ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವನು ಯಜಮಾನನ ಗೋರಿ ಬಿಟ್ಟು ಕದಲದೇ ಎಂಟು ವರ್ಷಗಳಾದವು..


ಡಾ ಎಸ್ ಬಿ ಜೋಗುರ

ಮನುಷ್ಯ ಸಂಬಂಧಗಳು ಜಿಗಿ ಸಾಯುತ್ತಿರುವ ಸಂದರ್ಭಗಳಲ್ಲಿ ಮೌಲಿಕವಾದ ಮಾತುಗಳು ಇಲ್ಲವೇ ಅವಿಭಕ್ತ ಕುಟುಂಬದ ಪರಂಪರೆ ಮತ್ತೊಮ್ಮೆ ನಮ್ಮ ಪೂರ್ವಜರು ಬದುಕಿದ ನೆಮ್ಮದಿಯ ಜೀವನವನ್ನು ಸ್ಥಾಪಿಸುವಲ್ಲಿ ನೆರವಾಗುತ್ತವೆ ಎಂದು ಹೇಳುವಂತಿಲ್ಲ. ಯಾಕೆಂದರೆ ಪ್ರತಿಯೊಂದನ್ನು ‘ಕಮಾಡಿಟಿ’ ಯಂತೆ ನೋಡುವ, ಪರಿಗಣಿಸುವ ನಡುವೆ ಮನುಷ್ಯ ಸಂಬಂಧಗಳು ಆಪ್ತವಾಗಿ ಉಳಿಯುವದಾದರೂ ಹೇಗೆ ಸಾಧ್ಯ..? ಕಮಾಯಿಯೆ ಸಂಬಂಧಗಳ ಬುನಾದಿ, ಹಣ, ಯಶಸ್ಸು ಗಳೇ ಮರ್ಯಾದೆಯ ಮಾನದಂಡಗಳು ಎನ್ನುವಂತಾದಾಗ ಮನೆಗೂ ಮತ್ತು ಲಾಜಿಂಗ್ ನ ಕೊಣೆಗೊ ತುಂಬಾ ಫ಼ರ್ಕ್ ಅನಿಸುವುದಿಲ್ಲ. ಹೆತ್ತವರು ಜೀವನವಿಡೀ ಕಟಿಬಿಟಿ ಮಾಡಿ ಮಕ್ಕಳನ್ನು ಪೊರೆದು, ಶಿಕ್ಷಣ ಕೊಟ್ಟು, ಉದ್ಯೋಗ ಕೊಡಿಸಿ, ಮದುವೆ ಮಾಡಿ ಮುಪ್ಪಿನ ಕಾಲದಲ್ಲಿ ಅಸರೆಯಾದಾನೆಂಬ ಲೆಕ್ಕಚರದಲ್ಲಿರುವಾಗಲೇ ಮಗ ವೃದ್ಧ ತಂದೆ-ತಾಯಿಗಳನು ವೃದ್ಧಾಶ್ರಮದಲ್ಲಿ ಇಡುವ, ತಿಂಗಳಿಗೆ ಒಂದಷ್ಟು ಪುಡಿಗಾಸು ಕಳಿಸಿ ಕೃತಾರ್ಥನಾಗುವುದೇ ತನ್ನ ಹೊಣೆಗಾರಿಕೆ ಎಂದರಿತು, ಹಣವನ್ನು ಕಳುಹಿಸುವದರಲ್ಲೇ ಸಂಬಂಧದ ಸಾರ್ಥಕತೆ ಕಾಣುವ ಸಂತಾನ ದ ನಡುವೆ ಯಾವ ಸಂಬಂಧಗಳನ್ನು ಕುರಿತು ಮಾತನಾಡಬೇಕು ಎನ್ನುವುದೇ ತಿಳಿಯುತ್ತಿಲ್ಲ.
ಅಪ್ಪ ಸಾಯುವ ಮೊದಲೇ ಮಗನ ಭಯಂಕರ ಜಾಣತನವನ್ನು ಲೆಕ್ಕ ಹಾಕಿ ತನ್ನ ಶವವನ್ನು ಹೂಳುವದು ಬೇಡ ಆಸ್ಪತ್ರೆಗೆ ನೀಡಿ ಬಿಡಿ ಎಂದು ಬರೆದಿಟ್ಟು ನೆಮ್ಮದಿಯಿಂದ ಕಣ್ಣು ಮುಚ್ಚಿದ ಹೆತ್ತವರು ಅದೆಷ್ಟೊ.. ತಮ್ಮ ಇಡೀ ಜೀವನವನ್ನು ಬಗೆದು, ಬಸಿದು ಮಕ್ಕಳನ್ನು ಪೋಷಣೆ ಮಾಡಿದ ತಪ್ಪಿಗೆ ಅ ಮುದುಕಿ ಎಂಬತ್ತರ ಆಸುಪಾಸಿನಲ್ಲಿ ರಸ್ತೆಯ ಬದಿ ಕುಳಿತು ಹಣ್ಣು ಮಾರಿ ಸೊಸೆಯನ್ನು ಸಮಾಧಾನ ಪಡಿಸಿ ಒಂದರ್ಧ ಕಪ್ ಚಹಾ ಕುಡಿಯಬೇಕಾಗಿ ಬಂದದ್ದು ಆಕೆಯ ದೌರ್ಭಗ್ಯವೆನ್ನೋಣವೇ..? ಹಿರಿಯರು ಹೊರೆಯಾಗಿ ಅವರನು ಬೀದಿಗೆ, ವೃಧ್ಧಾಶ್ರಮಕ್ಕೆ ತಳ್ಳುವ ಈಗಿನ ದಿನಮಾನಗಳಲ್ಲಿ ಮನುಷ್ಯ ಸಂಬಂಧಗಳು ಮೊದಲಿನ ಕಳ್ಳುಬಳ್ಳಿಯ ಸಂಬಂಧ ಮತ್ತು ಕಕ್ಕುಲಾತಿಯನ್ನು ಕತ್ತರಿಸಿ ಹಾಕಿ, ಕೇವಲ ಒಂದು ಬಗೆಯ ಹುಸಿ ಮೋಹದಲ್ಲಿ ಅದು ಗಂಡ-ಹೆಂಡತಿಯ ಸಂಬಂಧವಿರಬಹುದು, ತಂದೆ-ಮಕ್ಕಳ ಸಂಬಂಧವಿರಬಹುದು ಎಲ್ಲವೂ ಲಾಭ ಆಧಾರಿತ ಎನ್ನುವಂತೆ ಮಾರ್ಪಾಡಾಗಿ ಅಪ್ಪ ಎನ್ನುವುದು ಬ್ಯಾಲೆನ್ಸ್ ಇರುವ ಒಂದು ಎ.ಟಿ.ಎಮ್ ಕಾರ್ಡನಷ್ಟೇ ಗಮನಾರ್ಹವಾಗಿ ಉಳಿದದ್ದು ಇವತ್ತಿನ ಕೌಟುಂಬಿಕ ಸಂಬಂಧಗಳಲ್ಲಿ ಕಾಣತೊಡಗಿದೆ.
ಅಪ್ಪ-ಅಮ್ಮ ಜೀವನಪರ್ಯಂತ ತಮ್ಮ ಸಂತಾನಕ್ಕಾಗಿಯೆ ಹಲುಬಿದರೂ ಅವರ ಜೀವನದ ಕೊನೆಯ ಗಳಿಗೆಯಲ್ಲಾದರೂ ತನ್ನ ಹೆತ್ತವರ ಬಗ್ಗೆ ಖಾಳಜಿ ವಹಿಸುವ ಕನಿಷ್ಟ ಹೊಣೆಗರಿಕೆಯಾದರೂ ಬೇಡವೇ..? ಹೆತ್ತವರು ಕಷ್ಟ, ಕೋಟಲೆಗಳನ್ನು ಅನುಭವಿಸಿ ತಮ್ಮ ಮಕ್ಕಳಿಗಾಗಿ ತಮ್ಮ ಸಣ್ಣ ಪುಟ್ಟ ಖುಷಿಗಳನ್ನೂ ಬಲಿಕೊಟ್ಟು ಜೀವವನ್ನೇ ತೇದರೂ ಅವರು ಅಸುನೀಗಿದ ಒಂದು ವಾರದೊಳಗೆ ಆಸ್ತಿಗಾಗಿ ಕಚ್ಚಾಡಿ, ಅವರನ್ನು ಫೋಟೋ ಪ್ರೇಮ್ ಒಂದಕೆ ಫಿಕ್ಸ್ ಮಾಡಿ ಎಲ್ಲವನ್ನು ಮರೆತು ಬಿಟ್ಟರೆ ಮುಗಿಯಿತು.

ಆದರೆ ನಾಯಿಯೊಂದು ತನ್ನ ಯಜಮಾನನ ಮೇಲಿನ ನಿಷ್ಟೆಯಿಂದ ಮನುಷ್ಯ ಸಂಬಂಧಗಳು ನಾಚುವಂತೆ ಮಾಡಿ, ಇಡೀ ಜಗತ್ತಿನ ಗಮನ ಸೆಳೆದಿರುವುದಿದೆ. ಸುಮ್ಮನೇ ಹೀಗೇ ಒಂದಷ್ಟು ತಂಗಳು ಅನ್ನ ಹಾಕಿದ ನೆನಪಿಗಾಗಿ ಮನೆಯ ಎದುರು ಮಲಗಿ ರಾತ್ರಿಯಿಡೀ ಮನೆ ಕಾಯುವ ನಾಯಿಗಳಿಗೆ ಲೆಕ್ಕವಿಲ್ಲ. ಇನ್ನು ಬಿಡಾಡಿ ನಾಯಿಗಳೊಂದಿಗಿನ ಸಂಬಂಧವೂ ಕೆಲವೊಮ್ಮೆ ಮನುಷ್ಯ ಸಂಬಂಧಗಳನ್ನು ಅಣುಕಿಸುವಂತಿರುತ್ತವೆ. ನಾನಾಗ ಕಾರವಾರದಲ್ಲಿದ್ದೆ. ಅಲ್ಲೊಬ್ಬ ವ್ಯಕ್ತಿ ಪ್ರತಿ ನಿತ್ಯ ರಾತ್ರಿ ಹತ್ತು ಗಂಟೆ ಸುಮಾರಿಗೆ ಕೈಯಲ್ಲಿ ಒಂದಷ್ಟು ಬನ್ ಹಿಡಿದು ಸರ್ಕಲ್ ಒಂದರಲ್ಲಿ ಹಾಜರಾಗುತ್ತಿದ್ದ. ಸುಮಾರು ಹತ್ತಿಪ್ಪತ್ತು ಬಿಡಾಡಿ ನಾಯಿಗಳು ಅವನನ್ನು ಸುತ್ತುವರೆದು ಲೊಚಲೊಚ ಮುತ್ತಿಡುತ್ತ ಆತ ಹಾಕುವ ಬನ್ ಗಾಗಿ ಅವನ ಸುತ್ತಲೂ ಬಾಲ ಅಲ್ಲಾಡಿಸುತ್ತ ಗಿರಕೀ ಹೊಡೆದಂತೆ ನಟಿಸುತಿದ್ದವು. ಅವನೇನು ಮಹಾ ಶ್ರೀಮಂತನಲ್ಲ. ಎಲ್ಲೋ ಕೆಲಸ ಮಾಡಿಕೊಂಡಿದ್ದವನು. ಹೀಗೆ ನಾಯಿಗಳಿಗೆ ಬನ್ ತಿನಿಸುವುದು ಅವನ ಪ್ರತಿನಿತ್ಯದ ಖುಷಿಯ ಕ್ಷಣಗಳು. ಆ ನಾಯಿಗಳು ಅವನನ್ನು ಮುತ್ತಿಕ್ಕುವ ರೀತಿಯಲ್ಲಿಯೆ ಒಂದು ಬಗೆಯ ಅನೂಹ್ಯವಾದ ಸಂಬಂಧ ಅಲ್ಲಿರುವ ಬಗ್ಗೆ ಯಾರಿಗಾದರೂ ಮನದಟ್ಟ್ಟಾಗುತ್ತಿತ್ತು. ನಾವು ಕೆಲಸ ಮುಗಿಸಿ ಮನೆಗೆ ಬರುತ್ತಿರುವಂತೆ ಬಹುಷ: ಆ ಬಗೆಯ ಪ್ರೀತಿಯನ್ನು ನಾವು ಏನು ತಂದು ಉಣಬಡಿಸಿದರೂ ಮನೆಯಲ್ಲಿ ದೊರೆಯಲಿಕ್ಕಿಲ್ಲ. ಆ ಮನುಷ್ಯನ ಮತ್ತು ಅ ಬಿಡಾಡಿ ನಾಯಿಗಳ ಸಂಬಂಧಕ್ಕೆ ಒಂದು ಪ್ರಾಮಾಣಿಕ ಸೆಲ್ಯುಟ್.
ಈ ನಾಯಿಗಳ ಬಗ್ಗೆ ಅದೆಷ್ಟು ಬರೆದರೂ ಕಡಿಮೆಯೆ.. ಆ ಜೀವಿ ಎಲ್ಲ ಬದಲಾವಣೆಗಳ ನಡುವೆಯೊ ತನ್ನ ನಿಯತ್ತನ್ನು ಹಾಗೇ ಕಾಪಾಡಿಕೊಂಡದ್ದೇ ಅದರ ಜನಿಮಕ್ಕಂಟಿದ ಗುಣ ವಿಶೇಷ. ಈಗ ನಾನು ಹೇಳಹೊರಟಿದ್ದು ಅರ್ಜನ್ಟೈನಾದ ಕೋರ್ಡೋಬಾ ಎಂಬಲ್ಲಿ ಜರುಗಿದ ಘಟನೆ. ಅವನ ಹೆಸರು ಮಿಗ್ವೆಲ್ ಗಜ್ಮನ್. ಅವನು ತನ್ನ ಮಗನಿಗಾಗಿ ಒಂದು ಜರ್ಮನ್ ಶೆಫರ್ಡ್ ಥಳಿಯ ನಾಯಿಯೊಂದನ್ನು ಕೊಂಡು ತಂದಿದ್ದ. ಆಗ ಅವನ ಮಗ ಡಾಮಿಯನ್ ಗೆ ಹದಿಮೂರು ವರ್ಷ. ವಿಚಿತ್ರವೆಂದರೆ ಆ ಮನೆಯಲ್ಲಿ ಆ ನಾಯಿ ಯಜಮಾನನನ್ನು ಬಿಟ್ಟರೆ ಮಿಕ್ಕ ಯರನ್ನೂ ಆ ಪರಿಯಾಗಿ ಹಚ್ಚಿಕೊಳ್ಳಲಿಲ್ಲ. ಮುಂದೆ ಗಜ್ಮನ್ ಆಕಸ್ಮಿಕವಾಗಿ ಅಸುನೀಗುತ್ತಾನೆ. ಸಾಂಪ್ರದಯಿಕವಾಗಿ ಅವನ ಅಂತ್ಯಕ್ರಿಯೆಯೂ ಜರುಗುತ್ತದೆ. ಆ ನಾಯಿಗೆ ಕ್ಯಾಪ್ಟನ್ ಎಂದು ಹೆಸರಿಡಲಾಗಿತ್ತು. ಗಜ್ಮನ್ ತೀರಿಕೊಂಡ ದಿನದಿಂದಲೇ ಕ್ಯಾಪ್ಟನ್ ನಾಪತ್ತೆಯಯಿತು. ಅವನ ಪತ್ನಿ ಮತ್ತು ಮಗನಿಗೆ ಅದರಿಂದ ಅಪಾರ ದು:ಖವಾಯಿತು. ತನ್ನ ತಂದೆಯ ಸಾವಿನೊಂದಿಗೆ ನಾಯಿ ಕ್ಯಾಪ್ಟನ್ ಕಣ್ಮರೆಯಾದ ಬಗ್ಗೆ ತುಂಬಾ ಬೇಜಾರಾಯಿತು. ವಿಚಿತ್ರವೆಂದರೆ ಯಜಮಾನ ಗಜ್ಮನ್ ನ ಅಂತ್ಯಕ್ರಿಯೆಯ ದಿನ ಆ ನಾಯಿಯನ್ನು ಸ್ಮಶಾನಕ್ಕೂ ಕರೆದೊಯ್ಯಲಿಲ್ಲ.
ಹೀಗಾಗಿ ತನ್ನ ಯಜಮಾನನನ್ನು ಯಾವ ಜಾಗದಲ್ಲಿ ಹುಗಿಯಲಾಗಿದೆ ಎನ್ನುವ ಬಗ್ಗೆಯೂ ಆ ಕ್ಯಾಪ್ಟನ್ ಗೆ ತಿಳಿದಿರಲಿಲ್ಲ. ಹೀಗಿರುವಾಗಲೂ ಅದು ತನ್ನ ಯಜಮಾನನ ಅಂತ್ಯಕ್ರಿಯೆಯಾದ ಸ್ಮಶಾನಕ್ಕೆ ತೆರಳಿ ಗಜ್ಮನ್ ನ ಗೋರಿಯನ್ನು ತಾನೇ ಖುದ್ದಾಗಿ ಪತ್ತೆ ಹಚ್ಚಿ, ಆ ಗೋರಿಯ ಹತ್ತಿರವೇ ಕುಳಿತು ಕಾಯತೊಡಗಿತು. ಅದು ಹೇಗೋ ಈ ಸುದ್ದಿ ಗಜ್ಮನ್ ಮನೆಯವರಿಗೆ ಗೊತ್ತಾಗಿ ಪತ್ನಿ ಮತ್ತು ಮಗ ಇಬ್ಬರೂ ಧಾವಿಸಿ ಸ್ಮಶಾನಕ್ಕೆ ಬಂದು ನೋಡಿದರೆ ಅಲ್ಲಿ ಕ್ಯಾಪ್ಟನ್ ತನ್ನಯಜಮಾನನ ಗೋರಿಯ ಹತ್ತಿರ ಅತ್ಯಂತ ಬಡವಾಗಿ ಕುಳಿತಿತ್ತು. ಯಜಮಾನನ ಮಗ ಮತ್ತು ಪತ್ನಿಯನ್ನು ದೂರದಿಂದಲೇ ಗಮನಿಸಿದ ಕ್ಯಾಪ್ಟನ್ ಜೋರಾಗಿ ಬೊಗಳತೊಡಗಿದ. ಆ ಧ್ವನಿಯಲ್ಲಿ ಒಂದು ಬಗೆಯ ಯಾತನೆಯಿತ್ತು. ಗಜ್ಮನ್ ನ ಪತ್ನಿ ಮತ್ತು ಮಗ ಅಲ್ಲಿಂದ ನಿರ್ಗಮಿಸಿದರೂ ಆ ಕ್ಯಾಪ್ಟನ್ ಮಾತ್ರ ಇಂದಿಗೂ ತನ್ನ ಯಜಮಾನನ ಗೋರಿಯ ಹತ್ತಿರವೇ ಕುಳಿತಿರುವನು. ಆತನ ಯಜಮನ ತೀರಿಕೊಂಡದ್ದು 2006 ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ತನ್ನ ಯಜಮಾನನ ಗೋರಿಯನ್ನು ಬಿಟ್ಟು ಕದಲದ ಈ ಕ್ಯಾಪ್ಟನ್ ಇಡೀ ಮನುಕುಲವನ್ನೇ ಸಂಬಂಧಗಳ ವಿಷಯವಾಗಿ ನಾಚಿಸಿದ್ದಾನೆ.
ಇಂಥಾ ಒಂದು ನಾಯಿಯನ್ನು ಪಡೆದ ಗಜ್ಮನ್ ನಿಜವಾಗಿಯೂ ಅದೃಷ್ಟವಂತ. ಆ ನಾಯಿಯನ್ನು ಹೇಗಾದರೂ ಮಾಡಿ ಮನೆಗೆ ಕರತರಬೇಕು ಎಂದು ಮಗ ಮತ್ತು ಗಜ್ಮನ್ ಪತ್ನಿ ಹರಸಾಹಸ ಮಾಡಿದರೂ ಅವರ ಎಲ್ಲ ಕಸರತ್ತುಗಳು ವಿಫ಼ಲವಾದವು. ಸ್ಮಶಾನದಲ್ಲಿರುವ ನೌಕರ ಅದಕ್ಕೆ ಆಹಾರವನ್ನು ನೀಡುತ್ತಾನೆ. ಬಹುಷ: ಈ ನಾಯಿಗೆ ಮಾತು ಬರುವಂತಿದ್ದರೆ ‘ತಾನು ಸತ್ತ ಮೇಲೆ ತನ್ನನ್ನು ತನ್ನ ಯಜಮಾನನ ಪಕ್ಕದಲ್ಲಿಯೆ ಹೂಳಿಬಿಡಿ’ ಎನ್ನುತ್ತಿತ್ತೋ ಏನೋ..? ಇಡೀ ಜಗತ್ತಿನ ಗಮನ ಸೆಳೆದಿರುವ ಈ ಕ್ಯಾಪ್ಟನ್ ಲಾಭ ಆಧಾರಿತ ಮನುಷ್ಯ ಸಂಬಂಧಗಳು ನಾಚುವಂತೆ ಬದುಕುವ ಮೂಲಕ ಜಿಗಿ ಸಾಯುತ್ತಿರುವ ಮನುಷ್ಯ ಸಂಬಂಧಗಳಿಗೆ ಅಧ್ಭುತ ಪಾಠವಾಗಿದ್ದಾನೆ. ಈ ಕ್ಯಾಪ್ಟನ್ ಮನಸಿನ ಮೇಲೆೆ ಆದ ಆಘಾತವನ್ನು ನಾವಾರೂ ಊಹಿಸಲು ಸಾಧ್ಯವಿಲ್ಲ.
 
 
 

‍ಲೇಖಕರು avadhi

14 April, 2014

1 Comment

  1. Prabhakar Nimbargi

    Very touching article, that too when human relations are dwindling to almost nil. One can die happily assuming that there someone in the animal kingdom to love and remember after one’s death. Such incidences between man and dogs are numerous. You have captured the feelings very well.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading