ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವನಿಗ್ಗೊತ್ತು ನನ್ನ ರಮಿಸೋದು..

ಶಮ ನಂದಿಬೆಟ್ಟ 

ಯಾಕೋ ನಿನ್ನೆಯೆಲ್ಲ ಬರೀ ಬೋರು ಬೋರು ಅನಿಸ್ತಿತ್ತು. ಹೊತ್ತು ಮುಳುಗುತ್ತಿದ್ದಂತೆ ಇನ್ನೂ ಹೆಚ್ಚು. ನಿಸ್ಸಾರ ಸಂಜೆಯಲ್ಲಿ ನಿಸಾರರು ನೆನಪಾಗಿದ್ದರು. “ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ” ಗುನುಗುತ್ತಿದ್ದೆ.

ಗುಬ್ಬಿ ಯಾಕೋ ಬೇಜಾರಲ್ಲಿದೆ ಗೊತ್ತಾದವನ ಹಾಗೆ ಗೆಳೆಯನ ಫೋನ್. ಒಂದು ಮೆಸೇಜ್ ಮಾಡಿದರೆ ಮೂರು ದಿನದ ನಂತ್ರ ಉತ್ತರ ಕಳಿಸುವ ಭೂಪತಿ, ತುಂಬ ಕಡಿಮೆ ಮಾತಾಡುವವನು ಕರೆ ಮಾಡಿದ್ದು ಆಶ್ಚರ್ಯ… ಖುಷಿ… ಕೈಗೆತ್ತಿಕೊಂಡರೆ ಆ ಕಡೆಯಿಂದ ಕೇಳುತ್ತಿತ್ತು ಹಾಡು… “ಚೆಲುವೇ ಹೇಳು ಒಲವೇ… ಪ್ರೀತಿಯೊಂದೇ ಸಾಲದೇ…” ಬಹುಶಃ ಡ್ರೈವ್ ಮಾಡುತ್ತಿದ್ದ ಹಾಗೆ ಲಹರಿಗೆ ಬಿದ್ದಿದ್ದಾನೆ ಹುಡುಗ ಅಂದ್ಕೊಂಡು ಸುಮ್ಮನಿದ್ದೆ.

she“ರಾಣೀ… ಫ್ರೆಂಡ್ ಬರ್ತಿದಾನೆ. ಕರ್ಕೊಂಬರೋಕೆ ಬಸ್ ಸ್ಟ್ಯಾಂಡ್ ಕಡೆ ಹೋಗ್ತಿದ್ದೆ” ಅಂದ.

“ಹಾಗೇ ಈ ಕಡೆ ಬಂದು ನನ್ನೂ ಕರ್ಕೊಂಡು ಹೋಗೋ” ಕೀಟಲೆ ಮಾಡಿದರೆ “ನನ್ನೊಳಗೇ ಇರೋರ್ನ ಇನ್ನೆಲ್ಲಿಗೆ ರವಾನಿಸಲಿ” ಅಂದುಬಿಟ್ಟ.

“ನೀ ಎಷ್ಟು ಚೆಂದ ಮಾತಾಡ್ತೀಯೋ.. ಎಲ್ಲ ರೆಕಾರ್ಡ್ ಮಾಡಿಡಲಾ ?”

ಪ್ರಶ್ನೆಗೆ ಥಟ್ಟಂತ ಬಂತು ಉತ್ತರ “ಹಾಗೆಲ್ಲ ಏನಿಲ್ಲ; ನನ್ನ ಪ್ರೀತಿಯ ಅಮಲಿಗೆ ಬಿದ್ದ ನಿಂಗೆ ನಾ ಏನುಮಾತಾಡಿದ್ರೂ ಅಮೋಘ ಅನ್ಸುತ್ತೆ. ಒಂದು ಸಿಂಪಲ್ ಮಾತಿಗೆ ಅಷ್ಟೆಲ್ಲ ಅರ್ಥ ಹುಡುಕಬೇಡ ನೀನು”

“ಹೌದು ಪ್ರೀತಿಯ ಅಮಲೇರೋಕೆ ನಂಗಿನ್ನೂ ವಯಸ್ಸು ಹದಿನೆಂಟು ನೋಡು..” ರೇಗಿದೆ.
“ಉಹುಂ ಇಲ್ಲ ಹದಿನಾರು”
ಅವನಿಗ್ಗೊತ್ತು ನನ್ನ ರಮಿಸೋದು

“ನೀ ನಂಗೆ ಹಾಗೆಲ್ಲ ಅಪ್ಪಣೆ ಮಾಡೋಕಾಗಲ್ಲ. ಮಾತು ಆಡುವವರೆಗಷ್ಟೇ ನಿನ್ನದು. ಆಮೇಲೆ ಅದು ಸಹೃದಯ ಕೇಳುಗರದು. ಆದ್ದರಿಂದ ಗೆಳೆಯಾ ನಂಗೆ ಬೇಕಾದ ಹಾಗೆ ಅರ್ಥ ಮಾಡ್ಕೋತೇನೆ.”

ಇಷ್ಟು ಹೇಳಿದ್ದೇ ತಡ “ಯೂಜಿ ಗೊತ್ತಾ ನಿಂಗೆ ಅವರೂ ಹಿಂಗೇ ಹೇಳ್ತಾರೆ. ಮಾತು ಆಡುವವರೆಗಷ್ಟೇ. ಆಮೇಲೆ ಅದು ಅನಂತದಲ್ಲಿ ಲೀನವಾಗುತ್ತೆ. ಆಮೇಲೆ ಅದು ಯಾರ ಸೊತ್ತೂ ಅಲ್ಲ. ಆದ್ದರಿಂದ ಅದನ್ನು ಬರೆದಿಡುವ ರೆಕಾರ್ಡ್ ಮಾಡಿಡುವ ಪ್ರಯತ್ನವೇ ಮೂರ್ಖತನ. ಅವರ ಶಿಷ್ಯನೊಬ್ಬ ಜೀವಿತಾವಧಿ ಪೂರ ಕಷ್ಟಪಟ್ಟು ಅವರ ಮಾತುಗಳನ್ನು ಬರೆದಿಟ್ಟಿದ್ದನ್ನ ಸುಟ್ಟು ಹಾಕಿದ ಪುಣ್ಯಾತ್ಮ ಕಣೇ.”

ತಾನು ಓದಿದ ಸಬ್ಜೆಕ್ಟ್ ಮಾತ್ರವಲ್ಲ ಜಗತ್ತಿನ ಇನ್ನೆಷ್ಟೋ ವಿಚಾರಗಳನ್ನ ಅರೆದು ಕುಡಿದವನಿಗೆ ಮಾತಿಗೆ ಬರವಿಲ್ಲ. ಮಾತು ಸಾಗಿತ್ತು ಜಿಡ್ಡು ಕೃಷ್ಣಮೂರ್ತಿ, ಬುದ್ಧ, ಕೃಷ್ಣ, ಲೋಹಿಯಾ, ಕಬೀರ, ರೂಮಿಯಿಂದ ನೋಬೆಲ್ ಪ್ರಶಸ್ತಿ ವರೆಗೂ.
ಫ್ರೆಂಡ್ ಬಂದನೇನೋ.. ಫೋನಿಟ್ಟ.

ಬುದ್ಧಿವಂತನಿಗೆ ತಿಳಿಯದ ವಿಷ್ಯ ಒಂದಿತ್ತು. ಅವನ ಮಾತೇನು ಉಸಿರಿನ ಲಯವೂ ರೆಕಾರ್ಡ್ ಆಗುತ್ತಿರುತ್ತದೆ ಇಲ್ಲಿ.. ನನ್ನ ಮನಸಿನ ಮೆಮೊರಿ ಕಾರ್ಡ್ ಒಳಗೆ; ಅದು ನನ್ನ ಸೊತ್ತು… ನನ್ನದು ಮಾತ್ರ ಮತ್ತು ನನಗೆ ಬೇಕಾದಾಗೆಲ್ಲ ರಿವೈಂಡ್… ಪ್ಲೇ…

‍ಲೇಖಕರು Admin

17 February, 2016

2 Comments

  1. ಪ್ರೊ.ಬಸವರಾಜ ಪುರಾಣಿಕ

    ಪ್ರಸಿದ್ಧ ಉರ್ದು ಕವಿ ಗಾಲಿಬ ಒಂದೆಡೆ ಹೀಗೆ ಹಾಡಿದ್ದಾನೆ:
    “ಶಮಾ ಹರ್ ರಂಗ ಮೆ ಜಲತಿ ಹೈ ಸಹರ ಹೋನೇ ತಕ ”
    ನಿಮ್ಮ ಕವಿತೆ ಅಷ್ಟು ಚೆಂದವಾಗಿದೆ, ಗಾಳಿಗಿಂತ ತೆಳ್ಳಗೆ, ಬೆಳಕಿಗಿಂತ ಬೆಳ್ಳಗೆ,
    ಮನಸಿನ ಮೆಮರಿ ವೃತ್ತಗಳಿಗಿಂತ ಕೋಮಲವಾಗಿ ನವಿರಾಗಿ ಇದೆ.
    ಮಂಜು ಕರಗಿ ಹೋಗುವಾಗ ಹುಲ್ಲ ಮೇಲೆ ಇಬ್ಬನ್ನಿ ಬಿಡುವ ಹಾಗೆ.
    ನಿಮಗೆ ಉರ್ದು ಪರಿಚಯವಿದೆಯೆ? ಪರ್ವೀನ ಸಾಕಿರ ಎಂಬ ವಿಸ್ಮಯ ಚೇಂದದ ಕವಿತೆ ಬರೆದು ಹೋಗಿರುವಳು.
    ಅವುಗಳನ್ನು ಓದು,ಶಮ. ನಿಮ್ಮ ಕವಿತೆಗೆ ಹೊಸ ನಲಿವು-ಒಲವು-ನವರು ದೊರೆಯುವುದು.
    ನಿಮ್ಮ ಬರಹ ಮುಂಬರಿಯಲಿ!

  2. Renuka ramananda

    ಬೆಸ್ಟ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading