ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವರು ಪ್ರೇಮಚಂದ್..

ಇಂದು ಮುನ್ಷಿ ಪ್ರೇಮಚಂದ್ ಅವರ ಹುಟ್ಟುಹಬ್ಬ..

ಅವರ ಪತ್ನಿ ಪ್ರೇಮಚಂದ್ ಅವರನ್ನು ಕಂಡ ಬಗೆ ‘ಪ್ರೇಮಚಂದ್: ಘರ್‌ಮೇ’ ಕೃತಿಯಲ್ಲಿದೆ 

 ಈ ಕೃತಿಯೇ ನೆಪವಾಗಿ ಶೂದ್ರ ಶ್ರೀನಿವಾಸ್ ಇಲ್ಲಿ ನೆನಪುಗಳನ್ನು ಹಂಚಿಕೊಂಡಿದ್ದಾರೆ 

shudra srinivas by t l rahul

ಶೂದ್ರ ಶ್ರೀನಿವಾಸ್ 

ಮೂರು ನಾಲ್ಕು ದಶಕಗಳ ನಂತರ ‘ಪ್ರೇಮಚಂದ್: ಘರ್‌ಮೇ’ ಕೃತಿಯನ್ನು ಓದಿದೆ.

ಇದನ್ನು ಪ್ರೇಮ್‌ಚಂದ್ ಅವರ ಪತ್ನಿ ಶಿವರಾಣಿ ದೇವಿಯವರು ಬರೆದಿರುವಂಥದ್ದು. ತುಂಬ ಅನನ್ಯವಾದ ಕೃತಿ. ಭಾರತದ ಬಹುಮುಖ್ಯ ಕಾದಂಬರಿಕಾರ ಮತ್ತು ಕಥೆಗಾರ ತನ್ನ ಮನೆಯಲ್ಲಿ ಹೇಗಿದ್ದ, ಮಕ್ಕಳು ಮರಿ ಮತ್ತು ದಿನನಿತ್ಯದ ಸಮಸ್ಯೆ ಗಳು ಮುಖಾಮುಖಿಯಾದಾಗ ಹೇಗೆ ವರ್ತಿಸುತ್ತಿದ್ದರು ಎಂಬುದನ್ನು ಅತ್ಯಂತ ಭಾವನಾತ್ಮಕವಾಗಿ ನೋಡಿರುವಂಥದ್ದು.

ಈ ಕೃತಿಯನ್ನು ಶಿವರಾಣಿಯವರು ತಮ್ಮ ಪತಿಗೆ ಅರ್ಪಿಸುವಾಗ ಈ ಪದಪುಂಜಗಳನ್ನು ದಾಖಲಿಸುತ್ತಾರೆ. ‘‘ಸ್ವಾಮಿ, ತುಮ್ಹಾರಿ ಹೀ ಜೀಜ್ ತುಮ್ಹಾರೇ ಚರಣೋನ್ ಮೇ ಚಡಾತೀ ಹೂಂ. ಇಸ್ ತುಚ್ಛ್ ಸೇವಾ ಕೋ ಅಪನಾನಾ ತುಮ್ಹಾರೀ ದಾಸೀ ಯಾ ರಾಣಿ’’- ಶಿವರಾಣಿ.

premchand ghar meಕೇವಲ ಸಾಂಕೇತಿಕ ಕಾರಣಗಳಿಗಾಗಿ ಆಕೆಯ ಸಮರ್ಪಣಾ ಶಬ್ದಗಳನ್ನು ಪ್ರಸ್ತಾಪಿಸಿರುವೆ. ಯಾಕೆಂದರೆ, ಆ ಕಾಲಘಟ್ಟದಲ್ಲಿ ಭಾರತದ ಉದ್ದಗಲಕ್ಕೂ ಮಧ್ಯಮ ವರ್ಗದ ಸುಶಿಕ್ಷಿತ ಸ್ತ್ರೀ, ಪುರುಷರ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದವರು ಪ್ರೇಮಚಂದ್ ಅವರು. ಅದರಲ್ಲೂ ಮುಖ್ಯವಾಗಿ ಮಹಿಳೆಯರ ಮೇಲೆ. ಹಾಗೆ ನೋಡಿದರೆ ಕನ್ನಡದ ತ್ರಿವೇಣಿ ಯವರು ಮತ್ತು ಎಂ.ಕೆ. ಇಂದಿರಾ ಅವರು ಮತ್ತು ತೆಲುಗಿನ ಮುಪ್ಪಾಳ ರಂಗನಾಯಕಮ್ಮ ಅವರು, ಅಸ್ಸಾಂನ ಇಂದಿರಾ ಗೋಸ್ವಾಮಿಯಂಥವರು ಪ್ರೇಮಚಂದ್ ಅವರಿಂದ ಮತ್ತು ಬಂಗಾಳಿಯ ಶರಶ್ಚಂದ್ರ ಚಟರ್ಜಿಯವರಿಂದ ಪ್ರಭಾವಿತರಾದವರು.

ಮುನ್ಷಿ ಪ್ರೇಮಚಂದ್ ಅವರಂತೂ ಚಟರ್ಜಿ ಅವರಿಗಿಂತ ಶ್ರೇಷ್ಠ ಕಾದಂಬರಿ ಕಾರರಾಗಿ ಮತ್ತು ಕಥೆಗಾರರಾಗಿ ಭಾರತದ ಒಟ್ಟು ಸಾಹಿತ್ಯ ಸಂದರ್ಭದಲ್ಲಿ ಗಂಭೀರ ಚರ್ಚೆಗೆ ಒಳಗಾದವರು. ಒಂದು ದೃಷ್ಟಿಯಿಂದ ಶಿವರಾಣಿಯವರ ‘ಪ್ರೇಮಚಂದ್: ಘರ್‌ಮೇ’ ಕೃತಿಯು ಒಬ್ಬ ದೊಡ್ಡ ಲೇಖಕನ ಅಂತರ್ಮುಖತೆಯನ್ನು ಅರಿಯಲು ಸಾಕಷ್ಟು ಸಹಾಯ ಮಾಡಿದೆ. ಈ ಕೃತಿಯು ಪರಿಚಯವಾಗಿದ್ದೂ ಕೂಡ ಒಂದು ಮಹೋನ್ನತ ಸಂದರ್ಭದಲ್ಲಿ.

ವಿನಾಯಕ ಕೃಷ್ಣ ಗೋಕಾಕ್ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಒಟ್ಟು ಭಾರತದ ಸಾಹಿತ್ಯ ಸಂದರ್ಭದಲ್ಲಿ ಜನಪ್ರಿಯರಾಗಿದ್ದವರು. ಅವರು ದೊಡ್ಡ ಲೇಖಕರಲ್ಲದಿದ್ದರೂ ತಮ್ಮ ಸೌಜನ್ಯ ಮತ್ತು ಎತ್ತರದ ಸುಮಧುರ ಧ್ವನಿಯಿಂದ ಎಂಥವರನ್ನು ಕೂತು ಕೇಳುವಂತೆ ಮಾಡುತ್ತಿದ್ದರು. ಇಂಥ ಗೋಕಾಕರು ಒಂದು ಅಪರೂಪದ ಸಮಾವೇಶವನ್ನು ಎಪ್ಪತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ವ್ಯವಸ್ಥೆ ಮಾಡಿದ್ದರು.

ಇದರಲ್ಲಿ ಪ್ರಮುಖವಾಗಿ ಸೃಜನಶೀಲ ಬರಹಗಾರರು ಭಾಗವಹಿಸಿದ್ದರು. ನಮ್ಮ ಕನ್ನಡದ ಚದುರಂಗ, ಲಂಕೇಶ್, ಶಾಂತಿನಾಥ ದೇಸಾಯಿ, ಶಂಕರ ಮೊಕಾಶಿ ಪುಣೇಕರ್ ಮುಂತಾದವರ ಜೊತೆಗೆ ತೆಲುಗಿನ ಶ್ರೀಶ್ರೀ ಮತ್ತು ಹಿಂದಿಯ ಅಮೃತರಾಯ್ ಅಂಥವರೂ ಇದ್ದರು. ನಾನು ಹಿಂದಿಯ ಅಮೃತರಾಯ್ ಮತ್ತು ತೆಲುಗಿನ ಶ್ರೀಶ್ರೀಯವರನ್ನು ನೋಡಲು ತುಂಬ ಕುತೂಹಲಿಯಾಗಿದ್ದೆ.

ಯಾಕೆಂದರೆ ಅಮೃತರಾಯ್ ಅವರು ಹಿಂದಿಯ ಬಹುಮುಖ್ಯ ಕಾದಂಬರಿಕಾರರು ಮತ್ತು ಕಥೆಗಾರರು ಮಾತ್ರ ಆಗಿರಲಿಲ್ಲ. ಅವರು ಪ್ರೇಮ್ ಚಂದ್ ಅವರ ಹಿರಿಯ ಮಗ. ತೆಲುಗಿನ ಶ್ರೀ ಶ್ರೀಯವರಂತೂ ಅವರ ‘ಸೃಜನ’ ಸಾಹಿತ್ಯ ಪತ್ರಿಕೆಯ ಮೂಲಕ ‘ಸಾಹಿತ್ಯ ಮತ್ತು ರಾಜಕೀಯ’ ಕುರಿತಂತೆ ಹೊಸ ಚಿಂತನೆಗಳನ್ನು ಪರಿಚಯಿಸಿದ್ದರು. ಅವರ ಜೊತೆಗೆ ದಿಗಂಬರ ಸಾಹಿತ್ಯ ಚಳವಳಿ ಯಂಥದ್ದರ ಹುಟ್ಟಿಗೆ ಕಾರಣಕರ್ತರಾಗಿದ್ದರು.

ಅಮೃತರಾಯ್ ಅವರಂತೂ ತಮ್ಮ ತಂದೆ ಪ್ರೇಮ ಚಂದ್ ಅವರ ದಟ್ಟ ಪ್ರಭಾವದಿಂದ ಬಿಡಿಸಿಕೊಂಡು ‘ನಾನು ಒಬ್ಬ ಸ್ವತಂತ್ರ ಮನೋಭಾವನೆಯ ಲೇಖಕ ಮತ್ತು ಕಾದಂಬರಿಕಾರ’ ಎಂದು ಸಾಬೀತುಪಡಿಸುವಲ್ಲಿ ಎಚ್ಚರದ ಮನಸ್ಥಿತಿಯನ್ನು ಬೆಳೆಸಿಕೊಂಡು ಬಂದವರು. ಇಂಥ ಅಮೃತ ರಾಯ್ ಅವರನ್ನು ‘ಮುಕ್ತಿ’ ಕಾದಂಬರಿಯ ಮೂಲಕ ಪ್ರೀತಿ-ಪ್ರೇಮದ ಬಗ್ಗೆ ಹೊಸ ಲೋಕ ವನ್ನು ತೆರೆದಿಟ್ಟ ಶಾಂತಿನಾಥ ದೇಸಾಯಿಯವರು ಪರಿಚಯ ಮಾಡಿಕೊಟ್ಟರು. ‘ಶೂದ್ರ’ ಸಾಹಿತ್ಯಿಕ ಪತ್ರಿಕೆಯ ಹಿನ್ನೆಲೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪರಿಚಯಿಸಿದರು. ಹೀಗೆ ಪರಿಚಯಿಸುವಾಗ ಲಂಕೇಶ್‌ರವರು ಸ್ಟೈಲಾಗಿ ಸಿಗರೇಟು ಸೇದುತ್ತ ನಿಂತಿದ್ದರು. ಲಂಕೇಶ್ ಅವರಿಗೂ ಅಮೃತರಾಯ್ ಅವರ ಬಗ್ಗೆ ಕುತೂಹಲವಿತ್ತು. ಯಾಕೆಂದರೆ ಪ್ರೇಮ್‌ಚಂದ್ ಅವರ ಒಂದಷ್ಟು ಕಥೆಗಳ ಬಗ್ಗೆ ಮೆಚ್ಚುಗೆ ಇತ್ತು.

ಈ ಭಾರತೀಯ ಲೇಖಕರ ಸಮಾವೇಶವಿದ್ದುದು: ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ. ಸಮಾವೇಶದ ಒಂದಷ್ಟು ಲೇಖಕರು ಪರಿಷತ್ತಿಗೆ ಸಮೀಪದ ಮಧುವನ್ ಹೊಟೇಲಿನಲ್ಲಿದ್ದರು. ಮುಖ್ಯವಾಗಿ ಶ್ರೀಶ್ರೀಯವರು ಮತ್ತು ಅಮೃತರಾಯ್ ಅವರು. ಎರಡು ದಿನ ಈ ಇಬ್ಬರು ಮಹನೀಯರ ಜೊತೆ ತಿಂಡಿ ತಿನ್ನುತ್ತ, ಟೀ ಕುಡಿಯುವ ಅವಕಾಶ ದೊರಕಿತ್ತು.

premchand3ಹಿಂದೆಯೇ ಪ್ರಸ್ತಾಪಿಸಿದಂತೆ ಪ್ರೇಮ್ ಚಂದ್ ಅವರ ಕಾರಣಕ್ಕಾಗಿ ವಿಶೇಷವಾದ ಆಕರ್ಷಣೆ ಇತ್ತು. ಯಾಕೆಂದರೆ ಅವರ ಸುಮಾರು ಹನ್ನೆರಡು ಕಾದಂಬರಿಗಳು ಮತ್ತು ಕಥೆಗಳು ಒಂದು ರೀತಿಯ ತನ್ಮಯತೆಯನ್ನು ಬೆಳೆಸಿದ್ದವು. ಅದರಲ್ಲೂ ಮುಖ್ಯವಾಗಿ ಸೇವಾಸದನ್ ನಿರ್ಮಲ, ಗಬನ್ ಮತ್ತು ಗೋದಾನ್ ಅಂಥ ಶ್ರೇಷ್ಠ ಕಾದಂಬರಿಗಳನ್ನು ಮತ್ತೆ ಮತ್ತೆ ಓದುವ ಮನಸ್ಥಿತಿ ಯನ್ನು ಬೆಳೆಸಿಕೊಂಡಿದ್ದೆ. ಇದರಿಂದಲೇ ಅಮೃತ ರಾಯ್ ಅವರನ್ನು ಪ್ರಾರಂಭದಲ್ಲಿ ತಮ್ಮ ತಂದೆ ಪ್ರೇಮಚಂದ್ ಅವರನ್ನು ಕುರಿತು ನಾಲ್ಕು ಮಾತು ಹೇಳಲು ವಿನಂತಿಸಿಕೊಂಡಾಗ ತಮ್ಮ ತಾಯಿಯ ವರು ಬರೆದ ‘ಪ್ರೇಮ್‌ಚಂದ್: ಘರ್ ಮೇ’ ಕೃತಿಯನ್ನು ಓದಲು ಸೂಚಿಸಿದವರು.

ಇದರ ಜೊತೆಗೆ ತಮ್ಮ ತಂದೆ ಹೇಗೆ ಟಾಲ್‌ಸ್ಟಾಯ್, ಮ್ಯಾಕ್ಸಿಂಗಾರ್ಕಿ ಮತ್ತು ಮೊಫಾಸಾನಿಂದ ಪ್ರಭಾವಿತರಾಗಿದ್ದರು ಎಂಬುದನ್ನು ಗಂಭೀರವಾಗಿ ತಮ್ಮ ಮಾತಿನ ನಡುವೆ ಸಾಕಷ್ಟು ವಿವರಿಸಿದ್ದರು. ಯಾಕೆಂದರೆ ಟಾಲ್‌ಸ್ಟಾಯ್ ಮತ್ತು ಗಾರ್ಕಿ ಯವರ ಒಟ್ಟು ಸಾಹಿತ್ಯವನ್ನು ಹಿಂದಿಗೆ ತರುವಲ್ಲಿ ತುದಿಗಾಲಿನಲ್ಲಿ ನಿಂತಿದ್ದವರು. ಅವರು ಎಷ್ಟು ಅಪರೂಪದ ಕೃತಿಗಳನ್ನು ಸೃಷ್ಟಿಸಿದರೋ; ಅಷ್ಟೇ ಹೋದ ಕಡೆಯಲ್ಲೆಲ್ಲ ಸಾಹಿತ್ಯ, ಸಂಸ್ಕೃತಿ ಮತ್ತು ರಾಜಕೀಯ ಕುರಿತಂತೆ ನೂರಾರು ಉಪನ್ಯಾಸಗಳನ್ನು ಕೊಟ್ಟರು.

ಗಂಭೀರತೆಯ ದೃಷ್ಟಿಯಿಂದ ಸಾಕಷ್ಟು ಎತ್ತರದ ಲೇಖಕರಾಗಿದ್ದರಿಂದ ಪ್ರೇಮ್ ಚಂದ್ ಅವರನ್ನು ಭೇಟಿಯಾಗಲು ಹಾಗೂ ಅವರು ಉಪನ್ಯಾಸ ಕೊಡಲು ಎಲ್ಲೆಲ್ಲಿಗೋ ಆಹ್ವಾನಿಸುತ್ತಿದ್ದರು. ಸ್ವಾತಂತ್ರ ಚಳವಳಿಯ ಉತ್ತುಂಗತೆಯ ಕಾಲಘಟ್ಟವದು. ಎಂತೆಂಥದೋ ಚರ್ಚೆ ಮತ್ತು ವಾಗ್ವಾದಗಳನ್ನು ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡು; ವಿಚಿತ್ರವಾದ ಉದ್ವೇಗ ಹಾಗೂ ತಲ್ಲಣಗಳಿಗೆ ತೆರೆದು ಕೊಂಡ ಸಮಯವದು. ಪ್ರೇಮ್‌ಚಂದ್ ಅವರ ಒಟ್ಟು ಸಾಹಿತ್ಯ ಒಂದು ರೀತಿಯಲ್ಲಿ ರಾಜಾರಾಮ್ ಮೋಹನ್‌ರಾಯ್ ಮತ್ತು ದಯಾನಂದ ಸರಸ್ವತಿಯವರ ಸುಧಾರಣತ್ವಕ್ಕೆ ಪೂರಕವಾಗಿದ್ದರಿಂದ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದ್ದರು.

ಇದೆಲ್ಲವನ್ನೂ ಕುರಿತು ಅಮೃತರಾಯ್ ಅವರು ಹೇಳುವಾಗ; ತಂದೆಯ ಬಗ್ಗೆ ಅನನ್ಯತೆ ದಟ್ಟವಾಗಿತ್ತು. ಆದರೆ ಈ ದಟ್ಟತೆಯ ಜೊತೆಗೆ ಒಬ್ಬ ದೊಡ್ಡ ಲೇಖಕನಿಗೆ ಮಗನಾಗಿ ಅವರಿಂದ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಬಿಡಿಸಿಕೊಳ್ಳುವುದು ಎಷ್ಟು ಕಷ್ಟದ ಕೆಲಸ ಎಂಬುದನ್ನು ಮನಗಂಡಿದ್ದರು. ಯಾಕೆಂದರೆ ಅಮೃತರಾಯ್ ಅವರು ತಂದೆಯವರಿಂದ ಹೇಗೆ ಬೆಳೆದರು ಎಂಬ ಹತ್ತಾರು ಪ್ರಶ್ನೆಗಳಿಗೆ ಉತ್ತರಿಸುತ್ತಲೇ ಬರೆಯುವ ಭಿನ್ನದಾರಿಗಳನ್ನು ಕಂಡುಕೊಳ್ಳ ಬೇಕಾಗುತ್ತಿತ್ತು. ಇದನ್ನು ಪ್ರೇಮ್‌ಚಂದ್ ಅವರು ಮಕ್ಕಳಿಗೆ ಕಲಿಸಿದರು.

ತುಂಬ ಮೆಚ್ಚಿ ಕೊಂಡ ಒಂದು ದೊಡ್ಡ ಓದುಗ ಸಮೂಹದ ಭಾವನಾತ್ಮಕ ಪ್ರಶ್ನೆಗಳಿಗೆ ಎದುರಾಗುತ್ತಲೇ ಬರೆಯಬೇಕಾಗಿತ್ತು. ಮತ್ತು ಬದುಕಬೇಕಾ ಗಿತ್ತು. ಇದನ್ನು ಹೇಳುವ ಸಮಯಕ್ಕೆ ಶ್ರೀಶ್ರೀಯವರೂ ಬಂದು ಕೂಡಿಕೊಂಡಿ ದ್ದರು. ಇದೇ ಸಂದರ್ಭದಲ್ಲಿ ಪ್ರಗತಿಶೀಲ ಚಳವಳಿ ಮತ್ತು ಎಡಪಂಥೀಯ ಚಳವಳಿ ಬಗ್ಗೆ ಸಂವಾದ ಎದುರಾಗಿತ್ತು. ಇಲ್ಲಿ ಶ್ರೀಶ್ರೀ ಯವರ ರೀತಿಯಲ್ಲಿ ಅಮೃತರಾಯ್ ಅವರಾಗಲಿ ಅವರ ತಂದೆ ಪ್ರೇಮ್‌ಚಂದ್ ಅವರಾಗಲೀ ಅಪ್ಪಟ ಎಡಪಂಥೀಯರಾಗಲಿಲ್ಲ.

ಸೃಜನಶೀಲತೆಯ ಚೌಕಟ್ಟಿನಲ್ಲಿ ಟಾಲ್‌ಸ್ಟಾಯ್ ಅವರ ಆಲೋಚನಾಕ್ರಮ ಕ್ಕೆ ಹತ್ತಿರವಾದವರು. ಹಾಗೆಯೇ ಒಂದು ಸಮಾಜದ ಮತ್ತು ಮಾನವರ ವೈಪರಿತ್ಯಗಳನ್ನು ಹೇಗೆ ಗ್ರಹಿಸಿ ಪ್ರತಿಕ್ರಿಯಿಸಬೇಕು ಎಂಬುದೇ ಕೊನೆಗೂ ಸೃಜನಶೀಲತೆಯು ಉಳಿದಿರುವುದು ಎಂದು ತಿಳಿದವರು. ಆದ್ದರಿಂದಲೇ ಪ್ರೇಮ್‌ಚಂದ್ ಅವರ ಸಾಹಿತ್ಯ ಇಂದಿಗೂ ಪೇಲವವಾಗಿ ಕಾಣದಿರುವುದು.

ಮತ್ತೊಂದು ಮುಖ್ಯ ವಿಷಯ; ಪ್ರೇಮ್‌ಚಂದ್ ಅವರು ಗಾಂಧೀಜಿಯವರ ಅಪರೂಪದ ಸ್ವಾತಂತ್ರ ಚಳವಳಿಯನ್ನು ಹತ್ತಿರದಿಂದ ನೋಡುತ್ತಿದ್ದವರು. ಹಾಗೆಯೇ ಆ ಕಾಲಘಟ್ಟದಲ್ಲಿ ಎಂತೆಂಥ ಮನಸ್ಥಿತಿಗಳು ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಎಮರ್ಜ್ ಆಗುತ್ತಿದ್ದವು ಎಂಬುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದವರು. ಈ ಸೂಕ್ಷ್ಮತೆಯೇ ಕೊನೆಗೂ ಯಾವುದೇ ಕಲಾವಿದನನ್ನು ಜೀವಂತವಾಗಿ ಕಾಪಾಡುವುದು ಎಂಬುದನ್ನು ಅಮೃತರಾಯ್ ಅವರು ತಂದೆಯಿಂದ ಬಳುವಳಿಯಾಗಿ ಪಡೆದಿದ್ದರು.

ಅಮೃತರಾಯ್ ಅವರು ತಂದೆಯಿಂದ ಬಿಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಒಂದು ವ್ಯಾವಹಾರಿಕ ಉದಾಹರಣೆಯನ್ನು ಕೊಟ್ಟರು. ಅದು ಪ್ರೇಮಚಂದ್ ಅವರ ಕೃತಿಗಳ ಸ್ವಾಮ್ಯಕ್ಕೆ ಸಂಬಂಧಿಸಿದ್ದು. ಪ್ರೇಮ್‌ಚಂದ್ ಅವರೂ ಹಾಗೂ ಶಿವರಾಣಿ ದೇವಿಯವರೂ ಕಾಲವಾಗಿದ್ದಾರೆ. ಪ್ರೇಮ್‌ಚಂದ್ ಅವರ ಕೃತಿಗಳಿಗೆ ಕಿಂಚಿತ್ತೂ ಬೇಡಿಕೆ ಕಡಿಮೆಯಾಗಿಲ್ಲ. ಅನುವಾದದ ದೃಷ್ಟಿಯಿಂದಲೂ ಬೇರೆ ಬೇರೆ ಭಾಷೆಗಳಿಂದಲೂ ಬೇಡಿಕೆ ಬರುತ್ತಿದೆ. ಅವರು ಕೇವಲ ಐವತ್ತೈದು ವರ್ಷ ಬದುಕಿದ್ದರೂ; ತಮ್ಮ ವ್ಯಕ್ತಿತ್ವ ಮತ್ತು ಶ್ರೇಷ್ಠ ಬರವಣಿಗೆಯ ಮೂಲಕ ಅಗಾಧವಾದ ಪ್ರಭಾವವನ್ನು ಎಲ್ಲೆಡೆ ಬೀರಿದ್ದವರು.

premchand2ಆದ್ದರಿಂದ ಸ್ವಾಭಾವಿಕವಾಗಿ ಒಟ್ಟು ಕೃತಿಗಳನ್ನು ಕುರಿತಂತೆ ಬಯಕೆ ದ್ವಿಗುಣವಾಗುತ್ತಲೇ ಹೋಗುತ್ತದೆ. ಇಂಥ ಸಮಯದಲ್ಲಿ ಸುಲಭದ ಆದಾಯದ ಸಮಸ್ಯೆಯೂ ಉದ್ಭವಿಸುತ್ತದೆ. ಹೀಗೆ ಉದ್ಭವವಾದದ್ದರ ಬಗ್ಗೆ ಅಮೃತರಾಯ್ ಅವರು ವಿಷಾದದಿಂದ ಹೇಳಿದಾಗ; ಗಾಬರಿಗೊಂಡಿದ್ದೆ. ಪ್ರೇಮ್‌ಚಂದ್ ಅವರ ಕೃತಿಗಳ ಬಗ್ಗೆ ಸ್ವಾಮ್ಯಕ್ಕಾಗಿ ಕಾನೂನಿನ ಹೋರಾಟ ನಡೆದಾಗ; ಹಿಂದಿ ಸಾಹಿತ್ಯವಲಯದಲ್ಲಿ ಎಂತೆಂಥದೋ ಸಂವಾದ ಮತ್ತು ಚರ್ಚೆ ಶುರುವಾಯಿತು.

ಒಬ್ಬ ದೊಡ್ಡ ಸಾಹಿತಿ ಸತ್ತನಂತರ ಕೃತಿಗಳ ಸ್ವಾಮ್ಯಕ್ಕಾಗಿ ಈ ರೀತಿಯಲ್ಲೂ ಕಿತ್ತಾಡಲು ಸಾಧ್ಯವಾ? ಎಂದು. ಕೊನೆಗೆ ಅಮೃತರಾಯ್ ಅವರು ಇದು ನಾಚಿಕೆಗೇಡಿನ ಹೋರಾಟ ಎಂದು ತಿಳಿದರು. ಕೋರ್ಟಿನಲ್ಲಿದ್ದ ಎಲ್ಲ ಕೇಸುಗಳನ್ನು ಹಿಂದಕ್ಕೆ ಪಡೆದರು.

ತಮ್ಮನ ಮುಂದೆ ವಿನಯದಿಂದ ನಿಂತು: ‘‘ನೋಡಪ್ಪ ಅಪ್ಪ ಚೆನ್ನಾಗಿ ಬದುಕಿದರು. ಏನೇನೋ ಕಷ್ಟ ಕಾರ್ಪಣ್ಯಗಳ ಮಧ್ಯೆ ಬದುಕು ಕಟ್ಟಿಕೊಂಡರು. ಉತ್ತಮ ಸಾಹಿತ್ಯವನ್ನು ಕೊಟ್ಟರು. ಅದಕ್ಕಾಗಿ ನಾವು ಕಿತ್ತಾಡುತ್ತ ಚಿಲ್ಲರೆ ಮನುಷ್ಯರಾಗುವುದು ಬೇಡ. ಅವರ ಆತ್ಮ ನೆಮ್ಮದಿಯಿಂದ ಇರಬೇಕಾದರೆ; ನಾವೂ ಒಂದಷ್ಟು ತ್ಯಾಗ ಮಾಡುವುದನ್ನು ಕಲಿಯಬೇಕು ಎಂದು ಹೇಳಿ; ಒಟ್ಟು ಕೃತಿಗಳ ಸ್ವಾಮ್ಯವನ್ನು ತಮ್ಮನಿಗೆ ಬರೆದುಕೊಟ್ಟೆ’’ ಎಂದಾಗ ಒಂದು ಕ್ಷಣ ಅಮೃತರಾಯ್ ಅವರ ಮುಖದ ದೊಡ್ಡ ಪರದೆಯ ಮೇಲೆ ಪ್ರೇಮ್‌ಚಂದ್ ಅವರ ಸಾಹಿತ್ಯ ನಾನಾ ರೀತಿಯ ಅರ್ಥಗಳನ್ನು ಸ್ಫುರಿಸುವಂತೆ ಗೋಚರವಾಯಿತು.

ಎದ್ದು ಅವರ ಎರಡೂ ಕೈಗಳನ್ನು ಹಿಡಿದು ನಮಸ್ಕರಿಸಿದ್ದೆ. ಮತ್ತೆ ಅವರ ಜೊತೆಯಲ್ಲಿ ಬೆಚ್ಚನೆಯ ಟೀ ಕುಡಿದು ನಿರ್ಗಮಿಸಿದೆ. ನಿರ್ಗಮಿಸುವ ಮುನ್ನ ಅವರ ವಿಳಾಸವನ್ನು ಪಡೆದೆ. ಹಸ್ತಾಕ್ಷರವನ್ನು ಪಡೆದೆ. ‘‘ಪ್ರೇಮಚಂದ್: ಘರ್ ಮೇ ಕೃತಿ ಪಡೋ, ಔರ್ ಪತ್ರ್ ಲಿಖೋ’’ ನಾನು ವೌನವಾಗಿ ಸಮ್ಮತಿಸಿ ಹೊರಗೆ ಬಂದೆ. ಹೊರಗೆ ಬರುವಾಗ ಬೇರೆ ಭಾಷೆಯ ಕೆಲವು ಲೇಖಕರು ತಮ್ಮ ಕೊಠಡಿಗಳ ಮುಂದೆ ನಿಂತು ಮಾತಾಡುತ್ತಿದ್ದರು.

ಅವರಲ್ಲಿಯೂ ಪ್ರೇಮಚಂದ್ ಅವರ ವ್ಯಕ್ತಿತ್ವ ಮುಂದುವರಿದ ಭಾಗವಾಗಿ; ಅಮೃತರಾಯ್ ಅವರಲ್ಲಿರುವಂತೆ ಇರಬಹುದು. ಒಳಗುದಿಗಳನ್ನು ತುಂಬಿಕೊಂಡು ಬರೆಯುತ್ತಿರಬಹುದು. ಅವರ ಸೃಜನಶೀಲ ಸೃಷ್ಟಿ ಕ್ರಿಯೆಯಲ್ಲಿ ‘ಗಬನ್, ಪ್ರೇಮಾಶ್ರಮ್, ಕರ್ಮಭೂಮಿ, ಸೇವಾಸದನ್, ನಿರ್ಮಲಾ’ ರೀತಿಯ ಆಪ್ತ ಕೃತಿಗಳಿರಬಹುದು. ನಮಗೆ ಗೊತ್ತಿಲ್ಲದ ಸಂಗತಿಗಳು; ಅರಿವಿಗೆ ಬರದೆ ಹೇಗೆ ಬೂದಿ ಮುಚ್ಚಿದ ಕೆಂಡದಂತೆ ಇರುತ್ತದೆ ಎಂದು ಯೋಚಿಸಿದೆ.

ಅದೇ ಸಮಯಕ್ಕೆ ಅಮೃತರಾಯ್ ಅವರ ಸೋದರನನ್ನು ಕುರಿತು ಯೋಚಿಸುವಾಗ ಪ್ರೇಮಚಂದ್ ಅವರ ‘ಶವದ ಬಟ್ಟೆ’ ಕಥೆ ನೆನಪಿಗೆ ಬಂತು. ಮನುಷ್ಯ ಸಂಬಂಧಗಳ ಡೈಕಾಟಮಿಗಳನ್ನು ಕುರಿತು ಮೆಲುಕು ಹಾಕುತ್ತ ರಸ್ತೆಗಿಳಿದೆ. ನೂರಾರು ಮಂದಿ ಒಬ್ಬರಿಗೊಬ್ಬರು ದಾರಿ ಬಿಡದಂತೆ. ತಮ್ಮ ತಮ್ಮ ಬದುಕು ಕಂಡುಕೊಳ್ಳಲು ಅಡ್ಡಾದಿಡ್ಡಿ ಓಡಾಡುತ್ತಿರುವಂತೆ ಕಾಣಿಸಿತು. ಎದುರಿದ್ದ ಕಣ್ಣಿನ ಆಸ್ಪತ್ರೆಗೆ ದೃಷ್ಟಿ ಪರೀಕ್ಷಿಸಲು ಯಾರ್ಯಾರೋ ಕೈ ಹಿಡಿದು ನಿಧಾನವಾಗಿ ನಡೆಯುತ್ತಿದ್ದರು. ಆಗ ಭೌತಿಕ ದೃಷ್ಟಿ ಮತ್ತು ಅಂತರಂಗದ ದೃಷ್ಟಿಯ ನಡುವೆ ಎಂತೆಂಥ ಆಗು ಹೋಗುಗಳು ನಡೆದು ಹೋಗುತ್ತವೆ ಅನ್ನಿಸಿತು.

ಸಂಜೆ ಲಂಕೇಶ್ ಅವರನ್ನು ಭೇಟಿಯಾದೆ. ಮನಸ್ಸಿನ ತುಂಬ ಅಮೃತರಾಯ್ ಮತ್ತು ಅವರ ಸೋದರ ಆವರಿಸಿಕೊಂಡಿದ್ದರು. ಸೋದರನ ಕ್ಷುದ್ರತೆ ಮುಂದೆ ಪ್ರೇಮ್‌ಚಂದ್ ಅವರ ಕೃತಿಗಳು ಅನಾಥ ಮಕ್ಕಳಂತೆ ಕಾಣಿಸಿದವು. ಒಟ್ಟು ವಿಷಯ ಲಂಕೇಶ್ ಅವರಿಗೆ ತಿಳಿಸಿದೆ. ಅವರು ವಿಷಾದದಿಂದ ‘‘ನಾನು ಭೇಟಿಯಾಗಿ ಮಾತಾಡಬೇಕಾಗಿತ್ತು. ಸಾಹಿತ್ಯ ಸಂವಾದದ ಸಮಯದಲ್ಲಿ ಹಿಂದಿ ಸಾಹಿತ್ಯಕ್ಕೆ ಸಂಬಂಧಿಸಿ, ಅವರ ಮಾತು ಸೆನ್ಸಿಬಲ್ ಆಗಿತ್ತು’’ ಎಂದರು. ‘‘ಶೂದ್ರ ದಲ್ಲಿ ಇದನ್ನೆಲ್ಲ ದಾಖಲು ಮಾಡು’’ ಎಂದರು. ಎರಡು ಮೂರು ಪುಟಗಳ ಪುಟ್ಟ ಟಿಪ್ಪಣಿಯನ್ನು ಪ್ರಕಟಿಸಿದ್ದೆ.

premchand autograph‘ಲಂಕೇಶ್ ಪತ್ರಿಕೆ’ ಆಗ ಇನ್ನೂ ಹುಟ್ಟಿರಲಿಲ್ಲ. ಅವರ ದೈತ್ಯಶಕ್ತಿಯ ಬರವಣಿಗೆಗೆ ಮಾಧ್ಯಮದ ಹುಡುಕಾಟದಲ್ಲಿ ಒದ್ದಾಡುತ್ತಿದ್ದರು. ‘ಶೂದ್ರ’ದಲ್ಲಿ ಪ್ರತಿ ತಿಂಗಳು ಒಂದಷ್ಟು ಅಮೂಲ್ಯ ಲೇಖನಗಳನ್ನು ಬರೆದರೂ; ಅವರಿಗೆ ಪಿಕಾಸೋ ‘ಗರ್ನಿಕಾ’ ಚಿತ್ರವನ್ನು ಬಿಡಿಸುವಾಗ; ರೂಪಿಸಿಕೊಂಡ ವಿಶಾಲವಾದ ಕ್ಯಾನ್‌ವಾಸ್ ರೀತಿಯ ಚೌಕಟ್ಟು ಲಂಕೇಶ್ ಅವರಿಗೂ ಬೇಕಾಗಿತ್ತು. ಅದರ ಅಗತ್ಯವೂ ಅವರಿಗಿತ್ತು. ಆದ್ದರಿಂದಲೇ ‘ದಿನಪತ್ರಿಕೆ’ಯನ್ನು ಪ್ರಾರಂಭಿಸಲು ಮೂರು ನಾಲ್ಕು ಸಭೆಗಳನ್ನು ಕರೆದರು. ವೀರೇಂದ್ರ ಪಾಟೀಲರು ಮುಖ್ಯಮಂತ್ರಿಗಳಾಗಿದ್ದ ಕಾಲವದು. ಪ್ರೊ.ಎಂ.ಡಿ.ಎನ್., ತೇಜಸ್ವಿ, ಎನ್.ಡಿ. ಸುಂದರೇಶ್ ಮುಂತಾದವರೆಲ್ಲ ಧೈರ್ಯ ತುಂಬಲಿಲ್ಲ.

ಆಗ ಸೆಟೆದುಕೊಂಡು ‘ಪಾಂಚಾಲಿ’ಯನ್ನು ತಂದದ್ದು. ಈ ರೀತಿಯ ಸೃಜನಶೀಲ ಒತ್ತಡಗಳನ್ನು ಪ್ರೇಮಚಂದ್ ಅವರು ಎಷ್ಟೊಂದು ಎದುರಿಸಿರಬಹುದು. ಅವರು 1930ರಲ್ಲಿ ‘ಹಂಸ’ ಪತ್ರಿಕೆಯನ್ನು ತರುವಾಗ, ಸಾಹಿತ್ಯಿಕ ಕನಸುಗಳೇನು? ಎಂಬ ಪ್ರಶ್ನೆ ಕಾಡುವುದು. ಹೀಗೆ ಕಾಡಿಸುವ ನೆನಪುಗಳ ಮುಂದೆ ಪ್ರೇಮ್‌ಚಂದ್ ಅವರು ತಮಗೆ ಜನ್ಮನೀಡಿದ ಮನೆಯ ಮುಂದೆ ನಿಂತಿರುವುದು ಎದುರಾಗುತ್ತದೆ. ಅದೇ ಸಮಯಕ್ಕೆ ತಾವು ದೊಡ್ಡ ಲೇಖಕರಾಗಿ ಕಟ್ಟಿಕೊಂಡ ಮನೆ ಮುಂದೆ ಬಂದು ನಿಲ್ಲುತ್ತದೆ.

ತನ್ನ ಗಂಡ ತನಗೊಂದು ಮನೆ ಕಟ್ಟಿಸಿಕೊಟ್ಟಿದ್ದಾರೆ ಎಂದು ಪತ್ನಿ ಶಿವರಾಣಿ ದೇವಿಯವರು ಎಷ್ಟು ಸಂತೋಷ ಪಟ್ಟಿರಬಹುದು. ನಾನಾ ಕಷ್ಟಗಳ ನಡುವೆ ಮನೆಯನ್ನು ಕಟ್ಟಲು ತನ್ನ ಗಂಡನ ಈ ಎಲ್ಲ ಕೃತಿಗಳು ಕಾರಣ ಎಂದು ಅವುಗಳನ್ನೆಲ್ಲ ಮುಂದಿಟ್ಟುಕೊಂಡು ಬದುಕಿನ ಕೊನೆಯ ದಿನಗಳನ್ನು ಆಕೆ ಕಳೆದಿರಬಹುದು.

‍ಲೇಖಕರು Admin

31 July, 2016

1 Comment

  1. lalitha sid

    ಲೇಖನ ಬಹಳ ಇಷ್ಟ ಆಯ್ತು ಸರ್. ಪ್ರೇಮ್ ಜೀಯವರ ಕೆಲವೇ ಕೆಲವು ಕೃತಿಯ ಅನುವಾದ ಓದಿದ್ದೇನೆ.

    ನಿಜ, ಕ್ಷೇತ್ರ ಒಂದರಲ್ಲಿ ಅತಿ ಎತ್ತರಕ್ಕೆ ಮುಟ್ಟಿಬಿಟ್ಟವರ ಮಕ್ಕಳಾಗುವುದೂ ಕೂಡ ಅಷ್ಟೇ ಒತ್ತಡದಾಯಕ. ಒಂದೋ ಆ ಕ್ಷೇತ್ರಕ್ಕೇ ಮಕ್ಕಳು ಕಾಲಿಡಬಾರದು. ಇಲ್ಲ ಇಡುವುದಾದರೆ ಅಪ್ಪ/ಅಮ್ಮನ ಪ್ರಭಾವ ಮೀರಿ ಬೆಳೆಯಬೇಕು. ಅದು ಹೇಗಿರುತ್ತದೆಂದರೆ ತನ್ನ ನೆರಳು ತನ್ನ ಕಾಲಡಿ ಬೀಳದಿರುವಂತೆ ನಡೆಯುವ ಸರ್ಕಸ್ಸಿನ ಹಾಗೆ !

    ಶಿವರಾಣಿಯವರು ಏನು ಬರೆದಿದ್ದಾರೆಂಬುದನ್ನು ಕೆಲವೇ ಸಾಲಲ್ಲಿ ಮುಗಿಸಿಬಿಟ್ಟಿರಿ. ಅದನ್ನು ಪೂರ್ತಿ ಓದಬೇಕೆಂಬ ಕುತೂಹಲ ಹುಟ್ಟಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading