ಸಾಹಿತ್ಯ ಅಕಾಡಮಿ ಗಾಂಧೀಜಿಯವರ ಬಗ್ಗೆ ಕೈಗೆತ್ತಿಕೊಂಡಿರುವ ಮಹತ್ವದ ಯೋಜನೆಯ ಬಗ್ಗೆ ’ಅವಧಿ’ಯಲ್ಲಿ ಪ್ರಕಟಿಸಿದ್ದೆವು. ( ಸಾಹಿತ್ಯ ಅಕಾಡೆಮಿಯ ಈ ಕೆಲಸದಲ್ಲಿ ನಿಮ್ಮ ಕೈ ಜೋಡಿಸಿ..)
ಅದನ್ನು ಓದಿದ ಓದುಗರು ಅದಕ್ಕೆ ಸ್ಪಂದಿಸಿದ ರೀತಿಗೆ ಸಿ ಎನ್ ರಾಮಚಂದ್ರನ್ ಅವರು ಹರ್ಷ ವ್ಯಕ್ತ ಪಡಿಸಿ, ’ನಿಮ್ಮ ಪತ್ರಿಕೆ ಎಷ್ಟು ಜನಪ್ರಿಯವಾಗಿದೆ ಎಂಬುದು ನೆನ್ನೆಯಿಂದ ನನಗೆ ಬರುತ್ತಿರುವ ಈಮೇಲ್ ಹಾಗೂ ಮೊಬೈಲ್ ಕರೆಗಳಿಂದ ಗೊತ್ತಾಗುತ್ತದೆ. ಸಾಕಷ್ಟು ಜನರು ಮಾಹಿತಿ ಕೊಡುತ್ತಿದ್ದಾರೆ. ಆದರೆ, ಒಂದೇ ಮಾಹಿತಿಯನ್ನು ಅನೇಕರು ಕೊಡುತ್ತಿದ್ದಾರೆ. ಆದುದರಿಂದ ದಯವಿಟ್ಟು ನಾಳೆ ಈ ಕೆಳಗಿನ ನಾಲ್ಕು ಸಾಲುಗಳನ್ನು ನನ್ನ ಪತ್ರದ ಬದಲಿಗೆ ಹಾಕಲಾಗುತ್ತದೆಯೆ?’ ಎಂದು ಬರೆದಿದ್ದಾರೆ.
ಅವರಿಗೆ ಕೃತಜ್ಞತೆಗಳನ್ನು ಹೇಳುತ್ತಾ, ಅವರು ಕಳಿಸಿದ ಪತ್ರ ನಿಮಗಾಗಿ:
ಅವಧಿ ಓದುಗರೊಡನೆ
ಕೇಂದ್ರ ಸಾಹಿತ್ಯ ಅಕಾಡೆಮಿಯ ’ಗಾಂಧಿ ಯೋಜನೆ’ಯನ್ನು ಕುರಿತು ಅನೇಕ ಅವಧಿ-ಓದುಗರು ಸ್ಪಂದಿಸಿದ್ದಾರೆ, ಅಮೂಲ್ಯ ಮಾಹಿತಿಯನ್ನು ನನಗೆ ನೀಡಿದ್ದಾರೆ. ಅವರೆಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ.
ಈ ಪತ್ರದ ಮೂಲಕ ನನ್ನ ಸಂತೋಷವನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳುತ್ತಿದ್ದೇನೆ. ಕನ್ನಡ ಸಾಹಿತ್ಯದ ಅಮೂಲ್ಯ ’ಆಕರ ಕೇಂದ್ರ’ ವಾಗಿರುವ ಶ್ರೀ ಹರಿಹರಪ್ರಿಯ ಅವರು ಈ ವಿಷಯವನ್ನು ತಿಳಿದು, ೧೯೭೦ರ ವರೆಗೆ ಪ್ರಕಟವಾಗಿರುವ ಗಾಂಧೀಜಿಯನ್ನು ಕುರಿತ ಕನ್ನಡದ ಎಲ್ಲಾ ಕವನಗಳ, ಇತರ ಪ್ರಭೇದಗಳ ಏಳು ಸಂಕಲನಗಳನ್ನು ನನಗೆ ಒದಗಿಸಿ ಕೊಟ್ಟಿದ್ದಾರೆ. ಎಲ್ಲಿಯೂ ಸಿಕ್ಕದ ಅಪೂರ್ವ ಕೃತಿಗಳನ್ನು ರಕ್ಷಿಸುತ್ತಿರುವ ಹಾಗೂ ಅವುಗಳನ್ನು ಆಸಕ್ತರಿಗೆ ಒದಗಿಸುತ್ತಿರುವ ಶ್ರೀ ಹರಿಹರಪ್ರಿಯ ಅವರು ನಮ್ಮೊಡನೆ ಇರುವುದು ಕನ್ನಡದ/ಕನ್ನಡಿಗರ ಭಾಗ್ಯ.
ಆದುದರಿಂದ, ದಯವಿಟ್ಟು ಈ ಯೋಜನೆಗೆ ನಿಮ್ಮ ಅಮೂಲ್ಯ ಸಲಹೆಗಳನ್ನು ಕೊಡುವಾಗ, ೧೯೭೦ರ ನಂತರ ಪ್ರಕಟವಾಗಿರುವ ಕಥೆ-ಕವನ-ನಾಟಕ-ಕಾದಂಬರಿಗಳನ್ನು ಗಮನಿಸಿ.
ನಿಮ್ಮೆಲ್ಲರ ಸಹಕಾರಕ್ಕೆ ಕೃತಜ್ಞ.
ರಾಮಚಂದ್ರನ್
ನೀವು ಮಾಹಿತಿ ಕಳುಹಿಸಬೇಕಾದ ಈಮೇಲ್ ವಿಳಾಸ : cnrama@gmail.com







0 Comments