ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವನು ಕಡಲೂರಿನ ಹುಡುಗ. ಇವಳು ಜನಸಾಗರದ ನಡುವಿನ ಹುಡುಗಿ..

shama nandibetta

ಶಮ ನಂದಿಬೆಟ್ಟ 

srujan art2ಅವನು ಕಡಲೂರಿನ ಹುಡುಗ. ಹುಟ್ಟಿದ್ದು, ಬೆಳೆದದ್ದು, ಇರುವುದು ಎಲ್ಲ ಕಡಲ ತಡಿಯಲ್ಲಿ.

ಬಹುಶಃ ಅದಕ್ಕೇನೋ ಭೋರ್ಗರೆತವೂ ಸಮುದ್ರಕ್ಕಿಂತ ಕಮ್ಮಿಯಿಲ್ಲ. ರೂಪದಲ್ಲಿ ಮನ್ಮಥ, ಬುದ್ಧಿಯಲ್ಲಿ ಚಾಣಕ್ಯ.

ಇವಳು ಜನಸಾಗರದ ನಡುವಿನ ಹುಡುಗಿ, ಪ್ರೀತಿಗಿನ್ನೊಂದು ಹೆಸರು, ರೂಪ ಎಂಬಂತೆ. ಕಡಲಬ್ಬರವನ್ನ, ಹಿರಿತೆರೆಯನ್ನ ಸಲೀಸಾಗಿ ಅಪ್ಪಿಕೊಳ್ಳಬಲ್ಲ ತೀರದಂಥವಳು.

ಅವನ ಕರೆ ಬಂದಾಗ ಅವಳು ಏನೂ ಹೇಳುವ ಅಗತ್ಯವೇ ಬರಲಿಲ್ಲ.

ಕಾರಲ್ಲಿ ಬರುತ್ತಿತ್ತು ಹಾಡು “ನನ್ನ ನಿನ್ನ ನಡುವೆ ಒಂದು ಕಣಿವೆ ಬಿದ್ದಿದೆ… ಆಚೆ ಕೋಟೆ ಎದ್ದಿದೆ”

“ಅದು ಗೊತ್ತು ಕಣೇ, ನೋವಾಗಿದೆ ನಂಗೂ… ಏನ್ಮಾಡ್ಲಿ”

ಇವಳದು ದಿವ್ಯ ಮೌನ.

“ಹೀಗೆ ಮೌನವಾಗಿ ಅಳಬೇಡವೇ, ಕಣ್ಣು ಮುಖ ಏನಾಗ್ಬೇಕು”

“ಏನಾಗಲ್ಲ ನಾನೀಗ ಕಾಜಲ್ ಹಾಕ್ಕೊಳ್ಳೋದು ಬಿಟ್ಟಿದೀನಿ”

ಹತ್ತಕ್ಕೂ ಹೆಚ್ಚು ಬಗೆಯ ಕಾಡಿಗೆಗಳನ್ನ ಇಟ್ಟುಕೊಂಡು ಸಿಂಗಾರ ಮಾಡ್ಕೋತಿದ್ದವಳಿಂದ ಈ ಮಾತು. ಅವನು ಕಂಪಿಸಿದ್ದ.

“ಇಷ್ಟು ಹಚ್ಕೋಬೇಡವೇ, ಕಷ್ಟ ಆಗತ್ತೆ ನಂಗೆ”

“ಕಷ್ಟ ಯಾವುದು ? ಪ್ರೀತಿಸೋದಾ ಅಥ್ವಾ ನಿಭಾಯಿಸೋದಾ ?” ನೇರ ಪ್ರಶ್ನೆಗೆ ಅವನಲ್ಲಿ ಉತ್ತರವಿಲ್ಲ.

“ನಾ ಕಾಲ್, ಮೆಸೇಜು, ವಾಟ್ಸಾಪ್ ಏನೂ ಮಾಡ್ತಿಲ್ಲ. ಇನ್ನೂ ಯಾಕಿಷ್ಟು ಯೋಚನೆ… ಬಿಡು ನಾ ನಿನ್ನ ಕಾಡಲ್ವೋ.. ನೆಮ್ಮದಿಯಾಗಿರು” ಎಷ್ಟು ಸಹಜವಾಗಿ ತನಗೇನೂ ನೋವೇ ಆಗಿಲ್ಲವೆಂಬ ಹಾಗೆ ಹೇಳ್ತಾಳೆ.

ಈಗ ಮೌನವಾಗಿರುವುದು ಅವನ ಸರದಿ.

stiched apple

 

 

 

 

“ಏನೂ ಮಾಡದಾಗಲೇ ಹೆಚ್ಚು ಕಾಡ್ತಿ ಕಣೇ. ಆಗಾಗ ನಿನ್ನ ನಂಬರನ್ನೇ ದಿಟ್ಟಿಸ್ತೀನಿ. ನಿನ್ನ ವಾಟ್ಸಾಪ್ ಸ್ಟೇಟಸ್ ಏನು ಹೇಳ್ತಿದೆ ಇಣುಕ್ತೀನಿ…ನಿನ್ನ ಫೇಸ್ಬುಕ್ ಪೋಸ್ಟ್ ನೋಡ್ತೀನಿ; ಆದರೆ ಲೈಕ್ ಒತ್ತಲ್ಲ. ಅವತ್ತು ನಿನ್ನ ತಲೆ ನೇವರಿಸಿದಾಗ ನನ್ನ ವಾಚಿಗೆ ಸಿಲುಕಿ ತುಂಡಾಗಿ ಅಲ್ಲೇ ಉಳಿದ ನಿನ್ನ ಮುಂಗುರಳ ಎಳೆಯನ್ನ ಹಾಗೇ ಎತ್ತಿಟ್ಟಿದ್ದೀನಿ… ನನ್ನ ಕಣ್ಣಲ್ಲೂ ನೀರು ಒಸರುತ್ತೆ ಕಣೇ ಜಾನ್…”

ಮನದ ಮಾತನ್ನವಳಿಗೆ ಹೇಳಲಾರ. ಪ್ರತಿ ಸಲ ಹೇಳಹೊರಟಾಗಲೂ ಸೋಲುತ್ತಾನೆ. ಮೊದಲೇ ಹುಚ್ಚಾಗಿ ಪ್ರೀತಿಸುವ ಹುಡುಗಿ ಇದನ್ನು ಕೇಳಿದರೆ ತನ್ನ ಕನವರಿಕೆಯಲ್ಲಿ ಬೇರೆಲ್ಲ ಮರೆತು ಅವಳ ಬದುಕಿಂದ ಕಳೆದು ಹೋದಾಳೆಂಬ ಕಕ್ಕುಲಾತಿ. ಬರೆದ ಪ್ರತಿ ಪ್ರೇಮ ಪತ್ರವೂ ಅವನನ್ನು ಯಾವುದೋ ಲೋಕಕ್ಕೆ ಕೊಂಡೊಯ್ಯುವ ಪುಷ್ಪಕ ವಿಮಾನ. ತೆಕ್ಕೆಗೆ ಸಿಕ್ಕಿದರೆ ಅವಳೇ ಸೌಗಂಧಿಕಾ ಪುಷ್ಪಮಾಲೆ. ಬಾಚಿ ತಬ್ಬಿಕೊಂಡು ಅವಳೆದೆಯ ಆಲಾಪಗಳನ್ನ ಕೇಳುವ ಬಯಕೆ. ಆಸೆಗಳ ಬಿರುಗಾಳಿಯನ್ನ ತಡೆಯುತ್ತಾನೆ ಹೆಬ್ಬಂಡೆಯಂತೆ… ಫಲಿಸಲು ಸಾಧ್ಯವಿಲ್ಲದ ಪ್ರೀತಿಗಾಗಿ ಅವಳು ನೋಯುವುದನ್ನಂವ ತಡಕೊಳ್ಳಲಾರ. ಎಷ್ಟೇ ಮೌನವಾಗಿದ್ದರೂ ಅವನ ಒಲುಮೆಯ ಆಳ, ವಿಸ್ತಾರ, ಹರಹು, ಸಣ್ಣ ಕದಲಿಕೆ ಕನವರಿಕೆಗಳೂ ಅಂವ ಹೇಳದೆಯೇ ಅವಳನ್ನ ತಲುಪುತ್ತವೆ; ತನ್ನೊಲುಮೆಯೊಡತಿಯ ಪ್ರೀತಿಗೆ ಸಾಧ್ಯವಾಗುವ ಈ ಗಾಢತೆ ಅವನಿಗೆ ಅಚ್ಚರಿ, ಖುಷಿ, ಜತೆಗೆ ಚಿಟಿಕೆಯಷ್ಟು ನೋವು.

“ಇಂಥ ಒಲುಮೆಗಾಗಿ ತಾನೇ ನೀನಿಷ್ಟು ವರ್ಷ ಹಂಬಲಿಸಿದ್ದು ? ಸಿಕ್ಕಿದಾಗ ಯಾಕೀ ಪರಿತಾಪ ? ದೂರವಿರಿಸುವ ಶಾಪ ?” ಕೇಳುತ್ತದೆ ಮನಸ್ಸು.

“ಹಾಗಂತ ಹಾರಿ ಹೋಗಿ ಅವಳನ್ನ ಸೇರುವ ಪರಿಸ್ಥಿತಿಯಲ್ಲಿ ನೀನಿದ್ದೀಯಾ ? ಅದು ಸಾಧುವೂ ಅಲ್ಲ; ಸಾಧ್ಯವೂ ಇಲ್ಲ ಸುಮ್ಮನಿರು” ಗದರುತ್ತದೆ ಬುದ್ಧಿ.

stiched apple

 

 

 

 

srujan3“ಯಾಕೆ ಸುಮ್ನಿದ್ದೀಯೋ ಏನಾದ್ರೂ ಹೇಳೋ ಮನ್ಮಥಾ” ಮೌನ ಮುರಿದ ಹೂ ದನಿಯಲ್ಲಿ ಅದೇ ಮಾರ್ದವತೆ.

“ಜಾನ್, ಎಲ್ಲೋ ಇರುವ ಯಾವತ್ತೂ ಸಿಗದ ನನ್ನ ವೇದನೆಗೆ ನೀ ಫೀಲ್ ಮಾಡ್ಕೊಳ್ಳೋದನ್ನ ನಿಲ್ಲಿಸ್ತೀಯಾ”
(ಕೇಳುವವನಿಗೆ ಸ್ಪಷ್ಟ ನೆನಪಿದೆ ತಾನು ‘ಜಾನ್’ ಅಂತ ಕರೆಯೋದು ಅವಳಿಗೆ ಬಹಳ ಇಷ್ಟ ಮತ್ತು ಹಾಗೆ ಕರೀದೇ ತಿಂಗಳ ಮೇಲಾಯ್ತು.)

“ಹೇಳು ಜಾನ್, ನಿಲ್ಲಿಸ್ತೀಯಾ ? ಹಾಗಂತ ನಂಗೆ ಇವತ್ತೇ ಪ್ರಾಮಿಸ್ ಮಾಡ್ತೀಯಾ ?”

“ನಿನ್ನೂರಲ್ಲಿ ಸುನಾಮಿ ಬಂದಾಗ ನನ್ನೂರಲ್ಲಿ ಮಳೆ ಬೀಳುವುದು ನಿಲ್ಲುತ್ತದಲ್ಲ ಗೆಳೆಯಾ ಅವತ್ತು ಪ್ರಾಮಿಸ್ ಮಾಡ್ತೀನಿ”

ಕಾರಿನಲ್ಲಿ ಹಾಡು ಬದಲಾಗಿತ್ತು “ಯಾವ ಜನ್ಮದ ಮೈತ್ರಿ….”

ಅವನು ಕನ್ನಡಕ ತೆಗೆದು ಕರ್ಚೀಫ್ ಕೈಗೆತ್ತಿಕೊಂಡ.

ರೇಖೆ: ಸೃಜನ್

‍ಲೇಖಕರು admin

12 December, 2015

2 Comments

  1. ಮುಗಿಯದ ಮೌನ- GKN

    ಯವ್ವನದ ತುಡಿತಗಳನ್ನ, ಬಹಳ ಚೆನ್ನಾಗಿ ಕಟ್ಟಿ ಕೊಟ್ಟಿದ್ದೀರ,,,,,,,,,, ಕಣ್ಣೀರಾಗಿಸಿತು,,,,,, ಏನೆಂದು ಹೆಸರಿಡಬಹುದು ಈ ಚಂದ ಅನುಭವಕೆ,,,,,,,

    • Shama, Nandibetta

      Thanks GKN. ಬದುಕಿನ ಒಂದೊಂದು ತಿರುವುಗಳಲ್ಲಿ ಒಂದೊಂದು ಅನುಭವ. ನಮಗೆ ಆಪ್ತವೆನಿಸಿದ ಹೆಸರಿನಲ್ಲಿ ಪರಿಭಾವಿಸುತ್ತಾರೆ ಅನುಭವದ ಸಿಹಿ ಕಹಿಗಳನ್ನ feel ಮಾಡಿಕೊಳ್ಳುವದಷ್ಟೇ ನಮ್ಮ ಪಾಲಿಗೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading