ಅವರು.. ಆ ಗೆಳೆಯರು..

ನಾಗಶ್ರೀ ಶ್ರೀರಕ್ಷಾ 

ಈ ಬಾರಿ ಶ್ರವಣ ಬೆಳಗೊಳವನ್ನು ನೋಡಲೇ ಬೇಕೆಂದು ಹೋದವಳಲ್ಲ.

ಹೋಗಿದ್ದೇನೆಂದು ಬೆಟ್ಟ ಹತ್ತಿಯೂ ಇರಲಿಲ್ಲ. ಏಳೆಂಟು ವರ್ಷಗಳ ಹಿಂದೆ ಹೋದಾಗ ನಾವೊಂದಿಷ್ಟು ಮಕ್ಕಳು ಪುಟಪುಟನೆ ಅಲ್ಲಿದ್ದ ಅಷ್ಟೂ ಮೆಟ್ಟಿಲೇರಿ ಕೊನೆ ಕೊನೆಗೆ ಏದುಸಿರು ಬಿಟ್ಟುಕೊಂಡು ಹತ್ತಿದ್ದೆವು. ಅಷ್ಟುದ್ದದ ಬಾಹುಬಲಿಯನ್ನು ಒಂದು ಸಲ ಕತ್ತೆತ್ತಿ ನೋಡಿ, ಅಲ್ಲಿರುವ ಕೋತಿಗಳನ್ನೂ, ಯಾತ್ರಿಕರನ್ನೂ, ನೋಡುತ್ತಾ, ತಣ್ಣಗಿನ ಗಾಳಿಗೆ ಸ್ವಲ್ಪ ನೀರು ಕುಡಿದು ಮತ್ತೆ ಇಳಿಯಲು ಶುರು ಮಾಡಿದ್ದೆವು. ದೊಡ್ಡವರು ಯಾರೂ ಬೆಟ್ಟ ಹತ್ತಲು ಬಂದಿರದಿದ್ದುದರಿಂದ ಓಡುತ್ತಾ, ನಿಲ್ಲುತ್ತಾ, ಕೂರುತ್ತಾ ಏನೇನೋ ತರಲೆ ಮಾಡುತ್ತಾ ದಣಿವಾಗದ ಹಾಗೆ ಹತ್ತಿ ಇಳಿದಿದ್ದೆವು. ಈ ಬಾರಿ ಹೋದಾಗ ಮದ್ಯಾಹ್ನ ೨ ಘಂಟೆ. ಅಲ್ಲಿನ ಬಿಸಿಲನ್ನೂ , ಹೊಳೆಯುವ ಬಂಡೆಯನ್ನೂ, ಅಲ್ಲಿ ಬಂದಿದ್ದ ಯಾತ್ರಿಕರು, ವಾಹನಗಳನ್ನೂ ನೋಡಿ ಯಾವುದೂ ಬೇಡವೆನಿಸಿ ಇಷ್ಟಗಲ ನೆರಳು ಸಿಕ್ಕಿದರೆ ಸಾಕೆನ್ನುತ್ತಾ ಚಿಕಬೆಟ್ಟದ ಬೆಟ್ಟದ ಬಳಿ ಹೋದೆ.

shri-gomateshwara-temple_1420190701

ಹಿಂದಿನ ಬಾರಿ ಬಂದಿದ್ದಾಗ ಈ ಬೆಟ್ಟದ ಮೆಟ್ಟಿಲ ಹತ್ತಿರ ಬಂಡೆ ತುಸು ಸವೆದು ಹೋಗಿರುವಲ್ಲಿ ಜಾರುಬಂಡೆಯಾಡಿದ್ದು ನೆನಪಾಗುತ್ತಿತ್ತು. ನೋಡಿದರೆ ಬಂದ ಮಕ್ಕಳೆಲ್ಲಾ ಬೆಟ್ಟ ಹತ್ತದೆ, ಅಮ್ಮಂದಿರ ಬೈಗುಳವನ್ನೂ ಲೆಕ್ಕಿಸದೆ ಅದೇ ಜಾಗದಲ್ಲಿ ಜಾರುಬಂಡೆಯಾಟವಾಡುತ್ತಿದ್ದರು. ನವವಿವಾಹಿತರು ಕೈಕೈ ಹಿಡಿದು ಬೆಟ್ಟ ಹತ್ತಿದರೆ, ಮಕ್ಕಳ ಅಮ್ಮಂದಿರು ಮಕ್ಕಳ ಹಿಂದೆ ಓಡಿಕೊಂಡು ವೇಗವಾಗಿ ಚಲಿಸುತ್ತಿದ್ದರು. ಒಂದಷ್ಟು ಯಾತ್ರಿಕರು ಕುರ್ ಕುರೆ, ಲೇಸ್, ಬಿಂಗೋಗಳನ್ನು ಬಿಸ್ಕತ್ತು ಬಾಳೆಹಣ್ಣನ್ನು ತಿನ್ನುತ್ತಾ  ಹರಟೆ ಹೊಡೆದುಕೊಂಡು ನಡೆಯುತ್ತಿದ್ದರು. ಮೆಟ್ಟಿಲ ಕೆಳಗೆ ನೆರಳಿರುವ ಒಂದು ಕಟ್ಟೆಯಲ್ಲಿ ಊರಿನ ಹಳೆಮಿತ್ರರಿಬ್ಬರು ಹೋಗಿ ಬರುವವರಿಗೆ ಅಲ್ಲಿನ ಕಥೆ ಹೇಳುತ್ತಾ, ಒಲ್ಲೆನೆಂದವರನ್ನೂ ಮೆಟ್ಟಿಲು ಹತ್ತಿಸಿಯೇ ಬಿಡುತ್ತಿದ್ದರು.

ಅವರಿಬ್ಬರು ಬಾಲ್ಯಕಾಲದಿಂದಲೂ ಮಿತ್ರರು. ಅಲ್ಲಿನ ಇತಿಹಾಸವನ್ನು ತಮ್ಮ ಮನೆಯಲ್ಲಿಯೇ ನಡೆದ ಕತೆಯಂತೆ ವರ್ಣಿಸುತ್ತಿದ್ದು, ತಾವೂ ಅದರಲ್ಲೇ ಬರುವ ಒಂದು ಪಾತ್ರದಂತಿದ್ದರು. ಒಬ್ಬರು ವಿಷ್ಣು ನಾಯ್ಕರು. ಇನ್ನೊಬ್ಬರು ರಾಮಯ್ಯ ಶೆಟ್ಟಿ. ಇಬ್ಬರೂ  ಅಲ್ಲೇ ಒಂದು ಎಣ್ಣೆಯ ಮಿಲ್ಲಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಜೊತೆಗೆ  ಯಾತ್ರಿಕರನ್ನು ಬೆಟ್ಟಕ್ಕೆ ಡೋಲಿಯಲ್ಲಿ ಹೊತ್ತುಕೊಂಡು ಹೋಗುವ ಕೆಲಸವನ್ನೂ ಮಾಡುತ್ತಿದ್ದರು. ಈಗ ಅದನ್ನೆಲ್ಲಾ ಬಿಟ್ಟು ಗತ ಕಾಲದ ನೆನಪು ಮಾಡಿಕೊಂಡು ನಾಲ್ಕು ಮಾತಾಡುತ್ತಾ ಕಾಲ ಕಳೆಯುತ್ತಿದ್ದರು. ರಾಮಯ್ಯ ಶೆಟ್ಟಿಯವರಂತೂ ಬೆಂಗಳೂರಿನ ಮಗಳ ಮನೆಗೆ ಹೋದವರು, ಈ ಬೆಟ್ಟವನ್ನೂ, ಸ್ವಾಮಿಯನ್ನೂ, ಹಳೆಯ ಗೆಳೆಯರನ್ನೂ ಬಿಟ್ಟಿರಲಾಗದೆ ಮತ್ತೆ ಬೆಳಗೊಳಕ್ಕೆ ಮರಳಿ ಬಂದಿರುವರಂತೆ.

ಅಲ್ಲೇ ಸುಮ್ಮನೆ ಓಡಾಡಿಕೊಂಡು ನೋಡುತ್ತಿದ್ದೆ.

‘ಹೋಗವ್ವಾ, ಇಲ್ಲೆ ಹತ್ರ ಐತೆ ನಡ್ಕೊಂಡು ಹೋತಾ ಹೋತಾ ಸಿಕ್ ಬಿಡ್ತೈತೆ, ನಮ್ ತರ ವಯಸ್ಸಾದವ್ರಿಗೆ ಒಸಿ ಲೇಟಾಯ್ತದೆ, ಅಂದ್ರೂನು ಈಗ್ ಬೇಕಾದ್ರೂ ಮಕ್ಳುನ್ ಭುಜದ್ ಮೇಲೆ ಹೊತ್ಕೊಂಡು ಹೋಯ್ತೀನಿ.  ಹೋಗ್ ಬಾರವ್ವಾ” ಎಂದರು.

ನನಗೇನು ಹೋಗುವ ಆತುರವಿರಲಿಲ್ಲ. ಆದರೆ ಅವರಿಗೇಕೋ ನಾನು ಹೋಗದೇ ಉಳಿದದ್ದು ಇಷ್ಟ ಆಗಿರಲಿಲ್ಲವೆನಿಸುತ್ತದೆ.

“ನಾವ್ ಆ ಕಾಲ್ದಾಗೆ ಡೋಲಿ ಹೊತ್ಕೊಂಡು ದೊಡ್ ಬೆಟ್ಟಾನಾ ಇಪ್ಪತ್ ನಿಮ್ಸ್ ದಲ್ಲಿ ಹತ್ ತ್ತಿದ್ದೋ, ಆ ಬಿಸ್ಲಾಗೆ ಬಂಡೇನಲ್ ನಡ್ದು ನಡ್ದು ಈಗ ನೋಡ್ರವ್ವಾ, ನಮ್ ಕಾಲ್ ಸಿಪ್ಪೆ ಹೆಂಗ್ ಎದ್ದ್ ಬಂದಾವೇ” ಎಂದು ವಿಷ್ಣು ನಾಯ್ಕರು ಹೇಳುತ್ತಿದ್ದರು.

photo courtesy: Mahesh Venkitachalam

photo courtesy: Mahesh Venkitachalam

ಈ ಗೆಳೆಯರು ಡೋಲಿ ಹೊತ್ತುಹೋಗುವುದನ್ನು ಕಲ್ಪಿಸಿಕೊಳ್ಳುತ್ತಾ ಚಿಕ್ಕಬೆಟ್ಟವನ್ನು ನೋಡುತ್ತಿದ್ದೆ. ಈ ಚಂದ್ರಗಿರಿ ಅಥವಾ ಚಿಕ್ಕಬೆಟ್ಟವನ್ನು ಹಿಂದೆ ಕಳ್ವಪ್ಪು ಎಂದು ಕರೆಯುತ್ತಿದ್ದರು. ಕ್ರಿ.ಶ. ೭ನೆಯ ಶತಮಾನದ ಆರಂಭದಲ್ಲಿ ಇದು ನಿರ್ಜನಪ್ರದೇಶವಾಗಿದ್ದು, ಶ್ರಮಣರಿಗೆ, ಕಂತಿಯರಿಗೆ ದೇಹದಂಡನೆ ಮಾಡುವವರಿಗೆ ಈ ಬೆಟ್ಟ ಪ್ರಶಸ್ತ ಸ್ಥಾನವಾಗಿತ್ತು. ಶ್ರವಣಬೆಳ್ಗೊಳದ ಮೂಲಪುರುಷ ಎಂದೇ ಕರೆಯುವ ಭದ್ರಬಾಹುಮುನಿಗಳು ಕಳ್ವಪ್ಪುವಿನಲ್ಲಿ, ಆಹಾರದಲ್ಲೂ ಶರೀರದಲ್ಲೂ ಆಸಕ್ತಿ ತೊರೆದು, ‘ಅವಮೋದರ್ಯಚರಿಗೆ’ ಎಂಬ ಮೂವತ್ತೆರಡು ತುತ್ತುಗಳಲ್ಲಿ ದಿನಕ್ಕೆ ಒಂದೊಂದೇ ತುತ್ತು ಕಡಿಮೆ ಮಾಡುವ ವೃತವನ್ನು ಕೈಗೊಂಡು ಸನ್ಯಾಸವನ್ನು ಆಚರಿಸಿದರು. ಇದರಿಂದಾಗಿ ಅವರು ಜ್ಞಾನಿಗಳಾಗಿ ಮಡಿದು, ಬ್ರಹ್ಮಕಲ್ಪದಲ್ಲಿ ಅಮಿತಕಾಂತಿಯೆಂಬ ದೇವನಾಗಿ ಹುಟ್ಟುವರೆಂದೂ ಚಂದ್ರಗುಪ್ತಮುನಿಯು ಅಲ್ಲಿ ತಪಸ್ಸನ್ನಾಚರಿಸಿ ಮಡಿದು ಶ್ರೀಧರನೆಂಬ ದೇವನಾಗಿ ಹುಟ್ಟುವನೆಂದೂ ಐತಿಹ್ಯವಿದೆ. ಅಲ್ಲಿಗೆ ಹೋಗುವಾಗ ಸಿಗುವ ಶಾಸನಗಳು, ಅಲ್ಲಿರುವ ಬಸದಿ, ಮಾನಸ್ತಂಭ, ಮಂಟಪ, ಭದ್ರಬಾಹುಗುಹೆ ಎಲ್ಲವನ್ನೂ ಮೊದಲೊಂದು ಸಲ ನೋಡಿದ್ದೆ. ಅದನ್ನೆಲ್ಲಾ ಈಗ ಸ್ವಾಮಿಗಳು ಅಭಿವೃದ್ಧಿಪಡಿಸಿರುವರೆಂದೂ ನೋಡಿಬರಬೇಕೆಂದೂ ಆ ಗೆಳೆಯರಿಬ್ಬರು ನನಗೆ ಓಲೈಸುತ್ತಿದ್ದರು.

ಇನ್ನು ಚಾವುಂಡರಾಯ ಕೆತ್ತಿಸಿದ ಹೇಮಗಿರಿ ದೊಡ್ಡ ಬೆಟ್ಟ ದ ಗೊಮ್ಮಟನ ಕತೆ ನಮಗೆಲ್ಲಾ ತಿಳಿದಿದೆ.

೧೮ನೆಯ ಶತಮಾನದಲ್ಲಿ ಅನಂತಕವಿ ಎಂಬವನು ‘ಗೊಮ್ಮಟೇಶ್ವರ ಚರಿತೆ’ ಎಂಬ ಕಾವ್ಯದಲ್ಲಿ ಆ ಕಾಲದಲ್ಲಿ ಬೆಳ್ಗೊಳಕೆ ಹೋಗುವ ಯಾತ್ರಿಕರ  ಸಡಗರವನ್ನು ವಿವರಿಸಿರುವನು. ನಡೆದುಕೊಂಡೋ, ಎತ್ತಿನಗಾಡಿಯಲ್ಲೋ, ಕುದುರೆಗಳ ಮೇಲೋ ಪಲ್ಲಕಿಯ ಮೇಲೋ  ಬರುತ್ತಿದ್ದುದನ್ನು, ಆಗ, ಅವರು ಮಾಡಿಕೊಳ್ಳುವ ಸಿದ್ಧತೆಯನ್ನು, ಅವರ ಆಸೆ ಆಕಾಂಕ್ಷೆಗಳನ್ನು ಸುಂದರವಾಗಿ ವರ್ಣಿಸಿರುವನು.

ಬೆಳ್ಗೊಳಕ್ಕೆ ನಡೆದು ಹೋಗುವಾಗ ಹೆಂಗಸರು ಆಭರಣಗಳನ್ನು ಹೇರಿಕೊಂಡು ಹೋಗುತ್ತಿದ್ದರಂತೆ. ದಾರಿಯಲ್ಲಿ ಕಳ್ಳಕಾಕರ ಇರಬಹುದೆಂಬ ಮುಂದಾಲೋಚನೆಯಿಂದಲೋ, ರಕ್ಷಿಸುವ ಜವಬ್ದಾರಿಯಿಂದಲೋ ಹಿರಿಯರಾದವರು,

“ಒಡವೆಯ ಇಡು ತಂಗಿ ದಾರಿಯೋಳೇತಕೆ| ಬಿಡು ಮುತ್ತಿನೊಚ್ಚರ ಸಾಕು, ಕಡಗ ಕರ್ಣೋತ್ಪಲ ಮೂಗುತಿ ಬಂದಿಯ|ಕಡೆಗಿಡಬೇಡೇಳು ಮಗಳೆ” ಎಂದು ಹೇಳುತ್ತಾರೆ. ಇನ್ನೂ ಕೆಲವು ಹೆಂಗಸರು ಹೇರಳವಾಗಿ ಆಭರಣಗಳನ್ನು ತೊಟ್ಟು ಭಾರವಾಗಿ ನಡೆಯಲಾಗದೆ ಪಲ್ಲಕಿಯಲಿ ಬರುತ್ತಿದ್ದರಂತೆ. ಇನ್ನು ಒಡವೆ ವಸ್ತ್ರ ಇಲ್ಲದವರು, ದುಃಖದಿಂದ ಅಲಂಕರಿಸಿಕೊಂಡ ಹೆಂಗಸರ ನಡುವೆ ತಮ್ಮ ದೌರ್ಭಾಗ್ಯವನ್ನು ನೆನೆದು ಗಂಡಂದಿರನ್ನು ಹೀಯಾಳಿಸುತ್ತಿದ್ದರಂತೆ.

ಇನ್ನೊಂದು ಕಡೆ, ಒಬ್ಬಳು ರೂಪವತಿಯು ಸಿಂಗರಿಸಿಕೊಂಡು ಬಿಂಕ ವಯ್ಯಾರದಿಂದ ನಿಧಾನವಾಗಿ ನಡೆಯುತ್ತಿದ್ದಾಗ ಅವಳ ಪ್ರಿಯಕರನು,  ನಡೆಹೆಣ್ಣೆ ನಮ್ಮವರೆಲ್ಲ ಮುಂದಾದರು|ಮುಡಿ ಮೊಲೆ ಪೊರವಾರ ಭಾರ ನಡೆಯಲೀಸವು ನಿನ್ನ ಒಡವೆಯ ಹೊರಲಾರೆ| ಸಡಲಿಸುತಡಿಯಿಡು ಸಾಕು|| ಎಂದು ಕೀಟಲೆ ಮಾಡುತ್ತಾನೆ. ನಮ್ಮವರೆಲ್ಲರೂ ಮುಂದೆ ಬೇಗನೆ ಸಾಗುತ್ತಿರುವರು, ನಿನ್ನ ಯೌವ್ವನದ ಭಾರವೇ ಸಾಕು, ಹೊರಲಾರದಷ್ಟು ಭಾರವಾಗಿ ಆಭರಣವನ್ನು ತೊಟ್ಟು ಬೇಗನೆ ಮುಂದೆ ಸಾಗಲು ಕಷ್ಟವಾಗಿದೆ. ನಿಧಾನಕ್ಕೆ ಹೆಜ್ಜೆ ಹಾಕುವಂತೆ ಹೇಳುತ್ತಾನೆ.

ನಡೆದು ಹೋಗುವಾಗ ದಣಿವಾರಿಸಿಕೊಳ್ಳಲು ಯಾತ್ರಿಕರು, ಅಲ್ಲಲ್ಲಿ ತಂಗುತ್ತಿದ್ದರು. ಒಬ್ಬಳು ಮಗುವನ್ನು ಸಂತೈಸಿದರೆ, ಇನ್ನೊಬ್ಬಳು ರಾತ್ರಿಯ ಅಡುಗೆಗೆ ಅಣಿ ಮಾಡುವುದು, ವಯಸ್ಸಾದವರಿಗೆ ಆಯಾಸ ಪರಿಹರಿಸಿಕೊಳ್ಳುವಂತೆ ಉಪಚರಿಸುವುದು, ಒಬ್ಬ ನೀರು ತಂದರೆ, ಇನ್ನೊಬ್ಬ ಎತ್ತಿಗೆ ಮೇವು ಹಾಕುವನು. ಹೀಗೆ ಅವರು ಪರಸ್ಪರ ಒದಗಿಸುವ ಸಹಾಯಗಳನ್ನು, ಇಂತಹ ಹಲವು ಸಹಜ ಸಂದರ್ಭಗಳನ್ನು ಸೊಗಸಾಗಿ ಹೇಳಿದ್ದಾನೆ.

shravanabelagola2

ಈಗ ಇಲ್ಲಿ ಗೆಳೆಯರಿಬ್ಬರ ಡೋಲಿ ಹೊತ್ತ ಕತೆ ಕೇಳಿದರೆ ಮೊದಲಿನ ಆ ಸಂಭ್ರಮದ ಅರ್ಧಪಟ್ಟೂ ಈಗ ಇರಲು ಸಾಧ್ಯವಿಲ್ಲವೆನಿಸುತ್ತಿತ್ತು. ಅನಂತಕವಿಗೆ ಆಗಿನ ಯಾತ್ರಿಕರು ಹಾಗೆ ಕಂಡರೆ, ಈ ಹಳೆಯ ಗೆಳೆಯರಿಬ್ಬರಿಗೆ, ಈಗಿನ ಯಾತ್ರಿಕರು ಇನ್ನೊಂದು ರೀತಿಯಾಗಿ ಕಾಣುತ್ತಿದ್ದರು.

ಬರುವವರಲ್ಲಿ ಸುಮಾರು ಜನಾ ನಡೆದುಕೊಂಡೇ ಬೆಟ್ಟ ಹತ್ತಿದರೂ ಡೋಲಿ ಬೇಕೆನ್ನುವವರೇನು ಕಮ್ಮಿ ಇರಲಿಲ್ಲವಂತೆ. ಮಹಾಮಸ್ತಕಾಭಿಶೇಕದ ಸಮಯದಲ್ಲಂತೂ ಡೋಲಿ ಹೊತ್ತು ಹೊತ್ತು ಸಾಗಿಸಿ ಸಾಗಿಸಿ ಸುಸ್ತಾಗುತ್ತಿದ್ದರಂತೆ.

“ಅಯ್ಯೋ ಅವ್ವಾ, ಅಷ್ಟು ಕಷ್ಟ ಪಟ್ ಹೊತ್ಕೊಂಡು ಹೋದ್ರುವಾ ನೂರ್ ರೂಪಾಯಿ ಕೊಡೋಕೆ ಹಿಂದು ಮುಂದು ನೋಡ್ತಿದ್ದೋ,”

ಆದರೆ ವಿದೇಶೀಯರು ಬಂದರೆ ಹಾಗಲ್ಲವಂತೆ. ಹೂವಿನ ಹಾಗೆ ಹೊತ್ತುಕೊಂಡು ಹೋಗಬಹುದಂತೆ.

“ಅವ್ರುದೇನು ಕರ್ಕೊಂಡು ಹೋಗ್ ಬುಡೋದ್ ಅಷ್ಟೇಯಾ, ಕೆಳಿಕ್ ಕರ್ಕೊಂಡ್ ಬರೋದೇನ್ ಬ್ಯಾಡಾ, ಹೊತ್ತಾರೆ ಅವೇ ಹೋಯ್ತಾವೇ, ಇರೋಬರೋ ಮಂಗಗಳ್ ಫೋಟೋ, ಯಾವಾನೋ ತಿರ್ಪೋಕಿ ನನ್ ಮಗಾ ಇದ್ರೆ ಅವುನ್ದೂ ಫೋಟೋ, ಸಣ್ಣ ಎಲೆನೂ ಬಿಡ್ದೆ ಎಲ್ಲಾ ಪೋಟೋ  ತೆಕ್ಕೊಂಡು ಸಂಜಿಗೆ ಕೆಳಕ್ ಬತ್ತಾವೆ” ಎಂದರು.

ಅನಂತಕವಿ ಕಂಡ ಹಾಗೆ ಯಾರಾದರೂ ತೊಲೆಭಾರ ಬಂಗಾರ ಹೇರಿಕೊಂಡು ಮುಂದಡಿ ಇಡುವರೋ ಎಂದು ನೋಡಿದರೆ, ಅವರವರಿಗೆ ಅವರವರ ಮೈಭಾರವೇ ಜಾಸ್ತಿ ಎಂಬಂತೆ ಎಲ್ಲರೂ ನಡೆಯುತ್ತಿದ್ದರು.

ಅಲ್ಲೊಬ್ಬನು ಜೋರಾಗಿ, ಸಣ್ಣವನಿದ್ದಾಗ ತಾನು ಚೆನ್ನರಾಯಪಟ್ಟಣದಿಂದ ಎತ್ತಿನಗಾಡಿಯಲ್ಲಿ ಇಲ್ಲಿಗೆ ಬಂದು, ಕಬ್ಬು ತಿಂದುಕೊಂಡು ಸರಸರನೆ ಬೆಟ್ಟ ಹತ್ತಿಳಿದು, ಜಾರುಬಂಡೆಯಾಟವಾಡಿ, ಅಲ್ಲೇ ಹತ್ತಿರದ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದದನ್ನು ತನ್ನ ಟೆಕ್ಕಿ ಗೆಳೆಯನಿಗೆ ವಿವರಿಸುತ್ತಿದ್ದ.  ಬಾಹುಬಲಿಯ ಮಾರ್ತಿ ಯಾರೇನೇ ಮಾಡಿದರೂ, ಹೇಗೆ ಇದ್ದರೂ ನನಗೇನು ಎಂಬಂತೆ ಮುಗುಳ್ನಗುತಿತ್ತು.

‍ಲೇಖಕರು Admin

May 18, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: