‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ಮೌನ-ಮುಗುಳು-ಮಾತು

ಇವತ್ತಿನ ಆಯ್ಕೆ: ಮೌನ-ಮುಗುಳು-ಮಾತು  

ಲಂಡನ್ನಿನಿಂದ ಆಗೀಗ ಅಪ್‌ಡೇಟ್ ಆಗುವ ಬ್ಲಾಗು ಪೂರ್ಣಿಮ ಭಟ್ ಸಣ್ಣಕೇರಿ ಅವರ ಮೌನ-ಮುಗುಳು-ಮಾತು. ಈಗಷ್ಟೆ ಅರಳಿದ ಮುಗುಳಿನ ಮೌನದ ಮಾತುಗಳಂತೆ ಹೊಟ್ಟೆಕಿಚ್ಚಾಗುವಷ್ಟು ಚಂದದ ಭಾಷೆಯಲ್ಲಿ ಬರೆಯುತ್ತಾರೆ ಪೂರ್ಣಿಮಾ. ಇವರು ಕವನ ಬರೆಯಲಿ, ಕತೆ ಬರೆಯಲಿ ಅಥವಾ ಲಹರಿಯನ್ನೇ ಹರಿಸಲಿ, ಎಲ್ಲದರಲ್ಲೂ ತುಂಬಿ ತುಳುಕುವುದು ಆಪ್ತತೆ. ಒಂದಷ್ಟು ಕಾಲ ಅವರು ’ಬ್ರಿಟ್-ಬಿಟ್ಸ್’ ಶೀರ್ಷಿಕೆಯಡಿ ಪ್ರಕಟಿಸುತ್ತಿದ್ದ  ಲಂಡನ್ ಅನುಭವಗಳೂ (ಬಹಳ ಸಹ ಪೇಚಾಟಗಳು!) ಅವರ ಕತೆಗಳಷ್ಟೇ ಚೆನ್ನಾಗಿರುತ್ತಿದ್ದವು. 

ಪೂರ್ಣಿಮಾ ಬರೆದಾಗಲೆಲ್ಲ ಅವರಿಗೆ ಬರುವ ಪ್ರತಿಕ್ರಿಯೆಗಳು ’ಎಷ್ಟ್ ಚನಾಗ್ ಬರೀತೀರ್ರೀ’ ದಾಟಿಯವು. ಅವರು ಹೆಚ್ಚೆಚ್ಚು ಬರೀಲಿ ಅನ್ನೋದು ಎಲ್ಲರ ಆಶಯ.  ಅವರ ಬ್ಲಾಗಿನ ಎರಡು ಕವನಗಳು, ಇಲ್ಲಿ:

-‘ಅವಧಿ’ಗಾಗಿ ಸುಶ್ರುತ ದೊಡ್ಡೇರಿ


ಸುಪ್ತ

ಬೆರಳ ತುದಿ ಬಿಂದಿಯ ಹಣೆಗೇರಿಸದೆ
ಸುಮ್ಮನೆ ಚಿಮ್ಮಿದಾಗ
ತುಂಬು ನಗೆಯ ಆಯಿ
ಬಾಗಿಲಲ್ಲಿ ನಿಂತಂತೆ ಭಾಸ..

ಪಾರ್ಟಿ ಒಲ್ಲದ ಮಾಂಗಲ್ಯ
ದಿಂಬಿನಡಿ ಸೇರಿದ ದಿನ
ಅತ್ತೆಯ ಮೂರೆಳೆ ಸರ
ಕನಸಿನಲ್ಲಿ ಬಂದ ಹಾಗಿತ್ತಲ್ಲ..

ಮುಟ್ಟಾದ್ದು ನೆನಪಿರದೆ
ಮಂತ್ರ ಹಲುಬಿದ ಮುಂಜಾವು
ಅಷ್ಟಮಂಗಲದ ಬಗ್ಗೆ ಕೇಳಿದ್ದು ಮಾತ್ರ
ಮುರಿಯುವ ಟೊಂಗೆಯ ಮೇಲೆ ಕಾಗೆ ಕೂತಂತೆ..

ಮಗ್ಗುಲಾವರಿಸಿ ತಲೆ ನೇವರಿಸಿದವ
ಬಲಗಿವಿಯಲ್ಲಿ ಪಿಸುಗುಟ್ಟಿದರೆ-
ಮೊದಲ ಬಾರಿ ಬೆತ್ತಲಾದಷ್ಟೇ ಪುಳಕ..

ತಲೆ ಮೇಲಿನ ನೀರು-
ಕೊರಳ ಬಳಿ ಕೆಂಪಚ್ಚು
ಕಿವಿ ಬದಿಯ ಕಪ್ಪಚ್ಚು ಹಾದು
ಕೆಳಗಿಳಿವ ಖುಷಿ
ಕಣ್ಮುಚ್ಚಿ ಅನುಭವಿಸುವಾಗ
ಕನ್ಯಾಸಂಸ್ಕಾರದ ದಿನ
ಅಪ್ಪನ ತೊಡೆಯೇರಿ ಕೂತದ್ದೇ ನೆನಪು.

ಸಂಧಾನ ಪರ್ವ

ಬೆಳಗ್ಗೆ ಕೇಳಿದ ನನ್ನದಲ್ಲದ ಪ್ರಶ್ನೆ
ಪ್ರಶ್ನೆಯಾಗಷ್ಟೇ ಉಳಿದಿದ್ದರೆ
ಮೂರ್ತಾಸಿನ ಮೌನ ಮಾತಾಗುತ್ತಿತ್ತೇನೋ!
ಉಬ್ಬಿದ ಗಲ್ಲ, ಗಂಟಿಕ್ಕಿದ ಹುಬ್ಬು
ಅರೆಬರೆ ಕವಿತೆಯಾಗುವುದು ತಪ್ಪುತ್ತಿತ್ತೇನೋ!
ದಿಂಬಿನ ಮೇಲೆ ಮುಖ ಒತ್ತಿ
ಬಾರದ ಕಣ್ಣೀರನ್ನು ಕರೆದೂ ಕರೆದು
ನಿತ್ರಾಣವಾದಾಗಲೇ ಆಚೆಮೊನ್ನೆ ಕಳುಹಿಸಿದ ಮೆಸೇಜ್
ಕಣ್ಣಿಗೆ ಬೀಳುವುದೆಂದರೆ ತಮಾಷೆಯ?

ನೀ ಸಮಾಧಾನಿಸಲೆಂದು ನಾನು,
ನಾನೇ ಬಗ್ಗಿ ಬರಲೆಂದು ನೀನು-
ಕಾದು ಕಾದು ಮಧ್ಯಾನ್ಹವಾದಾಗಲೇ
ಸ್ವಪ್ನಸ್ಖಲನ ಬರೀ ಹುಡುಗರಿಗೆ ಮಾತ್ರವೆಂದು
ಅವನೆಂದುಕೊಂಡರೆ ಅದೇ ನಿಜವಲ್ಲ
ಎಂಬ ಹಳೇ ಜೋಕೊಂದು ನೆನಪಾಗಿ,
ಪಕ್ಕದ ಫ್ಲ್ಯಾಟಿನಿಂದ ಹೊಮ್ಮಿದ
ಬಾಸ್ಮತಿ ಪರಿಮಳ
ನಮ್ಮಿಬ್ಬರ ಸಂಧಾನಕ್ಕೆ ಕಾರಣವಾಗಿ
ಸಿಟ್ಟೆಲ್ಲ ಹಾರಿ ಹೋಗಿ
ಒಂದೇ ಉಸಿರಲ್ಲಿ ಮೂರು ಮೆಟ್ಟಿಲು ಜಿಗಿದು
ಬಂದಾಗ ಕಾಲೂ ಉಳುಕಿತು,
ನಗಲು ನೆಪವೂ ಸಿಕ್ಕಿತು
ಎಂದರೆ ನಿನಗೆ ಅಚ್ಚರಿಯ?

 

‍ಲೇಖಕರು G

April 23, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವಧಿ….

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: