತ್ರಕರ್ತರ ವಲಯದಲ್ಲಿ ಅದು ಯಾವ ಮಟ್ಟದ ಸುದ್ದಿಯಾಗಿತ್ತು ಎಂದರೆ ರೇವಣ್ಣ ಗೌಡರನ್ನು ಹೆಲಿಕಾಪ್ಟರ್ ನಲ್ಲಿ ಕರೆದುಕೊಂಡು ಹೋಗಿ ಕಾಣದ ಜಾಗದಲ್ಲಿ ದುಡ್ಡು ಕೊಟ್ಟರಂತೆ ಎಂದು. ವಿಚಾರ ಕೇಳಿ ನಾವೆಲ್ಲ ನಕ್ಕು ಮಜಾ ತೆಗೆದುಕೊಂಡಿದ್ದೆವು.
ಹೀಗೆ ಆತನ ಪತ್ರಿಕೋದ್ಯಮದ ಅನುಭವಗಳನ್ನು ದಾಖಲಿಸಿರುವ ಈ ಪುಸ್ತಕ ಎಲ್ಲ ಪತ್ರಕರ್ತರ ಅನುಭವ ಎನ್ನುವಂತಿದ್ದರೂ ಗೌಡನ ಆಲೋಚನಾ ಲಹರಿ ಮತ್ತು ನೋಡುವ ದೃಷ್ಠಿಕೋನಗಳ ಬಗ್ಗೆ ಇಲ್ಲಿ ಯೋಚಿಸಲೇಬೇಕು. ಪತ್ರಕರ್ತ ಒಬ್ಬ ಪತ್ರಕರ್ತನಾಗಿಯೇ ಇದ್ದರೆ ಅದಕ್ಕೆ ಬೆಲೆ ಇಲ್ಲ ಮತ್ತು ಆತನನ್ನು ಯಾರೋ ಪರಿಗಣಿಸುವುದಿಲ್ಲ. ಆದರೆ ಅದರ ಹೊರತಾಗಿ ಸಾಮಾಜಿಕ ಜವಾಬ್ಧಾರಿಯಿಂದ ನೋಡಿದಲ್ಲಿ ಮಾತ್ರ ನಿಜವಾದ ಪತ್ರಕರ್ತನಾಗಿ ಗುರುತಿಸಿಕೊಳ್ಳಲು ಸಾಧ್ಯ. ಈ ಗುಣಗಳು ಗೌಡನಲ್ಲಿರುವುದನ್ನು ಆತನ ಪುಸ್ತಕದಲ್ಲಿ ಗಮನಿಸಬಹುದು. ಆದ್ದರಿಂದಲೇ ಹಾಸನದಲ್ಲಿ ದಾಷ್ಟ್ಯ್ಕಕೊಳಗಾಗದೆ ಪತ್ರ್ರಿಕೋದ್ಯಮ ಮಾಡಿದ ಎಂಬದು ನನ್ನ ವ್ಯಯಕ್ತಿಕ ಅನಿಸಿಕೆ. ಇದಕ್ಕಾಗಿ ಜಿಲ್ಲೆಯ ಕೆಲ ಪತ್ರಕರ್ತರನ್ನು ಎದುರು ಹಾಕಿಕೊಂಡ. ಇಡೀ ಪುಸ್ತಕದಲ್ಲಿ ಸಣ್ಣ ಸಣ್ಣ ಅನುಭವಗಳನ್ನು ದಾಖಲಿಸಿರುವ ಆತನ ಬರೆಯುವ ಕಲೆ ನಿಜಕ್ಕೂ ಸೂಕ್ಷ್ಮಗ್ರಹಿ ಮನಸ್ಸನ್ನು ತೋರುತ್ತದೆ.
ಗೆಳೆಯರ ಬಾಲವನ್ನು ನೆನಪಿಸಿಕೊಳ್ಳುವುದರ ಜತೆ ಆತನ ಆ ಸ್ನೇಹಿತರ ವರ್ಗವಿದೆಯಲ್ಲಾ ನಿಜಕ್ಕೂ ಅದೂ ಕೂಡ ಈತನ ಅನುಭವದ ಪಾಠಗಳೇ ಇಡೀ ಪುಸ್ತಕದಲ್ಲಿ ಸಣ್ಣ ಸಣ್ಣ ಅನುಭವಗಳನ್ನು ದಾಖಲಿಸಿರುವ ಆತನ ಬರೆಯುವ ಕಲೆ ನಿಜಕ್ಕೂ ಸೂಕ್ಷ್ಮಗ್ರಹಿ ಮನಸ್ಸನ್ನು ತೋರುತ್ತದೆ. ನಿಜ ಹೇಳಬೇಕೆಂದರೆ ಗೌಡ ಒಬ್ಬ ಒಳ್ಳೆ ಬರಹಗಾರ. ಹಾಸನದಲಿದ್ದಷ್ಟು ದಿನ ಕಂಪ್ಯೂಟರ್ ಮುಂದೆ ಕುಳಿತು ಒಂದಕ್ಷರ ಟೈಪ್ ಮಾಡಿದ್ದನ್ನು ನಾನು ನೋಡಿದ ಉದಾಹರಣೆ ಇಲ್ಲ. ಈ ಮನುಷ್ಯನಿಗೆ ಜಗತ್ತಿನ ಹೊಸದರ ಬಗ್ಗೆ ಅದ್ಯಾವ ಪರಿ ಆಸಕ್ತಿ ಎಂದರೆ ಒಮ್ಮೆ ಮನೆಯಲಿದ್ದ ನನಗೆ ಕರೆ ಮಾಡಿ `ಲೋ ನಾಗ ನಿಮ್ಮ ಮನೆ ನೆಟ್ ನಲ್ಲಿ ಬಂದಿದೆ ತೋರಿಸ್ತಿನಿ ಬಾರೋ’ ಎಂದು ಕರೆದ. ನನಗೆ ಅಚ್ಚರಿ. ಇಂಟರ್ನೆಟ್ ನಲ್ಲಿ ನಮ್ಮ ಮನೆ ಎಂದು ಸುವರ್ಣ ಹೋಟೆಲ್ ಹತ್ತಿರ ಓಡಿದ್ದೇ ಓಡಿದ್ದು ` ಅಲ್ಲಿ ಗೂಗಲ್ ನಲ್ಲಿ ಉಪಗ್ರಹ ಚಿತ್ರದಲ್ಲಿ ಜೂಮ್ ಇನ್ ಮಾಡಿ ನಮ್ಮ ಮನೆ ತೋರಿಸಿ ಅದಕ್ಕೊಂದು ಹೆಸರು ಇಡುವವರೆಗೂ ಬಿಡಲಿಲ್ಲ.
ಪತ್ರಿಕೋದ್ಯಮ ಕಲಿಯಲು ಬರುವವರಿಗೆ ಇದೊಂದು ಉತ್ತಮ ಪುಸ್ತಕ. ಅಂಕಿತ ಪ್ರಕಾಶನ ಹೊರತಂದಿರುವ ಪುಸ್ತಕದಲ್ಲಿ ತಾನು ಕೆಲಸ ನಿರ್ವಹಿಸಿದ ಹಾಸನ, ದೆಹಲಿ ಸೇರಿದಂತೆ ತಾನು ಕಂಡ ಅನುಭವಗಳನ್ನು ಅದ್ಭುತವಾಗಿ ದಾಖಲಿಸಲಾಗಿದೆ. ಎಲ್ಲಕ್ಕೂ ಮಿಗಿಲಾಗಿ ಈತ ದಲಿತರ ಬಗ್ಗೆ ನಾನು ಮಾತನಾಡುವಾಗಲೆಲ್ಲ ಯಾಕೋ ಈ ಕೋಪ? ಎಂದು ಪ್ರಶ್ನಿಸುತ್ತಿದ್ದ. ಆಗ ನಾನು ದಲಿತರ ಸ್ಥಿತಿಯನ್ನು, ನಿಜವಾದ ಸಮಸ್ಯೆಗಳನ್ನು ವಿಸ್ತರಿಸಿ ಹೇಳಿದಂತೆ ಮಗಾ ಹಿಂಗೂ ಉಂಟಾ ಎಂದು ಅಚ್ಚರಿ ಜತೆ ಈ ಬಗ್ಗೆ ತಾನು ಏನೂ ತಿಳಿದುಕೊಂಡಿಲ್ಲ ಎಂದು ಒಪ್ಪಿಕೊಳ್ಳುತ್ತಿದ್ದ. ಇಂತಹ ಕಾರಣಗಳಿಂದಲೇ ಗೌಡರು ಒಂದೊಳ್ಳೆ ಪುಸ್ತಕ ಬರೆದಿದ್ದಾನೆಂಬುದು ನನ್ನ ನಂಬಿಕೆ. ಪತ್ರಿಕೋದ್ಯಮ ಇಂದು ವಿಶಾಲವಾಗಿದೆ ಜತೆಗೆ ಉದ್ಯಮವಾಗಿ ಬೆಳೆದಿದೆ. ಪತ್ರಕರ್ತರು ಇಂದು ಪ್ರತಿ ಕ್ಷಣವೂ ಎಚ್ಚರವಾಗಿರಬೇಕು , ವೇಗವಾಗಿರಬೇಕು ಹೀಗಿದ್ದಾಗ ಮಾತ್ರ ಪತ್ರಿಕೋದ್ಯಮದಲ್ಲಿ ಇಂದು ಉಳಿದುಕೊಳ್ಳಲು ಸಾಧ್ಯ. ಈ ಮೇಲಿನ ಎಲ್ಲದಕ್ಕೂ ಉತ್ತರ ಶ್ರೀನಿವಾಸಗೌಡರ ಪುಸ್ತಕದಲ್ಲಿವೆ. ನಮ್ಮ ಪತ್ರಿಕೋದ್ಯಮ ಗುರುಗಳಾದ ನಿರಂಜನ ವಾನಳ್ಳಿ ಯವರ ಪುಸ್ತಗಳ ಮಾದರಿಯನ್ನೇ ಅನುಸರಿಸಿದ್ದಾನೆ ಎಂದು ಅನಿಸುತ್ತಾದರೂ ಅದರ ಆಚೆಗೆ ಗೌಡನ ನೋಟ ಹರಿಸಿರುವುದಂತೂ ಸತ್ಯ. ಪುಸ್ತಕದಲ್ಲಿ ಹಾಸನಕ್ಕೆ ಸಂಬಂಧಿಸಿದಂತೆ ಅಕ್ಕಿ ಹಗರಣ, ರೇವಣ್ಣ, ಮುಂತಾದ ವಿಷಯಗಳ ಬಗ್ಗೆ ಗೌಡರು ನೋಡಿರುವ ದೃಷ್ಠಿಕೋನದ ಮಜಲುಗಳನ್ನು ಪುಸ್ತಕದಲ್ಲಿ ನೋಡಬಹುದು.
ನನ್ನ ತಿಳಿವಳಿಕೆ ಮಟ್ಟಿಗೆ ನೋಡಿದರೆ ಆತನು ಇನ್ನೂ ಹೆಚ್ಚು ಬರೆಯುವ ವಿಷಯಗಳಿದ್ದವು. ಹಾಸನದಲ್ಲಿ ಕೀರ್ತಿ ಕುಟುಂಬದ 7 ಮಂದಿ ಸತ್ತುಹೋಗಿದ್ದು ಬೆಳ್ಳಬೆಂಳಗ್ಗೆ ಕಣ್ಣ್ಣುಜ್ಜಿಕೊಂಡು ಹೋಗಿ ನೋಡಿದವರೇ ನಾವಿಬ್ಬರು, ಗ್ಯಾರಳ್ಳಿ ತಮ್ಮಯ್ಯನ ಮರ್ಡರ್ ಹೀಗೆ ಹತ್ತಾರು ವಿಷಯಗಳಿದ್ದವು. ಅದೇನೆ ಇರಲಿ ನಮ್ಮೊಳಗಿನ ಗೌಡನ ಪುಸ್ತಕದ ಬಗ್ಗೆ ಬರೆಯುತ್ತಿರುವ ಬಗ್ಗೆ ಖುಷಿ ಇದೆ. ಗೌಡರು ಇಂತಹ ಹತ್ತಾರು ಪುಸ್ತಕಗಳನ್ನು ಬರೆಯಲಿ.
ಅಂದ ಹಾಗೆ ಹೊಸ ಸುದ್ದಿ : ಇದೇ ಶ್ರೀನಿವಾಸಗೌಡರು ಸಧ್ಯ ಪತ್ರಿಕೋದ್ಯಮ ತೊರೆದು ಬೆಂಗಳೂರಿನಲ್ಲಿ ಬಿರಿಯಾನಿ ಅಡ್ಡ ಮಾಡುವ ಸಾಹಸಕ್ಕೆ ಕೈ ಹಾಕಿದ್ದಾರೆ. ಅವರಿಗೆ ಒಳ್ಳೆಯದಾಗಲಿ…

‍ಲೇಖಕರು G

26 June, 2013

1 Comment

  1. G Venkatesha

    Shehitanige Olle Prothsaaha mathu uttejana needuva lekhana. Nimma Snehita SrinivasaGowdarige namma Abhnandanegalu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading