ಗೋವಿಂದ ಭಟ್ಟರ ’ಹಳ್ಳಿಯಿಂದ’ ಬ್ಲಾಗು ಇವರ ಇಂತಹ ಅನೇಕ ಸಾಹಸಗಳಿಗೆ ಕನ್ನಡಿ. ಇವತ್ತಿಗೂ ತ್ರಿಚಕ್ರ ರಥದಲ್ಲಿ ಭಟ್ಟರು ಊರೂರು ಸುತ್ತುತ್ತಾರೆ, ಚಾರ್ಮಾಡಿ ಘಾಟಿ ಹತ್ತಿಳಿಯುತ್ತಾರೆ, ’ಇ-ಟ್ರೆಕ್ಕಿಂಗ್’ ನಿಟ್ಟಿನಲ್ಲಿ ಯುವಕರನ್ನು ಕಟ್ಟಿಕೊಂಡು ಚಾರಣಗಳಿಗೆ ಹೋಗುತ್ತಾರೆ, ಪರಿಸರಸ್ನೇಹಿ ವಾಹನಗಳ ಬಳಕೆಯ ಪ್ರಚಾರಕ್ಕಾಗಿ ಜಾತಾಗಳನ್ನು ನಡೆಸುತ್ತಾರೆ. ಪರಿಸರ ಸಂರಕ್ಷಣೆ ಜಾಗೃತಿಯ ಕರೆಯೂ ಬ್ಲಾಗಿನಲ್ಲಿ ಆಗಾಗ ಮೊಳಗುತ್ತದೆ. ಭಟ್ಟರ ಬ್ಲಾಗಿನ ಬರಹಗಳು ಎಲ್ಲರಿಗೂ ಉತ್ಸಾಹ ತುಂಬುವ ಒರತೆಗಳು; ಕೊರತೆಗಳಿಗೆ ಮನುಷ್ಯನ ಹಿಗ್ಗನ್ನು ಕುಗ್ಗಿಸಲಾಗದು ಎಂಬುದಕ್ಕೆ ದೀಪಗಳು.
ಹಿಂದೊಮ್ಮೆ ಸೈಕಲ್ ಜತೆಗೆ ಪ್ರಪಂಚ ಸುತ್ತಿದೆ. ಹಕ್ಕಿಯಂತೆ ಹಾರುವ ಆಸೆಯಲ್ಲಿ ಯಡವಟ್ಟಾಗಿ ಬೆನ್ನೆಲುಬು ಡಮಾರ್. ಸದಾ ಬಾದಿಸುವ ನೋವು ಮರೆಯಲು ಹಾಗೂ ಅನಿಸಿಕೆಗಳ ಹಂಚಿಕೊಳ್ಳಲು ಈ ಬರವಣಿಕೆ. ಈಗ ದಕ್ಷಿಣ ಕನ್ನಡದಲ್ಲಿ ಅಡಿಕೆ ಕೃಷಿಕ. ವಂದನೆಗಳು
ಬ್ಲಾಗ್ ನಿಂದ ಆಯ್ದ ಲೇಖನ ಇಲ್ಲಿದೆ-
ಎಂಡೊ ತಯಾರಕರ ದೇಶ ಸೇವೆ ಮುಖವಾಡ
ಎಂಡೋಸಲ್ಫನ್ ತಯಾರಕರ ಹೊಸ ವರಸೆ ಗಾಬರಿಯಾಗುತ್ತದೆ. ಅವರೀಗ ಯುರೋಪಿನ ವಿಷ ತಯಾರಕರು ಎಂಡೋಸಲ್ಫನ್ ಬಹಿಷ್ಕಾರ ಚಳುವಳಿಯ ಹಿಂದಿದ್ದಾರೆ ಎಂದು ಆಪಾದಿಸುತ್ತಿದ್ದಾರೆ. ಬಾರತದ ತಯಾರಕರು ಜೀವ ಉಳಿಸುವ ಔಷದಿಯಲ್ಲಿ ಮೂಲವಸ್ತುಗಳ ಹೆಸರಿನಲ್ಲಿ ತಯಾರಿಸಿ ಕಡಿಮೆ ಬೆಲೆಯಲ್ಲಿ ಮಾರಿದ್ದು ಹಾಗೂ ಸಮಾಜ ಇವರಿಗೆ ಬೆಂಬಲಿಸಿದ್ದು ಈಗ ಇತಿಹಾಸ. ಈಗ ಈ ಕೀಟನಾಶಕ ವನ್ನೂ generic ಅನ್ನೋ ಮುಖವಾಡದ ಹವಣಿಕೆಯಲ್ಲಿದ್ದಾರೆ. ನಾವು ಕಡಿಮೆ ಬೆಲೆಯಲ್ಲಿ ಎಂಡೋಸಲ್ಫನ್ ತಯಾರು ಮಾಡಿ ಮಾರುವುದು ಬಾರತದ ರೈತರ ಉದ್ದಾರ ಮಾಡುವುದನ್ನು ಯುರೊಪಿಯನರು ಸಹಿಸುತ್ತಿಲ್ಲ. ನಾವು ಬಾಗಿಲು ಹಾಕಿದರೆ ಯುರೋಪಿನ ತಯಾರಕರು ಇದಕ್ಕಿಂತ ಹಲವು ಪಾಲು ದುಬಾರಿಯ ಮಾಲುಗಳನ್ನು ಬಾರತದ ರೈತರು ಅವಲಂಬಿಸಬೇಕಾಗುತ್ತದೆ.
ನಾವಂತೂ ಐವತ್ತೈದು ವರ್ಷಗಳಿಂದ ಬಳಸುತ್ತಿರುವ ಈ ಕೀಟನಾಶಕವನ್ನು ತಿಂದರೆ ಈಗಲೂ ಕೀಟಗಳು ಸಾಯುತ್ತವೆ ಎನ್ನುವ ಭ್ರಮೆಯನ್ನು ಉಳಿಸಿಕೊಂಡಿದ್ದೇವೆ. ನಾನು ವಾಸಿಸುವ ಜಾಗದಿಂದ ಕೇರಳದ ಪಡ್ರೆ ಮತ್ತು ಕರ್ನಾಟಕದ ಕೊಕ್ಕಡ ಎರಡೂ ಮೂವತ್ತು ಕಿಮಿ ಒಳಗಿದೆ. ಹಾಗಾಗಿ ಇವರ ಮಾತಿಗೆ ಮರುಳಾಗುವುದು ಕಷ್ಟವಾದರೂ ಇದರಲ್ಲಿ ನಿಜ ಇರಬಹುದೋ ಗೊಂದಲ ಉಂಟುಮಾಡುತ್ತದೆ. ಹಾಗೆ ಈ ಎಂಡೊ ವಿರೋದಿಗಳು ಕೊಕ್ಕಡ ಮತ್ತು ಪಡ್ರೆ ಹಾಗೂ ಸುತ್ತಲಿನ ಗ್ರಾಮಸ್ಥರೋ ಯುರೋಪಿನ ಗುಮ್ಮನೋ ?? ದೂರ ಇರುವವರಿಗೆ ಆಫ್ರಿಕದಲ್ಲಿ ಎಂಬಂತೆ ಇದೊಂದು ಸುದ್ದಿಯಷ್ಟೇ
ಈ ದಿಕ್ಕು ತಪ್ಪಿಸುವ ಆಂದೋಲನ ಕೆಲವೊಮ್ಮೆ ಪ್ರಯೋಜನ ಕಾಣುತ್ತದೆ. ಕೆಲವೊಮ್ಮೆ ಪರಿಚಿತರೊಂದಿಗೆ ಮಾತುಕತೆಯೇ ನಮ್ಮ ಆಲೋಚನಾಲಹರಿ ಕೆಡಿಸುತ್ತದೆ. ಕಳೆದ ಇಪ್ಪತ್ತೈದು ವರ್ಷಗಳಿಂದ ಸಾವಯುವ ಜಪಿಸುತ್ತಿರುವ ನಾನು ಒಂದು ವರ್ಷ ಕಳೆನಾಶಕ ಉಪಯೋಗಿದ್ದೇನೆ. ಆಗ ಕೆಲಸದವರ ಕೊರತೆಯ ಜತೆಗೆ ಅಡಿಕೆ ತೋಟದ ಕಳೆಯ ಅಡಿಯಲ್ಲಿ ಅಡಗಿ ಕುಳಿತಿತ್ತು. ಕೂಡಲೇ ಕಳೆ ತೆಗೆಯುವುದು ಅನಿವಾರ್ಯವಾಗಿತ್ತು.
ಹಲವು ವರ್ಷ ಹಿಂದೆ ಕೃಷಿಕರೊಬ್ಬರಿಗೆ ಒಂದು ಹಳೆಯ ಸಾಮಾನು ಒಂದರ ಮಾರಿದ್ದೆ. ಕೃಷಿ ಬಗೆಗೆ ಮಾತಾಡುವಾಗ ಶೆಟ್ರು ಕಳೆನಾಶಕ ಒಂದರ ಗುಣಗಾನ ಮಾಡಿದರು. ವಿದ್ಯಾವಂತರಾದ ಅವರು ಮೊದಲು ಮಹಾಪಟ್ಟಣದಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಈ ಹೊಸತಲೆಮಾರಿನ ಕಳೆನಾಶಕದಲ್ಲಿ ಬೇರೆ ಯಾವುದೇ ಜೀವಿಗಳಿಗೆ ತೊಂದರೆಯಿಲ್ಲವೆಂದು ಒತ್ತಿ ಹೇಳಿದರು. ಅದನ್ನು ತಯಾರಿಸುವ ಎಕ್ಸಲ್ ಕಂಪೇನಿಯೊಂದು ಪಟ್ಟಣ ಕೊಳಚೆಗೆ ಹಾಕಿದರೆ ಅದನ್ನು ಬೇಗನೆ ಕೊಳೆಯುವಂತೆ ಮಾಡುವ ವೇಗವರ್ದಕ ತಯಾರಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿತ್ತು. ಈ ಎಕ್ಸಲ್ ಕಂಪೇನಿ ಎಂಡೊಸಲ್ಫನ್ ಸಹಾ ತಯಾರಿಸುತ್ತದೆ. ಹೀಗೆ ಕಂಪೆನಿ ಮತ್ತು ಸಾಮುಗ್ರಿ ಎರಡೂ ಸೇರಿ ನನ್ನ ವಿವೇಚನೆಯಲ್ಲಿ ಕಳೆನಾಶಕದ ಬಗೆಗೆ ಒಪ್ಪಿಗೆ ಗಿಟ್ಟಿಸಿಕೊಂಡವು. ನನ್ನಂತಹ ವಿದ್ಯೆ ಇದ್ದು ಈ ಕೃಷಿವ್ಯಾಪಾರಿ ಸಂಸ್ಥೆ ಕುಯುಕ್ತಿ ಅರಿತವನೇ ಹೊಂಡಕ್ಕೆ ಬಿದ್ದರೆ, ಅಮಾಯಕ ಹಳ್ಳಿಗರು ವರ್ಷಾನುಗಟ್ಟಲೆ ಸುಲಭವಾಗಿ ಮೋಸ ಹೊಂದುತ್ತಾರೆ. ನಮ್ಮ ವಿಜ್ನಾನಿಗಳು ಅದಿಕಾರಿಗಳು ರಾಜಕಾರಣಿಗಳು ಈ ಕಂಪೇನಿಗಳ ಬೆಂಬಲಕ್ಕೆ ನಿಲ್ಲುತ್ತಾರೆ.





ಗೋವಿಂದ ಭಟ್ಟರ ಜೀವನ ಪ್ರೀತಿ, ಅದಮ್ಯ ಉತ್ಸಾಹ, ಸ್ತುತ್ಯರ್ಹ. ಬೆನ್ನು ಮೂಳೆ ಮುರಿದರೂ ಯಾವುದೇ ಎಗ್ಗಿಲ್ಲದಂತೆ ತ್ರಿಚಕ್ರಧಾರಿಯಾಗಿ ಎಲ್ಲರಿಗೆ ಮಾದರಿಯಾಗಿ ಇದ್ದಾರೆ. ನೂರ್ಕಾಲ ಬಾಳಿ, ಸಿನಿಕ ಜನರಿಗೆ ಬದುಕಿನ ಬಗೆಗಿನ ಅನುಭವ ಪಾಠ ಹೇಳಿ. ಚಂದ್ರಕಾಂತ್
ಕೃಷಿಕ, ಸ್ವಾವಲಂಬಿ, (ಹೆಂಡತಿ ಮತ್ತು ಎರಡು ಮಕ್ಕಳ) ಜವಾಬ್ದಾರಿಯುತ ಸಂಸಾರಿಯಾಗಿದ್ದುಕೊಂಡು ಪ್ರದರ್ಶನಚಟವಿಲ್ಲದ ಸಾಹಸ ಕ್ರೀಡೆಗೆ ತೆತ್ತುಕೊಂಡ ಕ್ರಮವನ್ನೂ ಗಳಿಸಿದ ಅನುಭವವನ್ನು ಆತ ಬ್ಲಾಗ್ ಮೂಲಕ ಇತರರಿಗೆ ಪ್ರೇರಣೆ ಕೊಡುವ ನಿಟ್ಟಿನಲ್ಲಿ ಪ್ರಚುರಿಸುತ್ತಿರುವುದನ್ನೂ ಎತ್ತಿ ಆಡಿದ್ದಕ್ಕೆ ಸುಶ್ರುತರಿಗೆ, ಅವಧಿಗೆ ಅಭಿನಂದನೆಗಳು.
ಅಶೋಕವರ್ಧನ