ಅವರು ಮಳಿಮಠ..

ಅವರು ಸುಭಾಷ್ ಚಂದ್ರ ಬೋಸ್ ಅವರಿಗೆ ಸ್ವಯಂ ಸೇವಕರಾಗಿದ್ದರು

n s sreedhara murthy

ಎನ್.ಎಸ್.ಶ್ರೀಧರ ಮೂರ್ತಿ

ಹನ್ನೊಂದು ವರ್ಷಗಳ ಕೆಳಗೆ ಎಂದರೆ 2004ನೇ ಇಸವಿ ಮೇ ತಿಂಗಳಿನಲ್ಲಿ ಗೆಳೆಯ ಎಂ.ವಿಶ್ವನಾಥ್ ನ್ಯಾಯಮೂರ್ತಿ ಡಾ.ವಿ.ಎಸ್. ಮಳಿಮಠ ಅವರ 75 ವರ್ಷದ ಸಂದರ್ಭದಲ್ಲಿ ಒಂದು ಅಭಿನಂದನಾ ಗ್ರಂಥ ಸಿದ್ದವಾಗಬೇಕಾಗಿದೆ ಎಂದೂ ಅದರ ಜವಾಬ್ದಾರಿ ಹೊತ್ತಿದ್ದವರು ಕೊನೆ ಕ್ಷಣದಲ್ಲಿ ಹಿಂದೆಗೆದಿದ್ದರಿಂದ ನಾನು ಅದನ್ನು ಪೂರ್ಣ ಮಾಡಬೇಕೆಂದೂ ಕೇಳಿದರು.

ಮಳಿಮಠರ ನಿಕಟ ಒಡನಾಟ ಇಲ್ಲದಿದ್ದ ನಾನು ಹಿಂದೆಗೆದರೂ ಹಲವು ಹಿರಿಯರ ಒತ್ತಾಯದಿಂದ ಒಪ್ಪಬೇಕಾಯಿತು. ಹೀಗೆ ಸತ್ಯಂ ಶಿವಂ ಸುಂದರಂ ರೂಪುಗೊಂಡ ನಂತರವೂ ಅವರ ಒಡನಾಟ ಮುಂದುವರೆಯಿತು. ಅಂತರರಾಷ್ಟ್ರೀಯ ಖ್ಯಾತಿಯ ನ್ಯಾಯಮೂರ್ತಿಯಾಗಿದ್ದರೂ ಅವರ ಅಂತಹ ಪರದೆಗಳನ್ನು ಹಾಕಿಕೊಂಡವರಲ್ಲ. ಅವರ ಜೊತೆ ಕಳೆಯವು ಪ್ರತಿಕ್ಷಣವೂ ಆನಂದ ದಾಯಕವಾಗಿರುವುದರ ಜೊತೆಗೆ ಅವರಿಗಿದ್ದ ಅಪಾರ ಅನುಭವದ ಹಿನ್ನೆಲೆಯಲ್ಲಿ ಕಲಿಕೆ ಕೂಡ ಆಗುತ್ತಿತ್ತು.

ಇತ್ತೀಚೆಗೆ ಅವರನ್ನು ಕಳೆದು ಕೊಂಡ ಹೊತ್ತಿನಲ್ಲಿ ಕಾಡುತ್ತಿರುವ ಕೆಲವು ನೆನಪುಗಳು ಇಲ್ಲಿವೆ

# # #

ಮಳಿಮಠರು 1937ರಲ್ಲಿ ಸುಭಾಷ್ ಚಂದ್ರ ಬೋಸ್ ಅವರು ಹುಬ್ಬಳಿಗೆ ಭೇಟಿ ನೀಡಿದಾಗ ಸ್ವಯಂಸೇವಕರಾಗಿದ್ದರು. ಆಗಿಂದಲೂ ಅವರಿಗೆ ಸುಭಾಷ್ ಚಂದ್ರ ಬೋಸ್ ಎಂದರೆ ಸ್ಪೂರ್ತಿ. ಸುಭಾಷ್ ಕಣ್ಮರೆ ಕುರಿತು ಹಲವು ಮೂಲಗಳಿಂದ ಮಾಹಿತಿ ಸಂಶೋಧಿಸಿದ್ದ ಅವರು ರಷ್ಯಾಕ್ಕೂ ತೆರಳಿ ದಾಖಲೆಗಳನ್ನು ಸಂಗ್ರಹಿಸಿದ್ದರಂತೆ. ಏಕೀಕರಣದ ಹೋರಾಟಕ್ಕೆ ಅವರಿಗೆ ತಂದೆಯವರಿಂದ ಪ್ರೇರಣೆ ಸಿಕ್ಕಿತ್ತು. ಏಕೀಕೃತ ಕರ್ನಾಟಕದಲ್ಲಿ ವಕೀಲನಾಗಬೇಕು ಎನ್ನುವ ಒಂದೇ ಕಾರಣಕ್ಕೆ ಅವರು ಮುಂಬೈನಲ್ಲಿ ಲಾಭದಾಯಕವಾಗಿದ್ದ ವಕೀಲ ವೃತ್ತಿ ಬಿಟ್ಟು ಬೆಂಗಳೂರಿಗೆ ಬಂದಿದ್ದರು

# # #

ವೀರೇಂದ್ರ ಪಾಟೀಲರು ಮೊದಲ ಸಲ ಮುಖ್ಯಮಂತ್ರಿಗಳಾಗಿದ್ದಾಗ ಮಳಿಮಠರು ಅಡ್ವೋಕೇಟ್ ಜನರಲ್ ಆಗಿದ್ದರು. ಆಗಲೂ ಕಾವೇರಿ ವಿವಾದ ತೀವ್ರವಾಗಿತ್ತು. ಸದನಕ್ಕೆ ಸಂವಿಧಾನಿಕ ಹಕ್ಕನ್ನು ಬಳಸಿ ಮುಖ್ಯಮಂತ್ರಿಗಳೂ ಮಳಿಮಠರನ್ನು ಕರೆಸಿಕೊಂಡರು. ಆಗ 1898ರ ಒಪ್ಪಂದ ಜಾರಿಯಲ್ಲಿತ್ತು. ಟ್ರಿಬ್ಯೂನಲ್ 1975ರಲ್ಲಿ ರೂಪುಗೊಳ್ಳುತ್ತಿತ್ತು. ನಂತರ ಸಮಸ್ಯೆಗಳು ಆಗುತ್ತವೆ ಈಗಲೇ ಕಾವೇರಿ ಕೊಳ್ಳದಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿ ಎಂದು ಮಳಿಮಠರು ಸಲಹೆ ನೀಡಿದರು. ಈ ಸಲಹೆ ಕಾವೇರಿ ಕೊಳ್ಳದವರ ಪಾಲಿಗೆ ಸಂಜೀವಿನಿಯಾಗಿದ್ದು ಈಗ ಇತಿಹಾಸ.

# # #

ಕಾಸರಗೋಡು ಯಾವ ಕಾರಣಕ್ಕೂ ಕರ್ನಾಟಕಕ್ಕೆ ಸೇರಬಾರದು ಎನ್ನುವ ಹಠದಲ್ಲಿ ಕೇರಳ ಅದನ್ನು ಜಿಲ್ಲಾ ಕೇಂದ್ರವಾಗಿಸಿತು. ಅಲ್ಲಿನ ಜಿಲ್ಲಾ ನ್ಯಾಯಾಲಯದ ಉದ್ಘಾಟನೆಯನ್ನು ಆಗ ಕೇರಳದ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ವಿ.ಎಸ್.ಮಳಿಮಠ ಅವರೇ ಮಾಡಿದ್ದರು. ಕನ್ನಡಿಗರ ಕಟು ವಿರೋಧಿಯಾಗಿದ್ದ ಕೇರಳದ ಮುಖ್ಯಮಂತ್ರಿ ಕರುಣಾಕರನ್ ಅವರದು ಅಧ್ಯಕ್ಷತೆ. ಆ ಸಮಾರಂಭದಲ್ಲಿ ಮಳಿಮಠ ಕನ್ನಡದಲ್ಲಿಯೇ ಮಾತನಾಡಿದರು. ಯಾರು ಏನೇ ಪ್ರಯತ್ನಿಸಿದರೂ ಕಾಸರಗೋಡು ಕರ್ನಾಟಕದ ಭಾಗ ಎಂದು ಭಾವನಾತ್ಮಕವಾಗಿ ತೋರಿಸಿಕೊಟ್ಟರು.

# # #

ಮಳಿಮಠರನ್ನು ವಾಜಪೇಯಿ ಅವರ ಸರ್ಕಾರ ಕೇಂದ್ರೀಯ ಆಡಳಿತಾತ್ಮಕ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿತು. ಆಗ ಅವರು ಕ್ರಿಮಿನಲ್ ಕಾಯಿದೆ ಸುಧಾರಣೆ ಬಗ್ಗೆ ವರದಿ ಸಲ್ಲಿಸಿದರು. ಇದು ಮಾನವೀಯ ಅಂಶಕ್ಕೆ ಅತಿಯಾಗಿ ಮಹತ್ವ ನೀಡಿ ಅಪರಾಧಿಗಳು ಬಚಾವ್ ಆಗುವುದನ್ನು ತಡೆಯ ಸುಧಾರಣೆಯನ್ನು ಒಳಗೊಂಡಿತ್ತು. ಇದು ಜಾರಿಗೆ ಬಂದಿದ್ದರೆ ದೆಹಲಿ ಅತ್ಯಾಚಾರದ ಆರೋಪಿಗಳು ಅದರಲ್ಲಿಯೂ ಈಗ ಬಿಡುಗಡೆಯಾಗಿರುವ ಬಾಲಾಪರಾಧಿ ಕಾನೂನಿನ ಕುಣಿಕೆಯಿಂದ ಬಚಾವಾಗಲು ಆಗುತ್ತಿರಲಿಲ್ಲ. ಸಲ್ಮಾನ್ ಖಾನ್, ಜಯಲಲಿತಾ ಮೊದಲಾದ ಪ್ರತಿಷ್ಠಿತರು ಸುಲಭವಾಗಿ ಬಚಾವ್ ಆಗುತ್ತಿರಲಿಲ್ಲ. ಆದರೆ ನಮ್ಮ ರಾಜಕಾರಣಿಗಳಿಗೆ ಅದು ಬೇಕಾಗಿಲ್ಲ ಹೀಗೆ ವಿಷಾದದಿಂದಲೇ ಮಳಿಮಠ ತೀರಾ ಇತ್ತೀಚೆಗೆ ನನ್ನೊಂದಿಗೆ ಮಾತನಾಡುವಾಗ ಹೇಳಿದ್ದರು.

# # #

ಕಾನೂನು ಪರಿಣಿತರಾದ ಮಳಿಮಠರಿಗೆ ಚಲನಚಿತ್ರದಲ್ಲಿ ಅಪಾರ ಆಸಕ್ತಿ ಇತ್ತು. ಸಿನಿಮಾ ಪ್ರಭಾವಶಾಲಿ ಮಾಧ್ಯಮ ಅದರ ಮೂಲಕ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದು ಅವರು ಬಯಸಿದ್ದರು. ಚಿತ್ರಗೀತೆಗಳ ಕುರಿತೂ ಅವರಿಗೆ ಒಲವಿತ್ತು. ಅವರಿಂದ ಹಲವು ಅಪರೂಪದ ಮಾಹಿತಿಗಳನ್ನು ನಾನು ಪಡೆದುಕೊಂಡಿದ್ದೆ

# # #

ಮಳಿಮಠರು ಹಾಗೆ ನೋಡಿದರೆ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಬೇಕಿತ್ತು. ಕೇಂದ್ರ ಮತ್ತು ರಾಜ್ಯಮಟ್ಟದಲ್ಲಿ ಹಲವು ಜವಾಬ್ದಾರಿಗಳನ್ನು ವಹಿಸಿಕೊಳ್ಳ ಬೇಕಿತ್ತು. ಆದರೆ ಇವೆಲ್ಲವೂ ತಪ್ಪಿ ಹೋಗಿದ್ದಕ್ಕೆ ಅವರೆಂದೂ ಪರಿತಪಿಸಿದರವಲ್ಲ. ತಮ್ಮ ನಿಲುವಿನಲ್ಲೂ ರಾಜಿ ಮಾಡಿಕೊಂಡವರಲ್ಲ. ಪರಂಪರೆ ಮತ್ತು ಆಧುನಿಕತೆಯ ಕೊಂಡಿಯಂತಿದ್ದ ಈ ಹಿರಿಯವರ ಒಡನಾಟದ ನೆನಪುಗಳು ಸದಾ ನನ್ನೊಂದಿಗಿರುತ್ತವೆ.

‍ಲೇಖಕರು admin

December 26, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: