ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಅನುಭವ ಮಂಟಪ

ಇವತ್ತಿನ ಆಯ್ಕೆ- ಅನುಭವ ಮಂಟಪ

ಇವತ್ತಿನ ಬ್ಲಾಗ್‘ ಹೊಸ ಅಂಕಣ. ಈ ಅಂಕಣದಲ್ಲಿ ಒಂದು ಬ್ಲಾಗ್ ನ ಪರಿಚಯ, ಬ್ಲಾಗಿಗರ ಫೋಟೋ, ಬ್ಲಾಗ್ ಫೋಟೋ ಇರುತ್ತದೆ. ಜೊತೆಗೆ ಅವರ ಬ್ಲಾಗಿನ ಆಶಯದ ಪರಿಚಯ. ಬ್ಲಾಗ್ ರುಚಿ ಉಣಿಸಲು ಆ ಬ್ಲಾಗ್ ನಿಂದ ‘ಅವಧಿ’ ತಂಡ ಆರಿಸಿದ ಒಂದು ಬರಹ. ಇದು ಬ್ಲಾಗ್ ಲೋಕದ ಬೆಲೆ ಹೆಚ್ಚಿಸಲು ಕಾರಣವಾಗಲಿ ಎಂಬ ಆಸೆ ನಮ್ಮದು.

ಅಡುಗೆ ಮಾಡುತ್ತೇನೆ, ಅರಣ್ಯ ಸುತ್ತುತ್ತೇನೆ, ಫೋಟೋ ಹೊಡೆಯುತ್ತೇನೆ, ಬ್ಲಾಗ್ ಗೆ ಬರೆಯುತ್ತೇನೆ ಹಾಗಾದರೆ ನಾನು ಯಾರು ಎಂಬ ಒಗಟು ಕೇಳಿದರೆ ನಿಸ್ಸಂಶಯವಾಗಿ ಬರುವ ಉತ್ತರ- ಪಾಲಚಂದ್ರ ಆರ್ಥಾತ್ ‘ಪಾಲ’. ಅವರೇ ತಮ್ಮನ್ನು ಬಣ್ಣಿಸಿಕೊಂಡಿರುವುದು ಈ ರೀತಿ-

ನನ್ನ ಹೆಸರು ಪಾಲಚಂದ್ರ, ಪರಿಚಿತ ವರ್ಗದಲ್ಲಿ ಪಾಲ ಎಂದು ಚಿರಪರಿಚಿತ. ಎಂಜಿನಿಯರಿಂಗ್ ಕಾಯಕ, ಹವ್ಯಾಸಗಳೇ ನನ್ನ ಕೈಲಾಸ. ಹಲವು ಹವ್ಯಾಸಗಳ ಬೆಂಬಿಡದೆ ಬೆನ್ನತ್ತಿ ಕೈಗೆ ಸಿಗದೆ ಸಂತೋಷವಾಗಿದ್ದೇನೆ. ಸಧ್ಯಕ್ಕೆ ಛಾಯಾಗ್ರಹಣದ ಮೋಹದಲ್ಲಿ ತೊಳಲಿ ಬಳಲುತ್ತಿರುವ ಪರಮ ಸುಖಿ!.

ಹಾಗೆ ತೊಳಲಿ  ಬಳಲುತ್ತಿರುವ ಪಾಲ ತಮ್ಮ ಬಿಡುವಿ ನ ವೇಳೆಯಲ್ಲಿ ಬ್ಲಾಗಿಂಗ್ ಸಹಾ ಹಚ್ಚಿಕೊಂಡಿದ್ದಾರೆ. ಅದರ ಫಲ- ಅನುಭವ ಮಂಟಪ. ‘ಅನುಭವಿಸದೇ ಹಾಡಿದ ಹಾಡು ಹಾಡಲ್ಲ, ಅನುಭವಿಸಿದೇ ಬಿಡಿಸಿದ ಚಿತ್ರ ಚಿತ್ರವಲ್ಲ, ಅನುಭವಿಸದೇ ಬರೆದ ಬರಹ ಬರಹವಲ್ಲ!’ ಎಂದು ಗಟ್ಟಿಯಾಗಿ ನಂಬಿರುವ ಪಾಲ ಇಲ್ಲಿ ಅನುಭವಿಸಿ ತೆಗೆದ ಫೋಟೋ, ಮಾಡಿದ ಚಾರಣ, ಬರೆದ ಬರಹವಿದೆ. ಕೃಷಿಯ ಬಗ್ಗೆ ಆಸಕ್ತಿ ಹೊಂದಿರುವ ಇವರ ಬ್ಲಾಗಿನಲ್ಲಿ ಆ ಆಸಕ್ತಿ ಹಲವು ಪೋಸ್ಟ್ ಗಳಲ್ಲಿ ಆಕ್ರಮಿಸಿ ನಿಂತಿದೆ.

ಈ ಬ್ಲಾಗ್ ಇವತ್ತಿನ ಬ್ಲಾಗ್ ಆದುದು ಯಾಕೆಂದರೆ ಇಲ್ಲಿನಮುದ ಕೊಡುವ  ಡಿಸೈನ್, ಫೋಟೋಗಳಲ್ಲಿರುವ ಫ್ರೆಶ್ ನೆಸ್, ಬರಹಗಳಿಗೆ ಆರಿಸಿಕೊಂಡಿರುವ ವಸ್ತುವಿನ ಕಾರಣಕ್ಕೆ.

-‘ಅವಧಿ’ಗಾಗಿ ಜಿ ಎನ್ ಮೋಹನ್


 

ಈ ಬ್ಲಾಗ್ ನಿಂದ ಆಯ್ದ ಬರಹ ಇಲ್ಲಿದೆ

*

ಗಿಡ ನೆಡುಕೆ ಖುಷಿಯಾತ್..

“ನಿಮ್ಮ ಮಗ ಇಲ್ಲಿ ಪುಸ್ತಕ ಹೊತ್ರೆ ಸಾಕಾತ್ತಿಲ್ಲ, ಮಣ್ಣೂ ಹೊರ್ಕಾತ್”, 1950ರಲ್ಲಿ ಹೈಸ್ಕೂಲಿನ ಉಪಾಧ್ಯಾಯರು ತಮ್ಮನ್ನುದ್ದೇಶಿಸಿ ಹೇಳಿದ್ದನ್ನು ನರಸಿಂಹ ಹೊಳ್ಳರು ನೆನಪಿಸಿಕೊಳ್ಳುತ್ತಾರೆ. ಈ ಮಾತನ್ನು ಶಾಲೆಗೆ ಸೇರುವ ಸಂದರ್ಭದಲ್ಲಿ ಇಂದು ಹೇಳಿದ್ದರೆ ಹೆತ್ತವರು ತಮ್ಮ ಮಕ್ಕಳನ್ನು ಸೇರಿಸಲು ಹಿಂದೆ ಮುಂದೆ ನೋಡುತ್ತಾರೇನೋ. ಆದರೆ ಅಂದಿನ ಕಾಲದಲ್ಲಿ, ಅದೂ ಅಲ್ಲದೇ ಉಪಾಧ್ಯಾಯರಾಗಿದ್ದ ಕೆ.ಎಲ್. ಕಾರಂತರು (ಕೋಟ ಲಕ್ಷ್ಮೀನಾರಾಯಣ ಕಾರಂತ) ಹೇಳಿದ್ದರಿಂದ ಮಾತಿಗೆ ಬೆಲೆಯಿತ್ತು.

“ನಮ್ದು ವಿವೇಕದಲ್ಲಿ ಮೊದಲ್ನೇ ಬ್ಯಾಚ್. ಭತ್ತದ ನೆಟ್ಟಿ, ಕಳಿ ಕೀಳುದು, ಕೊಯ್ಲು ಎಲ್ಲಾ ಮಾಡ್ತಿತ್”, ವೆಂಕಟರಮಣ ಉರಾಳರು ತಮ್ಮ ನೆನಪಿನ ಬುತ್ತಿ ಬಿಚ್ಚಿದರು. “ಮಕ್ಳ್ ಬರೀ ಓದುದ್ ಮಾತ್ರ ಅಲ್ಲ, ಮರ ಹತ್ತುದು, ಈಜುದು, ದೋಣಿ ನಡ್ಸುದು, ಬೇಸಾಯ ಮಾಡುದ್ ಎಲ್ಲದೂ ಕಲಿಕ್ಕಿತ್ ಕಾರಂತ್ರಿಗೆ” ಎಂದು ತಮ್ಮ ಶಾಲೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾ ಕಾರಂತರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.

ವಿವೇಕ ವಿದ್ಯಾ ಸಂಸ್ಥೆಗಳು

1949ರಲ್ಲಿ ಆರಂಭಗೊಂಡ ಉಡುಪಿ ಜಿಲ್ಲೆಯ, ಕೋಟದ ವಿವೇಕ ಹೈಸ್ಕೂಲ್ ಆರಂಭದಿಂದಲೂ ಕೃಷಿಯ ಪ್ರಾಥಮಿಕ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿದೆ. ಸ್ವತಃ ಕೃಷಿಯಲ್ಲಿ ಆಸಕ್ತಿ ಹೊಂದಿದ್ದ ಕೆ.ಎಲ್.ಕಾರಂತರು ಇದರ ಅಡಿಪಾಯ ಹಾಕಿದ್ದರು. ಹಿಂದೆ ಭತ್ತದ ಕೃಷಿಯನ್ನು ವಿದ್ಯಾರ್ಥಿಗಳಿಂದ ಮಾಡಿಸಲಾಗುತ್ತಿತ್ತು. ಮುಂದೆ ವಿದ್ಯಾಸಂಸ್ಥೆ ಬೆಳೆದಂತೆಲ್ಲಾ ಇರುವ ಕೃಷಿ ಭೂಮಿ ಕಟ್ಟಡಗಳ ಪಾಲಾಗಿದ್ದರೂ, ಇಂದು ತರಕಾರಿ ಬೆಳೆಯುವಷ್ಟರ ಮಟ್ಟಿಗೆ ಈ ಪರಂಪರೆಯನ್ನು ಉಳಿಸಿಕೊಂಡಿದೆ.

ಪ್ರತೀ ತರಗತಿಯನ್ನೂ ನಾಲ್ಕು ಗುಂಪುಗಳಾಗಿ ವಿಂಗಡಿಸಿರುತ್ತಾರೆ. ಡಿಸೆಂಬರ್, ಜನವರಿ ತಿಂಗಳಿನಲ್ಲಿ ಹೀಗೆ ಪ್ರತ್ಯೇಕಿಸಿದ ಪ್ರತಿಯೊಂದು ಗುಂಪಿಗೂ ಸ್ವಲ್ಪ (ಸುಮಾರು ೧೫ ರಿಂದ ೨೦ ಬದನೆ ಗಿಡ ಹಿಡಿಯುವಷ್ಟು) ಕೃಷಿ ಭೂಮಿಯ ಹಂಚಿಕೆ. ನಾಟಿ ಬದನೆ ಗಿಡಗಳನ್ನು ಶಾಲೆಯಿಂದಲೇ ಪೂರೈಸಲಾಗುತ್ತದೆ. ಮಣ್ಣನ್ನು ಹದ ಮಾಡಿ, ಗಿಡ ನೆಟ್ಟು ಪೋಷಿಸುವುದು ವಿದ್ಯಾರ್ಥಿಗಳ ಕೆಲಸ. ಉಪಾಧ್ಯಾಯರಾದ ಆದರ್ಶ ಹಂದೆಯವರಿಂದ ಮಕ್ಕಳಿಗೆ ಮಾರ್ಗದರ್ಶನ. ದರಲೆ ಸಂಗ್ರಹಿಸಿ ಸುಡುಮಣ್ಣು ಮಾಡಿ ಗಿಡಗಳಿಗೆ ಹಾಕುವುದು, ನೀರುಣಿಸುವುದು, ಕಳೆಕೀಳುವುದರ ಬಗ್ಗೆ ಸಲಹೆ ನೀಡುತ್ತಾರೆ. ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಬದನೆ ಗಿಡ ದೊಡ್ಡದಾಗುವ ಮುಂಚೆ ಹರಿವೆ ಬೀಜ ಬಿತ್ತುವುದೂ ಉಂಟು.

ಸಹಕಾರದೊಂದಿದೆ ನೀರೆತ್ತುತ್ತಿರುವುದು

ಬೆಳೆದ ಬೆಳೆಯನ್ನು ಹರಾಜಿನ ಮೂಲಕ ಶಾಲೆಯಲ್ಲಿಯೇ ಮಾರಾಟ ಮಾಡಲಾಗುತ್ತದೆ. ತರಕಾರಿಗಳನ್ನು ತರಗತಿಯ ಕಿಟಕಿಗಳಲ್ಲಿ ಜೋಡಿಸಿ, ಗುಂಪಿನ ಮುಖಂಡ ಒಂದು ಬೆಲೆಯನ್ನು ಹಾಳೆಯಲ್ಲಿ ನಮೂದಿಸಿ ಜೊತೆಗಿಡುತ್ತಾನೆ. ಉಪಾಧ್ಯಾಯರೋ ಅಥವಾ ವಿದ್ಯಾರ್ಥಿಗಳೋ ತಮಗಿಷ್ಟವಾದಲ್ಲಿ ಬೆಲೆ ಏರಿಸಿ ಅದೇ ಹಾಳೆಯಲ್ಲಿ ಬರೆಯುತ್ತಾರೆ. ದಿನದ ಅಂತ್ಯದಲ್ಲಿ ಯಾರ ಹೆಸರು ಕೊನೆಯಲ್ಲಿರುತ್ತದೋ ಅವರು ನಮೂದಿಸಿದ ಬೆಲೆಗೆ ತರಕಾರಿ ಕೊಳ್ಳುತ್ತಾರೆ. ಹೀಗೆ ಬಂದ ಹಣವನ್ನು ವಿದ್ಯಾರ್ಥಿಗಳು ತಮ್ಮಲ್ಲಿ ಹಂಚಿಕೊಳ್ಳುತ್ತಾರೆ. ಚೆನ್ನಾಗಿ ಬೆಳೆ ಬೆಳೆದ ಗುಂಪಿಗೆ ಶಾಲೆಯ ವಾರ್ಷಿಕೋತ್ಸವದಂದು ಬಹುಮಾನವನ್ನೂ ಕೊಡಲಾಗುತ್ತದೆ.

ಶಾಲೆಯಲ್ಲಿಯೇ ತರಕಾರಿ ಮಾರಾಟ

“ಗಿಡ ನೆಡುಕೆ ಖುಷಿಯಾತ್, ಈ ವರ್ಷ ಮನೇಲೂ ನೆಟ್ಟಿದ್ದೆ”, ಒಂಭತ್ತನೇ ತರಗತಿಯಲ್ಲಿ ಓದುತ್ತಿರುವ ಗಣೇಶರು ತಮ್ಮ ಮಾತು ಮುಂದುವರಿಸಿ, “ಒಂದು ತಿಂಗ್ಳಿಂದ ನಮ್ಮ ಗುಂಪಿದು ೧೦೦ ರೂಪಾಯ್ ಆಯಿತ್. ಕೊನೇಲ್ ಎಲ್ಲ ಹಂಚ್ಕಣತ್” ಎಂದರು. ಕನ್ನಡ ಅಧ್ಯಾಪಕರಾದ ಪ್ರೇಮಾನಂದರು ” ಕೃಷಿಯ ಇಂತಹ ಪ್ರಯತ್ನಗಳು ಬೇಕು. ಈಗಿನ ಐ.ಟಿ., ಬಿ.ಟಿ.ಯಲ್ಲಿನ ಮಾನಸಿಕ ಒತ್ತಡದ ಜೀವನ ಶೈಲಿಯಲ್ಲಿ ಇವು ನೆಮ್ಮದಿ ಕಂಡುಕೊಳ್ಳುವ ಬಗೆ ಕಲಿಸುತ್ತದೆ”, ಎಂದರು

 

‍ಲೇಖಕರು G

9 April, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading