ಅವರು ಗಾಂಧಿಯನ್ನು ಕಂಡರು..

‘ನನ್ನ ತಂದೆ ಗಾಂಧೀಜಿಯನ್ನು ಭೇಟಿ ಮಾಡಿದ ಸಂದರ್ಭ’

ಎನ್ ಎಸ್ ಶಂಕರ್

ʻ1929 – 30ರ ಕಾಲ. ಮಹಾತ್ಮ ಗಾಂಧಿಯವರು ಹೊನ್ನಾಳಿ ಗ್ರಾಮಕ್ಕೆ ಬರುವರೆಂಬ ವರ್ತಮಾನ ಗೊತ್ತಾಯಿತು. ನಾವೆಲ್ಲ ಗಾಂಧೀಜಿಯವರ ದರ್ಶನಕ್ಕೆ ಕಾತರರಾಗಿದ್ದೇವೆಂದು ನಮ್ಮ ಮುಖ್ಯೋಪಾಧ್ಯಾಯ ಶ್ರೀ ಮಂಜುನಾಥಯ್ಯನವರಿಗೆ ದುಂಬಾಲು ಬಿದ್ದೆವು. ನಮ್ಮ ತರಗತಿಯಲ್ಲಿ ಪ್ರತಿನಿತ್ಯ ಒಂದು ಗಂಟೆ ಕಾಲ ಚರಕಾದಲ್ಲಿ ನೂಲುವ ಪರಿಪಾಠವಿತ್ತು. ನಮ್ಮ ಆಶೋತ್ತರಗಳಿಗೆ ಪ್ರೋತ್ಸಾಹ ಕೊಟ್ಟು ಮುಖ್ಯೋಪಾಧ್ಯಾಯರು ಚರಕಾಗಳನ್ನು ಹೊರೆಸಿಕೊಂಡು (ಶಿವಮೊಗ್ಗ ಜಿಲ್ಲೆಯ ನ್ಯಾಮತಿಯಿಂದ) ಹೊನ್ನಾಳಿಗೆ ನಡೆಸಿಕೊಂಡು ಕರೆದೊಯ್ದರು. ತಾಲೂಕು ಕಚೇರಿ ಮುಂಭಾಗದಲ್ಲಿ ಗಾಂಧೀಜಿಯವರಿಗಾಗಿ ಆಸನ ಏರ್ಪಡಿಸಲಾಗಿತ್ತು. ಮುಂದುಗಡೆ ಎರಡು ಸಾಲಾಗಿ ಕೂತು ನಾವು ನೂಲುತ್ತಿದ್ದೆವು.

ಮಧ್ಯಾಹ್ನ ಸುಮಾರು ಮೂರು ಗಂಟೆಗೆ ಮಹಾತ್ಮಾಜಿ ಬಂದರು. ನೂಲುತ್ತಿದ್ದ ನಮ್ಮನ್ನೆಲ್ಲ ಹಸನ್ಮುಖದಿಂದ ನೋಡುತ್ತ ವೇದಿಕೆಯಲ್ಲಿ ಮಂಡಿಸಿದರು. ನಾವು ಕಲ್ಪನೆ ಮಾಡಿಕೊಂಡ ಗಾಂಧೀಜಿಗೂ, ಪ್ರತ್ಯಕ್ಷ ಕಂಡ ಮಹಾತ್ಮರಿಗೂ ಯಾವುದೇ ಹೋಲಿಕೆಯಿರಲಿಲ್ಲ. ಇಡೀ ಹಿಂದೂಸ್ತಾನದಲ್ಲಿ ತನ್ನ ಚಟುವಟಿಕೆಗಳಿಂದ ಚೈತನ್ಯ ತುಂಬಿ ದೇಶದ ಸ್ವಾತಂತ್ರ್ಯಕ್ಕಾಗಿ ಸರ್ವತ್ಯಾಗ ಮಾಡಲು ಪ್ರೇರೇಪಿಸಿದ ವ್ಯಕ್ತಿಯು ಅತ್ಯಂತ ಭವ್ಯ ಹಾಗೂ ಆಕರ್ಷಕ ವ್ಯಕ್ತಿಯಾಗಿರಬೇಕೆಂಬ ಕಲ್ಪನೆ ನಮಗಿತ್ತು. ಹಿಂದೂಸ್ತಾನ ಗುಲಾಮಗಿರಿಯಿಂದ, ಸಾಮಾಜಿಕವಾಗಿ ಆರ್ಥಿಕವಾಗಿ ವಂಚಿಸಲ್ಪಟ್ಟು, ಶತಮಾನಗಳಿಂದ ತುಳಿಯಲ್ಪಟ್ಟ, ಒಪ್ಪೊತ್ತಿನ ಊಟವನ್ನೂ ಕಾಣದ ಕೋಟ್ಯಂತರ ದೀನ-ದಲಿತರ ಪ್ರತಿನಿಧಿ ಅವರಾಗಿದ್ದರು. ಮೊಳಕಾಲಿನವರೆಗೆ ಪಂಚೆ, ಮೈ ಮುಚ್ಚುವ ಒಂದು ವಲ್ಲಿ ಧರಿಸಿದ, ನಗುಮುಖವೊಂದೇ ಎದ್ದು ಕಾಣುವ ವಾಮನಮೂರ್ತಿಯಾಗಿ ಕಂಡರುʼ.

ʻಅವರ ವೇದಿಕೆಗೆ ಎದುರಾಗಿ ಎರಡು ಸಾಲುಗಳಲ್ಲಿ ಹತ್ತೆಂಟು ಹುಡುಗರು ಕೂತು ರಾಟೆಗಳಿಂದ ನೂಲುತ್ತಿದ್ದೆವು. ನಮ್ಮನ್ನೆಲ್ಲ ಕೋಮಲ ಭಾವನೆಯಿಂದ ವೀಕ್ಷಿಸುತ್ತಾ ಮರಳಿ ಹೊರಡುವಾಗ ನಮ್ಮ ಸಮೀಪ ಬಂದು ಮುಗುಳ್ನಗುತ್ತಾ ಆಶೀರ್ವದಿಸಿದರು. ಅವರು ನನ್ನ ಬಳಿ ಬಂದು ತಲೆ ಸವರಿದ ಕೂಡಲೇ ನನ್ನ ಮೈಯಲ್ಲಿ ವಿದ್ಯುತ್ ಸಂಚಾರವಾದಂತಾಯಿತು. ಅವರ ದರ್ಶನದಿಂದ ಈ ವಾಮನಮೂರ್ತಿಯಲ್ಲಿ ಯಾರಲ್ಲೂ ಕಾಣದ ಒಂದು ಅದ್ಭುತ ಶಕ್ತಿ ಅಡಗಿದೆಯೆಂಬ ಭಾವನೆ ಉಂಟಾಯಿತು…ʼ

ಈ ಘಟನೆ ನಡೆದಾಗ, ಇದನ್ನು ನಿರೂಪಿಸುತ್ತಿರುವ ಬಾಲಕನಿಗೆ ಸುಮಾರು 13 – 14 ವರ್ಷ. ಎನ್.ಎಸ್. ಹಾಲಪ್ಪ ಎಂಬ ಆ ಬಾಲಕನೇ ನನ್ನ ತಂದೆ. ಗಾಂಧೀಜಿಯವರ ಆ ಸಂಕ್ಷಿಪ್ತ ಭೇಟಿಯೇ ನಿಮಿತ್ತವಾಗಿ ನನ್ನ ತಂದೆ ಇನ್ನೊಂದು ವರ್ಷದಲ್ಲಿ – ಅಂದರೆ ದೇಶಾದ್ಯಂತ 1930ರ ಉಪ್ಪಿನ ಸತ್ಯಾಗ್ರಹದ ಕಾವು ಆವರಿಸಿದಾಗ, ಹೇಳದೆ ಕೇಳದೆ ಮನೆ ಬಿಟ್ಟು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಲು ಮುಂಬೈ ಹಾದಿ ಹಿಡಿದರು.

ನಾವು ಏಳು ಮಂದಿ ಮಕ್ಕಳು. ಮನೆಯಲ್ಲಿ ನಾನೇ ಚಿಕ್ಕವನು. ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದರಿಂದ, ನಮ್ಮಪ್ಪನೇ ನನಗೆ ತಂದೆ-ತಾಯಿ ಎರಡೂ ಆಗಿ ಆತುಕೊಂಡರು. ಅವರು ಯಾವಾಗಲಾದರೂ ಒಮ್ಮೆ ತಮ್ಮ ಸ್ವಾತಂತ್ರ್ಯ ಸಂಗ್ರಾಮ ಅನುಭವದ ತುಣುಕುಗಳನ್ನು ಮೆಲುಕು ಹಾಕುವಾಗ ನನಗೆ ಎಲ್ಲಿಲ್ಲದ ಕುತೂಹಲ. ಒಮ್ಮೆ ಪೊಲೀಸರು ಹುಡುಕಿಕೊಂಡು ಬಂದಾಗ ಸರ್ರನೆ ಗಳದ ಮೇಲಿದ್ದ ಸೀರೆ ಸೆಳೆದುಕೊಂಡು ಉಟ್ಟು ತಲೆ ತುಂಬ ಸೆರಗು ಹೊದ್ದು ಅಡುಗೆಮನೆಯಲ್ಲಿ ರೊಟ್ಟಿ ಬಡಿಯುತ್ತಾ ಬಚಾವಾಗಿದ್ದನ್ನು ನಿರೂಪಿಸಿದ್ದರು. ಇಂಥ ಅನುಭವಗಳನ್ನು ಅವರ ಬಾಯಲ್ಲಿ ಹಲವಾರು ಬಾರಿ ಕೇಳಿದ್ದ ನಾನೇ ಅವರ ಅನುಭವ ಕಥನ ಬರೆಯುವಂತೆ ದುಂಬಾಲು ಬಿದ್ದೆ. ಅದರ ಪರಿಣಾಮ – ಜೀವಮಾನದಲ್ಲೇ ಏನೊಂದೂ ಬರೆಯದಿದ್ದ ನಮ್ಮಪ್ಪ ಹದಿನೈದೇ ದಿನಗಳಲ್ಲಿ ನೂರು ಪುಟಕ್ಕೂ ಮಿಕ್ಕಿದ ತಮ್ಮ ಅನುಭವ ಕಥನ ಬರೆದರು. ದುರದೃಷ್ಟವಶಾತ್, ಆ ಪುಸ್ತಕವನ್ನು ಅವರು ಬದುಕಿದ್ದಾಗ ಬೆಳಕಿಗೆ ತರಲಾಗಲಿಲ್ಲ. ನಂತರ ಕೋಲಾರದ ಆದಿಮ ಪ್ರಕಾಶನದಿಂದ ಪ್ರಕಟಣೆಯಾಯಿತು. (ಈ ಬರಹದ ವಿವರಗಳೆಲ್ಲ ʻಸಾಮಾನ್ಯನ ಸಂಕ್ರಮಣʼ ಎಂಬ ಆ ಪುಸ್ತಕದಲ್ಲಿವೆ.)

ಚಿಕ್ಕಂದಿನಲ್ಲೇ ತಂದೆ ಸಣ್ಣಶಂಕರಪ್ಪನವರನ್ನು ಕಳೆದುಕೊಂಡ ಹಾಲಪ್ಪ ತಾಯಿಯ ಏಕೈಕ ಮಗ. ಆ ತಾಯಿಯೋ ಅವರಿವರ ಮನೆ ಕಸಮುಸುರೆ ಮಾಡಿ ಕಡುಬಡತನದಲ್ಲಿ ಇದ್ದೊಬ್ಬ ಮಗನನ್ನು ಸಲಹಿದರು. ಆದರೆ ಹೊನ್ನಾಳಿ ದರ್ಶನದ ನಂತರ ಬಾಪೂಜಿ ಸೆಳೆತ ಹೇಗೆ ಆವರಿಸಿತೆಂದರೆ, ಹಾಲಪ್ಪ ತಾಯಿಯ ಚಿಂತೆಯನ್ನೂ ಮಾಡದೆ ಒಂದು ಭಾನುವಾರ ತಾಯಿಯ ಸೋದರ ಸಂತೆ ವ್ಯಾಪಾರಕ್ಕಾಗಿ ಆಯನೂರಿಗೆ ಹೋಗಿದ್ದಾಗ, ಮನೆಯಲ್ಲೊಂದಿಷ್ಟು ರೂಪಾಯಿ ಕದ್ದು ಮೊದಲು ಪುಣೆ ದಿಕ್ಕು ಹಿಡಿದರು.

ಪುಣೆ ಏಕೆಂದರೆ ಗಾಂಧೀಜಿ ಯರವಡಾದಲ್ಲಿದ್ದರೆಂದೂ, ಆ ಯರವಾಡಾ ಪುಣೆಯಲ್ಲಿದೆಯೆಂದೂ ಯಾರ ಮೂಲಕವೋ ಗೊತ್ತಾಗಿತ್ತು! ಯರವಾಡ ಎಂಬುದು ಜೈಲಿನ ಹೆಸರು ಎಂದೂ ಆ ಬಾಲಕನಿಗೆ ಗೊತ್ತಿರಲಿಲ್ಲ! ಅಂತೂ ರೈಲಿನಲ್ಲಿ ಪುಣೆ ತಲುಪುವ ವೇಳೆಗೆ ಮೊದಲನೆಯದಾಗಿ ಭಾಷೆ ಗೊತ್ತಿಲ್ಲದೆ ದಿಗಿಲು. ಮತ್ತೆ ಎಲ್ಲಿಗೆ ಹೋಗಬೇಕೋ ತಿಳಿಯದೆ, ರೈಲು ನಿಲ್ದಾಣದಲ್ಲೇ ಎರಡು ದಿನ ಕಳೆಯುವಷ್ಟರಲ್ಲಿ ಜೇಬಿನಲ್ಲಿದ್ದ ದುಡ್ಡೂ ಖಾಲಿಯಾಗುತ್ತಾ ಊರು ತಲುಪುವ ದಾರಿಯೂ ತಿಳಿಯದೆ ಕಂಗಾಲಾದಾಗ… ಅದೇ ತಾನೇ ಜೈಲಿನಿಂದ ಬಿಡುಗಡೆಯಾಗಿ ಬಂದ ಸತ್ಯಾಗ್ರಹಿಗಳ ಗುಂಪೊಂದು ರೈಲಿನಿಂದ ಇಳಿದಿದ್ದನ್ನು ಕಂಡು ಹೋದ ಜೀವ ಬಂದಂತಾಯಿತು. ಆ ಗುಂಪಿನಲ್ಲೊಬ್ಬ ಕನ್ನಡಿಗನೂ ಸಿಕ್ಕ ಮೇಲೆ ಸಮಸ್ಯೆಯೇ ಉಳಿಯಲಿಲ್ಲ. ಆ ಗುಂಪು ಈ ಹುಡುಗನನ್ನು ಮುಂಬಯಿಗೆ ಕರೆದೊಯ್ದು ಸ್ಥಳೀಯ ಕಾಂಗ್ರೆಸ್ ಕಚೇರಿಯಲ್ಲಿ ನೆಲೆಗೊಳಿಸಿತು. ಸ್ವಲ್ಪ ದಿನಕ್ಕೆ ವಿದೇಶಿ ವಸ್ತ್ರದಂಗಡಿಗಳ ಮುಂದೆ ಪಿಕೆಟಿಂಗ್ ಮಾಡುವುದು ಮುಂತಾದ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಇದು ರಾಷ್ಟ್ರೀಯ ಚಳವಳಿಗೆ ಪ್ರವೇಶ ಪಡೆದ ಹಂತ.

ಕೆಲ ದಿನಗಳಲ್ಲೇ ಊರ ಹಿರಿಯರೊಬ್ಬರು ಮುಂಬಯಿಗೆ ಬಂದು ಅವರ ತಾಯಿ, ಮಗನ ಚಿಂತೆಯಲ್ಲಿ ಹಾಸಿಗೆ ಹಿಡಿದಿದ್ದಾಳೆಂದು ತಿಳಿಸಿದಾಗ (ಆ ನಡುವೆ ನಮ್ಮಪ್ಪ ಊರಿಗೆ ಒಮ್ಮೆ ಕಾಗದ ಬರೆದು ತಮ್ಮ ಮುಂಬಯಿ ಯಾತ್ರೆ ಬಗ್ಗೆ ತಿಳಿಸಿದ್ದರು.) ಮತ್ತೆ ಊರಿಗೆ ಬಂದಿದ್ದಾಯಿತು. ಹಾಗೆ ಬಂದಾಗ ಒಂದು ಹಗರಣವಾಯಿತು. ಹಾಲಪ್ಪ ಊರು ಬಿಟ್ಟು ಹೋಗಿದ್ದು ಯಾರದೋ ಚಿತಾವಣೆಯಿಂದ ಎಂದು ಸಾಧಿಸಲು ಕೆಲವು ಹಿರಿಯರು ಪಂಚಾಯ್ತಿ ಮಾಡಿದರು! ʻಇಲ್ಲ, ಮಹಾತ್ಮರ ಪ್ರೇರಣೆಯಿಂದ ನಾನಾಗಿ ಹೋದೆʼ ಎಂದು ವಾದಿಸಿ ಒಂದೆರಡು ಏಟು ತಿಂದು ಬಚಾವಾದರೂ, ʻಎಲ್ಲೆಲ್ಲೋ ಹೋಗಿ ಜಾತಿ ಕೆಟ್ಟು ಬಂದಿದ್ದಾನೆ; ಈತನಿಗೆ ಮನೆಯೊಳಗೆ ಕೂರಿಸಿ ಊಟ ಹಾಕಬಾರದುʼ ಎಂಬ ಕಟ್ಟಳೆ ಹೊರಡಿಸಿದ್ದಾಯಿತು! ಕೆಲ ದಿನಗಳಲ್ಲಿ ಅದೂ ತಿಳಿಯಾಗಿ ಶಾಲೆಗೆ ಮರು ಸೇರ್ಪಡೆಯಾಗಿದ್ದಾಯಿತು.

ಆರಂಭದ ದಿನಗಳಲ್ಲಿ ಕಾಂಗ್ರೆಸ್ಸು ಎಂಬುದು ಪುಂಡುಪೋಕರಿಗಳ ಕಸುಬು ಎಂಬ ಸಾರ್ವತ್ರಿಕ ಅಸಡ್ಡೆ ಇತ್ತು. ಆದರೆ ಕ್ರಮೇಣ ಆ ಧೋರಣೆ ಹೇಗೆ ಬದಲಾಗುತ್ತಾ ಬಂತು ಎಂಬುದನ್ನೂ ಈ ಪುಸ್ತಕ ನಿರೂಪಿಸುತ್ತದೆ.

ಶಾಲೆಯಲ್ಲಿ ಹಾಲಪ್ಪನಿಗೆ ಉಪಾಧ್ಯಾಯರಿಂದ ಸಿಕ್ಕ ಮನ್ನಣೆ, ಆದರಗಳಿಂದಾಗಿ ಕೆಲ ಸಹಪಾಠಿಗಳಿಗೂ ಹುಮ್ಮಸ್ಸು ಬಂತು. ಮತ್ತೊಂದಿಷ್ಟು ದಿನಕ್ಕೆ ಕೆಲವು ಹುಡುಗರು ಮತ್ತೆ ಮುಂಬಯಿಗೆ ಪಾದ ಬೆಳೆಸಿದರು. ಈ ಬಾರಿ ಹಾಲಪ್ಪನಿಗೆ ಜೈಲು ಶಿಕ್ಷೆಯೂ ಆಯಿತು. ಮೊದಲು ಮುಂಬಯಿಯ ಆರ್ಥರ್ ರೋಡಿನ ಕಠಿಣ ಕಾರಾಗೃಹದಲ್ಲಿ, ಅಲ್ಲಿಂದ ಪುಣೆಯ ಯರವಾಡಾ ಜೈಲಿಗೆ ವರ್ಗಾವಣೆ…

ಆರು ತಿಂಗಳ ಕಠಿಣ ಸಜೆ ಅನುಭವಿಸಿ ಬಿಡುಗಡೆಯಾಗಿ ಬಂದ ಮೇಲೂ ಮತ್ತೂ ಒಮ್ಮೆ ದಸ್ತಗಿರಿಯಾಗಿ ಜೈಲುವಾಸ ಅನುಭವಿಸಿ ಈ ಬಾರಿ ಊರಿಗೆ ಬರುವಷ್ಟರಲ್ಲಿ, ಸತ್ಯಾಗ್ರಹಿಗಳೆಂದರೆ ಗೌರವಾದರಗಳಿಂದ ಕಾಣುವಷ್ಟರ ಮಟ್ಟಿಗೆ ಪರಿಸ್ಥಿತಿ ಬದಲಾಗಿತ್ತು. (ಅಲ್ಲಷ್ಟೇ ಅಲ್ಲದೆ, ವಿವಿಧ ಸಂದರ್ಭಗಳಲ್ಲಿ ಬೆಂಗಳೂರು, ಶಿವಮೊಗ್ಗ ಜೈಲುಗಳಲ್ಲಿ ನನ್ನ ತಂದೆ ಒಟ್ಟು ಸುಮಾರು ಎರಡೂವರೆ ವರ್ಷ ಸೆರೆವಾಸ ಅನುಭವಿಸಿದ್ದರು.)

ಇನ್ನೂ ಮುಂದಕ್ಕೆ ದೇಶವು ಸ್ವತಂತ್ರವಾದ ಮೇಲೂ ಮೈಸೂರು ಸಂಸ್ಥಾನದಲ್ಲಿನ್ನೂ ರಾಜಪ್ರಭುತ್ವವೇ ಮುಂದುವರೆದಿತ್ತು. ಇಲ್ಲಿ ಚುನಾಯಿತ ಸರ್ಕಾರಕ್ಕಾಗಿ ಮೈಸೂರು ಚಲೋ ಚಳವಳಿ ನಡೆಯುವಾಗ ನನ್ನ ತಾಯಿ ಗೌರಮ್ಮ ತಾಲೂಕು ಆಫೀಸಿಗೆ ಮುತ್ತಿಗೆ ಹಾಕಿ ಅರೆಸ್ಟ್ ಆಗಿ, ನನ್ನ ದೊಡ್ಡಣ್ಣ – ಎರಡು ವರ್ಷದ ಕೈಕೂಸಿನ ಸಮೇತ ಬೆಂಗಳೂರು ಜೈಲು ಸೇರಿಕೊಂಡಿದ್ದರು. ಅತ್ತ ನಮ್ಮಪ್ಪ ಭೂಗತರಾಗಿ ಹಳ್ಳಿ ಹಳ್ಳಿ ಸುತ್ತುತ್ತಾ ಸತ್ಯಾಗ್ರಹಿಗಳನ್ನು ಹುರಿದುಂಬಿಸುತ್ತಾ ಸಾಗುತ್ತಿದ್ದರು. ಅವರ ಮೇಲೆ ವಾರಂಟ್ ಹೊರಟಿತ್ತು. ಹಿಡಿದು ಕೊಟ್ಟವರಿಗೆ ಬಹುಮಾನವೂ ಇತ್ತು. ಅಂಥ ಸಂದರ್ಭದಲ್ಲೊಮ್ಮೆ ಶಿವಮೊಗ್ಗ ನಗರದಲ್ಲಿ ಅವರು ಚಪ್ಪಲಿ ಕೊಳ್ಳಲೆಂದು ಅಂಗಡಿ ಹೊಕ್ಕಾಗ ಅಲ್ಲೇ ಇನ್‌ಸ್ಪೆಕ್ಟರ್‌ ಸಿದ್ದಪ್ಪ ಎಂಬುವವರು ಪೇಪರ್ ಓದುತ್ತಾ ಕೂತಿರುವುದು ಕಣ್ಣಿಗೆ ಬಿತ್ತು. ಒಳಗೆ ಬಂದಾಗಿದೆ, ಈಗ ಹಿಂದೆ ಹೆಜ್ಜೆಯಿಟ್ಟರೂ ಅನುಮಾನ ಬರಬಹುದೆಂಬ ಕಾರಣಕ್ಕೆ ಒಳಹೊಕ್ಕು ಚಪ್ಪಲಿ ಕೊಂಡು ಹೊರಕ್ಕೆ ಅಡಿ ಇಡುವಷ್ಟರಲ್ಲಿ ಇನ್‌ಸ್ಪೆಕ್ಟರ್‌ ಹಾಲಪ್ಪ ಅವರು ನಮ್ಮ ತಂದೆಯ ರಟ್ಟೆ ಹಿಡಿದು ಕೂರಿಸಿಕೊಂಡರು. ʻಸಿಕ್ಕಿಕೊಂಡಾಯಿತು, ಇನ್ನು ಆಗಿದ್ದಾಗಲಿʼ ಎಂದು ನಮ್ಮಪ್ಪ ಸುಮ್ಮನೆ ಕೂತಾಗ, ಆ ಇನ್‌ಸ್ಪೆಕ್ಟರ್‌, ಎದುರುಗಡೆ ಹೋಟೆಲಿನಿಂದ ಸಿಹಿ, ಖಾರಾ ತಿಂಡಿ ಕಾಫಿ ತರಿಸಿಕೊಟ್ಟು, ʻನಿನ್ನನ್ನು ಹಿಡಿದುಕೊಟ್ಟು ನಾನ್ಯಾಕೆ ಪಾಪ ಕಟ್ಟಿಕೊಳ್ಳಲಿ? ನಿನ್ನಿಂದ ಇನ್ನೂ ದೇಶಸೇವೆಯ ಕಾರ್ಯಗಳು ನಡೆಯಬೇಕಿದೆ, ಹೋಗಿ ಬಾʼ ಎಂದು ಕಳಿಸಿಕೊಟ್ಟ ಪವಾಡವೂ ನಡೆಯಿತು! ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಒಟ್ಟಾರೆ ಜನಮಾನಸದಲ್ಲಾದ ಪರಿವರ್ತನೆ ಅಂಥಾದ್ದು.

ಇದರ ಜೊತೆ ಒಟ್ಟಾರೆಯಾಗಿ ಸತ್ಯಾಗ್ರಹಿಗಳು ಅಹಿಂಸಾ ತತ್ವವನ್ನು ಮನಃಪೂರ್ವಕವಾಗಿ ಒಪ್ಪಿ ಪಾಲಿಸುತ್ತಿದ್ದ ಪರಿಗೆ ಈ ಕಥನದುದ್ದಕ್ಕೂ ನಿದರ್ಶಗಳಿವೆ.

ಮತ್ತು ಶಾಲಾ ವಿದ್ಯಾರ್ಥಿಯಾಗಿ ಮೊದಲ ಬಾರಿ ಗಾಂಧೀಜಿಯವರ ದರ್ಶನ ಪಡೆದ ನನ್ನ ತಂದೆ ಮತ್ತೆ ಜೀವನದಲ್ಲಿ ಅವರನ್ನು ಕಂಡಿದ್ದು ಇನ್ನು ಒಂದೇ ಬಾರಿ. (ಯರವಾಡಾ ಜೈಲಿನಲ್ಲಿ ಸತ್ಯಾಗ್ರಹಿಗಳು ಇದ್ದಾಗಲೇ ಬಾಪೂಜಿ ಕೂಡ ಜೈಲುವಾಸಿಯಾಗಿದ್ದರೂ ಅವರ ದರ್ಶನವಾಗಿರಲಿಲ್ಲ.)

1946ರ ಆಗಸ್ಟ್ ತಿಂಗಳಿನಲ್ಲಿ ಮುಂಬಯಿಯ ಗವಾಲಿಯಾ ಟ್ಯಾಂಕ್ ಮೈದಾನದಲ್ಲಿ ಎಐಸಿಸಿ ಅಧಿವೇಶನ. ನ್ಯಾಮತಿಯಿಂದ ನಮ್ಮ ತಂದೆಯವರೊಂದಿಗೆ ಕಲ್ಲಪ್ಪ, ವಿ.ಎಂ. ಮಾಸ್ಟಿ, ಗುಡಿಕೋಟೆ ಪರಮೇಶ್ವರಪ್ಪನವರೂ ಸೇರಿ ಹದಿಮೂರು ಮಂದಿ ಗೆಳೆಯರು ಅದಕ್ಕಾಗಿ ಹೊರಟರು. ಮೊದಲಿಗೆ ಪುಣೆಯ ನಿಸರ್ಗ ಚಿಕಿತ್ಸಾಲಯದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಗಾಂಧೀಜಿಯವರನ್ನು ಕಂಡು ನಂತರ ಮುಂಬಯಿಗೆ ಹೋಗುವುದು ಅವರ ಉದ್ದೇಶ.

ʻ…ಸಾಯಂಕಾಲ ಸುಮಾರು ಐದು ಗಂಟೆ ಸಮಯ. ಹೊರಗಡೆ ಮೈದಾನದಲ್ಲಿ ಸರ್ದಾರ್ ಪಟೇಲರೂ, ಆಚಾರ್ಯ ಕೃಪಲಾನಿಯವರೂ ವಾಯುವಿಹಾರದಲ್ಲಿದ್ದುದನ್ನು ಕಂಡು ಮಹಾತ್ಮರ ಬಗ್ಗೆ ವಿಚಾರಿಸಿದೆವು. ಸಾಯಂಕಾಲದ ಪ್ರಾರ್ಥನೆಗಾಗಿ ಗಾಂಧೀಜಿ ಈಗ ದಯಮಾಡಿಸುವರೆಂದು ಹೇಳಿದರು. ಅಷ್ಟು ಹೊತ್ತಿಗೆ ಮಹಾತ್ಮರು ತಮ್ಮ ಮೊಮ್ಮಕ್ಕಳಾದ ಮನು ಮತ್ತು ಆಭಾ ಗಾಂಧಿಯವರ ಆಶ್ರಯದಲ್ಲಿ ನಡೆದು ಪ್ರಾರ್ಥನಾ ವೇದಿಕೆಗೆ ಬಂದರು. ಅವರ ಕಾರ್ಯದರ್ಶಿ ಪ್ಯಾರೆಲಾಲ್ ಮತ್ತು ಅವರ ಸಂಗಡಿಗರು ಕೇವಲ ಐದಾರು ಜನ ಮತ್ತು ನಾವು 13 ಜನ ಅವರನ್ನು ಅನುಸರಿಸಿ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದೆವು. ನಮ್ಮ ಮುಂದೆ ಕಣ್ಮುಚ್ಚಿ ನಿಂತಿದ್ದ ಬಾಪೂಜಿ ಒಂದು ಶಿಲಾಪ್ರತಿಮೆಯಂತೆ ಮಿಸುಕಾಡದೆ ಪ್ರಾರ್ಥನೆಯಲ್ಲಿ ತಲ್ಲೀನರಾಗಿದ್ದರು. ಅವರು ವಾಪಸ್ಸು ಬಿಡಾರಕ್ಕೆ ಮರಳುವಾಗ ನಾವು ಅಡ್ಡಬಿದ್ದು ನಮಸ್ಕಾರ ಮಾಡಲು ಮುಂದಾದೆವು. ಆದರೆ ಅವರ ಮೊಮ್ಮಕ್ಕಳು ಅದಕ್ಕೆ ಅವಕಾಶ ಕೊಡಲಿಲ್ಲ. ಹರಿಜನ ನಿಧಿಗಾಗಿ ನಮ್ಮ ಜೇಬಿನಿಂದ ಕೈಗೆ ಬಂದಷ್ಟು ಹಣವನ್ನು ಅವರ ಕೈಲಿಟ್ಟೆವು…ʼ.

ಮಾರನೆ ಮುಂಜಾನೆ ಈ ಗುಂಪು ಅಧಿವೇಶನದಲ್ಲಿ ಪಾಲ್ಗೊಳ್ಳಲೆಂದು ಮುಂಬಯಿ ರೈಲು ಹತ್ತಿತು.

ಅಂತೂ ನಮ್ಮ ತಂದೆಯವರನ್ನು ನೆನೆಸಿಕೊಂಡಾಗಲೆಲ್ಲ ಈಗಲೂ ನನ್ನ ಕಣ್ಣ ಮುಂದೆ ಬರುವುದು – ಅವರು ಜೀವನದುದ್ದಕ್ಕೂ ಪಾಲಿಸಿದ ಖಾದಿಧಾರಣೆ ವ್ರತ, ಸತ್ಯನಿಷ್ಠೆ ಮತ್ತು ಸಂಜೆ ಮನೆಯಲ್ಲಿ ನಮ್ಮೆಲ್ಲರನ್ನೂ ಕೂರಿಸಿಕೊಂಡು ಹೇಳಿಕೊಡುತ್ತಿದ್ದ ʻಈಶ್ವರ ಅಲ್ಲಾ ತೇರೆ ನಾಮ್…ʼ ಪ್ರಾರ್ಥನಾಗೀತೆ!

‍ಲೇಖಕರು Adminm M

August 14, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: