ಅವಧಿ Exclusive: ಕೆಂಜಾರು ಕಣಿವೆಯಲ್ಲಿ ಉರಿದುಹೋದ ದುಬೈ ಕನಸುಗಳ ನೆನೆದು..

 

ಅವಧಿ Exclusive

By ಚಿದಂಬರ ಬೈಕಂಪಾಡಿ 

ಸುಲಭವಾಗಿ ಮರೆಯುವ ಘಟನೆ ಆಗಿದ್ದರೆ ಮರೆಯಬಹುದಿತ್ತು, ಆದರೆ ಹೇಗೆ ಮರೆಯಲು ಸಾಧ್ಯ ?.

ಕೆಂಜಾರು ಕಣಿವೆಯಲ್ಲಿ ಬೆಳ್ಳಂಬೆಳಿಗ್ಗೆ ಕಾಣಿಸಿಕೊಂಡ ದಟ್ಟವಾದ ಹೊಗೆ, ಧಗಧಗಿಸುವ ಬೆಂಕಿಯ ಜ್ವಾಲೆ, ಬಚಾವೋ… ಬಚಾವೋ ಎನ್ನುವ ಆಕ್ರಂಧನ, ಮತ್ತೆ ಮತ್ತೆ ಸಂಭವಿಸಿದ ಸ್ಪೋಟವನ್ನು.

ಮುಗಿಲು ಸುರಿಸಿದ ಹನಿಮಳೆ, ಅಗ್ನಿಶಾಮಕ ದಳಗಳ ಕಾರ್ಯಾಚರಣೆ, ಸಾಗರದಂತೆ ಹರಿದು ಬಂದ ನೂರಾರು ಸಾರ್ವಜನಿಕರ ದಂಡು ಕಣಿವೆಗೆ ಲಗ್ಗೆಯಿಟ್ಟಿತು. ಆಗ ಕೆಂಜಾರು ಕಣಿವೆಯನ್ನು ಮೌನ ಆವರಿಸಿಕೊಂಡಿತ್ತು. ಆ ಕಣಿವೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು ದೂರದ ದುಬೈನಿಂದ 166 ಮಂದಿಯನ್ನು ಹೊತ್ತುತಂದ ಏರ್‍ಇಂಡಿಯಾ ಎಕ್ಸ್ ಪ್ರೆಸ್ ವಿಮಾನ.

ಮೇ 22, ಶನಿವಾರ, 2010 ಮುಂಜಾನೆ 6.40ರ ಹೊತ್ತಿಗೆ ಮಂಗಳೂರು ಜಾಗತಿಕಮಟ್ಟದಲ್ಲಿ ಸುದ್ದಿಯಾಗಿಬಿಟ್ಟಿತು. ರಾಷ್ಟ್ರಮಟ್ಟದ ಟಿ.ವಿ ಚಾನೆಲ್‍ಗಳು ಬ್ರೇಕಿಂಗ್ ನ್ಯೂಸ್ ಸಿಡಿಸಿದವು. ಅಂತರ್ಜಾಲದಲ್ಲಿ ಕೆಂಜಾರು ಕಣಿವೆಯ ದೃಶ್ಯಗಳು ಮೂಡಿಬಂದವು. ಇಷ್ಟಾದರೂ ಮಂಗಳೂರು ವಿಮಾನ ನಿಲ್ದಾಣದ ಹೊರಗೆ ಕಾಯುತ್ತಿದ್ದರು ದೂರದ ದುಬೈನಿಂದ ಕನಸು, ಧನ-ಕನಕ, ಎದೆ ತುಂಬಿಸಿಕೊಡುವಷ್ಟು ಬತ್ತದ ಪ್ರೀತಿಯ ಮೂಟೆ ಹೊತ್ತು ಬರುವವರಿಗಾಗಿ. ವಿಮಾನ ಆಗಸದಿಂದ ಹಾರಿಕೊಂಡು ಕೆಳಮುಖವಾಗುತ್ತಿದ್ದುದನ್ನು ಕಂಡಿದ್ದರು. ಬರಬಹುದು ಆ ತುದಿಗೆ ಹೋಗಿ ಈ ತುದಿಗೆ ವಿಮಾನ, ಅದರೊಳಗಿರುವ ನಮ್ಮವರು ಹೀಗೆ ಮನಸ್ಸಿನೊಳಗೆ ಅದಮ್ಯ ಸಂತಸದ ಹೊನಲು.

ಮತ್ತೂ ಬರಲಿಲ್ಲ ವಿಮಾನ, ಆದರೆ ವಿಮಾನ ನಿಲ್ದಾಣದ ಸಿಬ್ಬಂದಿಗಳು, ಅವರ ವಾಹನಗಳು ತವಕಪಡುತ್ತಿದ್ದರು, ಸೈರನ್ ಮೊಳಗುತ್ತಿತ್ತು. ಸ್ವಾಗತಿಸಲು ಬಂದಿದ್ದವರ ಮೊಬೈಲ್‍ಗಳು ಕಿರುಚಲಾರಂಬಿಸಿದವು. ಬ್ರೇಕಿಂಗ್ ನ್ಯೂಸ್ ಹೆಡ್‍ಲೈನ್‍ಗಳು ಎಸ್‍ಎಂಎಸ್ ಸಂದೇಶಗಳಾಗಿ ಹರಿದಾಡಿದವು, ಆಕ್ಷಣ ವಿಮಾನ ನಿಲ್ದಾಣದಲ್ಲಿ ಚೀತ್ಕಾರ, ಅಳುವಿನೊಂದಿಗೆ ಕೆಂಜಾರಿನ ಕಣಿವೆಯತ್ತ ವಾಹನಗಳಲ್ಲಿ ಬಂಧುಗಳ ದಂಡೇ ಬಂತು-ಹೀಗೆಂದು ಬಾಡಿಗೆ ಕಾರಿನ ಚಾಲಕ ಹೇಳುವಾಗ ಅವನ ಬಂಧುಗಳ್ಯಾರು ಆ ವಿಮಾನದಲ್ಲಿರದಿದ್ದರೂ ಅವನು ಆ ಹೊತ್ತಿಗೆ ಅವನಿಗೆ ಗೊತ್ತಿಲ್ಲದಂತೆಯೇ ಸಂತ್ರಸ್ಥಕುಟುಂಬದರ ಸದಸ್ಯನಾಗಿಬಿಟ್ಟಿದ್ದ.

ಇತ್ತ ಕಡಿದಾದ ಕಣಿವೆಗೆ ದಾರಿಯಿಲ್ಲ, ಗಿಡಗಂಟಿ, ಮುಳ್ಳಿನಪೊದೆಯನ್ನು ಮೆಟ್ಟಿಕೊಂಡೇ ಜನರು ನುಗ್ಗಿದರು. ಜೆಸಿಬಿ ಯಂತ್ರಗಳು ಬಂದು ಮರಗಳನ್ನು ಉರುಳಿಸಿದವು, ನೆಲ ಬಗೆದು ಇಳಿಜಾರಿನಲ್ಲಿ ಕಾಲುದಾರಿ ಮಾಡಿದವು. ಎಲ್ಲಿ ನೋಡಿದರೂ ಜನಜಾತ್ರೆ. ಹೊಗೆಯಾಡುತ್ತಿರುವ ವಿಮಾನದ ಹತ್ತಿರಕ್ಕೆ ಹೋಗಲು ಹೆದರಿಕೆ ದೂರನಿಂತವರಿಗೆ, ಆದರೆ ಸಹಾಸಿಗರು ಉರಿದು ಉಳಿದ ವಿಮಾನದ ಅವಶೇಷಗಳನ್ನು ಜಾಲಾಡಿದರು. ನರಪಿಳ್ಳೆಯೂ ಕಣ್ಣಿಗೆ ಕಾಣಿಸುತ್ತಿಲ್ಲ. ಅವಶೇಷಗಳನ್ನು ಸರಿಸಿದಾಗ ಕಂಡದ್ದು ಮರ ಅರ್ಧ ಉರಿದು ಉಳಿದ ಕೊರಡುಗಳಂತೆ ಜೀವಗಳು.

ಸ್ಟ್ರೆಚ್ಚರ್‍ಗಳು ಒಂದೊಂದಾಗಿ ಕಡಿದಾದ ಕಣಿವೆಯಿಂದ ಮೇಲಕ್ಕೆ ಬರುತ್ತಿದ್ದಂತೆಯೇ ನೆರೆದವರು ತಮ್ಮವರು ಬದುಕಿರಲೆಂದು ಹಾರೈಸುತ್ತಿದ್ದರು ರೋಧನದ ನಡುವೆಯೂ. ಆದರೆ ಆ ಸ್ಟ್ರೆಚ್ಚರ್‍ನಲ್ಲಿದ್ದುದುದು ಗಾಯಾಳುವಲ್ಲ ಅಥವಾ ಬದುಕುಳಿದ ಜೀವವೂ ಅಲ್ಲ. ಕರಟಿಹೋದ ಕರಕಲು ದೇಹ. ಯಾರದಿರಬಹುದು ಎನ್ನುವುದಷ್ಟೇ ಆಕ್ಷಣದ ಕುತೂಹಲ.

ಸುಳ್ಯದ ನೆಟ್ಟಣ ಪರಿಸರದ ಕಾಡಿಗೆ ಬೆಂಕಿ ಬಿದ್ದಿತ್ತು 1985-86ರಲ್ಲಿ, ಭಾರೀ ಕಾಡ್ಗಿಚ್ಚು ಎನ್ನುವ ಸುದ್ದಿಯಾಯಿತು. ಪತ್ರಕರ್ತನಾಗಿ ನೆಟ್ಟಣದ ಕಾಡಿನೊಳಗೆ ಸುತ್ತಾಡಿದಾಗ ಮರಗಳನ್ನು ಕಡಿದು ಕುತ್ತಿಗಳೂ ಗೊತ್ತಾಗಬಾರದೆಂದು ಕಾಡುಗಳ್ಳರು ಬೆಂಕಿ ಹಚ್ಚಿದ್ದರು. ಆದರೂ ಆ ದಟ್ಟಡವಿಯಲ್ಲಿ ಉರಿದು ಉಳಿದ ಕೊರಡುಗಳಿದ್ದವು, ಇದ್ದಿಲಿನಂತೆ. ಗಂಧದ ಮರವೇ, ಸಾಗುವಾನಿಯೇ, ಹೆಬ್ಬಲಸೇ ಎನ್ನುವುದನ್ನು ಗುರುತಿಸಲೂ ಅಸಾಧ್ಯವಾಗಿತ್ತು. ಅಂದು ಕಂಡ ನೆಟ್ಟಣದ ಕಾಡಿನ ಕೊರಡುಗಳಂತೆ ದುರಂತಕ್ಕೀಡಾದ ವಿಮಾನದಲ್ಲಿದ್ದವರ ದೇಹಗಳು ಕಂಡವು. ಅದು ಹೆಣ್ಣೇ ಅಥವಾ ಗಂಡೇ ಎನ್ನುವುದೂ ಕೂಡಾ ಗೊತ್ತಾಗುತ್ತಿರಲಿಲ್ಲ ಅಂದಮೇಲೆ ಊಹೆಮಾಡಿಕೊಳ್ಳಿ ಹೇಗೆಬೇಕಾದರೂ.

ಆ್ಯಂಬುಲೆನ್ಸ್ ಗಳು ಸುಟ್ಟು ಕರಕಲಾದ ದೇಹಗಳನ್ನು ತುಂಬಿಸಿಕೊಳ್ಳುವಾಗ ಅಲ್ಲಿ ನೆರೆದಿದ್ದವರ ಕಣ್ಣುಗಳು ಬದುಕಿರುವವರಿಗಾಗಿ ತಡಕಾಡುತ್ತಿದ್ದವು, ಹಾಗೆ ಬದುಕಿದವರಲ್ಲಿ ನಮ್ಮವರಿರಲಿ ಎನ್ನುವ ಆಸೆ, ಆದರೆ ಕಣಿವೆಯಿಂದ ಮೇಲಕ್ಕೆ ಬರುತ್ತಿದ್ದುದು ಸುಟ್ಟು ಹೋದ ಕರಕಲು ದೇಹಗಳು ಮಾತ್ರ. ಬದುಕಿನಲ್ಲಿ ಇದಕ್ಕಿಂತ ಭಯಾನಕವಾದ ದೃಶ್ಯಗಳನ್ನು ಕಾಣಲು ಸಾಧ್ಯವೇ ಇಲ್ಲ ಅನ್ನಿಸಿತು ಆ ಕರಕಲು ದೇಹಗಳನ್ನು ಕಂಡಾಗ. ಅದು ಮಗುವಿನ ದೇಹವೋ, ಇಳಿವಯಸ್ಸಿನ ಗಂಡಸೋ ಅಥವಾ ಹೆಂಗಸೋ ? ಒಂದೂ ಗೊತ್ತಾಗುತ್ತಿರಲಿಲ್ಲ ಆ ಸಂದರ್ಭದಲ್ಲಿ. ರುಂಡದ ಭಾಗವೇ ಇಲ್ಲ, ಕೆಲವಕ್ಕೆ ಒಂದೇ ಕಾಲು, ಕಾಲು ಬೇರೆ-ಕೈ ಬೇರೆ ಅದು ಆ ದೇಹದ್ದೇ ಕಾಲು-ಕೈ ಇರಬಹುದೇ ಸಂಶಯ ಮಾತ್ರ, ಉತ್ತರಕ್ಕೆ ಯಾರನ್ನು ಕೇಳಬೇಕು?.

ವಿಮಾನ ದುಬೈನಿಂದ ಹಾರುತ್ತ ಮಂಗಳೂರು ವಿಮಾನ ನಿಲ್ದಾಣ ತಲಪುತ್ತಿದೆ ಎನ್ನುವಾಗ `ಪ್ರಯಾಣಿಕರ ಗಮನಕ್ಕೆ-ಏರ್ ಇಂಡಿಯಾ ಎಕ್ಸ್‍ಪ್ರೆಸ್‍ಪ್ರಯಾಣ ಸುಖಕರವಾಗಿತ್ತು. ಕೆಲವೇ ಕ್ಷಣಗಳಲ್ಲಿ ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ, ಎಲ್ಲರೂ ನಿಮ್ಮ ಸೀಟ್ ಬೆಲ್ಟ್ ಗಳನ್ನು ಕಟ್ಟಿಕೊಳ್ಳಿ’ ಎನ್ನುವ ಸಂದೇಶವನ್ನು ಪ್ರಯಾಣಿಕರಿಗೆ ಕೊಟ್ಟಿದ್ದಾರೆ. ಆಗ ಎಲ್ಲರೂ ಸೀಟ್‍ಬೆಲ್ಟ್ ಕಟ್ಟಿಕೊಂಡಿದ್ದಾರೆ. ಆದ್ದರಿಂದಲೇ ವಿಮಾನಗಳ ಅವಶೇಷಗಳಿಂದ ಹೊರತೆಗೆಯಲಾದ ಕರಕಲು ದೇಹಗಳು ಸೀಟ್‍ಬೆಲ್ಟ್ ಕಟ್ಟಿಕೊಂಡು ಕುಳಿತಂಥ ಸ್ಥಿತಿಯಲ್ಲಿದ್ದವು. ಕುಳಿತಲ್ಲೇ ಉರಿದು ಹೋಗಿದ್ದ ಕರಕಲುಗಳನ್ನು ಸೀಟುಗಳಿಂದ ಬಿಡಿಸಿ ತೆಗೆಯುವುದೇ ದೊಡ್ಡ ಸಾಹಸವಾಗಿತ್ತು, ಅವಸರ ಮಾಡಿ ಎಳೆದರೆ ಉಳಿದ ದೇಹದ ಭಾಗಗಳೂ ಬಿಡಿ ಬಿಡಿಯಾಗುತ್ತಿದ್ದವು.

ಈ ಕಾರ್ಯಾಚರಣೆ ನಡೆಯುತ್ತಿದ್ದಾಗಲೇ ಅಚ್ಚರಿಕರ ಸುದ್ದಿಗಳೂ ಬರತೊಡಗಿದವು. ವಿಮಾನ ಅವಘಡಕ್ಕೀಡಾದಾಗ ಕೆಲವರು ವಿಮಾನದಿಂದ ಹಾರಿ ಬದುಕುಳಿದಿದ್ದಾರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಲು ಮುರಿದು ಕೊಂಡಿದೆಯಂತೆ, ಸುಟ್ಟ ಗಾಯಗಳಾಗಿವೆಯಂತೆ. ಯಾರಿರಬಹುದು ಕುತೂಹಲ, ಆಸ್ಪತ್ರೆಗಳಿಗೆ ದೌಡು.

ನಿಜ ಐದು ಮಂದಿ ಬದುಕಿ ಉಳಿದಿದ್ದರು. ಸುಟ್ಟ ಗಾಯಗಳಾಗಿಳಿದ್ದವು. ಮೂಳೆಮುರಿತವೂ ಇತ್ತು. ಗಾಯಾಳುಗಳಿಗೆ ಚಿಕಿತ್ಸೆಯಾಗುತ್ತಿತ್ತು. ಬದುಕಿ ಉಳಿದವರ ಬಂಧುಗಳ ಮುಖದಲ್ಲಿ ಧನ್ಯತೆಯಿತ್ತು. ಧನಕನಕ ಇಲ್ಲದಿದ್ದರೂ ಪರವಾಗಿಲ್ಲ ಬದುಕಿ ಉಳಿದರಲ್ಲಾ ಅದೇ ಸಾಕು ಎನ್ನುವ ಸಂತೃಪ್ತಿಯ ಮಾತುಗಳೂ ಕೇಳಿಸಿದವು.

ಮತ್ತೆ ಕೆಂಜಾರಿನ ಕಣಿವೆಯತ್ತ ಬಂದಾಗ ಇಳಿಹೊತ್ತು. ಜನಜಾತ್ರೆಯಲ್ಲಿ ಅಳುವವರು, ಗೋಳಾಡುವವರು, ಮೈಯೆಲ್ಲಾ ಕೆಸರು ಮಾಡಿಕೊಂಡು ಕರಕಲು ದೇಹಗಳನ್ನು ಸಾಗಿಸುವುದರಲ್ಲಿ ನಿರತರಾಗಿದ್ದರು. ತುಂಡು ಬ್ರೆಡ್ಡನ್ನು ಬೇರೆಯವರಿಂದ ಬಾಯಿಗೆ ಹಾಕಿಸಿಕೊಳ್ಳುತ್ತಿದ್ದ ಕಾರ್ಯಾಚರಣೆಯ ಮಂದಿಯ ಮುಖ ಈಗಲೂ ಕಣ್ಣಿಗೆ ಕಟ್ಟುತ್ತದೆ.

ದುರ್ನಾತ ಬೀರುವ ಅರೆಬೆಂದ ದೇಹಗಳನ್ನು ಸಾಗಿಸುವುದನ್ನು ದೂರದಲ್ಲಿ ನಿಂತು ನೋಡುವುದೇ ಅಸಹನೀಯವಾಗಿತ್ತು. ಆದರೆ ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಧರಿಸಿ ಕಾರ್ಯಾಚರಣೆಯಲ್ಲಿದ್ದವಿರಿಗೆ ಮುಸ್ಸಂಜೆಯಲ್ಲಿ ಮತ್ತೊಂದು ಅಚ್ಚರಿ. ತುಂಡಾಗಿ ಸಿಡಿದು ನೆಲದಲ್ಲಿ ಹೂತುಹೋಗಿದ್ದ ರೆಕ್ಕೆಯ ಕೆಳಭಾಗದಲ್ಲಿ ಮತ್ತೆ ಮೂರುಮಂದಿ ಬದುಕಿ ಉಳಿದಿದ್ದರು. ಅವರ ಧ್ವನಿ ಕ್ಷೀಣಿಸಿತ್ತು. ಮೇಲಕ್ಕೆ ತಂದು ಪ್ರಥಮ ಚಿಕಿತ್ಸೆ ಕೊಡುತ್ತಲೇ ಆ್ಯಂಬುಲೆನ್ಸ್ ಸೈರನ್ ಮೊಳಗಿಸಿಕೊಂಡು ಆಸ್ಪತ್ರೆಗೆ ದೌಡಾಯಿಸಿತು.

ಹೀಗೆ ಈ ದುರಂತದಲ್ಲಿ ಬದುಕಿ ಉಳಿದವರು ಎಂಟು ಮಂದಿ. ಸಂಜೆ ಏಳು ಗಂಟೆ ಹೊತ್ತಿಗೆ 158 ಮಂದಿಯ ಸುಟ್ಟದೇಹಗಳು ಸಿಕ್ಕವು, ಆದ್ದರಿಂದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರ ಯಾದಿಯಂತೆ ಒಟ್ಟು ಪ್ರಯಾಣಿಕರು 166, ಬದುಕಿ ಉಳಿದವರು ಎಂಟು ಮಂದಿ, ರಕ್ಷಣಾ ಕಾರ್ಯಾಚರಣೆ ಸ್ಥಗಿತ.

ಸುಟ್ಟ ದೇಹಗಳನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ಮಾಡಲಾಗುತ್ತಿತ್ತು. ಸುಟ್ಟುಹೋಗಿದ್ದ ಕರಕಲುಗಳನ್ನು ಸಂಬಂಧಿಕರು ಗುರುತಿಸಲು ಹೆಣಗುತ್ತಿದ್ದರು. ಮೈಮೇಲೆ ಬಟ್ಟೆಯ ತುಂಡೂ ಇಲ್ಲ. ಆಸ್ಪತ್ರೆ ಸಿಬ್ಬಂದಿಗಳು ಸತ್ತವರ ಸಂಬಂಧಿಕರು ಗುರುತಿಸಿದ ಕರಕಲುಗಳಿಗೆ ಹೆಸರು ಬರೆದು ಟ್ಯಾಗ್ ಹಾಕುತ್ತಿದ್ದರು.

ಆಸ್ಪತ್ರೆಯಲ್ಲಿ ಸಂಬಂಧಿಕರನ್ನು ಕಳೆದುಕೊಂಡವರ ಚೀರಾಟ, ಗೋಳಾಟ ಮುಗಿಲುಮುಟ್ಟಿತ್ತು. ಸುಟ್ಟ ಕರಕಲು ದೇಹಗಳನ್ನು ಆ್ಯಂಬುಲೆನ್ಸ್ ಗಳಲ್ಲಿ ಒಯ್ಯುವಾಗಿನ ದೃಶ್ಯಗಳು ಹೃದಯವಿದ್ರಾವಕ. ಗುರುತಿಸಲಾಗದ ದೇಹಗಳು, ಗುರುತಿಸಿದ ದೇಹಗಳು, ಗಂಡು, ಹೆಣ್ಣು ವಿಂಗಡಿಸಿಡಲಾಗಿತ್ತು. ಹಾಗೆ ಅಲ್ಲಿ ಬಿದ್ದುಕೊಂಡಿದ್ದ ಕರಕಲುಗಳನ್ನು ನೋಡಿದಾಗ ಒರಿಜಿನಲ್ ಮುಖ, ರೂಪ ಹೇಗಿತ್ತು ?, ಅದು ಅವನೇ ?, ಅವಳೇ ? ನನ್ನನ್ನೇ ನಾನು ಕೇಳಿಕೊಂಡೆ. ಆ ನಗು ಮುಖ, ಸುಂದರ ರೂಪ, ಶ್ರೀಮಂತಿಕೆ ಕಲ್ಪಿಸಿಕೊಂಡೆ. ನಿಜಕ್ಕೂ ನಾನು ಇಂತಹ ಈ ಬರಹ ಬರೆಯುತ್ತೇನೆಂದು ಕೂಡಾ ಅಂದುಕೊಂಡಿರಲಿಲ್ಲ, ಇದು ನಮ್ಮ ನಡುವೆಯೇ ನಡೆದ ಟ್ರ್ಯಾಜಿಡಿ.

‍ಲೇಖಕರು avadhi

May 19, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: