‘ಅವಧಿ’ ಬೆಸ್ಟ್ ಬ್ಲಾಗ್: ಇಂದಿನ ಆಯ್ಕೆ-ಹರಿವ ಲಹರಿ

ಇವತ್ತಿನ ಆಯ್ಕೆ: ಹರಿವ ಲಹರಿ

ಅಮೆರಿಕೆಯಿಂದ ಬಂದದ್ದೇ ಜ್ಯೋತಿ ಮಹದೇವ್ ಫುಲ್ ಫ್ರೀ ಆಗಿಬಿಟ್ಟಿದ್ದಾರೆ! ಅದಕ್ಕೆ ಅವರು ಬರೆಯುತ್ತಿರುವ ನೀಳ್ಗತೆಗಳೇ ಸಾಕ್ಷಿ. ’ಹರಿಯುವುದೆಲ್ಲ ಹೊಳೆಯೆ ಅಲ್ಲ, ಪುಟ್ಟ ತೊರೆಯು ನಾನು’ ಎಂದು ಹೇಳಿಕೊಂಡು ಇವರು ಬರೆಯಲು ಶುರುವಿಟ್ಟರೆ ಅಲ್ಲಿ ಲಹರಿಯ ತೊರೆ ಜುಳುಜುಳು ಎನ್ನುತ್ತದೆ. ಕವಿತೆ, ಕತೆ, ಲೇಖನಗಳಿಂದ ಇವರು ಹೆಸರು ಮಾಡಿರುವುದು ’ಸುಪ್ತದೀಪ್ತಿ’ ಎಂಬ ಕಾವ್ಯನಾಮದಿಂದ. ಇತ್ತೀಚಿಗೆ ಅದೆಂಥದೋ ಹಿಪ್ನೋಥೆರಪಿಯ ಹುಚ್ಚು ಹತ್ತಿಸಿಕೊಂಡಿರುವುದು ಇವರ ಸುಪ್ತದೀಪ್ತಿ ಎಂಬ ಇನ್ನೊಂದು ಬ್ಲಾಗ್ ನೋಡಿದರೆ ಅನಿಸುತ್ತದೆ. ಹಾಗೆ ನೋಡಿದರೆ, ಜ್ಯೋತಿಯವರ ಬ್ಲಾಗು ಅವರ ಇಂತಹ ಅನೇಕ ’ಹುಚ್ಚು’ಗಳಿಗೆ ಕನ್ನಡಿಯೂ ಹೌದು. ಒಂದಷ್ಟು ಕಾಲ ’ಆತ್ಮ ಚಿಂತನ’ ಎಂಬ ಲೇಬಲ್ಲಿನಲ್ಲಿ ಬಹಳಷ್ಟು ಚಿಂತನೆ ನಡೆಸಿದವರು ಇವರು.

ನಿಮಗಿವೆಲ್ಲ ಇಷ್ಟವಾಗುವುದಿಲ್ಲ ಎಂದರೆ ಬೇಡ; ಸುಮ್ಮನೆ ಇವರ ಕವಿತೆಗಳನ್ನು ಓದಿ. ಕತೆಗಳ ಮೇಲೆ ಕಣ್ಣು ಹಾಯಿಸಿ. ಹರಿವ ಲಹರಿಯಿಂದ ಸುಪ್ತದೀಪ್ತಿಗೂ, ಸುಪ್ತದೀಪ್ತಿಯಿಂದ ಹರಿವ ಲಹರಿಗೂ ನಿಮ್ಮ ಓದಿನ ಟ್ಯಾಬ್ ಶಿಫ್ಟ್ ಮಾಡುತ್ತಿರಿ. ರಿಕ್ತ ಮನವನ್ನು ತುಂಬುವ ಸಮ್ಮೋಹನ ಚಿಕಿತ್ಸೆ ಈ ಬ್ಲಾಗ್ ಬರಹಗಳಲ್ಲಿದೆ ಅಂತ ನಿಮಗನ್ನಿಸಿದರೆ ಆಮೇಲೆ ನೀವಿದರ ಖಾಯಂ ಫಾಲೋವರ್!

-’ಅವಧಿ’ಗಾಗಿ ಸುಶ್ರುತ ದೊಡ್ಡೇರಿ

* * *
ಜ್ಯೋತಿ ಮಹದೇವ್:

ನನ್ನ ಬಗ್ಗೆ ಹೇಳ್ಕೊಳ್ಳೋದೆ? ಬೇಡ ಬಿಡಿ….. ಇವನ್ನೆಲ್ಲ ಓದಿ, ಸಾಕು….. ಹಾಗೇನೇ, “ಭಾವಲಹರಿ”, “ಭಾವಗಾನ”, “ಭಾವಬಿಂಬ” ಕವನ ಸಂಕಲನಗಳನ್ನು ಕೊಂಡು ಓದಿ. “ಹೇಳು ಮನಸೇ” ಧ್ವನಿಸುರುಳಿಯನ್ನೂ ಕೇಳಿ.

* * *

ಜ್ಯೋತಿ ಬರೆದ ಮೊದಲ ಕತೆ ಇದಂತೆ:

ಅನಾಮಿಕ

ಅಂದು ಪ್ರಾಕ್ಟಿಕಲ್ ಮುಗಿಸಿ ಕಾಲೇಜಿಂದ ಮನೆಗೆ ಹೊರಟಾಗ ತಡವಾಗಿತ್ತು. ನಮ್ಮ ಮನೆಯ ಕಡೆ ಬರುವ ಇತರ ಹುಡುಗಿಯರು ಆಗಲೇ ಹೋಗಿಯಾಗಿತ್ತು. ಸುಮಾರು ಒಂದು ಮೈಲಿ ದೂರ. ದೊಡ್ಡ ಮಾತೇನಲ್ಲ. ಅಂತೆಯೇ ನಡೆದೇ ಹೊರಟೆ. ಯಾರೊಂದಿಗೂ ಮಾತಿಗೆ ಸಿಲುಕಬಾರದೆಂದು ಕೆನ್ನೆಗೆ ತಗಡು ಕಟ್ಟಿಸಿಕೊಂಡ ಕುದುರೆಯಂತೆ ಮೂಗಿನ ನೇರಕ್ಕೇ ನೋಡುತ್ತಾ ಸರಸರ ಹೆಜ್ಜೆ ಹಾಕುತ್ತಿದ್ದೆ, ಮುಖ್ಯರಸ್ತೆ ಬಿಟ್ಟು ತಿರುಗುತ್ತಲೇ ಬಳಿಯಲ್ಲಿ ಇನ್ನೊಂದು ಹೆಜ್ಜೆ ಸದ್ದು. ಎದೆ ಒಮ್ಮೆ ಕಂಪಿಸಿತು. ಅಷ್ಟರಲ್ಲೇ “ಹಲೋ ಮಿಸ್” ಎಂದ ಮಧುರ ದನಿಗೆ ಕಂಪಿಸುತ್ತಿದ್ದ ಎದೆ ಧಸಕ್ಕೆಂದಿತು. “ಹಾ! ದೇವರೇ! ಹನುಮಂತಪ್ಪಾ, ಕಾಪಾಡಪ್ಪಾ!” ಎಂದು ನಾನು ಕಾಣದ ಮಾರುತಿಯನ್ನು ಮೊರೆಹೋದೆ.

 

ಯಾರೆಂದು ನೋಡುವ ಹುಚ್ಚು ಚಪಲ. ತಲೆ ತಿರುಗಿಸಿ ದೃಷ್ಟಿಸಿದೆ. ಗುರುತರಿಯದ ಗಂಭೀರ ಸುಂದರ ಗಂಡು ಮುಖ. ನಯನ ಆ ಮೊಗದಿಂದ ನೋಟ ಜಾರಿಸಿ ಕೆಳಗಿಳಿಯುತ್ತಾ ಹೋಯಿತು. ಚಂದದ ಕಡುಕಂದು ಸೂಟಿನಲ್ಲಿ ಅಂದದ ಗೋಧಿಯ ಮೈಬಣ್ಣ- ನೀಲಿ ಹಾಕಿದ ಬಿಳಿಬಟ್ಟೆಯಂತೆ. ಪಾದಗಳನ್ನು ಮುಚ್ಚಿ ಮಿರಮಿರನೆ ಮಿಂಚುವ ಬೂಟುಗಳು. ಆಗಲೇ ಆತ, “ಗುರುತಾಗಲಿಲ್ವಾ? ನಾನು ನಿಮ್ಮನ್ನು ನಿಮ್ಮಕ್ಕನ ಮದುವೆಯ ದಿನ ನೋಡಿದ್ದೆ. ನಿಮ್ಮ ಭಾವ ನವನೀತ್ ನಮ್ಮನ್ನು ಪರಿಚಯ ಮಾಡಿಸಿದ್ರು….” ನಾನು ಯೋಚಿಸಿದೆ. ಅಕ್ಕನ ಮದುವೆ ವರ್ಷದ ಹಿಂದೆ. ನನಗಂತೂ ಈತನನ್ನು ನೋಡಿದ ನೆನಪಿಲ್ಲ. ಹೆಸರು ಮೊದಲೇ ಗೊತ್ತಿಲ್ಲ. ಹೇಗೆ ಪ್ರತಿಕ್ರಿಯಿಸಬೇಕೆನ್ನುವ ಗೊಂದಲದಲ್ಲಿರುವಾಗಲೇ ಸುಂದರ ಮುಖದ ಮೃದು ಮಾತಿನ ನಯವಂಚಕರ ನೆನಪಾಯ್ತು. ಒಳಗೊಳಗೇ ನಡುಗಿಹೋದೆ. ಆತನಿಗೆ ಉತ್ತರಿಸದೇ, ಆ ಕಡೆಗೂ ನೋಡದೇ ಹೆಜ್ಜೆ ಚುರುಕುಗೊಳಿಸಿದೆ. ಇನ್ನೂ ಹತ್ತು ನಿಮಿಷದ ನಿರ್ಜನ ಹಾದಿ. ಏನು ಮಾಡಲೂ ಆತನಿಗೆ ಸಾಧ್ಯವಿದೆ, ಸಮಯವಿದೆ. ಈ ಯೋಚನೆಯಿಂದ ತತ್ತರಿಸಿದೆ. ಆತನೂ ನನ್ನ ಸಮನಾಗಿ ಹೆಜ್ಜೆ ಹಾಕುತ್ತಿದ್ದ. ಧೀರ ಗಂಭೀರ ನಡಿಗೆ, ನಯದ ಮಾತು, ಏನೋ ಎಂತೋ ಎಂದುಕೊಂಡೆ.

 

“ಇನ್ನೂ ನನ್ನ ನೆನಪಾಗಲಿಲ್ವಾ ಸವಿತಾ?” ಎಂದ. “ಅಯ್ಯೋ ದೇವ್ರೇ… ನನ್ನ ಹೆಸರೂ ಗೊತ್ತುಂಟಾ ಇವನಿಗೆ!” ಇನ್ನಷ್ಟು ಬೆಚ್ಚಿದೆ. ಆದರೂ ಕೆಟ್ಟ ಮೊಂಡು ಧೈರ್ಯ. “ಓಯ್ ಮಿಸ್ಟರ್, ನಾನು ಸವಿತಾ ಅಲ್ಲ. ನಿಮ್ಮ ಆ ಹುಡುಗಿ ನಾನಲ್ಲ. ಬೇರೆ ಯಾರೋ ಇನ್ನೆಲ್ಲೋ ಇರ್ಬೇಕು. ಸುಮ್ಮನೆ ನನ್ಹಿಂದೆ ಬರ್ಬೇಡಿ. ನಿಮ್ಮ ಪಾಡಿಗೆ ಹೋಗಿ” ಎಂದೇ ಉಸಿರಿಗೆ ಹೇಳಿ ಓಡು ನಡಿಗೆ ಹಾಕಿದೆ. ನೆನಪಿಸಿಕೊಳ್ಳುವ ಪ್ರಯತ್ನ ಕೈಬಿಟ್ಟೆ.

 

“…ಸವಿತಾ, ನೀವೇನೂ ಹೆದರ್ಬೇಡಿ. ನಾನು ನಿಮ್ಗೇನೂ ಮಾಡುದಿಲ್ಲ. ನಿಮ್ಮ ಮನೇವರೆಗೆ ಬರುವ ಅವಕಾಶ ಕೊಡಿ. ಈ ನಿರ್ಜನ ದಾರಿಯಲ್ಲಿ ನಿಮಗೆ ಬೆಂಗಾವಲಾಗಿಯಾದರೂ ಬರುತ್ತೇನೆ” ಎಂದಂದ ನಾಟಕೀಯ ಶೈಲಿಯ ಮಾತಿನಲ್ಲಿ ನಗೆಯ ಲೇಪನ ಧಾರಾಳವಾಗಿತ್ತು. ನನಗೆ ರೇಗಿಹೋಯ್ತು. “ಈ ದಾರಿ ನನಗೇನೂ ಹೊಸದಲ್ಲ. ನೀವು ಬರುವ ಅಗತ್ಯವಿಲ್ಲ. ಹೋಗಿ, ಹೊರಟು ಹೋಗಿ.” ಬಿರುಸಾಗಿ ನುಡಿದೆ; ಅಷ್ಟೇ ಬಿರುಸಾಗಿ ನಡೆದೆ. ಆತನ ಬೂಟಿನ ಸದ್ದು ನನ್ನ ಚಪ್ಪಲಿಯ ಸದ್ದನ್ನು ಏಕತಾನದಿಂದ ಅನುಸರಿಸುತ್ತಿತ್ತು. ಆ ಏಕತಾನ ಕಿವಿಗೆ ಹಿತವೆನ್ನಿಸಿದರೂ ಭಯದ ನೆರಳಲ್ಲಿ ಮನಸ್ಸಿಗೆ ಯಾವುದೂ ಬೇಡವಾಗಿತ್ತು. “ಯಾರಾದರೂ ಪರಿಚಯದವರು ಸಿಗಬಾರದೇ, ದೇವರೇ… ಪ್ಲೀಸ್…” ಅಂದುಕೊಳ್ಳುತ್ತಿರುವಾಗಲೇ ಹಿಂದಿನಿಂದ ಮೋಟಾರ್ ಬೈಕಿನ ಸದ್ದು ಕೇಳಿಸಿತು. ತಿರುಗಿ ನೋಡಿದಾಗ ಅಣ್ಣನೆಂದು ತಿಳಿದು ಕಣ್ಣಲ್ಲಿ ನೀರುಕ್ಕಿತು. “ಈ ಖದೀಮನಿಗೆ ಈಗ ಬುದ್ಧಿ ಕಲಿಸಬೇಕು” ಎಂದೂ ಮನ ಮುದಗೊಂಡಿತು.

 

ಅಣ್ಣ ಹತ್ತಿರ ಬಂದವನೇ ಬೈಕ್ ನಿಲ್ಲಿಸಿ, ಆತನ ಕಡೆ ನೋಡಿ, “ಏನೋ ಮಹರಾಯ, ಯಾವಾಗ ಬಂದಿ ನಮ್ಮೂರಿಗೆ? ಪರಿಚಯ ಆಗಿ ವರ್ಷದ ಮೇಲಾಯ್ತು, ಈಗ ನೆನಪಾಯ್ತನಾ?” ಎಂದು ಕೇಳಿದಾಗ ನಾನು ತಲೆತಿರುಗಿ ಬೀಳುವುದೊಂದೇ ಬಾಕಿ. ಅಣ್ಣ ಆತನ ಉತ್ತರಕ್ಕೂ ಕಾಯದೇ ನನ್ನೆಡೆಗೆ ತಿರುಗಿ, “ಸವಿತಾ, ಇವ ನಿನಗೆಲ್ಲಿ ಸಿಕ್ಕಿದ? ಆಟೋರಿಕ್ಷಾದಲ್ಲಿ ಬರುದು ಬಿಟ್ಟು ನಡ್ಕೊಂಡು ಬಂದದ್ದು ಯಾಕೆ?” ಎಂದಾಗ ಇನ್ನಷ್ಟು ತಬ್ಬಿಬ್ಬಾದೆ. “ಆಟೋ ಮಾಡಿ ಕರ್ಕೊಂಡು ಹೋಗುವಷ್ಟು ಹತ್ತಿರದವನೇ ಆತ?” ಎನ್ನುವ ಯೋಚನೆಗೊಳಗಾದೆ.

 

ಆ ಸುಂದರಾಂಗನ ನಗು ಎಚ್ಚರಿಸಿತು. “ಏಯ್ ರವೀಂದ್ರ…” ಎಂದು ಆತ ಅಣ್ಣನೊಡನೆ ಮಾತಿಗಿಳಿದಾಗ ಕಿವಿಗೊಟ್ಟೆ. “…ಇವ್ರು ನಿನ್ನ ತಂಗಿ ಸವಿತಾ ಹೌದಾ ಅಲ್ವಾಂತ ಇನ್ನೊಮ್ಮೆ ನೋಡಿ ಮತ್ತೆ ಮಾತಾಡು. ಇಲ್ಲಾಂದ್ರೆ… ‘ನನ್ಹಿಂದೆ ಬರ್ಬೇಡಿ, ಹೋಗಿ’ ಅಂತ ಬೈಸ್ಕೊಳ್ತೀ ನೋಡು. ನಾನು ಮಾತಾಡ್ಸಿದಾಗ, ‘ನಾನು ಸವಿತಾ ಅಲ್ಲ. ನಿಮ್ಮ ಹುಡುಗಿ ಬೇರೆ ಯಾರೋ ಇರ್ಬೇಕು’ ಅಂದು ಬಿಟ್ರು. ಸರಿಯಾಗಿ ನೋಡಿ ಮಾತಾಡಪ್ಪ…” ಮಾತುಗಳು ಕಿವಿಯೊಳಗೆ ಬೀಳುತ್ತಿದ್ದ ಹಾಗೇ ಗಂಟಲಲ್ಲಿ ಕಹಿ ಇಳಿದಿಳಿದು ಸಿಕ್ಕಿಕೊಂಡ ಅನುಭವ. ಪರಿಸ್ಥಿತಿ ಏರುಪೇರಾಗಿದೆಯೆಂದು ನನ್ನ ಕಣ್ಣಂಚಿನ ನೀರಿನಿಂದ ಕಂಡುಕೊಂಡ ಅಣ್ಣ, “ಏಯ್ ರಾಜಕುಮಾರ, ಇಲ್ಲಿ ಮಾತಾಡುದು ಬೇಡ. ನಡಿ ಮನೆಗೆ ಹತ್ತು ಗಾಡಿ” ಅಂದರೆ ಆತ, “ನಾನು ಬರುದಿಲ್ಲಪ್ಪ. ಇವ್ರನ್ನೇ ಕರ್ಕೊಂಡು ಹೋಗು. ಇಲ್ಲದಿದ್ರೆ ಎಲ್ಲಾದ್ರೂ ತಲೆತಿರುಗಿ ಬಿದ್ದುಬಿಟ್ಟಾರು” ಎನ್ನಬೇಕೆ? ಕೊನೆಗೂ ಅವರಿಬ್ಬರೂ ಬೈಕ್ ಏರಿ ಹೊರಟರು. ನಾನು ಹೆಜ್ಜೆಯ ಮೇಲೆ ಹೆಜ್ಜೆ ಹಾಕಿ ದಾರಿ ಸವೆಸತೊಡಗಿದೆ.

 

ಹಾದಿಯುದ್ದಕ್ಕೂ ತಲೆತುಂಬ ಗೋಜಲು ಯೋಚನೆಗಳು- ಯಾರವರು?, ಅವರ ಹೆಸರೇ ತಿಳಿಯಲಿಲ್ಲವಲ್ಲ! ಆತನ ಮೃದು ಮಾತು ನಡತೆಗೆ ನನ್ನ ಒರಟು ವರ್ತನೆ ನೆನೆದು ಕೆಡುಕೆನಿಸಿತು. ‘ಹಾಲಲ್ಲಿ ಹುಳಿ ಹಿಂಡಿದಂತೆ ನಡೆದುಕೊಂಡೆ’ ಎನ್ನಿಸಿತು. ಎಷ್ಟು ನೆನಪಿಸಿಕೊಂಡರೂ ಕವಿತಕ್ಕನ ಮದುವೆಯ ಸಮಯ ಈತನನ್ನು ನೋಡಿದ ನೆನಪಿಲ್ಲ. ನವನೀತ ಭಾವನ ಸಂಬಂಧಿಕರ ಪೈಕಿಯೂ ಇಂತಹ ಸುಂದರಾಂಗ ಇಲ್ಲ ಎಂದು ಒಪ್ಪಿಕೊಂಡ ಮನಸ್ಸು ಮನೆ ತಲುಪುವ ಹೊತ್ತಿಗೆ ಮಳೆಗಾಲದ ಆಗಸದಂತಾಗಿತ್ತು. ಅದರ ಪ್ರತಿಬಿಂಬ ಕಣ್ಣು.

 

ಗೇಟು ತೆರೆಯುತ್ತಿದ್ದ ಹಾಗೆಯೇ ಕವಿತಕ್ಕ ಓಡಿ ಬಂದಳು. “ಸವಿತಾ…” ಎಂದು ತಬ್ಬಿಕೊಂಡಳು. “ಏನು ರಂಪಾಟ ಮಾಡಿದ್ದೀ ಮಾರಾಯ್ತೀ. ನಿನ್ನ ಭಾವನ ಗೆಳೆಯ ಅವ್ರು. ನಮ್ಮ ಮದುವೆಯಲ್ಲಿ ನಿನ್ನನ್ನು ನೋಡಿ ಮೆಚ್ಚಿ ಈಗ ಪಪ್ಪ-ಅಮ್ಮನ ಹತ್ರ ಮಾತಾಡ್ಲಿಕ್ಕೆ ಅಂತ ನಮ್ಮ ಒಟ್ಟಿಗೇ ಬಂದವರು ಪೇಟೆಯಲ್ಲಿ ಏನೋ ಕೆಲ್ಸ ಉಂಟೂಂತ ನಿಂತಿದ್ದರು. ಬರ್ತಾ ನಿನಗೆ ಸಿಕ್ಕಿದ್ರಂತಲ್ಲಾ. ಏನೇನೋ ಮಾತಾಡಿದ್ಯಂತೆ? ಅವರೂ ರವಿಯೂ ಹೊಟ್ಟೆ ಹಿಡ್ದು ನಗಾಡ್ತಿದ್ದಾರೆ.” ಎಂದಾಗ ಕಣ್ಣ ಕಾರ್ಮೋಡದಲ್ಲಿ ಮಿಂಚು ಸುಳಿದು ಮಳೆ ಸುರಿಯಿತು. ಅಕ್ಕ ಭಾವ ಬಂದ ಖುಷಿಯೂ ಹಿತವೆನಿಸಲಿಲ್ಲ. ಇಷ್ಟೆಲ್ಲ ತಿರುಳುಗಳಿದ್ದುದು ನನಗೆ ತಿಳಿದಿರಲಿಲ್ಲ.

ಆಗಲೇ ಹೊರಬಂದ ಭಾವ ಮಾತ್ರ, “ಏನು ನಡೀತಾ ಉಂಟು ನಿಮ್ಮೊಳಗೆ? ಗೇಟಿನ ಬದಿಯಲ್ಲೇ ಏನು ಹೇಳಿ ಅವ್ಳನ್ನು ಅಳಿಸ್ತಿದ್ದೀ ಕವಿತಾ? ಕಾಲೇಜಿಂದ ಸುಸ್ತಾಗಿ ಬರ್ತಿದ್ದಾಳೆ ಅಂತ ನಿನ್ಗೂ ಯೋಚ್ನೆ ಬೇಡ್ವಾ? ಬಾ ಸವಿತಾ, ಯೋಚಿಸ್ಬೇಡ. ಎಲ್ಲಾ ಸರಿಯಾಗ್ತದೆ. ಒಳಗೆ ಬಾ…” ಎಂದು ವೇದಾಂತಿಯಂತೆ ಹೇಳಿದಾಗ ಅತ್ತಿತ್ತ ನೋಡದೆ ನೇರವಾಗಿ ನನ್ನ ರೂಮಿಗೆ ಹೋಗಿ ಬಾಗಿಲು ಹಾಕಿ ಮಂಚದ ಮೇಲೆ ಬೋರಲು ಬಿದ್ದು ಅಳತೊಡಗಿದೆ. ಬಾಗಿಲು ತೆರೆದ ಸದ್ದಾಯ್ತು. ಅಮ್ಮ ಬಂದಿರಬೇಕು ಅಂದುಕೊಂಡು ಏಳಬೇಕು ಅನ್ನುವಷ್ಟರಲ್ಲೇ ನನ್ನೆರಡೂ ಭುಜಗಳನ್ನು ಹಿಡಿದೆತ್ತಿದ ಆತ ಮೃದುವಾಗಿ, “ಸವಿತಾ, ನನ್ನ ಸವಿತಾ, ಅಳ್ಬೇಡ. ನಾನು, ನಿನ್ನ ಅವಿನಾಶ್ ಹೇಳ್ತಿದ್ದೇನೆ, ಅಳ್ಬೇಡ ಪ್ಲೀಸ್…” ಎಂದಾಗ ತಲೆಯೆತ್ತಿ ಆತನ ಮುಖ ನೋಡಿದೆ. ನಿರ್ಮಲ ವಾತ್ಸಲ್ಯಭರಿತ ಕಣ್ಣುಗಳನ್ನು ಎದುರಿಸಲಾರದೇ ಮುಖ ತಗ್ಗಿಸಿ ಬಿಕ್ಕಳಿಸುತ್ತಾ, “ನನ್ನನ್ನ ಕ್ಷಮಿಸಿ. ಆಗ ನಾನು ಮಾತಾಡಿದ್ದನ್ನೆಲ್ಲಾ ಮರ್ತು ಬಿಡಿ. ಪ್ಲೀಸ್, ಕ್ಷಮಿಸಿ…” ಎಂದೆ. ಹಗುರವಾಗಿ ನನ್ನ ಗಲ್ಲ ಹಿಡಿದೆತ್ತಿದ ಅವರು, “ನನ್ನ ಸವಿತಾ ಅಂತ ಕರೆದ ಮೇಲೂ ಕ್ಷಮೆಯ ಮಾತು ಬೇಕಾ?” ಎಂದು ನಕ್ಕಾಗ ನನ್ನ ನಗುವನ್ನು ಮರೆಸಲು ಕೋಣೆಯಿಂದ ಹೊರಗೆ ಓಡಿದೆ. ಬಾಗಿಲಲ್ಲೇ ನಿಂತಿದ್ದ ಅಣ್ಣನಿಗೂ ಢಿಕ್ಕಿ ಹೊಡೆದು ಅಡುಗೆಮನೆಗೆ ನುಗ್ಗಿದಾಗ ಅವರಿಬ್ಬರ ಗಲಗಲ ನಗು ನನ್ನನ್ನಟ್ಟಿಸಿಕೊಂಡು ಬಂದು ಮುತ್ತಿಕೊಂಡಿತು.

 

‍ಲೇಖಕರು G

June 6, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವಧಿ….

3 ಪ್ರತಿಕ್ರಿಯೆಗಳು

  1. ಅಜಯ

    ಹಿಪ್ನೋ ಥೆರಪಿ ಅದೆಂಥದೋ ಒಂದು ಹುಚ್ಚಲ್ಲ . ತಮಾಷೆಗಾದರೂ ಕೂಡ ನಿಮಗೆ ತಿಳುವಳಿಕೆ ಇಲ್ಲದ್ದನ್ನು ಹುಚ್ಚು ಎಂದು ಹೇಳುವ ಮುನ್ನ ಸ್ವಲ್ಪ ಯೋಚಿಸಿ.

    ಪ್ರತಿಕ್ರಿಯೆ
  2. Sushrutha

    @ಅಜಯ, ಹುಚ್ಚು ಅಂದಿದ್ದು ’ಆಸಕ್ತಿ’ ಅನ್ನೋ ಅರ್ಥದಲ್ಲಿ. ಅದಕ್ಕೇ ಅದು ಇನ್ವರ್ಟೆಡ್ ಕಾಮಾದಲ್ಲಿದೆ. ಥ್ಯಾಂಕ್ಸ್!

    ಪ್ರತಿಕ್ರಿಯೆ
  3. D.RAVIVARMA

    BLOG NIJAKKU CHENNAGIDE,BADUKINALLI AGUVA AKASHMIKAGALU MATTU MANUSHYANA AVESHABARITA ALOCHANEGALU,NAMMA BHAYA,OTTADAGALALLI SATHYAVANNU ARIYUVA TILIDUKOLLUVA VYAVADANA TALME HALAVOMME KALEDUKOLLUTTEVE ENNODAKKE EE KATHE SAKSHI, CONGRATS D.RAVI VARMA HOSPET

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: