ಅವನ ತಲ್ಲಣ..

ನಂದಿನಿ ಹೆದ್ದುರ್ಗ

‘ಸುಸೀಲಾ…ಏ ಸುಸಿ..ಆ ಲಕ್ಷ್ಮಮ್ಮನ ಮನೆಗೆ ಹೋಗಿದ್ದೇನಮ್ಮೀ.

ಮುಯ್ಯ ಆಳಿಗೆ ಬತ್ತೀನಿ ಅಂದಿದ್ಳು ಲಕ್ಷಮ್ಮಕ್ಕ.

ಒಂದು ಕಿತ ಕರೆದು  ಬರಬಾರದಾ ಹೋಗಿ.’

ಒಂದು ಸರ್ತಿ ಹೇಳಿದ್ದು ಕೇಳಲಿಲ್ಲವೇನೋ ಅನ್ನುವ ಹಾಗೆ ಮಂಜಪ್ಪಣ್ಣ ತನ್ನ ಹೆಂಡತಿ ಸುಶೀಲಾಳಿಗೆ ಮತ್ತೊಮ್ಮೆ ಕೂಗಿ ಹೇಳಿದ್ರು.

ಸುಶೀಲ ಆಗಿನ್ನೂ ಕೊಟ್ಟಿಗೆಯಿಂದ ಹಾಲು ಕರೆದು ತಂದಿಟ್ಟು ಗೋಬರ್ ಗ್ಯಾಸಿಗೆ ಸಗಣಿ ಕದಡಿ ಎಮ್ಮೆಗಳನ್ನು ಆಚೆಗೆ ಕಟ್ಟಿಹಾಕ್ತಿದ್ದರು.

ಮಗಳು ಅಡುಗೆ ತಯಾರಿಯಲ್ಲಿದ್ದಳು.

ಮಂಜಪ್ಪಣ್ಣ ದೇವರಹಳ್ಳಿಯ ಒಬ್ಬ ಸಾಧಾರಣ ಸಣ್ಣ ಬೆಳೆಗಾರ.

ಮೂರು ಎಕರೆ ಕಾಫಿ ತೋಟ. ಒಂದು ಎಕ್ರೆ ಗದ್ದೆ, ಎರಡು ಎಮ್ಮೆ ಸ್ವಂತಕ್ಕೊಂದು ಹೆಂಚಿನ ಮನೆ ,ಒಂದು ನಾಡು ನಾಯಿ ಇವಿಷ್ಟು ಮಂಜಪ್ಪಣ್ಣನ  ಒಟ್ಟು ಆಸ್ತಿಯ ವಿವರ.

ಹೆಂಡತಿ ಸುಶೀಲ ಮತ್ತು ಇಬ್ಬರು ಮಕ್ಕಳು ಅವರ ಈ ಆಸ್ತಿಗೆ ಸಮಾನ ಹಕ್ಕುದಾರರು.

‘ಕೂತು ಉಂಡರೆ ಕುಡಿಕೆ ಹೊನ್ನು ಸಾಲದು’ ಅನ್ನುವ ಮಾತಿಗೆ ಅನ್ವರ್ಥವಾಗಿದ್ದಾರೆ ನಮ್ಮ ಮಂಜಪ್ಪಣ್ಣ.

ಇರುವುದು ಮೂರೆಕರೆ ತೋಟ ಆದರೂ ಅವರ ಮನೇಲಿ ಇರುವ ನೆಮ್ಮದಿ, ಅವರ ಹೆಂಡತಿಯ ಮುಖದಲ್ಲಿರೊ ಸಂತೃಪ್ತಿ ನೋಡಿದರೆ ಅಕ್ಕಪಕ್ಕದವರಿಗೆ ಸಣ್ಣಗೆ ಅಸೂಯೆ ಆಗುವುದಂತೂ ಸತ್ಯ.

ತೋಟದ ಎಲ್ಲಾ ಕೆಲಸವನ್ನು ಸ್ವತಃ ತಾವಿಬ್ಬರೇ ಸೇರಿ ಮಾಡುವ ಈ ಸಮಾನ ಮನಸ್ಕ ದಂಪತಿಗಳು ಹೆಚ್ಚಿನ ಕೆಲಸವಿದ್ದಾಗ ಮುಯ್ಯಿ ಆಳಿನ ರೂಪದಲ್ಲಿ ಕೆಲಸ ಮುಗಿಸಿ ಕೊಳ್ತಿದ್ರು.

ಆಗೆಲ್ಲಾ ಮಕ್ಕಳು ಇವರ ಕೈ ನೆರವಿಗೆ ಬರ್ತಿದ್ದಿದ್ದು ಇದೆ.

ಮಗಳು ಹತ್ತಿರದ ಪೇಟೆಯಲ್ಲಿ ಡಿಗ್ರಿ ಮುಗಿಸಿ ಮನೆಯಲ್ಲೇ ಕೆಲಸ ಮಾಡಿಕೊಂಡು ಹೆತ್ತವರಿಗೆ ನೆರವಾಗ್ತಿದ್ದಾಳೆ.

ಮಗನು ಸಹ ಪಟ್ಟಣದಲ್ಲಿ ಓದುತ್ತಾ ರಜ ಇದ್ದಾಗ ತೋಟದ ಕೆಲಸದಲ್ಲಿ  ಕೈ ಜೋಡಿಸುತ್ತಿದ್ದ.

ಇದ್ದ ಒಂದು ಎಕರೆ ಗದ್ದೆಯಲ್ಲಿ ಮನೆಗಾಗುವಷ್ಟು ಭತ್ತ ಬೆಳೆದು ಉಳಿದದ್ದು ಮಾರಾಟ ಮಾಡ್ತಿದ್ದರು.ಒಂದು ಸರ್ತಿ ಶುಂಠಿ ಹಾಕಲಿಕ್ಕೆ ಹೋಗಿ ಕೈ ಸುಟ್ಕೊಂಡಿದ್ದೂ ಇದೆ.

ಇರುವ ಎರಡು ಎಮ್ಮೆಯ ಗೊಬ್ಬರ ಗದ್ದೆಗೂ ಅಲ್ಲಿ ಬರುವ ಹುಲ್ಲು ಎಮ್ಮೆಯ ಮೇವಿಗೂ ಸರಿಹೋಗ್ತಿತ್ತು.

ಮಂಜಪ್ಪಣ್ಣನ ತಾಳ್ಮೆಯಿಂದಲೋ ಏನೋ ಎನ್ನುವಂತೆ  ಅವರು ಒಳ್ಳೆಯ ಆರೋಗ್ಯವಂತರಾಗಿಯೂ ಇದ್ದರು.

ಮಂಜಪ್ಪಣ್ಣನ ಸಂಸಾರ ಒಂದು ಬಗೆಯ’ದೇವರು ಕೊಟ್ಟ ಸಂಸಾರದಂತಿತ್ತು’

ಹಾಗಂತ  ಮಂಜಪ್ಪಣ್ಣಂಗೆ ಕಷ್ಟ ಅನ್ನುವುದೇ ಇರಲಿಲ್ಲವೆ ಅನ್ನುವ ಹಾಗೂ ಇಲ್ಲ.

ಮಗಳು ಮದುವೆ ವಯಸ್ಸು ಮೀರುತ್ತಿದ್ದರೂ ‘ತನ್ನ ಮನಸ್ಸಿಗೆ ಒಪ್ಪುವ ಗಂಡು ಬರುವವರೆಗೂ ಮದುವೆಯೇ ಬೇಡ “ಅಂತ ಹಠ ಹಿಡಿದು ಕುಳಿತಿದ್ದಾಳೆ.

ಮಗ ಯಾವುದೋ ಊರಿನಲ್ಲಿ ‌ಮೆಣಸು ಹಸಿರು ವಾಣಿ ಮಾಡಲು ಹೋಗಿ ಕೈ ಸುಟ್ಟುಕೊಂಡು ಮನೆಯ ಎರಡು ವರ್ಷದ ಆದಾಯ ಮೇಲೆ ಹೊಡೆತ ಬಿದ್ದಿತ್ತು.

ಸುಸೀಲಕ್ಕನಿಗೆ ಆಗಾಗ ದಮ್ಮು  ಕಾಯಿಲೆ ಬಂದುಬಿಟ್ಟರೆ ಮೂರುದಿನವಾದರೂ ಸುಧಾರಿಸಿಕೊಳ್ಳಲು ಆಗದೆ ಒದ್ದಾಡುತ್ತಿದ್ದಳು.

ಅದಕ್ಕಾಗಿ ಮಾಡದ ಮದ್ದಿಲ್ಲ,ಕಾಣದ ದೇವರಿಲ್ಲ ತಿರುಗದ ಆಸ್ಪತ್ರೆಗಳಿಲ್ಲ.

ಆದರೂ ಸ್ಥಿತಪ್ರಜ್ಞ ಮಂಜಪ್ಪಣ್ಣ ಎಲ್ಲವನ್ನೂ ಹೇಗೋ ಸರಿದೂಗಿಸುತ್ತಾ ‘ಹಾಸಿಗೆ ಇದ್ದಷ್ಟೂ ಕಾಲು ಚಾಚು’ಅನ್ನುವ ಮಾತನ್ನು ಸದಾ ನೆನಪಿನಲ್ಲಿ ಇಟ್ಕೊಂಡು ಹಾದಿ ಸಾಗಿಸ್ತಿದ್ರು.

‘ನಗನಗ್ತಾ ಇದ್ರೆ ನೋವು ಹತ್ರ ಸುಳಿಯೋದಿಲ್ಲ’ ಅನ್ನುವ ಸ್ವಯಂ ಸಲಹೆಯನ್ನು ಸದಾ ಪರಿಪಾಲಿಸ್ಕೊಂಡು ಬಂದಿರುವುದೂ ಅವರ ಇಂದಿನ ಈ ನೆಮ್ಮದಿಯ ಜೀವನಕ್ಕೆ ಕಾರಣವಾಗಿದೆ ಎನ್ನಬಹುದು.

ನನ್ನ ತೋಟವೂ ಮಂಜಪ್ಪಣ್ಣನ ತೋಟವೂ ಒಂದೇ ಬೇಲಿಯನ್ನು ಹಂಚಿಕೊಳ್ಳುವುದರಿಂದ ನನಗೆ ನಿತ್ಯ ಅವರನ್ನು ನೋಡುವ‌ ಮಾತಾಡಿಸುವ ಅವಕಾಶ ಸಿಕ್ಕುತ್ತಿತ್ತು.

ತೋಟದಲ್ಲಿ ಅವರಿಬ್ರೂ ಗಂಡ ಹೆಂಡತಿ ನಗನಗ್ತಾ ಕೆಲಸ ‌ಮಾಡ್ತಿದ್ರೆ ನನಗೆ ಅವರನ್ನು ಕದ್ದು ನೋಡುವ ಮನಸ್ಸು ಮತ್ತೆಮತ್ತೆ ಆಗಿ ನಿಯಂತ್ರಿಸಿ ಕೊಳ್ಳಲು ಒದ್ದಾಡ್ತಿದ್ದೆ.

ಎಲ್ಲಾ ಅನುಕೂಲತೆಗಳೊಂದಿಗೆ ಇರುವ ನನ್ನ ಹದಿನೆಂಟು ಎಕರೆ ಕಾಫಿ ತೋಟ ಎಷ್ಟೇ ಸಮೃದ್ಧವಾಗಿದ್ದರೂ ಮಂಜಪ್ಪಣ್ಣನ ತೋಟದ ಜೀವಂತಿಕೆಯ ಮುಂದೆ ತುಸು ಸಪ್ಪೆ ಅನಿಸಿದ್ದಂತೂ ಸತ್ಯ.

ಇಂತಹ ನಮ್ಮ ಮಂಜಪ್ಪಣ್ಣ ಇತ್ತೀಚೆಗೆ ಯಾಕೋ ಮಂಕಾದಂತೆ ಕಾಣಿಸ್ತಿದ್ದರು.

ನಾನವರನ್ನು ನೋಡಿದ ದಿನದಿಂದಲೂ ಇಳಿಮೋರೆ ಪೆಚ್ಚುಮುಖದ ಮಂಜಪ್ಪಣ್ಣನನ್ನು ನೋಡೇ ಇಲ್ಲ.

ಆದರೆ

ಮೂರು ದಿನದಿಂದ ಗಡ್ಡಾನೂ ಮಾಡಿಕೊಳ್ಳದೇ ಮಂಕಾಗಿ ಕುಳಿತಿದ್ದನ್ನು  ತೋಟಕ್ಕೆ ಹೋಗುವಾಗ ನೋಡಿದವಳು  ಮನಸ್ಸು ತಡೆಯದೇ ಜೀಪು ನಿಲ್ಲಿಸಿದೆ.

‘ಯಾಕೆ ಮಂಜಪ್ಪಣ್ಣ. ಮಂಕಾಗಿರೋ ಹಾಗಿದೀರಾ.ಹುಷಾರಾಗಿದ್ದೀರಾ ತಾನೇ’ಅಂದೆ.

‘ಏನಿಲ್ಲ ಅಕ್ಕಯ್ಯಾ.ಯಾಕೋ ಒಂಚೂರು ಮನ್ಸು ಸಮಾಧಾನ ಇರ್ಲಿಲ್ಲಾ.ಬನ್ನಿ ಕೂತ್ಕಳಿ.ಸುಸೀ….

ಅಕ್ಕಾರು ಬಂದಾರೆ ಕುಡಿಯಕ್ಕೆ ತಗೋಬಾ’

ವಯಸ್ಸಿನಲ್ಲಿ ‌ನನಗಿಂತ ಬಹಳ ಹಿರಿಯರಾದ ಮಂಜಪ್ಪಣ್ಣ ‌ನನ್ನ ಅಕ್ಕಯ್ಯ  ಅಂತಲೇ‌ ಕರೀತಿದ್ದಿದ್ದು.

ಅದೆಲ್ಲಾ ಏನೂ ಬ್ಯಾಡ ಮಂಜಪ್ಪಣ್ಣ ಅಂದವಳು ಮತ್ತೊಮ್ಮೆ ಮಂಜಪ್ಪಣ್ಣನನ್ನು ಅಚ್ಚರಿಯಿಂದೆಂಬಂತೆ ನೋಡಿದೆ.

ನಾನು ನೋಡಿದ ದಿನದಿಂದಲೂ ಮಂಜಪ್ಪಣ್ಣ ಯೋಗಿಯಂತಹ ಜೀವನ ನಡೆಸಿದವರು.ಕರ್ಮಯೋಗಿ ಅವರು.

ಅಂತವರ‌‌ ಮನ್ಸು ಸರಿ ಇಲ್ಲ ಅಂದರೆ ಏನೋ ಬಲವಾದ ಕಾರಣವೇ ಇರಬಹುದು ಎನಿಸಿ’ಯಾಕ ಮಂಜಪ್ಪಣ್ಣ. ಅಂತದ್ದೇನಾಯ್ತೀಗ.’

ಅನ್ನುತ್ತಾ ಅವರ ಪಕ್ಕಕ್ಕೆ ಇನ್ನಷ್ಟು ಸರಿದು ಕೇಳಿದೆ.

ಕೇಳಿದ್ದೇ ತಡ.

ನಾನೆಂದೂ ಅವರ ಧ್ವನಿಯಲ್ಲಿ ‌ಕಾಣದಿದ್ದ ದೈನ್ಯ ಭಾವದಲ್ಲಿ

‘ಅಕ್ಕಯ್ಯಾ..ನಿಮ್ ತ್ವಾಟ ಮಾರ್ತಿದ್ದೀರಂತೆ.ಹೌದ್ರಾ’ಅಂದರು.

ಅರೆ.ಎಲ್ಲೋ ಮಾತಾಡಿದ ವಿಷಯ. ಇವರಿಗೆ ಹೇಗೆ ತಿಳಿಯಿತು. ಅಂತ ಅಂದುಕೊಳ್ಳುವಾಗಲೇ

‘ನೀವು‌ ಮಾತ್ರ ಅಲ್ಲಾ ಕಣಕ್ಕಾ.ಪಕ್ಕದ ಸುಧೀರಣ್ಣಾ,ಈ ಕಡೆ ಲಕ್ಷ್ಮಕ್ಕನ ಎರಡೆಕರೆ.ಮ್ಯಾಗಡೆ ಇರೋ ದೊಡ್ಡೇಗೌಡರ ಹದಿನೆಂಟು ಎಕರೆ ಖಾಲಿ ಬಾರೆ,ಹಳ್ಳದ ಹತ್ರ ಇರುವ ಮಹೇಸಪ್ಪನ ಐವತ್ತು ಎಕರೆ ಇನ್ನೂ ಬ್ಯಾರೆಬ್ಯಾರೆ ಜಮೀನೆಲ್ಲಾ ಯಾರೋ ಬೆಂಗ್ಳೂರಿನವ್ರು ಬಂದು ನೋಡ್ಕೊಂಡು ಹೋಗಿದ್ದಾರೆ ಅಂತ ನನ್ ಮಗ ಹೇಳ್ತಿದ್ದ.

ನಿಮ್ಮ ತ್ವಾಟ ಲಕ್ಷ್ಮಕ್ಕನ ತ್ವಾಟದ  ಮಧ್ಯಲೇ ಅಲ್ವ್ರಾ ನನ್ ತ್ವಾಟ ಇರೋದು.ಇನ್ನೇನು ಮಾಡಂಗಿಲ್ಲಾ.ನಾವೂ ಕೊಡ್ಲೇ ಬೇಕಾಯ್ತದೆ  ಅಂತ ಮಗ ಹೇಳ್ದಾ ಕಣಕ್ಕಾ.ನಂಗೆ ಅದನ್ನು ಕೇಳ್ದಾಗಿಂದ ಜೀವ ಬಾಯಿಗೆ ಬಂದಂಗೆ ಆಗೈಯ್ತೆ.

ನಿಮ್ಗೆ ಗೊತ್ತಿಲ್ದೆ ಇರೋದು ಏನೈತೆ ಹೇಳಿ.

ತ್ವಾಟವೇ ನನ್ ಉಸಿರು.ನನ್ ಜೀವ.

ಅದ್ನಾ ಮಾರೋದೂ ಒಂದೆಯಾ.ಎಣ್ಣೆ ಹೊಳೆಗೆ ಬಿದ್ದು ಸಾಯೋದೂ ಒಂದೇಯಾ‌. ನಮಗ್ಗೊತ್ತಿರೋದು ಇದೊಂದೇ ಬದುಕು.

ಇದನ್ನು ಮಾರಿಕೊಂಡು ಅವ್ರು ಕೊಟ್ಟ ಕಾಸು ಇಟ್ಕೊಂಡು ಮನೇಲೇ ಕೂತರೆ ನಾವು ‌ಮನುಸ್ರಾಗ್ತೀವಾ ಹೇಳಕ್ಕಾ?

ನಮ್ ಸುಸೀಗೇನಾದ್ರೂ ವಿಷ್ಯ ತಿಳಿದ್ರೆ ಎದೆ ಒಡ್ಕಂಡು ಪ್ರಾಣ ಬಿಡ್ತಾಳೆ.

ನಮ್ಮ ಮಕ್ಳು ಒಂದೇಯಾ ನಮ್ ತ್ವಾಟವೂ ಒಂದೇಯಾ ಅನ್ನೋ ಹಂಗೆ ನೋಡ್ತಿರುವ ಜೀವ ಅದು.

ಮಗಳ ಮದ್ವೆ ಮಾಡ್ಬೇಕು.

ಮಗನಿಗೊಂದು ಭವಿಷ್ಯ‌ ಕೊಡಬೇಕು. ಕೈಯಲ್ಲಿ ತ್ವಾಟವೇ ಇಲ್ಲಾಂದ್ರೆ ನಾವೇನು ಮಾಡೋಕಾಗ್ತದೆ ನೀವೇ ಹೇಳಿ.

ಯಾವತ್ತೂ ನಾ ಯಾರ ಮುಂದೂ ಕೈ ಚಾಚಿದೋನಲ್ಲಾ ಅನ್ನುದನ್ನೂ ನೀವೇ ನೋಡಿರಲ್ಲಾ ಅಕ್ಕಾ.

ಇನ್ನೊಂದು ವಿಚಾರ ಕಣಕ್ಕಾ.

ಈ ಊರ ಮಂದಿಯೆಲ್ಲ ತಮ್ ತಮ್ ಜಮೀನು ತ್ವಾಟವಾ ಬೆಂಗ್ಳೂರು ಮಂದಿಗೆ,(ಅವ್ರೂ ಯಾರೋ ಪಾರೀನ್ನೋರಿಗೆ ಕೊಡ್ತಾರಂತೆ) ಕೊಟ್ಬುಟ್ಟು ಇವ್ರೇನು ಅವ್ರ ತಾವ ಜೀತ ಮಾಡ್ತಾರೇನ್ರವ್ವಾ.?

ಭೂಮ್ತಾಯಿ ಒಡೆಯರು  ನಾವು ಅಂತ ಅನ್ನುವುದು ಎಷ್ಟು ಗತ್ತಿನ ವಿಷ್ಯ ಅಲ್ಲವ್ರಾ.?

ನೀವು ತಿಳ್ದವ್ರು.ಓದ್ಕಂಡಿರೋವ್ರು.

ಇದೆಲ್ಲಾ ಸರೀನಾ ಅಂತ ಒಂದ ಕಿತ ವಿಚಾರ ಮಾಡಬಾರ್ದಾ ಅಕ್ಕಾ.?

ಅದೇನಾರಾ ಮಾಡ್ಕಳ್ಳಿ ಅವ್ರು.

ನನ್ ಜಮೀನು ‌ ಮಾತ್ರ ಬಿಲ್ಕುಲ್ ಮಾರಾಕಿಲ್ಲಾ ಅಂತ ಅಕ್ಕಪಕ್ಕದೋರಿಗೆ ಹೇಳ್ಬಿಡಿ”

ಅಂತ ಒಮ್ಮೆಗೆ ಎಲ್ಲವನ್ನೂ ಹೊರ ಚೆಲ್ಲುವವರಂತೆ ಮಾತಾಡಿದ ಮಂಜಪ್ಪಣ್ಣ ಧಾರಕಾರ ಸುರಿಯುತ್ತಿದ್ದ ಕಣ್ಣೀರನ್ನು ತನ್ನ ಹೆಗಲ‌ ಮ್ಯಾಲಿನ ಟವೆಲಿನಿಂದ ಒರೆಸಿಕೊಂಡರು.

ಅವರು ಇಷ್ಟು ಹೇಳುವಷ್ಟರಲ್ಲಿ ಹತ್ತಾರು ಬಾರಿ ಅವರ ಸ್ವರ ಗದ್ಗದವಾದದ್ದನ್ನೂ ,ಎದೆಯೊಳಗಿನ ನೋವನ್ನು ಹೇಳಿಕೊಳ್ಳಲು ಅವರಿಗೆ ಪದಗಳ ಬರ ಬಂದಿದೆಯೆಂದೂ ಸ್ಪಷ್ಟವಾಗಿ ತಿಳಿಯುತಿತ್ತು.

ಯಾಕೋ ನನ್ನ‌ ಕಣ್ಣಾಲಿಗಳೂ ತುಂಬಿದವು.

ಏನೇನೂ ಓದಿಲ್ಲದ ಸ್ವಾಭಿಮಾನಿ ಮಂಜಪ್ಪಣ್ಣ.

ತನ್ನ ಆತ್ಮದ ಬಲವನ್ನು ಮಾತ್ರ ನಂಬಿರುವ ಹಠವಾದಿ ಮಂಜಪ್ಪಣ್ಣ.

ತನ್ನ ಗದ್ದೆ ತೋಟ ಮನೆ ಸಂಸಾರ ಇವಿಷ್ಟು ಮಾತ್ರ ಗೊತ್ತಿರುವ ಮಂಜಪ್ಪಣ್ಣ.

ತನ್ನ ಜಮೀನು ಅಂದ್ರೆ ಹಿರೀಕರ ಆಶಿರ್ವಾದ ಅಂತ ತಿಳ್ದಿರುವ ಮಂಜಪ್ಪಣ್ಣ.

ಇವರಿಗೆ ,ಈ ಮುಗ್ದನಿಗೆ,  ಈ ಹಳ್ಳಿ ಗಮಾರನಿಗೆ  ಗೊತ್ತಿರುವ  ಈ ಸೂಕ್ಷ್ಮ ವಿಷಯ ನಮ್ಮೂರಿನ ನೂರೆಕರೆ ತೋಟ ಹೊಂದಿರುವ ಸುಬ್ರಾಯಣ್ಣಂಗೂ ಅವನ ಮಗನಿಗೂ ,ಪಟ್ಟಣದಲ್ಲಿ ದೊಡ್ಡ ನೌಕರಿಯಲ್ಲಿರುವ ಇಪ್ಪತೈದು ಎಕರೆ ತೋಟದ ಒಡೆಯ ಮಹೇಶಪ್ಪನ ಮಗ ಮಹೇಂದ್ರನಿಗೂ ತಿಳಿಯದ್ದಿದ್ದು ಯಾಕೆ ಅಂತ ಗೊತ್ತಾಗ್ತಿಲ್ಲಾ.

ಸ್ವಾಭಿಮಾನಿ ,ಕರ್ಮಯೋಗಿ ,ಕಾಯಕವೇ ಕೈಲಾಸ ಅಂತ ತಿಳ್ದಿರುವ ನಮ್ಮ ‌ಮಂಜಪ್ಪಣ್ಣನ‌ ಕಣ್ಣೀರು ನೋಡಿದ ನಾನು ಅವರ ದುಡಿದು ಕಲ್ಲಾಗಿದ್ದ ಕೈಗಳ ಮೇಲೆ ನನ್ನ ಕೈಯಿಟ್ಟು ಸಮಾಧಾನವಾಗಿರಿ ಎಂಬಂತೆ ಹೇಳಿ ಹೊರಡಲು ಎದ್ದವಳು

ಯಾಕೋ ಕಣ್ಣು ಮಂಜಾದಂತೆ ಎನಿಸಿ ಅಲ್ಲೇ ಪಕ್ಕದ ಗೋಡೆಯನ್ನು ಆಧಾರಕ್ಕಾಗಿ ಹಿಡಿದು ಹಾಗೇ ಒರಗಿ ನಿಂತೆ.

ಒಂದರೆ ಘಳಿಗೆ ನನ್ನ ಸುತ್ತಲಿನ ಎಲ್ಲ ದೃಶ್ಯಗಳೂ ಗಿರಗಿರನೆ ಸುತ್ತತೊಡಗಿದವು.

ಮಂಜಪ್ಪಣ್ಣನ ದೈನ್ಯ ಮುಖ ,ಅವರ ಕುಟುಂಬಸ್ಥರ ಅಸಹಾಯಕತೆ, ಅವರ ಮನೆ ,ಅಲ್ಲೇ ನಿಲ್ಲಿಸಿದ್ದ ನನ್ನ ಜೀಪು ಇವೆಲ್ಲವೂ ನನ್ನ ದೃಷ್ಟಿ ಪಟಲದಿಂದ ದೂರವಾದಂತಾಗಿ ಮಂಜಾಗಿ ಹೋಗುತ್ತಿರುವಂತೆ ಭಾಸವಾಯಿತು..

ಎಲ್ಲೋ ಯಾವುದೋ ಊರಿನಲ್ಲಿ ನಡೆಯುವ/ ನಡೆದಿದ್ದ ವಿದ್ಯಮಾನಗಳು/ವಿಚಾರಗಳು ಇವು.

ಪತ್ರಿಕೆ ಓದಿಯೋ ಟಿವಿ ರೇಡಿಯೋ ‌ಮೂಲಕವೋ ಕೇಳಿ ತಿಳಿದಿದ್ದ ನನಗೆ ಈಗ ಈ ಘಟನೆಗಳು ನನ್ನೂರಿನಲ್ಲೇ ಘಟಿಸಲಿವೆ ಎಂಬುದು ಸುಸ್ಪಷ್ಟವಾಗತೊಡಗಿತು.

ಯಾರೋ ಹಣವಂತ ನಗರವಾಸಿಗಳ ಭೂದಾಹ.ಅದಕ್ಕೆ ಅನುಕೂಲ ಮಾಡಿಕೊಡುವಂತೆ ರೂಪಿಸುವ ಹೊಸಹೊಸ ಕಾಯಿದೆ ಕಾನೂನುಗಳು.

ಹಾಗಿದ್ದರೆ ಅಭಿವೃದ್ಧಿ ಎಂದರೆ ಏನು.?

ಹೆಚ್ಚು ಹೆಚ್ಚು ಗಳಿಸುವುದೇ?

ಹೆಚ್ಚು ಕೂಡಿಡುವುದೇ?

ಮಣ್ಣಿಗಿಂತಲೂ ಮೆದುಳಿನ ಕೆಲಸಕ್ಕೆ ಬೆಲೆ ಕಟ್ಟುವುದೇ?

ಹೃದಯವನ್ನು ಹೂತೇ ಬಿಡುವುದೇ?

ದೇವರೇ.!

ಮನುಷ್ಯ ಹಸಿವಿಗೆ ಹಣ ತಿನ್ನುವ ಕಾಲ ಬರಬಹುದೇ ಕಲಿಗಾಲದಲ್ಲಿ.?

ಮುಂದಿನ ನನ್ನ ಸಮೃದ್ಧ ಹಳ್ಳಿಯ ಚಿತ್ರಣ ಏನಾಗಬಹುದು.?

ಕಣ್ಣ ಮುಂದೆ ನಮ್ಮೂರಿನ ಸ್ವಾಭಿಮಾನಿ ಮಂಜಪ್ಪಣ್ಣನಂತಹ ಸಹಸ್ರಾರು ರೈತರು ಬಲಿಯಾಗುತ್ತಿರುವ ಚಿತ್ರಣ ನನ್ನನ್ನು ಕಾಡತೊಡಗಿತು.

ವ್ಯಾವಹಾರಿಕ ಜಗತ್ತಿನಲ್ಲಿ ಭಾವನೆಗಳಿಗೆ ಬೆಲೆಯೆಲ್ಲಿದೆ.

ಇದೆಯೇ?

ಉಹು.ಗೊತ್ತಾಗುತ್ತಿಲ್ಲ.

ಮಂಜಪ್ಪಣ್ಣನನ್ನು ಸಮಾಧಾನ ಪಡಿಸಲು  ಹೋದ ನನಗೆ ನನ್ನನ್ನೇ ಯಾರಾದರೂ ಸಂತೈಸಬೇಕಾದ ಅವಶ್ಯಕತೆ ಇದೆ ಅನ್ನಿಸತೊಡಗಿತು.

ಭಾರವಾದ ಹೆಜ್ಜೆ ಇಡುತ್ತಾ ಜೀಪಿನೆಡೆಗೆ ಸಾಗಿದೆ.

ನನ್ನ ನಡಿಗೆಯಲ್ಲಿದ್ದ ಅಸಹಾಯಕತೆ ಮಂಜಪ್ಪಣ್ಣನ ದೃಷ್ಟಿ ಗೆ ಬಿತ್ತಾ?

ಬೀಳಲಿಲ್ಲವಾ?

ಗೊತ್ತಿಲ್ಲ.

ನನಗಂತೂ ಅವರ ಕಡೆಗೆ ತಿರುಗಿ ನೋಡುವ ಧೈರ್ಯವಾಗಲಿಲ್ಲ.

ಜೀಪು ಸ್ಟಾರ್ಟ್ ಮಾಡುವ ಮುನ್ನ ಮನಸ್ಸಿನಲ್ಲೇ ಹೇಳಿದೆ.

‘ಮಂಜಪ್ಪಣ್ಣ.ನಿಮ್ಮೊಡನೆ ನಾನಿದ್ದೇನೆ.ನಿಮ್ಮ ನಿರ್ಧಾರಕ್ಕೆ ನಾನೂ ಜೊತೆಯಾಗಿರುತ್ತೇನೆ ..’

‍ಲೇಖಕರು Avadhi

October 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಚಂದ್ರಪ್ರಭ ಕಠಾರಿ

    ಅವನ ತಲ್ಲಣ….ಸಾಗುವಳಿಯನ್ನೇ ನಂಬಿ ಬದುಕುತ್ತಿರುವ ಎಲ್ಲಾ ರೈತರ ತಲ್ಲಣ. ಚಿಕ್ಕದಾದರೂ ಕತೆ ಚೆನ್ನಾಗಿದೆ. ಪಟ್ಟಭದ್ರ ಹಿತಾಸಕ್ತಿಗಳ, ಬಂಡವಾಳಶಾಹಿಗಳ ಮಸಲತ್ತಿಗೆ ಮಣೆ ಹಾಕುವ ಆಳುವ ಸರ್ಕಾರಗಳು ತರುತ್ತಿರುವ ಹೊಸ ಕಾನೂನುಗಳು, ಅವರು ಹೇಳುವಂತೆ ವರದಾನವಾಗಿರದೆ ನೇಣಿನ ಕುಣಿಕೆಗಳಾಗಿವೆ. ಅಂಥ ಅಸಹಾಯಕ ರೈತನೊಬ್ಬನ ಸಂಕಟ, ತಳಮಳ, ನಿಂತ ನೆಲವೇ ಸರಿಯುವ ಸಂಕಟವನ್ನು ಕತೆ ಓದುಗನಿಗೆ ಅನುಭವವಾಗಿ ದಾಟಿಸುತ್ತದೆ. ಐದಾರು ವಾಕ್ಯಗಳ ಪ್ಯಾರಾಗಳಲ್ಲಿ ಬರವಣಿಗೆ ಇರದೆ ಸಂಭಾಷಣೆಯೂ ಸಹಿತ ಒಂದೊಂದು ವಾಕ್ಯವಾಗಿಸುವ ಔಚಿತ್ಯ ಅರ್ಥವಾಗಲಿಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: