ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವರು ಇನ್ನಿಲ್ಲ ಅನ್ನೋ ಸುದ್ದಿ..

sudhanva-deraje

ಸುಧನ್ವ ದೇರಾಜೆ 

ಶಾಕ್..ಈ ಪದದ ನಿಜವಾದ ಅರ್ಥ ತಿಳಿಯೋದಕ್ಕೆ ಹೀಗೆಲ್ಲಾ ಆಗಬೇಕಾ?

ಅವರು ಇನ್ನಿಲ್ಲ ಅನ್ನೋ ಸುದ್ದಿ ಕೊಟ್ಟ ಅರ್ಥ ಇದು.

‘ಇನ್ನಿಲ್ಲ’ ಅನ್ನೋ ಪದದ ಜತೆಗೆ ಆ ಹೆಸರನ್ನು ಟೈಪಿಸುವುದಕ್ಕೂ ಮನಸ್ಸೊಲ್ಲದು.

ಗಂಗಾಧರ ಬೆಳ್ಳಾರೆ. ಅವರ ಜತೆಗಿನ ಮೊತ್ತಮೊದಲ ನೆನಪಿದು-ಕಿರಿಯ ಪ್ರಾಥಮಿಕ ಶಾಲೆ ದೇರಾಜೆಯಲ್ಲಿ ಓದುತ್ತಿದ್ದ ನಾನು, ಹಿರಿಯ ಪ್ರಾಥಮಿಕ ಶಾಲೆ ಐವರ್ನಾಡಿನಲ್ಲಿ ನಡೆಯುವ ಸ್ಕೂಲ್ಡೇನಲ್ಲಿ, ‘ಗದಾಯುದ್ಧ’ ಪ್ರಸಂಗವನ್ನು ಏಕಪಾತ್ರಾಭಿನಯದಲ್ಲಿ ಅಭಿನಯಿಸುವ ಸಂದರ್ಭ. ಆ ಸ್ಕೂಲ್ ಡೇ ಯ ಕಾರ್ಯಕ್ರಮಗಳಿಗೆ ಸಂಗೀತ ಸಂಯೋಜಕರಾಗಿ ಬರುತ್ತಿದ್ದವರು ಗಂಗಾಧರ ಬೆಳ್ಳಾರೆ. ತಬಲ-ಮೃದಂಗ ನುಡಿಸುತ್ತಾ, ಮಕ್ಕಳ ಕಾರ್ಯಕ್ರಮಕ್ಕೆಲ್ಲ ಸಂಗೀತ ನೀಡುತ್ತಿದ್ದರು.

traditional lampಆಮೇಲೆ ಅವರನ್ನು ನೋಡಿದ್ದು, ಬೆಳ್ಳಾರೆಯ ಕಿರಣ್ ಪ್ರಿಂಟರ್ಸ್ ನಲ್ಲಿ ಉದ್ಯೋಗಿಯಾಗಿದ್ದಾಗ. ನಂತರದ ನೆನಪು ತಾಳಮದ್ದಳೆ, ಜೇಸೀ ಕಾರ್ಯಕ್ರಮಗಳಲ್ಲೆಲ್ಲ ಸಿಗುತ್ತಿದ್ದ ಗಂಗಾಧರ ಬೆಳ್ಳಾರೆ.

ಅಪ್ಪನ ಜತೆ ಅವರೆಷ್ಟು ಬಾರಿ ತಾಳಮದ್ದಳೆಗಳಲ್ಲಿ ಅರ್ಥ ಹೇಳಿದರೋ, ಅದೆಷ್ಟು ಬಾರಿ ಯಕ್ಷಗಾನ ವೇಷ ಮಾಡಿದರೋ. ನಾನು ಭಾಷಣದ ಸ್ಪರ್ಧೆಗಳಿಗೆ ಹೋಗುತ್ತಿದ್ದಾಗ ಎಷ್ಟು ಸಲ ಮಾರ್ಕ್ ಕೊಟ್ಟರೋ. ಅವರ ಗಂಭೀರ ಸುಸ್ವರಕ್ಕಂತೂ ಆಗ ಮಾರುಹೋಗದವರೇ ಇಲ್ಲ.

ದಿನ ಕಳೆದಂತೆ ನಾನು ಬೆಂಗಳೂರು ಸೇರಿದೆ. ಅಪ್ಪ ತೀರಿಕೊಂಡರು. ಬೆಳ್ಳಾರೆ ಪುತ್ತೂರು ಸೇರಿದರು. ಕೌನ್ಸಲರ್ ಆದರು. ಕ್ರಮೇಣ ನಮ್ಮ ಸಂಪರ್ಕ ಕಡಿದುಹೋಯಿತು. ಆಮೇಲೆ ಕೇಳುತ್ತಿದ್ದದ್ದೆಲ್ಲ ಅಷ್ಟೊಂದು ಹಿತವಲ್ಲದ ಸುದ್ದಿಗಳೇ. ಆಕ್ಸಿಡೆಂಟ್ ನಿಂದಾಗಿ ಅವರ ಮಧುರ ಸ್ವರವೇ ಉಡುಗಿದ್ದು, ಅನಾರೋಗ್ಯ ಹೆಚ್ಚಾಗಿದ್ದು, ಯಕ್ಷಗಾನದಿಂದ ದೂರಸರಿದದ್ದು ಇತ್ಯಾದಿ.

ಸ್ಕಾರ್ಫ್-ಕೇಸರಿ ಶಾಲು ಎಂಬ ದರಿದ್ರ ಸುದ್ದಿಗಳಿಗೆ ಈಗ ಬೆಳ್ಳಾರೆ ಎಂಬ ಊರು ಸುದ್ದಿಯಾಗುತ್ತಿದ್ದರೆ, 90ರ ದಶಕದಲ್ಲಿ, ಬೆಳ್ಳಾರೆ ಎಂಬ ಹೆಸರಿಗೆ ಒಂದು ಸಾತ್ವಿಕ-ಸಂಸ್ಕಾರಯುತ-ಸಹೃದಯ ಘನತೆಯನ್ನು ತಂದುಕೊಟ್ಟ ಮನುಷ್ಯ ಈ ಗಂಗಾಧರ. ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಈ ಬಳೆಗಾರ ಗಂಗಣ್ಣನ ಜತೆ, ನಮ್ಮ ಮನೆಯ ಟೇಬಲ್ ನಲ್ಲಿ ಒಟ್ಟಿಗೆ ಕುಳಿತು ಊಟ ಮಾಡಿದ್ದು ಈಗ ಬರೀ ನೆನಪು. ಬಳೆಗಾರ ಗಂಗಣ್ಣ ನಮ್ಮೆಲ್ಲರ ಸೆಳೆವ ಮಾಯಾವಿಯಾಗಿ ಬೆಳೆದದ್ದು, ದೀನ-ಬಡ ಕುಟುಂಬದಲ್ಲಿ ಹುಟ್ಟುವ ಮಕ್ಕಳಿಗೆ ಒಂದು ಆದರ್ಶ,

ಅವರನ್ನ ನೋಡಿದಾಗೆಲ್ಲಾ, ಐವತ್ತರಲ್ಲೇ ತೀರಿಕೊಂಡ ಅಪ್ಪನನ್ನು ನನಗೆ ನೆನಪಿಸುತ್ತಿದ್ದ ಈ ಗಂಗಾಧರ ಬೆಳ್ಳಾರೆ, ಮತ್ತೆ ಐವತ್ತರ ಏರಿನಲ್ಲೇ ಮಾಯವಾದರು. ‘ಬಳೆಗಾರ ಗಂಗಣ್ಣ ಬಾಗಿಲಿಗೆ ಬಂದಿಹೆನು, ಒಳಗೆ ಬರಲಪ್ಪಣೆಯೆ ದೊರೆಯೆ..’ ಅಂತ ಈ ಗಂಗಾಧರ, ಆ ಲೋಕದ ಬಾಗಿಲಲ್ಲಿ ನಿಂತು ತಮಾಷೆ ಮಾಡುತ್ತಿರಬಹುದೆ?!

ಕೊಟ್ಟು ಹೋದ, ಬಿಟ್ಟು ಹೋದ ನಿಮಗೆ ಈ ನಾಲ್ಕು ಸಾಲುಗಳ ಮೂಲಕ ಋಣ ಸಂದಾಯದ ಯತ್ನ. ಒಪ್ಪಿಸಿಕೊಳ್ಳಿ. ಇನ್ನೊಂದು ರೂಪದಲ್ಲಿ ಬೇಗ ಬನ್ನಿ.

‍ಲೇಖಕರು Admin

12 September, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading