ಅವರದೀಗ ‘ಕಾಲುಬಾಯಿ’ ಯೋಗ!

‘ರೋಮ್ ರಾಜ್ಯ’ದ ಎದುರು ‘ರಾಮರಾಜ್ಯ’ ಎಂದಾಗ, ಸಿಗುವುದಿದ್ದರೆ ಏಕೆ ಬೇಡ ಬರಲಿ ‘ಅಚ್ಚೇದಿನ್’ ಎಂದಿದ್ದರೇ ಹೊರತು, ರಾಮರಾಜ್ಯವೇ ಬೇಕೆಂದು ಹಠ ಹಿಡಿದವರು ಯಾರೂ ಇರಲಿಲ್ಲ. ಭ್ರಷ್ಟಾಚಾರ ಅತಿಯಾಗಿದೆ, ಬಡವ-ಸಿರಿವಂತರ ನಡುವೆ ಅಂತರ ಹೆಚ್ಚಿದೆ, ನೈತಿಕತೆ ಇಲ್ಲದಾಗಿದೆ, ದುಡ್ಡೇ ದೊಡ್ಡಪ್ಪ ಎಂಬೆಲ್ಲ ಆತಂಕಗಳು ದೇಶದ ಉದ್ದಗಲಕ್ಕೂ ಹಾಸಿ ಹೊದ್ದುಕೊಂಡಿದ್ದವು.

ಆದರೆ 2014ರ ಚುನಾವಣೆಯ ವೇಳೆ ಚಾಣಕ್ಯನಿಂದ ಆರಂಭಿಸಿ, ದೀನದಯಾಳು ಉಪಾಧ್ಯಾಯರ ತನಕ ಎಲ್ಲರೂ ಸದ್ದು ಮಾಡಿದರು. ತೆರಿಗೆ ಕಟ್ಟಬೇಕಾಗಿಯೇ ಇಲ್ಲದ, ಬದಲಾಗಿ ನಾಗರಿಕರ ಖಾತೆಯೊಂದರ 15 ಲಕ್ಷವನ್ನು ಸರಕಾರವೇ ತಲುಪಿಸುವ, ‘ಏಕ್ ಭಾರತ್ – ಶ್ರೇಷ್ಠ ಭಾರತ್’ ಕೊಡುವ ವಾಗ್ದಾನ ಬಂತು. ಇದು ಜನರ ಬೇಡಿಕೆ ಆಗಿರಲೇ ಇಲ್ಲ. ‘ಸಬ್ಕಾ ಸಾತ್ ಸಬ್ಕಾ ವಿಕಾಸ್’ ಅಂದಾಗಲೂ ಅದು ನಮಗೆ ಬೋನಸ್ಸೇ ಎಂದುಕೊಂಡವರು ಈ ದೇಶದ ಜನ.

ಹೀಗೆ ಯಾರೂ ಕೇಳದಿದ್ದರೂ, ತಾನೇ ತಾನಾಗಿ ದೊಡ್ಡ ಮುಂಡಾಸು ಕಟ್ಟಿಕೊಂಡು ಬಂದ ಹಾಲೀ ಕೇಂದ್ರ ಸರಕಾರ ಮೂರೂಮುಕ್ಕಾಲು ವರ್ಷ ಕಳೆಯುವಾಗಲೇ ತನ್ನದೇ ಮುಂಡಾಸಿನ ಭಾರಕ್ಕೆ ತೊನೆದಾಡತೊಡಗಿರುವುದು ಸ್ಪಷ್ಟವಾಗಿ ಗೋಚರಕ್ಕೆ ಬರತೊಡಗಿದೆ. ಕಾಳಧನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಎಂದು ಗೋಲು ಹೊಡೆಯಲು ಹೊರಟ  ಟೀಮ್ ಮೋದಿ, ಗೋಲಿನತ್ತ ತುಳಿದ ಬಾಲು ಗುರಿ ತಲುಪುತ್ತಿಲ್ಲ ಎಂದು ಗೊತ್ತಾದ  ತಕ್ಷಣ ಗೋಲು ಪೋಸ್ಟನ್ನೇ ಸ್ಥಳಾಂತರಿಸಿದ್ದೂ ಆಗಿದೆ.

ಈಗಲಾದರೂ ಬಾಲು ಗೋಲನ್ನು ತಲುಪಿದೆಯೇ? ಡಿಜಿಟಲ್ ಇಂಡಿಯಾ ಆದರೂ ಸಾಧಿತವಾಗಿದೆಯೇ?

ಅಂಕಿಸಂಖ್ಯೆಗಳು ಹಾಗಾಗಿಲ್ಲ ಎಂದು ಸ್ಪಷ್ಟವಾಗಿ ತೋರಿಸುತ್ತಿವೆ. ಅಂದರೆ, ಅವರದೀಗ ಕಾಲುಬಾಯಿ (foot in mouth) ಯೋಗದ ಸ್ಥಿತಿ!

ಭಾರತವೀಗ ಎಷ್ಟು ಡಿಜಿಟಲ್?

ಮೊನ್ನೆ ಬಜೆಟ್ ಮಂಡನೆಯ ವೇಳೆ ಹಣಕಾಸು ಸಚಿವ ಜೇಟ್ಲಿಯವರು ಡಿಜಿಟಲ್ ವ್ಯವಹಾರಕ್ಕೆ 2500 ಕೋಟಿ ರೂಪಾಯಿಗಳ ಗುರಿಯನ್ನು ಇರಿಸಿದ್ದಾರೆ. ನವೆಂಬರಿನಲ್ಲಿ ನೋಟು ರದ್ಧತಿ ಆದ ಬಳಿಕ ದೇಶದ  ಆರ್ಥಿಕತೆ ಇಂದು ಹಿಂದಿಗಿಂತ 12% ಕಡಿಮೆ ನಗದು ಮತ್ತು ಹಿಂದಿಗಿಂತ 8% ಹೆ ಚ್ಚು ಬ್ಯಾಂಕ್ ಠೇವಣಿಗಳೊಂದಿಗೆ ಏದುಸಿರು ಬಿಡುತ್ತಿದೆ. ಈ ಹಂತದಲ್ಲಿ ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಡಿಜಿಟಲ್ ಪಾವತಿ ಪರಿಕರಗಳು ಎಷ್ಟಿವೆ ಎಂಬುದರತ್ತ ಒಮ್ಮೆ ಕಣ್ಣು ಹಾಯಿಸೋಣ.

2017 ಜುಲೈ ವೇಳೆಗೆ ದೇಶದ 130 ಕೋಟಿ  ಜನತೆಗೆ ಲಭ್ಯವಿರುವ ಕ್ಯಾಶ್ ಲೆಸ್  ವ್ಯವಹಾರದ ಪರಿಕರಗಳು ಹೀಗಿವೆ: (ಆವರಣದೊಳಗಿರುವುದು 2016 ಆಗಸ್ಟ್ ನ  ಅಂಕಿ ಅಂಶ)

* ದೇಶದಲ್ಲಿರುವ ಒಟ್ಟು ATMಗಳು: 2,08,206 (2,02,801)

* ದೇಶದಲ್ಲಿರುವ ಒಟ್ಟು ಸ್ವೈಪ್ ಯಂ ತ್ರಗಳು POS: 28,40,113 (14,61,972)

* ದೇಶದೊಳಗೆ ಇರುವ ಒಟ್ಟು ಕ್ರೆಡಿಟ್  ಕಾರ್ಡುಗಳು: 3,20,56,929 (2,63,78,940)

* ದೇಶದೊಳಗೆ ಇರುವ ಒಟ್ಟು ಡೆಬಿಟ್ ಕಾರ್ಡುಗಳು: 80,40,51,123 (71,24, 65,787)

ನೋಟು ರದ್ಧತಿ ಆದ ಬಳಿಕ ಸರಕಾರ ತನ್ನ ಕಡೆಯಿಂದ ಹಲವು ಡಿಜಿಟಲ್ ಪಾವತಿ ವ್ಯವಸ್ಥೆಗಳನ್ನು ಆರಂಭಿಸಿದೆ. ಅವುಗಳ ಸ್ಥಿತಿ ಈ ಕೆಳಗಿನಂತಿದೆ:

* 2014 ಮೇ ತಿಂಗಳಲ್ಲಿ ಆರಂಭಗೊಂಡಾಗ ತ್ರೈಮಾಸಿಕಕ್ಕೆ ರೂ.1500 ಕೋಟಿ ಮೌಲ್ಯದ ಒಂದು ಕೋಟಿ ವಹಿವಾಟು ನಡೆಸುತ್ತಿ ದ್ದ RuPay ಕಾರ್ಡು ಈಗ ತ್ರೈಮಾಸಿಕಕ್ಕೆ ರೂ.5000 ಕೋಟಿ ಮೌಲ್ಯದ 4 ಕೋಟಿ ವಹಿವಾಟು ನಡೆಸುತ್ತಿದೆ.

* 2016 ಆಗಸ್ಟಿನಲ್ಲಿ ಆರಂಭಗೊಂಡ UPI (ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್) ಜುಲೈ 2017 ರ ವೇಳೆಗೆ ತಿಂಗಳಿಗೆ 3411.35 ಕೋಟಿ ಮೌಲ್ಯದ 1.16 ಕೋಟಿ ವಹಿವಾಟು ನಡೆಸುತ್ತಿದೆ. ಇದರಲ್ಲಿ UPI, BHIM, USSD 2.0 ವ್ಯವಹಾರಗಳು ಸೇರಿವೆ.

* PayTMನಂತಹ ಖಾಸಗಿ ಪೇಮೆಂಟ್ ವಾಲೆಟ್  ಗಳಂತೂ ತಮ್ಮ ಜನ್ಮಜಾತ ಮಿತಿಗಳ ಕಾರಣದಿಂದಾಗಿ ದೊಡ್ಡ ಮೊತ್ತದಲ್ಲಿ ವ್ಯವಹರಿಸಲು ಸಾಧ್ಯವಾಗುತ್ತಿಲ್ಲ.

ಹಾಗಾದರೆ, ಜೇಟ್ಲಿಯವರ 2500 ಕೋಟಿ ರೂಪಾಯಿಗಳ ಗುರಿ ತಲುಪುವವರು ಯಾರು ಮತ್ತು ಹೇಗೆ?

ದೇಶದಲ್ಲಿ ಡಿಜಿಟಲ್ ಪಾವತಿಗಳ ಏಕಚಕ್ರಾಧಿಪತಿ ಆಗಿರುವ NPCI (ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇ ಷನ್ ಆಫ್ ಇಂಡಿಯಾ) ಎಂಬ ಅರೆ ಖಾಸಗಿ  ಸಂಸ್ಥೆಯ ಆಡಳಿತ ನಿರ್ದೇಶಕ ಎ. ಪಿ.  ಹೋಟಾ ಅವರು ಜುಲೈ 10ರಂದು ಪತ್ರಿಕಾ ಹೇಳಿಕೆಯೊಂದನ್ನು ನೀಡಿ, ಈ 2500 ಕೋಟಿಗಳಲ್ಲಿ ತಮ್ಮ ಸಂಸ್ಥೆಯ ಜವಾಬ್ದಾ ರಿ 1100 ಕೋಟಿಗಳೆಂದು ಹೇಳಿದ್ದಾರೆ.  ಅಂದರೆ ಉಳಿದ 1400ಕೋಟಿಗಳ ಜವಾಬ್ದಾರಿ ರಿಸರ್ವ್ ಬ್ಯಾಂಕು ಮತ್ತದರ ಅಡಿ  ರುವ ಬ್ಯಾಂಕಿಂಗ್ ವ್ಯವಸ್ಥೆಯದು ಎಂದಾಯಿತು.

ಬ್ಯಾಂಕಿಂಗ್ ವ್ಯವಸ್ಥೆ ಈ 1400 ಕೋಟಿ ಮೊತ್ತದ ಸಮೀಪಕ್ಕೂ ಬರುವಂತಿಲ್ಲ ಎಂಬುದನ್ನು ಅದಕ್ಕಿರುವ ಮೂಲಭೂತ ವ್ಯವಸ್ಥೆಗಳ ಸ್ವರೂಪವೇ ಹೇಳುತ್ತಿದೆ.  ಇ ವಾಲೆಟ್ ಗಳು ಕೂಡ ಈ ಸಾಧನೆ ಮಾಡಲು  ಸಾಧ್ಯವಿಲ್ಲ. ಏಕೆಂದರೆ, ಅದನ್ನು ಬಳಸಲಾಗುವುದು ಸ್ಮಾರ್ಟ್ ಫೋನ್ ಇರುವವರಿಗೆ ಮಾತ್ರ. ದೇಶದ ನೂರು ಕೋಟಿ ಮೊಬೈಲ್ ಫೋನ್ ಗಳಲ್ಲಿ ಸ್ಮಾರ್ಟ್ ಫೋನುಗಳಿರುವುದು 27 ಕೋಟಿ ಮಾತ್ರ! ಅದಲ್ಲದೆ, ಇ ವಾಲೆಟ್ ಗಳಿಗೆ ಬೇರೆ ಮಿತಿಗಳೂ ಇವೆ. ವ್ಯಾಪಾರಿಗಳಿಗೆ ಇ ವಾಲೆಟ್  ನಿಂದ ತಿಂಗಳಿಗೆ 25,000ಕ್ಕಿಂತ ಹೆಚ್ಚು ಹಣ ಹೊರತೆಗೆಯಲಾಗುವುದಿಲ್ಲ ಮತ್ತು ಅಲ್ಲಿ ಉಳಿದಿರುವ ಹಣಕ್ಕೆ ಈಗ ಬಡ್ಡಿಯೂ ಬರುತ್ತಿಲ್ಲ. ಬದಲಿಗೆ, ಪ್ರತೀ  ವ್ಯವಹಾರಕ್ಕೆ ಕಮಿಷನ್ ತಾವೇ ಕೈಯಾರೆ ಪಾವತಿ ಮಾಡಬೇಕಿರುತ್ತದೆ. ಇದರ ಮೇಲೆ ಫಿಶಿಂಗ್, ಸೈಬರ್ ದಾಳಿ ಮತ್ತಿತರ  ಆಪತ್ತುಗಳೂ ಇವೆ.

ಹಾಗಾದರೆ, NPCI  ತನ್ನ 1100 ಕೋಟಿ ಗುರಿ ತಲುಪೀತೇ? ಅಲ್ಲೂ ನಕಾರಾತ್ಮಕ ಉತ್ತರವೇ ತೋರುತ್ತಿದೆ. ಯಾಕೆಂದರೆ, ಅದು ನಿರೀಕ್ಷೆ ಇಟ್ಟುಕೊಂಡಿರುವ UPI ಆಗಲೀ  IMPS  ಪಾವತಿ ವ್ಯವಸ್ಥೆ ಆಗಲೀ ತನ್ನ ನಿರೀಕ್ಷಿತ ಗುರಿ ತಲುಪುತ್ತಿಲ್ಲ; AePS ವ್ಯವಸ್ಥೆಯಂತೂ ತನ್ನ ಒಟ್ಟು ವಹಿವಾಟಿನ 95% ಭಾಗ ಆಧಾರ್ ಅಥೆಂಟಿಕೇಷನ್ ಪಾವತಿಗೇ ಮೀಸಲಾಗಿಬಿಟ್ಟಿದೆ.

ಮುಂದಿನ ಬಜೆಟ್ ವೇಳೆಗೆ ಜೇಟ್ಲಿಯವರು  ತಮ್ಮ ಸರಕಾರದ ಸಾಧನೆಗಳ ಸಮೀಕ್ಷೆಯ ಲೆಕ್ಕಾಚಾರಗಳನ್ನು ಕೊಡುವ ವೇಳೆಗೆ ಕಾಳೆಷ್ಟು ಜೊಳ್ಳೆಷ್ಟು ಎಂಬುದು ಅರಿವಿಗೆ ಬರಲಿದೆ!

(ಇಲೆಕ್ಟ್ರಾನಿಕ್ ಪಾವತಿಗಳ ಒಟ್ಟು ಪರಿಸ್ಥಿತಿಯನ್ನು ಕೆಳಗಿನ ಪಟ್ಟಿ ವಿವರಿಸುತ್ತದೆ)

(ಕೆಲವು ಅಬ್ರಿವಿಯೇಷನ್ ಗಳು:

RTGS – Real time gross settlement

NEFT – National electronic funds transfer

CTS – Cheque truncation system

IMPS – Immediate payment service

NACH – National automated clearing house

UPI – Unified Payments Interface

USSD – Unstructured Supplementary Service Data

POS – Point of sale

PPI – Prepaid payment instrument)

‍ಲೇಖಕರು avadhi

October 2, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: