‘ಅವಧಿ’ ಬೆಸ್ಟ್ ಬ್ಲಾಗ್: ಇಟ್ಟಿಗೆ ಸಿಮೆಂಟು

ಇವತ್ತಿನ ಆಯ್ಕೆ: ಇಟ್ಟಿಗೆ ಸಿಮೆಂಟು

ಕೆಲವೊಂದು ಬ್ಲಾಗುಗಳನ್ನು ಪರಿಚಯಿಸುವ ಅಗತ್ಯವಿರುವುದಿಲ್ಲ. ಸಮಾರಂಭಗಳಲ್ಲಿ ಪ್ರಸಿದ್ಧ ಅತಿಥಿಗಳನ್ನು ಪರಿಚಯಿಸುವಾಗ ’ಇವರನ್ನು ಪರಿಚಯಿಸೋ ಅಗತ್ಯವಿಲ್ಲ, ಆದರೂ…’ ಅಂತಾರಲ್ಲ, ಹಾಗೆ ಇಲ್ಲೂ!

ಪ್ರಕಾಶ್ ಹೆಗಡೆ ಬ್ಲಾಗಿಗರ ಮನೆಮಾತು. ಪ್ರಕಾಶಣ್ಣ, ಪಕ್ಕು ಮಾವ, ಸಜ್ಜನ ಬ್ಲಾಗಿಗ, ಇಟ್ಟಿಗೆ-ಸಿಮೆಂಟಣ್ಣ, ತುಂಬಾ ಸೆಂಟಿಮೆಂಟಣ್ಣ ಅಂತೆಲ್ಲ ಏನೇ ಅಂದರೂ ಅದು ಪ್ರಕಾಶ್ ಹೆಗಡೆಯವರ ಬಣ್ಬಬಣ್ಣದ ಬ್ಲಾಗಿಗೆ ಸಂಬಂಧಿಸಿದ್ದು. ಇವರು ಪುಸ್ತಕ ಮಾಡಿದರೆ ಅದಕ್ಕೆ ಹೆಸರೇ ಬೇಡ. ಅಥವಾ ಸುಮ್ನೆ ಇದೇ ಇದರ ಹೆಸರು ಎಂದರೂ ಸಾಕು, ಕೊಳ್ಳುವವರ ಪ್ರೀತಿ ಪೂರ. ಅತಿಹೆಚ್ಚು ಫಾಲೋವರುಗಳನ್ನು ಹೊಂದಿರುವ ಕನ್ನಡದ ಬ್ಲಾಗು ಇಟ್ಟಿಗೆ-ಸಿಮೆಂಟು. ಕಾಮನಬಿಲ್ಲಾದರೂ ಬಣ್ಣಗಳನ್ನು ಕಳಚೀತು, ಆದರೆ ಇವರ ಬ್ಲಾಗು ಸದಾ ವರ್ಣರಂಜಿತ. ಇಲ್ಲಿ ಪ್ರತಿ ವಾಕ್ಯವೂ ಒಂದು ಪ್ಯಾರಾಗ್ರಾಫು, ಪ್ರತಿ ಪ್ಯಾರಾದಲ್ಲೂ ಮಿನುಗುವ ಚುಕ್ಕಿಗಳು. ’ನಾನು ಬರೆದ ಗದ್ಯವನ್ನು ನನ್ನ ಮಗನೇ ಪದ್ಯ ಅಂತ ಹಾಸ್ಯ ಮಾಡ್ತಾನೆ’ ಅಂತ ಅವರೇ ಬರೆದುಕೊಳ್ಳುತ್ತಾರೆ. ಮುಗ್ದ ಮತ್ತು ಮುಕ್ತ ಶೈಲಿ ಪ್ರಕಾಶರದ್ದು. ಪ್ರಕಾಶ್ ಒಬ್ಬ ಕ್ರಿಯೇಟಿವ್ ಫೋಟೋಗ್ರಾಫರ್ ಸಹ. ಅದೆಷ್ಟೋ ಯುವತಿಯರ ಕಿವಿಯ ಓಲೆಗಳು ಇಲ್ಲಿ ಹೊಳೆದಿವೆ. ಇವರ ಬರಹಗಳಲ್ಲಿ ಬರುವ ನಾಗು, ರಾಜಿ, ಗಪ್ಪತಿ, ಸೀತಾಪತಿ ಇತ್ಯಾದಿ ಪಾತ್ರಗಳು ಓದುಗರಿಗೆಲ್ಲ ಚಿರಪರಿಚಿತ.

ಹಾಗೆಂದೇ ಇವರು ಏನನ್ನಾದರೂ ಬರೆದು ’ಸಶೇಷ’ ಎಂದರೆ ಮುಂದಿನ ಕಂತಿಗಾಗಿ ಎಲ್ಲರೂ ಕಾಯುತ್ತಾರೆ. ಬೇಗ ಬರೀರಿ ಅಂತ ಒತ್ತಾಯಿಸುತ್ತಾರೆ.

-‘ಅವಧಿ’ಗಾಗಿ ಸುಶ್ರುತ ದೊಡ್ಡೇರಿ

A CONTRACTOR BY PROFESSION,INTERIOR WORKS, PHOTOGRAPHY, READING KANNADA BOOKS GOOD CINEMA, ARE MY HOBBIES..

* * *

ಪ್ರಕಾಶರ ಒಂದು ಬಣ್ಣಬಣ್ಣದ ಸಶೇಷ ಪೋಸ್ಟು:

ಎಲ್ಲವೂ.. ಎಲ್ಲರೂ.. ಇದ್ದರೂ.. ನಾವು ಮಾತ್ರ ಒಂಟಿ….

ಎಲ್ಲವೂ ಸರಿ ಇದ್ದು…

ಸಂತೋಷ.. ನಗು ಜಾಸ್ತಿಯಾದಾಗ …

ನನಗೆ ಒಳಗೊಳಗೆ ಸಣ್ಣ ಆತಂಕ ಶುರುವಾಗುತ್ತದೆ..

ಅದು ನನ್ನ  ಪುಸ್ತಕ  ಬಿಡುಗಡೆಯ ದಿನಗಳು..

ಸಂತೋಷ.. ಸಡಗರ.. ಸಂಭ್ರಮ…!

ರಾತ್ರಿ ಸರಿಯಾಗಿ ನಿದ್ದೆ ಕೂಡ ಬರುವದಿಲ್ಲವಾಗಿತ್ತು..

ಕಾರ್ಯಕ್ರಮವೆಲ್ಲ ಹೇಗಾಗಬಹುದು ಎನ್ನುವ ಆತಂಕ..!

ರಾತ್ರಿ ಸುಮಾರು ಒಂದು ಗಂಟೆ…

ಫೋನ್.. !!

ನೋಡಿದೆ.. ನಾಗು ಮನೆಯಿಂದ.. !!

ಲಗುಬಗೆಯಿಂದ. .. ಕಾಲ್ ತೆಗೆದು ಕೊಂಡೆ..

ನಾಗು ಹೆಂಡತಿ… ಅಳುತ್ತಿದ್ದಳು..!

“ಪ್ರಕಾಶು ಭಾವ..

ಇವರಿಗೆ ಹಾರ್ಟ್ ಎಟಾಕ್ ಆಗಿದೆ..ಜಲ್ದಿ ಬಾ..!!..”

ನನಗೆ ಗಾಭರಿಯಾಯಿತು..!!

“ಬರ್ತೀನಿ..

ಹೆದರ ಬೇಡ.. ಅಂಬ್ಯುಲೆನ್ಸ್ ಕಳಿಸ್ತೀನಿ..

ನಾನು ಬರುವತನಕ ಕಾಯಬೇಡಿ.. “

ಎಂದು ಲಗುಬಗೆಯಿಂದ ಫೋನ್ ಡೈರಕ್ಟರಿ ತಡಕಾಡಿ …

ಅಂಬ್ಯುಲೆನ್ಸ್ ಗೊತ್ತು ಮಾಡಿದೆ…!

ನನಗೆ ದಿಕ್ಕು ತೋಚದಂತಾಯಿತು.. ದಿಗ್ಮೂಢನಾಗಿ ಕುಳಿತೆ…

“ನೀವು ಒಬ್ಬರೆ ಹೋಗುವದು ಬೇಡ.. ನಾನು ಬರ್ತೀನಿ..”

ನನ್ನಾಕೆ ಅಂದಳು..

ಬಹುಶಃ  ನಾನು ಅಧೀರನಾಗಬಹುದು ಅಂತ..

“ಬೇಡ..

ಈ ಅಪರಾತ್ರಿಯಲ್ಲಿ ನೀನು ಬರುವದು ಬೇಡ..

ನಾನು ಹೋಗ್ತೀನಿ.. ಚಿಂತೆ ಬೇಡ..

ಅಲ್ಲಿ ಹೋದ ಮೇಲೆ ಫೋನ್ ಮಾಡ್ತೇನೆ..”

ಹಾಗೆ ಎದ್ದು ಹೊರಟೆ..

“ಕ್ಯಾಷ್.. ಲೈಸನ್ಸ್, ಮೊಬೈಲ್.. ತಗೊಳ್ಳಿ…”

ನನ್ನಾಕೆ ಬ್ಯಾಗ್ ಕೊಟ್ಟಳು.. ನಾನು ಹೊರಟೆ..

“ಕಾರ್ ಸ್ಪೀಡ್ ಬಿಡಬೇಡಿ… ನಾಗೂಗೆ ಏನೂ ಆಗುವದಿಲ್ಲ..”

ಅವಳು ನನ್ನ ಧೈರ್ಯಕ್ಕೆ ಹೇಳಿದ ಮಾತುಗಳು..

ನನಗೆ ಗೊತ್ತಾಗುತ್ತಿತ್ತು…

ನಾಗುವಿಗೆ ಹಾರ್ಟ್ ಎಟಾಕ್.. !!

ನಾನು.. !

ನನ್ನ ಗೆಳೆಯರು…!

ನಾವೆಲ್ಲ ಸಾಯುವ ದಿನಗಳು ಹತ್ತಿರ ಬಂದುಬಿಟ್ಟೀತಾ..?

ಇಷ್ಟು ಬೇಗ….?

ನನ್ನ ನಾಗು ಸಾಯ್ತಾನಾ?? !!

ಅವನ ಸಾವು ನಾನು ನೋಡಬೇಕಾ..?

ಕಣ್ಣೆಲ್ಲ ಮಂಜಾದವು.. ಕಾರನ್ನು ಪಕ್ಕಕ್ಕೆ ಹಾಕಿಕೊಂಡೆ..

ಸ್ವಲ್ಪ ಹೊತ್ತಿನ ನಂತರ ಧೈರ್ಯ ತಂದುಕೊಂಡೆ..

ನನಗೆ  ನಾನೇ ಸಮಾಧಾನ ಮಾಡಿಕೊಂಡೆ…

ಸಾವರಿಸಿಕೊಂಡೆ…

ನನ್ನ ನಾಗು ಇನ್ನೂ ಇದ್ದಾನೆ.. !

ಅವನಿಗೆ ಮೊದಲು ಚಿಕಿತ್ಸೆ ಕೊಡಿಸಬೇಕು…!

ಜಾಗ್ರತವಾದೆ…

ಹೆಚ್ಚಿಗೆ ತೊಂದರೆ ತೆಗೆದುಕೊಳ್ಳದೆ.. ನಾರಾಯಣ ಹೃದಯಾಲಯಕ್ಕೆ ಬಂದೆ…

ನನ್ನನ್ನು ನೋಡಿ ನಾಗುವಿನ ಮಡದಿ ಓಡೋಡಿ ಬಂದಳು…

” ಈಗ ಐಸಿಯೂ ದಲ್ಲಿಟ್ಟಿದ್ದಾರೆ… !

ಡಾಕ್ಟರ್ ಇನ್ನೂ ಹೊರಗೆ ಬಂದಿಲ್ಲ…”

ಬಿಕ್ಕಿ.. ಬಿಕ್ಕಿ ಅಳುತ್ತಿದ್ದಳು…..

ಅವಳಿಗೆ ಸಮಾಧಾನದ ಮಾತಾಡಿದೆ…

“ನಾಗುವಿಗೆ ಏನೂ ಆಗುವದಿಲ್ಲ…

ಧೈರ್ಯವಾಗಿರು…ದೇವರಿದ್ದಾನೆ..”

ಇಷ್ಟು ಹೇಳುವಾಗ ಗಂಟಲು ಉಬ್ಬಿ ಬಂತು..

ಮುಂದೆ ಹೇಳಲಾಗಲಿಲ್ಲ…

ಅಸಹಾಯಕ…

ಅಸಹನೀಯ ಕ್ಷಣಗಳು…!

ಏನಂತ ಸಮಾಧಾನ ಪಡಿಸಲಿ?

ಹೇಗೆ?

ಏನು ಹೇಳಲಿ?

ಇವರಿಬ್ಬರ  ಎಷ್ಟೊಂದು ನಗುವಿನಲ್ಲಿ…

ಖುಷಿಯ ಕ್ಷಣಗಳಲ್ಲಿ ನಾನು ಸಾಕ್ಷಿಯಾಗಿದ್ದೆ…!

ಇಬ್ಬರೂ ಸುಮ್ಮನೆ ಕುಳಿತೆವು….

ಮತ್ತೆ ಅವಳೇ ಮಾತು ಶುರುಮಾಡಿದಳು..

ಅವಳಿಗೆ ನನ್ನ ಮೇಲೆ ಅಪಾರ ಭರವಸೆ…

“ಭಾವ..

ಸಾಯಂಕಾಲ ಸರಿಯಾಗಿಯೇ ಇದ್ದರು..

ಊಟ ಚೆನ್ನಾಗಿಯೇ ಮಾಡಿದ್ದರು…

ಟಿವಿ ನೋಡುತ್ತ ಕುಳಿತ್ತಿದ್ದವರಿಗೆ ..

ಇದ್ದಕ್ಕಿದ್ದಂತೆ..ಮೈ ಬೆವರತೊಡಗಿತು.. !

ಎದೆ ನೋವು ಅಂತ ಹೇಳಿದರು…

ನನಗೆ ಗಾಭರಿಯಾಯಿತು.. ತಕ್ಷಣ ನಿನಗೆ ಫೋನ್ ಮಾಡಿದೆ..

ಇಲ್ಲಿಗೆ ಬರುತ್ತಿರುವಾಗಲೂ.. ” ಪ್ರಕಾಶು ಬಂದನಾ?..”  ಅಂತಿದ್ದರು…”

ನನಗೆ ನಾಗುವಿನ ಪ್ರೀತಿ ಕಣ್ಣಿಗೆ ಕಟ್ಟಿತು…

ನನಗೆ ಕಂಟ್ರೋಲ್ ಮಾಡಿಕೊಳ್ಳುವದು ಕಷ್ಟವಾಯಿತು….

ಇವಳ ಎದುರಿಗೆ ಅಳಬಾರದು…

ಮತ್ತಷ್ಟು ಧೈರ್ಯಗುಂದುತ್ತಾಳೆ..

ಎದ್ದು ನಿಂತೆ… ಹೊರಗಡೆ ಬಂದೆ…

ಪೆಟ್ಟಿಗೆ ಗಪ್ಪತಿ ನೆನಪಾದ.. !

ತಕ್ಷಣ ಫೋನ್ ಮಾಡಿದೆ..

ಸಮಯ ನಡು ರಾತ್ರಿ ಎರಡೂವರೆ….!

“ಛೇ.. ಈಗ ಮಾಡಬಾರದಿತ್ತು”

ಅಷ್ಟರಲ್ಲಿ ಕಾಲ್ ಮಾಡಿಯಾಗಿತ್ತು..

“ಏನು ಪ್ರಕಾಶು..? ಏನಾಯ್ತು ಇಷ್ಟು ಹೊತ್ತಿನಲ್ಲಿ..?..”

“ನೋಡೊ… ಗಪ್ಪತಿ..

ನಾರಾಯಣ ಹೃದಯಾಲಯಕ್ಕೆ ಜಲ್ದಿ ಬಾ…”

“ಯಾಕೋ..? !!”

“ನಾಗುವಿಗೆ ಹಾರ್ಟ್ ಎಟಾಕ್ ಆಗಿದೆ..

ಬಾ ಮಾರಾಯಾ…

ನನಗೊಬ್ಬನಿಗೆ ಏನೂ ಮಾಡಬೇಕು ಅಂತಾನೇ ಗೊತ್ತಾಗ್ತಾ ಇಲ್ಲ..”

ಹೇಳುತ್ತಿರುವಂತೆ  ದುಃಖ ಉಮ್ಮಳಿಸಿತು…

ಫೋನ್ ಕಾಲ್ ಕಟ್ ಮಾಡಿದೆ…

ನಾಗು…

ಅವನ ತುಂಟತನ… ಹುಚ್ಚು ಐಡಿಯಾಗಳು…

ಅವನ ಎಡವಟ್ಟುಗಳು…!

ನನಗೆ ಏನೇ ಆದರೂ  ನನ್ನ ನಾಗು ಇದ್ದಾನೆ ಎನ್ನುವ ಧೈರ್ಯ…!

ನನ್ನ ಬದುಕಿನ ಭರವಸೆ ಅವನು….!

ಈ  ನಾಗು ನನಗೆ ಏನು..? ಎಷ್ಟು…?

ಆಕಾಶ ನೋಡಿದೆ…

ನಕ್ಷತ್ರಗಳು… ಅಲ್ಲಲ್ಲಿ ಚದುರಿದ ಮೋಡಗಳು…

ಇಷ್ಟು ದೊಡ್ಡ ಭೂಮಿ…

ಕಣ್ಣಿಗೆ ಕಾಣುವಷ್ಟು ವಿಶಾಲವಾದ ಆಕಾಶ…

ಮರಗಳು..

ಎಷ್ಟೆಲ್ಲ ಜನರು…!

ಯಾರಿಗೆ.. ಯಾರೋ…!

ಎಲ್ಲರಿಗೂ ಅವರದ್ದೇ ಆದ ಪ್ರಪಂಚ…!

ಅವರದ್ದೇ.. ಬಳಗ.. !!

ಇಲ್ಲಿ ಯಾರೂ ಶಾಶ್ವತ ಅಲ್ಲ…!

ಯಾಕೋ ಒಂಟಿಯಾದೆ ಅನ್ನಿಸಿತು…!

ನನ್ನ ನಾಗು ಬದುಕಬೇಕು…

ಬದುಕಲ್ಲಿ ನೋಡುವಂಥಹ ಇನ್ನೂ ಖುಷಿಗಳಿವೆ…

ಆಸೆಗಳು ಈಡೇರಿದರೂ ಕೊನೆಯಾಗದ ಬಯಕೆಗಳು…!

ನಮಗೂ ಸಾವು ಹತ್ತಿರ ಬಂತು…!

ವಯಸ್ಸಾಯಿತು.. !

ನನ್ನ ಮಡದಿ.. ಮಗ..

ಅಣ್ಣ.. ಅಕ್ಕ.. ಎಲ್ಲರನ್ನೂ ಬಿಟ್ಟು ಹೋಗಲೇ ಬೇಕು…!

ಅಮ್ಮನನ್ನೂ….?…

ನಾನು ಹೋಗಿ ಬಿಟ್ಟರೆ …

ಮಗನ.. ಮಡದಿಯ ಭವಿಷ್ಯವೇನು…?

ಅವರಿಗೆ ಮುಂದೆ ಸಾಕಾಗುವಷ್ಟು ಹಣವನ್ನೂ.. ಆಸ್ತಿಯನ್ನೂ ಮಾಡಿಡಲಿಲ್ಲ…!

ಸಾವು ಇಷ್ಟು ಬೇಗ ಬಂದು ಬಿಡುತ್ತಾ..??

ಏನಿದು.. ಸಾವು..?

ಛೇ…!

ಎಷ್ಟೆಲ್ಲ ಅಸಹಾಯಕತೆ…!

ಆಕಾಶ ನೋಡಿದೆ… ಕಣ್ಣಲ್ಲಿ ನೀರಾಡಿತು…

ದೊಡ್ಡದಾಗಿ ಅಳಬೇಕು ಅನ್ನಿಸಿತು…!

ಎಲ್ಲವೂ…

ಎಲ್ಲರೂ.. ಇದ್ದರೂ.. ನಾವು ಮಾತ್ರ ಒಂಟಿ….!

“ಭಾವ..  ಬಾವಾ..ಬಾ… ಬಾ..

ಡಾಕ್ಟರ್ ಬರ್ತಾ ಇದ್ದಾರೆ…!..

ಡಾಕ್ಟರ್ ಹತ್ತಿರ ಮಾತಾಡು..

ಬಾ ಭಾವಾ…!”

ನಾಗುವಿನ ಮಡದಿ ಗಾಭರಿಯಿಂದ ಕರೆದಳು…

ದೂರದಲ್ಲಿದ್ದ ಡಾಕ್ಟರ್ ಹತ್ತಿರ ಬರುತ್ತಿದ್ದರು…..

 

‍ಲೇಖಕರು G

June 16, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವಧಿ….

12 ಪ್ರತಿಕ್ರಿಯೆಗಳು

  1. nimmolagobba baalu

    ಸ್ನೇಹ ಪ್ರೀತಿಗೆ ಇನ್ನೊಂದು ಹೆಸರು ಪ್ರಕಾಶಣ್ಣ , ಅವರ ಬ್ಲಾಗ್ ನಮ್ಮೆಲ್ಲರ ಅಚ್ಚು ಮೆಚ್ಚು. ಈ ಬಗ್ಗೆ ಪ್ರಕಟಿಸಿದ ಅವಧಿಗೆ ಜೈ ಹೋ ಎನ್ನೋಣ.

    ಪ್ರತಿಕ್ರಿಯೆ
  2. satya hanasoge

    ಈ ಬ್ಲಾಗಿಗರ ಕೂಟದಲ್ಲಿ ‘ಅವಧಿ’ ಬೆಸ್ಟ್ ಬ್ಲಾಗ್: ಇಟ್ಟಿಗೆ ಸಿಮೆಂಟು. ನಮಗೆಲ್ಲರಿಗೂ ತುಂಬಾ ಅಚ್ಚುಮೆಚ್ಚಿನ ಬ್ಲಾಗು. ನಿಮಗೆ ಇನ್ನೂ, ಇನ್ನೂ ಸ್ಪೂರ್ತಿ ಕೊಟ್ಟು ಇನ್ನೂ ಹೆಚ್ಚು, ಹೆಚ್ಚಾಗಿ ಬರೆಯಲು ಆ ದೇವರು ಶಕ್ತಿ ಕೊಡಲಿ.

    ಪ್ರತಿಕ್ರಿಯೆ
  3. keshav

    ಕನ್ನಡದ ಅತ್ಯುತ್ತಮ ಬ್ಲಾಗ್ ಗಳಲ್ಲಿ ಒಂದು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅದೂ ಕೂಡ ರೆಗುಲರ್ ಆಗಿ! ಯಾವ ಇಸಂಗೆ ಜೋತು ಬೀಳದೆ ಬರೆಯುತ್ತಾರೆ. ತುಂಬಾ ಖುಷಿಯಾಗುತ್ತೆ.

    ಪ್ರತಿಕ್ರಿಯೆ
  4. ಡಾ.ಆಜಾದ್

    ಪ್ರಕಾಶನ ಇಟ್ಟಿಗೆಗೆ ಸಿಮೆಂಟ್ ಹಾಕಿದ್ದು ಯಾವೊತ್ತೋ ಆಗಿದೆ…ಅಷ್ಟು ಅಚ್ಚು ಮೆಚ್ಚು ಅವನೂ ಅವನ ಬ್ಲಾಗ್ ಪೋಸ್ಟ್ ಗಳು..ಅವನ ಚಪಾತಿ..ಯಾವಾಗ್ಲೂ ಎಲ್ಲರ ಬಾಯಲ್ಲಿರುತ್ತೆ (ಹಹಹ ಸಾರಿ…ಆ ಶಬ್ದ…)
    ಅವಧಿ, ಪ್ರಕಾಶನ ಬ್ಲಾಗ್ ಸೆಲೆಕ್ಟ್ ಮಾಡಿದ್ದು ಸ್ವಾಭಾವಿಕ,…

    ಪ್ರತಿಕ್ರಿಯೆ
  5. kolebasava

    ಅವರ ಬರವಣಿಗೆಯ ಶೈಲಿಯೇ ವಿಶಿಷ್ಟವಾದದ್ದು, ಇಷ್ಟವಾದದ್ದು, ಬರೆದದ್ದನ್ನ ಓದಿಸಿಕೊಳ್ಳುವ ಜಾಣ್ಮೆ ಎಲ್ಲರಲ್ಲೂ ಇರೋಲ್ಲಾ ಅದೇ ಅವರ ಬ್ಲಾಗು ಮತ್ತು ಓದುಗರ ನಡುವಿನ ಸುಂದರ ಸೆಂಟಿಮೆಂಟು.

    ಪ್ರತಿಕ್ರಿಯೆ
  6. D.RAVIVARMA

    manamuutuva hage bareyuva prakash avara blog nijakku manaveeya sambhandagala kondi,sneha,aghata hagu aa kshanada chadapadikeyannu teretereyagi bichi torisutte nanantu prakash avara blogna huchanagidini avara blog innu hechu hechu odugarannu muttali avadhige hrudayapoorvaka abinandane. D.RAVI VARMA HOSPET.

    ಪ್ರತಿಕ್ರಿಯೆ
  7. sumathi hegde

    ಇಟ್ಟಿಗೆ ಸಿಮೆಂಟ್ ಆ ಹೆಸರಿನಲ್ಲೇ ಏನೋ ಒಂದು ಆಕರ್ಶಣೆ ಇದೆ…ಇನ್ನು ಬರಹಗಳು ಓದಲಿಕ್ಕೆ ಮಜಾ ಕೊಡುತ್ತೆ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: