ಅವರು ಮನೆಯಂಗಳದ ಮಾನವ ತುಳಸಿ..

ಮೈ ತುಳಸಿ ತೇರೇ ಆಂಗನ್ ಕೀ…

ರಾಜೀವ ನಾರಾಯಣ ನಾಯಕ

ಮೆಲುದನಿಯ ಭಾವಗೀತೆಗಳಿಂದ ಪ್ರಸಿದ್ಧರಾದ ಡಾ. ಸನದಿಯವರಿಗೆ ಈ ಸಲದ ಪಂಪ ಪ್ರಶಸ್ತಿ ದೊರೆತ ಹಿನ್ನಲೆಯಲ್ಲಿ ಅವರನ್ನು ಅಭಿನಂದಿಸಲು ಮೊನ್ನೆ ಮಹಾಶಿರಾತ್ರಿ ದಿನದಂದು ಅವರ ನಿವಾಸ “ಮಿಲನ” ಕ್ಕೆ ಹೋಗಿದ್ದೆ.

ಹೈಸ್ಕೂಲು ಓದುತ್ತಿರುವ ನನ್ನ ಮಗನಿಗೆ ರಜೆ ದಿನವಾದ್ದರಿಂದ ಅವನನ್ನೂ ಪುಸಲಾಯಿಸಿ ಕರೆದೊಯ್ದೆ. ಕುಮಟಾದ ಹೆರವಟ್ಟಾದಲ್ಲಿರುವ ಅವರ ಮನೆಗೆ ಎರಡು ವರ್ಷಗಳ ಹಿಂದೊಮ್ಮೆ ಭೇಟಿ ನೀಡಿದ್ದೆನಾದ್ದರಿಂದ ದಾರಿ ಗೊತ್ತಿತ್ತು. ನಿರ್ಮಲಾ ಕಾನ್ವೆಂಟ್ ನಿಂದ ನಾಲ್ಕು ಮಾರು ಮುಂದೆ ಬಲಕ್ಕೆ ಹೊರಳಿ ಕಿರಿದಾದ ಓಣಿಯಲ್ಲಿ ಒಂದೆರಡು ತಿರುವು ದಾಟಿದರೆ ಸಿಗುವ ಮನೆಯೆದುರು ಬೈಕ್ ನಿಲ್ಲಿಸಿದೆ.

ಗೇಟ್ ತೆರೆಯಲು ಕೈ ಹಚ್ಚಿದರೆ ಅರೆ! ಸನದಿಯವರ ಮನೆಯೆದುರು ತುಳಸಿಕಟ್ಟೆ  ಇತ್ತಲ್ಲ! ಈ ಅಂಗಳದಲ್ಲಿ ತುಳಸಿಕಟ್ಟೆ ಇಲ್ಲ; ಅಂದರೆ ನಾನು ತಪ್ಪಿ ಬೇರೆಯವರ ಮನೆಗೆ ಬಂದಿರಬೇಕು! ಎಂದುಕೊಂಡು ಬೈಕ್ ತಿರುಗಿಸಿ ಮುರ್ಕಿಯಲ್ಲಿರುವ ಅಂಗಡಿಯವರ ಹತ್ತಿರ ಡಾ.ಸನದಿಯವರ ಮನೆ….? ಎಂದು ಮಾತು ಮುಗಿಸಿವಷ್ಟರಲ್ಲೇ ಬನ್ನಿ ಬನ್ನಿ ಎಂದು ಅರ್ಧ ದಾರಿವರೆಗೂ ಬಂದು ಮನೆ ತೋರಿಸಿದರು. ಅರೆ! ಅದೇ ಮನೆ! ಅಂಗಳದಲ್ಲಿದ್ದ ತುಳಸಿ ಕಟ್ಟೆ ಎಲ್ಲಿ ಹೋಯಿತು ಹಾಗಾದರೆ?

ಗೆಳೆಯರಾದ ಬೀರಣ್ಣ ಮಾಸ್ತರ್ ಮತ್ತು ವೆಂಕಟೇಶ ಬೈಲೂರ ಜೊತೆ ಪುಸ್ತಕಗಳನ್ನು ಜೋಡಿಸಿಡುವ ಕಾಯಕದಲ್ಲಿ ನಿರತರಾಗಿದ್ದ ಸನದಿಯವರು ಮಾಸಿದ ಅಂಗಿಯಲ್ಲಿ ಪ್ರತ್ಯಕ್ಷವಾದರು. ಆದರೆ ಕಂಡೊಡನೆ ಮಲ್ಲಿಗೆ ಹೂವಿನಂಥ ಶುಭ್ರ ನಗು ಬೀರಿ ನಮ್ಮನ್ನು ಸ್ವಾಗತಿಸಿದರು. ಅವರ ನಗು ಉಲ್ಲಾಸದ ಮೂಡ್ ಸೃಷ್ಟಿಸಿತು. ಶ್ರೀಮತಿ ನಜೀರಾ ಕೂಡ ತಮ್ಮ ಉಪಚಾರದಿಂದ ವಾತಾವರಣವನ್ನು ಆತ್ಮೀಯಗೊಳಿಸಿದರು.

ನನ್ನ ಮಗ ತನ್ನ ಕ್ಯಾಮರಾದಿಂದ ಫೋಟೋ ಕ್ಲಿಕ್ಕಿಸಲು ಶುರುಮಾಡಿದಾಗ ’’ತಡಿಯೋ ತಮ್ಮಾ, ಬ್ಯಾರೆ ಅಂಗಿ ಹಾಕೋತೀನಿ” ಎನ್ನುತ್ತಾ ಬಿಳಿಯ ಜುಬ್ಬಾ ಧರಿಸಿ ಉಮೇದಿಯಿಂದ ಫೋಟೋಕೆ ತಯಾರಾಗೇ ಬಿಟ್ಟರು. ಶ್ರೀಮತಿ ನಜೀರಾರನ್ನೂ ಕರೆದು ಜೊತೆಯಾಗಿ ಫೋಟೋ ತೆಗೆಸಿಕೊಂಡರು. ಮಕ್ಕಳಂತೆ ಲವಲವಿಕೆಯಿಂದ ಸಾತ್ ನೀಡಿದರು. ಅವರ ನಗು ಪ್ರೀತಿ ತಮಾಷೆ ಮತ್ತು ಉಕ್ಕುವ ಜೀವನೋತ್ಸಾಹವನ್ನು ಮಗನು ಕ್ಯಾಮರಾ ಕಣ್ಣುಗಳಲ್ಲಿ ಸೆರೆ ಹಿಡಿಯುತ್ತಿದ್ದ; ಬಹುಶ: ಸನದಿ ದಂಪತಿಗಳ ಪ್ರೀತಿಯೂ ಅವನ ಮನದ ಭಿತ್ತಿಚಿತ್ರವಾಗುತ್ತಿತ್ತು! ನನ್ನ ಮನಸ್ಸು ಮಾತ್ರ ಕಣ್ಮರೆಯಾದ ತುಳಸಿಕಟ್ಟೆಯನ್ನೇ ಪ್ರದಕ್ಷಿಣೆ ಹಾಕುತ್ತಿತ್ತು!

ಸನದಿಯವರು ದೂರದ ಮುಂಬಯಿ ಬಿಟ್ಟು ”ನೆಮ್ಮದಿಯ ಬಾಳುವೆಗಾಗಿ ಕೊಂಡ, ಅತ್ತ ದೊಡ್ಡದೂ ಅಲ್ಲದ ಇತ್ತ ಸಣ್ಣದೂ ಅಲ್ಲದ ಮನೆಯನ್ನು” ಒಂದಿಷ್ಟು ಬದಲಾವಣೆ ಮಾಡಿಕೊಳ್ಳುವಾಗ ಮೊದಲಿದ್ದ ಮನೆಯವರ ತುಳಸಿಕಟ್ಟೆ ತೆಗೆಸದೇ ಹಾಗೇ ಬಿಟ್ಟಿದ್ದರು. ಆ ಬಗ್ಗೆ ಅವರು ಬರೆದ ಕವನ ’’ ತುಳಸಿಕಟ್ಟೆ” ಪ್ರಸಿದ್ಧವಾಗಿದೆ. ಸನದಿ ದಂಪತಿಗಳನ್ನು ಕಾಡಿರದ ತುಳಸೀಕಟ್ಟೆ ಬಂದು ಹೋಗುವವರಿಗೆ ಪ್ರಶ್ನೆಯಾದಾಗ ಶ್ರೀಮತಿ ಸನದಿಯವರು ನೀಡುತ್ತಿದ್ದ ಉತ್ತರವನ್ನು ಸನದಿಯವರು ಕಾವ್ಯಸಾಲುಗಳನ್ನಾಗಿಸಿದ್ದರು.

‘”ಇದ್ದರೂ ಇರಲಿ ಬಿಡಿ, ನಮಗೆ ಅಡಚಣೆಯಿಲ್ಲ

ಎಷ್ಟು ಚೆಂದಾಗಿದೆ ನೋಡಿ ಚೌಕಾಕಾರದ ಕಲ್ಲಿನ ಕಟ್ಟೆ!

ನಿಮ್ಮಂಥ ಅತಿಥಿಗಳ ಆನಂದಕಿರಲೆಂದು

ಅದರ ಸುತ್ತಲೂ

ತರತರದ ಹೂಕುಂಡಗಳ ಜೋಡಿಸಿಟ್ಟೆ!

ಯಾರೋ ಕಟ್ಟಿದುದನ್ನು ಒಡೆಯುವುದು ಸರಿಯಲ್ಲವೆಂದು ಬಿಟ್ಟೆ!”

ಜಾತಿ ಧರ್ಮಗಳ ಎಲ್ಲೆಗಳನ್ನು ಮೀರಿ ಮನುಷ್ಯಭಾವದಿಂದ ಮಿಡಿಯಬಲ್ಲ ಶಕ್ತಿ ಕಾವ್ಯಕ್ಕಿದೆ. ಮುರಿಯದೇ ಕೆಡುಹದೇ ಕಟ್ಟುವುದೇ ಕಾವ್ಯ. ಸನದಿಯವರು ಕಾವ್ಯದಲ್ಲಿಯೂ ಕಾಯಕದಲ್ಲಿಯೂ ಕಟ್ಟುವ ಪಂಥವನ್ನೇ ಎತ್ತಿಹಿಡಿದಿದ್ದರು. ಆದರೆ ಭಾವೈಕ್ಯದ ಸಂಕೇತವಾಗಬಹುದಾಗಿದ್ದ ಅಂಥ ತುಳಸಿಯನ್ನು ತೆಗೆಸುವ ಅಥವಾ ಸ್ಥಳಾಂತರಿಸುವ ಪ್ರಮೇಯ ಹೇಗೆ ಬಂತು? ಕ್ಷುಲ್ಲಕ ಕಾರಣಗಳಿಗೂ ಮನಸುಗಳು ಮುರಿದು ಬೀಳುವ ಪ್ರಸ್ತುತ ಭಾರತದಲ್ಲಿ ಸನದಿಯವರು ಕೆಡುಹದೇ ಬಿಟ್ಟ ತುಳಸಿಕಟ್ಟೆ ಮತ್ತು ರಚಿಸಿದ ಕಾವ್ಯಪ್ರತಿಮೆಯು ಬಹುಶ: ಅಪರೂಪದ ಸಾಮರಸ್ಯದ ಸಂಕೇತವಾಗಿ ಉಳಿಯಬಹುದಿತ್ತಲ್ಲವೇ?

ನಾನು ಯೋಚನೆಗಳ ಭಾರದಿಂದ ಸೋಫಾದಲ್ಲಿ ಕೂತಿರುವಾಗ ಮಗನು ಸಂಕೋಚ ಸ್ವಭಾವದವನಾದರೂ ಅದು ಹೇಗೋ ಸನದಿ ದಂಪತಿಗಳೊಡನೆ ಆತ್ಮೀಯ ಎಳೆಯನ್ನು ನೇಯುತ್ತಿದ್ದನು. ಶ್ರೀಮತಿ ನಜೀರಾರಿಗೆ ತಿಂಡಿತಿನಿಸುಗಳ ಪ್ಲೇಟುಗಳನ್ನು ಎತ್ತಿಡುವಲ್ಲಿ ಸಹಾಯ ಮಾಡಿದನು. ಕ್ಲಿಕ್ ಮಾಡಿದ ಫೋಟೋಗಳನ್ನು ಕ್ಯಾಮರಾದಲ್ಲಿ ಡಿಸಪ್ಲೇ ಮಾಡಿ ತೋರಿಸಿ ಅವರ ಮುಖದಲ್ಲಿ ಮುಗುಳುನಗು ಮೂಡಿಸಿದನು. “ಭಾಳ್ ಚಂದ ಫೋಟೋ ತೆಗೀತ್ಯೋ ತಮ್ಮ, ನೀನು’’ ಎಂದು ಅವರಿಂದ ಮೆಚ್ಚುಗೆ ಗಳಿಸಿದಾಗ ಖುಶಿಯಾದನು.ಮೊದಲ ಭೇಟಿಯಲ್ಲೇ ತನ್ನದೇ ಅಜ್ಜ ಅಜ್ಜಿಯರೆಂಬ ಆಪ್ತಭಾವ ಅವನ ಮುಖದಲ್ಲಿ ಗಮನಿಸಿದೆ.

ಮುಸ್ಲಿಂ ಕವಿಯ ಮನೆಯಂಗಳದಲ್ಲಿ ಹಿಂದುಗಳ ಪವಿತ್ರ ತುಳಸಿಕಟ್ಟೆ ಇರುವುದನ್ನು ತೋರಿಸಿ ಧರ್ಮ ಸಾಮರಸ್ಯದ ಬಗ್ಗೆ ಪಾಠ ಮಾಡುವ ಉದ್ದೇಶದಲ್ಲಿ ಮಗನನ್ನು ಕರೆದು ತಂದಿದ್ದ ನನಗೆ ಸ್ಥಾವರಗಳಾಚೆಯ ಮನುಷ್ಯ ಧರ್ಮದ ಶ್ರೇಷ್ಠತೆಯ ಅರಿವಾಯಿತು. ಸಂಕೇತಗಳಲ್ಲಿ, ಪ್ರತಿಮೆಗಳಲ್ಲಿ ಮನುಷ್ಯರನ್ನು ಬಂಧಿಯಾಗಿಸುವುದು ಅಥವಾ ವಿಭಜಿಸುವುದು ಧರ್ಮವೆ? ಪ್ರೀತಿಗಿಂತ ಮಿಗಿಲಾದ ಧರ್ಮವಿದೆಯೇ? ಮನುಷ್ಯ ಪ್ರೀತಿಯೇ ಎಲ್ಲ ಧರ್ಮಗಳ ಜೀವಸೆಲೆ ಎಂಬುದು ಹದಿಹರೆಯದ ಹುಡುಗನ ಪ್ರಜ್ಞೆಗಿಳಿದರೆಅದಕ್ಕಿಂತ ಇನ್ನೇನು ಬೇಕು?

ತುಳಸಿಕಟ್ಟೆಯನ್ನು ಯಾಕೆ ತೆಗೆಸಿದಿರಿ ಎನ್ನುವ ಪ್ರಶ್ನೆ ಪ್ರಶ್ನೆಯಾಗಿ ಉಳಿಯಲಿಲ್ಲ!

”ಆ ಸೀಮೆ ಈ ಸೀಮೆ ಯಾ ಸೀಮೆ ಯಾಕೆ/ಜನಕೊಂದು ಮನಕೊಂದು ಬಂಧನವೆ ಬೇಕೆ/ವಿಶ್ವಚೇತನದೆದುರು ಇನ್ನೇನು ಸಾಟಿ/ಸಾಗೋಣ ಬಾ ಇನ್ನು ಕ್ಷಿತಿಜವನೆ ದಾಟಿ” ಎನ್ನುವ ಸನದಿಯವರದೇ ಸಾಲುಗಳನ್ನು ನೆನೆಯುತ್ತಾ ವಿದಾಯ ಹೇಳಿದೆ.

”ಮಿಲನದ” ಗೇಟ್ ದಾಟಿ ತಿರುಗಿದಾಗ ಹೊರಬಂದುಕೈ ಬೀಸುತ್ತಿದ್ದ ಶುಭ್ರ ನಗುವಿನ ಸನದಿಯವರು ಮನೆಯಂಗಳದ ಮಾನವ ತುಳಸಿಯಂತೆ ಕಾಣುತ್ತಿದ್ದರು!

 

‍ಲೇಖಕರು admin

March 31, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Mallappa

    ಕಡೆಗೂ ತಿಳಿಯಲಿಲ್ಲವೆ ತುಳಸಿ ಕಟ್ಟೆ ತೆಗೆಸಿದ್ಯಾರು ಎಂದು?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: