‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ರೂಪಾಂತರ

ಇವತ್ತಿನ ಆಯ್ಕೆ: ರೂಪಾಂತರ

’ರೂಪಾಂತರ’ -ವೆಂಕಟ್ರಮಣ ಭಟ್ಟರ ಬ್ಲಾಗು. ಇವರ ಬ್ಲಾಗಿಗೆ ಒಂದು ಸೊಗಸಿದೆ. ಬ್ಲಾಗಿನ ಬಾಗಿಲು ತೆರೆಯುತ್ತಿದ್ದಂತೆಯೇ ಕೆಂಬಣ್ಣದ ಮಯೂರಿ ನಿಮ್ಮನ್ನು ಸ್ವಾಗತಿಸುವಳು. ಹಾಗೆಯೇ ಕೆಳಗೆ ಬಂದರೆ, ವೆಂಕಿ ಮನದ ಮೂಲೆಯೊಳಗೆ ಬಚ್ಚಿಟ್ಟ ಹಂಬಲದ ಮಾತೆಲ್ಲ ನಿಮ್ಮ ಮುಂದೆ ಬಿಚ್ಚಿಕೊಳ್ಳುವುದು. ಈ ಬ್ಲಾಗು ವೆಂಕಟ್ರಮಣ ಭಟ್ಟರ ಬಹುಮುಖ ಪ್ರತಿಭೆಗೆ ವೇದಿಕೆ. ಅವರು ಚಂದದ ಕವಿತೆಗಳನ್ನು ಬರೆಯುತ್ತಾರೆ. ಲಲಿತ ಪ್ರಬಂಧಗಳನ್ನು ಬ್ಲಾಗಿಸುತ್ತಾರೆ. ಅವರು ಒಬ್ಬ ಚಿತ್ರಕಾರರೂ ಹೌದು. ಅವರು ಬರೆದ ಕವಿತೆ-ಕತೆಗಳಿಗೆ ಅವರೇ ಬಿಡಿಸಿದ ಬಣ್ಣಬಣ್ಣದ ಕ್ಯಾನ್‌ವಾಸುಗಳು ಸಾಥಿಯಾಗುತ್ತವೆ. ಈ ಬ್ಲಾಗು ನೋಡುವಾಗ ಕಣ್ಣು ಸೆಳೆದರೆ ಓದುವಾಗ ಮನ ಸೆಳೆಯುತ್ತದೆ. 

ರೂಪಾಂತರದ ಅಂತರಂಗದೊಳಗೊಮ್ಮೆ ಕಣ್ಣು ಹಾಯಿಸಿ. ಬಿದಿರು ಮೆಳೆಯ ಬಿಡಿಸಿ ಒಮ್ಮೆ ವಿಹರಿಸಿ ಬನ್ನಿ. ಹೊಸ ಗಂಧಗಾಳಿ ಸೋಕಿ ನಿಮ್ಮ ಮೈಮನಸು ಪ್ರಫುಲ್ಲವಾಗುವುದು.

-’ಅವಧಿ’ಗಾಗಿ ಸುಶ್ರುತ ದೊಡ್ಡೇರಿ

***

ವೆಂಕಟ್ರಮಣ ಭಟ್:

ನಾನು ಹುಟ್ಟಿದ್ದು ಉತ್ತರಕನ್ನಡದ ಯಲ್ಲಾಪುರವೆಂಬ ಕಾನಿನ ಮತ್ತು ಅಡಿಕೆ ತೋಟ-ಭತ್ತದ ಗದ್ದೆಗಳ ಊರಿನಲ್ಲಿ. ಬೆಳೆದದ್ದು ಅಡಿಕೆ ಬೇಯಿಸುವ ವಲೆಯ ಮುಂದೆ ಕಥೆ ಆಡುತ್ತ, ಅಪ್ಪನ ಜೊತೆ ತಾರೆಗಳನ್ನು ನೋಡುತ್ತ,ಏರೋಪ್ಲೇನಿನ ಹಾಗೆ ಹಾರುವ ಡ್ರಾಗನ್ ಫ್ಲೈನ ಬಾಲಕ್ಕೆ ದಾರ ಕಟ್ಟಿ ಬಿಡುತ್ತ,ತೋಳಂಭಟ್ಟನ ಹಾಗೆ ಜಿಗಿಯುತ್ತ ಹಾಗು ನೇರಳೆ ಮರ ಹತ್ತುತ್ತ.ಆಮೇಲೆ ಸ್ವಲ್ಪ ಸಿರಸಿಯಲ್ಲಿ,ಸ್ವಲ್ಪ ಬೆಳಗಾವಿಯೆಂಬ ಗಡಿನಾಡಲ್ಲಿ. ಈಗ ಹೊಸ ವಿಳಾಸ,ಬೆಂಗಳೂರೆಂಬೊ ಬೆಂಗಳೂರು. ನನಗೆ ಇಷ್ಟವಾಗದೆ ಇರುವ ವಿಷಯಗಳು ಕಮ್ಮಿ,ತಿಳಕೊಳ್ಳುವ ನಿರಂತರ ಕುತೂಹಲ.ಏನು ಸಿಕ್ಕರೂ ಓದುವ ಹುಚ್ಚು,ಧೋ ಸುರಿವ ಮಳೆಯೆಂದರೆ ಇಷ್ಟ, ಚಿತ್ರ ಬಿಡಿಸುವುದೂ,ಬರೆಯುವುದೂ ಹತ್ತಿಸಿಕೊಂಡ ಗೀಳು.ಸ್ವಲ್ಪ ಶೈ,ಸ್ವಲ್ಪ ಹುಚ್ಚು .ಆದರೆ ಜೊತೆಗೂಡಿದರೆ ಮಾತೇ ಮಾತು.ಸಂಗೀತ,ಬಣ್ಣಗಳು,ಬದುಕು ಹಾಗು ಅಕ್ಷರಗಳು ನನ್ನನ್ನು ಬಿಡದೇ ತಮ್ಮೆಡೆಗೆ ಜಗ್ಗುತ್ತವೆ. ಕನಸು ಕಾಣುವುದು ನನ್ನ ಹಕ್ಕು. ಟ್ರಾಫಿಕ್ಕು,ಕೆಲಸ ಎನ್ನುತ್ತ ಪುರಸೊತ್ತಿಲ್ಲದ ಭರಾಟೆಯಲ್ಲಿ ಎಲ್ಲೆಲ್ಲೋ ಇಣುಕುವ ಪುಟ್ಟ ಇಣಚಿಯಂತ ಸಣ್ಣ ಖುಷಿಗಳನ್ನು ಹಂಬಲಿಸುತ್ತ ಬದುಕುವುದು ಇಷ್ಟ.ದೈನಿಕದ ಮಾನವೀಯ ಕ್ಷಣಗಳು,ನನ್ನದೇ ತಲ್ಲಣಗಳು,ಮನುಷ್ಯನಾಗುವೆಡೆಗಿನ ಧಾವಂತ ಮತ್ತು ಮನದೊಳಗೆ ಗೂಡುಬಿಟ್ಟ ಹಂಬಲದಂಥ ತುಡಿತ ನನ್ನನ್ನು ಸದಾ ಪೊರೆಯುತ್ತಿವೆ. ಯಾರಿಗೂ ಹಾಗೂ ನನಗೂ ಅರ್ಥವಾಗದ ಹಾಗೆಲ್ಲ ನನ್ನ ಬಗ್ಗೆ ಬರೆದು ತಲೆತಿನ್ನಬೇಕೆಂದು ಅನ್ನಿಸುತ್ತಿದೆ, ಆದರೆ ಸಧ್ಯಕ್ಕೆ ಇಷ್ಟೇ ನೆನಪಾಗುತ್ತಿದೆ ಮತ್ತು ರಾಶೀ ಬರೆದುಕೊಳ್ಳಲು ಬೇಜಾರು. ಇಲ್ಲೊಂದು ಹೊಸ ವಿಳಾಸ ತೆರೆದುಕೊಂಡಿದೆ, ಈ ಬ್ಲಾಗ್ ಕೂಡಾ ಕಲಿಯುವ ಮತ್ತು ನನ್ನೊಳಗಿನ ನನ್ನನ್ನು ಕಂಡುಕೊಳ್ಳುವ ಇನ್ನೊಂದು ಪ್ರಯತ್ನ.

***

ಇತ್ತೀಚಿನ ಕವಿತೆ:

ಒಂದೇ ಬಸ್ಸಿನಲ್ಲಿ

ಸಪಾಟು ಬೀದಿಯೆಲ್ಲ
ಬಾಗಿಲು  ಮೆಟ್ಟಿಲು ಅಂತ ತುಂಬಿದೆ
ಒಂದೇ ಕಡೆ ಇದ್ದವರು,ಇಲ್ಲಿ ಇಲ್ಲದವರು
ಪಾತ್ರೆ ಪಗಡಿ  ಟಿಕಲಿ  ಬಾಕ್ಸು
ಅಂತ ಬೇರೆ ಮನೆಮಾಡಿಕೊಂಡು
ಉಣ್ಣುತ್ತಿದ್ದಾರೆ.

ಈ ಗೋಡೆಗೂ ಎಂಥ ತಾಕತ್ತು ನೋಡಿ
ಅದರದ್ದೇ ಅಕ್ಕಪಕ್ಕ
ಎಲ್ಲ ಬದಲಾಗಿಬಿಡುತ್ತದೆ
ಆ ಕಡೆ ನಿಮ್ಮ ಫೆಮಿಲಿ
ಈಕಡೆ ನಮ್ಮದು
ಪದವಿಲ್ಲದಾಗ ವಿಧ ವಿಧವಾಗಿ  ಕದವಿಕ್ಕಿಕೊಳ್ಳಿ

ಕದತೆರೆದವರು ನೆನಪುಮಾಡಿಕೊಂಡು
ನಕ್ಕರೆ ನೆನಪು ಇಲ್ಲವಾದರೆ ಯಾರೋ
ಯಾರ ನೆನಪನ್ನು ಯಾರು ಇಟ್ಟುಕೊಳ್ಳಬೇಕು
ಗಂಡ ಹೆಂಡತಿ
ಪ್ರೀತಿಯಿಂದ ಮಾತನಾಡಿ ವರ್ಷವಾಯಿತು
ಒಂದೇ ಮಾಡಿನ ಕೆಳಗಿದ್ದಾರೆ ಎಂದರೆ ಒಂದು
ಒಂದೇ ರೇಖೆಯ ಮೇಲೆ ನಡೆಯುವುದು ಕಷ್ಟಾ ಮಾರಾಯ

ಒಂದೊಂದಾಗಿ ಬಾಗಿಲ ಮರೆಯಿಂದ
ಹೊರಬಂದವರು
ಹೊಸ ಶರ್ಟು-ಪ್ಯಾಂಟು
ಅಂದುಕೊಂಡರೆ ಹೊಸಾ ಮುಖ
ಇಲ್ಲವಾದರೆ ಅದೇ ಹಳತು

ಅವನ  ಕೈಲಿ ಹಳೇ ಮೈಸೂರು ಸಿಲ್ಕಿನ ಪ್ಲಾಸ್ಟಿಕ್ ಕೊಟ್ಟೆ
ಹಿಂದಿನವನ ಕೈಲಿ ರೇಡಿಯೋದಂಥ ಮೊಬೈಲು
ವಾಲುವವನ ಕಣ್ಣಲ್ಲಿ ನಿನ್ನೆ ರಾತ್ರಿಯದೆ ತೇಲುವ ಜಗತ್ತು

ಕಸ ಹೊಡಿಯುತ್ತಿದ್ದವರನ್ನು ನುಣುಪಾಗಿ ದಾಟಿ
ಮಾಯವಾಗುತ್ತಿದ್ದಾರೆ ಕಪ್ಪು ಬೂಟಿನ ಮಂದಿ
ತಳ್ಳುಗಾಡಿಯ ಹುಡುಗ ಎಡಗಾಲಿನ ಹವಾಯಿ ಚಪ್ಪಲಿ ಹುಡುಕುತ್ತಿದ್ದಾನೆ
ಅಮ್ಮನ ಕೈಲಿ  ಪಾಟೀಚೀಲ
ದೊಡ್ಡವನಾಗಿದ್ದೇನೆ ಬಿಡೇಎಂದು ಕೈ ಜಾರಿಸಿಕೊಂಡು
ಕೆಂಪುಚಡ್ಡಿಯ ಹುಡುಗ ರಸ್ತೆ ದಾಟುತ್ತಾನೆ

ಗ್ಯಾಸಿನವನು ಹತ್ತು ರುಪಾಯಿ ಕಡಿಮೆ ಅಂತ ತಗೊಂಡಿದಾನೆ
ಒಂದೇ ಬಸ್ಸಿನಲ್ಲಿ ಹೋಗಿದ್ವಿ ಅಂತ ನಕ್ಕಿದ್ದಾನೆ
ಅಲ್ಲಿ ಮೇಲೆ ಹಬ್ಬಿದ
ವಾಯರನ್ನು ಹಿಡಿದು ನಡೆದರೆ ಎಲ್ಲರೂ ನಮ್ಮವರೇ

ಬೋರಿಸರ  ಅಪ್ಪ ಮಾಡಿಸಿದ್ದಲ್ವೆ ಮಾರಾಯ್ತಿ
ನಮ್ಮನೆಯವರೇ ಹಬ್ಬಕ್ಕೆ ಕೊಡಿಸಿದ್ದು
ಎಂದು ನಾಚಿದ್ದಾಳೆ
ಆ ಗೋಡೆ ಈ ಗೋಡೆಯ ನಡುವೆ ನಿಂತು
ಬೇರೆ ಗೋಡೆಯ ಜನರ ಬಗ್ಗೆ ಹೌದಂತೆ ಮಾರಾಯ್ತಿ
ಅಂತ ಕತೆ ಹೇಳಿ ಬಾಗಿಲು ಹಾಕಿಕೊಂಡು ಟಿವಿ ಹಚ್ಚಿದ್ದಾರೆ.

ಬುಧ್ಧಿವಂತನಂತೆ ಮಾರಾಯ ನೀನು
ಪ್ರೀತಿಗೀತಿ ಅಂತೆಲ್ಲ ಆಡ್ತಾರೆ ಎಲ್ಲ ಹಾರ್ಮೋನು
ಅಂತ ನಗುವುದಿದೆಯಲ್ಲ
ಸೂಪರ್ನೋವಾ,ಕಪ್ಪು ರಂದ್ರ ಅಂತೆಲ್ಲ ಲೆಕ್ಚರ್ ಕೊಡಬೇಡ
ಒಂದು ಸಾರಿಯಾದರೂ ಶುದ್ಧ ನಕ್ಷತ್ರಗಳನ್ನು ನೋಡು.

 

‍ಲೇಖಕರು G

May 3, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವಧಿ….

6 ಪ್ರತಿಕ್ರಿಯೆಗಳು

  1. dattathri

    ಹೌದು, ಭಟ್ಟರ ಬ್ಲಾಗ್ ಹೊಕ್ಕರೆ ಮೈಮನಸು ಪ್ರಫುಲ್ಲವಾಗುವುದು!
    ಬಹುಮುಖ ಪ್ರತಿಬೆಯ ಭಟ್ಟರಿಗೆ ಯಶಸ್ಸಾಗಲಿ.

    ಪ್ರತಿಕ್ರಿಯೆ
  2. Tejaswini Hegde

    Yes.. ondu uttama blogina paricaya.. ಒಂದು ಉತ್ತಮ ಬ್ಲಾಗಿನ ಪರಿಚಯ. ಉತ್ತಮ ಬರಹಗಳಲ್ಲದೇ ಬಣ್ಣ ಬಣ್ಣದ ಚಿತ್ರಗಳು ಮನಸೆಳೆಯುತ್ತವೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: