ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವರು ಕಾಡುವ ‘ಪಾಡ್ದನ’

ಜಿ ಎನ್ ಮೋಹನ್ 

ಮೊನ್ನೆ ಪಾವನಾ ಭೂಮಿಯ ಪುಸ್ತಕ ಬಿಡುಗಡೆ ಸಮಾರಂಭ. ಒಂದು ರೀತಿ ಹದಿಹರಯದ ತರುಣರಿಂದ ತುಂಬಿ ತುಳುಕುತ್ತಿದ್ದ ಸಭಾಂಗಣ. ಹಾಗಾಗಿಯೇ ಅಲ್ಲಿ ಜೋರು ನಗೆ, ಕುಶಾಲು ಮಾತು, ಇನ್ನಿಲ್ಲದ ಪಾದರಸದ ಚಟುವಟಿಕೆ. ಈ ಎಲ್ಲವನ್ನೂ ನೋಡಿ ತುಂಬಾ ದಿನವಾಗಿತ್ತು. ನಾಳೆಯ ಮೊಳಕೆಗಳು ಇಲ್ಲಿವೆ ಎಂದು ಎಲ್ಲರಿಗೂ ಅನಿಸಿದ್ದರೆ ಆಶ್ಚರ್ಯವಿಲ್ಲ.

sharada bangeraಕಾರ್ಯಕ್ರಮ ಮುಗಿದು ವೇದಿಕೆ ಇಳಿದು ಬರುತ್ತಿರುವಾಗ ಮಂಜುನಾಥ ದಾಸನಪುರ ಅಡ್ಡಾದ . ಮಂಗಳೂರಿನಲ್ಲಿ ಅವನನ್ನು ನಿಲೆ ಹಾಕಿಕೊಂಡು ‘ಪಬ್ಬಾಸ್’ ನಲ್ಲಿ ಐಸ್ ಕ್ರೀಂ ತಿನ್ನುತ್ತಾ ‘ಬೇಗ ಮದುವೆ ಆಗಿಬಿಡು ಗುರು’ ಅಂದಿದ್ದೆ. ಯಾಕೆ ಅಷ್ಟು ಸೀರಿಯಸ್ ಆಗಿ ತೆಗೆದುಕೊಂಡನೋ ಗೊತ್ತಿಲ್ಲ. ಬಯಲು ಸೀಮೆಯ ಹುಡುಗ ಕರಾವಳಿ ಹುಡುಗಿಯ ಕೈ ಹಿಡಿದು ನಿಂತೇ ಬಿಟ್ಟ. ಹಾಗಾಗಿ ಅಲ್ಲೇ ಇದ್ದ ಮಡದಿ ವಾಣಿಯನ್ನು ಪರಿಚಯಿಸಿದ. ವಾಣಿಯ ಪಕ್ಕ ಅವರ ತಾಯಿಯೂ ಇದ್ದರು. ‘ಸಾರ್ ನಮ್ಮ ಅತ್ತೆ’ ಅಂದ. ಕೈ ಮುಗಿದು ಕುಶಲೋಪರಿ ಮಾತಾಡಿ ಹೊರಬಂದೆ.

ಇನ್ನೇನು ಹೊರಡಬೇಕು ಎನ್ನುವಾಗ ಮಂಜುನಾಥ ಬಂದವನೇ ನನ್ನ ಕೈಗೆ ಒಂದು ಪುಸ್ತಕ ಇತ್ತರು. ನೋಡಿದರೆ ‘ಶಾರದಾ ಜಿ ಬಂಗೇರ ಅವರ ಮೌಖಿಕ ಸಾಹಿತ್ಯ’. ಡಾ ಲಕ್ಷ್ಮಿ ಜಿ ಪ್ರಸಾದ್ ಅವರು ಇದನ್ನು ಸಂಗ್ರಹಿಸಿದ್ದರು. ನನಗೆ ಪರಿಚಿತರಾದ ಡಾ ಲಕ್ಷ್ಮಿ ಒಂದು ರೀತಿ ನಡೆದಾಡುವ ಜಾನಪದ ಮಾಹಿತಿ ಕೋಶವೇ ಅವರು ಬಂಟ್ವಾಳದ ಶಾರದಾರ ತುಳು ಪಾಡ್ದನಗಳನ್ನ ಕನ್ನಡಕ್ಕೆ ತಂದಿದ್ದು ಗೊತ್ತಿತ್ತು. ಆ ಪಾಡ್ದನಗಳಿಗಾಗಿ ನಾನು ಹುಡುಕುತ್ತಲೂ ಇದ್ದೆ. ಹಾಗಾಗಿ ಬೆಟ್ಟದಿಂದ ಬಟ್ಟಲಿಗೆ ಎನ್ನುವಂತೆ ಇದು ನನ್ನ ಅಂಗೈಗೆ ಬಂದು ಕೂತಿತ್ತು .

ಇದು ನಿನ್ನ ಹತ್ರ ಯಾಕೋ ಅಂದೆ. ಸಾರ್ ಈ ಪಾಡ್ದನ ಹಾಡಿರುವವರು ನಮ್ಮತ್ತೆ ಅಂದ. ಅರೆ, ಹಾಗಾದಾರೆ ನಾನು ಈಗ ಮಾತಾಡಿದ್ದು ಅವರೊಂದಿಗೇ.. ಎಂದು ಹೆಮ್ಮೆಯಾಯಿತು. ಅಲ್ಲಿಯವರೆಗೆ ಸಭಾಂಗಣದಲ್ಲಿ ನಾಳೆಯ ಮೊಳಕೆಗಳು ಇವೆ ಎಂದುಕೊಂಡಿದ್ದೆ. ಇಲ್ಲ, ಅಲ್ಲಿ ನಿನ್ನೆಯ ಮೊಳಕೆಗಳೂ ಇದ್ದವು.. ಎಂದು ಗೊತ್ತಾಯಿತು.

lakshmi prasad and sharada bangeraಶಾರದಾ ಜಿ ಬಂಗೇರ ಅವರ ಕೃತಿಯ ಪುಟ ತಿರುಗಿಸುತ್ತಾ ಹೋದೆ. ಆ ಡೆನ್ನಾನ ಡೆನ್ನಾನ  ಡೆನ್ನಡೆನ್ನಾನ…  ಲೋಕ ಮತ್ತೆ ನನ್ನೊಳಗೆ ಅರಳಿತು. ಮಂಗಳೂರಿನಲ್ಲಿದ್ದ ಅಷ್ಟೂ ವರ್ಷಗಳು ನನ್ನ ಮನೆ ಎದುರೇ ಇದ್ದ ಗದ್ದೆಗಳಲ್ಲಿ ಈ ಲೋಕ ಬಿಚ್ಚಿಕೊಳ್ಳುತ್ತಿತ್ತು. ನಾನೂ ಊರೂರು ತಿರುಗಿ ತುಳು ಜಾನಪದಕ್ಕೆ ಕಿವಿಯಾಗುತ್ತಿದ್ದೆ.

ನಮ್ಮ ಮಂಜು ಅಂತಹ ಪಾಡ್ದನ ಲೋಕಕ್ಕೆ ಅಳಿಯನಾಗಿಬಿಟ್ಟ ಅನ್ನುವ ಸಂತಸ ನನ್ನೊಳಗೆ ಹಬ್ಬಿ ನಿಂತಿತು. ಮಂಜು ಕೈ ಮತ್ತೊಮ್ಮೆ ಅಮುಕಿ ಬಂದೆ

ಈಗ ನನ್ನ ಜೊತೆ ಆ ಪಾಡ್ದನದ ಕೃತಿ ಸಂಗಾತಿಯಾಗಿ ಸಂಚರಿಸುತ್ತಿದೆ

 

 

‍ಲೇಖಕರು Admin

31 May, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading